ಫ್ರಾನ್ಸಿಸ್ ಜೆಫ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಂಡನ್ ನ ರಾಷ್ಟ್ರೀಯ ಗ್ಯಾಲರಿಯಲ್ಲಿರುವ ಮೂರ್ತಿ

ಫ್ರಾನ್ಸಿಸ್ ಜೆಫ್ರಿ (1773-1850) ಸ್ಕಾಟ್‍ಲೆಂಡಿನ ಖ್ಯಾತ ನ್ಯಾಯಾಧೀಶ. ಸಾಹಿತ್ಯ ವಿಮರ್ಶಕ. ಎಡಿನ್‍ಬರೋ ರಿವ್ಯೂ ಎಂಬ ಪ್ರಸಿದ್ಧ ಪತ್ರಿಕೆಯ ಸಂಪಾದಕ.

ಬದುಕು ಮತ್ತು ಸಾಧನೆ[ಬದಲಾಯಿಸಿ]

ಎಡಿನ್‍ಬರೋನಲ್ಲಿ ಹುಟ್ಟಿದ ಈತ ಲಾ ಇಲಾಖೆಯ ನೌಕರನೊಬ್ಬನ ಮಗ. ಆಕ್ಸ್‍ಫರ್ಡ್‍ನ ಕ್ವೀನ್ಸ್ ಕಾಲೇಜು. ಗ್ಲಾಸ್ಗೊ ಮತ್ತು ಎಡಿನ್‍ಬರೋ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ 1794ರಲ್ಲಿ ವಕೀಲಿ ವೃತ್ತಿಯನ್ನಾರಂಭಿಸಿದ. ಈತ ಟೋರಿ ಪಕ್ಷಕ್ಕೆ ಸೇರಿದವರ ನಡುವೆ ಬೆಳೆದರೂ ಹ್ವಿಗ್ ಪಕ್ಷದ ಧ್ಯೇಯಗಳಿಗೆ ಮನಸೋತ.

ಸಿಡ್ನಿ ಸ್ಮಿತ್ ಎಂಬ ಮಿತ್ರನ ಸಲಹೆಯ ಮೇರೆಗೆ ಎಡಿನ್‍ಬರೋ ರಿವ್ಯೂ ಪತ್ರಿಕೆಯನ್ನು ಆರಂಭಿಸಿದ (1802). ಮೊದಲ ವರ್ಷ ಸ್ಮಿತ್ ಅದರ ಸಂಪಾದಕನಾಗಿದ್ದ. ಅನಂತರ ಜೆಫ್ರಿಯೇ ಸಂಪಾದಕತ್ವವನ್ನು ವಹಿಸಿಕೊಂಡ. ಪ್ರಸಿದ್ಧ ವಕೀಲನೆನಿಸಿದ ಈತ 1820ರಲ್ಲಿ ಗ್ಲಾಸ್ಗೊ ವಿಶ್ವವಿದ್ಯಾಲಯದ ಲಾರ್ಡ್ ರೆಕ್ಟಾರ್ ಆಗಿ ಚುನಾಯಿತನಾದ. 1829ರಲ್ಲಿ ಅಡ್ವೋಕೇಟ್ಸ್ ಫ್ಯಾಕಲ್ಟಿಯ ಡೀನ್ ಆದ. 1830ರಲ್ಲಿ ಹ್ವಿಗ್ ಪಕ್ಷ ರಾಜ್ಯದ ಆಡಳಿತ ಸೂತ್ರಗಳನ್ನು ವಹಿಸಿಕೊಂಡಾಗ ಸರ್ಕಾರ ಈತನನ್ನು ಮುಖ್ಯ ನ್ಯಾಯವಾದಿಯನ್ನಾಗಿ ನೇಮಿಸಿತು.

ಪಾರ್ಲಿಮೆಂಟ್ ಸದಸ್ಯನಾಗಿ 1831ರಲ್ಲಿ ಸ್ಕಾಟ್ ಸುಧಾರಣಾ ಮಸೂದೆಯನ್ನು ತಂದ. 1834ರಲ್ಲಿ ರಾಷ್ಟ್ರದ ಮುಖ್ಯ ನ್ಯಾಯಾಧೀಶನಾದ. ಮುಂದೆ ಲಾರ್ಡ್ ಪದವಿಯನ್ನೂ ಪಡೆದ.

ಬ್ರೌಹ್ಯಾಮ್, ಸಿಡ್ನಿ ಸ್ಮಿತ್, ಎಫ್, ಹಾರ್ನರ್ ಮುಂತಾದ ಪ್ರತಿಭಾಶಾಲಿ ತರುಣಮಿತ್ರರ ಬೆಂಬಲದಿಂದ, ಎಡಿನ್‍ಬರೋ ರಿವ್ಯೂ ಆರಂಭದಲ್ಲೇ ಜನಪ್ರಿಯವಾಯಿತು. ರಾಜಕೀಯ ವಿಚಾರಗಳೇ ಅಲ್ಲದೆ ಕಾವ್ಯಪರಿಚಯ, ಸಾಹಿತ್ಯ ವಿಮರ್ಶೆ, ಜೀವನಚಿತ್ರ, ನೀತಿಸಂಹಿತೆ ಮುಂತಾದ ವೈವಿಧ್ಯಪೂರ್ಣ ಲೇಖನಗಳಿಂದ ಕಂಗೊಳಿಸಿತು. ಪತ್ರಿಕೆಯ ಧ್ಯೇಯ, ಧೋರಣೆ, ಸಮರ್ಥ ಸಂಪಾದಕೀಯ, ಆಕರ್ಷಕ ಶೈಲಿಯ ಲೇಖನಗಳು ಓದುಗರಲ್ಲಿ ಜಾಗೃತಿಯನ್ನುಂಟು ಮಾಡಿದವು. ಜೆಫ್ರಿಯ ಒಂದು ಲೇಖನದ ಮೋಡಿಗೆ ಸಿಲುಕಿದ ಮೇಧಾವಿ-ಲಾರ್ಡ್ ಮೆಕಾಲೆ-ಕಂಠಪಾಠವಾಗುವಷ್ಟು ಸಲ ತಾನು ಅದನ್ನು ಓದಿದುದಾಗಿ ಒಂದೆಡೆ ಹೇಳಿಕೊಂಡಿದ್ದಾನೆ. ಓದುಗರ ವಿಚಾರಶಕ್ತಿಯನ್ನು ಪ್ರಚೋದಿಸಿ, ಉತ್ತಮವಾದ ಅಭಿರುಚಿ ಬೆಳೆಯುವಂತೆ ಮಾಡಿದುದು ಜೆಫ್ರಿಯ ದೊಡ್ಡ ಸಾಧನೆ. ಸ್ವತಂತ್ರ ಮತ್ತು ನಿರ್ಭೀತವಾದ ವಿಮರ್ಶೆಯ ಬೆಳೆವಣಿಗೆಗೆ ಈತ ಕಾರಣನಾದ.

1829ರ ಜೂನ್‍ವರೆಗೊ ಸುಮಾರು 26 ವರ್ಷಗಳ ಕಾಲ ಜೆಫ್ರಿ ಎಡಿನ್‍ಬರೊ ರಿವ್ಯೂ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿದ್ದ. ಆ ಪತ್ರಿಕೆಯಲ್ಲಿ ಹೊರಬಿದ್ದ ವಿಮರ್ಶೆಗಳು ಯಾವಾಗಲೂ ಕಾರವಾಗಿಯೂ ಪ್ರಭಾವಶಾಲಿಯಾಗಿಯೂ ಇರುತ್ತಿದ್ದವು. ಆದರೂ ಈತನ ದೃಷ್ಟಿ ಸ್ವಲ್ಪಮಟ್ಟಿಗೆ ಸಂಕುಚಿತವಾದದ್ದೆ. ಇದರಿಂದಾಗಿ ರಾಜಕೀಯದಲ್ಲಿ ಆಗಲಿ ಬೌದ್ಧಿಕ ಹಾಗೂ ನೈತಿಕ ವಿಷಯಗಳಲ್ಲೇ ಆಗಲಿ ಅಡಗಿದ್ದ ಶಕ್ತಿಗಳನ್ನು ಕಂಡು ಸರಿಯಾಗಿ ಅವುಗಳ ಮೌಲ್ಯಮಾಪನ ಮಾಡಲು ಈತ ಅಸಮರ್ಥನಾದ. ಇದಕ್ಕೆ ಇವನ ಕೆಲವು ವಿಮರ್ಶೆಗಳು ನಿದರ್ಶನವಾಗಿವೆ. ಷೆಲ್ಲೀ ಕವಿಯ ಭಾವತೀವ್ರತೆಯನ್ನೂ ಕೀಟ್ಸ್ ಕವಿಯ ಲಲಿತ ಕಲ್ಪನೆಯನ್ನೂ ಈತ ಅತಿರೇಕಗಳೆಂದು ಭಾವಿಸಿ ಅನುದಾರವಾಗಿ ವಿಮರ್ಶಿಸಿದ. ಈತನ ಕಟುವಿಮರ್ಶೆಗಳಿಂದ ಕೀಟ್ಸ್ ಕವಿ ತೀವ್ರವಾದ ವೇದನೆಗೊಳಗಾದ. ಷೆಲ್ಲೀ ಕ್ಷಯರೋಗಕ್ಕೆ ತುತ್ತಾಗಿ ಅಕಾಲಮೃತ್ಯುವನ್ನಪ್ಪಿದ. ಕೀಟ್ಸ್ ಕವಿಯನ್ನು ಕುರಿತು ಬರೆದ ಅಡಾನೇಸ್ ಎಂಬ ತನ್ನ ಸುವಿಖ್ಯಾತ ಶೋಕಗೀತೆಯಲ್ಲಿ ಷೆಲ್ಲೀ ಆ ಕವಿಯ ಅಕಾಲಮರಣಕ್ಕೆ ಜೆಫ್ರಿಯ ಕಟುವಿಮರ್ಶೆಗಳೇ ಕಾರಣವೆಂದು ಉತ್ಪ್ರೇಕ್ಷಿಸಿದ್ದಾನೆ.

ಜೆಫ್ರಿ ರೊಮ್ಯಾಂಟಿಕ್ ಕಾವ್ಯ ಪದ್ಧತಿಯ ಪರಮ ವಿರೋಧಿ. ರಾಜಕೀಯದಲ್ಲಿ ಹ್ವಿಗ್ ನೀತಿಯ ಪ್ರಬಲ ಪ್ರತಿಪಾದಕ. ಹೀಗಾಗಿ ಈತನ ಪತ್ರಿಕೆ ಏಕಪಕ್ಷೀಯವಾಗಿ ವರ್ತಿಸಿ ಉತ್ತಮವಾದ ವಿರೋಧಾಭಿಪ್ರಾಯಗಳಿಗೆ ಕರುಡಾಯಿತು. ಇದೊಂದು ದೋಷವನ್ನು ಬಿಟ್ಟರೆ ಜೆಫ್ರಿ ಆ ಕಾಲದ ಬಹು ದೊಡ್ಡ ಸಾಹಿತ್ಯ ವಿಮರ್ಶಕನೆನ್ನಬಹುದು. ತಾನೇ ಆಯ್ದು ಸಂಕಲಿಸಿದ ತನ್ನ ಲೇಖನಗಳನ್ನು ಜೆಫ್ರಿ 1844ರಲ್ಲಿ ಪುಸ್ತಕ ರೂಪವಾಗಿ ಪ್ರಕಟಿಸಿದ. ಈತನ ಹಲವಾರು ಪ್ರಬಂಧಗಳು (ಅದರಲ್ಲೂ ಎಸ್ಸೆ ಆಫ್ ಬ್ಯೂಟಿ ಎಂಬ ಪ್ರಬಂಧ) ಹಲವಾರು ಬಾರಿ ಪುನರ್ಮುದ್ರಿತವಾಗಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: