ನಾಗರಾಜರಾವ್ ಮತ್ತೀಹಳ್ಳಿ
ಆನುವಂಶಿಕ ಪತ್ರಿಕೋದ್ಯಮ
[ಬದಲಾಯಿಸಿ]ಮತ್ತೀಹಳ್ಳಿ ನಾಗರಾಜರಾವ್ ಅವರ ಕುಟುಂಬದ ಪತ್ರಿಕೋದ್ಯಮದ ನಂಟು 1930ರಷ್ಟು ಹಳೆಯದು. ಬಳ್ಳಾರಿ ಜಿಲ್ಲೆ ಯ ಹೊಸಪೇಟೆ ಪಟ್ಟಣದಲ್ಲಿ ಹೆಸರಾಂತ ವಕೀಲರು, ಕಾಂಗ್ರೆಸ್ ಧುರೀಣರು ಹಾಗೂ ಕರ್ನಾಟಕ ಏಕೀಕರಣ ಹೋರಾಟಗಾರರೂ ಆಗಿದ್ದ ರಾಘವೇಂದ್ರರಾವ್ ಹಿಂದೂ ಪತ್ರಿಕೆಯ ಬಳ್ಳಾರಿ ಪ್ರತಿನಿಧಿಯಾಗಿದ್ದರು. ಅವರ ಮೊದಲ ಮಗ ನಾಗರಾಜರಾವ್ (ಜನನ:1923), ಮದ್ರಾಸ್ ವಿಶ್ವವಿದ್ಯಾಲಯದ ಪದವಿ ಪಡೆದ ನಂತರ, ಫೆಬ್ರವರಿ 1944ರಲ್ಲಿ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಸೇರಿದರು. 1950ರಲ್ಲಿ ಎರಡನೆಯ ಮಗ ಎಂ.ಚಿತ್ತರಂಜನ್ ಹಿಂದೂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳ ಹೊಸಪೇಟೆ ಪ್ರತಿನಿಧಿಯಾಗಿ ಪತ್ರಿಕೋದ್ಯಮಕ್ಕೆ ಪ್ರವೇಶ ಪಡೆದರು. ಮೂರನೆಯ ಮಗ ಎಂ.ಮದನಮೋಹನ್ 1958ರಲ್ಲಿ [[ಹಿಂದೂ} ಪತ್ರಿಕೆಯ ಹುಬ್ಬಳ್ಳಿ ಬಾತ್ಮೀದಾರರಾಗಿ ನೇಮಕಗೊಂಡರು.
`ಸಂಯುಕ್ತ ಕರ್ನಾಟಕ'ದಲ್ಲಿ
[ಬದಲಾಯಿಸಿ]ಸಂಯುಕ್ತ ಕರ್ನಾಟಕ ಪತ್ರಿಕೆಯ ಸರ್ವತೋಮುಖ ಪ್ರಗತಿಗೆ ಶ್ರಮಿಸಿದ ಅನೇಕ ಹಿರಿಯ ಪತ್ರಕರ್ತರಲ್ಲಿ ವರದಿಗಾರರಾಗಿ ಮೈಸೂರು ರಾಜ್ಯದ ಬಹುತೇಕ ಜಿಲ್ಲೆಗಳನ್ನು ಪ್ರವಾಸ ಮಾಡಿ, ಅತ್ಯಮೂಲ್ಯ ವರದಿಗಳನ್ನು ಸಿದ್ಧಪಡಿಸಿದ ನಾಗರಾಜರಾವ್ ಪ್ರಮುಖರು. ಅವರ ನಿಷ್ಕಳಂಕ ಸೇವೆಯನ್ನು ಮೊದಲು ಗುರುತಿಸಿ ಗೌರವಿಸಿದವರು ಭಾರತದ ಅಮೆರಿಕನ್ ದೂತವಾಸ. ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರತಿನಿಧಿಯಾಗಿ ಅಮೆರಿಕ ದೇಶವನ್ನು ಸಂದರ್ಶಿಸಲು ನಾಗರಾಜರಾವ್ ಅವರಿಗೆ ಆಹ್ವಾನ ಬಂದಿತು (1968). ಈ ಸಂದರ್ಭವನ್ನು ಬಳಸಿಕೊಂಡ ನಾಗರಾಜರಾವ್ ಅಮೆರಿಕ, ಪೋರ್ಟೋರಿಕೊ, ಹವಾಯ್, ಜಪಾನ್, ಥೈವಾನ್, ಫಿಲಿಪೈನ್ಸ್, ಹಾಂಗ್‌ಕಾಂಗ್, ಥೈಲ್ಯಾಂಡ್, ಸ್ವಿಝರ್‌ಲ್ಯಾಂಡ್, ಇಸ್ರೇಲ್ ದೇಶಗಳ 105 ದಿನಗಳ ಪ್ರವಾಸ ಕೈಗೊಂಡರು. ಇಂಥದೊಂದು ವಿಶಿಷ್ಟ ಅನುಭವವನ್ನು ಪಡೆದ ಮೊದಲ ಕನ್ನಡ ಪತ್ರಕರ್ತರೆಂಬ ಹೆಗ್ಗಳಿಕೆ ನಾಗರಾಜರಾವ್ ಅವರದು. ಅವರ ಪ್ರವಾಸದನುಭವ ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆಗಳಲ್ಲಿ ಧಾರಾವಾಹಿಗಳಾಗಿ ಪ್ರಕಟವಾದವು. ವಿಶ್ವವಿದ್ಯಾಲಯಗಳು ಅವುಗಳ ಸಂಗ್ರಹ ರೂಪವನ್ನು ಪುಸ್ತಕಗಳಾಗಿ ಪ್ರಕಟಿಸಿದವು.