ವಿಷಯಕ್ಕೆ ಹೋಗು

ಬೀರೇಂದ್ರನಾಥ ಚಟರ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೀರೇಂದ್ರನಾಥ ಚಟರ್ಜಿ (31 ಅಕ್ಟೋಬರ್ 1880 – 2 ಸೆಪ್ಟೆಂಬರ್ 1937) ಒಬ್ಬ ಭಾರತೀಯ ಕ್ರಾಂತಿವೀರ.[][] ಸರೋಜಿನಿ ನಾಯ್ಡು ಬೀರೇಂದ್ರನಾಥರ ಸಹೋದರಿ. ಮುಂದೆ ಪಶ್ಚಿಮ ಬಂಗಾಲದ ರಾಜ್ಯಪಾಲ ಸ್ಥಾನವನ್ನೇರಿದ[] ಪದ್ಮಜಾ ನಾಯ್ಡು ಇವರ ಸೋದರ ಸೊಸೆ.

ಆರಂಭಿಕ ಜೀವನ

[ಬದಲಾಯಿಸಿ]

ಢಾಕಾದಲ್ಲಿ ಜನನ (ಜನನ ವರ್ಷ ೧೮೮೦). ತಂದೆ ಅಘೋರನಾಥ ಚಟರ್ಜಿ ಹೈದರಾಬಾದಿನ ನಿಜಾಂ ಕಾಲೇಜಿನಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿದ್ದರು.

ಐ.ಸಿ.ಎಸ್. ಪರೀಕ್ಷೆಗಾಗಿ ಲಂಡನಿಗೆ ಹೋದ ಬೀರೇಂದ್ರನಾಥರು ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. 1906-1907ರಲ್ಲಿ ನ್ಯಾಯಶಾಸ್ತ್ರವನ್ನು ಅಭ್ಯಾಸ ಮಾಡಿದರು. ಲಂಡನಿನಲ್ಲಿ ಸಾವರ್ಕರರ ಭೇಟಿಯಾದಾಗ ಇವರ ಜೀವನಕ್ಕೆ ಹೊಸ ತಿರುವು ಬಂತು. ಬೀರೇಂದ್ರ ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ 1910ರಲ್ಲಿ ನ್ಯಾಯವ್ಯಾಸಂಗದಿಂದ ಇವರಿಗೆ ಉಚ್ಚಾಟನೆಯಾಯಿತು.

ನಂತರದ ಜೀವನ

[ಬದಲಾಯಿಸಿ]

ಬೀರೇಂದ್ರರ ಮೊದಲ ಹೆಂಡತಿ ಕ್ರೈಸ್ತ ಸಂನ್ಯಾಸಿನಿಯಾದ್ದರಿಂದ ಅವಳಿಂದ ಬೇರೆಯಾಗಿ ಹಲವು ವರ್ಷ ತಮ್ಮ ಮದುವೆಯನ್ನು ಅನೂರ್ಜಿತಗೊಳಿಸಲು ಪ್ರಯತ್ನಿಸಿದರು.[] ಇವರು ಮತ್ತೆ ಮದುವೆಯಾದರು. ಈ ಮದುವೆ ನಡೆದದ್ದು ಮಾಸ್ಕೋದಲ್ಲಿ, ಕಮ್ಯುನಿಸ್ಟ್ ಪದ್ಧತಿಗೆ ಅನುಸಾರವಾಗಿ. ಎರಡನೆಯ ಹೆಂಡತಿ ಅಗ್ನೆಸ್ ಸ್ಮೆಡ್ಲಿ ಅಮೆರಿಕನ್ ಸಂಜಾತೆ. ಆಕೆ ಪತ್ರಿಕೋದ್ಯಮಿಯಾಗಿದ್ದರು. ಅಮೆರಿಕದ ಕಾರ್ಮಿಕ ಸಂಘವೊಂದರಲ್ಲಿದ್ದು ಅನಂತರ ಭಾರತೀಯ ಕ್ರಾಂತಿಕಾರಿಗಳ ಸಂಪರ್ಕ ಹೊಂದಿದ್ದ ಆಕೆ ನ್ಯೂಯಾರ್ಕಿನ ಭಾರತ ಸ್ವಾತಂತ್ರ್ಯ ಮಿತ್ರರ ಸಂಘದ ಸ್ಥಾಪಕರಲ್ಲೊಬ್ಬರು.

ಬೀರೇಂದ್ರರು ಸಮಾಜವಾದಿ ಸಾಹಿತ್ಯವನ್ನು ವಿಶೇಷವಾಗಿ ಓದಿದರು. ಸಿ.ಆರ್.ಪಿಳ್ಳೆ, ರಾಜ ಮಹೇಂದ್ರ ಪ್ರತಾಪ್, ಮೇಡಂ ಕಾಮ, ಲಾಲಾ ಹರ್ ದಯಾಲ್, ಭೂಪೇಂದ್ರನಾಥ ದತ್ತ, ಎಂ. ಎಲ್. ಧಿಂಗ್ರ, ಶ್ಯಾಮಾಜಿ ಕೃಷ್ಣವರ್ಮ ಮುಂತಾದವರೊಂದಿಗೆ ಇವರ ಸಂಪರ್ಕ ಬೆಳೆಯಿತು. ಮುಂದೆ ವಿ.ಐ.ಲೆನಿನ್ ಇವರಿಗೆ ಆದರ್ಶ ವ್ಯಕ್ತಿಯಾದ. ಬ್ರಿಟಿಷರನ್ನು ಭಾರತದಿಂದ ಓಡಿಸಲು ಯಾವುದೇ ಕ್ರಮ ತೆಗೆದುಕೊಂಡರೂ ಸರಿ ಎಂಬುದು ಇವರ ಅಭಿಪ್ರಾಯವಾಗಿತ್ತು. ಇವರ ಸಾಮ್ರಾಜ್ಯಶಾಹಿ ವಿರೋಧಿ ಭಾವನೆಯನ್ನು ಲೆನಿನ್ ಮೆಚ್ಚಿಕೊಂಡಿದ್ದ. ಜರ್ಮನಿ ಮತ್ತು ರಷ್ಯದಲ್ಲಿ ಬೀರೇಂದ್ರರು ತಮ್ಮ ಕ್ರಾಂತಿಕಾರ್ಯಗಳನ್ನು ವಿಸ್ತರಿಸಿದರು. ಬೀರೇಂದ್ರನಾಥರೊಂದಿಗೆ ತಮ್ಮ ಕುಟುಂಬ ಎಲ್ಲ ಸಂಬಂಧಗಳನ್ನೂ ಕಡಿದುಕೊಂಡಿದೆಯೆಂದು ಸೋದರಿ ಸರೋಜಿನಿ ನಾಯ್ಡು ಅವರು ಸರ್ಕಾರಕ್ಕೆ ಬರೆದಾಗಲೂ ಇವರು ಅಧೀರರಾಗಲಿಲ್ಲ. 1908ರಲ್ಲಿ ಇವರು ಐರ್ಲೆಂಡಿಗೆ ಭೇಟಿಕೊಟ್ಟರು. 1909ರಲ್ಲಿ ಮೇಡಂ ಕಾಮ ಅವರ ವಂದೇಮಾತರಂ ಬಳಗವನ್ನು ಸೇರಲು ಪ್ಯಾರಿಸ್ಸಿಗೆ ಹೋದರು. ಒಂದನೆಯ ಮಹಾಯುದ್ಧಕ್ಕೆ ಸ್ವಲ್ಪ ದಿನಗಳ ಮೊದಲು ಬೀರೇಂದ್ರನಾಥರು ಬರ್ಲಿನಿನಲ್ಲಿದ್ದಾಗ 'ಜಪಾನ್, ಏಷ್ಯದ ಶತ್ರು' ಎಂಬ ಲೇಖನ ಪ್ರಕಟಿಸಿದರು. ಇದು ಜರ್ಮನ್ ಸರ್ಕಾರದ ಗಮನ ಸೆಳೆಯಿತು. 1915-16ರಲ್ಲಿ ಬೀರೇಂದ್ರನಾಥರನ್ನು ಬರ್ಲಿನ್ ಸಮಿತಿಗೆ ಕಾರ್ಯದರ್ಶಿಯಾಗಿ ಆರಿಸಲಾಯಿತು. ಅವರು ಈ ಸಮಿತಿಗೆ ಹೊಸ ಸದಸ್ಯರನ್ನು ಕಂಡುಹಿಡಿಯಲು ಕೂಡ ಸಹಾಯ ಮಾಡಿದರು.[] ಆ ಸಂದರ್ಭದಲ್ಲಿ ಇವರು ಚಟ್ಟೊ ಎಂದು ಪ್ರಸಿದ್ಧರಾದರು. 1915ರಲ್ಲಿ ಇವರು ಸ್ವಿಟ್ಜರ್ಲೆಂಡಿಗೆ ಭೇಟಿ ಇತ್ತಾಗ ಇವರ ಕೊಲೆಗೆ ಪ್ರಯತ್ನ ನಡೆಯಿತು. ಅಲ್ಲಿಯ ಪೋಲೀಸರು ಬೀರೇಂದ್ರನಾಥರಿಗೆ ರಕ್ಷಣೆ ನೀಡಿ ತಮ್ಮ ದೇಶದಿಂದ ಇವರನ್ನು ಗಡಿಪಾರು ಮಾಡಿದರು. ರಷ್ಯದ ಕ್ರಾಂತಿಯಾದ ಸ್ವಲ್ಪಕಾಲದ ಮೇಲೆ ಸ್ವೀಡನಿನಲ್ಲಿ ಬರ್ಲಿನ್ ಸಮಿತಿಯ ಶಾಖೆಯೊಂದು ಸ್ಥಾಪಿತವಾಯಿತು. ಅಲ್ಲಿ ಇವರಿಗೆ ಅನೇಕ ಬೊಲ್ಷೆವಿಕ್ ನಾಯಕರ ಸಂಪರ್ಕವುಂಟಾಯಿತು.

ರಷ್ಯನ್ ಪರವಾದ ಕ್ರಾಂತಿಕಾರಿಗಳು 1920ರಲ್ಲಿ ಸ್ಟಾಕೋಂನಲ್ಲಿ ಸೇರಿದ್ದ ಸಭೆಯಲ್ಲಿ ಬೀರೇಂದ್ರನಾಥರನ್ನು ಆರಿಸಿ ಮಾಸ್ಕೋಗೆ ಕಳಿಸಿದರು. ಅಲ್ಲಿ ಇವರಿಗೆ ಟ್ರಾಟ್ಸ್ಕಿ ಮತ್ತು ಲೆನಿನರ ನಿಕಟ ಸಂಪರ್ಕವುಂಟಾಯಿತು. ಭಾರತಕ್ಕೆ ಆಗಿನ ತುರ್ತು ಅಗತ್ಯವೆಂದರೆ ರಾಷ್ಟ್ರೀಯ ಚಳವಳಿಯೆ ಹೊರತು ಕಾರ್ಮಿಕ ಚಳವಳಿಯಲ್ಲ ಎಂದು ಬೀರೇಂದ್ರರು ವಾದಿಸಿದರು. ಇವರ ವಾದವನ್ನು ಲೆನಿನ್ ಕೂಡ ಮೆಚ್ಚಿದ. ಬೀರೇಂದ್ರರ ಮುಂದಿನ ಜೀವನ, ಕಾರ್ಯಗಳ ಬಗ್ಗೆ ಹೆಚ್ಚು ತಿಳಿದು ಬಂದಿಲ್ಲ. 1926-1927ರಲ್ಲಿ ಇವರೆಗೆ ತೀವ್ರ ಅನಾರೋಗ್ಯವಾಗಿದೆಯೆಂಬ ವರದಿ ಬಂದಿತ್ತು. ಟ್ರಾಟ್‍ಸ್ಕಿನೊಂದಿಗೆ ಇವರು ಸ್ನೇಹದಿಂದ ಇದ್ದುದಕ್ಕಾಗಿ ಸ್ಟಾಲಿನ್ ಇವರನ್ನು ಬಂಧನದಲ್ಲಿರಿಸಿದನೆಂದೂ ಇವರು ಸಾಯುವ ಮುನ್ನ ರಷ್ಯದ ಪೌರತ್ವ ಪಡೆದುಕೊಂಡಿದ್ದರೆಂದೂ ಹೇಳಲಾಗಿದೆ. ಇವರು 1946ರಲ್ಲಿ ಹೃದಯಾಘಾತದಿಂದ ಮೃತಪಟ್ಟರೆಂದು ಪ್ರತೀತಿಯಿದೆಯಾದರೂ ಹೀಗೆಂದು ಅಧಿಕೃತ ವರದಿಯಿಲ್ಲ.

ಉಪಸಂಹಾರ

[ಬದಲಾಯಿಸಿ]

ಬೀರೇಂದ್ರನಾಥ ಚಟರ್ಜಿಯವರದು ಪ್ರಗತಿಪರದೃಷ್ಟಿ. ಜಾತಿ ಪದ್ಧತಿಯನ್ನೂ, ಅಸ್ಪೃಶ್ಯತೆಯನ್ನೂ ಇವರು ಖಂಡಿಸುತ್ತಿದ್ದರು. ಪಾಶ್ಚಾತ್ಯ ಶಿಕ್ಷಣದ ಬಗ್ಗೆ ಇವರಗೆ ಒಲವಿತ್ತು. ಭಾರತದ ಎಲ್ಲ ಬಗೆಯ ಆರ್ಥಿಕ ಕಷ್ಟನಷ್ಟಗಳಿಗೆ ಬ್ರಿಟಿಷ್ ಆಡಳಿತವೇ ಕಾರಣವಾದ್ದರಿಂದ ಭಾರತದಲ್ಲಿ ಬ್ರಿಟಿಷರ ಆಡಳಿತವನ್ನು ಸಂಪೂರ್ಣವಾಗಿ ಕೊನೆಗಾಣಿಸಬೇಕೆಂಬುದು ಬೀರೇಂದ್ರನಾಥರ ಗುರಿಯಾಗಿತ್ತು. ಬ್ರಿಟಿಷ್ ರೂಲ್ ಇನ್ ಇಂಡಿಯ ಕಂಡೆಮ್ಡ್ ಬೈ ದ ಬ್ರಿಟಿಷ್ ದೆಮ್‍ಸೆಲ್ವ್ಸ್, ಸೋಷಿಯಲಿಸ್ಟ್ ಕಾನ್ಫರೆನ್ಸಸ್ ಆನ್ ಬ್ರಿಟಿಷ್ ರೂಲ್ ಇನ್ ಇಂಡಿಯ ಎಂಬ ಇವರ ಕೃತಿಗಳಲ್ಲಿ ಈ ಭಾವನೆಗಳು ವ್ಯಕ್ತವಾಗಿವೆ. ಯೂರೋಪಿನ ಒಂದು ಬ್ರಿಟಿಷ್ ವಿರೋಧಿ ಪತ್ರಿಕೆಯಾಗಿದ್ದ ತಲ್ವಾರ್‌ನಲ್ಲಿ ಇವರ ಲೇಖನಗಳು ಪ್ರಕಟವಾಗುತ್ತಿದ್ದುವು. ಬೀರೇಂದ್ರನಾಥರು ಕ್ರಾಂತಿವಿಧಾನವನ್ನು ಒಪ್ಪಿದ್ದರಾದರೂ ಭಯೋತ್ಪಾದಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸಮರ್ಥಿಸುತ್ತಿರಲಿಲ್ಲ. ಇಂಥ ಚಟುವಟಿಕೆಗಳನ್ನು ಕೊನೆಗೊಳಿಸಬೇಕೆಂಬುದು ತಮ್ಮ ಇಚ್ಛೆಯಾದರೂ ಇವುಗಳ ದಮನ ಕಾರ್ಯದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ತಾವು ನೆರವು ನೀಡುವುದಿಲ್ಲವೆಂದು 1919ರಲ್ಲಿ ಇವರು ಬರೆದಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. https://encyclopedia.1914-1918-online.net/article/chattopadhyaya-virendranath/
  2. https://dbpedia.org/page/Virendranath_Chattopadhyaya
  3. "Padmaja Naidu Dies at 75; ExWest Bengal Governor". New York Times. No. May 3. 1975. Retrieved 1 June 2018.
  4. Agnes Smedley: Battle Hymn of China, p. 12
  5. Liebau, Heike (2019). ""Unternehmungen und Aufwiegelungen": Das Berliner Indische Unabhängigkeitskomitee in den Akten des Politischen Archivs des Auswärtigen Amts (1914–1920)". MIDA Archival Reflexicon: 4–5.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: