ಪ್ರಕಾಶ್ ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಕಾಶ್ ಜಿ ಕನ್ನಡದ ತರುಣ ಬರಹಗಾರರಲ್ಲಿ ಒಬ್ಬರು. ಇವರು ೧೯೭೩ರ ಜನವರಿ ೧ರಂದು ಆಂಧ್ರಪ್ರದೇಶದ ಅನಂತಪುರಜಿಲ್ಲೆಯ ಗಂಗಲವಾಯಿಪಾಳ್ಯಂ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಜಿ. ಪಿ. ಹನುಮಂತರಾಯಪ್ಪ, ತಾಯಿ ರಂಗಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟಿದೂರಿನಲ್ಲಿ ಪೂರೈಸಿ, ಕರ್ನಾಟಕದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರದಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಪ್ರೌಢಶಾಲೆಯಿಂದ ಪದವಿ ತರಗತಿಯವರೆಗೂ ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರು ವಿಶ್ವ ವಿದ್ಯಾಲಯದಿಂದ ಶಿಕ್ಷಣದಲ್ಲೂ ಸ್ನಾತಕೋತ್ತರ ಪದವಿ ಪಡೆದು, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮೊ ತರಗತಿಗೆ ಸೇರಿ ಮೂರನೇ ರಾಂಕ್ ಪಡೆದರು. ಪದವಿತರಗತಿಯಲ್ಲಿ ಓದುತ್ತಿದ್ದಾಗಲೇ "ಅಪ್ಪ" (೧೯೯೩)ಎಂಬ ಹೆಸರಿನ ಕವನಸಂಕಲನ ಪ್ರಕಟಿಸಿದರು. ೧೯೯೪ರಲ್ಲಿ "ನಂದಕಿಶೋರ" (ನವೋದಯ ಸಂದರ್ಭದ ಅಜ್ಞಾತ ಸಾಹಿತಿ ಟಿ.ಎನ್. ಮಹದೇವಯ್ಯನವರ ಸಂಶೋಧನಾತ್ಮಕ ಜೀವನ ಚಿತ್ರಣ) ಕ್ರುತಿ ಪ್ರಕಟಿಸಿದರು. ೨೦೦೧ರಲ್ಲಿ " ಜಾಲಿಯ ಹೂವು" ಕವನಸಂಕಲನ ಪ್ರಕಟವಾಯಿತು. ಈ ಪುಸ್ತಕಕ್ಕೆ ಡಿವಿಜಿ ಸಾಹಿತ್ಯ ಪುರಸ್ಕಾರ ಲಭಿಸಿದೆ.