ವಿಷಯಕ್ಕೆ ಹೋಗು

ಬನಾರಸಿದಾಸ್ ಚತುರ್ವೇದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೀನಬಂಧು ಚಾರ್ಲ್ಸ್ ಫ಼್ರೀಯರ್ ಆಂಡ್ರ್ಯೂಸ್‍ರೊಂದಿಗೆ ಬನಾರಸಿದಾಸ್ ಚತುರ್ವೇದಿಯವರು, ಸೌಜನ್ಯ: ಡಾ. ನಿಖಿಲ್ ಚತುರ್ವೇದಿ (ಆಗ್ರಾ)

ಬನಾರಸಿದಾಸ್ ಚತುರ್ವೇದಿ (24 ಡಿಸೆಂಬರ್ 1892 - 2 ಮೇ 1985)[] ಆಧುನಿಕ ಹಿಂದೀ ಸಾಹಿತ್ಯದಲ್ಲಿನ ಗದ್ಯಶೈಲಿಯ ನಿರ್ಮಾಪಕರಲ್ಲೊಬ್ಬರು. ಅಂತೆಯೇ ಹಿಂದೀ ಪತ್ರಿಕೋದ್ಯಮದ ಭೀಷ್ಮರು. ಸಾಹಿತ್ಯಸೃಷ್ಟಿ ಹಾಗೂ ಸಮಾಜ ಸೇವೆ ಇವರ ಬದುಕಿನ ಎರಡು ಕಣ್ಣುಗಳು. ಆಚಾರ್ಯ ಚತುರ್ವೇದಿ ಅವರು ತಾವು ನಂಬಿದ ಮತ್ತು ಆಲೋಚಿಸಿದ ಕ್ರಿಯಾತ್ಮಕ ಆಲೋಚನೆಗಳಿಗೆ ಮೂರ್ತರೂಪವನ್ನಿತ್ತು ಕಾರ್ಯರೂಪಕ್ಕಿಳಿಸುವ ಅಪ್ರತಿಮ ಕ್ರಿಯಾಶೀಲರಾಗಿರುವಂತೆಯೇ ಆಗತಾನೆ ರೂಪುಗೊಳ್ಳುತ್ತಿದ್ದ ಪತ್ರಿಕೋದ್ಯಮ ಹಾಗೂ ಸಾಹಿತ್ಯದ ನಾನಾ ಪ್ರಕಾರಗಳಿಗೆ ನಿಶ್ಚಿತ ರೂಪವೊಂದನ್ನು ಕೊಟ್ಟ ಕರ್ತಾರರೂ ಆಗಿದ್ದರು.

ಸಮಾಜಸೇವೆಯ ಆದರ್ಶವನ್ನೇ ಮುಂದಿಟ್ಟುಕೊಂಡ ಇವರಿಗೆ ಜೀವನದಲ್ಲಿ ನಾನಾ ಎಡರುತೊಡರುಗಳು ಎದುರಾದುವಾದರೂ ನಂಬಿದ ಉದ್ದೇಶಕ್ಕಾಗಿ ಇದ್ದ ನೌಕರಿಯನ್ನೂ ಬಿಟ್ಟುಬಿಡುವಷ್ಟು ನಿಷ್ಠೆ, ನಂಬಿಕೆಗಳನ್ನಿವರು ತೋರಿದರು. ಈ ಉದ್ದೇಶಗಳಿಗೆ ಇಂಬು ಕೊಟ್ಟಂತೆ ಗಣೇಶ ಶಂಕರ ವಿದ್ಯಾರ್ಥಿ, ಶ್ರೀನಿವಾಸಶಾಸ್ತ್ರಿ, ಸಿ.ಎಫ್. ಆಂಡ್ರ್ಯೂಸ್ ಮುಂತಾದ ನಾನಾ ಶ್ರೇಷ್ಠರುಗಳೊಡನೆ ಸಂಪರ್ಕ ಇವರದಾಯಿತು. ಇದರ ಪರಿಣಾಮವೆಂದರೆ ನಾಡು ನುಡಿಗಳಿಗಾಗಿ ಜೀವ ತೆತ್ತವರ ಮೇಲೆ ಮಮತೆ ಹಾಗೂ ಅಭಿಮಾನ ಹೆಚ್ಚಿದವು.

ಹಾಗೆ ನೋಡಿದರೆ, ಚತುರ್ವೇದಿ ಗದ್ಯ ಸಾಹಿತ್ಯದ ನಾನಾಭಾಗಗಳಲ್ಲಿ ಉಲ್ಲೇಖನೀಯ ಕೆಲಸ ಮಾಡಿದ್ದರೂ ಪ್ರಮುಖವಾಗಿ ಪತ್ರಿಕೋದ್ಯಮಿಗಳೆಂದೇ ಚಿರಪರಿಚಿತರು. ವಿಶಾಲ ಭಾರತ ಹಾಗೂ ಮಧುಕರ ಇವರು ಸಂಪಾದಿಸಿದ ಮುಖ್ಯವಾದ ಎರಡು ಪತ್ರಿಕೆಗಳು. ಇವರು ಯಾವುದೇ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿರಲಿ, ಆ ಪತ್ರಿಕೆಯನ್ನು ಜನಪ್ರಿಯಗೊಳಿಸುವುದರಲ್ಲಿ ಪತ್ರಿಕೆಗಳ ಅವಶ್ಯಕತೆಯನ್ನು ಜನತೆಗೆ ಅರ್ಥೈಸುವುದರಲ್ಲಿ ಸಫಲರಾಗಿದ್ದರು.

