ಪಂಜಿನ ಕುಣಿತ

ವಿಕಿಪೀಡಿಯ ಇಂದ
Jump to navigation Jump to search

ಮಂಡ್ಯ ಜಿಲ್ಲೆಯಲ್ಲಿ ವಿಶೇಷವಾಗಿ ಕಂಡುಬರುವಂತಹ ಈ ಪಂಜಿನ ಕುಣಿತವು ಗ್ರಾಮದೇವತೆಗಳ ಹಬ್ಬ, ಸುಗ್ಗಿಯ ಸಂದರ್ಭಕ್ಕೆ ಸಂಬಂಧಿಸಿರುವುದು ಆಗಿದೆ. ದೇವರಿಗೆ ಸಲ್ಲಿಸುವ 'ದೀವಟಿಗೆ ಸೇವೆ'ಯ ಒಂದು ರೂಪವೆಂದು ಹೇಳಬಹುದಾಗಿದೆ. ಈ ಕಲೆಯಲ್ಲಿ ಬಳಸುವಂತಹ ಪಂಜು ಕಬ್ಬಿಣದ ಸರಳಿನಲ್ಲಿ ಮಾಡಿದ ತ್ರಿಶೂಲಾಕಾರದ ಒಂದು ರಚನೆ. ಮೂರು ದಳಗಳಿಗೂ ಬಟ್ಟೆ ಸುತ್ತಿ ಅದಕ್ಕೆ ಹೊಂಗೆ, ಹರಳು ಅಥವಾ ಹಿಪ್ಪೆ ಎಣ್ಣೆಯನ್ನು ಹಾಕಿ ಹತ್ತಿಸುತ್ತಾರೆ. ಹೀಗೆ ಉರಿಯುವ ಪಂಜನ್ನು ಹಿಡಿದು ಕುಣಿಯುವುದರಿಂದ ಇದನ್ನು 'ಪಂಜಿನ ಕುಣಿತ'ವೆಂದು ಕರೆಯುವರು. ಈ ಕುಣಿತದಲ್ಲಿ ಕಲಾವಿದರು ಕಾಲಿಗೆ ಗೆಜ್ಜೆಯನ್ನು ಹಾಕಿಕೊಂಡು ತಲಾ ಒಂದೊಂದು ಪಂಜು ಹಿಡಿದು ಸಾಲಾಗಿ ನಿಂತಿರುತ್ತಾರೆ. ಕುಣಿತದ ಪ್ರಾರಂಭದ ಮೊದಲು ತಂಡದ ಒಬ್ಬಿಬ್ಬರು ನಾಯಕರು 'ತಿರುಪತಿ ವೆಂಕಟರಮಣ ಗೋವಿಂದ' ಎಂದು ಒಕ್ಕೊರಲಿನಲ್ಲಿ ಕೂಗುತ್ತಾರೆ. ಹೀಗೆ ಮೂರು ಸಾರಿ ಹೇಳುವಾಗಲೂ ಪಂಜನ್ನು ನೆಲದ ಬಳಿಗೆ ಬಾಗಿಸಿ ನಿಧಾನವಾಗಿ ಮೇಲಕ್ಕೆತ್ತುತ್ತಾರೆ. ಇದನ್ನು 'ಮೊದಲ ಸೇವೆ' ಎನ್ನುತ್ತಾರೆ. ದೇವರಿಗೆ ನಡೆಯುವಂತಹ ದೀವಟಿಗೆ ಸೇವೆಯು ಇದೇ ರೀತಿ ಇರುತ್ತದೆ. ಅಲ್ಲಿ ಇದನ್ನು 'ದೀವಟಿಗೆ ಸಲಾಮು' ಎಂದು ಕರೆಯುವರು. 'ಮೊದಲ ಸೇವೆ'ಯು ನಡೆದ ನಂತರ ಕಲಾವಿದರೆಲ್ಲ ಒಟ್ಟಾಗಿ ಸೇರಿಕೊಂಡು ಕೇಕೆ ಹಾಕುತ್ತಾ ಓಡಿ ಮುಂದಕ್ಕೆ ಬರುತ್ತಾರೆ. ಸಾಮಾನ್ಯವಾಗಿ ವಿಶಾಲವಾದ ಮೈದಾನದಲ್ಲಿ ನಡೆಯುವ ಈ ಪ್ರದರ್ಶನದಲ್ಲಿ ಕಲಾವಿದರು ಉದ್ದಸಾಲು, ಅಡ್ಡಸಾಲು, ಸುತ್ತು ಸಾಲಿನಲ್ಲಿ ಹೆಜ್ಜೆಹಾಕುತ್ತಾ ಪಂಜನ್ನು ಮೇಲೆ ಕೆಳಗೆ ಆಡಿಸುತ್ತಾ ಕುಣಿಯುತ್ತಾರೆ. ಹಿನ್ನೆಲೆಯಾಗಿ ಬಡಿತ ಮೇಳ ಒದಗಿಸಲಾಗುತ್ತದೆ. ಈ ಕುಣಿತವು ಬಯಲು ಸೀಮೆಯ ರಂಗದ ಕುಣಿತ ಅಥವಾ ಸುಗ್ಗಿಯ ಕುಣಿತವನ್ನೆ ಹೋಲುತ್ತದೆ. ಈ ಕಲಾವಿದರ ವೇಷಭೂಷಣವು ತುಂಬು ಅಥವಾ ಅರೆತೋಳಿನ ಬಿಳಿ ಅಂಗಿ, ಮೊಣ ಕಾಲಿನವರೆಗಿನ ಏರುಗಟ್ಟಿದ ಬಿಳಿ ಕಾಸೆಪಂಚೆ, ಸೊಂಟಕ್ಕೊಂದು ವಸ್ತ್ರ, ತಲೆಗೆ ಮೈಸೂರು ಝರಿ ಪೇಟ, ಹಣೆಗೆ ಗಂಧ ಮುಂತಾದವು. ಬಲಗೈಯಲ್ಲಿ ಪಂಜು ಹಿಡಿದಿದ್ದರೆ ಎಡಗೈಯಲ್ಲಿ ಸಣ್ಣ ಕರವಸ್ತ್ರ ಹಿಡಿದಿರುವುದುಂಟು. ಪಂಜಿನ ಕುಣಿತವು ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ನಡೆಯಬೇಕು. ಏಕೆಂದರೆ ಕತ್ತಲೆಯ ನಡುವೆ ಬೆಳಕಿನ ಕಿರಣಗಳು ಕಣ್ಣಿಗೆ ಸೊಗಸಾಗಿರುವುದು. ಕಲಾವಿದರು ವಿವಿಧ ಭಂಗಿಗಳಲ್ಲಿ ಸುತ್ತಿ, ಕುಳಿತು ನಿಂತು ಕುಣಿಯುವಾಗ ಕತ್ತಲಲ್ಲಿ ಹೊಳೆಯುವ ಪಂಜಿನ ಬೆಳಕು, ಆ ಬೆಳಕಿನಲ್ಲಿ ಕಾಣುವ ಕಲಾವಿದರ ಕುಣಿತವು ಪ್ರದರ್ಶನಕ್ಕೆ ಮೆರಗನ್ನು ನೀಡುವುದು.


ಉಲ್ಲೇಖಗಳು[ಬದಲಾಯಿಸಿ]

  • ಕರ್ನಾಟಕ ಜನಪದ ಕಲೆಗಳು: ಸಂಪಾದಕ-ಗೊ.ರು.ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತು, ೧೯೭೭