ಬಿಳಿ ನೀರು ಚಿಲುಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

ಬಿಳಿ ನೀರು ಚಿಲುಮೆಯು ಪುಣ್ಯ ಕ್ಷೇತ್ರವೆಂದೇ ಪ್ರಸಿದ್ಧವಾಗಿದೆ. ಹಲವು ಪವಾಡಗಳಿಂದ ಕೂಡಿರುವ ಈ ಕ್ಷೇತ್ರ ಮೊಳಕಾಲ್ಮುರು ತಾಲೂಕಿನ ಕೋನಸಾಗರ ಗ್ರಾಮದಲ್ಲಿದೆ. ಅವರು ಕಾಯಕಯೋಗಿ, ಮಾಡಿದವರಿಗೆ ನೀಡು ಬಿಕ್ಷೆ ಸಂದೇಶ ಸಾರಿದ ಮಹಾನ್ ತ್ಯಾಗಿ. ಆ ಪುಣ್ಯ ಪುರುಷ ಮಾಡಿದ ಕಾಯಕಗಳು ಇಂದಿಗೂ ಜನನುರಾಗಿಯಾಗಿವೆ. ಅಲ್ಲದೆ, ಆ ಗುರುವಿನ ಬೆತ್ತದಿಂದ ಬಗೆದ ಚೆಲುಮೆಯಲ್ಲಿ ಬಿಳಿನೀರು ಬುಗ್ಗೆಗಳು ಇಂದಿಗೂ ಬತ್ತದೇ ಹಾಗೇ ಇವೆ. ಇದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೊಂಡ್ಲಹಳ್ಳಿ ಗ್ರಾಮದ ಹೊರವಲಯದಲ್ಲಿರೋ ಪುಣ್ಯಕ್ಷೇತ್ರವಾಗಿದ್ದು ಬಿಳಿನೀರು ಚಿಲುಮೆ ಎಂದೇ ಖ್ಯಾತಿಗಳಿಸಿದೆ. ಕಾಯಕಯೋಗಿ ಶ್ರೀಗುರು ತಿಪ್ಪೇರುದ್ರಸ್ವಾಮಿ ನೆಲೆಸಿರುವ ಪುಣ್ಯಕ್ಷೇತ್ರ ಎಂದು ಹೆಸರಾಗಿದೆ.

ಇತಿಹಾಸ[ಬದಲಾಯಿಸಿ]

ರಾಯದುರ್ಗದಿಂದ ಮದ್ದನ ಸ್ವಾಮಿ ಎಂಬ ವ್ಯಕ್ತಿಯನ್ನ ಮಣಿಸಿದ ಯೋಗಿಗಳು ಪಣಿಯಪ್ಪ ಅನ್ನೊ ಭಕ್ತನ ಜೊತೆ ಸೇರಿ ಬಂದಿದ್ದು ಇದೇ ಕ್ಷೇತ್ರಕ್ಕೆ ಎಂಬ ಐತಿಹ್ಯವಿದೆ. ಅಲ್ಲದೆ ಇದೇ ನೆಲೆಯಲ್ಲಿ ಪಣಿಯಪ್ಪನ ನೀರಿನ ದಾಹ ತಣಿಸಲು ಕಾಯಕಯೋಗಿಗಳು ತನ್ನ ಬೆತ್ತದಿಂದ ಭೂಮಿಯಿಂದ ನೀರು ತೆಗೆದಿದ್ದರೆಂದು ಈ ಪುಣ್ಯಭೂಮಿಯನ್ನು ಬಿಳಿನೀರು ಚಿಲುಮೆ ಎನ್ನುತ್ತಾರೆ.

ನಂಬಿಕೆ[ಬದಲಾಯಿಸಿ]

ಇನ್ನೂ ಇತ್ತಿಚ್ಚಿನ ದಿನಗಳಲ್ಲಿ ಇಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತಿದ್ದು, ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ಇಲ್ಲಿಗೆ ಭೇಟಿ ನೀಡಿದ ಭಕ್ತರು ಬಾವಿಯ ನೀರನ್ನು ಮನೆಗಳಿಗೆ ತೆಗೆದುಕೊಂಡು ಹೋಗಿ ಪೂಜಿಸುವುದು ಮತ್ತೊಂದು ವಿಶೇಷ. ಮಧ್ಯ ಕರ್ನಾಟಕದ ಪವಾಡ ಪುರುಷ ಎಂದೇ ಖ್ಯಾತಿ ಗಳಿಸಿರೋ ಶ್ರೀ ತಿಪ್ಪೇರುದ್ರ ಸ್ವಾಮಿಯ ಕಾಯಕಗಳು ಇಂದಿಗೂ ಕೂಡ ಜನಾನುರಾಗಿಯಾಗಿವೆ.

ಪವಾಡ ಪುರುಷ ತಿಪ್ಪೇರುದ್ರಸ್ವಾಮಿ[ಬದಲಾಯಿಸಿ]

ಪಂಚಗಣಾಧೀಶ್ವರರಲ್ಲೊಬ್ಬರಾದ ಶ್ರೀ ತಿಪ್ಪೇರುದ್ರಸ್ವಾಮಿಗಳು ಕರ್ನಾಟಕದ ಹಲವು ಭಾಗಗಳಲ್ಲಿ ಸಂಚರಿಸಿ ಪಣಿಯಪ್ಪನೆಂಬ ಶಿವಭಕ್ತನ ಇಚ್ಛೆಯಂತೆ ನಾಯಕನಹಟ್ಟಿಯಲ್ಲಿ ನೆಲೆಸಿ, ಈ ಸ್ಥಳವನ್ನು ತನ್ನ ರ‍್ಮಭೂಮಿಯಾಗಿ ಆರಿಸಿಕೊಂಡರೆಂದು ತಿಳಿದುಬರುತ್ತದೆ. ಇವರು ಇಲ್ಲಿಗೆ ಸಮೀಪದಲ್ಲಿರುವ ಏಕಾಂತ ಮಠದಲ್ಲಿ ತಪೋನಿರತರಾಗಿದ್ದು, ಪವಾಡಗಳನ್ನು ಮೆರೆದು ಸನ್ಮಾರ್ಗ ಪ್ರವೃತ್ತರನ್ನಾಗಿ ಮಾಡಿದರು. ಇವರು ಹಿರೇಕೆರೆ, ಚಿಕ್ಕಕೆರೆ, ಮೊದಲಾದ ಐದು ಕೆರೆಗಳನ್ನೂ, ಹಲವು ಹಳ್ಳಿಗಳನ್ನೂ ಕಟ್ಟಿಸಿದರೆಂದು ಹೇಳುತ್ತಾರೆ.

ಜಾತ್ರಾ ಮಹೋತ್ಸವ[ಬದಲಾಯಿಸಿ]

ಇಲ್ಲಿ ಪ್ರತಿ ವರ್ಷವೂ ಬಸವ ಜಯಂತಿಯ ನಂತರ ಬರುವ ಪಂಚಮಿಯಂದು ರಥೋತ್ಸವ ನಡೆಯುತ್ತದೆ. ರಥೋತ್ಸವದಂದು ರಥಕ್ಕೆ ತೈಲಾಭಿಷೇಕ , ವೃಷಭ ಮಹಾನೋತ್ಸವ ನೆರವೇರಿಸಿ ನಂತರ ಮುಂಜಾನೆ ಸ್ವಾಮಿಗೆ ರುದ್ರಾಭಿಷೇಕ ಮಾಡುತ್ತಾರೆ. ನಂತರ ರಥಕ್ಕೆ ಬಲಿ ಅನ್ನ ಸಮರ್ಪಿಸಿ ಕೋನಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಡೆವು ಗ್ರಾಮದಿಂದ ಆಗಮಿಸುವ ಮುಕ್ತಿ ಧ್ವಜವನ್ನು ಆಹ್ವಾನಿಸಿ ಮದ್ಯಾಹ್ನ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು. ಇನ್ನು ರಥೋತ್ಸವದ ಮಾರನೇ ದಿನ ಕೊಂಡ್ಲಹಳ್ಳಿ ಗ್ರಾಮದ ಬೀದಿಬೀದಿ ಗಳಲ್ಲಿ ಹೂವಿನ ಪಲ್ಲಕ್ಕಿ ಮಹೋತ್ಸವ ನಡೆಯುತ್ತದೆ.

ಕ್ಷೇತ್ರದ ಮಹಿಮೆ[ಬದಲಾಯಿಸಿ]

ಬಿಳಿ ನೀರು ಚಿಲುಮೆ ಕ್ಷೇತ್ರದಿಂದ ೨೦೦ ಮೀ. ದೂರದ ಬಯಲು ಪ್ರದೇಶದಲ್ಲಿರುವ ಗುಲಗಂಜಿ ಬಂಡೆ ಬಳಿಯ ಹೊಲವೊಂದರಲ್ಲಿ ದಶಕಗಳಿಂದ ಮುಚ್ಚಿದ್ದ ಚಿಲುಮೆಯನ್ನು ತೆರವು ಗೊಳಿಸುವಾಗ ಆರೇಳು ಅಡಿ ಆಳದ ಕುಣಿಯಲ್ಲಿ ನೀರು ಕಾಣಿಸಿಕೊಂಡಿದೆ. ಕೊಂಡ್ಲಹಳ್ಳಿ, ಮೊಗಲಹಳ್ಳಿ, ಊಡೇವು, ಕೋನಸಾಗರ, ಗ್ರಾಮಗಳಲ್ಲಿ ಅಂತರ್ಜಲವೂ ೬೦೦ ಅಡಿಗೂ ಹೆಚ್ಚಿನ ಪ್ರಮಾಣದ ಆಳಕ್ಕೆ ಹೋಗಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದಂತಹ ಸಂದರ್ಭದಲ್ಲಿ ಕೇವಲ ಆರೇಳು ಅಡಿಯ ತೆರೆದ ಕುಣಿಯಲ್ಲಿ ನೀರು ಕಾಣಿಸಿಕೊಂಡಿರುವುದು ಈ ಕ್ಷೇತ್ರದಲ್ಲಿ ನೆಲೆಸಿರುವ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಮಹಿಮೆ ಎಂಬುದು ಜನರ ನಂಬಿಕೆ. ಇನ್ನು ಇಲ್ಲಿ ನೆಲೆಸಿರುವ ತಿಪ್ಪೇರುದ್ರಸ್ವಾಮಿಯ ಪವಾಡದಿಂದ ಆರೇಳು ಅಡಿ ಆಳದ ಗುಂಡಿಯಲ್ಲಿ ತೆಂಗಿನಕಾಯಿ ಒಳಗಿರುವ ಬಣ್ಣ ಹೋಲುವ ಬಿಳಿ ನೀರು ಕಾಣಿಸಿರುವುದು ಸ್ವಾಮಿಯ ಮೇಲಿನ ಭಕ್ತಿಯನ್ನು ಇಮ್ಮಡಿಗೊಳಿಸಿದೆ.

ದೇವಸ್ಥಾನಕ್ಕೆ ತಲುಪಬಹುದಾದ ದಾರಿಗಳು[ಬದಲಾಯಿಸಿ]

ಮೊಳಕಾಲ್ಮುರು ತಾಲೂಕಿನ ಕೋನಸಾಗರದ ಬಳಿ ಈ ಪುಣ್ಯಕ್ಷೇತ್ರವಿದ್ದು ಮೊಳಕಾಲ್ಮುರಿನಿಂದ ಕೊಂಡ್ಲಹಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಈ ಕ್ಷೇತ್ರ ಸಿಗುತ್ತದೆ. ಚಳ್ಳಕೆರೆ ಮತ್ತು ಮೊಳಕಾಲ್ಮುರಿನಿಂದ ಈ ಕ್ಷೇತ್ರಕ್ಕೆ ಹೋಗಬಹುದಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://vijaykarnataka.com/news/chitradurga/-20/articleshow/63785638.cms