ವಿಷಯಕ್ಕೆ ಹೋಗು

ನರಸಿಂಹ ಚಿಂತಾಮಣ ಕೇಳ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನರಸಿಂಹ ಚಿಂತಾಮಣ ಕೇಳ್ಕರ್
ಹೆಸರುನರಸಿಂಹ ಚಿಂತಾಮಣ ಕೇಳ್ಕರ್
ಜನನ(೧೮೭೨-೦೮-೨೪)೨೪ ಆಗಸ್ಟ್ ೧೮೭೨
ನಿಧನ14 October 1947(1947-10-14) (aged 75)
Pune, India
ಇತರ ಹೆಸರುಗಳುSahityasamrat Tatyasaheb Kelkar
ವೃತ್ತಿಗಳುPolitician, lawyer, editor, novelist, historian
ರಾಜಕೀಯ ಪಕ್ಷHindu Mahasabha
ಇತರ ರಾಜಕೀಯ ಸಂಪರ್ಕಗಳುIndian National Congress
ಚಳವಳಿIndian Independence Movement

ನರಸಿಂಹ ಚಿಂತಾಮಣ ಕೇಳ್ಕರ್ 1872-1947. ಸ್ವಾತಂತ್ರ್ಯಪೂರ್ವ ಭಾರತದ ಪ್ರಮುಖ ರಾಜಕಾರಣಿ, ಲೋಕಮಾನ್ಯ ತಿಲಕರ ಅನುಯಾಯಿ. ಮರಾಠಿಯ ಸಾಹಿತ್ಯ ಸಾಮ್ರಾಟನೆಂಬ ಅಭಿಧಾನ ಪಡೆದ ಸುಪ್ರಸಿದ್ಧ ವ್ಯಕ್ತಿ.

ಬಾಲ್ಯ

[ಬದಲಾಯಿಸಿ]

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ (ಆಗಿನ ಮಿರಜ್ ಸಂಸ್ಥಾನಕ್ಕೆ ಸೇರಿದ) ಮೋಡನಿಂಬ ಗ್ರಾಮದಲ್ಲಿ 1872ರ ಆಗಸ್ಟ್ 24ರಂದು ಜನನ. ಮಿರಜ್, ಕೊಲ್ಹಾಪುರ, ಪುಣೆ, ಮುಂಬಯಿಗಳಲ್ಲಿ ಶಿಕ್ಷಣ ಪೂರೈಸಿ ಬಿ.ಎ, ಎಲ್ ಎಲ್ ಬಿ ಪದವೀಧರರಾದರು (1894). ಅನಂತರ ಸಾತಾರಾ ನಗರದಲ್ಲಿ ವಕೀಲಿ ಪ್ರಾರಂಭಿಸಿದರು.

ಬಹುಮುಖ ಪ್ರತಿಭೆ

[ಬದಲಾಯಿಸಿ]

ಬಹು ಬೇಗ ಅಲ್ಲಿಯ ವೃತ್ತಿ ಬಾಂಧವರಲ್ಲಿ ಜನಪ್ರಿಯರೂ ಪ್ರಭಾವಶಾಲಿಗಳೂ ಆದರು. ಲೇಖನ, ಭಾಷಣ, ಆಟ ನಾಟಕ, ಗಾಯನ ಮುಂತಾದ ಇತರ ವೃತ್ತಿಗಳಲ್ಲೂ ಇವರು ಹೆಸರು ಗಳಿಸಿದರು. ಇವರ ಬಹುಮುಖ ಪ್ರತಿಭೆಯನ್ನು ಕಂಡು ಟಿಳಕರ ಮಿತ್ರರೊಬ್ಬರು ಕೇಳಕರರ ಹೆಸರನ್ನು ತಿಲಕರಿಗೆ ಬರೆದು ತಿಳಿಸಿದರು. 1896ರ ಫೆಬ್ರವರಿಯಲ್ಲಿ ಕೇಳಕರರಿಗೆ ಲೋಕಮಾನ್ಯ ಟಿಳಕರ ಭೇಟಿಯಾಯಿತು. ಅವರ ಜೀವನಮಾರ್ಗ ಬದಲಾಯಿತು. ಕೇಸರಿ(ಮರಾಠಿ) ಮತ್ತು ಮರಾಠಾ(ಇಂಗ್ಲಿಷ್) ಪತ್ರಿಕೆಗಳನ್ನು ನಡೆಸುವುದರ ಜೊತೆಗೆ ಟಿಳಕರು ಪುಣೆಯಲ್ಲಿ ಕಾಯಿದೆ ವಿದ್ಯಾರ್ಥಿಗಳಿಗಾಗಿ ತರಗತಿಗಳನ್ನೂ ನಡೆಸುತ್ತಿದ್ದರು. ಈ ಕಾರ್ಯಗಳಲ್ಲಿ ತಮಗೆ ಸಹಾಯಕರಾಗಲು ಕೇಳಕರರನ್ನು ಕೇಳಿಕೊಂಡರು. ಕೇಳಕರರು ಪುಣೆಗೆ ತೆರಳಿ ತಿಲಕರ ಸಹಾಯಕರಾಗಿ ಸೇರಿದರು. 1897ರಲ್ಲಿ ಟಿಳಕರಿಗೆ ರಾಜದ್ರೋಹದ ಆಪಾದನೆಗಾಗಿ ಶಿಕ್ಷೆಯಾದಾಗ ಅವರ ಇಚ್ಛೆಯ ಮೇರೆಗೆ ಕೇಳಕರರು ಕೇಸರಿ, ಮರಾಠಾ ಎರಡೂ ಪತ್ರಿಕೆಗಳ ಸಂಪಾದಕತ್ವವನ್ನು ವಹಿಸಿಕೊಂಡರು. ಕಾನೂನು ತರಗತಿಗಳು ಆಗ ನಿಂತುಹೋದವು. ಈ ಪತ್ರಿಕೆಗಳ ಹೊಣೆಯನ್ನು ನಿರ್ವಹಿಸುವುದು ಸಾಮಾನ್ಯವಾದ್ದೇನಾಗಿರಲಿಲ್ಲ. ಟಿಳಕರು ಅನುಸರಿಸಿಕೊಂಡು ಬಂದಿದ್ದ ಧೋರಣೆಗಳಿಗೆ ವ್ಯತ್ಯಯ ಬಾರದಂತೆ, ಸಮರ್ಥ ರೀತಿಯಲ್ಲಿ ಎರಡೂ ಪತ್ರಿಕೆಗಳನ್ನು ಟಿಳಕರು ಮರಳಿ ಬರುವ ವರೆಗೆ (ಜುಲೈ 1899) ನಡೆಸಿಕೊಂಡು ಬಂದರು.

ಪತ್ರಕರ್ತ

[ಬದಲಾಯಿಸಿ]

ಟಿಳಕರು ಪುನಃ ಕೇಸರಿ, ಮರಾಠಾ ಪತ್ರಿಕೆಗಳ ಸಂಪಾದಕತ್ವವನ್ನು ವಹಿಸಿಕೊಂಡ ಅನಂತರವೂ ಅವುಗಳೊಂದಿಗೆ ಕೇಳಕರ ಸಂಬಂಧ ಘನಿಷ್ಠವಾಗಿಯೇ ಮುನ್ನಡೆಯಿತು. ಮರಾಠಿ, ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಸಮರ್ಥ ರೀತಿಯಲ್ಲಿ ಬರೆಯಬಲ್ಲವರಾಗಿದ್ದ ಕೇಳಕರರು ಪ್ರಚಲಿತ ರಾಜಕೀಯ ಸಮಸ್ಯೆಗಳ ಮೇಲೆ ವಾರವಾರವೂ ಬರೆಯುತ್ತಿದ್ದರು. ಮುಂದೆ ಲೋಕಮಾನ್ಯರು 1910ರಲ್ಲಿ ಪತ್ರಿಕೆಗಳನ್ನು ನಡೆಸುವುದಕ್ಕಾಗಿ ಕೇಸರಿ-ಮರಾಠಾ ಟ್ರಸ್ಟ್ ಎಂಬ ನ್ಯಾಸ ಸಂಸ್ಥೆಯನ್ನು ಸ್ಥಾಪಿಸಿ ತಾವು ನ್ಯಾಸಾಧಾರರಾಗಿ ಮಾತ್ರ ಉಳಿದು ಸಂಪಾದಕತ್ವವನ್ನು ಪುನಃ ಕೇಳಕರರಿಗೆ ವಹಿಸಿಕೊಟ್ಟರು. ಈ ಸಮಯದಲ್ಲಿ ಒಂದನೆಯ ಮಹಾಯುದ್ಧ ಪ್ರಾರಂಭವಾಯಿತು. ಆ ಸಮಯದಲ್ಲಿ ಕೇಳಕರರು `ಎ ಕೇಸ್ ಫಾರ್ ಇಂಡಿಯ. ಹೋಮ್ ರೂಲ್ ಎಂಬ ಪುಸ್ತಕ ಬರೆದರು. 1920ರ ಆಗಸ್ಟ್‍ನಲ್ಲಿ ಲೋಕಮಾನ್ಯರ ನಿಧನಾನಂತರ ಕೇಳಕರರು ಈ ಟ್ರಸ್ಟಿನ ಇಬ್ಬರು ನ್ಯಾಸಧಾರಿಗಳಲ್ಲಿ ಒಬ್ಬರಾದರು. 1937ರ ಏಪ್ರಿಲ್‍ನಲ್ಲಿ ಈ ಪತ್ರಿಕೆಗಳ ಸಂಪಾದಕ ಮತ್ತು ಸಂಸ್ಥೆಯ ನ್ಯಾಸಧಾರ ಈ ಎರಡೂ ಸ್ಥಾನಗಳಿಂದ ಅವರು ನಿವೃತ್ತರಾದರು. ಅವರು ನಿವೃತ್ತರಾಗುವ ಹೊತ್ತಿಗೆ ಕೇಸರಿ-ಮರಾಠಾ ಟ್ರಸ್ಟ್ ಆಗಲೆ ಹೆಮ್ಮರವಾಗಿ ಬೆಳೆದಿತ್ತು. ಭಾರತದ ಅತ್ಯಂತ ಸಮರ್ಥ ಪತ್ರಿಕೋದ್ಯಮಿಗಳಲ್ಲಿ ಕೇಳಕರರೂ ಒಬ್ಬರು. ಜಗತ್ತಿನಲ್ಲಿ ಯಾವ ಕೆಲಸವೂ ಸಣ್ಣದಲ್ಲ; ಕ್ಷುದ್ರವಲ್ಲ, ಮಾಡುವ ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ ಅದನ್ನು ಚೊಕ್ಕಟವಾಗಿ ಮಾಡಿ ಮುಗಿಸಬೇಕು-ಎಂಬುದು ಕೇಳಕರರ ಧೋರಣೆ.

ರಾಜಕೀಯ ಜೀವನ

[ಬದಲಾಯಿಸಿ]

ಪುಣೆಯಲ್ಲಿ ಪ್ಲೇಗು ಹರಡಿದಾಗ ಅವರ ಮಾನವೀಯಗುಣ ಬಯಲಿಗೆ ಬಂತು. ಅವರು ಸ್ವಯಂ ಸೇವಕರಾಗಿ ಅನೇಕ ರೋಗಿಗಳ ಉಪಚಾರ ಮಾಡಿದರು. ಈ ಸಂದರ್ಭದಲ್ಲಿ ಪುಣೆ ನಗರಪಾಲಿಕೆಯ ಜೊತೆಗೆ ಬೆಳೆದುಬಂದ ಬಾಂಧವ್ಯ ಅನೇಕ ವರ್ಷ ಮುಂದುವರಿಯಿತು. ಅವರು ನಗರಪಾಲಿಕೆಯ ಅಧ್ಯಕ್ಷರೂ ಆದರು. ಪುಣೆಯಲ್ಲಿ ಟಿಳಕರ ಮೂರ್ತಿಸ್ಥಾಪನೆಗೆ ಬಹುಮಟ್ಟಿಗೆ ಇವರ ಪ್ರಯತ್ನವೇ ಕಾರಣ. ಪತ್ರಿಕೋದ್ಯಮದಲ್ಲಿಯಂತೆಯೇ ಲೋಕಮಾನ್ಯರೊಂದಿಗೆ ಮತ್ತು ಅವರ ಅನಂತರ ಗಾಂಧೀಜಿಯವರೊಂದಿಗೆ ಕೇಳಕರರು ಪ್ರತ್ಯಕ್ಷ ರಾಜಕಾರಣದಲ್ಲೂ ಸಕ್ರಿಯ ಭಾಗವಹಿಸಿದರು. 1924ರಲ್ಲಿ ಸ್ವರಾಜ್ಯ ಪಕ್ಷದ, 1926ರಲ್ಲಿ ಪ್ರತಿಸಹಕಾರ ಪಕ್ಷದ ಉಮೇದುವಾರರಾಗಿ ದೆಹಲಿಯ ಅಸೆಂಬ್ಲಿಗೆ ಆಯ್ಕೆಯಾದರು. ಆದರೆ ಎರಡು ಸಲವೂ ತಮ್ಮ ಅವಧಿ ಮುಗಿಯುವ ಮೊದಲೇ ರಾಜೀನಾಮೆ ಕೊಟ್ಟರು. 1932ರಲ್ಲಿ ಕರೆದ ದುಂಡುಮೇಜಿನ ಪರಿಷತ್ತಿಗೆ ಅವರು ಪ್ರತಿನಿಧಿಯಾಗಿ ಹೋಗಿದ್ದರು. ಅನೇಕ ಕಾಂಗ್ರೆಸ್ ನಾಯಕರು ಸೆರೆಮನೆಯಲ್ಲಿದ್ದಾಗ, ಗಾಂಧೀಜಿಯವರು ಅನುಪಸ್ಥಿತರಾಗಿದ್ದ ಸಭೆಗೆ ಇವರು ಹೋದರೆಂಬ ಕಾರಣಕ್ಕಾಗಿ ಇವರ ಮೇಲೆ ಸಾರ್ವಜನಿಕ ಟೀಕೆಗಳ ಸುರಿಮಳೆಯೇ ಆಯಿತು. ಅನಂತರದ ಕಾಲದಲ್ಲಿ ಮುಸ್ಲಿಮರೆಲ್ಲ ಸೇರಿ ತಮ್ಮ ರಾಜಕೀಯ ಹಕ್ಕುಗಳಿಗಾಗಿ ಪಕ್ಷ ಸ್ಥಾಪಿಸಿದಾಗ ಹಿಂದೂಗಳಿಗೂ ಅಂಥ ಒಂದು ಪಕ್ಷ ಬೇಕೆಂದು ಇವರು ವಾದಿಸಿದರು. ಈ ಕಾರಣದಿಂದ ಇವರ ವರ್ಚಸ್ಸು ಕಾಂಗ್ರೆಸಿನಲ್ಲಿ ಕ್ರಮೇಣ ಕಡಿಮೆ ಆಯಿತು. ಹಿಂದೂ ಮಹಾಸಭೆಯ ಜೊತೆಗೆ ಇವರ ಸಂಪರ್ಕ ಬೆಳೆಯಿತು. ಅನಂತರ ಹಿಂದೂ ಮಹಾಸಭೆಯ ಅನೇಕ ಸಭೆಗಳಿಗೆ ಇವರು ಅಧ್ಯಕ್ಷರಾಗಿದ್ದರು. 1920-1932ರ ಅವಧಿ ಕೇಳಕರರ ಜೀವನದಲ್ಲಿ ಬಲು ಮುಖ್ಯವಾದ್ದು, ಈ ಕಾಲದಲ್ಲಿ ಇವರು 2,000 ಪುಟಗಳ (3 ಸಂಪುಟಗಳು), ದೀರ್ಘವೂ ವಿವರಣಾತ್ಮಕವೂ ಆದ, ತಿಲಕರ ಜೀವನ ಚರಿತ್ರೆ ಬರೆದರು. 1932ರಲ್ಲಿ ತಮ್ಮ ಷಷ್ಟ್ಯಬ್ದಿ ಸಮಾರಂಭದ ಅನಂತರ ಕೇಳಕರರು ಕೆಲಸದಿಂದ ನಿವೃತ್ತರಾದರು.

ಸಾಹಿತ್ಯ ಸೇವೆ

[ಬದಲಾಯಿಸಿ]

ಅನಂತರದ ಕಾಲವನ್ನು ಬಹುಪಾಲು ಸಾಹಿತ್ಯ ಸೇವೆಗೆ ಮುಡಿಪಾಗಿಟ್ಟರು.ಕೇಳಕರರ ಮರಾಠಿ ವಾಙ್ಮಯಸೇವೆಯೂ ಅಪಾರವಾದ್ದು, ಕಾವ್ಯ, ನಾಟಕ, ವಿಮರ್ಶೆ, ಚರಿತ್ರೆ ಮುಂತಾದ ಸಾಹಿತ್ಯವಿಭಾಗಗಳಲ್ಲಿ ಗ್ರಂಥರಚನೆಮಾಡಿದ ಅವರು ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಚಿಕ್ಕಂದಿನಿಂದಲೇ ಕಥೆ, ಕಾದಂಬರಿಗಳನ್ನು ಬರೆದು ಹೆಸರುಗಳಿಸಿದ್ದ ಕೇಳಕರರ ಕೆಲವು ಕಾದಂಬರಿಗಳು ಕೇಸರಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದುವು. ಸುಭಾಷಿತ ಆಣಿ ವಿನೋದ, ಹಾಸ್ಯ ವಿನೋದ-ಮಿಮಾಂಸಾ, ಆಯರ್ಲಂಡ್ ಚಾ ಇತಿಹಾಸ, ಮರಾಠೆ ವ ಇಂಗ್ರಜ, ಗರಿಬಾಲ್ಡಿ- ಇವು ಕೇಳಕರರ ಕೆಲವು ಪ್ರಸಿದ್ಧ ಗ್ರಂಥಗಳು. ಇವರ ಸು.800 ಪುಟಗಳ ಆತ್ಮಚರಿತ್ರೆಯೂ ಬಹಳ ಪ್ರಸಿದ್ಧಿ ಪಡೆಯಿತು.

ಕೇಳಕರರು 1947ರ ಅಕ್ಟೋಬರ್ 14ರಂದು ಪುಣೆಯಲ್ಲಿ ನಿಧನರಾದರು.