ವಿಷಯಕ್ಕೆ ಹೋಗು

ಪ್ರಾಚೀನ ಗ್ರೀಕ್ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾಚೀನ ಗ್ರೀಕ್ ಸಾಹಿತ್ಯ ಎನ್ನುವುದು ಪ್ರಾಚೀನ ಗ್ರೀಕ್ ಭಾಷೆಯಲ್ಲಿ ಬರೆದ ಸಾಹಿತ್ಯ, ಅಂದರೆ ಅತ್ಯಂತ ಮುಂಚಿನ ಪಠ್ಯಗಳಿಂದ ಬೈಝೆಂಟೈನ್ ಸಾಮ್ರಾಜ್ಯದ ಕಾಲದವರೆಗಿನ ಸಾಹಿತ್ಯ.

ಕಾವ್ಯ

[ಬದಲಾಯಿಸಿ]

ಪಾಠಕ ಪರಂಪರೆ

[ಬದಲಾಯಿಸಿ]

ಪ್ರಾಚೀನ ಗ್ರೀಕ್ ಸಾಹಿತ್ಯ ಇಲಿಯಡ್ ಮತ್ತು ಆಡಿಸಿ ಮಹಾಕಾವ್ಯಗಳಿಂದಲೇ ಪ್ರಾರಂಭವಾಯಿತೆನ್ನಬಹುದಾದರೂ ಮಹಾಕಾವ್ಯಗಳಿಗಿಂತ ಪೂರ್ವದಲ್ಲಿ ಕಾವ್ಯದ ಒಂದು ಜೀವಂತ ಪಾಠಕ (ಓರಲ್) ಪರಂಪರೆ ಪುರಾತನ ಗ್ರೀಸಿನಲ್ಲಿತ್ತೆಂಬುದು ಖಚಿತ.[] ಆ ಪರಂಪರೆ ಎಷ್ಟು ಪುರಾತನವೆಂದು ನಿಷ್ಕೃಷ್ಟವಾಗಿ ಹೇಳಲಾಗುವುದಿಲ್ಲ. ಆದರೆ ಕ್ರಿ.ಪೂ. 16ನೆಯ ಶತಮಾನದ ಜನಜೀವನಕ್ಕೆ ಸಂಬಂಧಿಸಿದ ವಿವರಗಳೂ ಮಹಾಕಾವ್ಯಗಳಲ್ಲಿ ಬಂದಿರುವುದರಿಂದ ಪಾಠಕಕಾವ್ಯದ ಪರಂಪರೆ ಆ ಕಾಲಕ್ಕೂ ಹಿಂದಿನದೆನ್ನಬಹುದು. ರಾಜಾಧಿರಾಜರು ನಡೆಸಿದ ಯುದ್ಧಗಳ ವರ್ಣನೆಗಳು, ಮದುವೆಯ ಹಾಡುಗಳು, ಸುಗ್ಗಿಯ ಪದಗಳು, ಪ್ರಾರ್ಥನಾಗೀತಗಳು ಪುರಾತನ ಗ್ರೀಕ್ ಕಾವ್ಯರಾಶಿಯಲ್ಲಿ ಸೇರಿವೆ. ಅವು ಮಹಾಕಾವ್ಯದ ಸೃಷ್ಟಿಗೆ ಸಾಮಗ್ರಿ ಒದಗಿಸಿರಬೇಕು. ಈಚಿನ ವಿದ್ವಾಂಸರ ಅಭಿಪ್ರಾಯದಂತೆ ಇಲಿಯಡ್, ಆಡಿಸಿ ಕಾವ್ಯಗಳ ಇಂದಿನ ರೂಪ, ಕ್ರಿ.ಪೂ. 8ನೆಯ ಶತಮಾನದ ಮಧ್ಯದಿಂದೀಚಿನದು.[] ಹೋಮರನ ರಚನೆಗಳು ಸುಮಾರು ನಾಲ್ಕು ಶತಮಾನಗಳ ಕಾಲ ಮೌಖಿಕ ಪರಂಪರೆಯಲ್ಲಿ ಉಳಿದವು.[][] ಹಬ್ಬಹರಿದಿನಗಳ ಸಂದರ್ಭದಲ್ಲಿ ಕವಿ ಗಾಯಕರು (ಬಾರ್ಡ್ಸ್) ಸಾಮುದಾಯಿಕ ಆಚರಣೆಯ ಭಾಗವಾಗಿ ಈ ಮಹಾಕಾವ್ಯಗಳನ್ನು ಜನಸಂದಣಿಯ ಎದುರಿಗೆ ಹಾಡುತ್ತಿದ್ದರು. ಈ ಸಭೆಗಳಿಗೆ ಏಷ್ಯ ಮೈನರ್ ಪ್ರದೇಶದ ಇತರ ನಗರರಾಜ್ಯಗಳಿಂದಲೂ ಜನ ಬಂದು ಸೇರುತ್ತಿದ್ದರು. ಕವಿ ಗಾಯಕರು ತಂಡ ತಂಡವಾಗಿ ಒಬ್ಬರಾದ ಮೇಲೆ ಇನ್ನೊಬ್ಬರಂತೆ, ಒಬ್ಬ ನಿಲ್ಲಿಸಿದ ನಿರೂಪಣ ಸನ್ನಿವೇಶವನ್ನು ಮುಂದಿನವ ಎತ್ತಿಕೊಂಡು ಮುಂದುವರಿಸಿ ಹಾಡುತ್ತಿದ್ದರು. ಹೋಮರ್ ಪರಂಪರೆಯ ಈ ಕವಿಗಾಯಕರು ಸಮಗ್ರ ಗ್ರೀಕ್ ದೇಶದ ಉದ್ದಗಲದಲ್ಲಿ ಸಂಚರಿಸುತ್ತಿದ್ದು ಸಾರ್ವಜನಿಕ ಸಭೆಗಳಲ್ಲಿ ಪರಸ್ಪರ ಪೈಪೋಟಿಯಿಂದ ಹಾಡುತ್ತ ನಿಕಟ ಜನಸಂಪರ್ಕ ಪಡೆದಿದ್ದರೆಂದು ಕ್ರಿ.ಪೂ. 8ನೆಯ ಶತಮಾನದ ಗ್ರೀಕ್ ಕವಿ ಹೆಸಿಯಡ್ ಹೇಳಿದ್ದಾನೆ. ಅಂಥ ಕಾವ್ಯವಾಚನ ಸಂಪ್ರದಾಯದಿಂದ ತಾನು ಪಡೆದ ಋಣವನ್ನು ಸ್ಮರಿಸಿದ್ದಾನೆ. ಹೋಮರನ ಕಾವ್ಯದಲ್ಲಿ ಬರುವ ಮೈಸೀನಿಯನ್ ಚಕ್ರಾಧಿಪತ್ಯದ ಗತವೈಭವದ ವರ್ಣನೆಯನ್ನು ಹೀಗೆ ಸಾಮುದಾಯಿಕವಾಗಿ ಹಾಡಿ, ಹಾಡಿಸಿ ನಲಿಯುತ್ತಿದ್ದರು. ಗ್ರೀಕ್ ರಾಜ್ಯಗಳ ಅಧಿಪತಿಗಳೆಲ್ಲ ದೊರೆ ಆಗಮೆಮ್ನಾನನ ನಾಯಕತ್ವದಲ್ಲಿ ಒಟ್ಟಾಗಿ ಕಲೆತು ಟ್ರಾಯ್ ನಗರಕ್ಕೆ ಮುತ್ತಿಗೆ ಹಾಕಿ ವಿಜಯ ದುಂದುಭಿ ಮೊಳಗಿಸಿದ ವೀರಸಾಹಸ ಕಥೆಯನ್ನು ಜನಸಾಮಾನ್ಯರು ಕೇಳಿ ಮೈಮರೆಯುತ್ತಿದ್ದ ಕಾಲ ಅದು. ಅಥೆನ್ಸ್ ಪಟ್ಟಣದಲ್ಲಿ ಆಚರಿಸಲಾಗುತ್ತಿದ್ದ ಪ್ಯಾನ್ ಆಥಿನ ಹಬ್ಬದಲ್ಲಿ ಕ್ರಿ.ಪೂ. 6ನೆಯ ಶತಮಾನದಿಂದಲೂ ಮಹಾಕಾವ್ಯಗಳನ್ನು ವಾಚಿಸುತ್ತಿದ್ದ ರೂಢಿಯಿತ್ತು.[] ಈ ಕಾವ್ಯಗಳು ಜನಸ್ತೋಮದ ಮೇಲೆ ಅತ್ಯಂತ ವ್ಯಾಪಕ ಪರಿಣಾಮ ಬೀರುವುದರ ಜೊತೆಗೆ ಅನಂತರದ ಗ್ರೀಕ್ ಸಾಹಿತ್ಯದ ಉತ್ಕರ್ಷಕ್ಕೂ ಪ್ರೇರಣೆ ಒದಗಿಸಿದುವು.

ಎಪಿಕ್ ಸೈಕಲ್ ಮತ್ತು ಹೆಸಿಯಡ್: ಹಾಡುಗವಿಗಳ ಪಾಠಕ ಪರಂಪರೆಯಿಂದ ಮೈದಾಳಿದ ಕೃತಿಗಳಲ್ಲಿ ಹೋಮರನ ಕಾವ್ಯಗಳಂತೆ ಇನ್ನೂ ಹಲವು ಸೇರಿದ್ದುವು. ಬೊಯೀಷಿಯನ್ ಪರಂಪರೆಯ ಎಪಿಕ್ ಸೈಕಲ್ ಎಂದು ಕರೆಯುವ ಪುರಾಣ ಕಾವ್ಯಚಕ್ರದಲ್ಲಿ ಅಪೂರ್ಣವೂ, ಪರಸ್ಪರ ಅಸಂಬದ್ಧವೂ ಆದ ಹಲವು ಖಂಡಕಾವ್ಯಗಳು ಉಪಲಬ್ಧವಿವೆ. ಇವುಗಳಲ್ಲಿ ಪ್ರಮುಖವಾಗಿ ಹೋಮರಿಕ್ ಹಿಮ್ಸ್ ಮತ್ತು (ಹೆಸಿಯಡ್ ಬರೆದನೆನ್ನಲಾದ) ವರ್ಕ್ಸ್ ಅಂಡ್ ಡೇಸ್‌ಗಳನ್ನು ಹೆಸರಿಸಬಹುದು. ಹೋಮರನ ಕಾವ್ಯ ರಾಜರ, ಶ್ರೀಮಂತರ ಜೀವನವನ್ನು ಚಿತ್ರಿಸಿರುವಂತೆ, ವರ್ಕ್ಸ್ ಅಂಡ್ ಡೇಸ್ ಹೋಮರಿಕ್ ಯುಗದ ಜನಸಾಮಾನ್ಯರ ವಾಸ್ತವಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಅಯೋನಿಯನ್ ಪಂಥದ ಹೋಮರ್ ಕಾವ್ಯದಲ್ಲಿ ಅದ್ಭುತರಮ್ಯ ಜೀವನ ಚಿತ್ರಿತವಾಗಿರುವಂತೆ, ಹೆಸಿಯಡ್‌ನ ಕಾವ್ಯದಲ್ಲಿ ಆಗಿನ ಕಾಲದ ನಿತ್ಯಜೀವನದ ಕಷ್ಟಕಾರ್ಪಣ್ಯಗಳು ವರ್ಣಿತವಾಗಿವೆ. ಕ್ರಿ.ಪೂ. 700ರ ಸುಮಾರಿನ ಥಿಯೋಗನಿ ಎಂಬ ಇನ್ನೊಂದು ಅವಶಿಷ್ಟ ಕೃತಿಯಲ್ಲಿ ಪ್ರಕೃತಿಶಕ್ತಿಯ ಪ್ರತೀಕವಾದ ಗ್ರೀಕ್ ದೇವತೆಗಳ ಹುಟ್ಟು, ಬದುಕು, ವಂಶವೃಕ್ಷಗಳನ್ನು ಕ್ರೋಡೀಕರಿಸಲಾಗಿದೆ.[] ಈ ಗ್ರಂಥವು ಅವ್ಯವಸ್ಥೆಯಿಂದ ವ್ಯವಸ್ಥೆ ಮಾಡಿದುದನ್ನು, ದೇವತೆಗಳ ಜನನವನ್ನು ಬಿತ್ತರಿಸುತ್ತದೆ. ಈ ಕೃತಿಯ ದೆಸೆಯಿಂದ ಗ್ರೀಕ್ ದೇವತೆಗಳ ವಿಷಯವಾಗಿ ಹೆಚ್ಚು ವಿಚಾರಬದ್ಧವೂ, ವಿಮರ್ಶಾತ್ಮಕವೂ ಆದ ರೀತಿಯಲ್ಲಿ ಚಿಂತಿಸುವುದು ಅನಂತರ ಬಂದ 6ನೆಯ ಶತಮಾನದ ಅಯೋನಿಯನರಿಗೆ ಸಾಧ್ಯವಾಯಿತು.

ಕಾವ್ಯಗಳು: ಕ್ರಿ.ಪೂ. 7 ಮತ್ತು 6ನೆಯ ಶತಮಾನದ ಅಳಿದುಳಿದ ಹಾಡುಗಳಲ್ಲಿ, ಸಮಾಧಿ ಲೇಖನಗಳಲ್ಲಿ (ಎಪಿಟ್ಯಾಫ್ಸ್) ಗ್ರೀಕ್ ನಗರರಾಜ್ಯಗಳ ಶ್ರೀಮಂತರ ಜೀವನದ ವರ್ಣನೆಗಳು ಹಾಸುಹೊಕ್ಕಾಗಿ ಬಂದಿವೆ. ಆ ಯುಗದ ಕಾವ್ಯಗಳನ್ನು ಅವುಗಳ ಛಂದಸ್ಸಿಗನುಸಾರವಾಗಿ ಹೀಗೆ ವಿಂಗಡಿಸಬಹುದು:

  1. ಹೋಮರ್ ಕಾವ್ಯದಲ್ಲಿ ಬಹುತೇಕ ಬಳಸುವ, ಎಲಿಜಿಯಾಕ್ ಛಂದಸ್ಸಿನಲ್ಲಿ ರಚಿತವಾದ, ಕುಡಿತದ ಹಾಡುಗಳು, ಪ್ರೇಮಗೀತೆಗಳು, ಪ್ರಶಸ್ತಿ ಕವನಗಳು, ಚರಮವಾಕ್ಯಗಳು. ಇವುಗಳಲ್ಲಿ ರಾಜಕೀಯ ಪ್ರಚಾರವೂ ಬೆರೆತುಹೋಗಿದೆ. ಅಭಿಜಾತ ಯುಗದ ಉದ್ದಕ್ಕೂ ಈ ಛಂದಸ್ಸನ್ನು ಬಳಸಿ ಸಣ್ಣ ಸಣ್ಣ ಕವನಗಳನ್ನು ರಚಿಸಲಾಗುತ್ತಿತ್ತು.
  2. ಅಯಾಂಬಿಕ್ ಮತ್ತು ಟ್ರೋಕೇಯಿಕ್ ಛಂದಸ್ಸಿನಲ್ಲಿ ಬರೆದ ಪ್ರಚಾರಾತ್ಮಕ ಹಾಡುಗಳು, ವೈಯಕ್ತಿಕ ವಿಡಂಬನೆಗಳು. ಬಹುಕಾಲದ ಅನಂತರ ರಚಿತವಾದ ಗ್ರೀಕ್ ಗಂಭೀರ ಹಾಗೂ ಹರ್ಷನಾಟಕಗಳಲ್ಲಿ ಸಂಭಾಷಣೆಗಳನ್ನು ಹೆಣೆಯಲು ಈ ಛಂದಸ್ಸಿನ ಕೆಲವು ರೂಪಗಳನ್ನು ಬಳಸಿದ್ದುಂಟು.
  3. ಲಿರಿಕ್ ಅಥವಾ ಭಾವಪ್ರಧಾನವಾದ ಹಾಡುಗಬ್ಬದ ಛಂದಸ್ಸಿನಲ್ಲಿ ಬರೆದ ಕುಡಿತದ ಹಾಡುಗಳು, ಮೇಳಗೀತೆಗಳು, ಪ್ರಾರ್ಥನಾಗೀತೆಗಳು, ಯುದ್ಧದಲ್ಲಿ, ಆಟಪಾಟಗಳಲ್ಲಿ ಜಯಗಳಿಸಿದ ವೀರರನ್ನೂ, ಕ್ರೀಡಾಪಟುಗಳನ್ನೂ ಹೊಗಳುವ ಪ್ರಶಸ್ತಿ ಕವನಗಳು, ಶೋಕಗೀತೆಗಳು.

ಈ ಎಲ್ಲ ಛಂದಸ್ಸುಗಳನ್ನೂ ಆಮೇಲೆ ನಾಟಕಗಳ ಮೇಳಗೀತೆಗಳ ರಚನೆಗಾಗಿ ಬಳಸಲಾಯಿತು. ಸ್ಪಾರ್ಟಾ ಪಟ್ಟಣದ ಯುದ್ಧಕವಿ ಟೈರ್‌ಷಿಯಸ್, ವಿಡಂಬನಕಾರ ಆರ್ಕಿಲೋಕಸ್, ಲೆಸ್‌ಬಾಸಿನ ಆಲ್‌ಕೇಯಸ್, ಕವಿ ಪಿಂಡಾರ್ ಮತ್ತು ಕವಯಿತ್ರಿ ಸ್ಯಾಫೊ ಇವರು ಆ ಕಾಲದ ಕೆಲವು ಪ್ರಮುಖ ಕವಿಗಳು. ಕ್ರಿ.ಪೂ. ಸು. 5ನೆಯ ಶತಮಾನದಲ್ಲಿದ್ದನೆನ್ನಲಾದ ಪಿಂಡಾರ್ ರಚಿಸಿದ ಪ್ರಶಸ್ತಿಪ್ರಗಾಥಗಳಲ್ಲಿ ಗ್ರೀಕ್ ಶ್ರೀಮಂತರ ನೀತಿಚಿಂತನೆ, ಧಾರ್ಮಿಕ ಜಿಜ್ಞಾಸೆಗಳು ಸೂಚಿತವಾಗಿವೆ. ಪಿಂಡಾರನದು ಬಹು ವ್ಯಾಪಕ ಧ್ವನಿಶಕ್ತಿಯುಳ್ಳ ಪದಸಂಪತ್ತು ಹಾಗೂ ಪ್ರತಿಮಾಪೂರ್ಣ ಕಾವ್ಯಶೈಲಿ.

ಎಲಿಜಿಯಾಕ್‍ಗಳು: ಪ್ರಾಯಶಃ ಎಲಿಜಿಯಾಕ್‌ಗಳನ್ನು ಮೊದಲು ಬರೆದ ಕವಿ ಎಫೀಸಸ್‌ನ ಕ್ಯಾಲಿನಸ್. ಇತರ ಖ್ಯಾತ ಎಲಿಜಯಕ್ ಕವಿಗಳೆಂದರೆ ಸ್ಪಾರ್ಟದ ಟರ್ಟೆಅಸ್, ಕೊಲೊಫಾನ್‌ನ ಮಿಮ್ನೆರ್‌ಮಸ್, ಪರೋಸ್‌ನ ಆರ್ಕಿಲೋಕಸ್, ಅಥೆನ್ಸ್‌ನ ಮೊದಲ ಕವಿ ಸೋಲನ್ ಮತ್ತು ಮೆಗರದ ಥಿಯೋಗ್ನಿಸ್.[] ಆರ್ಕಿಲೋಕಸ್ ಅಯಾಂಬಿಕ್ ಛಂದಸ್ಸನ್ನು ರೂಪಿಸಿದ. ಇದನ್ನು ಕಟುವಾದ ವಿಡಂಬನೆಗೆ ಬಳಸಿದ ಎಂದು ಹೇಳಲಾಗಿದೆ. ಸೋಲನ್ ಮತ್ತು ಇತರರು ಇವನ್ನು ಚಿಂತನಶೀಲ ಕಾವ್ಯಕ್ಕೆ ಬಳಸಿದರು. ಪ್ರಾಚೀನ ಗ್ರೀಸಿನ ಆಡು ಮಾತಿನ ಲಯಕ್ಕೆ ವಿಶಿಷ್ಟವಾಗಿ ಇದು ಹೊಂದಿಕೊಂಡದ್ದರಿಂದ ಟ್ರ್ಯಾಜೆಡಿಗಳಲ್ಲಿ ಸಂಭಾಷಣೆಗೆ ಬಳಕೆಯಾಯಿತು.

ಲಿರಿಕ್

[ಬದಲಾಯಿಸಿ]

ಪ್ರಾರಂಭದಲ್ಲಿ `ಲಿರಿಕ್’ ಅನ್ನು ರಚಿಸಿದ್ದು ಲೈರ್ ಎನ್ನುವ ವಾದ್ಯದೊಂದಿಗೆ ಹಾಡಲು.[] ಪ್ರಾಚೀನ ಗ್ರೀಸಿನಲ್ಲಿ ಎರಡು ಬಗೆಯ ಲಿರಿಕ್‌ಗಳು ರಚಿತವಾದವು ವೈಯಕ್ತಿಕ ಲಿರಿಕ್ ಮತ್ತು ಮೇಳದ ಲಿರಿಕ್.[] ಲೆಸ್‌ವಾಸ್ ಅಥವಾ ಲೆಸ್‌ಬಾಸ್ ದ್ವೀಪದಲ್ಲಿ ವೈಯಕ್ತಿಕ ಲಿರಿಕ್ ಬೆಳೆಯಿತು.[೧೦] ಸ್ವತಃ ಸಂಗೀತಗಾರನಾಗಿದ್ದ ಟರ್‌ಪಾಂಡರ್ ಗ್ರೀಕ್ ಭಾಷೆಯ ಮೊದಲನೆಯ ಲಿರಿಕ್ ಕವಿ ಎಂದು ಹೇಳಲಾಗಿದೆ. ಕವನವನ್ನು ಸಂಗೀತಕ್ಕೆ ಮೊಟ್ಟಮೊದಲು ಅಳವಡಿಸಿದವನು ಇವನೇ.[೧೧] ಇವನ ನಂತರ ಲೆಸ್‌ವಾಸ್‌ನಲ್ಲಿ ಹಲವರು ಶ್ರೇಷ್ಠ ಕವಿಗಳು ಅರಿಕೆಗಳನ್ನು ರಚಿಸಿದರು. ಅಲ್‌ಕೇಯಸ್ ಈ ವೈಯಕ್ತಿಕ ವಿಷಯಗಳನ್ನಲ್ಲದೆ ರಾಜಕೀಯ ಮತ್ತು ಧಾರ್ಮಿಕ ವಸ್ತುಗಳನ್ನು ತನ್ನ ಲಿರಿಕ್‌ಗಳಿಗೆ ಆರಿಸಿಕೊಂಡ.[೧೨] ಪ್ರಾಚೀನ ಗ್ರೀಸಿನ ಶ್ರೇಷ್ಠ ಕವಯಿತ್ರಿ ಸ್ಯಾಫೊ. ಸ್ಯಾಫೊ ಸ್ಟ್ರೋಫಿಯನ್ನು ರೂಪಿಸಿದಳು. ಪ್ರೇಮ, ಸ್ನೇಹಗಳನ್ನು ಕುರಿತ ಅವಳ ಲಿರಿಕ್‌ಗಳು ಪಾಶ್ಚಾತ್ಯ ಪರಂಪರೆಯಲ್ಲಿ ಅತ್ಯಂತ ತೀವ್ರ ಭಾವಗಳನ್ನು ಸೃಷ್ಟಿಸಿದವು. ಕ್ರಿ.ಪೂ 6ನೆಯ ಶತಮಾನದಲ್ಲಿ ಅನಾಕ್ರಿಯಾನ್ ಲಘು ಮನೋಭಾವದಲ್ಲಿ ಸ್ತ್ರೀ ಮತ್ತು ಮಧುವನ್ನು ಕುರಿತ ಕವನಗಳನ್ನು ಬರೆದ.

ಕೋರಲ್ ಅಥವಾ ಮೇಳದ ಲಿರಿಕ್‌ಅನ್ನು ಮೊದಲು ರಚಿಸಿದವನು ಕ್ರೀಟ್‌ನಿಂದ ಸ್ಪಾರ್ಟಕ್ಕೆ ಬಂದ ಥಟ್ಟೆಸ್ ಎಂಬ ಕವಿ ಎಂದು ಭಾವಿಸಲಾಗಿದೆ. ಇವನು ದೇವತೆ. ಅನಂತರ ಟರ್ಪಾಂಡರ್, ಆಲ್ಕ್‌ಮನ್ ಮತ್ತು ಏರಿಯನ್ ಕವಿಗಳು ಬಂದರು.

ಕೋರಲ್ ಓಡ್

[ಬದಲಾಯಿಸಿ]

ಸಿಸಿಲಿಯ ಸ್ಟೆಸಿಕೊರಸ್ ಎನ್ನುವ ಕವಿ ಮೂರು ಭಾಗಗಳ, ಘಟಕಗಳ ಕೋರಲ್ ಓಡ್ (ಮೇಳದ ಪ್ರಗಾಥ) ತನ್ನ ರೂಪಿಸಿದ.[೧೩] ಸಿಮೊನೈಡಿಸ್ ಮತ್ತು ಅವನ ಸೋದರಳಿಯ ಬ್ಯಾಕಿಲೈಡಿಸ್ ಇದನ್ನು ಮುಂದುವರೆಸಿ ಮಾರ್ಪಡಿಸಿದರು.[೧೪] ಕೋರಲ್ ಓಡ್‌ಗಳ ಮೇರುಶಿಖರ ಕ್ರಿ.ಪೂ. ಐದನೆಯ ಶತಮಾನದ ಪಿಂಡಾರನ ರಚನೆಗಳು. ಇವುಗಳಲ್ಲಿ ಕಾಲು ಭಾಗ ಮಾತ್ರ ಉಳಿದು ಬಂದಿವೆ.

ಪ್ರಾಚೀನ ಗ್ರೀಕ್ ನಾಟಕದಲ್ಲಿ ಕೋರಲ್ ಓಡ್ ಅದ್ಭುತವಾಗಿ ಬೆಳೆಯಿತು.

ಅಭಿಜಾತ ಯುಗದ ನಾಟಕ

[ಬದಲಾಯಿಸಿ]

ಗಂಭೀರ ಹಾಗೂ ಹರ್ಷನಾಟಕಗಳು ಪುರಾತನ ಗ್ರೀಸಿನಲ್ಲಿ ಯಾವಾಗ ಉಗಮವಾದುವೋ ನಿಶ್ಚಿತವಾಗಿ ಹೇಳುವುದು ಕಷ್ಟ. ಹೋಮರನ ಕಾಲಕ್ಕೆ ಮತ್ತು ಅದಕ್ಕೂ ಹಿಂದೆ ಕೆಲವು ಮತಪ್ರಕ್ರಿಯೆಗಳಿಗೆ ಸಂಬಂಧಿಸಿದ ಕುಣಿತಗಳಲ್ಲಿ ಮುಖವಾಡ ಧರಿಸುವ ಪದ್ಧತಿ ಇತ್ತು.[೧೫] ಹರ್ಷನಾಟಕಕ್ಕೆ ಪ್ರಕೃತವಾದ ಒರಟು, ಅಶ್ಲೀಲ ವೇಷಗಳನ್ನೂ, ಮೆತ್ತೆ ತುಂಬಿದ ಬಟ್ಟೆಗಳನ್ನೂ ಧರಿಸಿ, ಮುಖವಾಡ ಹಾಕಿಕೊಂಡು ನೃತ್ಯಮಾಡುವ ಪದ್ಧತಿ ಕ್ರಿ.ಪೂ. 700ರ ಸುಮಾರಿನ ಕಾರಿಂತ್‌ನಲ್ಲಿ ಪ್ರಚಲಿತವಾಗಿತ್ತೆಂದು ಖಚಿತವಾಗಿದೆ. ಅದೇನೇ ಇರಲಿ, ಕಾರಿಂತ್‌ನ ನೃತ್ಯೋತ್ಸವಗಳಲ್ಲಿ ವೀರ, ಗಂಭೀರ ವಿಚಾರಗಳನ್ನು ಕುರಿತು ಹಾಡುತ್ತಿದ್ದ ವೃಂದಗೀತೆಯೇ ಗಂಭೀರ ನಾಟಕದ (ಟ್ರ್ಯಾಜಡಿ) ಮೂಲಬೀಜವೆನ್ನಬಹುದು. ಪುರಾತನ ಗ್ರೀಸಿನಲ್ಲಿ ಗಂಭೀರ ನಾಟಕದ ಪ್ರದರ್ಶನ ಕೇವಲ ಯಾವುದೊಂದು ವಿಶಿಷ್ಟ ಮತಧರ್ಮಗಳಿಗೆ ಸೇರಿದವರ ಮನೋರಂಜನೆಗೆ ಮಾತ್ರ ಉದ್ದೇಶಿತವಾಗಿರಲಿಲ್ಲ. ಇಡೀ ಸಮಾಜ ಸಮುದಾಯವೇ ನಾಟಕವನ್ನು ನೋಡುವ ಪರಿಪಾಠವನ್ನು ರೂಢಿಸಿಕೊಂಡಿತ್ತು. ಕ್ರಿ.ಪೂ 534ರ ಸುಮಾರಿನಲ್ಲಿ ಗಂಭೀರನಾಟಕ ಡೈಯೊನೈಸಸ್ ಉತ್ಸವದ ಅವಿಭಾಜ್ಯ ಅಂಗವಾಗಿದ್ದಿರಬೇಕು.[೧೬] ಕುದುರೆಯ ಬಾಲ ಮತ್ತು ಕಿವಿಗಳನ್ನುಳ್ಳ, ಮನುಷ್ಯ ಸ್ವರೂಪದ,[೧೭][೧೮][೧೯] ಸ್ಯಾಟಿರ್ಸ್ ಎಂಬ ಅರೆಪ್ರಾಣಿ ವೇಷ ಧರಿಸಿದವರೇ ಮೇಳದವರಾಗಿರುತ್ತಿದ್ದ ಕುಣಿತಗಳು ಕ್ರಿ.ಪೂ. 501ರ ವೇಳೆಗೆ ರೂಢಿಗೆ ಬಂತು.[೨೦] ಹರ್ಷನಾಟಕ ಕ್ರಿ.ಪೂ. 486ರಲ್ಲಿ ರೂಪ ತಾಳಿರಬೇಕು.[೨೧] ಅಲ್ಲಿಂದ ಮುಂದೆ ಸುಮಾರು ನೂರು ವರ್ಷಗಳ ಕಾಲ ಈಸ್ಕಿಲಸ್, ಸಾಫೋಕ್ಲೀಸ್ ಮತ್ತು ಯುರಿಪಿಡೀಸ್-ಈ ನಾಟಕಕಾರರ ಗಂಭೀರ ನಾಟಕಗಳು, ಬೇರೆ ಐವರು ಹರ್ಷನಾಟಕಕಾರರ ಕೃತಿಗಳು, ಗ್ರೀಕ್ ಜನಮನವನ್ನು ಸೂರೆಗೊಂಡಂತೆ ಕಾಣುತ್ತದೆ. ಪ್ರತಿವರ್ಷವೂ ಡೈಯೊನೈಸಸ್ ಉತ್ಸವದ ನಾಟಕ ಸ್ಪರ್ಧೆಗಳಲ್ಲಿ ಮತ್ತೆ ಮತ್ತೆ ಈ ಮೂವರು ಗಂಭೀರನಾಟಕಕಾರರೇ ಸ್ಪರ್ಧಿ ಪ್ರತಿಸ್ಪರ್ಧಿಗಳಾಗಿರುತ್ತಿದ್ದರೆಂದು ತಿಳಿದುಬರುತ್ತದೆ. ಈ ಸ್ಪರ್ಧೆಗಾಗಿ ಮೂವರೂ ಒಂದೊಂದು ನಾಟಕಚಕ್ರವನ್ನೂ, (3) ನಾಟಕಗಳು, ಒಂದೊಂದು ಸ್ಯಾಟಿರ್ ನಾಟಕವನ್ನೂ (ವಿನೋ ಪ್ರಧಾನ ನಾಟಕ) ಬರೆಯುತ್ತಿದ್ದರಂತೆ. ಐವರು ವಿನೋದನಾಟಕಕಾರರು ಐದು ವೈನೋದಿಕಗಳನ್ನು ಬರೆಯುತ್ತಿದ್ದರಂತೆ. ಒಟ್ಟಿನಲ್ಲಿ ಗಂಭೀರ ನಾಟಕಕಾರರು ಗ್ರೀಕ್ ಸಾಹಿತ್ಯಕ್ಕೆ ಮಹೌನ್ನತ್ಯವನ್ನು ತಂದುಕೊಟ್ಟರು. ಕೇವಲ ಧಾರ್ಮಿಕ ಜಿಜ್ಞಾಸೆ, ಮತಪ್ರಕ್ರಿಯೆಗಳನ್ನು ವಸ್ತುವಾಗುಳ್ಳ ಅನಾದಿಯುಗದ ಗೀತನೃತ್ಯವನ್ನು ಗ್ರೀಕ್ ನಾಟಕಕಾರರು ಸಂಕೀರ್ಣಾನುಭವವನ್ನು ಒಳಗೊಂಡ ಸಮಸ್ಯಾತ್ಮಕವಾದ, ಮಾನವೀಯವಾದ ದುರಂತ ನಾಟಕವನ್ನಾಗಿ ಮಾರ್ಪಡಿಸಿದುದು ಅವರ ಸಾಧನೆ.

ಗಂಭೀರ ನಾಟಕಕಾರರು

[ಬದಲಾಯಿಸಿ]
  • ಈಸ್ಕಿಲಸ್ ತನ್ನ ನಾಟಕಚಕ್ರದಲ್ಲಿ ಪಾತ್ರಗಳು ಮತ್ತು ಕಥಾವಸ್ತುವಿನ ವಿಭಿನ್ನ ಮುಖಗಳು ಒಂದು ನಾಟಕದಿಂದ ಇನ್ನೊಂದಕ್ಕೆ ಹೇಗೆ ಬೆಳೆಯುತ್ತ ಹೋಗುತ್ತವೆಂದು ಚಿತ್ರಿಸುತ್ತಾನೆ. ಅವನು ಕಣ್ಣು ಕೋರೈಸುವಂಥ ದೃಶ್ಯಾವಳಿಗಳನ್ನೂ, ಭವ್ಯವಾದ ಸಂಗೀತವನ್ನೂ, ಉನ್ನತವಾದ ಕಾವ್ಯ ಶೈಲಿಯನ್ನೂ ಬೇಕಾದಂತೆ ಬಳಸಿಕೊಂಡ. ಉದಾತ್ತವೂ ಗಹನಗಂಭೀರವೂ ಆದ ಮನುಷ್ಯನ ಬದುಕು ಧರ್ಮತತ್ತ್ವಗಳ ನೀತಿನೇತಿಗಳ ನೆಲಗಟ್ಟಿನ ಮೇಲೆ ರಚಿತವಾಗಬೇಕೆನ್ನುವ ವಿಚಾರ ಪರಂಪರೆ ಅವನ ಒರೆಸ್ಟಿಯಾ ನಾಟಕಚಕ್ರದಲ್ಲಿ ರೂಪಿತವಾಗಿದೆ. ಈಸ್ಕಿಲಸನ ನಾಟಕದ ಮೇಳ ಪಾತ್ರಗಳು ಯಾರೇ ಆಗಲಿ, ಯಾವುದೇ ಸಾಮಾಜಿಕ ವರ್ಗವನ್ನು ಪ್ರತಿನಿಧಿಸಲಿ, ಅವನ ಚಿಂತನೆ ಒಂದೇ ಗುರಿಯತ್ತ ಸಾಗುವಂಥದು. ಪ್ರತಿಮಾಪೂರ್ಣ ಮೇಳಗೀತಗಳ ಪ್ರಗಾಥಗಳ ಮೂಲಕ ಇಡೀ ನಾಟಕದ ಜೀವಾಳವನ್ನು ಅರ್ಥವಿಸುತ್ತ ನಾಟಕಕಾರ ತನ್ನ ಜೀವನದರ್ಶನಕ್ಕೆ ಆಕಾರ ನೀಡುತ್ತಾನೆ.
  • ಸಾಫೊಕ್ಲೀಸ್ ತನ್ನ ನಾಟಕಗಳಲ್ಲಿ ಮೇಳ ಪ್ರಗಾಥಗಳ ವ್ಯಾಪ್ತಿಯನ್ನು ಕಡಿಮೆ ಮಾಡಿ ಸಂಭಾಷಣೆಯನ್ನು ಹೆಚ್ಚು ಜೀವಂತಗೊಳಿಸುತ್ತಾನೆ. ಆದರೆ ನಡುವೆ ಅಲ್ಲಲ್ಲಿ ಸಣ್ಣ ಸಣ್ಣ ಪ್ರಗಾಥಗಳನ್ನು ಹೆಣೆದು ಅವುಗಳಲ್ಲಿ ಮನುಷ್ಯ ಹಾಗೂ ಅವನ ಜೀವನದ ನೀತಿ ನಿಯಮಗಳ ನಡುವಣ ಸಂಘರ್ಷ ಕುರಿತು ವ್ಯಾಖ್ಯಾನ ಮಾಡುತ್ತಾನೆ. ಈಸ್ಕಿಲಸ್, ಸಾಫೊಕ್ಲೀಸರ ತಾತ್ತ್ವಿಕ ವಿಚಾರಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ದುರಂತಮಯವಾದ ಮನುಷ್ಯನ ಬಾಳು ಅಧೋಗತಿಗೆ ಇಳಿಯಲು ದೈವೀಶಕ್ತಿಗಳು ಎಷ್ಟು ಕಾರಣವೋ ಅವನ ಕ್ಷುದ್ರ ಮನೋವೈಕಲ್ಯ, ದೌರ್ಬಲ್ಯಗಳು ಅಷ್ಟೇ ಕಾರಣ ಎನ್ನುವ ಮಾತಿನ ಮೇಲೆ ಸಾಫೊಕ್ಲೀಸ್ ಹೆಚ್ಚು ಒತ್ತು ಹಾಕುತ್ತಾನೆ. ಅವನು ಮಾನವೀಯವಾದ ಒಂದೋ ಎರಡೋ ಮುಖ್ಯ ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮೂಲಕ ಕಥೆಯ ಹಲವಾರು ಮುಖಗಳು ಹೇಗೆ ವಿಕಾಸವಾಗುತ್ತವೆಂದು ತೋರಿಸುತ್ತಾನೆ.
  • ಗಂಭೀರ ನಾಟಕಕಾರರಲ್ಲಿ ಮೂರನೆಯವನಾದ ಯುರಿಪಿಡೀಸ್ ಅನನ್ಯ ಪ್ರತಿಭಾವಂತ. ಅವನದು ಅತ್ಯಂತ ಆಧುನಿಕ ಪ್ರಜ್ಞೆ ಎನ್ನುವುದುಂಟು. ಆತ ಅತ್ಯಂತ ಸಮಸ್ಯಾತ್ಮಕ ಪಾತ್ರಗಳನ್ನು ಸೃಷ್ಟಿಸಿದ್ದಾನೆ. ಅವನ ನಾಟಕದಲ್ಲಿ ಮೇಳ, ನಾಟಕದ ವಸ್ತುವಿನಿಂದ ಪ್ರತ್ಯೇಕವಾಗಿ ಉಳಿದು ತೀರ ಗೌಣವಾದ ಅಂಶವಾಗುತ್ತದೆ. ಪ್ರಕೃತಿಯ ಚೈತನ್ಯ ಶಕ್ತಿಗಳನ್ನು ಪ್ರತೀಕಿಸುತ್ತವೆ ಎನ್ನುವ ಅರ್ಥದಲ್ಲಿ ಮಾತ್ರ ಅವನ ದೇವತೆಗಳು ವಾಸ್ತವಿಕ ಪಾತ್ರಗಳು. ಕಟ್ಟಕಡೆಯ ಅವನ ನಾಟಕಗಳಲ್ಲಿ ರೋಮಾಂಚಕ ಘಟನೆಗಳೂ, ವೀರಸಾಹಸಗಳೂ ತುಂಬಿವೆ. ಇವು ಅವನ ಕಾಲಾನಂತರದ ಗದ್ಯ ನಾಟಕಗಳು ಮತ್ತು ವಿನೋದ ನಾಟಕಗಳ ಮೇಲೆ ತುಂಬ ಪ್ರಭಾವ ಬೀರಿದವೆನ್ನಬಹುದು.

ಅರಿಸ್ಟೊಫನೀಸ್

[ಬದಲಾಯಿಸಿ]

ಕ್ರಿ.ಪೂ. 5ನೆಯ ಶತಮಾನದ ಹರ್ಷನಾಟಕದಲ್ಲಿ ಒರಟಾದ ಅಶ್ಲೀಲ ಹಾಸ್ಯ, ಅತ್ಯಂತ ವಿಭಾವನಾತ್ಮಕವಾದ ಕಾವ್ಯಶೈಲಿ, ರಾಜಕೀಯ ವಿಡಂಬನೆ, ಪೌರಾಣಿಕ ವ್ಯಕ್ತಿಗಳನ್ನು ಕುರಿತ ಲೇವಡಿ-ಎಲ್ಲವೂ ಬೆರೆತು ಹೋಗಿವೆ. ಅರಿಸ್ಟೊಫನೀಸನ ಕೆಲವು ಪೂರ್ಣ ಕೃತಿಗಳು ಮಾತ್ರ ಈಗ ಸಿಕ್ಕಿರುವುದರಿಂದ ಪುರಾತನ ಗ್ರೀಕ್ ವಿನೋದನಾಟಕದ ಕಲ್ಪನೆಯನ್ನು ಅವನ ಕೃತಿಗಳಿಂದ ಮಾತ್ರ ಗ್ರಹಿಸಬೇಕಾಗಿದೆ. ಪುರಾತನ ಸ್ಯಾಟಿರ್ ನಾಟಕದ ಅಂಶಗಳೂ ಈ ನಾಟಕಗಳಲ್ಲಿ ಸೇರಿಕೊಂಡು ಇವು ಒಂದೇ ರೀತಿಯ ಕಲ್ಪನೆ ಹಾಗೂ ರಚನಾ ವಿಧಾನಕ್ಕೆ ಅನುಗುಣವಾಗಿ ಸೃಷ್ಟಿಯಾಗಿದೆ. ಒಂದು ಹುಚ್ಚು ಆದರ್ಶವನ್ನು ಕಾರ್ಯೋನ್ಮುಖಗೊಳಿಸಲು ಹೊರಟಾಗ ಅದು ವಾಸ್ತವಿಕ ಬದುಕಿನ ಹಿನ್ನೆಲೆಯಲ್ಲಿ ಎಷ್ಟೊಂದು ಹಾಸ್ಯಾಸ್ಪದವಾಗುತ್ತದೆಂದು ತೋರಿಸುವುದು ಆರಿಸ್ಟಾಫನೀಸನ ರೀತಿ. ಅವನ ಮೇಳಗೀತೆಗಳು ಅತ್ಯಂತ ಕಾವ್ಯಾತ್ಮಕತೆಯಿಂದ ತುಂಬಿ ನಾಟಕಕ್ಕೆ ಬೇಕಾದ ಪರಿಸರವನ್ನು ಸೃಜಿಸಲು ಪ್ರೇರಕವಾಗುತ್ತವೆ.

ತಮ್ಮ ಕಾಲದ ಲೌಕಿಕ ಹಾಗೂ ಧಾರ್ಮಿಕ ಚಿಂತನೆಗಳನ್ನು ಅತ್ಯಂತ ಕಾವ್ಯಾತ್ಮಕವಾಗಿ ಅಭಿವ್ಯಕ್ತಿಗೊಳಿಸಿದ ಮಹಾ ನಾಟಕಕಾರ-ಕವಿಗಳ ಅನಂತರ ಗ್ರೀಕ್ ಸಾಹಿತ್ಯದ ಗದ್ಯಯುಗ ಪ್ರಾರಂಭವಾಯಿತು. ಕ್ರಿ.ಪೂ. 5ನೆಯ ಶತಮಾನದವರೆಗೆ ಸೃಷ್ಟ್ಯಾತ್ಮಕ ಚಿಂತನೆಗಳ ಅಭಿವ್ಯಕ್ತಿಗಾಗಿ ಕಾವ್ಯ ಹಾಗೂ ಗದ್ಯ ಮಾಧ್ಯಮಗಳೆರಡನ್ನೂ ಪ್ರಯೋಗಿಸುತ್ತಿದ್ದರು. ಸೋಲನ್, ಕ್ಸಿನೋಫೇನಸ್, ಪಾರ್ಮೆನೈಡಿಸ್, ಎಂಪಿಡಾಕ್ಲಿಸ್-ಮುಂತಾದವರೆಲ್ಲರೂ ಕಾವ್ಯ ಮಾಧ್ಯಮವನ್ನು ಬಳಸಿದರು. ಅವರು ಪ್ರಥಮತಃ ಪ್ರಚಾರಕರಾಗಿದ್ದುದರಿಂದ ತಮ್ಮ ಭಾವನೆಗಳು, ವಿಚಾರಗಳು ಹೆಚ್ಚು ಸ್ಮರಣೀಯವಾಗುವಂತೆ ಕಾವ್ಯಶೈಲಿಯನ್ನು ಉಪಯೋಗಿಸಿದರು. ಆದರೆ ಕಾಲಕ್ರಮೇಣ ಗದ್ಯದ ಬಳಕೆ ಅನಿವಾರ್ಯವಾಯಿತು. ಅಕ್ಷರಸ್ಥರಾದ, ಹೆಚ್ಚು ತಿಳಿವಳಿಕೆ ಇರುವ ಜನರಿಗಾಗಿ ಬರೆಯಬೇಕಾಗಿ ಬಂದಾಗ ಅಭಿವ್ಯಕ್ತಿಯ ಮಾಧ್ಯಮ ಹೆಚ್ಚು ಪರಿಷ್ಕಾರಗೊಂಡಿತು-ಜಾನಪದ ಕಥೆಗಳು ಕಾವ್ಯಮಯವಾದ ಗಂಭೀರ, ಉನ್ನತ ಶೈಲಿಯನ್ನು ಬಿಟ್ಟು ಗದ್ಯದತ್ತ ಹೊರಳಿದುವು. ಕಾನೂನುಸೂತ್ರಗಳು, ಉದಂತಗಳು, ತಾತ್ತ್ವಿಕ ಚಿಂತನೆಗಳು-ಇವನ್ನು ಸಾಧ್ಯವಾದಷ್ಟು ಸಹಜವಾಗಿ, ಆಡುಮಾತಿನ ಗತಿಲಯಗಳಿಗೆ ಹತ್ತಿರವಾಗುವಂತೆ, ಹಿಡಿದಿಡಲು ಗದ್ಯವೇ ಹೆಚ್ಚು ಉಚಿತವೆನಿಸಿರಬೇಕು. ಕಾವ್ಯದ ಛಂದೋನಿಯಮಗಳಿಗೆ ಅಳವಡಿಸಲಾರದ, ಸಂಕೀರ್ಣ ಆಲೋಚನೆಗಳನ್ನು ಗದ್ಯವಾಕ್ಯಗಳಲ್ಲೇ ಹೇಳಬೇಕೆಂದು ಕಾರ್ಯಸೃಷ್ಟಿಯುಳ್ಳ ಪುರಾತನ ಗ್ರೀಕರಿಗೆ ಹೊಳೆದಿರಬೇಕು. ಪ್ರವಾಸಿ ಹೆಕ್‌ಟಾಯಿಸ್, ವೈದ್ಯಶಾಸ್ತ್ರಜ್ಞ ಹಿಪ್ಪೋಕ್ರಿಟಿಸ್ ಮತ್ತು ತಮ್ಮ ವಿಚಾರಗಳನ್ನು ಸರಳ ನೇರ ಶೈಲಿಯಲ್ಲಿ ಹೇಳಬೇಕೆಂದು ಉದ್ದೇಶಿಸಿದ ಇತರ ತಾತ್ತ್ವಿಕರು, ವಿಜ್ಞಾನಿಗಳು, ವಿಚಾರಶೀಲರು ಗದ್ಯವನ್ನೇ ಬಳಸಿದರು. ಕಾವ್ಯಾಭ್ಯಾಸ ಪಂಡಿತರಾಗಿದ್ದ ಓದುಗರ ಸಲುವಾಗಿ ಬರೆಯುವಾಗ, ಗದ್ಯಶೈಲಿಯನ್ನು ಹೆಚ್ಚು ಪರಿಷ್ಕಾರವಾಗಿ, ನಯಗಾರಿಕೆಯಿಂದ ಬಳಸಬೇಕಾಯಿತು. ಹೋಮರ್ ಕಾವ್ಯದ ಪರಿಚಯವುಳ್ಳ ಸುಸಂಸ್ಕೃತರಿಗಾಗಿ ಹಿರಾಕ್ಲಿಟಿಸ್ ದರ್ಶನಶಾಸ್ತ್ರವನ್ನು ಈಸ್ಕಿಲಸ್ ಕವಿಯ ಸುಭಗ ಮೇಳಗೀತಗಳೋಪಾದಿಯಲ್ಲಿ ಬರೆದ.[೨೨]

