ಬಾಗಿನ (ಕೃತಿ)

ವಿಕಿಪೀಡಿಯ ಇಂದ
Jump to navigation Jump to search

ಬಾಗಿನ ಕೃತಿ ಕುರಿತು ಹಿರಿಯ ಕನ್ನಡ ಪತ್ರಕರ್ತ ಹೆಚ್.ಆರ್.ನಾಗೇಶರಾವ್ ಅವರು ಪುಸ್ತಕ ಪ್ರಿಯ ಹೆಸರಿನಲ್ಲಿ ತಾಯಿನಾಡು ದಿನಪತ್ರಿಕೆಗೆ ದಿನಾಂಕ ೨೨-೦೮-೧೯೫೪ರಂದು ಬರೆದ ಪುಸ್ತಕ ವಿಮರ್ಶೆ.

ಶ್ರೀ ಎಸ್.ವಿ.ರಂಗಣ್ಣನವರಿಗೆ ಒಪ್ಪಿಸಿದ ಬಾಗಿನ (ಸಂಪಾದಕರು: ಶ್ರೀ ಕೆ.ವಿ.ಸುಬ್ಬಣ್ಣ ಮತ್ತು ಶ್ರೀ ಹಾ.ಮಾ.ನಾಯಕ, ಮಹಾರಾಜಾ ಕಾಲೇಜು, ಮೈಸೂರು, ಬೆಲೆ. ಆರು ರೂಪಾಯಿ)

ಇಂಗ್ಲಿಷ್ ಪ್ರೊಫೆಸರಾದರೂ, ಕನ್ನಡಕ್ಕೆ ಅಮಿತವಾದ ಸೇವೆ ಸಲ್ಲಿಸಿದ ಮತ್ತೊಬ್ಬ ಮಹನೀಯರು ಶ್ರೀ ಎಸ್.ವಿ.ರಂಗಣ್ಣನವರು - ತಮ್ಮ ಗುರುವಾದ ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರ ಉಜ್ವಲ ಪಥದಲ್ಲೇ ಮುಂದುವರಿದವರು. ಸರಳತೆ-ಸೌಜನ್ಯದಿಂದಲೂ, ಹೃದಯ ವೈಶಾಲ್ಯದಿಂದಲೂ, ವಿನಯಭರಿತ ವಿದ್ವತ್ತಿನಿಂದಲೂ ಸಕಲರ ಗೌರವಕ್ಕೂ ಸೌಹಾರ್ದಕ್ಕೂ ಪಾತ್ರರಾದವರು. ಅವರಿಗೆ ೫೫ ವರ್ಷ ತುಂಬಿದ ಮತ್ತು ಸರ್ಕಾರಿ ಸೇವೆಯಿಂದ ವಿಶ್ರಾಂತಿ ಪಡೆದ ಸಂದರ್ಭದಲ್ಲಿ ಕಳೆದ ಜನವರಿ ೨೬ರಂದು ಅವರ ಮಿತ್ರರೂ ಶಿಷ್ಯರೂ ಒಪ್ಪಿಸಿದ ೩೬ ಬರೆಹಗಳ ಮತ್ತು ೩೬೬ ಪುಟಗಳ ಹೊತ್ತಗೆಯೇ ಈ ಬಾಗಿನ. ಶ್ರೀಗಳಾದ ಎಂ.ಗೋವಿಂದ ಪೈ, ಎ.ಆರ್.ಕೃಷ್ಣ ಶಾಸ್ತ್ರಿ. ಡಿ.ವಿ.ಜಿ., ತೀ.ನಂ.ಶ್ರೀಕಂಠಯ್ಯ, ವಿ.ಕೃ.ಗೋಕಾಕ, ರಂ.ಶ್ರೀ.ಮುಗಳಿ, ವಿ.ಸೀತಾರಾಮಯ್ಯ, ಪು.ತಿ.ನ. ಮತ್ತು ಸಿ.ಕೆ.ವೆಂಕಟರಾಮಯ್ಯನವರ ಹರಕೆಗಳಿವೆ. ಶ್ರೀ ರಂಗಣ್ಣನವರ ವೈಯಕ್ತಿಕ ವೃತ್ತಿಯ ಮತ್ತು ಸಾಹಿತ್ಯದ ಪರಿಚಯ ಮಾಡಿಕೊಡುವ ಐದು ಲೇಖನಗಳನ್ನು ಶ್ರೀಗಳಾದ ವಿ.ಎಲ್.ಡಿಸೌಜ, ಸಿ.ಡಿ.ಗೋವಿಂದರಾವ್, ಎಂ.ಎನ್.ಪಾರ್ಥಸಾರಥಿ, ಹೆಚ್.ಕೆ.ರಾಜಾರಾವ್ ಮತ್ತು ಎಸ್.ವಿ.ಪರಮೇಶ್ವರ ಭಟ್ಟರು ಬರೆದಿದ್ದಾರೆ. ಸಾಹಿತ್ಯ, ಕಲೆ, ಶಿಲ್ಪ, ರಾಜಕೀಯ, ರಾಜ್ಯಾಂಗ, ಭಾಷಾ ಸಮಸ್ಯೆ, ವಿಮರ್ಶೆ ಮುಂತಾದ ವಿವಿಧ ರೂಪದ ಲೇಖನಗಳನ್ನು ಶ್ರೀಗಳಾದ ಕುವೆಂಪು, ಶಂಕರನಾರಾಯಣರಾವ್, ಒ.ಕೆ.ನಂಬಿಯಾರ್, ಎಸ್.ಶ್ರೀಕಂಠ ಶಾಸ್ತ್ರಿ, ಎಂ.ಯಮುನಾಚಾರ್ಯ, ಸುಬ್ಬರಾಯಾಚಾರ್, ಎಂ.ಶೇಷಾದ್ರಿ, ಎಂ.ವಿ.ಕೃಷ್ಣರಾವ್, ಬಿ.ಕುಪ್ಪುಸ್ವಾಮಿ, ಡಿ.ಎಲ್.ನರಸಿಂಹಾಚಾರ್, ಕೆ.ಸುಬ್ಬರಾಯಪ್ಪ, ಎನ್.ಅನಂತರಂಗಾಚಾರ್, ಜಿ.ಹನುಮಂತರಾವ್, ಕ.ವೆಂ.ರಾಘವಾಚಾರ್, ತ.ಸು.ಶಾಮರಾವ್, ದೇ.ಜ.ಗೌ., ಕೆ.ವಿ.ಸುಬ್ಬಣ್ಣ, ಹಾ.ಮಾ.ನಾಯಕ, ಎಸ್.ರತ್ನಮ್ಮ, ಎನ್.ಎಸ್.ಸರಸ್ವತಿ, ಎಸ್.ಬಾಲಾಂಬ ಮೊದಲಾದವರು ಬರೆದಿದ್ದಾರೆ. ಸಾಹಿತ್ಯ ಪ್ರೇಮಿಗಳೂ, ಶ್ರೀ ರಂಗಣ್ಣನವರ ಅಭಿಮಾನಿಗಳೂ ಅಗತ್ಯವಾಗಿ ಸಂಗ್ರಹಿಸಿಡಬೇಕಾದ ಪುಸ್ತಕ ಇದು.