ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್
ಹಾಸನದ ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ೧೫-೦೮-೧೯೩೫ರಲ್ಲಿ ಜನಿಸಿದ ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್ ಅವರದು ಕನ್ನಡದ ಮೇಲೆ ಉಕ್ಕಿ ಹರಿಯುವ ಪ್ರೇಮ. ಮಾತುಗಾರಿಕೆಯ ಯಾವುದೇ ಹಂತದಲ್ಲೂ ಅದು ಸುವ್ಯಕ್ತವಾಗುತ್ತಿತ್ತು. ಕ್ರೈಸ್ತ ತತ್ತ್ವಬೋಧೆಯಿರಲಿ, ಕಲಿಕಾ ತರಗತಿಯಿರಲಿ, ಲೋಕಾಭಿರಾಮದ ಹರಟೆಯಿರಲಿ ಎಲ್ಲದರಲ್ಲೂ ಕನ್ನಡತನ ಮೆರೆಯುತ್ತಿತ್ತು. ಅವರ ಮನಸ್ಸು ಸದಾ ಕರ್ನಾಟಕದ ಧರ್ಮಸಭೆಯನ್ನು ಕನ್ನಡಮಯ ಮಾಡುವುದರತ್ತಲೇ ತುಡಿಯುತ್ತಿತ್ತು. ಬೆಳ್ಳನೆಯ ಚೂಪಾದ ಕಿರುಗಡ್ಡ, ಮೊನಚು ದೃಷ್ಟಿಯ ಕಣ್ಣುಗಳು, ಆದರೂ ಕೋಲುಮುಖದ ತುಂಬಾ ಕಿರುನಗೆ ಸೂಸುತ್ತಾ ಹೇಗಿದ್ದೀರಿ ಎಂದು ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್ ಪಾದರಸದಂತೆ ಓಡಾಡುತ್ತಾ ಪುಟಿಯುವ ಚಿಲುಮೆಯಾಗಿದ್ದರು. ಸೆಮಿನರಿ ವಿದ್ಯಾಭ್ಯಾಸದಲ್ಲಿ ಇರುವಾಗಲೇ ಬೈಬಲ್ ಭಾಷಾಂತರದಲ್ಲಿ ತೊಡಗಿಕೊಂಡು ಕನ್ನಡ ಕಥೋಲಿಕ ಧಾರ್ಮಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಬೆರಳಚ್ಚುಯಂತ್ರಕ್ಕಿಂತಲೂ ವೇಗವಾಗಿ ಅಷ್ಟೇ ಸುಂದರವಾಗಿ ಒಂದೂ ಕಾಗುಣಿತ ತಪ್ಪಿಲ್ಲದೆ ಬರೆಯುವ ಸಿದ್ಧಿ ಇವರದಾಗಿತ್ತು. ಇಡೀ ಬೈಬಲ್ ಗ್ರಂಥವನ್ನು ತಿದ್ದಿದ ಹಲವಾರು ಹಸ್ತಪ್ರತಿಗಳನ್ನು ಇವರೇ ಕೈಯಾರೆ ಬರೆದಿದ್ದರು. ಬರವಣಿಗೆ ಅವರ ಜೀವನದ ಅವಿರತ ಕ್ರಿಯೆಯಾಗಿತ್ತು. ಅದು ಬೈಬಲಿನ ನಕಲು ತೆಗೆಯುವುದಾಗಿರಬಹುದು, ಧಾರ್ಮಿಕ ಪುಸ್ತಕಗಳ ಅನುವಾದವಾಗಿರಬಹುದು ಯಾವುದೇ ಆಗಿದ್ದರೂ ಅತ್ಯಂತ ಕ್ರಿಯಾತ್ಮಕ ತೊಡಗುವಿಕೆ ಅವರದಾಗಿತ್ತು.ಆದರೆ ಮಾತಿಗೆ ನಿಂತಾಗ ಸ್ಟ್ಯಾನಿ ತಮ್ಮ ಕೆಲಸಕಾರ್ಯದ ಬಗ್ಗೆ ಎಳ್ಳಷ್ಟೂ ಸುಳಿವು ನೀಡದೆ ಇರುತ್ತಿದ್ದರು. ಈ ಒಂದು ಗುಣದಿಂದಾಗಿಯೇ ಇತರರು ಅವರನ್ನು ಅನೇಕವೇಳೆ ತಪ್ಪಾಗಿ ಮೌಲ್ಯಮಾಪನ ಮಾಡಿಬಿಡುತ್ತಿದ್ದರು. ಸಾಲದ್ದಕ್ಕೆ ಅವರ ಮುಂಗೋಪ ಹಾಗೂ ತಮಗನಿಸಿದ್ದನ್ನು ಖಂಡತುಂಡವಾಗಿ ಹೇಳಿಯೇಬಿಡುತ್ತಿದ್ದ ವರ್ತನೆಗಳಿಂದಾಗಿ ಬೆಂಗಳೂರಿನ ಕಥೋಲಿಕ ಧಾರ್ಮಿಕ ವರಿಷ್ಠರಿಂದ ದೂರಾದರು. ಅವರೊಂದಿಗೆ ಸದಾ ಒಡನಾಟ ಹೊಂದಿದ್ದವರಿಗೆ ಮಾತ್ರವೇ ಅವರ ಆರ್ದ್ರ ಅಂತಃಕರಣದ ನವಿರಾದ ಸ್ಪರ್ಶದ ಅನುಭವವಾಗುತ್ತಿತ್ತು. ಈ ಕಾರಣದಿಂದಲೇ ಅವರು ಹೆಚ್ಚು ಜನಾನುರಾಗಿಯಾಗಲು ಸಾಧ್ಯವಾಗಿದ್ದು. ಅವರ ಮಾತುಗಾರಿಕೆಯಲ್ಲಂತೂ ಹಾಸ್ಯದ ತುಣುಕುಗಳು ಲೀಲಾಜಾಲವಾಗಿ ವಿಜೃಂಭಿಸುತ್ತಿದ್ದವು. ಈ ಮಾತುಗಾರಿಕೆಯಿಂದಾಗಿಯೇ ಎಂಥ ಪ್ರಕ್ಷುಬ್ದ ಸನ್ನಿವೇಶವೂ ತಿಳಿಯಾಗುತ್ತಿತ್ತು.
ಕೃತಿಗಳು
[ಬದಲಾಯಿಸಿ]- ದೊಡ್ಡ ಜಪದ ಪುಸ್ತಕದ ಪರಿಷ್ಕೃತ ಆವೃತ್ತಿ
- ಬಾಲಕರ ಭಕ್ತಿಮಾಲೆ
- ಹಾಡೋಣ ಬನ್ನಿ
- ನವೇನ ಪ್ರಾರ್ಥನೆಗಳು
- ವ್ಯಾಟಿಕನ್ ಮಂಜರಿ
- ಸಪ್ತಸಂಸ್ಕಾರದ ವಿಧಿಗಳು
- ಪೂಜಾಪುಸ್ತಕ