ಇತಿಹಾಸಕಾರರು

[ಬದಲಾಯಿಸಿ]
  • ಇತಿಹಾಸಕಾರ ಹೀರಡಟಸ್ ಪರ್ಷಿಯನ್ ಯುದ್ಧದ ಚರಿತ್ರೆ ನಿರೂಪಿಸಲು ಹೋಮರನ ಭವ್ಯಕಾವ್ಯದ ಶೈಲಿಯನ್ನೂ, ಕಥಾನಕ ರೀತಿಯನ್ನೂ ಅನುಕರಿಸಿದ.[೨೩][೨೪] ಹೀರಡಟಸನ ಚಿತ್ರಯುಕ್ತವಾದ ಪದಪುಂಜಗಳು, ಸಮತೋಲವಿರುವ ವಾಕ್ಯಾಂಶಗಳು, ಅಂತ್ಯಪ್ರಾಸಬದ್ಧವಾದ ವಾಕ್ಯಗಳು ಗದ್ಯಕ್ಕೆ ಕಾವ್ಯದ ಚೆಲುವನ್ನು ತಂದುಕೊಟ್ಟವು. ಪ್ರಕಾಂಡ ಪಂಡಿತರೆನಿಸಿಕೊಂಡಿದ್ದ ಆ ಕಾಲದ ಸಾಫಿಸ್ಟ್ ಪಂಥದ ಲೇಖಕರು, ಎಲ್ಲ ವೈಚಾರಿಕ ಸಾಹಿತ್ಯವನ್ನೂ ಚೆನ್ನಾಗಿ ಅಧ್ಯಯನ ಮಾಡಿ, ತಮ್ಮ ಗದ್ಯಶೈಲಿಯನ್ನು ಅಚ್ಚುಕಟ್ಟಾಗಿ ರೂಢಿಸಿಕೊಂಡರು. ಸಾಮ್ರಾಜ್ಯಶಾಹಿ ಅಥೆನ್ಸ್ ನಗರದಲ್ಲಿನ ನ್ಯಾಯಾಲಯಗಳು ಮುಂತಾದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಚರ್ಚೆ, ವಾದ, ವಾಗ್ಮಿತೆಗಳಲ್ಲಿ ಆಸ್ಥೆ ಅಭಿರುಚಿ ತಳೆದ ಆ ನಗರದ ಸುಶಿಕ್ಷಿತ ಜನಸಮುದಾಯ-ಇವು ಉತ್ತಮ ಗದ್ಯಶೈಲಿಯ ವಿಕಾಸಕ್ಕೆ ಅಗತ್ಯವಾದ ಪರಿಸರ ಒದಗಿಸಿದುವು. ಪರ್ಷಿಯ ದೇಶ ಏಷ್ಯ ಮೈನರ್ ಪ್ರದೇಶದ ನಗರ ರಾಜ್ಯಗಳ ಮೇಲೆ ಆಕ್ರಮಣ ನಡೆಸಿದಾಗ ಹಲವು ವಿಚಾರವಂತರು, ಪಂಡಿತ ಪರಿಣಿತರು ದೇಶ ಬಿಟ್ಟು ಓಡಿಬಂದು ಅಥೆನ್ಸ್, ಸಿಸಿಲಿ, ದಕ್ಷಿಣ ಇಟಲಿ ಮುಂತಾದ ಕಡೆ ನೆಲೆಸಿದರು. ದಕ್ಷಿಣ ಇಟಲಿ ಪೈಥಾಗೊರಸ್ ಪಂಥಕ್ಕೆ ಸೇರಿದ ಗಣಿತಶಾಸ್ತ್ರಜ್ಞರ ನೆಲೆವೀಡಾಯಿತು. ವಾಗ್ಮಿ ಕಲೆ, ಭಾಷಾವಿಜ್ಞಾನಗಳಲ್ಲಿ ಪರಿಣತರಾದವರು ಸಿಸಿಲಿಯಲ್ಲಿ ನೆಲೆಸಿದರು. ಇತಿಹಾಸ ರಚನೆಯಂತೂ ಸಾಫಿಸ್ಟ್ ಚಳವಳಿಯ ಅಂಗವಾಗಿಯೇ ಹುಟ್ಟಿತೆನ್ನಬಹುದು. ಹೆಕಟಾಯಿಸ್ ಎಂಬವನ ಪ್ರವಾಸಿ ಕಥನಗಳನ್ನು ಓದಿ ಪ್ರಭಾವಿತನಾಗಿದ್ದ ಹೀರಡಟಸ್ ಪ್ರವಾಸಕಥನವನ್ನೇ ಪರ್ಷಿಯನ್ ಯುದ್ಧದ ಚರಿತ್ರೆಯನ್ನಾಗಿ ಬರೆದ. ಅವನ ಗ್ರಂಥದಲ್ಲಿ ಸಾಫಿಸ್ಟ್ ಪಂಥದವರ ವಿಚಾರಗಳು, ಹೋಮರನ ಹಾಗೂ ಗ್ರೀಕ್ ಗಂಭೀರ ನಾಟಕಕಾರರನ್ನು ಕುರಿತ ನೆನಪುಗಳು, ಸವಿವರವಾಗಿ ಬಂದಿವೆ.
  • ಆ ಕಾಲದ ಇನ್ನೊಬ್ಬ ಖ್ಯಾತ ಇತಿಹಾಸಕಾರ ತುಸಿಡಿಡೀಸ್-ಪೆಲೊಪೆನೀಷಿಯನ್ ಯುದ್ಧ ಚರಿತ್ರೆಯನ್ನು ಸಂಗ್ರಹಿಸಿದ. ಆ ಮಹಾಯುದ್ಧ ಒಂದು ಭಯಂಕರ ವ್ಯಾಧಿಯಂತೆ ಹಬ್ಬಿ ಗ್ರೀಕ್ ನಗರರಾಜ್ಯಗಳನ್ನು ಪೀಡಿಸಿತೆಂದು ವರ್ಣಿಸಿ ಅಧಿಕಾರಲಾಲಸೆ-ಅಧಿಕಾರಭಯ ಈ ವ್ಯಾಧಿಯ ಉಗ್ರ ರೋಗಲಕ್ಷಣಗಳು ಎಂದು ತನ್ನ ಇತಿಹಾಸಗ್ರಂಥದಲ್ಲಿ ವಿಶ್ಲೇಷಿಸಿದ್ದಾನೆ. ಆ ಶತಮಾನದ ಗ್ರೀಕ್ ಇತಿಹಾಸದಲ್ಲಿ ಯುದ್ಧದ ಪಿಡುಗು ಬಂದಾಗಲೆಲ್ಲ ಈ ರೋಗಚಿಹ್ನೆಗಳು ಕಾಣಿಸಿಕೊಂಡುವು. ಈ ಚಿಹ್ನೆಗಳನ್ನು ಆ ದೇಶದವರು ಸರಿಯಾಗಿ ಗ್ರಹಿಸಬೇಕಾಗಿತ್ತು. ಹಾಗೆ ಗ್ರಹಿಸಿದ್ದರೆ ಅವರು ತಮ್ಮನ್ನು ಕಾಡಿದ ಆ ಪಿಡುಗನ್ನು ನಿವಾರಿಸಿಕೊಳ್ಳಬಹುದಾಗಿತ್ತು ಎನ್ನುವುದು ತುಸಿಡಿಡೀಸನ ಅಭಿಮತ. ಆತನದು ಹೋಮರನ ಕಾವ್ಯಶೈಲಿ.[೨೫] ಮನೋರಂಜಕವಾಗಿ ಕಥೆ ಹೇಳುವುದರಲ್ಲಿ, ಘಟನೆಗಳನ್ನು ಜೀವಂತಗೊಳಿಸುವುದರಲ್ಲಿ ಅವನದು ನಾಟಕಕಾರನಿಗೆ ಸಹಜವಾದ ಕಲ್ಪನಾಶೀಲತೆ. ಆತನ ಇತಿಹಾಸಗ್ರಂಥದ ಪುಟಗಳು ಮತ್ತೆ ಮತ್ತೆ ಗಂಭೀರ ನಾಟಕಕಾರರ ನಾಟ್ಯಪ್ರಜ್ಞೆಯನ್ನೂ, ಸಾಫಿಸ್ಟರ ಶಬ್ದ ವೈಖರಿಯನ್ನೂ ನೆನಪಿಗೆ ತರುತ್ತವೆ.
  • ಸಾಕ್ರಟೀಸ್ ಸಾಫಿಸ್ಟ್ ಚಳವಳಿಯ ಒಂದು ಉನ್ನತ ಶಿಖರವನ್ನು ಪ್ರತಿನಿಧಿಸುವಂತಿದ್ದರೂ ಅವನ ವ್ಯಕ್ತಿತ್ವ ಸಾಫಿಸ್ಟ್ ಪಂಥದವರಿಗಿಂತ ತೀರ ಭಿನ್ನ. ನಾಗರಿಕ ಸಮಾಜದಲ್ಲಿ ವ್ಯಕ್ತಿ ಹೇಗೆ ಬದುಕಿ ಬಾಳಬೇಕೆನ್ನುವುದೇ ಸಾಫಿಸ್ಟ್ ತತ್ತ್ವಗಳ ಮೂಲ ಪ್ರಶ್ನೆ. ಈ ಪ್ರಶ್ನೆ ಸಾಕ್ರಟೀಸನ ವಿಚಾರಶಕ್ತಿಯನ್ನು ಹೆಚ್ಚು ಉಗ್ರವಾಗಿ, ಆದರೆ ತೀರ ಭಿನ್ನವಾದ ರೀತಿಯಲ್ಲಿ ಪ್ರಚೋದಿಸಿತು. ಜಯಾಪಜಯಗಳೇನೇ ಬರಲಿ ಋಜುಮಾರ್ಗದಲ್ಲಿ ಬದುಕಬೇಕೆನ್ನುವುದು ಸಾಕ್ರಟೀಸನ ತತ್ತ್ವ. ಆದರೆ ಹೇಗೋ ಯಶಸ್ವಿಯಾಗಿ ಬದುಕಿದರೆ ಸಾಕೆನ್ನುವುದು ಸಾಫಿಸ್ಟರ ರೀತಿ. ಆರಿಸ್ಟಾಫನೀಸ್ ಸಾಕ್ರಟೀಸನನ್ನು ಸಾಫಿಸ್ಟ್ ಎಂದು ಕರೆದು ಲೇವಡಿ ಮಾಡಿದ್ದರೂ ನಮಗೆ ಸಾಕ್ರಟೀಸನ ನಿಜವಾದ ವ್ಯಕ್ತಿಚಿತ್ರಣ ದೊರೆಯುವುದು ಇತಿಹಾಸಜ್ಞ ಕ್ಸಿನೋಫಾನನ ಗ್ರಂಥಗಳಲ್ಲಿ. ತುಸಿಡಿಡೀಸ್ ಸಂಪೂರ್ಣಗೊಳಿಸದೆ ಬಿಟ್ಟ ಪೆಲೋಪೊನೀಷಿಯನ್ ಯುದ್ಧದ ಚರಿತ್ರೆಯನ್ನು ಕ್ಸಿನೋಫಾನ್ ತನ್ನ ಹೆಲೆನಿಕಾ ಎಂಬ ಗ್ರಂಥದಲ್ಲಿ ಮುಂದುವರಿಸಿದ್ದಾನೆ.[೨೬] ಇದರಲ್ಲಿ ಹೀರಡಟಸನ ದೃಷ್ಟಿವೈಶಾಲ್ಯವಾಗಲಿ ವಿಭಾವನೆಯ ಭವ್ಯತೆಯಾಗಲಿ ಇಲ್ಲ. ಕ್ಸಿನೋಫಾನನ ಚರಿತ್ರೆಯ ವ್ಯಾಪ್ತಿ ಕಿರಿದಾದ್ದು. ಇತಿಹಾಸಕಾರನ ಶೈಲಿಯ ಔನ್ನತ್ಯಕ್ಕಿಂತ ಹೆಚ್ಚಾಗಿ ನಿರೂಪಣೆಯ ಸರಳತೆ, ನೇರ ಕಥನಶೈಲಿ, ವಸ್ತುನಿಷ್ಠವಾದ ದೃಷ್ಟಿ ನಮ್ಮನ್ನು ಸೆಳೆಯುತ್ತವೆ. ನಿಜವಾಗಿ ನೋಡಿದರೆ ಕ್ಸಿನೋಫಾನ್ ಪ್ರಸಿದ್ಧನಾಗಿರುವುದು ಜೀವನಚರಿತ್ರಕಾರನೆಂದು. ಅವನು ಬರೆದ ಜೀವನಚರಿತ್ರೆಗಳಿಂದಾಗಿ ಪ್ಲೂಟಾರ್ಕ್ ಮುಂತಾದವರಿಗೆ ಪೂರ್ವಸೂಚಿ ಒದಗಿತು. ಯೋಧ ಇತಿಹಾಸಕಾರ ಕ್ಸಿನೊಫಾನ್ ಮೂರು ಮುಖ್ಯ ಕೃತಿಗಳನ್ನು ಬರೆದ: ಅನಬೇಸಿಸ್, ಮೆಮೊರಬಿಲಿಯ ಮತ್ತು ಹೆಲೆನಿಕಾ. ಮೊದಲನೆಯ ಕೃತಿಯು ಗ್ರೀಕ್ ಕೂಲಿ ಯೋಧರು ಪರ್ಷಿಯದಿಂದ ತಪ್ಪಿಸಿಕೊಂಡು ಹೋಗಲು ಮಾಡಿದ ಪ್ರಯತ್ನಗಳ ವೃತ್ತಾಂತ. ಎರಡನೆಯದು ಸಾಕ್ರೆಟೀಸನ ವಿರುದ್ಧ ಬಂದ ಆಪಾದನೆಗಳಿಗೆ ಉತ್ತರ. ಮೂರನೆಯದು ಹೆಲೆನಿಕ.

