ವಿಷಯಕ್ಕೆ ಹೋಗು

ಫ್ರಾಂಜ಼್ ಗ್ರಿಲ್ಪಾರ್ಟ್ಸರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಫ್ರಾಂಜ಼್ ಗ್ರಿಲ್‍ಪಾರ್ಟ್ಸರ್ ಇಂದ ಪುನರ್ನಿರ್ದೇಶಿತ)
ಮಾರಿಟ್‍ಜ಼್ ಮೈಕಲ್ ಡ್ಯಾಫ಼ಿಂಗರ್ ಬಿಡಿಸಿದ ಗ್ರಿಲ್‍ಪಾರ್ಟ್ಸರ್‌ನ ಭಾವಚಿತ್ರ, ೧೮೨೭

ಫ್ರಾಂಜ಼್ ಗ್ರಿಲ್‍ಪಾರ್ಟ್ಸರ್ (1791 - 1872) ಆಸ್ಟ್ರಿಯದ ಒಬ್ಬ ಶ್ರೇಷ್ಠ ನಾಟಕಕಾರ, ಕವಿ, ವಿಮರ್ಶಕ. ಹತ್ತೊಂಬತ್ತನೆಯ ಶತಮಾನದ ಜರ್ಮನ್ ಸಾಹಿತ್ಯದಲ್ಲಿ ಈತನದು ಉನ್ನತಸ್ಥಾನ.

ಶ್ರೇಷ್ಠ ನ್ಯಾಯವಾದಿಯಾಗಿದ್ದ ಈತನ ತಂದೆ ಎರಡನೆಯ ಜೋಸೆಫ್ ದೊರೆಯ ಆಳ್ವಿಕೆಯ ಕಾಲದ ಲಿಬರಲ್ ತತ್ತ್ವಗಳಲ್ಲಿ ಅಪಾರ ನಂಬಿಕೆಯುಳ್ಳವನಾಗಿದ್ದರೂ ಅವನು ಕಠಿಣ ಸಂಪ್ರದಾಯವಾದಿ. ಈತನ ತಾಯಿ ಸಾನ್‍ಲೀತ್‍ನರ್ಸ್ ಎಂಬ ಪ್ರಸಿದ್ಧ ಸಂಗೀತಗಾರರ ಕುಟುಂಬಕ್ಕೆ ಸೇರಿದ ಪ್ರತಿಭಾವಂತ ಹೆಣ್ಣು ಮಗಳು. ತಂದೆಯ ಅನಾನುಕೂಲ ಪರಿಸ್ಥಿತಿಯಿಂದಾಗಿ ಈತನಿಗೆ ಸರಿಯಾದ ಶಿಕ್ಷಣ ದೊರೆಯದಾಯಿತು. 1807 ರಲ್ಲಿ ವಿಯೆನ್ನ ವಿಶ್ವವಿದ್ಯಾಲಯ ಸೇರಿ ನ್ಯಾಯಶಾಸ್ತ್ರವನ್ನು ಅಭ್ಯಸಿಸಿದ. ತಂದೆಯ ಅಕಾಲ ಮರಣದಿಂದಾಗಿ ಸಂಸಾರದ ಸ್ಥಿತಿ ಹದಗೆಟ್ಟಾಗ ಆಸ್ಟ್ರಿಯ ಸರ್ಕಾರದ ಹಣಕಾಸಿನ ಖಾತೆಯಲ್ಲಿ ಕೆಳದರ್ಜೆಯ ಕಾರಕೂನನಾಗಿ ಸೇರಿದ. ಹಲವು ವರ್ಷಗಳ ನಿರಂತರ ದುಡಿಮೆಯಿಂದ ಆಸ್ಟ್ರಿಯ ಸರ್ಕಾರದ ಸಾರ್ವಜನಿಕ ಪತ್ರಾಗಾರದ ಮುಖ್ಯಾಧಿಕಾರಿಯ ಪದವಿಗೇರಿ 1856 ರಲ್ಲಿ ವಿಶ್ರಾಂತಿ ಪಡೆದ.

ಬರೆದ ಕೃತಿಗಳು

[ಬದಲಾಯಿಸಿ]

1817 ರಲ್ಲಿ ಈತನ ಡೀ ಆನ್‌ಫ್ರೌ (Die Ahnfrau) ಎಂಬ ಗಂಭೀರ ನಾಟಕ ಪ್ರಥಮವಾಗಿ ಪ್ರದರ್ಶಿತವಾದ ಮೇಲೆ ಈತನಿಗೆ ವಿಶೇಷ ಮನ್ನಣೆ ದೊರೆಯಿತು.[] ಅದಕ್ಕೆ ಮುಂಚೆ ಈತ ಸರಳ ರಗಳೆಯಲ್ಲಿ ಬ್ಲಾಂಕ ಫಾನ್ ಕಾಸ್ಟಿಲಿಯನ್ (Blanca von Castilien) (1807-9) ಎಂಬ ನಾಟಕವನ್ನೂ (ಷಿಲ್ಲರ್ ಕವಿಯ ಡಾನ್ ಕಾರ್ಲೋಸ್ ನಾಟಕದ ರೂಪಾಂತರ), ಸ್ಪಾರ್ಟಕಸ್ ಮತ್ತು ಆಲ್‌ಫ್ರೆಡ್ ದ ಗ್ರೇಟ್ (1809) ಎಂಬ ಕೃತಿಗಳನ್ನೂ ರಚಿಸಿದ್ದ.[] ಡೀ ಆನ್‌ಫ್ರೌ ಆ ಕಾಲದಲ್ಲಿ ಬಹು ಜನಪ್ರಿಯನಾಗಿದ್ದ ವಿಧಿಯ ಪ್ರಭಾವವೇ ಪ್ರಧಾನವಾಗಿರುವ ಫೇಟ್-ಟ್ರ್ಯಾಜಡಿ ಎಂಬ ಪ್ರಕಾರಕ್ಕೆ ಸೇರಿದ್ದರೂ ಒಂದು ಮಹತ್ತ್ವದ ಕೃತಿಯಾಗಿದೆ. ಇದರಲ್ಲಿ ಸ್ಪೇನಿನ ನಾಟಕಗಳ ಪ್ರಭಾವವಿದ್ದರೂ ನವುರಾದ ಕಾವ್ಯ ಗುಣಗಳಿವೆ. ವಸ್ತು ಹಾಗೂ ಪಾತ್ರ ವಿನ್ಯಾಸದಲ್ಲಿ ಸೂಕ್ಷ್ಮ ಮನೋವಿಶ್ಲೇಷಣೆಯಿದೆ. ಉಳಿದ, ಆ ಕಾಲದ ಫೇಟ್-ಟ್ರ್ಯಾಜಿಡಿಗಳಿದ್ದಂತೆ ಎಲ್ಲೂ ಕೇವಲ ಕೋಲಾಹಲವನ್ನುಂಟುಮಾಡಿ ಮುಖಕ್ಕೆ ರಾಚುವಂಥ ಅತಿರೇಕದ ಅಂಶಗಳಿಲ್ಲ. ರಂಗಭೂಮಿಯ ಮೇಲೆ ಕೇವಲ ರೋಮಾಂಚಕ ಪರಿಣಾಮ ಸಾಧಿಸುವುದು ನಾಟಕಕಾರನ ಗುರಿಯಲ್ಲವೆಂದು ಈ ನಾಟಕ ತೋರಿಸುತ್ತದೆ. ಇದಾದ ಮೇಲೆ ಗ್ರಿಲ್‍ಪಾರ್ಟ್ಸರ್, ಮಹಾಕವಿ ಗಯಟೆಯ ಅಭಿಜಾತ ಕೃತಿ ಟ್ಯಾಸೊ ನಾಟಕದ ಆಧಾರದ ಮೇಲೆ ಸ್ಯಾಫೋ (1818) ಎಂಬ ಕೃತಿ ರಚಿಸಿದ. ಈತನಿಗೆ ಸಾರ್ವಕಾಲಿಕವಾದ ಲೋಕವಿಖ್ಯಾತಿ ಗಳಿಸಿಕೊಟ್ಟ ನಾಟಕಗಳೆಂದರೆ ಡಾಸ್ ಗೋಲ್ಡನ್ ಫ್ಲೀಸ್ (1822). ಗ್ರೀಕ್ ಪುರಾಣದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಜೇಸನ್ ಹಾಗೂ ಮೀಡಿಯ ಕಥೆಯೇ ಈ ನಾಟಕಗಳ ವಸ್ತು. ನಾಟಕಚಕ್ರದ ಮೊದಲ ಭಾಗವನ್ನು ನೋಡುವಾಗ ಅದರಲ್ಲಿ ಗಂಭೀರ ನಾಟಕದ ಒತ್ತಡ, ಸಾಂದ್ರತೆಗಳಿಗಿಂತ ಹೆಚ್ಚಾಗಿ ಭಾವಗೀತೆಯ ನಿರರ್ಗಳ ಲಹರಿಯೇ ಪ್ರಧಾನವಾಗಿದೆ ಅನಿಸುತ್ತದೆ. ಈ ನಾಟಕಚಕ್ರದ ಎಲ್ಲ ನಾಟಕಗಳನ್ನೂ ಕವಿ ಒಮ್ಮೆಲೇ ರಚಿಸಲಿಲ್ಲ. ಹಲವು ವರ್ಷಗಳ ಅವಧಿಯಲ್ಲಿ ಆಗಾಗ ಬರೆದ ನಾಟಕಗಳಿರುವುದರಿಂದ ಇವುಗಳ ಕಥಾವಸ್ತುವಿನ ಒಪ್ಪಂದದಲ್ಲಿ ಸಮಗ್ರತೆ ಕಾಣಿಸುವುದಿಲ್ಲ. ನಾಟಕಚಕ್ರದ ಮೂರು ನಾಟಕಗಳೂ ಸ್ವಸಂಪೂರ್ಣ ಕೃತಿಗಳಂತಿವೆ. ಡರ್ ಗಾಸ್ಟ್‌ಫ್ರಾಯಿಂಡ್ (Der Gastfreund) ಎನ್ನುವುದು ನಾಟಕಚಕ್ರದ ಪೀಠಿಕೆಯಂತಿದೆ. ಚಿನ್ನದ ತುಪ್ಪಟವನ್ನು ತೆಗೆದುಕೊಂಡು ಪ್ರಿಕ್ಸಿಸ್ ವೀರ ಕಾಲ್ಷಿಸ್‌ಗೆ ಬರುವುದು, ಅಲ್ಲಿ ಮೀಡಿಯಳ ತಂದೆಯಿಂದ ಹತನಾಗುವುದು ಈ ನಾಟಕದ ವಸ್ತು. ಡೀ ಆರ್ಗೊನಾಟ್ಸ್ (Die Argonauten) ಎಂಬ ಎರಡನೆಯ ನಾಟಕದಲ್ಲಿ ಚಿನ್ನದ ತುಪ್ಪಟವನ್ನರಸಿ ಬರುವ ಗ್ರೀಕ್ ವೀರ ಜೇಸನ್ ಹಾಗೂ ಮೀಡಿಯರ ದುರಂತ ಪ್ರೇಮ, ಮೀಡಿಯಳ ಅಂತರಂಗದ ತುಡಿತ - ಇವು ರೂಪುಗೊಂಡಿವೆ. ಆದರೆ ಕವಿಯ ಪ್ರತಿಭೆ ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿರುವುದು ನಾಟಕಚಕ್ರದ ಕೊನೆಯ ಭಾಗವಾದ ಮೀಡಿಯದಲ್ಲಿ. ಮೀಡಿಯಳೊಂದಿಗೆ ಜೇಸನ್ ತನ್ನ ಊರಿಗೆ ಹಿಂದಿರುಗಿದ ಮೇಲೆ ಉದ್ಭವಿಸುವ ದುರಂತ ಘಟನೆಗಳು, ಜೇಸನ್ ಕಾರಿಂತಿಗೆ ಓಡಿಹೋಗುವುದು, ಮೀಡಿಯ ಜೇಸನ್ನರ ಮನಸ್ತಾಪ, ಜೇಸನ್ ಕ್ರೂಸಾಳನ್ನು ಪ್ರೀತಿಸಿ, ಮೀಡಿಯಳ ದ್ವೇಷಕ್ಕೆ ಗುರಿಯಾಗುವುದು, ಮೀಡಿಯ ತನ್ನ ಗಂಡನ ಮೇಲಿನ ದ್ವೇಷದಿಂದ ಮಕ್ಕಳನ್ನು  ಕೈಯಾರೆ ಕೊಂದು ಕಾರಿಂತಿನ ದೊರೆಯ ಅರಮನೆಗೆ ಬೆಂಕಿ ಹಚ್ಚುವುದು - ಇವು ಈ ನಾಟಕದಲ್ಲಿ ಬರುವ ಘಟನಾವಳಿಗಳು. ಇದೇ ನಾಟಕವಸ್ತುವನ್ನು ಯುರಿಪಿಡೀಸ್, ಸಿನೆಕ, ಕೋರ್ನಿಲ್, ಕ್ಲಿಂಗರ್ ಮುಂತಾದ ಕವಿಗಳು ಬಳಸಿಕೊಂಡಿದ್ದರೂ ವಿಮರ್ಶಕರು ಗ್ರಿಲ್‌ಪಾರ್ಟ್ಸರನ ನಾಟಕವೇ ಅತ್ಯಂತ ಆಧುನಿಕವೂ, ಕಲಾತ್ಮಕವೂ ಆದ ಕೃತಿಯೆನ್ನುತ್ತಾರೆ. ಷಿಲ್ಲರನ ನಾಟಕಗಳಲ್ಲಿರುವಂತೆ ಇಲ್ಲಿಯ ಪಾತ್ರಗಳು ಕೇವಲ ವಿಧಿಯ ಕೈವಾಡಕ್ಕೆ ಸಿಕ್ಕಿದ ಗೊಂಬೆಗಳಲ್ಲ. ಕವಿ ಚಿನ್ನದ ತುಪ್ಪಟವನ್ನು ದುರಂತ ಶಕ್ತಿಯ ಸಂಕೇತವಾಗಿ ಮಾರ್ಪಡಿಸಿರುವುದರ ಜೊತೆಗೆ, ರೊಮ್ಯಾಂಟಿಕ್ ಯುಗದ ನಿರಾಶೆ, ದುಗುಡ, ಬದುಕನ್ನು ಕುರಿತ ವಾಸ್ತವಿಕ ದೃಷ್ಟಿ - ಇವನ್ನು ಇಲ್ಲಿ ಸ್ಪಷ್ಟವಾಗಿ ಪ್ರತಿರೂಪಿಸಿದ್ದಾನೆ. ಅನಾದಿ ಕಾಲದ ಅನಾಗರಿಕ ಸಮಾಜದ ಪರಿಸರವನ್ನು ತುಂಬ ಸಹಜವಾಗಿ ಚಿತ್ರಿಸಿದ್ದಾನೆ. ಪಾತ್ರಗಳ ರೂಪರೇಖೆ ಚಿತ್ರಿಸಲು, ಮನುಷ್ಯನ ಅಂತರಂಗದ ರಾಗದ್ವೇಷಗಳನ್ನು ಯಥಾವತ್ತಾಗಿ ಪಡಿಮೂಡಿಸಲು ಕಾವ್ಯಶೈಲಿಯನ್ನು ಸಮರ್ಥವಾಗಿ ಉಪಯೋಗಿಸಿದ್ದಾನೆ.

1819 ರಿಂದ 1822 ರ ವರೆಗಿನ ಅವಧಿ ಗ್ರಿಲ್‌ಪಾರ್ಟ್ಸರನ ಜೀವನದಲ್ಲಿ ಬಹಳ ಚಟುವಟಿಕೆಯಿಂದ ತುಂಬಿತ್ತು. ಈತ ರೋಮನ್ ಚರಿತ್ರೆಯ ಕಥಾವಸ್ತುವನ್ನು ಆಧರಿಸಿ ಆರು ನಾಟಕಗಳುಳ್ಳ ಒಂದು ಚಕ್ರವನ್ನು ರಚಿಸಬೇಕೆಂದು ನಿರ್ಧರಿಸಿದ. ಆದರೆ ಅವು ಅಸಂಪೂರ್ಣ ಕೃತಿಗಳಾಗಿಯೇ ಉಳಿದುವು. ಕಟ್ಟಕಡೆಯಲ್ಲಿ ಕವಿ ತನ್ನ ದೇಶದ ಚರಿತ್ರೆಯಿಂದಲೇ ಸ್ಫೂರ್ತಿ ಪಡೆದು ಕೋನಿಕ್ ಆಟೊಕಾರ್ಸ್ ಗ್ಲುಕ್ ಉಂಟ್ ಎಂಡೆ (ಆಟೊಕರ್ ದೊರೆಯ ಅದೃಷ್ಟ ಮತ್ತು ಅಂತ್ಯ) ಎಂಬ ನಾಟಕ ಬರೆದ. ಈ ಐತಿಹಾಸಿಕ ದುರಂತ ನಾಟಕದ ಪ್ರದರ್ಶನಕ್ಕೆ ಆಸ್ಟ್ರಿಯದ ಸೆನ್ಸಾರ್ ಅಧಿಕಾರಿಗಳು ಬಹಳ ಕಾಲ ಅನುಮತಿ ನೀಡಲಿಲ್ಲ. ಅದು ಮೊಟ್ಟಮೊದಲು ಪ್ರದರ್ಶಿತವಾದುದು 1825 ರಲ್ಲಿ. ಕಥಾನಾಯಕನಾದ ಬೊಹಿಮಿಯದ ದೊರೆ ಆಟೊಕರ್ ಮತ್ತು ಹ್ಯಾಪ್ಸ್‌ಬರ್ಗ್‌ನ ರುಡೋಲ್ಫ್ ಇವರ ನಡುವಣ ಘರ್ಷಣೆಯೇ ನಾಟಕದ ವಸ್ತು. ಹಲವು ರಸಭರಿತ ಐತಿಹಾಸಿಕ ಘಟನೆಗಳು, ಯಥಾರ್ಥ ವಿವರಣೆಗಳು, ವೈವಿಧ್ಯಮಯ ದೃಶ್ಯಗಳು, ಪಾತ್ರಗಳು ಕಿಕ್ಕಿರಿದು ತುಂಬಿರುವ ಈ ನಾಟಕವನ್ನು ಆಸ್ಟ್ರಿಯದ ಪ್ರಪ್ರಥಮ ರಾಷ್ಟ್ರೀಯ ರೂಪಕವೆನ್ನುವುದುಂಟು. ನೆಪೋಲಿಯನ್ನನ ಪ್ರತಿರೂಪದಂತೆ ಕಾಣುವ ಕಥಾನಾಯಕ ಆಟೊಕರ್ ಜರ್ಮನ್ ನಾಟಕ ಸಾಹಿತ್ಯದ ಒಂದು ಚಿರಸ್ಮರಣೀಯ ಪಾತ್ರ. ಅನಂತರ ಬರೆದ ಐನ್ ಟ್ರಾಯಿರ್ ಡೀನರ್ ಸೈನೆಸ್ ಹೆರ್ನ್ (Ein treuer Diener seines Herrn) (1828) ಎಂಬ ಇನ್ನೊಂದು ಐತಿಹಾಸಿಕ ನಾಟಕದಲ್ಲಿ ಗ್ರಿಲ್‍ಪಾರ್ಟ್ಸರನಿಗೆ ಪ್ರಿಯವಾಗಿದ್ದ ಕ್ಯಾಂಟನ ಕ್ಯಾಟಗಾರಿಕಲ್ ಇಂಪರೇಟಿವ್ (ನಿರುಪಾಧಿಕ ಕರ್ತವ್ಯ) ತತ್ತ್ವವನ್ನು ಅಳವಡಿಸಲಾಗಿದೆ. ವಿಚಾರಗಳ ಗೊಂದಲದಲ್ಲಿ, ಅಂತರಂಗದ ತಾಕಲಾಟದಲ್ಲಿ ವ್ಯಕ್ತಿ ತನ್ನ ಆತ್ಮಸಾಕ್ಷಿಗನುಸಾರವಾಗಿ ನಡೆವುದೇ ಉದಾತ್ತ ನೈತಿಕ ಸಿದ್ಧಾಂತ - ಎಂಬ ಕ್ಯಾಂಟನ ಈ ತತ್ತ್ವವೇ ಗ್ರಿಲ್‌ಪಾರ್ಟ್ಸರನ ನಾಟಕಗಳಲ್ಲಿ ಮತ್ತೆಮತ್ತೆ ರೂಪ ತಾಳುತ್ತದೆ. ಈತ ಬರೆದ ಉಳಿದ ಕೃತಿಗಳಲ್ಲಿ ಡೆಸ್ ಮೇರೆಸ್ ಉಂಟ್ ಡರ್ ಲೀಬೆ ವೆಲೆನ್ (Des Meeres und der Liebe Wellen - ಸಮುದ್ರದ ಹಾಗೂ ಪ್ರೇಮದ ಅಲೆಗಳು - 1831) ಎಂಬ ನಾಟಕ ಆಧುನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದರಲ್ಲಿ ಗ್ರೀಕ್ ಪುರಾಣದ ಹೀರೋ ಮತ್ತು ಲಿಯಾಂಡರ್ ಎಂಬ ಪ್ರಣಯಿಗಳ ದುರಂತ ಕಥೆ ಇದೆ. 1835 ರಲ್ಲಿ ಪ್ರಕಟವಾದ ಟ್ರಿಸ್ಟಿಯ ಎಕ್ಸ್ ಪೊಂಟೊ ಎಂಬ ಕಾವ್ಯಸಂಕಲನದಲ್ಲಿ ಕವಿಯ ಆಂತರಿಕ ತೊಳಲಾಟವನ್ನು ಚಿತ್ರಿಸುವ ಗಂಭೀರ ಕವನಗಳಿವೆ.

1828ರಿಂದ ಸುಮಾರು ಹತ್ತು ವರ್ಷ ಕವಿಯ ಜೀವನದಲ್ಲಿ ಹಲವು ಸಂಕಷ್ಟಗಳು ಒದಗಿದವು. ಆಸ್ಟ್ರಿಯ ದೇಶದ ರಾಜಕೀಯ ವಾತಾವರಣದಲ್ಲಿ ಸುಶಿಕ್ಷಿತರು, ಕ್ರಿಯಾತ್ಮಕ ಪ್ರತಿಭೆಯುಳ್ಳ ಸಾಹಿತಿಗಳು ಗುಲಾಮರಂತೆ ನರಳುತ್ತಿದ್ದ ಕಾಲ ಅದು. ಇಂಥ ಪರಿಸರದಲ್ಲಿ ಈತನ ನಾಟಕಗಳು ಮತ್ತೆಮತ್ತೆ ಸೆನ್ಸಾರ್ ಅಧಿಕಾರಿಗಳ ಕೋಪಕ್ಕೆ ತುತ್ತಾಗಿ ಹಲಕಾಲ ಮೂಲೆಗುಂಪಾಗಿ ಉಳಿಯಬೇಕಾಯಿತು. ಕ್ಯಾಥರೀನಾ ಫ್ರಾಲಿಕ್ ಎಂಬಾಕೆಯನ್ನು ಪ್ರೀತಿಸಿ ದಾರುಣವಾದ ನಿರಾಶೆಗೆ ಗುರಿಯಾಗಿದ್ದ ಈ ಕವಿ ಅನುಭವಿಸಿದ ಮಾನಸಿಕ ವೇದನೆಯನ್ನು ಈತನ ಕವನಗಳಲ್ಲಿ ಕಾಣಬಹುದು. 1835ರಲ್ಲಿ ಈತ ಬರೆದ ಒಂದೇ ಒಂದು ವಿನೋದ ನಾಟಕ -ವೇ ಡೆಮ್, ಡರ್ ಲ್ಯೂಗ್ಟ್ (Weh dem, der lügt) ಮೂರು ವರ್ಷದ ಅನಂತರ ವಿಯನ್ನದಲ್ಲಿ ಪ್ರದರ್ಶಿತವಾದಾಗ ಅದು ಸ್ವಲ್ಪವೂ ಯಶಸ್ವಿಯಾಗಲಿಲ್ಲ. ಇದರಿಂದ ಬಹಳ ನಿರಾಶೆ ಹೊಂದಿದ ಈತ ರಂಗಭೂಮಿಗೆ ಶರಣು ಹೊಡೆದು ನಾಟಕ ರಚನೆಯನ್ನೇ ಕೈಬಿಟ್ಟ.

ಗ್ರಿಲ್‌ಪಾರ್ಟ್ಸರ್ ಪ್ರಮುಖವಾಗಿ ಕವಿ-ನಾಟಕಕಾರನೆಂದು ಖ್ಯಾತಿ ಪಡೆದರೂ ತನ್ನ ಕೆಲವು ವಿಮರ್ಶಾತ್ಮಕ ಪ್ರಬಂಧಗಳಲ್ಲಿ ಸೂಕ್ಷ್ಮವಾದ ಸಂವೇದನೆಯನ್ನೂ, ವಿಶ್ಲೇಷಣಾ ಸಾಮರ್ಥ್ಯವನ್ನೂ ತೋರಿಸಿದ್ದಾನೆ. ಈತನ ಎಲ್ಲ ಪ್ರಬಂಧಗಳೂ ಸ್ಪೇನ್ ರಂಗಭೂಮಿಯ ಅಧ್ಯಯನಕ್ಕೆ ಸಂಬಂಧಿಸಿದವು. ಸ್ಟಡೀಸ್ ಇನ್ ಸ್ಪ್ಯಾನಿಷ್ ಥಿಯೇಟರ್ ಎಂಬ ಉದ್ಗ್ರಂಥ ಈತನ ವಿಮರ್ಶನ ಶಕ್ತಿಗೆ ಸಾಕ್ಷಿಯಾಗಿದೆ. ರೊಮ್ಯಾಂಟಿಕ್ ವಿಮರ್ಶಕರು ಸ್ಪೇನಿನ ಮಹಾ ಸಾಹಿತಿ ಲೋಪ್ ಡಿ ವೇಗನನ್ನು ಮರೆತು, ಆ ದೇಶದ ಕಾಲ್ಡೆರಾನ್ ಕವಿಗೆ ಅತಿಯಾದ ಪ್ರಶಂಸೆ ಸಲ್ಲಿಸುತ್ತಿದ್ದರು. ಲೋಪ್ ಡಿ ವೇಗನ ಕೃತಿಗಳನ್ನು ಬೆಳಕಿಗೆ ತಂದು ಅವುಗಳಿಗೆ ನ್ಯಾಯವಾಗಿ ಸಲ್ಲಬೇಕಾಗಿದ್ದ ಸ್ಥಾನ ಗಳಿಸಿಕೊಡಲು ನೆರವಾದ. ಈತನ ನಾಟಕಗಳ ಮೇಲೆ ಲೋಪ್ ಡಿ ವೇಗನ ಪ್ರಭಾವ ತುಂಬ ದಟ್ಟವಾಗಿರುವುದನ್ನು ಗುರುತಿಸಬಹುದು.

1872 ರಲ್ಲಿ ಈತ ಕಾಲವಾದಾಗ ಈತ ಬಿಟ್ಟುಹೋಗಿದ್ದ ಮೂರು ಶ್ರೇಷ್ಠ ಕೃತಿಗಳು ಸಿಕ್ಕಿದುವು. ಲಿಬುಸ, ಡೀ ಯೂಡಿನ್ ಫಾನ್ ಟೊಲೀಡೊ ಮತ್ತು ಎಸ್ತರ್ (Esther) ಇವು ಜರ್ಮನ್ ನಾಟಕ ಸಾಹಿತ್ಯದಲ್ಲಿ ಸುಂದರ ಕಾವ್ಯನಾಟಕಗಳೆನಿಸಿಕೊಂಡಿವೆ.

ತನ್ನ ಜೀವಿತದ ಬಹುಪಾಲನ್ನು ನಿರಾಶೆಯಲ್ಲಿ ಕಳೆಯಬೇಕಾಗಿ ಬಂದ ಈ ಕವಿಗೆ ಆಸ್ಟ್ರಿಯದ ಸ್ವಾತಂತ್ರ್ಯಾನಂತರದ ದಿನಗಳು ಅತ್ಯಂತ ಹರ್ಷೋತ್ಕರ್ಷಗಳಿಂದ ತುಂಬಿದ್ದವು. ಆಗ ಈತನಿಗೆ ಹಲವಾರು ಉನ್ನತ ಪ್ರಶಸ್ತಿಗಳು ದೊರೆತುವು. 1861ರಲ್ಲಿ ಈತ ಆಸ್ಟ್ರಿಯದ ವಿಜ್ಞಾನ ಅಕಾಡಮಿಯ ಗೌರವ ಸದಸ್ಯನಾದ. ಅನಂತರ ಆಸ್ಟ್ರಿಯದ ಹೆರನ್‌ಹೌಸ್ ಸಭೆಗೆ ಚುನಾಯಿತನಾದ. ಈತನ ಎಲ್ಲ ನಾಟಕಗಳನ್ನೂ ಬರ್ಗ್‌ಥಿಯೇಟರ್‌ನಲ್ಲಿ ಹಲವು ವರ್ಷಗಳ ಕಾಲ ಪ್ರದರ್ಶಿಸಲಾಯಿತು.[] ಕವಿಯ ಎಂಬತ್ತನೆಯ ಹುಟ್ಟುಹಬ್ಬವನ್ನು ಆಸ್ಟ್ರಿಯದ ಜನ ರಾಷ್ಟ್ರೀಯ ಉತ್ಸವವಾಗಿ ಆಚರಿಸಿದರು.

ಗ್ರಿಲ್‌ಪಾರ್ಟ್ಸರ್ ತನ್ನ ಕೃತಿಗಳಲ್ಲಿ ಪುರಾತನ ಅಭಿಜಾತ ಗ್ರೀಕರ ಕಾವ್ಯತೇಜಸ್ಸು, ಜರ್ಮನ್ ಅಭಿಜಾತ ಯುಗದ ಕಲ್ಪನಾ ಸಾಮರ್ಥ್ಯ, ಸ್ಪೇನ್ ಕವಿಗಳ ಸೂಕ್ಷ್ಮ ಕಲೆಗಾರಿಕೆ ಇವನ್ನು ಸಮನ್ವಯಗೊಳಿಸಿದ್ದಾನೆ. ಈತ ಯೂರೋಪಿನ ಕಾವ್ಯನಾಟಕಕ್ಕೆ ಹೊಸ ಆಯಾಮ ತಂದನೆಂಬುದು ವಿಮರ್ಶಕರ ಅಭಿಮತ. ಅವನ ಕೃತಿಗಳ ಅನನ್ಯತೆ ಸೃಷ್ಟಿಸುವ ಬಳಕೆಯ ಕಾರಣದಿಂದ, ವಿಶೇಷವಾಗಿ ಎರಡನೇ ಮಹಾಯುದ್ಧದ ನಂತರ, ಅವನನ್ನು ಆಸ್ಟ್ರಿಯಾದ ರಾಷ್ಟ್ರಕವಿ ಎಂದು ಹೆಸರಿಸಲಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. This article incorporates text from a publication now in the public domainSime, James (1880). "Franz Grillparzer" . Encyclopædia Britannica. Vol. XI (9th ed.). pp. 196–197.
  2.  One or more of the preceding sentences incorporates text from a publication now in the public domainRobertson, John George (1911). "Grillparzer, Franz" . In Chisholm, Hugh (ed.). Encyclopædia Britannica. Vol. 12 (11th ed.). Cambridge University Press. pp. 597–598. {{cite encyclopedia}}: Cite has empty unknown parameters: |HIDE_PARAMETER= and |separator= (help); Invalid |ref=harv (help)
  3. "Franz Grillparzer A Century of Criticism". Boydell & Brewer. Archived from the original on 2020-07-23. Retrieved 2020-07-23.
  4. "Franz Grillparzer - one of the most contradictory poet personalities in Austria". Time Travel Vienna. 24 March 2021. Archived from the original on 24 ಜುಲೈ 2020. Retrieved 22 ಸೆಪ್ಟೆಂಬರ್ 2025.


ಹೊರಗಿನ ಕೊಂಡಿಗಳು

[ಬದಲಾಯಿಸಿ]