ಬದಲಾಗುತ್ತಿರುವ ಕನ್ನಡ ಭಾಷೆಯ ಸ್ವರೂಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತ್ರವಾಗದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿ ಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಈ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಈ ಸಂದರ್ಭದಲ್ಲಿ ಕನ್ನಡದ ಚಹರೆ ಮತ್ತು ಕನ್ನಡ ಭಾಷೆಯ ಚಲನಶೀಲತೆಯನ್ನು ಶೋದಿಸಲಿಕ್ಕೆ ಭಾಷಾ ಆಧುನೀಕರಣ ಮತ್ತು ಪ್ರಮಾಣೀಕರಣದ ಪ್ರಕ್ರಿಯೆಗಳ ನೆಲೆಯಲ್ಲಿ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ, ಭಾಷಾನೀತಿ, ಭಾಷಾ ಯೋಜನೆ ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆಗ ಅಧ್ಯಯನದ ಸ್ವರೂಪ ಹಾಗೂ ಬಳಕೆಯ ವಿಧಾನದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ಇಂತಹ ಸಂಗತಿಗಳಿಗೆಲ್ಲ ಎದುರಾಗದೇ ಸುಮ್ಮನಿರಲು ಸಾಧ್ಯವಿಲ್ಲ ಎಂಬ ಒತ್ತಡವಿದೆ. ಸಾಹಿತ್ಯ ಪ್ರಕಾರಗಳ ಒಳಗೆ ಇವನ್ನೆಲ್ಲ ತಕ್ಕ ರೂಪದಲ್ಲಿ ನಿರೂಪಿಸಲು ಆಗದು ಎಂಬ ಪರಿಸ್ಥಿತಿ ಇದೆ. ಇದರಿಂದಾಗಿಯೇ ಸಾಹಿತ್ಯದ ಸಾಂಪ್ರದಾಯಿಕ ರೂಪ, ಪ್ರಕಾರಗಳು ಈ ಬಗೆಯ ಸಂವೇದನೆಗಳನ್ನು ಸಮರ್ಥವಾಗಿ ಬಿಂಬಿಸಲಾರವು ಎಂಬ ಅಭಿಪ್ರಾಯ ಮೂಡುತ್ತಿರುವುದು. ಸಾಹಿತ್ಯ ಪ್ರಕಾರಗಳಿಗಿರುವ ಮಿತಿಯಿಂದಾಗಿಯು ಈ ಸಮಸ್ಯೆ ಕಾಣಿಸುತ್ತಿರಬಹುದು. ಪ್ರಕಾರಗಳ ಸಾಹಿತ್ಯಿಕ ಮಾನದಂಡಗಳು ತುಂಬ ಹಳೆಯ ಕಾಲದವು. ವರ್ತಮಾನದ ಸಮಾಜಗಳ ಅನುಭವ ಸಂಕೀರ್ಣತೆಯನ್ನು ಬಿಂಬಿಸಲು ಆ ಹಳೆಯ ಮಾನದಂಡಗಳು ಅಡ್ಡ ಬರುತ್ತವೆ. ಸಾಹಿತ್ಯ ಪ್ರಕಾರಗಳಿಗಿಂತಲೂ ಸಾಮಾಜಿಕ ಅನುಭವವೇ ಮುಖ್ಯ. ಹೀಗಾಗಿಯೇ ಕನ್ನಡ ಸಾಹಿತ್ಯದ ಸಮಕಾಲೀನ ನಿರೂಪಣೆಗಳಲ್ಲಿ ಪ್ರಕಾರಗಳ ಚೌಕಟ್ಟಿಗೆ ಮಹತ್ವವಿಲ್ಲವಾಗುತ್ತಿರುವುದು. ಒಂದೇ ಪ್ರಕಾರದಲ್ಲಿ ಉಳಿದೆಲ್ಲ ಪ್ರಕಾರಗಳ ಅಭಿವ್ಯಕ್ತಿಯ ಗುಣಗಳನ್ನು ಮೇಳೈಸಿಕೊಳ್ಳುತ್ತಿರುವುದನ್ನು ಗಮನಿಸಬಹುದು.

ಸಾಹಿತ್ಯ ಸಂವೇದನೆಯಲ್ಲೂ ಪ್ರತ್ಯೇಕತಾ ಭಾವನೆ ಬೆಳೆಯುತ್ತಿದೆ. ಇದು ದಲಿತ ಬಂಡಾಯ ಕಾಲದಲ್ಲೆ ಉಂಟಾದ ಸ್ವಭಾವ. ನಾವು ಬರೆದದ್ದು ನಮ್ಮದು. ಅವರು ಬರೆದದ್ದು ಅವರದು ಎಂಬ ಧೋರಣೆ ಈಗಲೂ ಬಲವಾಗಿದೆ. ಜಾತಿ ಶ್ರೇಣಿಗೆ ತಕ್ಕಂತೆಯೂ ಸಾಹಿತ್ಯ ಪರಿಸರ ಗುಪ್ತವಾಗಿದೆ. ದಲಿತರು ಬರೆದದ್ದೇ ಬೇರೆ, ಶೂದ್ರರು ಬರೆದದ್ದೇ ಬೇರೆ, ಮಹಿಳೆಯರದೇ ಮತ್ತೊಂದು, ವೈದಿಕರದೇ ಇನ್ನೊಂದು, ಅಲ್ಪಸಂಖ್ಯಾತ ಮುಸ್ಲಿಮರದೇ ಬೇರೊಂದು ಎಂಬ ಪ್ರತ್ಯೇಕತಾ ಭಾವನೆ ಸಾಹಿತ್ಯದಲ್ಲಿದೆ. ಓದುವುದರಲ್ಲೂ ಇಂತದೇ ಪ್ರತ್ಯೇಕ ಮನೋಧರ್ಮವಿದೆ. ಬಹುರೂಪಿ ಅನನ್ಯತೆ ಎಂದು ಗುರುತಿಸಿಕೊಳ್ಳುವುದು ಬೇರೆ. ಆದರೆ ಹೀಗೆ ಬಿಡಿಯಾದ ಅನ್ಯತೆಯ ನಿರೂಪಣೆಗಳು ಅಖಂಡ ಮಾನವತಯೆನ್ನು ನುಡಿಸಲಾರವು. ಒಂದು ನಾಡಿನ ಪ್ರತ್ಯೇಕತಾ ಭಾವನೆಗಳ ಹಾಗೆಯೇ ಸಾಹಿತ್ಯ ನಿರೂಪಣೆಯಲ್ಲೂ ಸಾಹಿತ್ಯ ಸೃಷ್ಟಿಯ ಪ್ರತ್ಯೇಕತಾ ಭಾವನೆಗಳನ್ನು ಗಮನಿಸಬಹುದು. ದಲಿತ ಬಂಡಾಯ ಸಾಹಿತ್ಯವನ್ನು ಹೀಗೆಯೇ ಕಾಣಲಾಯಿತು ಮತ್ತು ಅದರಂತೆಯೇ ಸೃಷ್ಟಿಸಲಾಯಿತು. ಇದರ ಪರಿಣಾಮ ಗ್ರಾಮ್ಯ ಮತ್ತು ನಗರ ಸಂವೇದನೆಗಳ ದಾಖಲೆಯಲ್ಲೂ ಕಂಡಿತು. ಜಾತಿಗಳ ಅನುಭವಗಳು ಆಳದಲ್ಲಿ ಇಂತಹ ಪ್ರತ್ಯೇಕತಾ ನಿರೂಪಣೆಗಳಿಗೂ ಕಾರಣವಾಗಿರುತ್ತವೆ. ಇಂತಹ ವಿಭಿನ್ನ ನಿರೂಪಣೆಗಳನ್ನು ವೈವಿಧ್ಯ ಎಂದು ಒಪ್ಪಬಹುದಾದರೂ ಗುಪ್ತವಾಗಿ ಅನ್ಯ ಸ್ವಭಾವ ಇರುವುದನ್ನು ನಿರಾಕರಿಸಲಾಗದು. ಇಂತಲ್ಲಿನ ಪ್ರತ್ಯೇಕತಾ ಭಾವನೆಯು ವಿಶಿಷ್ಠವಾಗಿರಬಹುದಾದರೂ ಸಾಹಿತ್ಯದ ಅಧ್ಯಯನ, ಓದಿನ ಅನುಸಂಧಾನಗಳಲ್ಲಿ ಬೇರೆಯೇ ಆಗಿ ಧ್ವನಿತವಾಗುತ್ತಿರುತ್ತದೆ. ಸಾಹಿತ್ಯ ವಿಮರ್ಶೆಯ ಮಾನದಂಡಗಳಲ್ಲಿ ಉಂಟಾಗುವ ಒಡಕಿನಲ್ಲಿ ಇದನ್ನು ಗಮನಿಸಬಹುದು. ತನ್ನ ಸಮುದಾಯದ ಅನುಭವಗಳು ದಾಖಲಾಗಿಲ್ಲ; ಅದನ್ನು ಸ್ಥಾಪಿಸಬೇಕು ಎಂಬ ಧೋರಣೆಯು ಸಾಹಿತ್ಯದ ನಿರೂಪಣೆಗಳಲ್ಲಿ ಆಗಾಗ ಕೇಳಿಬರುತ್ತಲೆ ಇರುತ್ತದೆ. ಪರೋಕ್ಷವಾಗಿ ಸಾಹಿತ್ಯದ ಅವಕಾಶದಲ್ಲಿ ಹಕ್ಕು ಚಲಾಯಿಸುವ ದಾರಿಗಳು ಕೂಡ ಇಂತಲ್ಲಿ ಸೃಷ್ಟಿಯಾಗುತ್ತವೆ. ಸ್ವತಃ ಸಾಹಿತ್ಯ ಅಕಾಡಮಿ ಹಾಗೂ ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಈ ಬಗೆಯ ’ನ್ಯಾಯದ ಅವಕಾಶ’ಗಳನ್ನು ಒದಗಿಸುವುದನ್ನು ಗಮನಿಸಬಹುದು. ಇಂತಹ ಬಗೆಗಳೆಲ್ಲವೂ ಮುಂದೆ ಕಟ್ಟ ಪರಿಣಾಮವನ್ನೆ ಮಾಡಬಲ್ಲವು. ಸಾಹಿತ್ಯದ ಮೂಲ ಆಶಯವು ಹೀಗಾಗಿಯೇ ರೂಪಾಂತರಗೊಂಡು ತನ್ನದಲ್ಲದೆ ಹೊಣೆಗಾರಿಕೆಯನ್ನೆಲ್ಲ ತಾನೆ ನಿರ್ವಹಿಸಲು ಮುಂದಾಗಿರುವುದು. ವರ್ತಮಾನದ ವಿಮರ್ಶಕರು ಇಂತಹ ಇಕ್ಕಟ್ಟಿಗೆ ಸಿಲುಕಿಯೇ ಭವಿಷ್ಯವನ್ನು ಪರಿಭಾವಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಆದರೆ ಈ ಕಾಲಕ್ಕೆ ಇವೆಲ್ಲ ಸಾಹಿತ್ಯಿಕ ಚಟುವಟಿಕೆಗಳು ನಾಡಿನ ದಕ್ಷಿಣ ಭಾಗಕ್ಕೆ ಮೀಸಲಾಗಿದ್ದರೆ ಉತ್ತರದ ಆಗಿನ ನಿಜಾಮ ಕರ್ನಾಟಕದಲ್ಲಿ ಕೆಲವು ಪ್ರಸಿದ್ಧ ಹರಿದಾಸರು ಆಗಿ ಹೋದರು. ಕರ್ನಾಟಕ ಹರಿದಾಸ ಪರಂಪರೆಯಲ್ಲಿ ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಜಗನ್ನಾಥದಾಸ ಮತ್ತು ಪ್ರಸನ್ನ ವೆಂಕಟದಾಸರು ಪ್ರಮುಖರು. ಇವರಲ್ಲಿ ಮೂವರು 18ನೆಯ ಶತಮಾನದಲ್ಲಿಯೇ ಬಾಳಿದವರು. ಪ್ರಸನ್ನ ವೆಂಕಟದಾಸರು, ವಿಜಯದಾಸರು, ಗೋಪಾಲದಾಸರು ಒಬ್ಬೊಬ್ಬರು ಮಹಾಮಹಿಮರು. ಇವರೆಲ್ಲರಲ್ಲಿ ಕವನ ಸ್ಪೂರ್ತಿಯು ಸಹಜವಾಗಿ ಹೊರಹೊಮ್ಮಿ ಸಾವಿರಾರು ಹಾಡುಗಳ ಸೃಷ್ಟಿಯಾಯಿತು. ಹಾಡು ಕೀರ್ತನೆಗಳಲ್ಲದೆ ಕಥನ ಕವನಗಳನ್ನು ರಚಿಸಿದವರಿದ್ದಾರೆ, ಬಯಲಾಟಗಳ ಪ್ರಸಂಗ ಪಠ್ಯಗಳನ್ನು ಕಟ್ಟಿದವರಿದ್ದಾರೆ. ಸಮಸ್ತ ದಾಸ ಪೀಳಿಗೆಯವರ ಅನೇಕ ಹಾಡುಗಳು ಈ ಮುನ್ನವೆ ಮುದ್ರಿತವಾಗಿ ಅವುಗಳ ಸಮೀಕ್ಷೆ ವಿಮರ್ಶೆಗಳು ನಡೆದು ಹೋಗಿದ್ದರೆ ಈ ಶತಮಾನವನ್ನು ಕತ್ತಲೆಯ ಕಾಲವೆಂದೂ ಯಾರೂ ಹೇಳುತ್ತಿರಲಿಲ್ಲ. ವಿಜಯದಾಸ, ಗೋಪಾಲದಾಸರ ಭಾವಪೂರ್ಣ ಸುಳಾದಿಗಳು ಮತ್ತು ಜಗನ್ನಾಥದಾಸರ ‘ಹರಿಕಥಾಮೃತಸಾರ’ ಇವುಗಳನ್ನು ಕನ್ನಡಕ್ಕೆ ನೀಡಿದ 18ನೆಯ ಶತಮಾನ ಅದೆಂತು ನಿಸ್ಸತ್ವವೆನಿಸಿತು? ಎಂಬ ಹಾವನೂರ ಅವರ ಮಾತುಗಳು ಕನ್ನಡವನ್ನು ಅಖಂಡವಾಗಿ ಕಾಣುವ ಮತ್ತು ಒಂದು ಭಾಗದ ಕೊಡುಗೆಯನ್ನು ಕತ್ತಲಲ್ಲಿಟ್ಟು ನೋಡುವ ತಿಳುವಳಿಕೆಗಳನ್ನು ಎಚ್ಚರಿಸಿದಂತಿದೆ

    ಒಟ್ಟಾರೆ ಹೊಸಗನ್ನಡ ಕಾವ್ಯ ಹಂತ ಹಂತದಲ್ಲೂ ಪಾಶ್ಚಾತ್ಯ ಪ್ರೇರಣೆಯಿಂದಲೇ ಹೊಸ ರೂಪಗಳನ್ನು ಆವಿಷ್ಕಾರಗೊಳಿಸಿಕೊಂಡಿತೆನ್ನುವುದನ್ನು ಬದಿಗಿಟ್ಟು ಕನ್ನಡದ ಸಂದರ್ಭದಲ್ಲಿ  ಮೂಡಿದ , ಹಲವು ನೆಲೆಗಳಲ್ಲಿ ನಡೆದ ಪ್ರಯೋಗಗಳು ಮುಖ್ಯವಾಗಬೇಕಿದೆ. ಸ್ಥಳೀಯ ಕಾವ್ಯ ಸಂವಹನ ಉಂಟುಮಾಡಿದ ಜಾಗೃತಿಯ ಕಾರಣವಾಗಿ ಇಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಒಳಗಡೆ ನಡೆದ ಹೊಸ ಸಂಸ್ಕøತಿಯ ಬೇರಿನಾಳಕ್ಕೆ ಇಳಿದ ದೇಸೀ ಸಂಸ್ಕøತಿಯ ಜೀವರಸ ಒಟ್ಟು ಚೇತನಕ್ಕೆ ಕಾರಣವಾಯಿತು. ಹಾಗಾಗಿ ಹೊಸತನದ ವೈಭವೀಕರಣದಲ್ಲಿ ಮರೆಯಲ್ಲಿ ಉಳಿದ ಸ್ಥಳೀಯ ಕಾವ್ಯ ಪ್ರಕಾರಗಳನ್ನು ನಿರ್ಲಕ್ಷಿಸದೆ ಪ್ರಧಾನ ಆಕರವಾಗಿ ಕಾಣುವ ಮತ್ತು ದಾಖಲಿಸುವ ಕೆಲಸ ತುರ್ತು ನಡೆಯಬೇಕಾಗಿದೆ.