ಇತರ ಗದ್ಯ ಸಾಹಿತ್ಯ

[ಬದಲಾಯಿಸಿ]

ಗದ್ಯಪ್ರಕಾರಕ್ಕೆ ನಾಲ್ಕನೆಯ ಶತಮಾನದ ಗ್ರೀಕ್ ಸಾಹಿತ್ಯದ ಮುಖ್ಯ ಕೊಡುಗೆ-ಗದ್ಯ ಸಂವಾದ. ಇದರ ಮೂಲವನ್ನು ತುಸಿಡಿಡೀಸ್ ಮತ್ತು ಯುರಿಪಿಡೀಸರ ಕೃತಿಗಳಲ್ಲಿ ಬರುವ ಭಾಷಣಗಳಲ್ಲಿ, ಸಂಭಾಷಣೆಗಳಲ್ಲಿ, ಸೊಫ್ರಾನ್ ಬರೆದ ಮೂಕನಾಟಕಗಳಲ್ಲಿ (ಮೈಮ್) ಕಾಣಬಹುದು. ನಾಲ್ಕೈದು ಭಾಷಣಕಾರರು ಒಟ್ಟಿಗೆ ಕುಳಿತು ಒಂದು ವಿಷಯದ ಕುರಿತು ಮಾತನಾಡುವಾಗ, ಮಾತು ಮಥಿಸಿ ವಿಚಾರಗಳು ವಿಕಾಸವಾಗುವುದನ್ನು ತೋರಿಸುವುದು ಗದ್ಯ ಸಂವಾದದ ಉದ್ದೇಶ. ಪ್ಲೇಟೊವಿನ ರಿಪಬ್ಲಿಕ್, ಅರಿಸ್ಟಾಟಲನ ಪೊಯೆಟಿಕ್ಸ್ (ಕಾವ್ಯಮೀಮಾಂಸೆ), ಗದ್ಯಸಂವಾದವೆನ್ನುವ ಪ್ರಕಾರದ ಮೇರುಕೃತಿಗಳು. ಪ್ರಪಂಚದ ಸೃಷ್ಟಿಗೆ ಒಂದು ಉದ್ದೇಶವಿದೆ. ಮನುಷ್ಯ ಒಳ್ಳೆಯದನ್ನು ಸಾಧಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಇದು ಪ್ಲೇಟೊವಿನ ಆದರ್ಶ. ಪ್ಲೇಟೊವಿನ ಗ್ರಂಥ ಆದರ್ಶರಾಜ್ಯವನ್ನೂ ಆದರ್ಶಪ್ರಜೆಯನ್ನೂ ಚಿತ್ರಿಸುವುದರ ಜೊತೆಗೆ ಅವರ ಏಳುಬೀಳುಗಳನ್ನೂ ಎತ್ತಿ ತೋರಿಸುತ್ತದೆ.[೨೭] ಇದರಲ್ಲಿ ಪ್ಲೇಟೊಗಿಂತ ಹಿಂದಿನ ಯುಗಗಳ ತತ್ತ್ವಚಿಂತನೆಯ ಸಾರ ಸಮ್ಮಿಳನವೂ ಸಿಕ್ಕುತ್ತದೆ. ಉಳಿದ ಸಂವಾದಗಳಲ್ಲಿ ಪ್ಲೇಟೊ ವಸ್ತುವಿಗಿಂತ ಹೆಚ್ಚಾಗಿ ನಿರೂಪಣಾತಂತ್ರಕ್ಕೆ ಹೆಚ್ಚು ಗಮನವಿತ್ತಿದ್ದಾನೆ. ಪ್ಲೇಟೋವಿನ ಸಂಭಾಷಣೆಗಳು ತತ್ವಶಾಸ್ತ್ರದ ಶ್ರೇಷ್ಠ ಕೃತಿಗಳಷ್ಟೇ ಅಲ್ಲ, ಅವು ಶ್ರೇಷ್ಠ ಸಾಹಿತ್ಯ ಕೃತಿಗಳು. ಅವನ ಗದ್ಯ ಅತ್ಯಂತ ಸ್ಪಷ್ಟ ಸುಂದರ. ವಿಚಾರಪ್ರತಿಪಾದನೆಯ ಬದಲು ರೀತಿನೀತಿಗಳ ಗೋಜಿಲ್ಲದ ಪೌರಾಣಿಕ ಕಥೆಗಳನ್ನು ಎತ್ತಿಕೊಂಡು ಕಥೆ ಹೆಣೆಯುವುದರಲ್ಲಿ ತೊಡಗಿದ್ದಾನೆ. ಕವಿಗಳನ್ನು ಆದರ್ಶ ರಾಜ್ಯದಿಂದಾಚೆಗೆ ಅಟ್ಟಿಬಿಡಬೇಕೆಂದು ವಾದಿಸಿದ ಪ್ಲೇಟೊ ಮಹಾಶಯ ಫೀಡ್ರಸ್, ಸಿಂಪೋಸಿಯಮ್ ಮುಂತಾದ ಗ್ರಂಥಗಳಲ್ಲಿ ತಾನೇ ಒಬ್ಬ ಉತ್ಕೃಷ್ಟ ಕವಿಯಾಗಿ ವಿಜೃಂಭಿಸಿದ್ದಾನೆ. ಪ್ಲೇಟೊವಿನ ಅನಂತರ, ಸಂವಾದಗಳನ್ನೂ, ಭಾಷಣಗಳನ್ನೂ ಬರೆದ ವಾಗ್ಮಿಗಳು ಕೇವಲ ವಿಚಾರಗಳ ಪ್ರಚಾರಕ್ಕಾಗಿಯೇ ಬರೆದಂತೆ ತೋರುತ್ತದೆ. ಹೀಗೆ ಯಾವುದೊಂದು ಶ್ರೋತೃವರ್ಗಕ್ಕಾಗಿ ಉದ್ದೇಶಿಸದೆ, ಕೇವಲ ಪ್ರಚಾರಕ್ಕಾಗಿಯೇ ಬರೆದವರಲ್ಲಿ ಐಸಾಕ್ರಟೀಸ್ ಬಹುಮುಖ್ಯನಾದವ. ಪ್ಲೇಟೊ ತನ್ನ ಅಕಾಡಮಿಯ ಸಲುವಾಗಿ ಸಂವಾದಗಳನ್ನು ರಚಿಸಿದಂತೆ ಐಸೋಕ್ರಟೀಸ್ ರಾಜನೀತಿಶಾಸ್ತ್ರವನ್ನು ಬೋಧಿಸುವ ತನ್ನ ಸಂಸ್ಥೆಯಲ್ಲಿ ರಾಜನೀತಿಜ್ಞರನ್ನು ತರಬೇತಿಗೊಳಿಸಲೆಂದೇ ತನ್ನ ಭಾಷಣಗಳನ್ನು ಬರೆದ. ತನ್ನ ವಿದ್ಯಾರ್ಥಿಗಳಿಗೆ ಗಂಭೀರ ನಾಟಕಗಳನ್ನೂ, ಚರಿತ್ರೆ, ವಾಗ್ಮಿತೆ ಮುಂತಾದವನ್ನೂ ಬೋಧಿಸಿದ. ಸಾರ್ವಜನಿಕ ಸಭೆಗಳಲ್ಲಿ ಪ್ರಸ್ತುತಪಡಿಸಲೆಂದೇ ಭಾಷಣ ರಚಿಸಿದವರಲ್ಲಿ ಡೆಮಾಸ್ತೆನೀಸನ ಹೆಸರು ಲೋಕಮಾನ್ಯವಾಗಿದೆ. ಅವನು ಗ್ರೀಕರ ವಿರುದ್ಧ ಬೆಳೆಯುತ್ತಿದ್ದ ಮ್ಯಾಸಿಡೋನಿಯದ ಸಾಮ್ರಾಜ್ಯಶಾಹಿಯನ್ನು ಪ್ರತಿಭಟಿಸಿ, ಅಥೆನ್ಸ್ ಪ್ರಜಾಪ್ರಭುತ್ವದ ಧೋರಣೆಗಳನ್ನು ಎತ್ತಿಹಿಡಿದ.

ಪ್ಲೇಟೊವಿನ ಅಕಾಡಮಿಯಲ್ಲಿ ಅಧ್ಯಯನ ನಡೆಸುತ್ತಿದ್ದ ಅವನ ಶಿಷ್ಯರಲ್ಲಿ ಅರಿಸ್ಟಾಟಲ್ ಅತ್ಯಂತ ಪ್ರತಿಭಾವಂತ. ಗುರುವಿನ ಸಂವಾದಗಳ ಮಾದರಿಯಲ್ಲೇ ಈತ ರಚಿಸಿದನೆನ್ನಲಾದ ಕೃತಿಗಳು ಯಾವುವೂ ಸಿಕ್ಕಿಲ್ಲ. ಆದರೆ ಸಿಕ್ಕಿರುವ ಚೂರುಪಾರು ಲೇಖನಗಳಲ್ಲಿ ಯಾವ ಹೆಚ್ಚುಗಾರಿಕೆ ಇಲ್ಲವೆಂದರೂ ಅರಿಸ್ಟಾಟಲನ ಉಪನ್ಯಾಸಗಳಲ್ಲಿ ಅವನ ನಿಜವಾದ ಸ್ವೋಪಜ್ಞತೆಯನ್ನು ಕಾಣಬಹುದು. ಸಂವಾದಗಳ ಪ್ರಶ್ನೋತ್ತರ ಶೈಲಿಯನ್ನು ಬಿಟ್ಟು ಅರಿಸ್ಟಾಟಲ್ ಪ್ರವಚನದ ಶೈಲಿಯನ್ನು ಪ್ರಯೋಗಿಸಿದ. ಆದರೆ ಇವನ ಉಪನ್ಯಾಸಗಳು ಸಹ ಈಗ ಉಪಲಬ್ಧವಾಗಿಲ್ಲ. ಈಗ ಉಳಿದಿರುವುದು ಈತ ಭಾಷಣ ಮಾಡಲು ಗುರುತು ಹಾಕಿಟ್ಟುಕೊಂಡಿದ್ದ ಟಿಪ್ಪಣಿಗಳು. ಅವುಗಳಿಂದಲೇ ನಾವು ಇವನ ಸಾಧನೆಯನ್ನು ಅಳೆಯಬೇಕಾಗಿದೆ. ಇವನ ಮುಖ್ಯಕೃತಿಗಳಲ್ಲೊಂದಾದ ಪಾಲಿಟಿಕ್ಸ್ ಅನ್ನು (ರಾಜ್ಯಶಾಸ್ತ್ರ) ರಚಿಸಿದ್ದು ಅಥೆನ್ಸಿನ ರಾಜ್ಯಾಂಗದ ಆಧಾರದ ಮೇಲೆ. ಅವನು ತನ್ನ ಸ್ವಂತ ಅಧ್ಯಯನದಿಂದ ಸಂಗ್ರಹಿಸಿದ್ದ ಪ್ರಕೃತಿ ವಿಜ್ಞಾನದ ತತ್ತ್ವಗಳನ್ನು ಪೊಯೆಟಿಕ್ಸ್ (ಕಾವ್ಯಮೀಮಾಂಸೆ) ಗ್ರಂಥದಲ್ಲಿ ಸಾಹಿತ್ಯಚರಿತ್ರೆಯ ಸೂತ್ರಗಳಿಗೆ ಅನ್ವಯಿಸಿದ್ದಾನೆ. ತನಗಿಂತ ನೂರು ವರ್ಷ ಮುಂಚೆ ಕಣ್ಮರೆಯಾಗಿದ್ದ ಗಂಭೀರ ನಾಟಕಕಾರರ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಕಾವ್ಯನಾಟಕ ಸೂತ್ರಗಳನ್ನು ಪ್ರತಿಪಾದಿಸಿದ್ದಾನೆ. ಅರಿಸ್ಟಾಟಲನ ವಿಚಾರಧಾರೆಯಿಂದ ಆ ಮೇಲಿನ ಪರಂಪರೆಯ ಗಂಭೀರ ನಾಟಕ ಹಾಗೂ ಹರ್ಷ ನಾಟಕಗಳು ಬೇರೆಬೇರೆ ರೀತಿಯಲ್ಲಿ ಪ್ರಭಾವ ಪಡೆದವು. ಅರಿಸ್ಟಾಟಲ್ ಗ್ರೀಕ್ ಗಂಭೀರನಾಟಕದ ರತ್ನತ್ರಯರಿಗೆ ಅನನ್ಯ ಪ್ರಶಂಸೆ ಸಲ್ಲಿಸಿ ಅವರ ಕೃತಿಗಳು ಆ ಪ್ರಕಾರದಲ್ಲಿ ಎಣೆಯಿಲ್ಲದ ಪರಿಪೂರ್ಣ ಕೃತಿಗಳು ಎಂದು ಹೇಳಿದ. ಲೈಕರ್ಗಸ್ ಎಂಬ ರಾಜಕಾರಣಿ ಗಂಭೀರ ನಾಟಕಕಾರತ್ರಯರ ಪ್ರತಿಮೆಗಳನ್ನು ರಂಗಮಂದಿರದಲ್ಲಿ ಸ್ಥಾಪಿಸಿದ[೨೮] ಮತ್ತು ನಾಟಕಗಳ ಗ್ರಂಥಪಾಠವನ್ನು ಖಚಿತಗೊಳಿಸುವ ಪ್ರಯತ್ನ ಮಾಡಿದ. ಗಂಭೀರ ನಾಟಕ ಇಷ್ಟೊಂದು ಉಚ್ಛ್ರಾಯಸ್ಥಿತಿಗೆ ತಲುಪಿದ ಅನಂತರ ಗ್ರೀಕ್ ಗಂಭೀರ ನಾಟಕ ಪರಂಪರೆಯೇ ಕುಂಠಿತವಾಗುವಂತಾಯಿತು. ಈಸ್ಕಿಲಸ್, ಸಾಫೊಕ್ಲೀಸರಂಥ ಗಂಭೀರ ನಾಟಕಕಾರರ ಕೀರ್ತಿಯ ಪ್ರಖರ ಬೆಳಕಿನಲ್ಲಿ ಹೊಸ ನಾಟಕಕರರ ಕಣ್ಣು ಕೋರೈಸಿದಂತಾಗಿ ಗ್ರೀಕ್ ರುದ್ರನಾಟಕ ಅಲೆಗ್ಸಾಂಡ್ರಿಯದಲ್ಲಿ ಅತ್ಯಲ್ಪಕಾಲ ಮಾತ್ರ ಮಿಂಚಿ ಅವನತಿಗೊಂಡಿತು. ಆದರೆ ಇದರ ಫಲವಾಗಿ ಆಮೇಲಿನ ಹರ್ಷನಾಟಕಕ್ಕೆ ಉತ್ತಮ ಪ್ರೇರಣೆ ದೊರೆಯುತ್ತ ಬಂತು.

ಹೊಸ ವೈನೋದಿಕಗಳು

[ಬದಲಾಯಿಸಿ]

4ನೆಯ ಶತಮಾನದ ಪ್ರಾರಂಭದಲ್ಲಿ ರಚಿಸಲಾದ ಗಂಭೀರ ಹಾಗೂ ಹರ್ಷ ನಾಟಕಗಳಲ್ಲಿ ಯುರಿಪಿಡೀಸನ ಮೆಲೋಡ್ರಾಮಗಳ (ಗಂಭೀರ ಸಂಗೀತ ರೂಪಕ) ಪ್ರಭಾವ ಸ್ಪಷ್ಟವಾಗಿ ತೋರುತ್ತದೆ. ಆ ಕಾಲದ ಹರ್ಷ ನಾಟಕಗಳಲ್ಲಿ ಅಂಕಗಳ ನಡುವೆ ಮೇಳಗೀತಗಳು ಬರುವುದಿಲ್ಲ. ಸಂಗೀತವನ್ನು ಬಿಟ್ಟು ಪಾತ್ರವಿನ್ಯಾಸಕ್ಕೆ ಅವರು ಹೆಚ್ಚು ಗಮನವಿತ್ತಂತೆ ಕಾಣುತ್ತದೆ. ಹರ್ಷ ನಾಟಕಗಳಲ್ಲಿ ಸಮಕಾಲೀನ ಯುಗದ ರಾಜಕೀಯ ವ್ಯಕ್ತಿಗಳ, ತತ್ತ್ವಗಳ ವಿಡಂಬನೆಯೂ ಬೇಕಾದಷ್ಟಿದೆ. ಆದರೆ ಮುಖ್ಯವಾಗಿ ಬೊಗಳೆ ಸಿಪಾಯಿ, ಸೂಳೆಯರು, ವಿಟರು, ತಲೆಹಿಡುಕರು, ಅಡುಗೆಯವರು ಮುಂತಾದ ಮಾಮೂಲು ಪ್ರರೂಪಗಳೇ ಹೆಚ್ಚು. ಕಾಮೆಡಿ ಆಫ್ ಮ್ಯಾನರ್ಸ್ ಪ್ರಕಾರದ ಉಗಮವನ್ನು ಪ್ರಪ್ರಥಮವಾಗಿ ಇಲ್ಲಿ ನೋಡಬಹುದು.[೨೯]

ಹರ್ಷನಾಟಕ ಅರಿಸ್ಟಾಟಲನ ಕಾವ್ಯಮೀಮಾಂಸೆಯಿಂದ, ನೀತಿಶಾಸ್ತ್ರದ ಸೂತ್ರಗಳ ಪ್ರಭಾವದಿಂದ, ತನ್ನ ಹಳೆಯ ಕಾಲದ ಒರಟುತನವನ್ನೂ, ಅಶ್ಲೀಲ ಹಾಸ್ಯವನ್ನೂ ಕಳಚಿ ಒಗೆದು ಮುಪ್ಪುರಿಗೊಂಡಿತು. ಅದು ರಾಜಕೀಯ ವಿಡಂಬನ ಹಾಗೂ ಒರಟು ಪ್ರಹಸನದ ಅಂಶಗಳನ್ನು ಬಿಟ್ಟು, ವಾಸ್ತವಿಕ ಸಾಮಾಜಿಕ ಚಿತ್ರಣ ನೀಡುವುದನ್ನೇ ಗುರಿಯಾಗಿಟ್ಟುಕೊಂಡಿತು. ಹೀಗೆ ಅಸ್ತಿತ್ವಕ್ಕೆ ಬಂದ ಯೂರೋಪಿನ ಹರ್ಷ ನಾಟಕದ ಸಂಪ್ರದಾಯ ರೋಮನ್ ನಾಟಕಕಾರರಾದ ಪ್ಲಾಟಸ್ ಮತ್ತು ಟೆರೆನ್ಸರಿಂದ ಹಿಡಿದು ಇಂಗ್ಲೆಂಡಿನ ಷೇಕ್ಸ್‌ಪಿಯರ್, ಷೆರಿಡನ್ನರವರೆಗೆ ಪೂರ್ಣ ರಸವಾಹಿನಿಯಾಗಿ ಪ್ರವಹಿಸಿತು. ಗ್ರೀಸಿನ ಹೊಸ ಹರ್ಷನಾಟಕ ಉಚ್ಛ್ರಾಯಸ್ಥಿತಿ ಕಂಡದ್ದು ಕ್ರಿ.ಪೂ. 4ನೆಯ ಶತಮಾನದಲ್ಲಿ. ಹೊಸ ವೈನೋದಿಕಗಳನ್ನು ಬರೆದವರಲ್ಲಿ ಮಿನಾಂಡರ್, ಡಿಫೈಲಸ್, ಫಿಲೆಮಾನ್ ಮುಂತಾದವರ ಹೆಸರುಗಳಿದ್ದರೂ ಮಿನಾಂಡರನ ಕೆಲವು ನಾಟಕಗಳ ತುಣುಕುಗಳನ್ನು ಬಿಟ್ಟರೆ ಯಾವೊಂದು ಪೂರ್ಣ ಕೃತಿಯೂ ದೊರೆತಿಲ್ಲ. ಆತನ ನಾಟಕಗಳಲ್ಲಿನ ಅತ್ಯಂತ ಕಲಾತ್ಮಕವೂ, ಸೂಕ್ಷ್ಮವೂ ಆದ ಪಾತ್ರ ವಿನ್ಯಾಸ. ನವುರಾದ ಹಾಸ್ಯ-ಇವು ಸುಸಂಸ್ಕೃತ ಅಥೆನ್ಸ್ ನಗರದ ಶಿಷ್ಟವರ್ಗದ ಅಭಿರುಚಿಯನ್ನು ಸೂಚಿಸುತ್ತದೆ.

ಹೊಸ ಗದ್ಯಪದ್ಯ ಪ್ರಭೇದಗಳು

[ಬದಲಾಯಿಸಿ]

ಅರಿಸ್ಟಾಟಲನ ತಾತ್ತ್ವಿಕ ಪರಂಪರೆಯನ್ನು ಮುಂದುವರಿಸಿದವರಲ್ಲಿ ಕ್ಯಾರೆಕ್ಟರ್ಸ್ ಎಂಬ ವಿಶಿಷ್ಟ ತೆರನಾದ (ನಾಗರಿಕ) ವ್ಯಕ್ತಿಚಿತ್ರಣಗಳನ್ನೂ, ಸಸ್ಯವಿಜ್ಞಾನ ಗ್ರಂಥವನ್ನೂ ಬರೆದು ಪ್ರಸಿದ್ಧನಾದ ಥಿಯೋಫ್ರಾಸ್ಟಸ್ ಮುಖ್ಯನಾದವ. ಕ್ರಿ.ಪೂ. ನಾಲ್ಕನೆಯ ಶತಮಾನದಲ್ಲಿ ಗ್ರೀಸಿನ ಹಳೆಯ ತಾತ್ತ್ವಿಕ ಸಂಪ್ರದಾಯದ ಜೊತೆಯಲ್ಲೇ ಸ್ಟೋಯಿಕ್ಸ್ ಮತ್ತು ಎಪಿಕ್ಯೂರಿಯನ್ಸ್ ಎಂಬ ಎರಡು ಹೊಸ ವೈಚಾರಿಕ ಪಂಥಗಳು ಹುಟ್ಟಿ ಜನಪ್ರಿಯವಾದುವು.[೩೦] ಥಿಯೋಫ್ರಾಸ್ಟಸನ ಶಿಷ್ಯ ಫಾಲೆರೆಮ್ಮಿನ ಡೆಮಿಟ್ರಿಯಸ್ ಕ್ರಿ.ಪೂ. 307ರಲ್ಲಿ ದೇಶಭ್ರಷ್ಟನಾಗಿ ಅಲೆಗ್ಸಾಂಡ್ರಿಯದ ಟಾಲಿಮಿಯ ಆಶ್ರಯ ಪಡೆದ.[೩೧][೩೨] ಅಲೆಗ್ಸಾಂಡ್ರಿಯದಲ್ಲಿ ಜಗದ್ವಿಖ್ಯಾತ ಪುಸ್ತಕ ಭಂಡಾರವನ್ನು ಸ್ಥಾಪಿಸಿದವ ಇವನೇ.[೩೩] ಅವನ ಪ್ರಯತ್ನದಿಂದಾಗಿ ಅರಿಸ್ಟಾಟಲನ ವೈಜ್ಞಾನಿಕ ವಿಚಾರಗಳೂ, ಶಾಸ್ತ್ರಪದ್ಧತಿಗಳೂ ಅಲೆಗ್ಸಾಂಡ್ರಿಯದಲ್ಲಿ ಬೇರೂರಿದುವು. ಅಲೆಗ್ಸಾಂಡ್ರಿಯದಿಂದ ಹಲವು ಮಂದಿ ವಿದ್ವಾಂಸರು ರೋಮ್ ನಗರಕ್ಕೆ ವಲಸೆ ಬಂದಾಗ ಅವರು ತಮ್ಮ ಜೊತೆಯಲ್ಲಿ ಗ್ರೀಕ್ ಅಭಿಜಾತ ಪರಂಪರೆಯ ಸಾರಸರ್ವಸ್ವವನ್ನೂ ಹೊತ್ತು ತಂದರು. ಅಲೆಗ್ಸಾಂಡ್ರಿಯದಲ್ಲಿ ಸ್ಥಾಪಿತವಾದ ಗ್ರೀಕ್ ಸಾಹಿತ್ಯ ಸಂಪ್ರದಾಯದಲ್ಲೂ ಹಲವು ಕವಿಗಳು ಹುಟ್ಟಿಕೊಂಡರು. ಅಲೆಗ್ಸಾಂಡ್ರಿಯದ ಕವಿಗಳಿಂದ ರಚಿತವಾದ ಕಾವ್ಯ ಪಾಂಡಿತ್ಯಪೂರ್ಣವಾಗಿದ್ದು, ಮನೋವಿಶ್ಲೇಷಣಾತ್ಮಕ ಅಂಶಗಳಿಂದ ಕೂಡಿದೆ. ಹಿಂದಿನ ಪರಂಪರೆಯನ್ನು ಬಿಡಬಾರದೆಂಬ ಹಂಬಲದಿಂದ ಇವರು ಹಳೆಯ ಛಂದೋನಿಯಮಗಳನ್ನು, ಭಾಷೆಯನ್ನು ಅನುಕರಿಸಲೆತ್ನಿಸಿದರು. ನಾಗರಿಕ ಓದುಗರಿಗಾಗಿ ಇವರು ಹಳ್ಳಿಗಾಡಿನ ಪ್ರಶಾಂತ ಬದುಕಿನ ಚೆಲುವನ್ನು ನವಿರಾಗಿ ಬಣ್ಣಿಸಿದರು. ಈ ಶಿಷ್ಟಕವಿಗಳು ತಾವು ಕಂಡುಂಡ ವೈಜ್ಞಾನಿಕ ವಿಚಾರಗಳನ್ನು ಹಳೆಯ ಸಂಪ್ರದಾಯದ ರೀತಿಯಲ್ಲೇ ಹೇಳಲು ಪ್ರಯತ್ನಿಸುವುದರಿಂದ ಇವರ ಕಾವ್ಯ ಹಳತು ಹೊಸತುಗಳ ಮಿಶ್ರಣವಾಗಿದೆ. ಅಲೆಗ್ಸಾಂಡ್ರಿಯದ ಕವಿಗಳಲ್ಲಿ ಮೊದಲಿಗರೆಂದರೆ; ಗ್ರಾಮಜೀವನವನ್ನು ಚಿತ್ರಿಸುವ ಪ್ಯಾಸ್ಟೊರಲ್ ಕವಿ ಥಿಯೋಕ್ರಟಿಸ್,[೩೪] ಪುರಾಣಕಾವ್ಯಶೈಲಿಯಲ್ಲಿ ಬರೆದ ರೋಡ್ಸ್ ಪ್ರಾಂತದ ಅಪೊಲೋನಿಯಸ್, ಪುರಾಣಗಳ ಮತಪ್ರಕ್ರಿಯೆಗಳ ಉಗಮವನ್ನು ವಿವರಿಸುವ ಐಷಿಯಾ ಎಂಬ ಗ್ರಂಥ ಬರೆದ ಕ್ಯಾಲಿಮಾಕಸ್ ಮುಂತಾದವರು. ಥಿಯಾಕ್ರಿಟಸ್ `ಇಂಟ್’ ಗಳನ್ನು ಬರೆದನು. ಇವು ಗೊಲ್ಲ ಕವನಗಳು. ಅನಂತರ ಬಂದ ಬಿಯಾನ್, ಮಾಸ್ಕಸ್ ಮೊದಲಾದವರು ಇವನನ್ನು ಅನುಸರಿಸಿದರು. ಬಿಯಾನ್ ಬರೆದ `ಅಡೋನಿಸ್’ ಎಂಬ ಶೋಕಗೀತ ಪ್ರಸಿದ್ಧವಾಗಿದೆ. ಕ್ಯಾಲಿಮಾಕಸ್ ಅಲ್ಲಿನ ಗ್ರಂಥಾಲಯದ ಪ್ರಧಾನ ಗ್ರಂಥ ಪಾಲಕ.[೩೫] 800ಕ್ಕಿಂತ ಹೆಚ್ಚು ಕೃತಿಗಳನ್ನು ಇವನು ಬರೆದನೆಂದು ಹೇಳಲಾಗಿದೆ.[೩೬][೩೭] ಉಳಿದುಬಂದಿರುವುದು ಆರು ಸ್ತೋತ್ರಗಳು,[೩೮] 64 ಚಾಟೂಕ್ತಿಗಳು ಮತ್ತು ಕೆಲವು ಎಲಿಜಿಗಳು. ಶೋಕಾತ್ಮಕವಾದ ಎಪಿಗ್ರಾಮ್‌ಗಳನ್ನು (ನಾಟುನುಡಿ) ಬರೆದ ಹೆರಾಕ್ಲಿಟಸ್ ಹೊಸದೊಂದು ಕಾವ್ಯಪ್ರಕಾರವನ್ನೇ ಪ್ರಾರಂಭಿಸದನೆನ್ನಬಹುದು.

ರೋಮನ್ನರ ಆಳ್ವಿಕೆ ಶುರುವಾದ ಮೇಲೆ

[ಬದಲಾಯಿಸಿ]

ಗ್ರೀಕರನ್ನು ಗೆದ್ದ ರೋಮನ್ನರಿಗೆ ಗ್ರೀಕರ ಹೊಸ ಗ್ರೀಕ್ ವೈನೋದಿಕಗಳ, ಅಲೆಗ್ಸಾಂಡ್ರಿಯನ್ ಕಾವ್ಯ, ವಿಜ್ಞಾನ, ಭೂಗೋಳಶಾಸ್ತ್ರ, ಇತಿಹಾಸ, ವಿಮರ್ಶೆ ಪಾಂಡಿತ್ಯ ಪದ್ಧತಿಗಳೆಲ್ಲದರ ಫಲಶ್ರುತಿ ದೊರೆಯುವಂತಾಗಿ ರೋಮನ್ ಸಾಹಿತ್ಯದ ನಿರ್ಮಾಣಕ್ಕೆ ಬೇಕಾದ ಸ್ಫೂರ್ತಿ, ಮಾದರಿಗಳು ಒದಗಿದುವು. ಅಭಿಜಾತ ಯುಗದ ಕಟ್ಟಕಡೆಯ ಘಟ್ಟದಲ್ಲಿ ಇತಿಹಾಸ ಗ್ರಂಥಗಳನ್ನು ಬರೆದವರಲ್ಲಿ ಪಾಲಿಬಿಯಸ್‌ನ ಹೆಸರು ಉಲ್ಲೇಖಾರ್ಹ. ಅವನ ವಿಶಿಷ್ಟ ತಾತ್ತ್ವಿಕ ಚಿಂತನೆ, ವಿಚಿತ್ರ ಶೈಲಿ ಅನಂತರದ ಸಾಹಿತಿಗಳ ಮೆಲೆ ಪ್ರಭಾವ ಬೀರಿ, ಹೊಸ ಮಾರ್ಗ ಸ್ಥಾಪಿಸಿದುವು.

ಕ್ರಿ.ಪೂ. ಎರಡನೆಯ ಶತಮಾನದಲ್ಲಿ ರೂಪ ತಳೆದ (ಅದ್ಭುತಕಥೆಗಳು) ಗದ್ಯ ರೊಮಾನ್ಸುಗಳು ಸಮಗ್ರ ಯೂರೋಪಿನ ಸಾಹಿತ್ಯದ ಬಹುಮುಖ ಬೆಳೆವಣಿಗೆಗೆ ಕಾರಣವಾದವು. ರೋಮಾನ್ಸ್‌ಗಳು ಗ್ರೀಸಿನ ಅವಿಚ್ಛಿನ್ನ ಕಥಾನಕ ಪರಂಪರೆಯಿಂದ ಉದ್ಭವಿಸಿದರೂ ಅವುಗಳ ಮೇಲೆ ಗ್ರೀಕ್ ನಾಟಕಗಳೂ ತಮ್ಮ ಪ್ರಭಾವವನ್ನು ಅಚ್ಚೊತ್ತಿದೆವೆಂಬುದನ್ನು ಗಮನಿಸಬೇಕು. ಕ್ರಿ.ಪೂ. ಎರಡನೆಯ ಶತಮಾನದ ಅನಂತರ ಗ್ರೀಕ್ ಸಾಹಿತ್ಯದ ಇಳಿಗತಿ ಪ್ರಾರಂಭವಾಯಿತು. ಆಮೇಲೆ ಬಂದ ಸಾಹಿತಿಗಳು ಆರ್ಷೇಯವಾದ ಸಾಹಿತ್ಯಸಂಪ್ರದಾಯಗಳನ್ನು ಉಳಿಸಿಕೊಳ್ಳುವುದರಲ್ಲೇ ಹೆಚ್ಚಾಗಿ ಆಸಕ್ತಿ ವಹಿಸಿದರು. ಪ್ಲೂಟಾರ್ಕನ ನೀತಿಪ್ರಧಾನವಾದ ಜೀವನಚರಿತ್ರೆಗಳಲ್ಲಿ (ಪ್ಯಾರಲಲ್ ಲೈವ್ಸ್),[೩೯] ಲೂಸಿಯನ್ನನ ಗದ್ಯ ಸಂವಾದಗಳಲ್ಲಿ ಸಾಕ್ರಟೀಸನ ತಾತ್ತ್ವಿಕ ವಿಚಾರಗಳು ಮತ್ತೆಮತ್ತೆ ಅಭಿವ್ಯಕ್ತಿ ಪಡೆದಿವೆ. ಅಭಿಜಾತ ಗ್ರೀಕ್ ಸಾಹಿತ್ಯವನ್ನು ಅನುಕರಿಸಿದವರಲ್ಲಿ ಹೆಸರಿಸಬೇಕಾದವನು ವಿಡಂಬನಕಾರ ಲೂಸಿಯನ್. ಇವನ ಕೃತಿಗಳು ಸತ್ತವರ ಸಂವಾದಗಳು (Dialogues of the Dead), ದೇವತೆಗಳ ಸಂವಾದಗಳು ಮತ್ತು ನಿಜವಾದ ಇತಿಹಾಸ. ಲೂಸಿಯನ್ನನ ವಿಚಿತ್ರ ಲಘುಕಲ್ಪನೆ ಅರಿಸ್ಟಾಫನೀಸನ ನಾಟಕಗಳ ನೆನಪು ತರುತ್ತದೆ. ಪ್ಲೇಟೊ, ಅರಿಸ್ಟಾಟಲರ ವಿಚಾರಗಳು ಇಲ್ಲಿ ಚರ್ವಿತಚರ್ವಣವಾದಂತೆ ಭಾಸವಾಗುತ್ತದೆ. ಆಲ್ಸಿಫ್ರಾನ್ ಬರೆದ ಪತ್ರಗಳಲ್ಲಿ ಮಿನಾಂಡರನ ನಾಟಕಗಳ ವಾತಾವರಣ, ವಸ್ತು, ಶೈಲಿ ಮತ್ತೆ ಕಾಣಿಸಿಕೊಳ್ಳುತ್ತವೆ. ಹೀಗೆ ಪುನಃಪುನಃ ಹಳೆಯ ಪರಂಪರೆಯತ್ತ ವಾಲುವ ಈ ಸಾಹಿತಿಗಳು ಅಭಿಜಾತಯುಗದ ಇಳಿಗತಿಯನ್ನು ಸೂಚಿಸುತ್ತಾರೆ. ಇವರಲ್ಲಿ ಯಾರು ಸಂಪ್ರದಾಯವನ್ನು ಅರಗಿಸಿಕೊಂಡು ತಮ್ಮ ಶೈಲಿವಸ್ತುಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿಕೊಂಡರೋ ಅವರು ಬಾಳಬಲ್ಲ ಕೃತಿಗಳನ್ನು ರಚಿಸುವುದು ಸಾಧ್ಯವಾಯಿತು.

ಇತರ ಕ್ಷೇತ್ರಗಳಲ್ಲಿ

[ಬದಲಾಯಿಸಿ]

ಹೆಲಿನಿಸ್ಟಿಕ್ ಯುಗದ ವಿದ್ವಾಂಸರು ಮತ್ತು ವಿಜ್ಞಾನಿಗಳು ಅದ್ಭುತ ಕೆಲಸವನ್ನು ಮಾಡಿದರು. ಇವರಲ್ಲಿ ವೈದ್ಯ ಫಿರೊಲಸ್, ಖಗೋಳ ಶಾಸ್ತ್ರಜ್ಞರಾದ ಹಿಪಾರ್ಕಸ್, ಟಾಲೆಮಿ, (ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂದು ಮೊದಲ ಬಾರಿಗೆ ಹೇಳಿದ) ಸಮೋಸ್‌ನ ಅರಿಸ್ಟಾರ್ಕಸ್[೪೦] ಮತ್ತು ಭೂಮಿಯ ಸುತ್ತಳತೆಯನ್ನು ನಿರ್ಧರಿಸಿದ ಗಣಿತಶಾಸ್ತ್ರಜ್ಞ ಮತ್ತು ಭೂಗೋಳ ಶಾಸ್ತ್ರಜ್ಞ ಎರ‍್ಯಾಟೊಸ್ತೆನೀಸ್ ಇವರನ್ನು ಹೆಸರಿಸಬೇಕು.[೪೧]

ಎಪಿಕ್ಟೆಟಸ್ ಮತ್ತು ಮಾರ್ಕಸ್ ಅರೀಲಿಯಸರು ಸ್ಟೋಯಿಕ್ ತತ್ವಶಾಸ್ತ್ರ ಪಂಥವನ್ನು, ಪ್ಲಾಟಿನಸ್ ನಿಯೊಪ್ಲೆಟಾನಿಸಂ ಅನ್ನು ತಮ್ಮ ಬರಹಗಳಲ್ಲಿ ನಿರೂಪಿಸಿದರು.

ಕಾದಂಬರಿಗಳು

[ಬದಲಾಯಿಸಿ]

ಆಧುನಿಕ ವಿದ್ವಾಂಸರ ಅಭಿಪ್ರಾಯದಲ್ಲಿ, ಕಾದಂಬರಿಯ ಪ್ರಾರಂಭದ ಮಾದರಿಯನ್ನು ಕ್ರಿ.ಶ. 2ನೆ ಶತಮಾನಕ್ಕೆ ಮೊದಲೇ ಗ್ರೀಸಿನಲ್ಲಿ ಕಾಣಬಹುದು. ನಿನಸ್ ರೊಮಾನ್ಸ್ ಎಂದು ಕರೆಯುವ ಗ್ರೀಕ್ ಕಾದಂಬರಿಯ ಭಾಗಗಳು ಉಳಿದು ಬಂದಿವೆ. ಇದು ನೀನಾಸ್ ಎನ್ನುತ ವೀರನ ಪ್ರೇಮದ ಕಥೆಯನ್ನು ಹೇಳುತ್ತದೆ.[೪೨] ಇದನ್ನು ಕ್ರಿ.ಪೂ. ಒಂದನೆಯ ಶತಮಾನದಲ್ಲಿ ಬರೆದಿರಬೇಕು. ಕ್ರಿ.ಶ ಎರಡನೆಯ ಮತ್ತು ಮೂರನೆಯ ಶತಮಾನಗಳಲ್ಲಿ ಬರೆದ ಐದು ಕಾದಂಬರಿಗಳು ಈಚೆಗೆ ಲಭ್ಯವಾಗಿದೆ. ಇವೆಲ್ಲ ಪ್ರಣಯದ ಮತ್ತು ಸಾಹಸಗಳ ಕಥೆಗಳನ್ನು ಹೇಳುತ್ತವೆ. ಕಷ್ಟಗಳನ್ನು ಅನುಭವಿಸಿದ ನಂತರ ಪ್ರಣಯಗಳು ಅಥವಾ ಗಂಡ ಹೆಂಡತಿಯರು ಮತ್ತೆ ಸೇರುತ್ತಾರೆ.

ಪೂರ್ವ ಕ್ರಿಶ್ಚನ್ ಯುಗ

[ಬದಲಾಯಿಸಿ]

ಅಭಿಜಾತ ಗ್ರೀಕ್ ಸಂಪ್ರದಾಯ ಮಧ್ಯಯುಗದ ಗ್ರೀಕ್ ಸಾಹಿತ್ಯಕ್ಕೂ, ಅನಂತರದ ರೋಮನ್ ಸಾಹಿತ್ಯಕ್ಕೂ ಮುಖ್ಯ ಪ್ರೇರಕಶಕ್ತಿಯಾಗಿ ಮುಂದುವರಿಯಿತು. ಕ್ರೈಸ್ತ ಧರ್ಮ ಸ್ಥಾಪಿತವಾದ ಮೇಲೆ ಅದರ ಚೈತನ್ಯದಾಯಕ ಪ್ರಬಲ ಶಕ್ತಿಗಳಿಂದಾಗಿ ಹೊಸಹೊಸ ಪ್ರಕಾರಗಳು, ವೈವಿಧ್ಯಮಯ ವಿಚಾರಗಳು ರೂಪುಗೊಂಡವು. ಹೊಸ ಒಡಂಬಡಿಕೆಯ ಸೃಷ್ಟಿಕರ್ತರಲ್ಲೊಬ್ಬನಾದ ಸೇಂಟ್ ಪಾಲ್[೪೩][೪೪] ಪ್ಯಾಲಸ್ಟೀನ್ ಸುವಾರ್ತೆಯನ್ನು ಗ್ರೀಕ್ ಲೋಕಕ್ಕೆ ಅರ್ಥವತ್ತಾಗಿ ಪರಿಚಯ ಮಾಡಿಕೊಟ್ಟು ಹೊಸ ಅಭಿವ್ಯಕ್ತಿಯ ಮಾರ್ಗಗಳನ್ನು ಸೂಚಿಸಿದ. ಆದರೆ ಪಾಲ್‌ಗೆ ಪ್ರೇರಣೆಯಾದ ಸೃಜನಶೀಲ ಶಕ್ತಿಗಳು ಅನಂತರದ ಕ್ರಿಶ್ಚನ್ ಅಪಾಸಲರ ತಲೆಮಾರಿನಲ್ಲಿ ಹೆಚ್ಚು ಕಾರ್ಯಪ್ರವೃತ್ತವಾದಂತೆ ಕಾಣಿಸುವುದಿಲ್ಲ. ಇದಕ್ಕೆ ನಿದರ್ಶನವಾಗಿ (ಹೊಸ ಒಡಂಬಡಿಕೆಯಲ್ಲಿ ಸೇರದೆ ಉಳಿದಿರುವ) ಪೂರ್ವ ಕ್ರಿಶ್ಚನ್ ಚರ್ಚಿನ ಧರ್ಮಪ್ರವರ್ತಕರ ಗ್ರೀಕ್ ಲೇಖನಗಳನ್ನು ನೋಡಬಹುದು. ಫಸ್ಟ್ ಎಪಿಸಲ್ ಆಫ್ ಕ್ಲೆಮಂಟ್ ಎನ್ನುವ ಪತ್ರದಲ್ಲಿ ಕಾರಿಂತಿಯನ್ ಚರ್ಚನ್ನು ಕುರಿತ ಖಂಡನೆ ಇದೆ. ಚರ್ಚಿನ ನಿಯಮಕ್ಕನುಸಾರವಾಗಿ ನೇಮಿತವಾಗಿದ್ದ ಪ್ರವಚನಾಧಿಕಾರಿಗಳನ್ನು ತೆಗೆದುಹಾಕಿದರೆಂಬುದೇ ಈ ಖಂಡನಾಪತ್ರಕ್ಕೆ ಮುಖ್ಯ ಪ್ರೇರಣೆ. ಈ ಪತ್ರ ಮೊದಲ ಕ್ರಿಶ್ಚನ್ ಶತಮಾನದ ಚರ್ಚುಗಳ ಇತಿಹಾಸದ ಮೇಲೆ ಬೆಳಕು ಹರಿಸುತ್ತದೆ. ಪಾಪದೋಷ, ತಪ್ಪೊಪ್ಪಿಗೆ, ಕ್ಷಮೆ, ಮುಂತಾದ ಕ್ರೈಸ್ತಧರ್ಮ ಸಮಸ್ಯೆಗಳನ್ನು ಕುರಿತ ಲೇಖನಗಳು ಆ ಕಾಲದ ಕೆಲವು ಗ್ರಂಥಗಳಲ್ಲಿ ಕಾಣಸಿಗುತ್ತವೆ. ಕ್ರಿ.ಪೂ. 130ರಲ್ಲಿ ಬರೆದ ಸೆಕಂಡ್ ಎಪಿಸಲ್ ಆಫ್ ಕ್ಲೆಮೆಂಟ್[೪೫] ಎಂಬ ಪ್ರವಚನದ ದ ಷೆಪರ್ಡ್ ಆಫ್ ಹೆರ್ಮಾಸ್ ಎಂಬ ಭಾಗದಲ್ಲಿ ಕ್ರಿಸ್ತಪೂರ್ವಯುಗದ ಪೇಗನ್ ಕಾದಂಬರಿಗಳಿಂದಲೂ, ಹಲವು ಬೇರೆಬೇರೆ ಲೌಕಿಕ ಗ್ರಂಥಗಳಿಂದಲೂ ಆರಿಸಿ ಸೇರಿಸಿದ ಕಲಬೆರಕೆಯ ಅಂಶಗಳಿವೆ. ಈ ರೀತಿಯ (ಎಪಿಸಲ್ಸ್) ಧಾರ್ಮಿಕ ಪತ್ರಗಳು, ಪ್ರವಚನಗಳು (ಸರ್ಮನ್ಸ್) ಮತ್ತು ಬೈಬಲಿನ ವ್ಯಾಖ್ಯಾನಗಳು, ಪೂರ್ವ ಕ್ರಿಶ್ಚನ್ ಚರ್ಚಿನ ಇತಿಹಾಸ ತಿಳಿಯಬೇಕೆನ್ನುವವರಿಗೆ ಸಾಕ್ಷ್ಯಾಧಾರವಾಗಿವೆ. ಆ ಕಾಲದಲ್ಲಿ ರಚಿತವಾದ ಅಪಾಲಜಿ ಎಂಬ ಧಾರ್ಮಿಕ ಲೇಖನಗಳಲ್ಲಿ ಕ್ರೈಸ್ತಧರ್ಮವನ್ನು ಸಕಾರಣವಾಗಿ ಸಮರ್ಥಿಸಲಾಗಿದೆ. ಅಂಥ ಲೇಖನಗಳನ್ನು ಬರೆದವರಲ್ಲಿ ಆರಿಸ್ಟಿಡೀಸ್ (ಕ್ರಿ.ಶ. 140), ಹುತಾತ್ಮ ಜಸ್ಟಿನ್ (150), ಅವನ ಶಿಷ್ಯ ಟೇಷಿಯನ್ (160), ಅಥೀನಾಗೊರಸ್ (177), ಓರೆಗಾನ್ ಮತ್ತು ಆಂಟಿಯೋಕಿನ ಥಿಯಾಫೈಲಸ್ ಮುಂತಾದವರ ಹೆಸರು ಹೇಳಬಹುದು.[೪೬] ಕ್ರೈಸ್ತಧರ್ಮವನ್ನು ಸಮರ್ಥಿಸಲು ಧರ್ಮಪ್ರವರ್ತಕರು ಹಲವೊಮ್ಮೆ ಯಹೂದ್ಯರ ಧರ್ಮಗ್ರಂಥಗಳಿಂದಲೇ ವಸ್ತುವನ್ನು ಆರಿಸಿಕೊಂಡರು. ಮೋಸೆ ರಚಿಸಿದನೆಂದು ಹೇಳಲಾದ ಹಳೆಯ ಒಡಂಬಡಿಕೆಯ ಮೊದಲ ಭಾಗದಿಂದ[೪೭] ಅವರು ತಮಗೆ ಬೇಕಾದ ಭಾಗಗಳನ್ನು ಬೇಕಾದಂತೆ ಬಳಸಿಕೊಂಡರು. ಸಿಸೆರೋ, ಲೂಸಿಯಾನ್ ಮುಂತಾದವರ ವಿಡಂಬನಾತ್ಮಕ ಲೌಕಿಕ ಬರೆಹಗಳನ್ನು ತಮ್ಮ ಧರ್ಮಜಿಜ್ಞಾಸೆಗಳಿಗೆ ಉಪಯೋಗಿಸಿಕೊಂಡರು. ಕ್ರಿ.ಪೂ. 2ನೆಯ ಶತಮಾನದ ವೇಳೆಗೆ ಅಪಾಲಜಿ ಎನ್ನುವ ಈ ಪ್ರಕಾರದ ಬರೆವಣಿಗೆ ಸ್ಪಷ್ಟವಾದ ಸಾಹಿತ್ಯಕ ಅಂಶಗಳನ್ನು ಮೈಗೂಡಿಸಿಕೊಂಡಿತೆನ್ನಬಹುದು. ಐರಿನೇಯಸ್, ಹಿಪ್ಪಾಲಿಟಸ್, ಅಲೆಗ್ಸಾಂಡ್ರಿಯದ ಕ್ಲೆಮಂಟ್ ಮುಂತಾದವರ ಬರೆಹಗಳಲ್ಲಿ ಬೌದ್ಧಿಕತೆ, ನೇರ ನಿಶಿತ ಶೈಲಿ ಮುಂತಾದ ಉತ್ತಮ ಸಾಹಿತ್ಯಕ ಅಂಶಗಳಿವೆ. 325 ಅಥವಾ 326ರಲ್ಲಿ ಯೂಸಿಬಿಯಸ್ ಆಫ್ ಸಿಸಾರಿಯೋ ರಚಿಸಿ ಮುಗಿಸಿದ ಎಕ್ಲೀಸಿಯಾಸ್ಟಿಕಲ್ ಹಿಸ್ಟೊರಿ[೪೮] ಕ್ರಿಶ್ಚನ್ ಧಾರ್ಮಿಕ ಸಾಹಿತ್ಯದ ಹಾಗೂ ಚರ್ಚಿನ ಚರಿತ್ರೆಯ ಒಂದು ಮುಖ್ಯ ಆಕರ ಗ್ರಂಥ.[೪೯] ಕ್ರಿಶ್ಚನ್ ಚರ್ಚಿನ ಅಧಿಕಾರವನ್ನು ಸಮರ್ಥಿಸುವ ಈ ಗ್ರಂಥಕ್ಕೆ ಪುರಾತನ ಗ್ರೀಕರ ಸಾಮ್ರಾಜ್ಯಶಾಹಿ ತತ್ತ್ವಗಳು ಸ್ಫೂರ್ತಿ ನೀಡಿದುವೆಂಬ ಮಾತು ಗಮನಾರ್ಹ.

ಮಧ್ಯ ಕ್ರಿಶ್ಚನ್ ಯುಗ

[ಬದಲಾಯಿಸಿ]

ಮಧ್ಯಯುಗದ ಕ್ರೈಸ್ತಸಾಹಿತಿಗಳು, ಪೂರ್ವ ಕ್ರಿಶ್ಚನ್ ಯುಗದ ಓರೆಗಾನ್ ಮತ್ತು ಕ್ಲೆಮಂಟರಂತೆ ಗ್ರೀಕ್ ಮತ್ತು ರೋಮನ್ ಅಭಿಜಾತ ಸಾಹಿತ್ಯ ಹಾಗೂ ಶಿಕ್ಷಣ ಪರಂಪರೆಯಿಂದ ಗ್ರಹಿಸಿದ ತತ್ತ್ವಗಳನ್ನು ಧರ್ಮಗ್ರಂಥಗಳ ರಚನೆಗಾಗಿ ಅಳವಡಿಸಿಕೊಂಡರು. ಕ್ರಿ.ಶ. 4ನೆಯ ಶತಮಾನದಲ್ಲಿ ಬರೆದ ದ ಬ್ಯಾಂಕ್ವೆಟ್ ಆಫ್ ಸೇಂಟ್ ಮೆಥೋಡಿಯಸ್ ಎಂಬ ಗ್ರಂಥ ಪ್ಲೇಟೊವಿನ ಸಂವಾದಗಳನ್ನೂ, 3ನೆಯ ಶತಮಾನದ ಗ್ರೀಕ್ ರೊಮಾನ್ಸ್‌ಗಳನ್ನೂ ಹೋಲುತ್ತದೆ. ಅಥೆನೇಷಿಯಸ್ ಎಂಬಾತ ಗ್ರೀಕ್ ಅಭಿಜಾತ ಸಾಹಿತ್ಯದಿಂದ ಆರಿಸಿದ ಉಲ್ಲೇಖಗಳ ಮೂಲಕ ದೈವೀಕರಣದ ತತ್ತ್ವವನ್ನು ಪಂಡಿತ ಪಾಮರರಿಗೆ ಅರ್ಥವಾಗುವಂತೆ ವಿವರಿಸಿದ್ದಾನೆ. ಒಟ್ಟಿನಲ್ಲಿ ಹೇಳುವುದಾದರೆ, ಈ ಯುಗದ ಧಾರ್ಮಿಕ ಅನುಯಾಯಿಗಳು ಗ್ರೀಕ್ ಅಭಿಜಾತ ಯುಗದ ವಾಗ್ಮಿಕಲೆ, ದರ್ಶನ, ಶಾಸ್ತ್ರಗಳಲ್ಲಿ ವಿಶೇಷ ಪಾಂಡಿತ್ಯ ಪಡೆದಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. Reece, Steve. "Orality and Literacy: Ancient Greek Literature as Oral Literature", in David Schenker and Martin Hose (eds.), Companion to Greek Literature (Oxford: Blackwell, 2015) 43-57. Archived 2020-01-01 ವೇಬ್ಯಾಕ್ ಮೆಷಿನ್ ನಲ್ಲಿ..
  2. https://www.britishmuseum.org/blog/who-was-homer
  3. Heiden, Bruce. "Scholarship, 18th Century". In Finkelberg (2012). doi:10.1002/9781444350302.wbhe1311
  4. Heiden, Bruce. "Scholarship, 19th Century". In Finkelberg (2012). doi:10.1002/9781444350302.wbhe1312
  5. Nagy, Gregory (2020). Plato's Rhapsody and Homer's Music: The Poetics of the Panathenaic Festival in Classical Athens. Online: Harvard University Center for Hellenic Studies.
  6. West 1966, p. 45.
  7. West (1974, p. 10).
  8. West (1992).
  9. https://fiveable.me/classical-poetics/unit-3/forms-functions-greek-lyric-poetry/study-guide/BAf22p3wLxrvir94
  10. https://www.cambridge.org/core/books/abs/cambridge-history-of-classical-literature/monody/3A841448EBD6535EED5CDAF1D6A3DEC2
  11. Durant, Will (1966). The Story of Civilization: The Life of Greece. p. 75.
  12. fr. 129
  13. Britannica Editors. "Stesichorus". Encyclopedia Britannica, 9 Apr. 2024, https://www.britannica.com/biography/Stesichorus. Accessed 7 November 2025.
  14. D. Campbell, Greek Lyric Poetry, Bristol Classical Press (1982), page 379
  15. https://classics-at.chs.harvard.edu/wp-content/uploads/2023/02/fdrafts-baltzoi.pdf
  16. Easterling (1989) 2; Sinisi & Innamorati (2003) 3. Cf. Horace Ars Poetica 275ff Archived 27 January 2022 ವೇಬ್ಯಾಕ್ ಮೆಷಿನ್ ನಲ್ಲಿ..
  17. West 2007, p. 293.
  18. Hansen 2004, p. 279.
  19. Riggs 2014, p. 233.
  20. Brockett (1999, 17)
  21. Kuritz (1988), p. 21
  22. https://www.researchgate.net/profile/Ajit_Nayak3/publication/272497530_Heraclitus_540-480_BC/links/54e7106e0cf277664ff77c36/Heraclitus-540-480-BC.pdf
  23. Rawlinson (1859), p. 6
  24. Gould (1989), p. 64
  25. Clifford Orwin, The Humanity of Thucydides, Princeton, 1994.
  26. Schroeder, Chad Matthew (2016-12-09). "Review of: A Guide to Hellenistic Literature. Blackwell Guides to Classical Literature". Bryn Mawr Classical Review. ISSN 1055-7660.
  27. Brickhouse, Thomas and Smith, Nicholas D. Plato (c. 427–347 BC), The Internet Encyclopedia of Philosophy, University of Tennessee, cf. Dating Plato's Dialogues.
  28. https://www.museodelprado.es/en/the-collection/art-work/aeschylus-o-aeschines/a49c27ed-2b0d-4eaf-ae21-da45be6c7e95
  29. Britannica Editors. "comedy of manners". Encyclopedia Britannica, 25 Dec. 2023, https://www.britannica.com/art/comedy-of-manners. Accessed 31 October 2025.
  30. Becker, Lawrence (2003). A History of Western Ethics. New York: Routledge. p. 27. ISBN 978-0415968256.
  31. Plutarch, Demetrius 8; Dionysius of Halicarnassus, Dinarchus 3.
  32. Aelian, Varia Historia, iii. 17.
  33. Tracy, Stephen V. (2000). "Demetrius of Phalerum: Who was He and Who was He Not?". Demetrius of Phalerum. Rutgers University Studies in Classical Humanities. Vol. IX Zlocation=New Brunswick, NJ. pp. 331-345..
  34. Encyclopædia Britannica, s.v. Theocritus.
  35. Gutzwiller 2007, p. 63.
  36. Parsons 2015.
  37. Gutzwiller 2007, p. 60.
  38. Gutzwiller 2007, p. 62.
  39. "Plutarch". Oxford Dictionary of Philosophy.
  40. Heath, Thomas (1913), p. 302. The italics and parenthetical comments are as they appear in Thomas Little Heath's original. From Arenarius, 4–5. In the original: "κατέχεις δέ, διότι καλείται κόσμος ὑπὸ μὲν τῶν πλείστων ἀστρολόγων ἁ σφαῖρα, ἇς ἐστι κέντρον μὲν τὸ τᾶς γᾶς κέντρον, ἁ δὲ ἐκ τοῦ κέντρου ἴσα τᾷ εὐθείᾳ τᾷ μεταξὺ τοῦ κέντρου τοῦ ἁλίου καὶ τοῦ κέντρου τᾶς γᾶς. ταῦτα γάρ ἐντι τὰ γραφόμενα, ὡς παρὰ τῶν ἀστρολόγων διάκουσας. ̓Αρίσταρχος δὲ ό Σάμιος ὑποθεσίων τινων ἐξέδωκεν γραφάς, ἐν αἷς ἐκ τῶν ὑποκειμένων συμβαίνει τὸν κόσμον πολλαπλάσιον εἶμεν τοῦ νῦν εἰρημένου. ὑποτιθέται γὰρ τὰ μὲν ἀπλανέα τῶν ἄστρων καὶ τὸν ἅλιον μένειν ἀκίνητον, τὰν δὲ γᾶν περιφερέσθαι περὶ τὸν ἅλιον κατὰ κύκλου περιφέρειαν, ὅς ἐστιν ἐν μέσῳ τῷ δρόμῳ κείμενος, τὰν δὲ τῶν ἀπλανέων ἄστρων σφαῖραν περὶ τὸ αὐτὸ κἐντρον25 τῷ ἁλίῳ κειμέναν τῷ μεγέθει ταλικαύταν εἶμεν, ὥστε τὸν κύκλον, καθ’ ὃν τὰν γᾶν ὑποτιθέται περιφερέσθαι, τοιαύταν ἔχειν ἀναλογίαν ποτὶ τὰν τῶν ἀπλανέων ἀποστασίαν, οἵαν ἔχει τὸ κέντρον τᾶς σφαίρας ποτὶ τὰν επιφάνειαν." Heath mentions a proposal of Theodor Bergk that the word "δρόμῳ" ("orbit") may originally have been "ὀυρανῷ" ("heaven", thus correcting a grammatical incongruity) so that instead of "[the sun] lying in the middle of the orbit" we would have "[the circle] lying in the middle of the heaven".
  41. Russo, Lucio (2004). The Forgotten Revolution: How Science Was Born in 300 BC and Why It Had to Be Reborn. Berlin: Springer. p. 68. ISBN 3-540-20396-6. OCLC 52945835. Archived from the original on 2024-08-28. Retrieved 2024-08-28.
  42. Daphnis and Chloe. Love Romances and Poetical Fragments. Fragments of the Ninus Romance, Loeb Classical Library ISBN 0-674-99076-5
  43. Sanders 2019.
  44. Dunn 2001, p. 577, Ch 32.
  45. Holmes 2007, pp. 132–35, Second Clement
  46. Goodspeed, Edgar J. (1966). A History of Early Christian Literature: Revised and Enlarged by Robert M. Grant. Chicago: Chicago University Press. pp. 97–188. ISBN 0226303861.
  47. Robinson, George (2008). Essential Torah: A Complete Guide to the Five Books of Moses (in ಇಂಗ್ಲಿಷ್). Knopf Doubleday Publishing Group. p. 97. ISBN 978-0-307-48437-6.
  48. https://www.historyofinformation.com/detail.php?id=3357
  49. Chesnut, Glenn F. (1986), "Introduction", The First Christian Histories: Eusebius, Socrates, Sozomen, Theodoret, and Evagrius


ಗ್ರಂಥಸೂಚಿ

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: