ಪ್ರಾಚೀನ ಗ್ರೀಕ್ ಕಲೆ
ಪ್ರಾಚೀನ ಗ್ರೀಕ್ ಕಲೆ ಎನ್ನುವುದು ಗ್ರೀಕರು ಕಬ್ಬಿಣ ಯುಗದಿಂದ ಹೆಲೆನಿಸ್ಟಿಕ್ ಅವಧಿಯವರೆಗೆ ಸೃಷ್ಟಿಸಿದ ದೃಶ್ಯ ಮತ್ತು ಅನ್ವಯಿಕ ಕಲೆಗಳು, ಜೊತೆಗೆ ವಾಸ್ತುಕಲೆ ಆಗಿದೆ. ಇದು ಕ್ರಿ.ಪೂ. ೧೪೬ರಲ್ಲಿ ಕಾರಿಂತ್ ಕದನದಲ್ಲಿ ರೋಮನ್ನರ ಗ್ರೀಸ್ ವಿಜಯದೊಂದಿಗೆ ಕೊನೆಗೊಳ್ಳುತ್ತದೆ.
ಪಾಶ್ಚಾತ್ಯ ಕಲೆ, ವಾಸ್ತುಶಿಲ್ಪ ಬಹು ಮಟ್ಟಿಗೆ ಗ್ರೀಕ್ ಶೈಲಿಯಿಂದ ಪ್ರೇರಿತವಾಗಿವೆ.
ಗ್ರೀಕರ ಕಲೆ, ವಾಸ್ತುಶೈಲಿಗಳನ್ನು ಗ್ರೀಸ್‍ನ ಇತಿಹಾಸದ ಚಾರಿತ್ರಿಕ ಹಿನ್ನೆಲೆಯಲ್ಲಿ ಕಾಣಬೇಕು.
ಕಲೆ
[ಬದಲಾಯಿಸಿ]ಕ್ರಿ.ಪೂ. 3000ಕ್ಕೂ ಪ್ರಾಚೀನವಾದ ಕಲ್ಲಿನ ಪ್ರತಿಮೆಗಳು ಕೊರೆತಿವೆ. ಇವನ್ನು ಸಿಕ್ಲಾಡಿಕ್ ವಿಗ್ರಹಗಳೆಂದೇ ಕರೆಯಲಾಗಿದೆ. ಲೂವ್ರ್ ಮತ್ತು ಬ್ರಿಟಿಷ್ ವಸ್ತುಸಂಗ್ರಹಾಲಯಗಳಲ್ಲಿ ಈ ವಿಗ್ರಹಗಳನ್ನು ಇಡಲಾಗಿದೆ. ಮೂರ್ಖತೆಯ ಒರಟು ವಿಗ್ರಹಗಳೆಂದು ಹಿಂದೆ ಇವನ್ನು ವಿಮರ್ಶಕರು ಬದಿಗೊತ್ತಿದ್ದರು. ಆದರೆ ಇಂದು ಇವನ್ನು ಹೆಚ್ಚು ಸೂಕ್ಷ್ಮವಾಗಿ ಅಭ್ಯಾಸ ಮಾಡಲಾಗಿದೆ. ಇವುಗಳಲ್ಲಿ ಹಲವಾರು ಗಣನೀಯ ಅಂಶಗಳಿವೆ. ಮೂಲತಃ ಈ ವಿಗ್ರಹಗಳಿಗೆ ವರ್ಣ ಲೇಪನ ಮಾಡಲಾಗಿತ್ತು. ಆದರೆ ಇಂದು ಆ ಬಣ್ಣಗಳು ಅಳಿಸಿ ಹೋಗಿವೆ. ಇವಕ್ಕೆ ಯಾವ ವರ್ಣದ್ರವ್ಯಗಳನ್ನು ಉಪಯೋಗಿಸಲಾಗಿತ್ತೆಂದು ಹೇಳುವುದೂ ಕಷ್ಟ. ಇವುಗಳ ನಿರ್ಮಾಣದಲ್ಲಿ ಅಮೂರ್ತ ವಿಧಾನವನ್ನು ಬಳಸಲಾಗಿದೆ. ಒಬ್ಬ ಮನುಷ್ಯನನ್ನು, ಒಂದು ದೃಶ್ಯವನ್ನು, ಒಂದು ವಸ್ತುವನ್ನು ಸಾಂಕೇತಿಕವಾಗಿ ಅಭಿವ್ಯಕ್ತಿಸುವ ಯತ್ನವನ್ನು ಈ ಅಮೂರ್ತ ಭಾವನಾತ್ಮಕ ವಿಗ್ರಹಗಳಲ್ಲಿ ಕಾಣಬಹುದು.

ಚಿತ್ರ ೧ರ ವಿಗ್ರಹದಲ್ಲಿ ಕೈಕಟ್ಟಿ ನೆಟ್ಟಗೆ ನಿಂತ ಒಬ್ಬಾತ ಯಾವುದೋ ಒಂದು ಸಮಾರಂಭದಲ್ಲಿ ಭಾಗವಹಿಸುತ್ತಿರುವಂತೆ ತೋರುತ್ತದೆ. ಅವನ ದೇಹ ಸತ್ತ್ವಯುಕ್ತವಾದ್ದೆಂಬುದು ಮುಂಡ, ತೊಡೆಗಳು ಹಾಗೂ ಭುಜಗಳಿಂದ ಗೊತ್ತಾಗುತ್ತದೆ. ರುಂಡದಲ್ಲಿ ಕಾಣುವುದೆಲ್ಲ ಮೂಗೊಂದೇ. ಆ ವಿಗ್ರಹದಲ್ಲಿ ಶ್ರೀಮಂತಿಕೆಯ ಗಾಂಭೀರ್ಯವನ್ನೂ, ಸ್ವಲ್ಪ ಮಟ್ಟಿನ ದುರಭಿಮಾನವನ್ನೂ ಕಾಣಬಹುದು.
ಮಿನೋವನರ ಕಲೆಯಲ್ಲಿ ಅಮೂರ್ತ ಭಾವನೆಗಳಿದ್ದರೂ ಪ್ರಾಣಿಗಳು, ಸಸ್ಯಗಳು, ಮೀನುಗಳು, ಪುಷ್ಪಗಳು ಹಾಗೂ ಮನುಷ್ಯರ ಚಿತ್ರಣದಲ್ಲಿ ಉಲ್ಲಾಸ ಎದ್ದು ತೋರುತ್ತದೆ. ಚಿನ್ನದ ಬಟ್ಟಲುಗಳ ಮೇಲೆ ಹುಲ್ಲುಗಾವಲಿನಲ್ಲಿ ಮೇಯುತ್ತಿರುವ ಪಳಗಿಸಿದ ಗೂಳಿಗಳಲ್ಲಿಯ ಆಮೋದ ಚಿತ್ರಿತವಾಗಿರುವುದು ಕಾಣುತ್ತದೆ. ಇನ್ನೊಂದರಲ್ಲಿ ಮಿನೋವನರು ಜೀವದ ಹಂಗು ತೊರೆದು ಕಾಡುಗೂಳಿಗಳನ್ನು ಹಿಡಿಯುತ್ತಿರುವ ಚಿತ್ರವಿದೆ.
ಡೋರಿಯನರದು (ಕ್ರಿ.ಪೂ. 1100-700) ರೇಖಾವಿನ್ಯಾಸ ಶೈಲಿ ಎನ್ನಬಹುದು. ಅವರ ಕಾಲಕ್ಕೆ ಸೇರಿದ ಕಂಚಿನ ವಿಗ್ರಹಗಳ ಮತ್ತು ಪಾತ್ರೆಗಳ ಮೇಲೆ ಬಿಡಿಸಲಾದ ಚಿತ್ರಗಳಿಂದ ಇದು ಸ್ಪಷ್ಟವಾಗಿದೆ. ಮಾನವ ಹಾಗೂ ಪ್ರಾಣಿ ದೇಹಗಳ ಸಹಜ ವಕ್ರತೆಗಳನ್ನು ಇಲ್ಲಿ ಕಮಾನುಗಳಂತೆ ಅಥವಾ ಕೋನಗಳಂತೆ ತೋರಿಸಲಾಗಿದೆ. ಇವು ಡೊಂಕಾದ ಗೆರೆಗಳು, ಸಮಾಂತರ ಗೆರೆಗಳು ಮುಂತಾದ ಜ್ಯಾಮಿತೀಯ ರೂಪಗಳನ್ನು ತಾಳಿವೆ. ಶವಯಾತ್ರೆ, ನೌಕಾಯುದ್ಧ ಇತ್ಯಾದಿಗಳ ಚಿತ್ರಗಳನ್ನು ಸಾಮಾನ್ಯವಾಗಿ ಈ ಕಾಲದ ಬಟ್ಟಲುಗಳ ಮೇಲೆ (ಪಾನಪಾತ್ರೆಗಳ ಮೇಲೆ) ಬಿಡಿಸಲಾಗಿದೆ.
ಕ್ರಿ.ಪೂ. 7 ನೆಯ ಶತಮಾನದಲ್ಲಿ ಗ್ರೀಕರ ಕಲೆ ಪೌರಸ್ತ್ಯರ, ಹೆಚ್ಚಾಗಿ ಪರ್ಷಿಯನ್ನರ ಪ್ರಭಾವಕ್ಕೊಳಗಾಯಿತು. ವಿಕಟಾಲಂಕಾರದ ಭೀಭತ್ಸಗಳು, ಗುಲಾಬಿಯ ಆಕಾರದ ಅಲಂಕಾರಗಳು, ಪಕ್ಷಿಗಳು - ಇವು ಕಲೆಗೆ ಸಾಮಗ್ರಿಗಳು. ರಂಗುರಂಗಿನ ಚಿತ್ರಮಯ ಬಟ್ಟೆಗಳನ್ನು ನೇಯುವ ಕಲೆಗಳಲ್ಲಿ ಪರ್ಷಿಯ ಪರಿಣತಿ ಪಡೆದಿತ್ತು. ಆದ್ದರಿಂದ ಅಲ್ಲಿ ನಿಶ್ಚಲ ಚಿತ್ರಗಳಿಗೆ ಪಾಧಾನ್ಯವಿತ್ತು. ಗ್ರೀಕರು ಪರ್ಷಿಯನ್ನರಿಂದ ಈ ವಿನ್ಯಾಸವನ್ನು ಎರವಲು ಪಡೆದು ಪಾನಪಾತ್ರೆಗಳ ಮೇಲೆ ರೂಪಿಸಿದಾಗ ಅವು ನೀರಸವೂ, ನಿಸ್ಸತ್ತ್ವವೂ ಆದುವು.
ಗ್ರೀಕ್ ಕಲೆಯ ಶ್ರೇಷ್ಠ ಕಾಲ ಉದಯವಾದದ್ದು ಇಂಥ ಹಿನ್ನೆಲೆಯಲ್ಲಿ. ಇಲ್ಲಿ ಸಾಮಾನ್ಯವಾಗಿ ಐದು ಘಟ್ಟಗಳನ್ನು ಗುರುತಿಸಬಹುದು. ಮೊದಲನೆಯದು ಆರ್ಷೇಯ. ಆ ಕಾಲದಲ್ಲಿ ರೂಪಿತವಾದ ಮನುಷ್ಯಾಕೃತಿಗಳಲ್ಲಿ ಸಾಮಾನ್ಯವಾದ ಅಂಗರಚನೆಯ ದೋಷಗಳನ್ನು, ಭಾವಪ್ರದರ್ಶನದಲ್ಲಿ ಅನೌಚಿತ್ಯವನ್ನು, ಭೀರುವಾದ ತಂತ್ರಗಳನ್ನು ನೋಡಬಹುದು. ಈ ಕೊರತೆಗಳನ್ನು ಪರಿವರ್ತನ ಕಾಲದಲ್ಲಿ ಸ್ವಲ್ಪಮಟ್ಟಿಗೆ ನಿವಾರಿಸಿಕೊಳ್ಳಲಾಯಿತು. ಆದರೆ ಭಂಗಿಯಲ್ಲಿ ಇನ್ನೂ ಸ್ವಲ್ಪ ಗಡುಸು ತುಂಬಿಕೊಂಡಿತ್ತು. ಇದೂ ಆ ಕಾಲದ ಕೊನೆಯ ವರ್ಷಗಳಲ್ಲಿ ಪರಿವರ್ತಿತವಾಯಿತು.
ಕ್ರಿ.ಪೂ. 450 ರಿಂದ 323 ರ ವರೆಗಿನ ಕಾಲವನ್ನು ಪೆರಿಕ್ಲೀಸ್ ಯುಗವೆಂದೂ (Periclean age), ಮಹಾಯುಗವೆಂದೂ ಕರೆಯಲಾಗಿದೆ. ಈ ಕಾಲದಲ್ಲಿ ಗ್ರೀಸ್ ಸರ್ವತೋಮುಖ ಪ್ರಗತಿ ಸಾಧಿಸಿತು. ಬೃಹತ್ತಾದ ಪೌರ ಕಟ್ಟಡಗಳ ನಿರ್ಮಾಣವಾದದ್ದೂ, ಗ್ರೀಕ್ ದೇವತೆಗಳ ದೊಡ್ಡ ವಿಗ್ರಹಗಳನ್ನೂ ಕೆತ್ತಿದ್ದೂ ಆ ಕಾಲದಲ್ಲಿಯೇ.

ವರ್ಗೀಕರಿಸಲಾದ ವಿಗ್ರಹಗಳು, ಕುಳಿತ ಭಂಗಿಯ ವಿಗ್ರಹಗಳು, ಹಾರುವ ಆಕೃತಿಗಳು, ನಿಂತಿರುವ ಪುರುಷ ಮತ್ತು ಸ್ತ್ರೀ ವಿಗ್ರಹಗಳು ಎಂದು ಆರ್ಷೇಯ ಕಾಲದ ವಿಗ್ರಹಗಳನ್ನು ನಾಲ್ಕು ತೆರನಾಗಿ ವಿಂಗಡಿಸಬಹುದು. ಒಂದು ಚಿತ್ರದಲ್ಲಿ ತೋರುವ, ಅಮೃತಶಿಲೆಯಲ್ಲಿ ಕೆತ್ತಿದ, ನಿಂತ ಸ್ತ್ರೀ ವಿಗ್ರಹವನ್ನು ನೋಡಿದಾಗ ಅದು ಈಜಿಪ್ಟ್ ವಿಗ್ರಹಗಳಿಂದ ಪ್ರಭಾವಿತವಾದುದೆಂಬುದು ಸ್ಪಷ್ಟವಾಗುತ್ತದೆ. ಇದನ್ನು ನಿಕಾಂದ್ರ ಎಂಬವಳು ಆರ್ಟೆಮಿಸನ ಗೌರವಾರ್ಥವಾಗಿ ಮುಡಿಪಿಟ್ಟಳೆಂದು ಅಲ್ಲಿಯ ಶಾಸನವೊಂದು ತಿಳಿಸುತ್ತದೆ.[೧] ಈ ಹೆಣ್ಣಿನ ತಲೆಯ ಕೂದಲು ಎರಡು ಭಾಗಗಳಾಗಿ ಎರಡು ಭುಜಗಳ ಮುಂದೆಯೂ ಚೆಲ್ಲಾಡಿದೆ. ಕುತ್ತಿಗೆ ದೃಢವಾಗುವಂತೆ ಈಜಿಪ್ಟ್ ವಿಗ್ರಹಗಳ ಶಿಲ್ಪದಲ್ಲಿ ಅನುಸರಿಸುತ್ತಿದ್ದ ತಂತ್ರವಿದು.[೨] ಅಂತೆಯೇ ಇದೂ ಮುಮ್ಮುಖವಾಗಿದೆ.
ಅನಂತರದ ಕಾಲದ ಒಂದು ವಿಗ್ರಹ ವರ್ತುಲಾಕೃತಿಯಲ್ಲಿದೆ. ಮರದಲ್ಲಿ ಕೆತ್ತಿದ ವಿಗ್ರಹಗಳಂತೆ ಪೆಡಸಾಗಿ ಕಾಣುವ ಈ ವಿಗ್ರಹದ ಕೆಳಭಾಗ ಮರದ ಕಾಂಡದಂತಿದೆ. ಕಾಲಿನ ಬೆರಳುಗಳನ್ನು ಮಾತ್ರ ಬಿಡಿಸಲಾಗಿದೆ. ಸಾಂಪ್ರದಾಯಿಕವಾಗಿ ಬಂದ ಅಮೂರ್ತ ಶೈಲಿಯ ಪ್ರತೀಕವಿದು. ಈ ಕಾಲದಲ್ಲಿ ಈಜಿಪ್ಟ್ ಶೈಲಿಯ ಅನುಕರಣೆಯಾಯಿತೆನ್ನಲು ಇನ್ನೊಂದು ಆಧಾರವೆಂದರೆ, ಅಪೋಲೊ ದೇವತೆಗಳದೆಂದು ಮೊದಲು ಪರಿಗಣಿತವಾಗಿದ್ದು ಅನಂತರ ನವಯುವಕರದೆಂದು ನಾಮಕರಣ ಮಾಡಲಾದ ವಿಗ್ರಹಗಳಲ್ಲಿಯ ಮುಂಚಾಚಿರುವ ಎಡಗಾಲುಗಳು.
ಆದರೂ ಗ್ರೀಕ್ ವಿಗ್ರಹಗಳಲ್ಲಿ ಎದ್ದು ಕಾಣುವ ವಿಶಿಷ್ಟತೆಯೆಂದರೆ ನಗ್ನತೆ. ಒಲಿಂಪಿಕ್ ಸ್ಪರ್ಧೆಯ ಸ್ಪರ್ಧಿಗಳಿಗೆ ಉಡುಗೆ ಚಲನೆಗೆ ಅಡ್ಡಿಯಾಗುವುದೆಂಬ ಭಾವನೆಯಿತ್ತು.[೩] ಇದೇ ಭಾವನೆ ಕಲೆಯಲ್ಲೂ ವ್ಯಕ್ತವಾಗಿದೆ. ತೃಪ್ತ ಮನೋಭಾವವನ್ನು ಚಿತ್ರಿಸಲು ನಗ್ನತೆ ಹೆಚ್ಚು ಪೋಷಕ. ದೇಹದ ಎಲ್ಲ ಅಂಗಗಳಲ್ಲಿ, ಮಾಂಸಖಂಡಗಳಲ್ಲಿ ಚಲನೆಯನ್ನು ಮೂಡಿಸುವುದು ನಗ್ನತೆಯ ಚಿತ್ರಣದಿಂದ ಹೆಚ್ಚು ಸಾಧ್ಯ. ದೇಹವನ್ನು ವಸ್ತ್ರಗಳಿಂದ ಮುಚ್ಚಿದಾಗ, ಇವನ್ನು ಮೂಡಿಸುವ ಅವಕಾಶ ಬಹಳವಾಗಿ ಮುಖಕ್ಕೆ ಸೀಮಿತವಾಗಿರುತ್ತದೆ. ನಗ್ನತೆಗೂ, ಶೃಂಗಾರಕ್ಕೂ ಸಂಬಂಧವಿದ್ದರೂ ಶೃಂಗಾರ ಪ್ರಣಯವನ್ನು ಮಾತ್ರ ಪ್ರಚೋದಿಸಲು ಮಾತ್ರವೇ ನಗ್ನತೆಯನ್ನು ಮಾಧ್ಯಮವಾಗಿ ಅವರು ಬಳಸಲಿಲ್ಲ.
ಪರ್ಷಿಯನ್ ಕದನ ಕ್ರಿ.ಪೂ. ಸು. 480 ರ ವೇಳೆಗೆ ಮುಗಿದಿತ್ತು. ಈ ಕದನಗಳು ಗ್ರೀಕರನ್ನು ವಿನಾಶಕ್ಕೆ ಒಯ್ಯಬಹುದಿತ್ತು. ಆದರೆ ಗ್ರೀಕರ ಆದರ್ಶವಾದ ಅವರನ್ನು ಅಳಿವಿನ ವಿರುದ್ಧ ಹೋರಾಡಲು ಪ್ರೇರೆಪಿಸಿತು. ಇದರ ಪರಣಾಮವಾಗಿ ಅವರಿಗೆ ವಿಜಯ ಲಭ್ಯವಾಯಿತು. ಜೀವನದಲ್ಲಿ ಅವರು ಹೊಸ ಮೌಲ್ಯಗಳನ್ನು ಕಾಣುವಂತೆ ಮಾಡಿತು. ಶತ್ರುವಿನ ದಾಳಿಗೆ ಸಿಕ್ಕಿ ಹಾಳಾಗಿದ್ದ ನಗರಗಳಲ್ಲಿ ನವಚೇತನ ಉಕ್ಕಿ ಹರಿಯಿತು. ಗ್ರೀಕ್ ಕಲೆ ಪೂರ್ಣವಾಗಿ ಅರಳಿತು.
ಈ ನವಯುಗದ ಆರಂಭಕಾಲಕ್ಕೆ ಸೇರಿದ್ದು ಆಫ್ರೊಡೈಟಿ ದೇವತೆಯ ಜನನವನ್ನು ಸೂಚಿಸುವ ವಿಗ್ರಹ ಫಲಕ. ಈ ದೇವತೆ ಇಜೀಯನ್ ಸಮುದ್ರದ ನೊರೆಗಳಲ್ಲಿ ನವಯುವತಿಯಾಗಿ ಜನಿಸಿದಳೆಂಬ ಪ್ರಚಲಿತ ಕಥೆಯನ್ನು ಇಲ್ಲಿ ರೂಪಿಸಲಾಗಿದೆ.[೪] ಚಿತ್ರದಲ್ಲಿ ಆಕೆಯನ್ನು ನೀರಿನಿಂದ ಮೇಲಕ್ಕೆ ಎಳೆಯುತ್ತಿರುವ ದೃಶ್ಯವಿದೆ. ಈ ಶಿಲ್ಪದಲ್ಲಿ ಕೊರತೆಗಳಿಲ್ಲದಿಲ್ಲ. ಅಂಗರಚನೆಯಲ್ಲಿಯೇ ಕುಂದಿದೆ. ಸ್ತನಗಳೆರಡೂ ಎರಡು ಬದಿಗಳಲ್ಲಿವೆ. ತಲೆಯನ್ನು ಬಲಭಾಗಕ್ಕೆ ಹೊರಳಿಸಿದಾಗ ಆಗಬಹುದಾದ ಸ್ನಾಯುಗಳ ಸೆಳೆತಗಳಾವುವೂ ಇಲ್ಲಿ ಕಾಣುವುದಿಲ್ಲ. ಇವು ಮುಖ್ಯ ತಪ್ಪುಗಳು. ಆದರೂ ಈ ಶಿಲ್ಪ ಅನಂತರ ಬರಲಿದ್ದ ಭವ್ಯ ಕಲಾಕೃತಿಗಳ ಮುನ್ಸೂಚಿಯಂತಿದೆ.

ಈ ದೃಷ್ಟಿಯಿಂದ ಒಲಿಂಪಿಯದ ಜ಼್ಯೂಸ್ ದೇವಾಲಯದಲ್ಲಿ ಅಳವಡಿಸಿದ, ಹೆರಕ್ಲೀಸ್ ಗೂಳಿಯನ್ನು ಪಳಗಿಸುತ್ತಿರುವ ಚಿತ್ರ ಭವ್ಯವಾದದ್ದು. ಇಲ್ಲಿ ಕಾಣುವುದು ಗೂಳಿಯ ಹಾಗೂ ಹೆರಕ್ಲೀಸನ ನಡುವಣ ಘರ್ಷಣೆಯ ಒಂದು ಕ್ಷಣದ ಸ್ತಬ್ಧ ದೃಶ್ಯ. ಒಂದು ಕ್ಷಣದ ಹಿಂದೆ ಚಲನೆ ಇತ್ತು; ಒಂದು ಕ್ಷಣದ ಬಳಿಕ ಪುನಃ ಚಲನೆ ಇರುತ್ತದೆ. ಇವುಗಳ ನಡುವಣ ಕ್ಷಣದ ಸ್ತಬ್ಧಚಲನೆ ಇಲ್ಲಿ ರೂಪಿತವಾಗಿದೆ. ಗ್ರೀಕ್ ಕಲೆಯಲ್ಲಿ ಇದೂ ಒಂದು ಪದ್ಧತಿಯಾಗಿ ಉಳಿಯಿತು.

ಗ್ರೀಕ್ ಶಿಲ್ಪಕಾರರಲ್ಲಿ ಪ್ರಸಿದ್ಧರಾದ ಆರು ಜನರ ಹೆಸರುಗಳು ತಿಳಿದುಬಂದಿವೆ. ಅವರು ಮೈರಾನ್, ಫಿಡಿಯಸ್, ಪಾಲಿಕ್ಲೈಟಸ್, ಪ್ರಾಕ್ಸಿಟೆಲೀಸ್, ಸ್ಕೋಪಸ್ ಮತ್ತು ಲೈಸಿಪ್ಪಸ್.[೫] ಇವರಲ್ಲಿ ಕೊನೆಯವನು ಅಲೆಗ್ಸಾಂಡರನ ಆಶ್ರಯ ಪಡೆದಿದ್ದ. ಗ್ರೀಕ್ ಸಾಹಿತ್ಯದಲ್ಲಿ ಇವರ ಉಲ್ಲೇಖವಿದೆ. ಆದರೆ ಇವರು ಕೆತ್ತಿದ ವಿಗ್ರಹಗಳು ದೊರೆತಿರುವುದು ಬಹಳ ಕಡಿಮೆ. ಸಿಕ್ಕಿರುವವೂ ಆ ಕಲಾವಿದರವೇ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿಲ್ಲದಿಲ್ಲ. ಮೈರಾನನದೆನ್ನಲಾದ, ಚಕ್ರ (ಡಿಸ್ಕಸ್) ವಿಗ್ರಹ ಉತ್ಕೃಷ್ಟವಾದದ್ದು. ಆ ಚಕ್ರವನ್ನು ದೂರಕ್ಕೆ ಎಸೆಯುವ ಕ್ಷಣಗಳಲ್ಲಿ ತಲೆಯನ್ನು ಹಿಂಚಾಚಿ, ಎಸೆಯುವ ಕೈಯನ್ನು ದೃಷ್ಟಿಸಿ ನೋಡುವ, ಒಂದು ಕಾಲನ್ನು ತುಸು ಬಾಗಿಸಿ, ಮರುಕ್ಷಣದಲ್ಲಿ ಚಕ್ರವನ್ನು ಎಸೆಯುವಂತೆ ತೋರುವ ಈ ಸ್ಪರ್ಧಿಯ ವಿಗ್ರಹ ಗ್ರೀಕ್ ಶೈಲಿಯ ಒಂದು ಉತ್ತಮ ಮಾದರಿ.
ಫಿಡಿಯಸ್ ಗ್ರೀಕ್ ಮಹಾಯುಗಕ್ಕೆ ಸೇರಿದ ಶಿಲ್ಪಿ. ಗ್ರೀಕ್ ದೇವತೆಗಳ ಅತ್ಯುತ್ತಮ ಶಿಲ್ಪಗಳನ್ನು ಕಡೆದ ಖ್ಯಾತಿ ಈತನದು. ಅಥೀನ ಪಾರ್ಥಿನಾಸ್ 38' ಎತ್ತರದ ಭವ್ಯ ಮೂರ್ತಿ.[೬] ಜ್ಞಾನ ಹಾಗೂ ಪಾತಿವ್ರತ್ಯವನ್ನು ಪ್ರತಿನಿಧಿಸುವ ಈ ದೇವತೆಯನ್ನು ಪರ್ಥಿನಾನ್ ದೇವಾಲಯದಲ್ಲಿ ಸ್ಥಾಪಿಸಲಾಗಿತ್ತು.[೭][೮] ಈ ವಿಗ್ರಹವನ್ನು ದಂತ, ಚಿನ್ನ ಹಾಗೂ ಇತರ ಅಮೂಲ್ಯ ಲೋಹದಿಂದ ಮಾಡಲಾಗಿತ್ತು. ಫಿಡಿಯಸ್‍ನ ಇನ್ನೊಂದು ವಿಗ್ರಹ 40' ಎತ್ತರದ ಜ಼್ಯೂಸ್‍ನ ಮೂರ್ತಿ. ಕುಳಿತಂತೆ ಇದನ್ನು ತೋರಿಸಲಾಗಿದೆ.[೯] ಇದನ್ನು ಒಲಿಂಪಿಯದ ದೇವಾಲಯದಲ್ಲಿ ಸ್ಥಾಪಿಸಲಾಗಿತ್ತು. ಪಾರ್ಥಿನಾನ್ ದೇವಾಲಯ ಈ ಶಿಲ್ಪಿಯ ಮೇಲ್ವಿಚಾರಣೆಯಲ್ಲೇ ನಿರ್ಮಾಣವಾಯಿತು. ಪೆರಿಕ್ಲೀಸನ ಒಲವನ್ನು ಸಂಪಾದಿಸಿದ ಈ ಶಿಲ್ಪಿಯ ಮೂಲಕೃತಿಗಳು ಮಾತ್ರ ದೊರೆತಿಲ್ಲ. ದೊರೆತಿರುವುದೆಲ್ಲ ಅವುಗಳ ಪ್ರತಿಕೃತಿಗಳು.
ಪಾಲಿಕ್ಲೈಟಸ್ ಈತನ ಸಮಕಾಲೀನ. ಎಪಿಡಾರಸ್ ಗ್ರಾಮದಲ್ಲಿ ಗ್ರೀಕರ ದೇವತೆಯಾದ ಆಸ್ಕ್ಲೀಪಿಯಸನಿಗಾಗಿ ದೊಡ್ಡ ದೇವಾಲಯವನ್ನು ಕಟ್ಟಿಸಿದವನೀತ. ಆದರೆ ಇದರ ಶಿಲ್ಪಿ ಥಿಯೊಡಾಟಸ್ ಎಂದು ಈಗ ಒಪ್ಪಲಾಗಿದೆ. ಶಿಲ್ಪಕಲೆಯಲ್ಲಿ ಅನುಪಾತ ಸಿದ್ಧಾಂತವನ್ನು ರೂಪಿಸಿದ (Canon of Polykleitos) ಈತ ತನ್ನ ಸಿದ್ಧಾಂತವನ್ನು ಮೂರ್ತಿಕರಿಸಲು 2' ಎತ್ತರದ ಡೊರಿಫೋರಸ್ ಮೂರ್ತಿಯನ್ನು ಕಡೆದ. ಇದರ ಮೂಲವೂ ದೊರೆತಿಲ್ಲ.[೧೦] ಪ್ರಾಕ್ಸಿಟೆಲೀಸನೂ ಒಲಿಂಪಿಯ ನಗರದವನೇ. ಕ್ರಿ.ಪೂ. 340 ಈತನ ಕಾಲ. ಹರ್ಮೀಸ್ ವಿಗ್ರಹದ ಶಿಲ್ಪಿಯೀತ. ಇದನ್ನು ಅಮೃತಶಿಲೆಯಲ್ಲಿ ಕಡೆಯಲಾಗಿತ್ತು. ಹರ್ಮೀಸ್ ದೇವತೆ ಡಯೊನೈಸಸನನ್ನು ಎಡಗೈಯಲ್ಲಿ ಎತ್ತಿಕೊಂಡಂತೆ ರೂಪಿಸಲಾದ 7' ಎತ್ತರದ ಈ ದೇವತೆಯನ್ನು ಹೀರ ದೇವಾಲಯದಲ್ಲಿ ಸ್ಥಾಪಿಸಲಾಗಿತ್ತು.[೧೧] 6 ನೆಯ ಶತಮಾನದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಈ ವಿಗ್ರಹ ಮಣ್ಣಿನಲ್ಲಿ ಹುದುಗಿತ್ತು. 1877 ರಲ್ಲಿ ಈ ವಿಗ್ರಹ ಬಹಳ ಮಟ್ಟಿಗೆ ಪೂರ್ವ ರೂಪದಲ್ಲೇ ದೊರೆಯಿತು.[೧೨]
ಉಲ್ಲೇಖಗಳು
[ಬದಲಾಯಿಸಿ]- ↑ Richter (1968), p. 26
- ↑ As translated and quoted in Donohue (2005), p. 45. Homolle later insisted that such similarities were purely coincidental: Donohue (2005), p. 50
- ↑ See Perrottet, pp.6–7 and "Olympic Games" in The Classical Tradition p.654.
- ↑ "Suda, π, 825".
- ↑ Blumberg, Naomi. "Polyclitus". Encyclopedia Britannica. Retrieved 25 June 2023.
- ↑ "Athena Parthenos by Phidias". World History Encyclopedia. Retrieved 26 June 2019.
- ↑ Palagia & Pollitt 1996, p. 28-32.
- ↑ Aghion, Barbillon & Lissarrague 1996, p. 193.
- ↑ Phidias from encyclopædiabritannica.com. Retrieved 3 September 2014
- ↑ Warren G. Moon, ed. Polykleitos, the Doryphoros, and Tradition, 1995: essays by various scholars resulting from a symposium at the University of Wisconsin, 1989, stimulated by the purchase of the Minneapolis Doryphoros.
- ↑ Pausanias, Description of Greece 5.17.3
- ↑ Encyclopædia Britannica, 1911.
ಗ್ರಂಥಸೂಚಿ
[ಬದಲಾಯಿಸಿ]- Richter, Gisela Marie Augusta (1968). Korai: Archaic Greek Maidens: a Study of the Development of the Kore Type in Greek Sculpture. London: Phaidon Press.
- Donohue, A. A. (2005). Greek Sculpture and the Problem of Description. New York, NY: Cambridge University Press. ISBN 9780521840842.
- Palagia, Olga; Pollitt, J. J. (1996), Personal Styles in Greek Sculpture, Cambridge, England: Cambridge University Press, ISBN 978-0-521-65738-9
- Aghion, Irène; Barbillon, Claire; Lissarrague, François (1996), "Minerva", Gods and Heroes of Classical Antiquity, Flammarion Infographic Guides, Paris, France and New York City, New York: Flammarion, pp. 192–194, ISBN 978-2-0801-3580-3
