ವಿಷಯಕ್ಕೆ ಹೋಗು

ಫ್ರಾನ್ಸ್‌ನ ಚಾರ್ಲ್ಸ್ VII

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೀನ್ ಫ಼ೂಕೆ ಬಿಡಿಸಿದ ಚಾರ್ಲ್ಸ್‌ನ ಭಾವಚಿತ್ರ, ಸು.೧೪೪೫-೧೪೫೦

ಚಾರ್ಲ್ಸ್ VII 1422-61ರಲ್ಲಿ ಫ್ರಾನ್ಸ್‌ನ ದೊರೆಯಾಗಿದ್ದನು. ಚಾರ್ಲ್ಸ್ ದ ವಿಕ್ಟೋರಿಯಸ್ ಎಂದು ಇವನ ಹೆಸರು.[೧] ಇವನು ಆರನೆಯ ಚಾರ್ಲ್ಸನ ಐದನೆಯ ಮಗ. 1403ರಲ್ಲಿ ಇವನ ಜನನವಾಯಿತು.[೨] ಇವನು 1416ರಲ್ಲಿ ರಾಜ್ಯದ ಉತ್ತರಾಧಿಕಾರಿಯಾಗಿಯೂ, 1418ರಲ್ಲಿ ರಾಜ್ಯರಕ್ಷಕನಾಗಿಯೂ (regent) ಆಯ್ಕೆಯಾದ.[೩] 1420ರ ಟ್ರೂವ ಒಪ್ಪಂದದಿಂದ ಅವನು ಪಟ್ಟದ ಹಕ್ಕನ್ನು ಕಳೆದುಕೊಂಡ. ತಂದೆಯ ಮರಣಾನಂತರ ಲ್ವಾರ್ ನದಿಯ ದಕ್ಷಿಣಕ್ಕಿರುವ ಪ್ರಾಂತ್ಯಗಳನ್ನಾಳುತ್ತಿದ್ದ ಈತ ಬೂರ್ಜ್ ನಗರದ ದೊರೆಯೆಂದೇ ಹೆಸರು ಹೊಂದಿದ್ದ. ತನ್ನ ಅನುಯಾಯಿಗಳ ನಡುವಣ ಕಲಹಗಳಿಂದಾಗಿ ಈತ ಬ್ರಿಟಿಷರ ವಿರುದ್ಧ ಹೋರಾಡಲಾಗಲಿಲ್ಲ. ಪ್ಯಾರಿಸಿನಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಪ್ರತಿನಿಧಿ ಬೆಡ್‌ಫರ್ಡ್ ಡ್ಯೂಕ್ ಉತ್ತರ ಫ್ರಾನ್ಸಿನಲ್ಲಿ ಆಡಳಿತವನ್ನು ಭದ್ರಗೊಳಿಸಿ ಆರ್ಲಿಯನ್ಸನ್ನು ಗೆಲ್ಲಲು ಮುಂದೆ ಸಾಗಿದಾಗ ಜೋನ್ (ಆಫ್ ಆರ್ಕ್) ಎಂಬ ದೇಶಭಕ್ತೆ ನಗರವನ್ನು ರಕ್ಷಿಸಿದಳು (1429). ಮುಂದೆ ಅದೇ ವರ್ಷ ರೀಮ್ಸ್ ಪಟ್ಟಣದಲ್ಲಿ ಚಾರ್ಲ್ಸ್‌ಗೆ ಕಿರೀಟಧಾರಣೆಯಾಯಿತು. 1435ರಲ್ಲಿ ಬೆಡ್‌ಫರ್ಡ್ ಡ್ಯೂಕ್ ತೀರಿಕೊಂಡ. ಅದೇ ವರ್ಷ ಚಾರ್ಲ್ಸನೊಂದಿಗೆ ಬರ್ಗಂಡಿಯ ಡ್ಯೂಕ್ ಒಪ್ಪಂದ ಮಾಡಿಕೊಂಡ.[೪] 1436ರಲ್ಲಿ ಪ್ಯಾರಿಸ್ ಚಾರ್ಲ್ಸನ ವಶವಾಯಿತು. ಅರ್ಥವ್ಯವಸ್ಥೆಯ ಮೇಲೆ ಹಿಡಿತ ತರಲು ಯತ್ನಗಳಾದುವು. ಆದರೆ ಮತ್ತೆ ರಾಜ್ಯದಲ್ಲಿ ಬಂಡಾಯ ಕಾಣಿಸಿಕೊಂಡಿತು. ರಾಜವಂಶದವರೂ, ರಾಜಪುತ್ರ ಲೂಯಿಯೂ ಬಂಡಾಯದ ನಾಯಕರಾಗಿದ್ದರು (1440). ಆದರೆ ಚಾರ್ಲ್ಸ್ ಬಂಡಾಯವನ್ನು ಹತ್ತಿಕ್ಕಿ ಕೆಲವು ನಾಯಕರನ್ನು ದಾನನೀತಿಯಿಂದ ಗೆದ್ದುಕೊಂಡ. 1444ರಲ್ಲಿ ಇಂಗ್ಲೆಂಡಿನೊಂದಿಗೆ ಒಪ್ಪಂದವಾಯಿತು. ಮುಂದೆ ಇಂಗ್ಲಿಷರನ್ನು ಫ್ರಾನ್ಸಿನಿಂದ ಅಟ್ಟಿದ. ಕ್ಯಾಲೆ ಪಟ್ಟಣವೊಂದೇ ಅದರ ವಶದಲ್ಲಿ ಉಳಿದಿತ್ತು.[೪] 1446ರಲ್ಲಿ ರಾಜಕುಮಾರ ಲೂಯಿ ಮತ್ತೆ ಬಂಡೆದ್ದು ಡಾಫಿನಾದಲ್ಲಿ ಸ್ವತಂತ್ರ ರಾಜನಂತೆ ಇರತೊಡಗಿದ. ತನ್ನ ತಂದೆಯ ಸಾವಿನ ತನಕ ನಾನಾ ರೀತಿಯಲ್ಲಿ ಚಾರ್ಲ್ಸನಿಗೆ ಲೂಯಿ ತೊಂದರೆ ಕೊಡುತ್ತಲೇ ಇದ್ದ. ನೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸಿ ಬ್ರಿಟಿಷರನ್ನು ಫ್ರಾನ್ಸಿನಿಂದ ಅಟ್ಟಿದ್ದು ಚಾರ್ಲ್ಸನ ಹಿರಿಯ ಸಾಧನೆ.

ಉಲ್ಲೇಖಗಳು

[ಬದಲಾಯಿಸಿ]
  1. ↑ Wagner 2006, p. 89.
  2. ↑ Wylie 1914, p. 441.
  3. ↑ Sumption 2015, p. 615.
  4. 1 2 Brady, Oberman & Tracy 1994, p. 373.

ಗ್ರಂಥಸೂಚಿ

[ಬದಲಾಯಿಸಿ]
  • Wagner, J. (2006). Encyclopedia of the Hundred Years War. Westport, CN: Greenwood Press. ISBN 978-0-3133-2736-0.
  • Wylie, James Hamilton (1914). The Reign of Henry the Fifth: 1413–1415. Cambridge University Press.
  • Sumption, Jonathan (2015). The Hundred Years War, Volume IV: Cursed Kings. London: Faber & Faber. ISBN 9780571274543.
  • Brady, Thomas A.; Oberman, Heiko A.; Tracy, James D., eds. (1994). Handbook of European History 1400–1600: Late Middle Ages, Renaissance, and Reformation. Vol. 1. Leiden: E. J. Brill. ISBN 90-04-09760-0.