ಪ್ರಾಚೀನ ಗ್ರೀಕ್ ವಾಸ್ತುಶಿಲ್ಪ

ಪ್ರಾಚೀನ ಗ್ರೀಕ್ ವಾಸ್ತುಶಿಲ್ಪವು ಗ್ರೀಕರಿಂದ ಬಂದಿತು. ಇವರ ಸಂಸ್ಕೃತಿಯು ಗ್ರೀಕ್ ಮುಖ್ಯ ಭೂಭಾಗದಲ್ಲಿ, ಪೆಲೊಪೊನೀಸ್, ಮತ್ತು ಈಜಿಯನ್ ದ್ವೀಪಗಳಲ್ಲಿ, ಮತ್ತು ಅನಟೋಲಿಯಾ ಹಾಗೂ ಇಟಲಿಯಲ್ಲಿನ ವಸಾಹತುಗಳಲ್ಲಿ ಸುಮಾರು ಕ್ರಿ.ಪೂ. ೯೦೦ ರಿಂದ ಕ್ರಿ.ಶ. ೧ನೇ ಶತಮಾನದವರೆಗೆ ಏಳಿಗೆ ಹೊಂದಿತ್ತು. ಉಳಿದುಕೊಂಡಿರುವ ಅತ್ಯಂತ ಮುಂಚಿನ ವಾಸ್ತು ಕೃತಿಗಳು ಸುಮಾರು ಕ್ರಿ.ಪೂ. ೬೦೦ ರಷ್ಟು ಕಾಲದ್ದೆಂದು ನಿರ್ಣಯಿಸಲಾಗಿದೆ.[೧]
ಪಾಶ್ಚಾತ್ಯ ಕಲೆ, ವಾಸ್ತುಶಿಲ್ಪ ಬಹು ಮಟ್ಟಿಗೆ ಗ್ರೀಕ್ ಶೈಲಿಯಿಂದ ಪ್ರೇರಿತವಾಗಿವೆ.
ಗ್ರೀಕರ ಕಲೆ, ವಾಸ್ತು, ಶಿಲ್ಪಗಳನ್ನು ಗ್ರೀಸ್‍ನ ಇತಿಹಾಸದ ಚಾರಿತ್ರಿಕ ಹಿನ್ನೆಲೆಯಲ್ಲಿ ಕಾಣಬೇಕು.
ವಾಸ್ತು
[ಬದಲಾಯಿಸಿ]ಯೂರೋಪಿನ ವಾಸ್ತು ಬಹಳಮಟ್ಟಿಗೆ ಪ್ರಭಾವಿತವಾಗಿರುವುದು ಗ್ರೀಕ್ ವಾಸ್ತುವಿನಿಂದಲೇ. ಗ್ರೀಸಿನ ಪ್ರಾಚೀನ ನಾಗರಿಕ ಜೀವನಕ್ಕೆ ಸಂಬಂಧಿಸಿದ ಕಟ್ಟಡಗಳು - ವಾಸದ ಮನೆಗಳು, ಅರಮನೆಗಳು, ಇತ್ಯಾದಿ - ಹೆಚ್ಚಿಗೆ ಉಳಿದಿಲ್ಲ. ಉಳಿದಿರುವುವೆಲ್ಲ ದೇವಾಲಯದ ಅವಶೇಷಗಳೇ. ದೇವಾಲಯದ ವಿನ್ಯಾಸ, ಅವುಗಳಲ್ಲಿಯ ಸ್ತಂಭ ಶೈಲಿಗಳು ಕ್ರಿ.ಪೂ. 1600 ರಷ್ಟು ಪ್ರಾಚೀನ. ಕ್ರಿ.ಪೂ.1000 ದಷ್ಟು ಕಾಲದಿಂದ ಕ್ರಿ.ಶ. 150ರ ವರೆಗಿನ ಕಾಲದ ಸುಮಾರು 150 ದೇವಾಲಯಗಳ ಅವಶೇಷಗಳು ಗೋಚರವಾಗಿವೆ.
ಆದರೆ ಕ್ರೀಟನರ ರಾಜಧಾನಿಯಾಗಿದ್ದ ನಾಸಸ್‌ನ ಭವ್ಯ ಅರಮನೆಯ ಅವಶೇಷಗಳನ್ನು ಬ್ರಿಟಿಷ್ ಪುರಾತತ್ತ್ವಶಾಸ್ತ್ರಜ್ಞ ಆರ್ಥರ್ ಎವನ್ಸ್ ಇಪ್ಪತ್ತನೇ ಶತಮಾನದ ಆರಂಭದಲ್ಲಿ ಶೋಧಿಸಿದ.[೨][೩] ಗ್ರೀಕ್ ಇತಿಹಾಸವನ್ನರಿಯುವಲ್ಲಿ ಇದೊಂದು ಮಹತ್ತ್ವಪೂರ್ಣವಾದ ಸಾಧನೆ. ಇಲ್ಲಿಯ ಅರಮನೆಯನ್ನು ಮೊದಲು ಕಟ್ಟಿದ್ದು ಕ್ರಿ.ಪೂ. ಸು. 2100 ರಲ್ಲಿ. ಒಂದು ಶತಮಾನದೊಳಗೆ ಇದು ನಾಶಹೊಂದಿತು. ಕ್ರಿ.ಪೂ. 17 ನೆಯ ಶತಮಾನದಲ್ಲಿ ಇದನ್ನು ಮತ್ತೆ ಕಟ್ಟಲಾಯಿತು. ಆಗ ಇದರೊಂದಿಗೆ ಇನ್ನೂ ನೂರಾರು ಕಟ್ಟಡಗಳು ಆ ದ್ವೀಪದ ಬೇರೆ ಬೇರೆ ನಗರಗಳಲ್ಲಿ ತಲೆ ಎತ್ತಿದುವು. 20,000 ಚದರ ಅಡಿಗಳಷ್ಟು ವಿಸ್ತಾರವಾದ ಅಂಗಳದ ಸುತ್ತಲೂ ಮೂರು ನಾಲ್ಕು ಅಂತಸ್ತುಗಳಲ್ಲಿ ಕಟ್ಟಲಾದ ನಾಸಸ್ ಅರಮನೆ ಅಂದಿನ ವಾಸ್ತುವಿನ ಒಂದು ಚಮತ್ಕಾರ. ಲೋಹಗಳು ಮತ್ತು ಅಮೃತಶಿಲೆಯೂ, ಕಲ್ಲುಗಳೂ ಹೆಚ್ಚು ದೊರಕದಿದ್ದುದರಿಂದ ಕಟ್ಟಡಕ್ಕೆ ಸುಣ್ಣಕಲ್ಲು ಮತ್ತು ಜಿಪ್ಸಮ್ ಉಪಯೋಗಿಸಲಾಗಿತ್ತು. ತಳಪಾಯದಲ್ಲಿ ಮತ್ತು ನೆಲದ ಅಂತಸ್ತಿನಲ್ಲಿ ಚೌಕಾಕಾರದ ಕಲ್ಲುಕಂಬಗಳನ್ನು ನಿಲ್ಲಿಸಿ ಅದರ ಮೇಲೆ ಸೈಪ್ರಸ್ ಮತ್ತು ಸಿಡಾರ್ ಮರದ ಕಂಬಗಳನ್ನೂ, ಬೋದಿಗೆಗಳನ್ನೂ ಹೊದಿಸಿ ಕಲ್ಲಿನ ಕೊರತೆಯನ್ನು ತುಂಬಿಕೊಳ್ಳಲಾಗಿತ್ತು. ಅರಮನೆಯ ಕೊಠಡಿಗಳಲ್ಲಿ ವರ್ಣಚಿತ್ರಗಳನ್ನೂ, ಪ್ರತಿಮೆಗಳನ್ನೂ, ಕಲಾತ್ಮಕ ಪಾನಪತ್ರೆಗಳನ್ನೂ ಇರಿಸಿ ಅವನ್ನು ಸಣ್ಣ ಕಲಾಶಾಲೆಗಳನ್ನಾಗಿ ಮಾರ್ಪಡಿಸಲಾಗಿತ್ತು. ಇವುಗಳನ್ನು ನೋಡಿದಾಗ ಅಂದಿನ ಜನಾಂಗದ ಭೋಗಜೀವನ, ಕಲಾಭಿಜ್ಞತೆ, ಅಭಿರುಚಿಗಳ ಪರಿಚಯವಾಗುತ್ತದೆ. ಭೂಕಂಪ, ಪರಕೀಯರ ದಾಳಿ, ಅಂತಃಕಲಹ ಮುಂತಾದ ಕಾರಣಗಳಿಂದಾಗಿ ಇಂಥ ಭವ್ಯ ನಾಗರಿಕತೆಯೂ ಕುಸಿಯಿತು. ಅದರೊಂದಿಗೆ ಕಟ್ಟಡಗಳೂ ಅಳಿದುವು. ಕಪ್ಪು ಯುಗದಲ್ಲಿ ಗ್ರೀಕ್ ದೇವಾಲಯಗಳಿದ್ದರೂ ಅವು ಮರದಿಂದ ಕಟ್ಟಲ್ಪಟ್ಟವು. ಕ್ರಿ. ಪೂ. 6 ನೆಯ ಶತಮಾನದ ಅನಂತರ ಕಲ್ಲಿನ ಕಟ್ಟಡಗಳು ಬಂದುವು. ಕಟ್ಟಡಗಳ ಕೆಳಗಿನ ತಳಪಾಯದಿಂದ ಚಾವಣಿಯವರೆಗೆ ಎಲ್ಲವೂ ಕ್ರಮೇಣ ಶಿಲಾಮಯವಾದುವು. ಕ್ರಿ.ಪೂ. 479 ರಲ್ಲಿ ಪರ್ಷಿಯನ್ ಕದನಗಳು ಮುಗಿದಾಗ ಅಥೆನ್ಸ್ ನಗರ ನೆಲಸಮವಾಗಿತ್ತು.[೪][೫][೬] ಯುದ್ಧದಿಂದ ಹಿಂದಿರುಗಿದ ಪ್ರಜೆಗಳು ಮೊದಲು ತಮ್ಮ ವಾಸಗೃಹಗಳನ್ನೂ, ಅನಂತರ ಸೈನ್ಯ ಸಂಬಂಧವಾದ ಕಟ್ಟಡಗಳನ್ನೂ ಕಟ್ಟಿದರು. ಕ್ರಿ.ಪೂ. 461 ರಲ್ಲಿ ಪ್ರಜಾನಾಯಕನಾಗಿ ಬಂದ ಪೆರಿಕ್ಲೀಸ್ ನೂತನ ಯುಗವೊಂದರ ಪ್ರವರ್ತಕನಾದ. ಗ್ರೀಕ್ ಸಂಸ್ಕೃತಿ ವೈಭವದ ಶಿಖರನ್ನೇರಿದ್ದು ಇವನ ಕಾಲದಲ್ಲಿ. ದೇಶದಲ್ಲಿ ಸ್ಥಿರತೆ, ಶಾಂತಿಗಳನ್ನು ನೆಲೆಗೊಳಿಸಿದ ಬಳಿಕ ಈತ ತನ್ನ ಗಮನವನ್ನೆಲ್ಲ ಅಲ್ಲಿ ದೇವಾಲಯಗಳನ್ನು ಕಟ್ಟಿಸುವುದರತ್ತ ಹರಿಸಿದ. ಅಥೆನ್ಸ್ ನಗರದ ದುರ್ಗ ಕಡಿದಾದ ಗುಡ್ಡವೊಂದರ ಮೇಲಿದೆ. 1000 x 500 ಚ.ಅ. ಪ್ರದೇಶವನ್ನು ಸಮತಲ ಮಾಡಿಸಿ ಅಲ್ಲಿ ಈತ ಪಾರ್ಥಿನಾನ್, ಪ್ರಾಪಿಲೀಯ, ಆಥಿನ ನೈಕ್ ಮತ್ತು ಎರಕ್ತಿಯಮ್ ಗುಡಿಗಳನ್ನು ಕಟ್ಟಿಸಿದ.[೭] ಈ ನಾಲ್ಕು ಕಟ್ಟಡಗಳ ವಿನ್ಯಾಸ, ಅಲಂಕರಣ ಮುಂತಾದುವುಗಳ ಹೊಣೆಯನ್ನು ಹೊತ್ತವನು ಪೆರಿಕ್ಲೀಸನ ಮಿತ್ರನಾದ ಶಿಲ್ಪಿ ಫಿಡಿಯಸ್.[೮] ಈ ಶಿಲ್ಪಿ ಕಡೆದ ಆಥಿನ ವಿಗ್ರಹವನ್ನು ಸ್ಥಾಪಿಸಲೆಂದೇ ಪರ್ಥಿನಾನ್ ದೇವಾಲಯವನ್ನು ಕಟ್ಟಿಸಿದ್ದು.
ಕಲ್ಲುಗಳನ್ನು ನಾಜೂಕಾಗಿ ಕತ್ತರಿಸಿ, ಗಾರೆಯನ್ನು ಬಳಸದೆ ಅವನ್ನು ಒಂದರ ಮೇಲೊಂದು ಜೋಡಿಸಿದಾಗ ಅವು ದೂರಕ್ಕೆ ಒಂದೇ ಕಲ್ಲಾಗಿರುವಂತೆ ಭಾಸವಾಗುತ್ತಿತ್ತು. ಈ ತುಂಡುಗಳ ನಡುವೆ ವರ್ತುಲನಾಳಿಯನ್ನು ಕೊರೆದು ಅದರಲ್ಲಿ ಆಲಿವ್ ಮರದ ನಳಿಕೆಯನ್ನು ತಿರುಗಿಸಿದಾಗ ಎರಡು ಕಲ್ಲುಗಳನ್ನು ಒಂದಕ್ಕೊಂದು ನಯವಾಗಿ ಕೊರೆದುಕೊಂಡು ಭದ್ರವಾಗಿ ಸೇರಿಕೊಳ್ಳುತ್ತಿದ್ದುವು. ಗ್ರೀಕರ ವಾಸ್ತುವಿನ ವೈಶಿಷ್ಟ್ಯ ಇರುವುದು ಅದರ ಕಂಬಗಳಲ್ಲಿ. ಅವುಗಳಲ್ಲಿ ಡೋರಿಕ್, ಐಯೋನಿಕ್ ಮತ್ತು ಕಾರಿಂತಿಯನ್ ಎಂಬ ಮೂರು ಪ್ರತ್ಯೇಕ ಶೈಲಿಗಳನ್ನು ಗುರುತಿಸಬಹುದು. ದೇವಾಲಯದಲ್ಲಿ ದೇವತೆಯ ಒಂದು ದೊಡ್ಡ ಪ್ರತಿಮೆ ಪ್ರಮುಖ ಆಕರ್ಷಣೆ. ದೀರ್ಘ ಚತುರಸ್ರಾಕಾರದ ಕಟ್ಟಡವನ್ನು ಕಟ್ಟುತ್ತಿದ್ದರು. ಇದು ಮೊದಲು ಉದ್ದವಾಗಿ ಇಕ್ಕಟ್ಟಾಗಿತ್ತು. ಒಳಗಿನ ಮೂರ್ತಿ ಚೆನ್ನಾಗಿ ಕಾಣುವಂತೆ ಕ್ರಮೇಣ ಇದರ ಅಗಲವನ್ನು ಹೆಚ್ಚಿಸಲಾಯಿತು. ತಗ್ಗಾದ ಸಮತಲ ಜಗುಲಿಯ ಮೇಲೆ ಆಲಯದ ಕಂಬಗಳನ್ನು ನಿಲ್ಲಿಸಲಾಗಿತ್ತು. ಈ ಜಗುಲಿಗೆ ಮೂರು ಮೆಟ್ಟಲುಗಳಿದ್ದುವು. ಈ ಮೆಟ್ಟಲುಗಳು ಸಮತಲ ಸಿದ್ಧಾಂತವನ್ನನುಸರಿಸಿ ಕಟ್ಟಿದುವು. ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾಪಥವಿತ್ತು. ಇದರ ಎರಡೂ ಕಡೆ ಕಂಬಗಳ ಸಾಲು. ಕಟ್ಟಡದ ಚಾವಣಿ ತ್ರಿಕೋನಾಕಾರದಲ್ಲಿ ಚಂದಾಯದಲ್ಲಿತ್ತು. ಗ್ರೀಕ್ ವಾಸ್ತುಶಿಲ್ಪದಲ್ಲಿ ಕಮಾನಿನ ಬಳಕೆಯೆ ಇರಲಿಲ್ಲ. ಕಂಬಗಳು ಮಧ್ಯಭಾಗದಲ್ಲಿ ತುಸು ಉಬ್ಬಿದ್ದು ಮೇಲಕ್ಕೆ ಹೋದಂತೆಲ್ಲ ಕ್ರಮೇಣ ಸಣ್ಣದಾಗುತ್ತಿತ್ತು. ಸ್ತಂಭಗಳು ಹಾಸುಗಲ್ಲುಗಳನ್ನವಲಂಬಿಸಿದ್ದುವು. ಕಟ್ಟಡದ ಶೈಲಿಯನ್ನು ಇವುಗಳಿಂದ ಗುರುತಿಸಬಹುದು. ಕಂಬದ ಬೋದಿಗೆಯಂತೂ ಒಂದೊಂದು ಶೈಲಿಯಲ್ಲೂ ಭಿನ್ನವಾಗಿದ್ದು ನಿರ್ಣಯಾತ್ಮಕ ಅಂಶವಾಗಿತ್ತು. ಡೋರಿಕ್ ಶೈಲಿಯ ಕಂಬದ ಉದ್ದ ಅದರ ವ್ಯಾಸದ ನಾಲ್ಕರಷ್ಟು ಇರುತ್ತಿತ್ತು. ರೋಮನ್ನರು ಅಳವಡಿಸಿಕೊಂಡ ಡೋರಿಕ್ ಶೈಲಿಯಲ್ಲಿ ಉದ್ದ ವ್ಯಾಸದ ಆರರಿಂದ ಏಳರಷ್ಟು ಇರುತ್ತಿತ್ತು.[೯] ಐಯೊನಿಕ್ ಕಂಬಗಳಿಗೆ ಸಣ್ಣ ಪಾದ ಇದ್ದು, ಕಂಬಗಳಲ್ಲಿ ಅರೆಗೊಳವಿಗಳು ಡೋರಿಕ್ ಕಂಬಗಳದವಕ್ಕಿಂತ ಭಿನ್ನವಾಗಿದ್ದುವು. ಕಂಬದ ಬೋದಿಗೆಯಲ್ಲಿ ಸುರುಳಿಯ ಅಲಂಕಾರವಿತ್ತು. ಕಾರಿಂತಿಯನ್ ಶೈಲಿ ಗ್ರೀಕರ ಕೊಡುಗೆಯಾದರೂ ಅವರು ಅದನ್ನು ಬಹಳವಾಗಿ ಉಪಯೋಗಿಸಲಿಲ್ಲ.[೧೦] ಆದರೆ ಅನಂತರದ ರೋಮನ್ನರ ಕಾಲದಲ್ಲಿ ಈ ಶೈಲಿ ಬಹಳ ಜನಪ್ರಿಯವಾಯಿತು. ಈ ಶೈಲಿಯಲ್ಲಿ ಕಂಬದ ಬೋದಿಗೆಯ ಮಧ್ಯಭಾಗ ಘಂಟೆಯ ಆಕಾರದಲ್ಲಿತ್ತು. ಅದರ ಮೇಲೆ ಒಂದು ಮಣಿಚೌಕಟ್ಟನ್ನು ಕೂಡಿಸಲಾಗಿತ್ತು. ಈ ಘಂಟೆಯ ಕೆಳಭಾಗದಲ್ಲಿ ಪತ್ರಾಕೃತಿಯ ಅಲಂಕಾರವಿರುತ್ತಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ Boardman et al. 1967.
- ↑ McEnroe, John C. (2010). Architecture of Minoan Crete: Constructing Identity in the Aegean Bronze Age. Austin: University of Texas Press. p. 50.
- ↑ Watrous, L. Vance (2021). Minoan Crete: An Introduction. Cambridge University Press. pp. 21–26. ISBN 9781108440493.
- ↑ Lynch, Kathleen M. (2011). The Symposium in Context: Pottery from a Late Archaic House Near the Athenian Agora. ASCSA. pp. 20–21, and Note 37. ISBN 9780876615461.
- ↑ Holland, pp. 305–306.
- ↑ Barringer, Judith M.; Hurwit, Jeffrey M. (2010). Periklean Athens and Its Legacy: Problems and Perspectives. University of Texas Press. p. 295. ISBN 9780292782907.
- ↑ Not mentioned in Plutarch's list and the conventional date of the start of construction is after Perikles' death, however J.M Hurwitt, The Acropolis in the Age of Pericles 2004, p. 174 conjectures that the inception of the building dates to the 430s.
- ↑ J. M. Hurwit, The Acropolis in the Age of Pericles, 87 etc.
- ↑ "... they measured a man's foot, and finding its length the sixth part of his height, they gave the column a similar proportion, that is, they made its height, including the capital, six times the thickness of the shaft, measured at the base. Thus the Doric order obtained its proportion, its strength, and its beauty, from the human figure." (Vitruvius, iv.6) "The successors of these people, improving in taste, and preferring a more slender proportion, assigned seven diameters to the height of the Doric column." (Vitruvius, iv.8)
- ↑ Summerson, 124
ಗ್ರಂಥಸೂಚಿ
[ಬದಲಾಯಿಸಿ]- Holland, Tom (2006). Persian Fire: The First World Empire and the Battle for the West. Abacus, ISBN 0-385-51311-9.
- Hurwit, Jeffrey M. (2004). The Acropolis in the Age of Pericles. Cambridge University Press. ISBN 978-0-521-82040-0.
- Summerson, John, The Classical Language of Architecture, 1980 edition, Thames and Hudson World of Art series, ISBN 0500201773
- Boardman, John; Dorig, Jose; Fuchs, Werner; Hirmer, Max (1967). The Art and Architecture of Ancient Greece. London: Thames and Hudson.
