ಪುಲಸ್ತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಲಸ್ತ್ಯ ಸಪ್ತರ್ಷಿಗಳಲ್ಲಿ ಒಬ್ಬ. ಬ್ರಹ್ಮನ ಮಾನಸ ಪುತ್ರ. ಕೃತಯುಗದ ಅಂತ್ಯ ಭಾಗದಲ್ಲಿ ಮೇರುಪರ್ವತದ ತಪ್ಪಲಲ್ಲಿ ತಪಸ್ಸು ಮಾಡಿಕೊಂಡಿದ್ದ. ತೃಣಬಿಂದು ಮುನಿಯ ಮಗಳಾದ ಗೋ ಎಂಬಾಕೆಯನ್ನು ಮದುವೆಯಾದ. ವಿಶ್ರವಸ ಇವನ ಹಿರಿಯ ಮಗ (ಒಂದು ಐತಿಹ್ಯಯದ ಪ್ರಕಾರ ಪುಲಸ್ತ್ಯನ ಅರ್ಧ ಭಾಗವೇ ಸಾಕಾರಗೊಂಡು ವಿಶ್ರವಸನ ರೂಪ ತಳೆಯಿತು). ಕಾರ್ತವೀರ್ಯಾರ್ಜುನನ ಮೇಲೆ ಯುದ್ಧಮಾಡಿ ಸೆರೆ ಸಿಕ್ಕ ರಾವಣನನ್ನು ಈತ ಬಿಡಿಸಿದ. ಕರ್ದಮ ಬ್ರಹ್ಮನ ಮಗಳಾದ ಹವಿರ್ಭುಕ್ ಎಂಬಾಕೆಯನ್ನು ಮದುವೆಯಾಗಿ ಅಗಸ್ತ್ಯನನ್ನು ಪಡೆದ. ಇಲಬಿಲೆ ಎಂಬಾಕೆಯಲ್ಲಿ ಕುಬೇರನನ್ನು ಕೇಶಿನಿ ಎಂಬಾಕೆಯಲ್ಲಿ ರಾವಣಾದಿಗಳನ್ನೂ ಪ್ರೀತಿ ಎಂಬಾಕೆಯಲ್ಲಿ ದಂಭೋಳಿಯನ್ನೂ ಪಡೆದ. ಸಂಧ್ಯಾ, ಪ್ರತೀಚ್ಯಾ ಎಂಬ ಇನ್ನಿಬ್ಬರು ಇವನ ಹೆಂಡತಿಯರು. ಭೂಪ್ರದಕ್ಷಿಣೆಯ ವಿಷಯವಾಗಿ ಈತ ಬ್ರಹ್ಮನೊಂದಿಗೆ ಸಂವಾದ ಮಾಡಿದ. ತನ್ನ ತಂದೆಯಾದ ಶಕ್ತಿಮುನಿಯನ್ನು ರಾಕ್ಷಸ ನುಂಗಿದನೆಂದು ಪರಾಶರಮುನಿ ರಾಕ್ಷಸಕುಲ ವಿನಾಶಕ್ಕೆಂದು ಯಜ್ಞ ಮಾಡತೊಡಗಿದಾಗ ಈತ ಅಲ್ಲಿಗೆ ಹೋಗಿ ಬೇಡಿ ಯಜ್ಞವನ್ನು ನಿಲ್ಲಿಸಿದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: