ನ್ಯೂಟನ್ ಬೂತ್ ಟಾರ್ಕಿಂಗ್ಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನ್ಯೂಟನ್ ಬೂತ್ ಟಾರ್ಕಿಂಗ್ಟನ್ (1869-1946). ಅಮೆರಿಕಇಂಡಿಯಾನ ಪ್ರಾಂತ್ಯದ ಕಾದಂಬರಿಕಾರ ಮತ್ತು ನಾಟಕಕಾರ.

ಬದುಕು ಮತ್ತು ಬರಹ[ಬದಲಾಯಿಸಿ]

ಹುಟ್ಟಿದ್ದು ಇಂಡಿಯಾನಾಪಾಲಿಸ್‍ನಲ್ಲಿ. ವ್ಯಾಸಂಗ ಮಾಡಿದ್ದು ಪಡ್ರ್ಯೂನ ಫಿಲಿಪ್ಸ್ ಎಕ್ಸೀಟರ್ ಅಕಾಡೆಮಿ ಮತ್ತು ಪ್ರಿನ್ಸ್‍ಟನ್ ವಿಶ್ವವಿದ್ಯಾಲಯಗಳಲ್ಲಿ. 1902-03ರಲ್ಲಿ ಇಂಡಿಯಾನ ಪ್ರಾಂತ್ಯದ ಶಾಸನಸಭೆಯ ರಿಪಬ್ಲಿಕನ್ ಪಕ್ಷದ ಸದಸ್ಯನಾಗಿದ್ದ. ಇವನಿಗೆ ಜನಪ್ರಿಯತೆ ಗಳಿಸಿಕೊಟ್ಟ ಮೊದಲ ಕೃತಿ 18ನೆಯ ಶತಮಾನ ಇಂಗ್ಲೆಂಡಿನಲ್ಲಿ ಡ್ಯೂಕ್ ಆಫ್ ಆರ್ಲಿಯನ್ಸ್‍ನ ಸಾಹಸದ ಕಥೆಗಳನ್ನು ವರ್ಣಿಸುವ ಕಾದಂಬರಿ ಮೆಸ್ಯೆರ್ ಬೋಕೇರ್ (1900). ಈ ಮೊದಲೇ ಬರೆದಿದ್ದ ದಿ ಜಂಟಲ್‍ಮನ್ ಫ್ರಮ್ ಇಂಡಿಯಾನ (1899) ಎಂಬುದು ಒಬ್ಬ ಸಂಪಾದಕ ರಾಜಕೀಯ ಭ್ರಷ್ಟಾಚಾರ ವಿರುದ್ಧ ನಡೆಸುವ ಹೋರಾಟವನ್ನು ವಿವರಿಸುತ್ತದೆ. ಅನಂತರ ಈತ ಬರೆದ ಕಾದಂಬರಿಗಳು ಅಮೆರಿಕದ ಮಧ್ಯಪ್ರಾಚ್ಯ ಪ್ರದೇಶದ ಜನಜೀವನವನ್ನು ಚಿತ್ರಿಸುತ್ತವೆ. ಅವುಗಳ ಪೈಕಿ ದಿ ಮ್ಯಾಗ್ನಿಫಿಸೆಂಟ್ ಆ್ಯಂಬರ್‍ಸನ್ಸ್ (1918) ಮತ್ತು ಆ್ಯಲಿಸ್ ಆಡಮ್ಸ್ (1921) ಕಾದಂಬರಿಗಳು ಪುಲಿಟ್ಸರ್ ಬಹುಮಾನ ಪಡೆದವು. ದಿ ಮ್ಯಾಗ್ನಿಫಿಸೆಂಟ್ ಆ್ಯಂಬರ್‍ಸನ್ಸ್ ಕೃತಿಯಲ್ಲಿ ಇಂಡಿಯಾನ ಪ್ರಾಂತ್ಯದ ಒಂದು ಗಣ್ಯ ಮನೆತನದ ಮೂರು ತಲೆಮಾರಿನ ಜೀವನದಲ್ಲಿ ಒದಗುವ ಅವನತಿಯ ವರ್ಣನೆಯಿದೆ. ಆ್ಯಲಿಸ್ ಆಡಮ್ಸ್ ಎಂಬುದು ಒಬ್ಬ ಸಾಮಾನ್ಯ ಹೆಂಗಸಿನ ಭ್ರಾಂತಿಗಳಿಗೆಲ್ಲಾ ನೀರಸಗೊಂಡ ಕಥೆಯನ್ನು ಹೇಳುತ್ತದೆ.

ಅಮೆರಿಕದ ಮಧ್ಯಪಾಶ್ಚಾತ್ಯ ಪ್ರದೇಶದ ನಗರ ಜೀವನವನ್ನು ಚಿತ್ರಿಸುವ ಗ್ರೋತ್ (1923) ಎಂಬುದು ದಿ ಟರ್ಮಾಯಿಲ್, ದಿ ಮ್ಯಾಗ್ನಿಫಿಸೆಂಟ್ ಆ್ಯಂಬರ್‍ಸನ್ಸ್ ಮತ್ತು ದಿ ಮಿಡ್‍ಲ್ಯಾಂಡರ್ ಎಂಬ ಮೂರು ಕಾದಂಬರಿಗಳನ್ನೊಳಗೊಂಡಿದೆ. ದಿ ಕಾನ್‍ಕ್ವೆಸ್ಟ್ ಆಫ್ ಕೆನಾನ್ (1905), ದಿ ಪ್ಲುಟೊಕ್ರಾಟ್ (1927) ಮತ್ತು ದಿ ಹೆರಿಟೇಜ್ ಆಫ್ ಹ್ಯಾಚರ್ ಐಡ್ (1941) ಎಂಬ ಶ್ರೇಷ್ಠ ಪ್ರಾದೇಶಿಕ ಕಾದಂಬರಿಗಳನ್ನೂ ಈತ ರಚಿಸಿದ. ಕೇಟ್ ಫೆನಿಗೇಟ್ (1943) ಎಂಬ ಕಾದಂಬರಿ ನಿರ್ವಹಣಕುಶಲೆಯೊಬ್ಬಳ ಹಾಸ್ಯಪೂರಿತ ಕಥೆ. ದಿ ಇಮೇಜ್ ಆಫ್ ಜೋಸೆಫೀನ್ (1945)-ಆಧುನಿಕ ಮಹಿಳೆಯ ಒಂದು ಚಿತ್ರ.

ಟಾರ್‍ಕಿಂಗ್‍ಟನ್ ಎಳೆಯ ವಯಸ್ಸಿನ ಬಾಲಕರ ಮತ್ತು ಹರೆಯದವರ ಮನೋಧರ್ಮವನ್ನು ವಿಶ್ಲೇಷಿಸುವ ಕಾದಂಬರಿಗಳನ್ನೂ ರಚಿಸಿದ. ಇವುಗಳ ಪೈಕಿ ಪೆನ್‍ರಾಡ್ (1914), ಪೆನ್‍ರಾಡ್ ಅಂಡ್ ಸ್ಯಾಮ್ (1916), ಪೆನ್‍ರಾಡ್ ಜಾಷ್‍ಬರ್ (1929) ಮತ್ತು ಸೆವೆಂಟೀನ್ (1916) ಬಹಳ ಪ್ರಸಿದ್ಧವಾದುವು.

ಟಾರ್‍ಕಿಂಗ್‍ಟನ್ ರಚಿಸಿದ ಕೆಲವು ನಾಟಕಗಳಲ್ಲಿ ಮುಖ್ಯವಾಗಿ ಮೆಸ್ಯೆರ್ ಬೋಕೇರ್ (1901) ಮತ್ತು ಕ್ಲಾರೆನ್ಸ್ (1909) ಎಂಬ ಕಾದಂಬರಿಗಳ ಅಳವಡಿಕೆಗಳು ಉಲ್ಲೇಖನಾರ್ಹವಾಗಿವೆ. ದಿ ವಲ್ರ್ಡ್ ಡಸ್ ಮೂವ್ (1928) ಎಂಬುದು ಈತನ ಆತ್ಮ ಕಥೆ.