ಪ್ರಾಚೀನ ಗ್ರೀಕ್ ನ್ಯಾಯ
ಮೂರು ಸಾವಿರ ವರ್ಷಗಳಿಗೂ ದೀರ್ಘವಾದ ಇತಿಹಾಸ ಪಡೆದಿರುವ ಗ್ರೀಸ್ ದೇಶ ಪಾಶ್ಚಾತ್ಯ ಸಂಸ್ಕೃತಿಯ ತೊಟ್ಟಿಲು ಎಂದು ಪರಿಗಣಿತವಾಗಿದೆ. ಒಂದು ದೇಶದ ಸಂಸ್ಕೃತಿಯ ಪ್ರಮುಖ ಲಕ್ಷಣಗಳಲ್ಲಿ ಅದರ ನ್ಯಾಯಸೂತ್ರಗಳೂ ಸೇರಿರುತ್ತವೆ. ಪ್ರಪಂಚದ ಚರಿತ್ರೆಯಲ್ಲಿ ವಿಶಿಷ್ಟವಾದಂಥ ಗುರುಶಿಷ್ಯಪರಂಪರೆಯ - ಸಾಕ್ರಟೀಸ್, ಪ್ಲೇಟೊ, ಅರಿಸ್ಟಾಟಲ್, ಅಲೆಗ್ಸಾಂಡರ್ ಇವರ-ವೈಚಾರಿಕ ಕೊಡುಗೆಗಳಲ್ಲಿ ಗ್ರೀಸ್ ದೇಶದಲ್ಲಿದ್ದ ನ್ಯಾಯದ ರೂಪರೇಷೆಗಳನ್ನು ಕಾಣಬಹುದು. ಅವರಿಗೂ ಹಿಂದಿನ ಕಾಲದ ಗ್ರೀಕ್ ನ್ಯಾಯದ ಸ್ವರೂಪವನ್ನು ಹೋಮರನ ಇಲಿಯಡ್ ಮತ್ತು ಆಡಿಸಿ ಮಹಾಕಾವ್ಯಗಳಿಂದ ತಿಳಿಯಬಹುದು. ವಿಶ್ವದ ಪ್ರಮುಖ ನ್ಯಾಯವ್ಯವಸ್ಥೆಗಳಲ್ಲಿ ಗ್ರೀಕ್ ನ್ಯಾಯವೂ ಒಂದು. ಇದು ಒಂದು ಪ್ರಾಚೀನ ಕುರುಹು ಆಗಿರದೇ ಜೀವಂತ ಸಂಪ್ರದಾಯವಾಗಿದೆ. ಗ್ರೀಕ್ ನ್ಯಾಯದ ಇತಿಹಾಸವನ್ನು ಐದು ಪ್ರಮುಖ ಘಟ್ಟಗಳನ್ನಾಗಿ ಪರಿಗಣಿಸುವುದುಂಟು:
- ಪ್ರಾಚೀನ ಯುಗ (ಗ್ರೀಸ್ ದೇಶ ರೋಮನ್ ಸಾಮ್ರಾಜ್ಯದ ಪ್ರಾಂತ್ಯವಾಗುವವರೆಗೆ),
- ಹೆಲೆನಿಸ್ಟಿಕ್ ಯುಗ (ಬಿಜ಼ಾಂಟಿನ್ ಸಾಮ್ರಾಜ್ಯ ಸ್ಥಾಪನೆಯವರೆಗೆ),
- ಬಿಜ಼ಾಂಟಿನ್ ಯುಗ (ಕಾನ್‍ಸ್ಟಾಂಟಿನೋಪಲ್ ನಗರದ ಪತನದವರೆಗೆ),
- ಬಿಜ಼ಾಂಟಿನ್ ಅನಂತರದ ಯುಗ (1821ರ ಗ್ರೀಕ್ ಕ್ರಾಂತಿಯವರೆಗೆ) ಮತ್ತು
- ಆಧುನಿಕ ಯುಗ (1821ರ ಗ್ರೀಕ್ ಸ್ವಾತಂತ್ರ್ಯ ಸಮರದಿಂದ ಈಚೆಗೆ).
ಪ್ರಾಚೀನ ಯುಗ
[ಬದಲಾಯಿಸಿ]ಗ್ರೀಸ್ ದೇಶದ ನಗರರಾಜ್ಯಗಳ ಉದಯದ ಕಾಲದಿಂದ ಗ್ರೀಕ್ ನ್ಯಾಯ ವ್ಯವಸ್ಥಿತವಾಗಿ ಬೆಳೆದಿದೆ. ಅದಕ್ಕೆ ಮುಂಚೆ ಗ್ರೀಕ್ ನ್ಯಾಯಪದ್ಧತಿಗೆ ಪಂಗಡದ ಅಥವಾ ಬುಡಕಟ್ಟಿನ ನಿಯಮಗಳು ಮತ್ತು ಕಟ್ಟಳೆಗಳು ಆಧಾರವಾಗಿದ್ದವು. ಬಂಧುತ್ವದ ಗುಂಪುಗಳಲ್ಲಿಯ ವ್ಯಾಜ್ಯಗಳನ್ನು ಸಾಧಾರಣವಾಗಿ ಪರಸ್ಪರ ಹೊಂದಾವಣೆಯ ಒಡಂಬಡಿಕೆಗಳ ಮೂಲಕ ಇತ್ಯರ್ಥಗೊಳಿಸಿಕೊಳ್ಳಲಾಗುತ್ತಿತ್ತು. ಪಂಗಡಗಳ ನಾಯಕರು, ರಾಜರು ಆಗಿನ ಕಾಲದಲ್ಲಿ ವ್ಯಾಜ್ಯಗಳನ್ನು ಬಗೆಹರಿಸುತ್ತಿದ್ದರು. ಪಂಗಡಗಳಲ್ಲಿ ಒಮ್ಮತವನ್ನು ಕಾಯ್ದುಕೊಳ್ಳಲು ಮತ್ತು ಪಂಗಡಗಳಲ್ಲಿ ಪರಸ್ಪರ ಸ್ನೇಹ ನಂಬಿಕೆಗಳನ್ನು ಕಾಯ್ದುಕೊಳ್ಳಲು ಏಕರೀತಿಯ ನಿಯಮಗಳನ್ನು ರೂಢಿಸಿಕೊಳ್ಳಬೇಕಾಯಿತು. ಈ ರೀತಿಯ, ರೂಢಿಗತವಾಗಿ ಬಂದ, ನಿಯಮಗಳು ಸಾಧಾರಣವಾಗಿ ಜನಪದ ಸ್ಮೃತಿಶಕ್ತಿಯನ್ನವಲಂಬಿಸಿದ್ದವು. ಅವುಗಳಲ್ಲಿ ಬದಲಾವಣೆಯಾಗಲು ಬಹುಕಾಲ ಬೇಕಾಗುತ್ತಿತ್ತು. ವ್ಯತ್ಯಾಸ ಮಾಡದಿರುವುದಕ್ಕೆ ದೈವ ಭಯವೂ ಒಂದು ಕಾರಣವಾಗಿತ್ತು. ರಾಜರು ವಿವಾದಗಳನ್ನು ನಿರ್ಣಯಿಸುತ್ತಿದ್ದ ರೀತಿಯನ್ನು ಹೋಮರನ ಇಲಿಯಡ್ ಕಾವ್ಯದಲ್ಲಿ ಕಾಣಬಹುದು. ಪಂಗಡಗಳಲ್ಲಿ ನ್ಯಾಯವಿತರಣೆ ಹೆಚ್ಚಾಗಿ ಸ್ವಸಹಾಯ ಮತ್ತು ಜನಬೆಂಬಲವನ್ನವಲಂಬಿಸಿತ್ತು. ಆಪಾದಿತ ತನಗಿದ್ದ ಬಲದ ಮೇಲೆ ವಿವಾದವನ್ನು ಬಗೆಹರಿಸಿಕೊಳ್ಳುತ್ತಿದ್ದ. ಸ್ವಸಹಾಯ ಅಥವಾ ಇತರರ ಬಲವಿಲ್ಲದಿದ್ದಲ್ಲಿ ಅವನು ಓಡಿ ಹೋಗಬೇಕಾಗುತ್ತಿತ್ತು; ಇಲ್ಲವೇ, ತಪ್ಪು ಮಾಡಿರಲಿ, ಮಾಡದಿರಲಿ, ತಪ್ಪು ಮಾಡಿದೆನೆಂದು ಒಪ್ಪಿಕೊಳ್ಳಬೇಕಾಗುತ್ತಿತ್ತು. ಕ್ರಿ.ಪೂ. 7ನೆಯ ಶತಮಾನದವರೆಗೆ ಕೌಟುಂಬಿಕ ಜೀವನಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಯಾವ ಕ್ರಾಂತಿಕಾರಕ ಬದಲಾವಣೆಗಳೂ ಆದಂತೆ ಕಂಡುಬರುವುದಿಲ್ಲ. ಆದರೆ ಖೂನಿ, ಸುಲಿಗೆ, ಕಳವು, ಹಟಸಂಭೋಗ ಮುಂತಾದ ಅನೇಕ ಅಪರಾಧಗಳ ವಿಚಾರಣೆ ಮತ್ತು ದಂಡನೆಗೆ ಸರ್ಕಾರ ಕ್ರಮೇಣ ವ್ಯವಸ್ಥೆ ಮಾಡತೊಡಗಿತು. ನ್ಯಾಯಾಧೀಶರು ನ್ಯಾಯವನ್ನು ನಿರ್ಣಯಿಸುವುದನ್ನು ಬಿಟ್ಟು ಕೇವಲ ಸಂಗತಿಗಳ ಆಧಾರದ ಮೇಲೆ ತೀರ್ಪು ಕೊಡುತ್ತಿದ್ದುದಕ್ಕೆ ಲಿಖಿತ ನ್ಯಾಯಸೂತ್ರಗಳಿಲ್ಲದಿದ್ದುದು ಮತ್ತು ಸಂಪ್ರದಾಯಗಳು ಅಸ್ಪಷ್ಟವಾಗಿದ್ದುದು ಕಾರಣಗಳಾಗಿದ್ದುವು. ಹೊಸ ಸಮಸ್ಯೆಗಳು ಉದ್ಭವಿಸಿದಾಗ ಅಂಥ ಸಂದರ್ಭಗಳಿಗೆ ಅನ್ವಯವಾಗುವ ನ್ಯಾಯಸೂತ್ರಗಳು ಇಲ್ಲದ್ದು ನ್ಯಾಯ ವಿತರಣೆಯಲ್ಲಿಯ ತೊಡಕುಗಳಲ್ಲಿ ಒಂದಾಗಿತ್ತು. ಕ್ರಿ.ಪೂ. 683ರಲ್ಲಿ ಆರು ಸದಸ್ಯರ ಸಮಿತಿಯೊಂದನ್ನು ಸಂಪ್ರದಾಯಗಳ ನಿರ್ಣಯಕಾರರಾಗಿರಲು ನೇಮಿಸಲಾಗಿತ್ತು. ನ್ಯಾಯಾಧೀಶರು ತಾವು ನಿರ್ಧರಿಸಬೇಕಾಗಿದ್ದ ಘಟನೆಗಳಿಗೆ ಅನ್ವಯವಾಗುವ ನ್ಯಾಯಪತ್ರಗಳನ್ನು ಅವರಿಂದ ಪಡೆಯಬೇಕಾಗಿತ್ತು.
