ಬಾ.ರಾ. ಗೊಪಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾ.ರಾ. ಗೋಪಾಲ್‌ಕನ್ನಡ ಮತ್ತು ತೆಲುಗುಭಾಷೆ ಎರಡರಲ್ಲೂ ಶಾಸನ ಕ್ಷೇತ್ರದಲ್ಲಿ ಸಮಾನ ಗೌರವ ಪಡೆದಿರುವ ವಿರಳ ವ್ಯಕ್ತಿಗಳಲ್ಲಿ ಎದ್ದುಕಾಣುವ ಹೆಸರು ಬಿ.ಆರ್‌. ಗೋಪಾಲ ಅವರದು. ಅತ್ಯುನ್ನತ ಮಟ್ಟದ ವಿದ್ವತ್‌, ಅಧ್ಯಯನಕ್ಕಾಗಿಯೇ ಮುಡಿಪಿರಿಸಿದ ಜೀವನ, ಬಹುಭಾಷಾ ಪಾಂಡಿತ್ಯ, ಶಾಸನಶಾಸ್ತ್ರದಲ್ಲಿ ಆಳವಾದ ಪರಿಣಿತಿ ಮತ್ತು ತಲಸ್ಪರ್ಶಿ ಇತಿಹಾಸ ಪ್ರಜ್ಞೆಯಿಂದ ಬಾ.ರಾ. ಗೋಪಾಲ್‌ ಅವರು ಇತಿಹಾಸಕ್ಕೆ ನೀಡಿದ ಕೊಡುಗೆ ಅಮೂಲ್ಯ. ಕರ್ನಾಟಕದ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿ ೧೯೩೦ರಲ್ಲಿ ಶ್ರೀ ವೈಷ್ಣವ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು. ತಂದೆ ಬಾಲಕೃಷ್ಣ ವೃತ್ತಿಯಿಂದ ವಕೀಲರು. ತಾಯಿ ಜಾನಕಮ್ಮ. ಅವರ ಹುಟ್ಟು ಹೆಸರು ಬಾಲಕೃಷ್ಣ ರಾಜಗೋಪಾಲ. ಆದರೆ ಅವರು ವಿದ್ವತ್‌ಲೋಕದಲ್ಲಿ ಬಾ.ರಾ. ಗೋಪಾಲ್‌ಎಂದೇ ಪ್ರಸಿದ್ಧರು. ಅವರು ಬೆಳೆದುದು ಗಡಿ ಪ್ರದೇಶವಾದ್ದರಿಂದ ನಾಡನುಡಿ ಕನ್ನಡ, ಗಡಿಭಾಷೆ ತೆಲುಗು, ಮನೆಮಾತು ತಮಿಳು ಮತ್ತು ಹಿರಿಯರಿಂದ ಸಂಸ್ಕೃತ ಅವರಿಗೆ ಬಾಲ್ಯದಲ್ಲೆ ಸರಾಗವಾಗಿ ಬಂದವು. ಅದರಿಂದ ಅವರಿಗೆ ಬಹುಭಾಷಾ ಪ್ರವೀಣತೆ ಸಹಜವಾಗಿ ದೊರೆಯಿತು. ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಆಯಿತು. ಇಂಟರ್‌ಮಿಡಿಯಟ್‌ವರೆಗೆ ತುಮುಕೂರಿನಲ್ಲಿ ಶಿಕ್ಷಣ ದೊರೆಯಿತು, ಕಾಲೇಜು ಹಂತದಲ್ಲಿ ಇಂಗ್ಲಿಷ್‌ ಭಾಷೆಯ ದೀಕ್ಷೆ ಸಿಕ್ಕಿತು. ನಂತರ ಮೈಸೂರಿನ ಮಹಾರಾಜ ಕಾಲೇಜು ಪದವಿ ಶಿಕ್ಷಣಕ್ಕೆ ಅನುವು ನೀಡಿತು. ವಸತಿ ಮತ್ತು ಊಟ ಪರಕಾಲ ಮಠದ ಉಚಿತ ವಿದ್ಯಾರ್ಥಿನಿಲಯದಲ್ಲಿ ಡಿ.ಎಲ್‌.ನರಸಿಂಹಾಚಾರ್ಯ,ಎಂ.ಯಮುನಾಚಾರ್ಯ, ರಾಳ್ಳಪಲ್ಲಿ ಅನಂತಕೃಷ್ಣಶರ್ಮ ಮತ್ತು ಎಸ್. ಶ್ರೀಕಂಠಶಾಸ್ತ್ರಿಗಳಂಥಹ ವಿದ್ವಾಂಸರ ಮಾರ್ಗದರ್ಶನದಿಂದ ವಿದ್ವತ್‌ ಲೋಕಕ್ಕೆ ಪ್ರವೇಶ ದೊರೆಯಿತು, ಮತ್ತು ಪರಿಣಾಮವಾಗಿ ಇತಿಹಾಸ ಮತ್ತು ಇಂಡಾಲಜಿ ವಿಷಯದಲ್ಲಿ ಆಸಕ್ತಿ ಕುದುರಿತು. ಅವರ ಬಹುಭಾಷಾಜ್ಞಾನ ಅಧ್ಯಯನಕ್ಕೆ ಪೂರಕವಾಯಿತು. ಮೈಸೂರಿನಲ್ಲೆ ಸ್ನಾತಕೋತ್ತರ ಪದವಿ. ಶಾಸನ ಶಾಸ್ತ್ರದಲ್ಲಿ ಆಸಕ್ತಿ ಹೆಚ್ಚಿತು,ಅದಕ್ಕೆ ಅವರು ಆರಿಸಿದ ವಿಷಯಗಳಾದ ಇಂಡಾಲಜಿ ಮತ್ತು ಇತಿಹಾಸ ಪೂರಕವಾದವು.ಇಷ್ಟವಾದ ವಿಷಯವನ್ನೇ ಕಷ್ಟವಿಲ್ಲದೆ ಕಲಿಯುವ ಅವಕಾಶ ಅವರಿಗೆ ದಕ್ಕಿತು.

ಅದೃಷ್ಟವೆಂದರೆ ಅವರ ವೃತ್ತಿ ಮತ್ತು ಪ್ರವೃತ್ತಿಗಳು ಪರಸ್ಪರ ಪೂರಕವಾದವು.ಅವರಿಗೆ ದಕ್ಷಿಣ ಭಾರತದಲ್ಲೇ ಪ್ರಖ್ಯಾತವಾದ ಉದಕಮಂಡಲ ದಲ್ಲಿನ ಶಾಸನಶಾಸ್ತ್ರ ಅಧ್ಯಯನ ಸಂಸ್ಥೆಯಲ್ಲಿ ಶಾಸನ ತಜ್ಞರಾಗಿ ಕೇಂದ್ರಸರ್ಕಾರದ ಉದ್ಯೋಗ ದೊರೆಯಿತು.ಅವರ ಶಿಕ್ಷಣ ಮುಗಿದೊಡನೆಯೇ ೧೯೫೫ರಲ್ಲಿ ಉದ್ಯೋಗ ಪಡೆದರು.

ಅವರಿಗೆ ದೊರೆತ ಹುದ್ದೆ ತೆಲಗು ಸಂಶೋಧನಾ ಸಹಾಯಕರದು. ಅವರ ಬಹುಭಾಷಾ ಜ್ಞಾನವು ತೆಲುಗು ಮತ್ತು ಕನ್ನಡ ಎರಡೂ ಭಾಷೆಯ ಶಾಸನ ಅಧ್ಯಯನಕ್ಕೆ ಅನುಕೂಲವಾಯಿತು.

ಅದರ ಫಲವಾಗಿ ಎರಡೂ ಭಾಷೆಯ ಶಾಸನ ಸಂಪಾದನೆಯ ಕೆಲಸ ನಿರಾಯಾಸ. ಅಲ್ಲಿ ಕಳೆದ ಒಂದು ದಶಕವು ಅವರ ವೃತ್ತಿಜೀವನಕ್ಕೆ ಭದ್ರಅಡಿಪಾಯ ಹಾಕಿತು. ಅವರ ಕಚೇರಿಯಲ್ಲಿ ಓದಬೇಕಾದ ಸಾವಿರಾರು ಶಾಸನಗಳು ಎಲ್ಲೆಂದರಲ್ಲಿ ಹರಡಿದ್ದವು, ಅವುಗಳ,ಅಧ್ಯಯನಕ್ಕೆ ಅತ್ಯಗತ್ಯವಾದ ಗ್ರಂಥಾಲಯ ಸೌಲಭ್ಯವೂ ಇತ್ತು, ಜೊತೆಗೆ ಡಾ.ಡಿ,ಸಿ ಸರ್ಕಾರ್‌, ಶ್ರೀಲಕ್ಷ್ಮಿನಾರಾಯಣರಾವ್‌, ಡಾ. ಪಿ.ಬಿ ದೇಸಾಯಿ ಮತ್ತು ಶ್ರೀ ಎಚ್ ಕೆ ನರಸಿಂಹಸ್ವಾಮಿಯಂತಹ ತಜ್ಞರ ಮಾರ್ಗದರ್ಶನ ಲಭ್ಯವಿತ್ತು. ಅದರ ಪರಿಣಾಮವಾಗಿ ಗೋಪಾಲ್‌ ಇತಿಹಾಸ ಸಂಶೋಧನೆ ಮತ್ತು ಶಾಸನಶಾಸ್ತ್ರದಲ್ಲಿ ಉನ್ನತ ಸ್ಥಾಯಿಗೆ ಏರಲೂ ಅನುಕೂಲವಾಯಿತು. ತಮ್ಮ ಕೆಲಸದ ಅಂಗವಾಗಿ ಹೊಸ ಶಾಸನಗಳನ್ನು ಹುಡುಕಲು ಹಳ್ಳಿಹಳ್ಳಿಗೆ ಓಡಾಟ, ಅವುಗಳ ಸಮೀಕ್ಷೆ, ವಾರ್ಷಿಕ ವರದಿ ತಯಾರಿ,ಶಾಸನ ಗ್ರಂಥಗಳ ಸಂಪಾದನೆ, ಪ್ರಕಟನೆಗೆ ಪೂರ್ವಸಿದ್ಧತೆಯ ತರಬೇತಿ ದೊರಕಿತು. ಅದರಲ್ಲೂ ತೆಲುಗು ಮತ್ತು ಕನ್ನಡ ಶಾಸನ ಸಂಗ್ರಹ ಮತ್ತು ಪ್ರಕಟನೆಯಲ್ಲಿ ಅವರ ಕಾಣಿಕೆಯು ದಕ್ಷಿಣ ಭಾರತದಲ್ಲೇ ಗಣನೀಯ ಎಂದು ಗುರುತಿಸಲಾಗಿದೆ. ತಮ್ಮಲ್ಲಿ ದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಕಲ್ಯಾಣ ಚಾಲುಕ್ಯರ ಕುರಿತು ಮಾಡಿದ ಅವರ ಸಂಶೋಧನೆಯ ಪ್ರೌಢಪ್ರಬಂಧಕ್ಕೆ ಮೈಸೂರುವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ದೊರಕಿತು.

ಶಾಸನ ಪರಿಣತಿಯು ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪುರಾತನ ಇತಿಹಾಸ ಮತ್ತು ಸಂಸ್ಕೃತಿ ವಿಭಾಗದಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುವ ಅವಕಾಶ ಒದಗಿಸಿತು. ಅಲ್ಲಿಯೂ ಅವರ ವೃತ್ತಿಮಾರ್ಗದರ್ಶಕರಾಗಿದ್ದ ಡಾ.ಪಿ.ಬಿ ದೇಸಾಯಿಯವರೇ ವಿಭಾಗದ ಮುಖ್ಯಸ್ಥರು.ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾಡುವ ಬೋಧನೆಯು ಅವರ ಜ್ಞಾನ ದಿಗಂತದ ವಿಸ್ತರಣೆಗೆ ಸಹಾಯ ಮಾಡಿತು. ಶೈಕ್ಷಣಿಕ ಪ್ರಪಂಚದ ಅನುಭವ, ವಿಚಾರ ಸಂಕಿರಣಗಳು, ಸಮಾವೇಶಗಳು ಅವರ ಅಧ್ಯಯನಕ್ಕೆ ಹೊಸ ಆಯಾಮ ಒದಗಿಸಿದವು.ಆಗಲೇ ಅವರು ಭುವನೇಶ್ವರದಲ್ಲಿ ನಡೆದ ಭಾರತೀಯ ಇತಿಹಾಸ ಕಾಂಗ್ರೆಸ್ಸಿನ ಶಾಸನ ಮತ್ತು ನಾಣ್ಯಶಾಸ್ತ್ರ ವಿಭಾಗಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರು.ಪಿ.ಬಿ.ದೇಸಾಯಿಯವರ ಸಂಪಾದಕತ್ವದಲ್ಲಿ ಹೊರಬಂದ “ಕರ್ನಾಟಕ ಇತಿಹಾಸ” ಉದ್ಗ್ರಂಥ ಬೆಳಕುಕಾಣಲು ಇವರ ಕೊಡುಗೆಯೂ ಇದೆ.ಕನ್ನಡಸಂಶೋಧನ ಸಂಸ್ಥೆಯು “ಕರ್ನಾಟಕ ಶಾಸನಗಳ ಸರಣಿ” ಪ್ರಕಟಿಸಿದ ಎರಡು ಸಂಪುಟಗಳ ಸಂಪಾದಕ ಮಂಡಳಿಯಲ್ಲೂ ಇವರ ಪಾಲು ಗಣನೀಯ. ಜೊತೆ ಜೊತೆಗೆ ವಿವಿಧ ವಿದ್ವತ್‌ಪತ್ರಿಕೆಗಳಲ್ಲಿ ಅನೇಕ ಸಂಶೋಧನ ಲೇಖನಗಳನ್ನು ಪ್ರಕಟಿಸಿದರು. ಅವರಿಗೆ ಪ್ರವಾಚಕ ಹುದ್ದೆಯೂ ಲಭಿಸಿತು. ತಮಗೆ ಶಿಕ್ಷಣ ನೀಡಿದ ಮಾತೃಸಂಸ್ಥೆ ಮೈಸೂರು ವಿಶ್ವವಿದ್ಯಾಲಯದ ಮಹತ್ವದ ಯೋಜನೆಯಾದ ಕಳೆದ ಶತಮಾನದ ಕೊನೆಯಲ್ಲಿ ಬಿ.ಎಲ್‌ರೈಸ್‌ ಸಂಪಾದಿಸಿದ “ಎಪಿಗ್ರಾಫೀಯಾ ಕರ್ನಾಟಿಕ “ ಸಂಪುಟಗಳ ಪರಿಷ್ಕರಣೆ ಮತ್ತು ಪುನರ್‌ಮುದ್ರಣದ ಹೊಣೆ ಹೊರಲು ಕರೆ ಬಂದಿತು. ಅವರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶಾಸನ ತಜ್ಞರಾಗಿಸೇರಿದರು.ಮೂಲದ ಐದು ಸಂಪುಟಗಳನ್ನು ಪರಿಷ್ಕರಣೆ ಮಾಡಿ ವಿಸ್ತರಿಸಿ, ಒಂಬತ್ತು ಸಂಪುಟಗಳ ಸಂಪಾದನೆ ಮಾಡುವ ಬೃಹತ್‌ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವುಗಳಲ್ಲಿ ಹೊಸದಾಗಿ ದೊರೆತ ಶಾಸನಗಳನ್ನೂ ಸೇರಿಸಿ,ಸ್ಖಾಲಿತ್ಯವಾಗಿದ್ದ ಅನೇಕ ಹಳೆಯ ಶಾಸನಗಳ ಪಠ್ಯವನ್ನು ಲಭ್ಯವಿದ್ದ ಮೂಲಶಾಸನ ಪರಿಶೀಲಿಸಿ ಪರಿಷ್ಕರಿಸಿದರು. ಈ ಸಂಪುಟಗಳಿಗೆ ಅವರು ರಚಿಸಿದ ಸವಿವರವಾದ ಪೀಠಿಕೆಯೇ ಅತ್ಯಮೂಲ್ಯ ಮಾಹಿತಿಯ ಆಕರವಾಗಿವೆ. ಕರ್ನಾಟಕ ಇತಿಹಾಸದ ಸಮಗ್ರ ಚಿತ್ರಣ ಕೊಡುವ ಅಧ್ಯಾಯಗಳಾಗಿವೆ.ಅವುಗಳಿಂದಾಗಿಯೇ ಈ ಕ್ಷೇತ್ರದಲ್ಲಿನ ವಿದ್ವಾಂಸರು ಬಿ.ಎಲ್‌ರೈಸ್‌ ಜೊತೆ ಜೊತೆಯಾಗಿ ಬಾ.ರಾ. ಗೋಪಾಲರನ್ನೂ ನೆನೆಯುವಂತಾಗಿದೆ.

ಶಾಸನ ಮತ್ತು ಇತಿಹಾಸ ಕ್ಷೇತ್ರಗಳಲ್ಲಿಅವರ ಕೊಡುಗೆ ಅಪಾರ ಮತ್ತು ವೈವಿಧ್ಯಪೂರ್ಣ. ಅವರ ಕಾರ್ಯಗಳನ್ನು ಮುಖ್ಯವಾಗಿ ಮೂರು ಭಾಗಮಾಡಬಹುದು. ಶಾಸನ ಸಂಬಂಧಿ ಸಂಪುಟಗಳು ಇತಿಹಾಸ ಗ್ರಂಥಗಳು ಮತ್ತು ಲೇಖನ, ವಿಮರ್ಶೆ ಉಪನ್ಯಾಸ ಇತ್ಯಾದಿ. ವೃತ್ತಿಗೆ ಸೇರಿದ ಮೊದಲೇ ದಕ್ಷಿಣ ಭಾರತದ ಶಾಸನಗಳ ಸಂಪುಟ ೧೫ ಮತ್ತು ೧೭ ರ ಸಂಪಾದನಾ ಕೆಲಸದಲ್ಲಿ ಡಾ. ಪಿ ಬಿ.ದೇಸಾಯಿಯವರ ಜೊತೆ ದುಡಿಯುವ ಅವಕಾಶ ಸಿಕ್ಕಿತು.ಸುಮಾರು ೭೭೧ ಕನ್ನಡ ಶಾಸನಗಳ ಸಂಪೂರ್ಣಪಾಠ , ಅವುಗಳ ಇಂಗ್ಲಿಷ್‌ ಸಾರಾಂಶ ಮತ್ತು ಅವುಗಳ ಮಹತ್ವ ವಿವರಿಸುವ ಸುದೀರ್ಘ ಪ್ರಸ್ತಾವನೆಗಳೊಡನೆ ಪ್ರಕಟಿಸಿದರು. ಸಂಕೀರ್ಣ ಶಾಸನಗಳು ಎಂಬ ಹೆಸರಿನ ೧೭ನೆಯ ಸಂಪುಟದಲ್ಲಿ ಅನ್ಯಭಾಷೆಗಳ ಶಾಸನಗಳನ್ನೂ ಹೊರತಂದ ಸಂಪಾದಕ ಮಂಡಳಿಯಲ್ಲಿ ಸಹ ಸಂಪಾದಕರಾಗಿದ್ದರು. ಅದೇ ರೀತಿಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆಯ “ಕರ್ನಾಟಕ ಇನ್ಸ್ ಕ್ರಿಪ್ಷನ್ಸ್‌”, “Corpus of Kannada inscriptions” ನಲ್ಲಿ ಪ್ರಾಚೀನ ಕದಂಬರ ಎಲ್ಲ ಶಾಸನಗಳ ವ್ಯವಸ್ಥಿತ ಅಧ್ಯಯನವಿದೆ.

ವಿಜಯನಗರಕಾಲದ ದಕ್ಷಿಣ ಭಾರತದಲ್ಲಿ ದೊರೆತ ಎಲ್ಲ ಶಾಸನಗಳನ್ನು ರಾಜ್ಯವಾರು, ಜಿಲ್ಲಾವಾರು ಮತ್ತು ತಾಲೂಕುವಾರು ಅಕಾರಾದಿಯಾಗಿ ವಿಂಗಡಣೆ ಮಾಡಿ ಮೊದಲ ಮೂರು ಸಂಪುಟಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ 2287 ಶಾಸನಗಳ ವಿವರನೀಡಿರುವರು. ನಾಲ್ಕನೆಯ ಸಂಪುಟವು ಆಂಧ್ರಪ್ರದೇಶ ಅನಂತಪುರ ಮತ್ತು ಕರ್ನೂಲು ಜಿಲ್ಲೆಯಲ್ಲಿ ದೊರೆತ 1066 ಶಾಸನಗಳ ಮಾಹಿತಿ ಒಳಗೊಂಡಿದೆ. ಇನ್ನುಳಿದ ಆಂಧ್ರ ಪ್ರದೇಶದ ಭಾಗದಲ್ಲಿ ಮತ್ತು ತಮಿಳುನಾಡಿನಲ್ಲಿ ದೊರೆತ ಶಾಸನಗಳ ಸಂಗ್ರಹವೂ ಹೊರಬರಲಿದೆ.

ಅವರ ಸಂಶೋಧನ ಗ್ರಂಥಗಳಲ್ಲಿ ಮೊದಲನೆಯದು “ The chalukyas of Kalyana and Kalachuries (1981) ಎಂಬ ಅವರ ಪಿಎಚ್‌ಡಿಯ ಸಂಪ್ರಬಂಧ’. “ Minor Dynasties of South India” ಕರ್ನಾಟಕದಲ್ಲಿ ಹೆಚ್ಚು ಪರಿಚಿತವಲ್ಲದ ಸಾಮಂತ ಮನೆತನಗಳಾದ ಚೆಂಗಳ್ವರು, ಕೊಂಗಾಳ್ವರು, ಹಾನಗಲ್‌ಮತ್ತು ಗೋವೆಯ ಕದಂಬರು ,ಶಿಲಾಹರರು, ಸಿಂಧರು ಮೊದಲಾದವರ ವಂಶಾವಳಿಯ ಬಗೆಗ ಶಾಸನಾಧಾರಿತವಾಗಿ ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲುವ ಬರಹಗಳಿವೆ.. ಸಮಕಾಲೀನ ಇತಿಹಾಸಕಾರರೊಡನೆ ‘A History of Karnatalak’, ‘History of Andhrapradesh’ ಗ್ರಂಥಗಳನ್ನು ರಚಿಸಿದರು. ‘Sri Ramanuja in Karnataka’ ಒಂದು ಮಾಹಿತಿಪೂರ್ಣ ಸಮಗ್ರ ಗ್ರಂಥವಾಗಿದೆ.

ಕರ್ನಾಟಕದ ಪ್ರಾಚೀನ ಭಾರತದ ಚರಿತ್ರೆ, ಕರ್ನಾಟಕ ಇತಿಹಾಸ, ಕರ್ನಾಟಕದಲ್ಲಿ ರಾಮಾನುಜರು, ಕದಂಬರು, ಕರ್ನಾಟಕದಲ್ಲಿ ಕಲೆಗಳು ಮತ್ತು ವಾಸ್ತು ಕೃತಿಗಳ ಜೊತೆಗೆ ಜನಸಾಮಾನ್ಯರಲ್ಲಿ ಇತಿಹಾಸ ಮತ್ತು ಸಂಸ್ಕೃತಿಯ ಜಾಗೃತಿ ಮೂಡಿಸಲು ಚಿಕ್ಕ ಚಿಕ್ಕ ಪುಸ್ತಕಗಳನ್ನೂ ರಚಿಸಿರುವರು.

ಇತಿಹಾಸ, ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಕುರಿತಾದ ಹಲವಾರು ಲೇಖನಗಲು ವಿದ್ವತ್‌ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಇಷ್ಟೆಲ್ಲ ಮಹತ್ವ ಪೂರ್ಣ ಬರವಣಿಗೆಯ ಜೊತೆಗೆ ಹಾಸ್ಯ ಸಾಹಿತ್ಯ ಮತ್ತು ಲಿಲತಪ್ರಬಂಧಗಳನ್ನೂ ಅವರ ಅಮೇರಿಕಾಮ್ಪ್ರವಾಸ ಕಥನವಾದ “ ಅಮೇರಿಕಾದಲ್ಲೊಂದು ಇಣುಕುನೋಟ “ ಕೃತಿಯೂ ಅವರ ಬಹು ಮುಖ ಪ್ರತಿಭೆಗೆ ಸಾಕ್ಷಿ.

ವಿದ್ವತ್ತಿನಿಂದಾಗಿ ಟೋಕಿಯೋದಲ್ಲಿ ಮತ್ತು ಜರ್ಮನಿಯ ಹ್ಯಾಂಬರ್ಗನಲ್ಲಿ ನಡೆದ ಏಷಿಯಾ ಮತ್ತು ಉತ್ತರ ಆಫ್ರಿಕಾ ಅಧ್ಯಯನ ಕಾಂಗ್ರೆಸ್‌ನ ಸಮ್ಮೇಳನಗಳಿಗೆ ಆಹ್ವಾನಿತರಾಗಿದ್ದರು.

ಬಾ.ರಾ. ಗೋಪಾಲ್‌ ಅವರ ಅಂತಿಮ ಹಂತದ ಸೇವೆಯ ಸೌಭಾಗ್ಯ ಸಂದಿದ್ದು ಆಂಧ್ರಪ್ರದೇಶದ ಅನಂತಪುರದ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯಕ್ಕೆ. ಅಲ್ಲಿ೧೯೮೭ರಿಂದ ನಿವೃತ್ತರಾಗುವವರೆಗೆ ಇತಿಹಾಸ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಮೂರುವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಆಂಧ್ರಪ್ರದೇಶದ ಇತಿಹಾಸ ಅಧ್ಯಯನಕ್ಕೆ ಅವರಿಂದ ಹೊಸ ಆಯಾಮ ದೊರಕಿತು. ಆಂಧ್ರ ಇತಿಹಾಸದ ಎರಡು ಸಂಪುಟಗಳುನ್ನು ಸಂಪಾದನೆಮಾಡಿ ಪ್ರಕಟಿಸಿದರು.ಅವರ ವಿದ್ವತ್‌ಪೂರ್ಣ ಮಾರ್ಗದರ್ಶನದಲ್ಲಿ ಅನೇಕವಿದ್ಯಾರ್ಥಿಗಳು ಆಂಧ್ರ ಇತಿಹಾಸದಲ್ಲಿ ಡಾಕ್ಟರೇಟ್‌ಗಳಿಸಿದರು. ನೆಲ್ಲೂರಿನಲ್ಲಿ ಜರುಗಿದ “ಮೆಡಿವಿಯಲ್‌ ಹಿಸ್ಟರಿ ಕಾಂಗ್ರೆಸ್‌” ಮತ್ತು ಗುಂಟೂರಿನಲ್ಲಿ ಜರುಗಿದ “ಎಪಿಗ್ರಾಫಿಕಲ್‌ ಸೊಸೈಟಿ ಅಫ್ ಇಂಡಿಯಾ" ದ ವಾರ್ಷಿಕ ಸಮ್ಮೇಳನ ಮತ್ತು ಚಿತ್ರದುರ್ಗದಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾದೆಮಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ ಇವರದಾಗಿತ್ತು.

ಅವರ ವಿದ್ವತ್‌ಪೂರ್ಣ ವ್ಯಕ್ತಿತ್ವಕ್ಕೆ ಸಂದ ಪ್ರಶಸ್ತಿ ಗೌರವಗಳು ಅನೇಕ. ಮಿಥಿಕ್‌ಸೊಸೈಟಿ, ಕನ್ನಡ ಸಾಹಿತ್ಯ ಪರಿಷತ್‌, ಶ್ರೀ ಶೃಂಗೇರಿ ಮಠ ಹಾಗೂ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಸಾರ್ಥಕತೆ ಪಡೆದವು.

ನಿವೃತ್ತರಾದ ಮೇಲೂ ಅವರ ಉತ್ಸಾಹ ಕುಂದಲಿಲ್ಲ. ಮೈಸೂರಿನಲ್ಲಿ ನೆಲಸಿದ ಅವರು ತಮ್ಮಧರ್ಮ ಪತ್ನಿ ಶ್ರೀಮತಿ ಪದ್ಮ ಮತ್ತು ಮೂವರು ಪುತ್ರಿಯರ ತುಂಬು ಸಹಕಾರದಿಂದ ಮೈಮರೆತು ಸೇವೆ ಸಲ್ಲಿಸಲು ಅನುವಾಯಿತು. ಕದಂಬ ಮತ್ತು ರಾಷ್ಟ್ರಕೂಟರ ಕುರಿತಾದ ವಿಚಾರ ಸಂಕಿರಣಗಳಲ್ಲಿನ ಸಂಪ್ರಬಂಧಗಳ ಎರಡು ಸಂಪುಟಗಳು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ದೊರೆತಿರುವ ವಿಜಯನಗರದ ಅರಸರ ಶಾಸನಗಳ ಸಾರಾಂಶಗಳ ಆರು ಸಂಪುಟಗಳು, ತಮ್ಮ ಗುರುಗಳಾದ ಶ್ರೀ. ಎನ್‌. ಲಕ್ಷ್ಮಿನಾರಾಯಣರಾವ್‌ ಅವರ ಸಮಗ್ರಕೃತಿಗಳ ಸಂಪುಟದ ಸಂಪಾದಕರಾಗಿ ನಿವೃತ್ತಜೀವನದ ಏಳು ವರ್ಷಗಳನ್ನು ಸಾರ್ಥಕವಾಗಿ ಕಳೆದರು. ಮಡದಿ,ಮಕ್ಕಳು, ಮೊಮ್ಮಕ್ಕಳ ತುಂಬು ಕುಟುಂಬದ ನೆಮ್ಮದಿಯ ನಿವೃತ್ತ ಜೀವನದಲ್ಲೂ ಅವರು ಅಕ್ಷರಶಃ ತಮ್ಮ ಕೊನೆಯುಸಿರಿನ ತನಕ ವಿದ್ವತ್‌ಪೂರ್ಣ ಕಾರ್ಯಗಳಿಗಾಗಿಯೇ ಜೀವನವನ್ನುಮೀಸಲಿರಿಸಿ, ೧೯೯೭ರ ಜೂನ್‌ನಲ್ಲಿ ಇತಿಹಾಸದ ಭಾಗವಾದರು. ಉದಕಮಂಡಲದ ಶಾಸನಶಾಸ್ತ್ರ ಕಚೇರಿಯ ತ್ರಿಮೂರ್ತಿಗಳೆಂದೇ ಡಾ.ಕೆ.ವಿ.ರಮೇಶ್, ಡಾ. ಶ್ರೀನಿವಾಸ ರಿತ್ತಿ ಮತ್ತು ಬಾ.ರಾ.ಗೋಪಾಲ್‌ ಹೆಸರಾಗಿದ್ದರು.ಅವರ ಮರಣಾನಂತರ ತ್ರಿಮೂರ್ತಿಗಳಲ್ಲಿ ಉಳಿದ ಇಬ್ಬರ ಸಂಪಾದಕತ್ವದಲ್ಲಿ ಸುದರ್ಶನ ಎಂಬ ವಿದ್ವತ್‌ಪೂರ್ಣ ಸಂಸ್ಮರಣ ಸಂಪುಟವನ್ನು ಗೌರಾವಾದರಗಳಿಂದ ಅವರಿಗೆ ಸಮರ್ಪಿಸಲಾಯಿತು. ಡಾ. ಶ್ರೀನಿವಾಸ ರಿತ್ತಿಯವರ ಪ್ರಕಾರ,”ಬಾ ರಾ ಗೋಪಾಲರದು ದಣಿವರಿಯದ ದುಡಿಮೆ.ನಾಳೆ ಮಾಡಿದರಾಯಿತು ನಂತರ ಮಾಡಿದರಾಯಿತು ಎಂಬ ಮಾತೇ ಇಲ್ಲ” . ಅದೇ ಕಾರಣದಿಂದ ಪ್ರಾಗೈತಿಹಾಸ ರಂಗಕ್ಕೆ ಅವರ ಕಾಣಿಕೆ ಕಣ್ಣುಕುಕ್ಕಿಸುವ ಪ್ರಮಾಣದ್ದು. ಕರ್ನಾಟಕ ಇತಿಹಾಸ ಲೋಕದಲ್ಲಂತೂ ಅವರ ಹೆಸರು ಸದಾ ಹಸಿರಾಗಿರುವಂತೆ ‘ ಬಾ.ರಾ, ಗೋಪಾಲ್‌ ದತ್ತಿ ಪ್ರಶಸ್ತಿ’ಯನ್ನು ಕಳೆದ ಹನ್ನೆರಡು ವರ್ಷಗಳಿಂದ ಕರ್ನಾಟಕ ಇತಿಹಾಸ ಸಮ್ಮೇಳನದಲ್ಲಿ ಪ್ರತಿವರ್ಷ ಯುವ ಸಂಶೋಧಕರಿಗೆ ನೀಡಲಾಗುತ್ತಿದೆ.ಇದರಿಂದ ಸಂಶೋಧನೆಯ ಜ್ಯೋತಿಯು ಅನವರತ ಬೆಳಗಲು ಅವಕಾಶವಾಗಿದೆ.