ವಿಷಯಕ್ಕೆ ಹೋಗು

ಬೆಳ್ಳಾವೆ ನರಹರಿ ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬೆಳ್ಳಾವೆ ನರಹರಿಶಾಸ್ತ್ರಿ ಇಂದ ಪುನರ್ನಿರ್ದೇಶಿತ)

ಬೆಳ್ಳಾವೆ ನರಹರಿ ಶಾಸ್ತ್ರಿ(೧೮೮೨, ಸೆಪ್ಟೆಂಬರ್ ೨೧ - ೧೯೬೧, ಜೂನ್ ೨೧) ಕನ್ನಡ ಚಿತ್ರರಂಗದ ಪ್ರಮುಖ ಚಿತ್ರಸಾಹಿತಿಗಳಲ್ಲೊಬ್ಬರು. ಕೆಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡದ ಪ್ರಥಮ ಚಿತ್ರಸಾಹಿತಿಯೂ ಹೌದು.

ನರಹರಿ ಶಾಸ್ತ್ರಿಯವರು ೧೮೮೨ಸೆಪ್ಟೆಂಬರ್ ೨೧ರಂದು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಹುಟ್ಟಿದರು.

ವೃತ್ತಿ ಮತ್ತು ರಂಗಭೂಮಿ

[ಬದಲಾಯಿಸಿ]

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ನರಹರಿ ಶಾಸ್ತ್ರಿಯವರು ಕನ್ನಡ ಮತ್ತು ಸಂಸ್ಕೃತದಲ್ಲಿ ಹೆಚ್ಚಿನ ಪಾಂಡಿತ್ಯ ಪಡೆದಿದ್ದರು. ಗುಬ್ಬಿ ಕಂಪನಿಯಲ್ಲಿ ನಾಟಕ ರಚಿಸಿ ತರಬೇತಿ ನೀಡುತ್ತಿದ್ದ ಶಾಸ್ತ್ರಿಗಳು ಯಾವುದೇ ವಸ್ತುವಿನ ಕುರಿತು ಅಲ್ಪ ಸಮಯದಲ್ಲೇ ಸೊಗಸಾದ ನಾಟಕ ರಚಿಸಬಲ್ಲವರೆಂದು ಪ್ರಸಿದ್ದರಾಗಿದ್ದರು ಎಂದು ವಿಮರ್ಶಕರ ಅಭಿಪ್ರಾಯ. ಖ್ಯಾತ ರಂಗನಟ ಮಹಮ್ಮದ್ ಪೀರ್ ಅವರಿಗಾಗಿ ಒಂದೇ ರಾತ್ರಿಯಲ್ಲಿ ಭಕ್ತ ಮಾರ್ಕಂಡೇಯ ನಾಟಕ ರಚಿಸಿಕೊಟ್ಟಿದ್ದರು. ಇದರಿಂದಾಗಿ ಸತಿ ಸುಲೋಚನ ಚಿತ್ರ ನಿರ್ಮಾಣ ಸಂದರ್ಭದಲ್ಲಿ ಇವರಿಗೆ ಅವಕಾಶ ಒದಗಿ ಬಂದಿತು. ಶಾಸ್ತ್ರಿಗಳು ಖ್ಯಾತ ನಾಟಕಕಾರರೆಂದೇ ಅಲ್ಲದೆ ಅವಧಾನ ಕಲೆಯಲ್ಲೂ ಖ್ಯಾತಿಯನ್ನು ಗಳಿಸಿದ್ದರು. ಅವರು ರಚಿಸಿದ ನಾಟಕಗಳಲ್ಲಿ ಹಲವು :

ಕೃಷ್ಣರುಕ್ಮಿಣಿಸತ್ಯಭಾಮ

ಮಹಾಸತಿ ಅನಸೂಯ

ಆಂಗ್ಲನಾಟಕ ಕಥಾವಳಿ

ಸದಾರಮೆ

ದಶಾವತಾರ

ಕನ್ನಡ ಚಿತ್ರರಂಗ

[ಬದಲಾಯಿಸಿ]

೧೯೩೪ರಲ್ಲಿ ಬಿಡುಗಡೆ ಕಂಡ ಸತಿ ಸುಲೋಚನ ಚಿತ್ರದ ಚಿತ್ರಕಥೆ, ಸಂಭಾಷಣೆ, ಮತ್ತು ಚಿತ್ರಗೀತೆಗಳು ಹೀಗೆ ಎಲ್ಲಾ ಸಾಹಿತ್ಯಿಕ ಅಂಗಗಳನ್ನೂ ನರಸಿಂಹ ಶಾಸ್ತ್ರಿಯವರು ನಿರ್ವಹಿಸಿದರು. ನಾಟಕದ ಚೌಕಟ್ಟಿಗೆ ಅನುಗುಣವಾಗಿಯೇ ಶಾಸ್ತ್ರಿಗಳು ಈ ಚಿತ್ರಕ್ಕೆ ರಾಮಾಯಣದ ಇಂದ್ರಜಿತು - ಸುಲೋಚನೆಯರ ಕತೆಯನ್ನು ಆಯ್ದುಕೊಂಡು ಚಿತ್ರಕತೆ ರಚಿಸಿದರು ಮತ್ತು ೧೫ ಹಾಡುಗಳನ್ನು ರಚಿಸಿದರು. ಅವುಗಳ ಪೈಕಿ ಭಲೆ ಭಲೆ ಪಾರ್ವತಿ ಬಲು ಚತುರೆ ಭಲೆ ಭಲೆ ಎಂಬ ಹಾಡು ಜನಪ್ರಿಯವಾಯಿತು.

೧೯೩೦ರ ದಶಕದಲ್ಲಿ ಬಂದಿದ್ದ ಆ ಚಿತ್ರದ ಕಾಲದಲ್ಲಿ ಹಿನ್ನೆಲೆ ಗಾಯನ ಪದ್ದತಿ ಇರಲಿಲ್ಲ. ನಟನಟಿಯರೇ ಹಾಡಿಕೊಂಡು ಅಭಿನಯಿಸಬೇಕಿತ್ತು. ಶಾಸ್ತ್ರಿಗಳು ಈ ಅಂಶವನ್ನು ಗಮನಿಸಿ ಗೀತೆಗಳನ್ನು ರಚಿಸಿದರು. ಈ ಚಿತ್ರದಲ್ಲಿ ರಾಕ್ಷಸ ಸೈನ್ಯ ಮತ್ತು ಕಪಿ ಸೈನ್ಯ ನಡುವಿನ ಕಾಳಗ ಸುಲೋಚನೆಯ ಬೊಗಸೆಯಲ್ಲಿ ಇಂದ್ರಜಿತುವಿನ ರುಂಡ ಬೀಳುವಂತೆ ಮಾಡುವ ಟ್ರಿಕ್‍ಶಾಟ್ ಶಾಸ್ತ್ರಿಗಳು ರೂಪಿಸಿದ್ದರು. ಈ ಚಿತ್ರದ ಯಶಸ್ಸಿನ ನಂತರ ಅವರಿಗೆ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಲಭಿಸಿದರೂ ಅವರು ಆಯ್ಕೆಯಲ್ಲಿ ಹೆಚ್ಚು ಜಾಗೃತರಾಗಿದ್ದರು.

ಕನ್ನಡದ ಮೂರನೆಯ ವಾಕ್‍ಚಿತ್ರ ಸದಾರಮೆಗೆ ಕೂಡ ಸಾಹಿತ್ಯ ಇವರದೇ. ಈ ಚಿತ್ರದ ಭಂಗಿ ಆನಂದವೇನೆಂಬ ಲೋಕದಿ ಎನ್ನುವ ಗೀತೆ ಜನಪ್ರಿಯವಾಯಿತು.

ಆನಂತರ ೧೯೩೭ರಲ್ಲಿ ದಾಸಶ್ರೇಷ್ಠರಾದ ಪುರಂದರದಾಸರ ಕತೆಯನ್ನು ಆಧರಿಸಿದ ಚಿತ್ರವನ್ನು ದೇವಿಫಿಲಂಸ್ ನಿರ್ಮಿಸಿತು.ಅದಕ್ಕೆ ಶಾಸ್ತ್ರಿಗಳು ಸಾಹಿತ್ಯ ನೀಡಿದರು. ನಂತರ ೩ ವರ್ಷ ಯಾವುದೇ ಕನ್ನಡ ಚಿತ್ರ ಬಿಡುಗಡೆಯಾಗಲಿಲ್ಲ. ಹಾಗಾಗಿ ಶಾಸ್ತ್ರಿಗಳು ಕೆಲಕಾಲ ಚಿತ್ರರಂಗದಿಂದ ದೂರವಿರುವಂತೆ ಮಾಡಿತು.

೧೯೪೨ರಲ್ಲಿ ತೆರೆಕಂಡ ಕಲೈವಾಣಿ ಫಿಲಂಸ್‍ನ ಪ್ರಹ್ಲಾದ ಚಿತ್ರಕ್ಕೆ ಶಾಸ್ತ್ರಿಗಳು ಸಾಹಿತ್ಯ ನೀಡಿದರು. ಅದೂ ಯಶಸ್ಸು ಕಾಣಲಿಲ್ಲ. ಇದರಿಂದಾಗಿ ಈ ಚಿತ್ರದ ನಿರ್ಮಾಪಕರು ಶಾಸ್ತ್ರಿಗಳ ಸಾಹಿತ್ಯ ಬಳಸಿಕೊಂಡು ನಿರ್ಮಿಸುತ್ತಿದ್ದ ಭಕ್ತ ಕನಕದಾಸ ಚಿತ್ರ ಅರ್ಧಕ್ಕೇ ನಿಂತು ಹೋಯಿತು.

೧೯೪೩ರಲ್ಲಿ ಕಲೈವಾಣಿ ಸಂಸ್ಥೆ ಕೃಷ್ಣ ಸುಧಾಮ ಚಿತ್ರ ನಿರ್ಮಿಸಿತು. ಈ ಚಿತ್ರಕ್ಕೆ ಸಾಹಿತ್ಯ ನೀಡಿದ್ದಲ್ಲದೇ ಸುಧಾಮನ ಪಾತ್ರದಲ್ಲೂ ಬೆಳ್ಳಾವೆ ಅಭಿನಯಿಸಿದರು. ನಿರ್ದೇಶಕ ಕೆ.ಸುಬ್ರಹ್ಮಣ್ಯಂ ತಮಿಳಿನ ಕುಚೇಲ ಚಿತ್ರದ ಕೆಲವು ದೃಶ್ಯಗಳನ್ನು ಈ ಚಿತ್ರದಲ್ಲಿ ಸೇರಿಸಿದ್ದರು.

ನರಹರಿ ಶಾಸ್ತ್ರಿಗಳು ಗುಬ್ಬಿ ಕಂಪನಿಗಾಗಿ ೧೯೪೫ರಲ್ಲಿ ಹೇಮರೆಡ್ಡಿ ಮಲ್ಲಮ್ಮ ಚಿತ್ರಕ್ಕೆ ಸಾಹಿತ್ಯ ನೀಡಿದರು. ಚಿತ್ತೂರು ವಿ.ನಾಗಯ್ಯ ಸಂಗೀತ ನಿರ್ದೇಶನದ ಗೀತೆಗಳು ಬಹಳ ಜನಪ್ರಿಯವಾದವು. ಅದರಲ್ಲೂ ಆಸೆಯೂ ನಿರಾಸೆಯಾದುದೇ ಈಶ ಬಹಳ ಜನಪ್ರಿಯತೆ ಗಳಿಸಿತು ಎಂದು ವಿಮರ್ಶಕರ ಅಭಿಪ್ರಾಯ. ಈ ಚಿತ್ರವು ಬೆಳ್ಲಾವೆಯವರ ಕೊನೆಯ ಚಿತ್ರ.

ನರಹರಿಶಾಸ್ತ್ರಿಗಳು ತಮ್ಮ ೭೯ನೇ ವಯಸ್ಸಿನಲ್ಲಿ ೧೯೬೧ಜೂನ್ ೨೧ರಂದು ನಿಧನರಾದರು.

ಆಕರಗಳು

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]