ಕ್ರಿ.ಪೂ. 7ನೆಯ ಶತಮಾನದಲ್ಲಿ ಗ್ರೀಸ್ ದೇಶದ ನಗರರಾಜ್ಯಗಳು ನ್ಯಾಯಸೂತ್ರಗಳನ್ನು ಬರೆಯಿಸಿ ರಚಿಸಲು ಆರಂಭಿಸಿದುವು. ಎಲ್ಲ ನ್ಯಾಯಸೂತ್ರಗಳನ್ನೂ ಕ್ರೋಢೀಕರಿಸುವ ಮತ್ತು ಅವನ್ನು ಪ್ರಕಟಿಸುವ ಕಾರ್ಯವನ್ನು ಏಕಸದಸ್ಯ ನ್ಯಾಯ ನಿರ್ಧಾರಕನಿಗೆ (ನೋಮಾಥಿಟೀಸ್) ವಹಿಸಿಕೊಡುವ ಪದ್ಧತಿ ಜಾರಿಗೆ ಬಂತು. ಆ ಕಾಲದ ಕ್ರೋಢೀಕೃತ ಕೃತಿಗಳು ಉಪಲಬ್ಧವಾಗಿಲ್ಲ. ಕೆಲವು ಬಿಡಿಭಾಗಗಳು ಮಾತ್ರ ದೊರಕಿವೆ. ಏನು ಮಾಡಬೇಕು, ಏನು ಮಾಡಬಾರದು, ಮಾಡಬಾರದ್ದನ್ನು ಮಾಡಿದಾಗ ಮತ್ತು ನಿಯಮಗಳನ್ನು ಪಾಲಿಸದಿದ್ದಾಗ ಆ ಬಗ್ಗೆ ಕ್ರಮ ಮತ್ತು ದಂಡಗಳು-ಇವುಗಳ ಬಗ್ಗೆ ವಿವರಗಳು ದೊರೆತಿವೆ. ಈ ಪ್ರಾಚೀನ ಸಂಹಿತೆಗಳು ಧಾರ್ಮಿಕ ಮತ್ತು ವ್ಯಾವಹಾರಿಕ ನಿಯಮಗಳ ಸಂಗ್ರಹಗಳ ರೂಪದಲ್ಲಿರುತ್ತಿದ್ದುವು.
ಪ್ರತಿ ನಗರರಾಜ್ಯವೂ ತನ್ನದೇ ಆದ ನ್ಯಾಯಸೂತ್ರಗಳನ್ನು ಮತ್ತು ನ್ಯಾಯಿಕ ವ್ಯವಸ್ಥೆಯನ್ನು ಹೊಂದಿರುತ್ತಿತ್ತು. ಆದ್ದರಿಂದ ಆಗಿನ ಕಾಲದಲ್ಲಿ ಗ್ರೀಕ್ ನ್ಯಾಯವೆಂಬ ಏಕೈಕ ನ್ಯಾಯಿಕ ವ್ಯವಸ್ಥೆ ಇರಲಿಲ್ಲವಾದರೂ ಕ್ರಿ.ಪೂ. 7 ರಿಂದ ಕ್ರಿ.ಪೂ. 4ನೆಯ ಶತಮಾನದವರೆಗಿನ ಕಾಲದಲ್ಲಿ ನ್ಯಾಯಸೂತ್ರಗಳ ಬೆಳವಣಿಗೆ ಏಕರೂಪದತ್ತ ಸಾಗಿತ್ತು. ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಬೆಳೆದುಬಂದ ಸಾಮಾನ್ಯ ನ್ಯಾಯ ಇಲ್ಲಿ ಬೆಳೆಯಲಿಲ್ಲ. ಅಥೆನ್ಸ್ ನಗರದ ಡ್ರೇಕೋ ಕ್ರಿ.ಪೂ. 621ರ ಸುಮಾರಿಗೆ ಒಂದು ಸಂಹಿತೆಯನ್ನು ಸಿದ್ಧಗೊಳಿಸಿದ್ದ.[೧] ಜ಼ಲ್ಯೂಕಸ್ ಸಿದ್ಧಗೊಳಿಸಿದ್ದ ಸಂಹಿತೆ ಲೋಕ್ರಿಸಿನಲ್ಲಿ ಪ್ರಚಲಿತವಿತ್ತು. ಆ ನ್ಯಾಯಸೂತ್ರಗಳು ಸಿಬರಿಸಿನಲ್ಲೂ ಪ್ರಭಾವ ಗಳಿಸಿದ್ದುವು. ಕ್ಯಾಟನಕ್ಕೆ ಅನ್ವಯವಾಗುವಂತೆ ಸಿದ್ಧಗೊಳಿಸಲಾಗಿದ್ದ ನ್ಯಾಯಸೂತ್ರಗಳನ್ನು ಇಟಲಿಯ ಮತ್ತು ಸಿಸಿಲಿಯ ನಗರರಾಜ್ಯಗಳೂ ಅಳವಡಿಸಿಕೊಂಡಿದ್ದುವು. ಗ್ರೀಸಿನ ನಗರರಾಜ್ಯಗಳ ನ್ಯಾಯಸೂತ್ರಗಳಲ್ಲಿ-ಅದರಲ್ಲೂ ವಿವಾಹ, ವ್ಯವಹಾರ, ಉತ್ತರಾಧಿಕಾರ, ದತ್ತುಸ್ವೀಕಾರ ಮುಂತಾದವಕ್ಕೆ ಸಂಬಂಧಿಸಿದ ನ್ಯಾಯಸೂತ್ರಗಳಲ್ಲಿ-ಸಾಮ್ಯ ಇತ್ತು.[೨] ಅರಿಸ್ಟಾಟಲ್ ಮುಂತಾದವರು ಹೇಳುವಂತೆ ಅಥೆನ್ಸ್ ನಗರರಾಜ್ಯದ ನ್ಯಾಯಸೂತ್ರಗಳು ಬಹು ಮುಖ್ಯವಾದವು.
ಡ್ರೇಕೋಗಿಂತ ಮುಂಚೆ ಕೆಲವೇ ಜನ ಸರ್ಕಾರವನ್ನು ನಡೆಸುತ್ತಿದ್ದರು. ಜನತೆಯ ಬಹುಭಾಗ ಭೂಮಾಲೀಕರ ಪರವಾಗಿ ವ್ಯವಸಾಯ ಮಾಡುತ್ತಿದ್ದ ಜೀತಗಾರರು (ಸರ್ಫ್ಸ್). ಗೇಣಿಯನ್ನು ಸರಿಯಾಗಿ ಕೊಡದಿದ್ದವರನ್ನು ಗುಲಾಮರನ್ನಾಗಿ ಪರಿಗಣಿಸಲಾಗಿತ್ತು. ರಾಜ, ಪಾಲಿಮಾರ್ಕ್ (ದಂಡನಾಯಕ) ಮತ್ತು ಆರ್ಕಾನ್ (ಮುಖ್ಯನ್ಯಾಯಾಧೀಶ) ಇವರು ಕಾಲಾನುಕ್ರಮದಲ್ಲಿ ತೀರ್ಪುಗಳನ್ನು ಕೊಡುತ್ತಿದ್ದರು. ರಾಜಕೀಯ ಸಭೆಗಳಿಗೆ ಸದಸ್ಯರಾಗಿಯೂ ಬರದಿದ್ದವರು ದಂಡ ತೆರಬೇಕಾಗುತ್ತಿತ್ತು. ಭೂಮಿ ಕೆಲವೇ ಜನರ ಸ್ವತ್ತಾಗಿತ್ತು. ಸಾಲ ವ್ಯಕ್ತಿಗತವಾಗಿತ್ತು. ಡ್ರೇಕೋನ ಮೇರೆಗೆ ಆರಿಯೋಪಗಸ್ ಪರಿಷತ್ತು ಆಗಿನ ನ್ಯಾಯಸೂತ್ರಗಳನ್ನು ರಕ್ಷಿಸಿಕೊಂಡು ಬರುತ್ತಿತ್ತು.[೩][೪] ತೀರ್ಪುಗಳನ್ನು ಬಹಿರಂಗವಾಗಿ ಕೊಡುವುದಕ್ಕೆ ಮತ್ತು ಅವನ್ನು ಕಾಪಾಡಿಕೊಂಡು ಬರುವುದಕ್ಕೆ ಥೆಸ್ಮಾಥಿಟೀಜ಼ರನ್ನು (ನ್ಯಾಯ ನಿರ್ಣಯಕಾರರು) ನೇಮಿಸುವ ಪದ್ಧತಿ ರೂಢಿಯಲ್ಲಿತ್ತು.
ಆಗಿನ ನ್ಯಾಯವ್ಯವಸ್ಥೆಗೂ, ರಾಜಕೀಯ ಸ್ವರೂಪಕ್ಕೂ ನಿಕಟ ಸಂಬಂಧವಿತ್ತು. ಬಡವರ ಮತ್ತು ಶ್ರೀಮಂತರ ನಡುವೆ ರಾಜಕೀಯ ಹಕ್ಕುಬಾಧ್ಯತೆಗಳಿಗಾಗಿ ಘರ್ಷಣೆ ನಡೆಯುತ್ತಲೇ ಇತ್ತು. ಕೊನೆಗೆ ಉಭಯ ಪಕ್ಷದವರೂ ಸೇರಿ ಮಧ್ಯಸ್ಥ ಮತ್ತು ತೀರ್ಪುಗಾರನನ್ನಾಗಿ ಸೋಲಾನನನ್ನು (ಕ್ರಿ.ಪೂ. ಸು. 630-ಕ್ರಿ.ಪೂ. ಸು. 560)[೫] ನೇಮಿಸಿದರು.[೬] ಆತ ರೂಪಿಸಿದ್ದ ನ್ಯಾಯಸೂತ್ರಗಳ ರೂಪರೇಷೆಗಳು ಪುರಾತನ ಗ್ರಂಥಗಳಲ್ಲಿ ದೊರೆಯುತ್ತವೆ. ಆತನ ಕಾಲದಲ್ಲಿ ಸ್ವತ್ತಿನ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿದ್ದುವು. ಆಸ್ತಿಯ ಆಧಾರದ ಮೇಲೆ ಸಾಲ ತೆಗೆದುಕೊಳ್ಳಬಹುದಾಗಿತ್ತು. ತನಗೆ ನ್ಯಾಯ ದೊರೆತಿಲ್ಲವೆಂಬ ಕಾರಣದ ಮೇಲೆ ನ್ಯಾಯದರ್ಶಿಗಳ ನ್ಯಾಯಾಲಯಕ್ಕೆ ಮೇಲರ್ಜಿ ಹಾಕಿಕೊಳ್ಳಬಹುದಾಗಿತ್ತು. ಗೌರವಾನ್ವಿತ ವರ್ಗಗಳಿಗೆ ಪ್ರತ್ಯೇಕ ವಿಶೇಷ ನ್ಯಾಯಾಧೀಶರನ್ನು ನೇಮಿಸಲಾಗುತ್ತಿತ್ತು. ಅಪರಾಧವನ್ನವಲಂಬಿಸಿ ದಂಡ ವಿಧಿಸುವುದಕ್ಕಿಂತ ವ್ಯಕ್ತಿಯ ವರ್ಗೀಕರಣದ ಮೇಲೆ ದಂಡ ವಿಧಿಸಲಾಗುತ್ತಿತ್ತು. ಪಿತ್ರಾರ್ಜಿತ ಸ್ವತ್ತಿಗೆ ಸ್ತ್ರೀಪುರುಷರು ವಾರಸುದಾರರಾಗಬಹುದಿತ್ತು. ಕ್ರಿ.ಪೂ. 450ಕ್ಕೆ ಮುಂಚೆ ಉಯಿಲು ಮಾಡುವ ಹಕ್ಕಿಗೆ ನ್ಯಾಯದ ಮನ್ನಣೆ ದೊರೆತಿರಲಿಲ್ಲ. ಹಟಸಂಭೋಗವನ್ನು ಅಪರಾಧವೆಂದು ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು ಮತ್ತು ಆ ಬಗ್ಗೆ ದಂಡ ವಿಧಿಸಲಾಗುತ್ತಿತ್ತು. ದಂಡ ವ್ಯಕ್ತಿಯ ವರ್ಗೀಕರಣವನ್ನವಲಂಬಿಸಿದಂತೆ, ಸಾಕ್ಷಿಗಳ ಸಂಖ್ಯೆಗೂ ವರ್ಗೀಕರಣ ಆಧಾರವಾಗಿತ್ತು.
ಸೋಲಾನ್ ನರಹತ್ಯೆಗೆ ಸಂಬಂಧಿಸಿದ ನ್ಯಾಯಸೂತ್ರಗಳನ್ನುಳಿದು ಇತರ ನ್ಯಾಯಸೂತ್ರಗಳಲ್ಲಿ ಬದಲಾವಣೆ ಮಾಡಿದ.[೭] ಹುಟ್ಟಿನ ಆಧಾರದ ಮೇಲೆ ವ್ಯಕ್ತಿಯ ವರ್ಗೀಕರಣ ಮಾಡುವುದನ್ನು ತಪ್ಪಿಸಿ ಆಸ್ತಿಯ ಆಧಾರದ ಮೇಲೆ ವ್ಯಕ್ತಿಯ ವರ್ಗೀಕರಣ ಮಾಡಿದ.[೮][೯] ಆಟಿಕದಲ್ಲಿಯ ಎಲ್ಲ ಸ್ವತಂತ್ರ ವಯಸ್ಕರಿಗೂ ಮತದಾನದ ಹಕ್ಕನ್ನು ನೀಡಲಾಗಿತ್ತು. ಸಾಮಾಜಿಕ ಸ್ಥಾನಮಾನ ಮತ್ತು ಸರ್ಕಾರಿ ಸೇವೆಗಳಲ್ಲಿ ವ್ಯಕ್ತಿಯ ವರ್ಗೀಕರಣ ಮಹತ್ವದ ಪಾತ್ರ ವಹಿಸುತ್ತಿತ್ತು. ಈ ನ್ಯಾಯಸೂತ್ರಗಳು ಹೆಚ್ಚಿನ ಬದಲಾವಣೆಯಿಲ್ಲದೆಯೇ ಪೈಸಿಸ್ಟ್ರೇಟಸ್ (ಮರಣ ಕ್ರಿ.ಪೂ. 527) ಮತ್ತು ಕ್ಲೈಸ್ಥೆನೀಜ಼ರ (ಕ್ರಿ.ಪೂ. 507) ಕಾಲದಲ್ಲಿಯೂ ಜಾರಿಯಲ್ಲಿದ್ದುವು.
ಕ್ರಿ.ಪೂ. 411ಕ್ಕೂ ಮುಂಚೆಯೇ ಕಾನೂನುಗಳನ್ನು ಪ್ರಜಾತಂತ್ರದ ತಳಹದಿಯ ಮೇಲೆ ರೂಪಿಸುವ ಕಾರ್ಯ ಆರಂಭವಾಗಿತ್ತು. ಅಲ್ಲಿಯವರೆಗೆ ಯಾವಾಗಲಾದರೊಮ್ಮೆ ಪ್ರಾಸಂಗಿಕವಾಗಿ ಕಾನೂನುಗಳನ್ನು ಮಾಡಲಾಗುತ್ತಿತ್ತು; ಕಾನೂನು ಮಾಡುವುದು ಸರ್ಕಾರದ ನಿಯತ ಚಟುವಟಿಕೆಗಳಲ್ಲಿ ಒಂದಾಗಿರಲಿಲ್ಲ. ಆದರೆ ಜನಸಾಮಾನ್ಯರ ಹಕ್ಕುಬಾಧ್ಯತೆಗಳಿಗೆ ಹೆಚ್ಚು ಹೆಚ್ಚು ಮಾನ್ಯತೆ ದೊರೆತಂತೆಲ್ಲ, ಪ್ರಜಾತಂತ್ರದ ತಳಹದಿ ಭದ್ರವಾದ ಹಾಗೆಲ್ಲ ಅಥೆನ್ಸಿನ ನ್ಯಾಯಸೂತ್ರಗಳಲ್ಲಿ ವರ್ಷವರ್ಷಕ್ಕೂ ಬದಲಾವಣೆಯಾದದ್ದನ್ನು ಕಾಣಬಹುದು. ವರ್ಷದ ಪ್ರಥಮ ಸಭೆಯಲ್ಲಿ ಇಂಥ ಬದಲಾವಣೆಗಳನ್ನು ಮತಕ್ಕೆ ಹಾಕುವುದರ ಮೂಲಕ ಮಾಡಲಾಗುತ್ತಿತ್ತು. ಸಂದರ್ಭದ ಆವಶ್ಯಕತೆಯನ್ನು ಪೂರೈಸುವ ಕಾನೂನಿನ ಉಪಬಂಧಗಳನ್ನು ಕುರಿತು ಪ್ರಕರಣಪ್ರಕರಣವಾಗಿ ಚರ್ಚಿಸಲಾಗುತ್ತಿತ್ತು. ಕಾನೂನುಗಳ ಅಧಿಕೃತ ಪ್ರತಿಯನ್ನು ಕಲ್ಲಿನ ಮೇಲೆ ಕೆತ್ತಿಸಲಾಗುತ್ತಿತ್ತು. ಕ್ರಿ.ಪೂ. 410-ಕ್ರಿ.ಪೂ. 404ರಲ್ಲಿ ಕೆತ್ತಲಾದ ಕಲ್ಲಿನ ಫಲಕಗಳು ಮತ್ತು ಅದಕ್ಕೂ ಹಿಂದಿನ ಕಾಲದ ಡ್ರೇಕೋನ ಕಾನೂನುಗಳ ಫಲಕಗಳು ದೊರೆತಿವೆ. ಅಥೆನ್ಸಿನ ಕಾನೂನುಗಳು ಸರಳ ಭಾಷೆಯಲ್ಲಿದ್ದುವು. ಸಂದರ್ಭಗಳ ಆಧಾರದ ಮೇಲೆ ರಚಿತವಾಗಿದ್ದು ಇವು ವಿಶಿಷ್ಟ ಘಟನೆಯನ್ನು ಕುರಿತ ನ್ಯಾಯದ ವಿವೇಚನೆ ಇರುತ್ತಿತ್ತು. ಪ್ರಕ್ರಿಯಾನಿಯಮಗಳು ಹಲವು ಸಲ ನಿರ್ದಿಷ್ಟ ರೂಪದಲ್ಲಿ ಇರುತ್ತಿರಲಿಲ್ಲ; ಸಂಕ್ಷಿಪ್ತವಾಗಿಯೂ ಇರುತ್ತಿದ್ದುವು. ಒಮ್ಮೊಮ್ಮೆ ಬಹಳ ವಿವರವಾಗಿರುತ್ತಿದ್ದದ್ದೂ ಉಂಟು. ದಂಡಾಪರಾಧಿಗಳಿಗೆ ವಿಧಿಸಲಾಗುತ್ತಿದ್ದ ದಂಡಗಳು ಬಹಳ ಕಠೋರವಾಗಿದ್ದುವು. ವಿವಿಧ ದಂಡಗಳಲ್ಲಿ ಮರಣದಂಡನೆಯೂ ಒಂದಾಗಿತ್ತು.
ಗ್ರೀಕ್ ನ್ಯಾಯವ್ಯವಸ್ಥೆಯಲ್ಲಿ ಕ್ರಿ.ಪೂ. 4ನೆಯ ಶತಮಾನಕ್ಕೆ ಮುಂಚೆಯೇ ವಿವಾದಗಳ ವರ್ಗೀಕರಣ ಇದ್ದದ್ದನ್ನು ನೋಡಬಹುದು. ಸಾಧಾರಣವಾಗಿ ವಿವಾದಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತಿತ್ತು hello:
- ವಿಶೇಷ ವಿವಾದಗಳು,
- ಡಿಕಾಯ್ ಅಥವಾ ಖಾಸಗಿ ವಿವಾದಗಳು,
- ಗ್ರಾಫಯ್ ಅಥವಾ ಸಾರ್ವತ್ರಿಕ ವಿವಾದಗಳು.
ವಿಶೇಷ ವಿವಾದಗಳು: ವಿಶೇಷ ವಿವಾದಗಳನ್ನು ಮಹಾಪರಾಧಗಳನ್ನಾಗಿ ಪರಿಗಣಿಸಲಾಗುತ್ತಿತ್ತು. ರಾಜ್ಯ ವಿರೋಧಿ ಅಪರಾಧಗಳು, ರಾಜದ್ರೋಹಕ್ಕೆ ಸಂಬಂಧಿಸಿದ ಅಪರಾಧಗಳು, ಸರ್ಕಾರ ಅಥವಾ ಸೇನೆಗೆ ಎಸಗಿದ ವಿಶ್ವಾಸಘಾತಕ ಕೃತ್ಯಗಳು, ವೈರಿ ಸರ್ಕಾರ ಅಥವಾ ಸೇನೆಯ ಜೊತೆಗೆ ಇರಿಸಿಕೊಂಡಿದ್ದ ಗುಪ್ತ ವ್ಯವಹಾರಗಳು-ಇವೇ ಮುಂತಾದವು ಮಹಾಪರಾಧಗಳಾಗಿದ್ದುವು. ಇವಕ್ಕೆ ದಂಡಗಳನ್ನು ನಿಗದಿಗೊಳಿಸಲಾಗಿತ್ತು. ಸಂದರ್ಭಾನುಗುಣವಾಗಿ ಕಠೋರ ಇಲ್ಲವೆ ಸಾಮಾನ್ಯ ದಂಡಗಳನ್ನು ಹಾಕಲಾಗುತ್ತಿತ್ತು. ದುಷ್ಟ ಅಪರಾಧಿಗಳನ್ನು ವಿಚಾರಣೆಗೆ ಮುನ್ನ ಕಾರಾಗೃಹದಲ್ಲಿಡಲಾಗುತ್ತಿತ್ತು. ದಂಡದ ಮೊತ್ತ ಮತ್ತು ಅಪರಾಧದ ಘೋರತನವನ್ನು ಲಕ್ಷ್ಯದಲ್ಲಿಟ್ಟು ಪರಿಷತ್ತಿಗೆ ಅಥವಾ ಸಭೆಗೆ ವಿಚಾರಣೆಗಾಗಿ ವರ್ಗಾಯಿಸಲಾಗುತ್ತಿತ್ತು.
ಖಾಸಗಿ ವಿವಾದಗಳು: ಖಾಸಗಿ ವಿವಾದಗಳನ್ನು ನರಹತ್ಯೆಗೆ ಸಂಬಂಧಿಸಿದ ವಿವಾದಗಳು ಮತ್ತು ವ್ಯವಹಾರ ದಾವೆಗಳು ಎಂದು ವಿಂಗಡಿಸಬಹುದಾಗಿತ್ತು. ನರಹತ್ಯೆಗೆ ಸಂಬಂಧಿಸಿದ ನ್ಯಾಯಸೂತ್ರಗಳಲ್ಲಿ ಸ್ವಸಹಾಯ, ಬಲಾಬಲಗಳ ಪಾತ್ರ ಪ್ರಮುಖವಾಗಿತ್ತು. ತಂದೆ, ಸಹೋದರ, ಮಗ ಅಥವಾ ಮೃತನ ಇತರ ಸಂಬಂಧಿಕರು ಫಿರ್ಯಾದಿಗಳಾಗಬಹುದಿತ್ತು. ಡ್ರೇಕೋನ ಕಾಲಕ್ಕಾಗಲೇ ಉದ್ದೇಶಿತ ಕೊಲೆ ಮತ್ತು ಇತರ ರೀತಿಯ ಕೊಲೆಗಳಲ್ಲಿಯ ವ್ಯತ್ಯಾಸವನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಉದ್ದೇಶಿತ ಕೊಲೆಯ ವಿವಾದದ ಇತ್ಯರ್ಥವನ್ನು ಆರಿಜಪೆಗಸಿನ ಸರ್ವಸದಸ್ಯರ ಸಭೆ ಮಾಡುತ್ತಿತ್ತು. ಸಾಧಾರಣ ರೀತಿಯ ಅಪರಾಧಗಳನ್ನು 51 ಜನ ಸದಸ್ಯರು ವಿಚಾರಣೆ ಮಾಡುತ್ತಿದ್ದರು. ಉದ್ದೇಶಿತ ಕೊಲೆಗೆ ಸಾಮಾನ್ಯವಾಗಿ ಮರಣದಂಡನೆ ಅಥವಾ ದೇಶೋಚ್ಚಾಟನೆಯ ಶಿಕ್ಷೆ ವಿಧಿಸಲಾಗುತ್ತಿತ್ತು.
ವ್ಯವಹಾರ ದಾವೆಗಳನ್ನು ಸಂಬಂಧಪಟ್ಟವರು ಅಥವಾ ಅವರ ವಿಧಿಮಾನ್ಯ ಪ್ರತಿನಿಧಿಗಳು ಹಾಕಬಹುದಾಗಿತ್ತು. ಇತರ ಅನೇಕ ರೀತಿಯ ದಾವೆಗಳನ್ನು ಮಧ್ಯಸ್ಥರು ನಿರ್ಣಯ ಮಾಡುತ್ತಿದ್ದರು. ಪಂಚನಾಗಲು ನಿರಾಕರಿಸುವುದಕ್ಕೆ ರಾಜಕಾರ್ಯದ ಹೊರತು ಅನ್ಯಥಾ ಕಾರಣದಿಂದ ಸಾಧ್ಯವಿರಲಿಲ್ಲ.
ಸಾರ್ವತ್ರಿಕ ವಿವಾದಗಳು: ಸಾರ್ವತ್ರಿಕ ವಿವಾದಗಳಿಗೂ, ವ್ಯವಹಾರ ದಾವೆಗಳಿಗೂ ಹೆಚ್ಚಿನ ಭೇದವಿರಲಿಲ್ಲ. ಸಾರ್ವತ್ರಿಕ ವಿವಾದಗಳು ಸಾಮಾನ್ಯವಾಗಿ ಸಾಮಾಜಿಕ ಅಥವಾ ಧಾರ್ಮಿಕ ಜೀವನಕ್ಕೆ ಸಂಬಂಧಪಟ್ಟ ವಿವಾದಗಳಾಗಿರುತ್ತಿದ್ದುವು.
ನ್ಯಾಯಾಧೀಶರು ವಕೀಲರಾಗಿರಬೇಕಾಗಿರಲಿಲ್ಲ. ಯಾರೂ ವಕೀಲರನ್ನು ನೇಮಿಸಿಕೊಳ್ಳಬೇಕಾಗಿರಲಿಲ್ಲವೆಂಬುದು ಪ್ರಾಚೀನ ಗ್ರೀಕ್ ನ್ಯಾಯವ್ಯವಸ್ಥೆಯ ಮುಖ್ಯ ಲಕ್ಷಣಗಳಲ್ಲಿ ಒಂದು. ವಿವಾದ ಉದ್ಭವಿಸಿದಾಗ ಗ್ರೀಕರು ಹೊಡೆದಾಡುತ್ತಿರಲಿಲ್ಲ. ನ್ಯಾಯಾಲಯಕ್ಕೆ ಹೋಗುವುದು ಸಾಮಾನ್ಯವಾಗಿತ್ತು. ವೃತ್ತಿಯಿಂದ ವಕೀಲರಲ್ಲದವರೂ-ಸರ್ವರೂ-ವಕೀಲರೆಂಬುದು ಗ್ರೀಕರ ಹೆಮ್ಮೆಯಾಗಿತ್ತು. ನ್ಯಾಯಾಧಿಕರಣದ (ಟ್ರಿಬ್ಯೂನಲ್) ಸದಸ್ಯರ ಸಂಖ್ಯೆ 201 ರಿಂದ 2,500ರ ವರೆಗೆ ಇರುತ್ತಿತ್ತು. ಆರಿಜಪೆಗಸಿನ ಸದಸ್ಯರ ಸಂಖ್ಯೆ 220 ಇರುತ್ತಿತ್ತು. ಸಾಕ್ಷ್ಯವನ್ನು ವಿವೇಚಿಸುವುದು ನ್ಯಾಯದರ್ಶಿಗಳ ಕಾರ್ಯವಾಗಿತ್ತು. ಪ್ರಮಾಣದ ಮೇಲೆ ಸಾಕ್ಷ್ಯವನ್ನು ಸ್ವೀಕರಿಸಲಾಗುತ್ತಿತ್ತು. ನರಹತ್ಯೆಯ ಅಪರಾಧದ ಸಂಬಂಧದಲ್ಲಿ ಗುಲಾಮರು, ಹುಡುಗರು ಮತ್ತು ಹೆಂಗಸರ ಸಾಕ್ಷ್ಯವನ್ನು ಸ್ವೀಕರಿಸಲಾಗುತ್ತಿತ್ತು. ಕ್ರಿ.ಪೂ. 403ರ ವರೆಗೆ ವಾದ ಮೌಖಿಕವಾಗಿರುತ್ತಿತ್ತು. ಅದರೆ ಮೇಲರ್ಜಿ ಹಾಕಬೇಕಾಗಿದ್ದ ಸಂದರ್ಭದಲ್ಲಿ ವಾದ ಲಿಖಿತರೂಪದಲ್ಲಿರುತ್ತಿತ್ತು. ವ್ಯಾವಹಾರಿಕ ವಿವಾದವನ್ನು ಯಾವಾಗ ಬೇಕಾದರೂ ಹಿಂತೆಗೆದುಕೊಳ್ಳಬಹುದಿತ್ತು. ವ್ಯಾಜ್ಯಗಳ ಸಂಬಂಧದಲ್ಲಿ ನ್ಯಾಯಾಲಯಕ್ಕೆ ಶುಲ್ಕ ಸಂದಾಯ ಮಾಡಬೇಕಾಗುತ್ತಿತ್ತು. ನ್ಯಾಯಾಲಯದಲ್ಲಿ ಗುಮಾಸ್ತರು ಇರುತ್ತಿದ್ದರು ಮತ್ತು ಅವರು ವಾದಿ-ಪ್ರತಿವಾದಿಗಳ ಮತ್ತು ಇತರರ ಉಲ್ಲೇಖಗಳನ್ನು ಓದಿ ಹೇಳುತ್ತಿದ್ದರು. ಸಾಕ್ಷಿಗಳು ಹಾಜರಿರಲು ಮತ್ತು ಸಾಕ್ಷ್ಯಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನು ಹಾಜರುಪಡಿಸಲು ಒತ್ತಾಯಪಡಿಸಬಹುದಾಗಿತ್ತು.