ಹಿಂದಿ, ಸಂಸ್ಕೃತ ಹಾಗೂ ಭಾರತೀಯ ಸಾಹಿತ್ಯ ಅಧ್ಯಯನಕ್ಕಷ್ಟೇ ಇವರ ಪಾಂಡಿತ್ಯ ಸೀಮಿತವಾಗಿರದೆ ಪಾಶ್ಚಾತ್ಯ ಸಂಸ್ಕೃತಿಯ ಹಾಗೂ ಅಲ್ಲಿನ ಭಾಷೆಗಳ ಅಭ್ಯಾಸದತ್ತಲೂ ಹರಿದಿತ್ತು. ವಿಸ್ತೃತ ಅನುಭವ, ಅಪಾರ ವಿದ್ವತ್ತು, ತೀವ್ರ ಆಲೋಚನಾಶಕ್ತಿ-ಇವು ಸಂಗಮಿಸಿದ್ದ ಇವರ ಸಾಹಿತ್ಯ ಒಂದು ಜೇಂಗೊಡ. ಇವರ ಬರಹಗಳು ಕೃತ್ರಿಮ ಸೃಷ್ಟಿಯಾಗಿರದೆ ಚೇತನಶೀಲವಾಗಿರಲು ಮುಖ್ಯ ಕಾರಣವೆಂದರೆ ಅಲ್ಲಿರುವ ಆತ್ಮೀಯತೆ ಹಾಗೂ ಅನುಭೂತಿ. ಇವರು ರಚಿಸಿರುವ ವ್ಯಕ್ತಿಚಿತ್ರ, ಜೀವನಚರಿತ್ರೆ, ಪ್ರವಾಸ ಸಾಹಿತ್ಯ ಹೀಗೆ ಒಂದೊಂದರಲ್ಲೂ ಒಂದೊಂದು ವಿಶೇಷ ಅನುಭವವಿದೆ.

ಕೃತಿಗಳು

[ಬದಲಾಯಿಸಿ]

ರೇಖಾಚಿತ್ರ, ಸಾಹಿತ್ಯ ಔರ್ ಜೀವನ್, ಗಣೇಶ ಶಂಕರ್ ವಿದ್ಯಾರ್ಥಿ, ರಾಷ್ಟ್ರಭಾಷಾ, ಕವಿರತ್ನ ಸತ್ಯನಾರಾಯಣ್ ಕೀ ಜೀವನಿ, ಸಂಸ್ಮರಣ್-ಇವು ಇವರ ಕೆಲವು ಸಾಹಿತ್ಯಕ ಕೃತಿಗಳು.[]

ಚತುರ್ವೇದಿ ಅವರ ದಿನಚರಿ ಹಾಗೂ ಪತ್ರಗಳು ನಿಜಕ್ಕೂ ಆಧುನಿಕ ಹಿಂದೀ ಸಾಹಿತ್ಯದ ಅಮೂಲ್ಯ ಸಂಪತ್ತುಗಳಷ್ಟೇ ಅಲ್ಲ, ಆ ಪ್ರಕಾರದ ಸಾಹಿತ್ಯಕ್ಕೇ ಮಾದರಿಗಳೂ, ಅಮೂಲ್ಯ ಕಾಣಿಕೆಗಳೂ ಆಗಿವೆ. ಮುಂದೆ ಪ್ರಕಟಿಸುವ ಯಾವ ಅಭೀಷ್ಟೆಯೂ ಇಲ್ಲದಿರುವುದರಿಂದ ಇವರು ಬರೆದ ಪತ್ರಗಳಲ್ಲಿ ಅಂತರಂಗ ಸ್ಪಂದನವಿದೆ, ಮಾನವೀಯ ದೃಷ್ಟಿ ಇದೆ. ಚರ್ಚಿಸುವ, ಬರೆಯುವ ವಿಚಾರಗಳ ಬಗೆಗೆ ಇವರದೇ ಆದ ದೃಷ್ಟಿಕೋನವಿದೆ. ಇತ್ತೀಚೆಗೆ ಇವರ ಸಾಕಷ್ಟು ಪತ್ರಗಳನ್ನು ಡಾ. ಬನಾರಸಿದಾಸ್‌ಜೀ ಕೆ ಪತ್ರ್ ಎಂಬ ಹೆಸರಿನಿಂದ ಶ್ರೀ ವೃಂದಾವನ್‌ದಾಸ್ ಅವರು ಪ್ರಕಟಿಸಿ ಈ ಸಾಹಿತ್ಯ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ಚತುರ್ವೇದಿ ಅವರು ದಿನಚರಿ, ರಷ್ಯನ್ ಲೇಖಕರ ಸಂಘದ ಆಹ್ವಾನದ ಮೇರೆಗೆ ರಷ್ಯಾ ಪ್ರವಾಸ ಮುಗಿಸಿಬಂದು ಬರೆದಿರುವ ಪ್ರವಾಸ ಲೇಖನ-ಈ ಬಗೆಯ ಅಪೂರ್ವ ಸಾಹಿತ್ಯಗಳಾಗಿವೆ.

ಕಾರ್ಯಕ್ಷೇತ್ರ

[ಬದಲಾಯಿಸಿ]

ಚತುರ್ವೇದಿಯವರ ಕಾರ್ಯಕ್ಷೇತ್ರ ವಿಸ್ತಾರವಾದುದು. ರಾಜ್ಯಸಭೆ, ಸಂಸತ್, ಹಿಂದೀ ಪರಿಷತ್, ದಿಲ್ಲಿ ಹಿಂದೀ ಸಾಹಿತ್ಯ ಪರಿಷತ್, ಹಿಂದೀ ಪತ್ರಿಕೋದ್ಯಮಿಗಳ ಸಂಘ-ಇವುಗಳ ಸಕ್ರಿಯ ಕಾರ್ಯಕರ್ತರೂ, ಸದಸ್ಯರೂ ಆಗಿ, ಅಖಿಲ ಭಾರತ ಪತ್ರಿಕೋದ್ಯಮಿಗಳ ಸಂಘದ ಅಧ್ಯಕ್ಷರಾಗಿ ಇವರು ದುಡಿದಿದ್ದರು. ದೆಹಲಿಯಲ್ಲಿ ಹಿಂದೀ ಭವನದ ಸ್ಥಾಪನೆಯ ಕೀರ್ತಿ ಇವರಿಗೆ ಸಲ್ಲಬೇಕು. ೧೯೩೯ರಲ್ಲಿ ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಗೋರ್‌ರ ವಿಶ್ವ-ಭಾರತಿ ವಿದ್ಯಾನಿಲಯದ ಹಿಂದಿ ಭವನದ ಸ್ಥಾಪನೆ ಮತ್ತು ನಿರ್ಮಾಣಕ್ಕೆ ಸಕ್ರಿಯವಾಗಿ ಸಹಕಾರ ನೀಡಿದ್ದರು.[] ದೇಶದ ಹುತಾತ್ಮರ ನೆನಪನ್ನು ಸದಾ ಹಸಿರಾಗಿರಿಸಲು ಇವರು ಹುತಾತ್ಮರ ಗ್ರಂಥಮಾಲೆಯ ಮೂಲಕ ಸಲ್ಲಿಸಿರುವ ಸೇವೆ ಮಿಗಿಲಾದದ್ದು.

ಪದವಿ/ಗೌರವಗಳು

[ಬದಲಾಯಿಸಿ]

ಸಾಹಿತ್ಯವಾರಿಧಿ, ಸಾಹಿತ್ಯವಾಚಸ್ಪತಿ ಮುಂತಾದ ಬಿರುದುಗಳಿಂದಲೂ, ಡಿ.ಲಿಟ್. ಮುಂತಾದ ಗೌರವ ಪದವಿಗಳಿಂದಲೂ ನಾಡು ಇವರನ್ನು ಗೌರವಿಸಿದೆ. ಭಾರತ ಸರ್ಕಾರವು ೧೯೭೩ ರಲ್ಲಿ ಚತುರ್ವೇದಿಯವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿತು.[]

೨ ಮೇ ೧೯೮೫ ರಲ್ಲಿ ಚತುರ್ವೇದಿಯವರು ನಿಧನರಾದರು.[]

ಉಲ್ಲೇಖಗಳು

[ಬದಲಾಯಿಸಿ]
  1. "Pandit Banarsidas Chaturvedi" (in ಹಿಂದಿ). Rajkamal Prakshan Group. Archived from the original on 20 ಮೇ 2018. Retrieved 19 May 2018.
  2. "Pandit Banarsidas Chaturvedi Books epustakalay".
  3. "From Bharmacharyashrama to Visva-Bharati: A Chronicle of Metamorphosis of a Tiny School into an Internationally-Acclaimed Centre of Learning" (PDF). Chapter I, page 2. Visva Bharati. Retrieved 23 August 2019.
  4. "Padma Awards Directory (1954–2013)" (PDF). Ministry of Home Affairs. Archived from the original (PDF) on 15 October 2015.
  5. Datta, A. (1987). Encyclopaedia of Indian Literature: A-Devo. Sahitya Akademi. ISBN 9788126018031.


ಹೆಚ್ಚಿನ ಓದಿಗೆ

[ಬದಲಾಯಿಸಿ]