ಕ್ರಿ.ಪೂ. 329 ರಿಂದ ಕ್ರಿ.ಪೂ. 322ರ ವರೆಗಿನ ಅವಧಿಯಲ್ಲಿ ಅರಿಸ್ಟಾಟಲ್ ಅಥೆನ್ಸಿನ ಸಂವಿಧಾನವನ್ನು ಬರೆದಿರಬಹುದಾಗಿದೆ. ಸಮಾಜದಲ್ಲಿಯ ಆಂತರಿಕ ಸಂಬಂಧಕ್ಕೆ ಜನತೆಯೇ ಹೊಣೆಯೆಂಬ ಸೋಲಾನನ ಉಕ್ತಿ ಅಥೆನ್ಸಿನ ಜನಮನದಲ್ಲಿ ನೆಲೆನಿಂತಿತಷ್ಟೇ ಅಲ್ಲ, ಅನಂತರದ ಪೀಳಿಗೆಯಲ್ಲೂ ರಕ್ತಗತವಾಗಿದ್ದನ್ನು ಅರಿಸ್ಟಾಟಲನ, ಇತರರ ಗ್ರಂಥಗಳಿಂದ ತಿಳಿಯಬಹುದು. ಕೆಲವೇ ಜನ ನ್ಯಾಯಶಾಸ್ತ್ರ ಪಂಡಿತರ ಕೈಯಲ್ಲಿ ನ್ಯಾಯವ್ಯವಸ್ಥೆಯ ಹೊಣೆಯನ್ನು ವಹಿಸಿಕೊಂಡುದನ್ನು ಅಲ್ಲಿಯ ಜನ ಬಯಸಲಿಲ್ಲ. ಆದ್ದರಿಂದ ರೋಮನ್ ನ್ಯಾಯದಂತೆ ಗ್ರೀಕ್ ನ್ಯಾಯ ತಜ್ಞರ ಕೈಗೂಸಾಗಿ ಉಳಿಯದೆ ಸಾಮಾನ್ಯ ಜನತೆಯ ವಿವೇಕದ ಪ್ರತಿರೂಪವಾಗಿ ಬೆಳೆಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ Andrewes 1982, p. 370.
- ↑ Sandys 1911, p. 501.
- ↑ MacDowell, Douglas M. (1978). The law in classical Athens. Ithaca, N.Y.: Cornell University Press. p. 27. ISBN 9780801493652. OCLC 20663324.
- ↑ Pseudo-Aristotle. "Atheneion Politeia". Perseus. Perseus Tufts. Retrieved 8 February 2016.
- ↑ "Solon", Encyclopædia Britannica, retrieved 13 April 2019
- ↑ Solon of Athens
- ↑ Plutarch, Solon 17.
- ↑ Athenaion Politeia 7.3.
- ↑ Plutarch, Solon 18.
This article incorporates text from a publication now in the public domain: Sandys, John Edwin (1911). . In Chisholm, Hugh (ed.). Encyclopædia Britannica. Vol. 12 (11th ed.). Cambridge University Press. pp. 501–507. {{cite encyclopedia}}: Cite has empty unknown parameters:|HIDE_PARAMETER=and|separator=(help); Invalid|ref=harv(help) This describes the topic in more procedural detail, and has a large set of citations.
ಗ್ರಂಥಸೂಚಿ
[ಬದಲಾಯಿಸಿ]- Andrewes, A. (5 August 1982). "The Growth of the Athenian State". In Boardman, John; Hammond, N.G.L (eds.). The Cambridge Ancient History Volume III, Part 3: The Expansion of the Greek World, Eighth to Sixth Centuries B.C. Cambridge University Press. ISBN 0-521-23447-6.
