ವಿಷಯಕ್ಕೆ ಹೋಗು

ನಮೀಬಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಮಿಬಿಯ ಇಂದ ಪುನರ್ನಿರ್ದೇಶಿತ)
Republic of Namibia
ನಮೀಬಿಯ ಗಣರಾಜ್ಯ
Flag of ನಮೀಬಿಯ
Flag
Coat of arms of ನಮೀಬಿಯ
Coat of arms
Motto: "Unity, Liberty, Justice" (ಐಕ್ಯತೆ, ಸ್ವಾತಂತ್ರ್ಯ, ನ್ಯಾಯ)
Anthem: Namibia, Land of the Brave
Location of ನಮೀಬಿಯ
Capital
and largest city
ವಿಂಡ್‍ಹೋಕ್
Official languagesಆಂಗ್ಲ1
Governmentಗಣರಾಜ್ಯ
ಹಿಫಿಕೆಪುನ್ಯೆ ಪೊಹಂಬ
ನಹಸ್ ಅನ್ಗುಲ
ಸ್ವಾತಂತ್ರ್ಯ 
• ದಿನಾಂಕ
ಮಾರ್ಚ್ ೨೧ ೧೯೯೦
• Water (%)
negligible
Population
• ಜುಲೈ ೨೦೦೫ estimate
2,031,0002 (144th)
• 2002 census
1,820,916
GDP (PPP)೨೦೦೫ estimate
• Total
$15.14 billion (123rd)
• Per capita
$7,101 (88th)
HDI (2003)0.627
medium · 125th
Currencyನಮೀಬಿಯ ಡಾಲರ್ (NAD)
Time zoneUTC+1 (WAT)
• Summer (DST)
UTC+2 (WAST)
Calling code264
Internet TLD.na
1 ಜರ್ಮನ್ and Afrikaans were official languages until independence in 1990. The majority of the population speaks Afrikaans as a second language, while Oshiwambo is the first language of half the population. German is spoken by 32% of the European community whereas English is only spoken by 7%[೧]. Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected.

ನಮೀಬಿಯ ಆಫ್ರಿಕಖಂಡದ ದಕ್ಷಿಣಭಾಗದಲ್ಲಿ ಅಟ್ಲಾಂಟಿಕ್ ಸಾಗರದ ಅಂಚಿನಲ್ಲಿ ದ.ಅ. 17º-29º ನಡುವೆ ಇರುವ ಪ್ರದೇಶ. ದಕ್ಷಿಣದಲ್ಲಿ ದಕ್ಷಿಣ ಆಫ್ರಿಕ ಗಣರಾಜ್ಯ, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ, ಪೂರ್ವದಲ್ಲಿ ಬಾಟ್ಸ್‍ವಾನ ಮತ್ತು ದಕ್ಷಿಣ ಆಫ್ರಿಕ ಗಣರಾಜ್ಯ, ಉತ್ತರದಲ್ಲಿ ಆಂಗೋಲ ಮತ್ತು ಜಾಂಬಿಯ ಇವೆ. ಈಶಾನ್ಯದಲ್ಲಿ ಕ್ಯಾಪ್ರಿವಿ ಎಂಬ ಕಿರಿದಾದ ನೆಲದ ಪಟ್ಟಿಯೊಂದು ಸುಮಾರು 480 ಕಿಮೀ. ದೂರ ಪೂರ್ವಕ್ಕೆ, ಆಂಗೋಲದಿಂದ ಮುಂದೆ ಜಾಂಬಿಯ ಗಡಿಯಲ್ಲೂ ಸ್ವಲ್ಪ ದೂರ, ಚಾಚಿದೆ. ಉತ್ತರದಲ್ಲಿ ಆಂಗೋಲದಿಂದ ಕೂನೇನೆ ಮತ್ತು ಓಕವಾಂಗೊ ನದಿಗಳೂ ದಕ್ಷಿಣದಲ್ಲಿ ದಕ್ಷಿಣ ಆಫ್ರಿಕಾ ಗಣರಾಜ್ಯದಿಂದ ಆರೆಂಜ್ ನದಿಯೂ ಇದನ್ನು ಪ್ರತ್ಯೇಕಿಸುತ್ತವೆ. ಇದರ ವಿಸ್ತೀರ್ಣ 8,23,600 ಚ.ಮೀ.; ಜನಸಂಖ್ಯೆ 7,46,000 (1970). ಆಡಳಿತ ಕೇಂದ್ರ ವಿಂಟ್‍ಹುಕ್.

ಮಾರ್ಚ್ ೨೧, ೧೯೯೦ ರಂದು ಸ್ವಾತಂತ್ರ್ಯ ಪಡೆಯಿತು. ಖನಿಜಗಳು ಮುಖ್ಯವಾಗಿ ವಜ್ರ, ತಾಮ್ರ, ಯುರೇನಿಯಮ್, ಸತು ಹೇರಳವಾಗಿ ದೊರೆಯುತ್ತದೆ.

ಮೇಲ್ಮೈ ಲಕ್ಷಣ[ಬದಲಾಯಿಸಿ]

ಇದು ಎರಡು ಮರುಭೂಮಿಗಳ ನಡುವಣ ಪ್ರಸ್ಥಭೂಮಿ ಪ್ರದೇಶ. ಭೌತಿಕವಾಗಿ ಇದನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು: 1. ನಮೀಬ್ ಕರಾವಳಿ ಪಟ್ಟೆ, 2. ಮಧ್ಯದ ಪರ್ವತ ಪ್ರದೇಶ ಮತ್ತು ಪ್ರಸ್ಥ ಭೂಮಿ, 3. ಉತ್ತರ ಮತ್ತು ಪೂರ್ವದಲ್ಲಿರುವ ಕಾಲಾಹಾರಿ ಮರುಭೂಮಿ. ನಮೀಬ್ ಪ್ರದೇಶ ಮರಳುಗಾಡು ಅಟ್ಲಾಂಟಿಕ್ ತೀರಕ್ಕೆ ಪೂರ್ವದಲ್ಲಿ ಸುಮಾರು ಒಂದು ಸಾವಿರ ಮೀಟರ್ ಎತ್ತರದ ವರೆಗೆ ಇದು ವ್ಯಾಪಿಸಿದೆ. ಅಲ್ಲಿಂದ ಮುಂದೆ ಭಾರಿ ಇಳುಕಲು ಭೂಮಿ. ನಮೀಬ್ ಮರಳುಗಾಡು, ಮರಳುಗುಡ್ಡಗಳಿಂದಲೂ ಅಲ್ಲಲ್ಲಿ ಉಪ್ಪಿನ ಕುಳಿಗಳಿಂದಲೂ ಕಲ್ಲು ಗುಡ್ಡಗಳಿಂದ ಕೂಡಿದೆ. ಅದರ ಉತ್ತರದಲ್ಲಿ ಕೊನೇನೆ ಮತ್ತು ದಕ್ಷಿಣದಲ್ಲಿ ಆರೆಂಜ್ ನದಿಗಳು ಹರಿಯುತ್ತವೆ. ಈ ಮರಳುಗಾಡು 160 ಕಿ.ಮೀ.ಗಳಿಗಿಂತ ಅಗಲವಾಗಿಲ್ಲ. ಉತ್ತರದ ಮೈದಾನ ಭಾಗದಲ್ಲಿ ಅಲ್ಲಲ್ಲಿ ಬೆಟ್ಟಗಳಿವೆ. ಅವುಗಳಲ್ಲಿ ಪ್ರಮುಖವಾದ್ದು ಬ್ರಾಂಡ್‍ಬರ್ಗ್ (2,575 ಮೀಟರ್). ಇದು ನಮೀಬಿಯಾದ ಅತ್ಯಂತ ಎತ್ತರವಾದ ಬೆಟ್ಟ. ನಮೀಬಿಯಾದ ಶೇಕಡ 15ರಷ್ಟು ಭಾಗವನ್ನು ನಮೀಬ್ ಮರುಭೂಮಿ ಆವರಿಸಿದೆ. ನಮೀಬಿಯಾ ಮರುಳುಗಾಡಿನ ಪೂರ್ವಕ್ಕೆ ಮಧ್ಯದ ಪರ್ವತ ಪ್ರದೇಶವಿದೆ. ದಕ್ಷಿಣ ಗಡಿಯಿಂದ ಉತ್ತರ ಗಡಿಯವರೆಗೆ ವ್ಯಾಪಿಸಿರುವ ಇದು ಸಮುದ್ರ ಮಟ್ಟದಿಂದ 1,000- 2,000 ಮೀಟರ್ ಎತ್ತರದಲ್ಲಿದೆ. ಇಲ್ಲಿ ಹುಲ್ಲುಗಾಡು, ಮರಳು ತುಂಬಿದ ಕಣಿವೆಗಳು, ಸಮತಲ ಭೂಮಿ ಮತ್ತು ಅಲ್ಲಲ್ಲಿ ಒಂಟಿ ಬೆಟ್ಟಗಳು ಇವೆ. ವಿಂಟ್‍ಹುಕ್ ಬಳಿಯಲ್ಲಿಯ ಬೆಟ್ಟಸೀಮೆ ಇದರ ನಡುವೆ ಇದೆ. ಇದರ ಉತ್ತರಕ್ಕೆ ಡಾಮಾರಾ ಲ್ಯಾಂಡ್ ಮತ್ತು ದಕ್ಷಿಣಕ್ಕೆ ನಾಮಾಲ್ಯಾಂಡ್ ಇವೆ. ಇದು ಈ ಪ್ರದೇಶದ ಅತ್ಯುನ್ನತ ಭೂಮಿ. ಖೋಮಾಸ್, ಔಸ್‍ಬರ್ಜ್, ಇರಾಸ್, ಒನ್ಯಾಟಿ ಇವು ಇಲ್ಲಿಯ ಕೆಲವು ಮುಖ್ಯ ಬೆಟ್ಟಗಳು. ಔಸ್‍ಬರ್ಜ್‍ನಲ್ಲಿರುವ ಮಾಲ್ಟ್‍ಕೆಬ್ಲಿಕ್ ಅತ್ಯುನ್ನತ ಶಿಖರ. ಎತ್ತರದಲ್ಲಿ ಇದು ನಮೀಬಿಯದಲ್ಲೇ ಎರಡನೆಯ ಶಿಖರ. ಇದು ನಮೀಬಿಯದ ಜಲವಿಭಾಗ ಪ್ರದೇಶವಾಗಿದೆ. ಇಲ್ಲಿಂದ ನಾಲ್ಕೂ ದಿಕ್ಕುಗಳಿಗೆ ನದಿಗಳು ಹರಿಯುತ್ತವೆ.

ಕಲಹಾರಿ ಮರುಭೂಮಿ ಇಡೀ ಪೂರ್ವಗಡಿಯಲ್ಲಿ ಓಕವಾಂಗೊ ನದಿಯವರೆಗೆ ಹಬ್ಬಿದೆ. ಮಣ್ಣುಮಿಶ್ರಿತ ಮರಳು ಮತ್ತು ಸುಣ್ಣಕಲ್ಲಿನಿಂದ ಕೂಡಿದ ನೆಲವಿದು. ದಕ್ಷಿಣದಲ್ಲಿ 80 ಕಿಮೀ.ನಿಂದ ಉತ್ತರದಲ್ಲಿ 400 ಕಿಮೀ. ವರೆಗೆ ಇದು ಅಗಲವಾಗಿದೆ. ಇದರ ದಕ್ಷಿಣದಲ್ಲಿ ನೋಸಾಬ್ ಮತ್ತು ಊಬ್ ನದಿಗಳೂ ಉತ್ತರದಲ್ಲಿ ಎಟೋಷ ಮತ್ತು ಓಕವಾಂಗೊ ನದಿಗಳೂ ಹರಿಯುತ್ತವೆ. ಮರುಭೂಮಿಯ ದಕ್ಷಿಣದಲ್ಲಿ ಮರಳಗುಡ್ಡಗಳೂ ಹುಲ್ಲು ಮತ್ತು ಮುಳ್ಳುಗಿಡಗಳೂ ಇವೆ. ನೀರಿನ ಕೊರತೆಯಿಂದಾಗಿ ನಮೀಬಿಯದ ಜನರು ಬೇಸಾಯ, ಪಶುಪಾಲನೆ ಮೊದಲಾದವುಗಳಲ್ಲಿ ಮುಂದುವರಿದಿರಲಿಲ್ಲ; ಇತ್ತೀಚೆಗೆ ನೀರಾವರಿ ಸೌಲಭ್ಯವನ್ನು ನಿರ್ಮಿಸಲಾಗುತ್ತಿದೆ. ದೊಡ್ಡ ನದಿಗಳ ಪೈಕಿ ಆರೆಂಜ್, ಕೂನೇನೆ ಮತ್ತು ಓಕವಾಂಗೊಗಳಲ್ಲಿ ಮಾತ್ರ ವರ್ಷವೆಲ್ಲ ನೀರಿರುತ್ತದೆ. ಇವುಗಳಲ್ಲಿ ಆರೆಂಜ್ ದಕ್ಷಿಣದ ಗಡಿಯಾಗಿದೆ. ಉತ್ತರದಲ್ಲಿ ಕೂನೇನೆ ಮತ್ತು ಓಕವಾಂಗೊ ಭಾಗಶಃ ಗಡಿಗಳಾಗಿವೆ. ಈ ನದಿಗಳೆಲ್ಲ ನಮೀಬಿಯದ ಹೊರಗೆ ಹುಟ್ಟುತ್ತವೆ. ಉತ್ತರದಲ್ಲಿ ಕ್ಯಾಂಡೋ ಮತ್ತು ಜಾಂಬೇಜಿ ನದಿಗಳು ನಮೀಬಿಯದ ಸ್ವಲ್ಪ ಭಾಗದಲ್ಲಿ ಮಾತ್ರ ಹರಿದು ಸಾಗುತ್ತದೆ. ಈ ನದಿಗಳ ನೀರನ್ನು ಕೆಲವು ಪ್ರದೇಶಗಳಲ್ಲಿ ಮಾತ್ರ ಬಳಸಿಕೊಳ್ಳಬಹುದಾಗಿದೆ. ಸ್ವಾಕಾಫ್, ಕುಯಿಸೆಬ್, ಎಪುಕಿರೊ, ಒಮುರಾಂಬ ಮುಂತಾದವು ಬೇಸಗೆಯಲ್ಲಿ ಇಂಗಿಹೋಗುತ್ತವೆ. ಆದರೆ ಅವುಗಳ ಅಂಚುಗಳಲ್ಲಿ ಬಾವಿಗಳನ್ನು ತೋಡಿ ನೀರನ್ನು ಬಳಸುತ್ತಾರೆ. ಮರಳುಕಾಡಿನ ಪ್ರದೇಶಗಳಲ್ಲಿ ಜೇಡಿಮಣ್ಣಿನ ಇಲ್ಲವೆ ಸುಣ್ಣಕಲ್ಲಿನ ತಗ್ಗು ಭೂಮಿಯಲ್ಲಿ ನೀರು ಶೇಖರವಾಗುತ್ತದೆ. ಇವುಗಳಲ್ಲಿ ಅತ್ಯಂತ ದೊಡ್ಡದು ಇಟೋಷ ಸರೋವರ. ನಮೀಬಿಯದಲ್ಲಿ ಅನೇಕ ಊಟೆಗಳೂ ಇವೆ. ನೀರಾವರಿಗೆ ಕೊಳವೆ ಭಾವಿಗಳನ್ನು ತೋಡಿದ್ದಾರೆ. ಜಲಾಶಯಗಳನ್ನು ಕಟ್ಟಿ ನೀರನ್ನು ಶೇಖರಿಸಿದ್ದಾರೆ. ಒಟ್ಟು 67,00,00,000 ಘನ ಮೀಟರ್ ನೀರನ್ನು ಶೇಖರಿಸುವ 10,000 ಕಟ್ಟೆಗಳಿವೆ. ನಮೀಬಿಯದ ದಕ್ಷಿಣದಲ್ಲಿ ಹರಿಯುವ ಫಿಷ್ ನದಿಗೆ ಅಡ್ಡಲಾಗಿ ಕಟ್ಟಿರುವ ಹಾರ್ಡಾಪ್ ಕಟ್ಟೆ ಇವುಗಳ ಪೈಕಿ ಅತ್ಯಂತ ದೊಡ್ಡದು.

ವಾಯುಗುಣ[ಬದಲಾಯಿಸಿ]

ನಮೀಬಿಯದ ವಾಯುಗುಣ ಸಾಮಾನ್ಯವಾಗಿ ಶುಷ್ಕೋಷ್ಣವಾದ್ದು. ಇದು ದಕ್ಷಿಣಾರ್ಧಗೋಳದಲ್ಲಿ ಉಷ್ಣವಲಯದ ಅಧಿಕ ಒತ್ತಡದ ಕಕ್ಷೆಯಲ್ಲಿ ಬರುತ್ತದೆ. ಅಟ್ಲಾಂಟಿಕ್ ಸಾಗರದ ತೀರದ ಭಾಗದಲ್ಲಿ ಬೆಂಗ್ಯುಲ ಶೀತಲ ಸಮುದ್ರ ಪ್ರವಾಹ ಹಾಗೂ ದಕ್ಷಿಣ ಅಟ್ಲಾಂಟಿಕ್ ಸಾಗರದ ವಾಯು ಒತ್ತಡದಿಂದಾಗಿ ಕರಾವಳಿಯಲ್ಲಿಯ ಉಷ್ಣತೆ ಒಳನಾಡಿನದಕ್ಕಿಂತ ಕಡಿಮೆ. ಅಲ್ಲಿಯ ಮಧ್ಯ ಉಷ್ಣತೆ 16 ಡಿಗ್ರಿ ಸೆಂಟಿಗ್ರೇಡ್. ಮಧ್ಯದ ಪ್ರಸ್ಥಭೂಮಿಯಲ್ಲಿ 16 ಡಿಗ್ರಿ-22 ಡಿಗ್ರಿ ಸೆಂಟಿಗ್ರೇಡ್. ಬೇಸಗೆಯಲ್ಲಿ ಉತ್ತರದಲ್ಲಿ 38 ಡಿಗ್ರಿ ಸೆಂಟಿಗ್ರೇಡ್‍ವರೆಗೂ ನಮೀಬ್ ಮರಳುಗಾಡು ಮತ್ತು ದಕ್ಷಿಣದಲ್ಲಿ 49 ಡಿಗ್ರಿ ಸೆಂಟಿಗ್ರೇಡ್‍ವರೆಗೂ ಉಷ್ಣತೆ ಏರುತ್ತದೆ. ಜುಲೈ ಅತ್ಯಂತ ಕಡಿಮೆ ಉಷ್ಣತೆಯ ತಿಂಗಳು. ದಕ್ಷಿಣದಲ್ಲಿ ಉಷ್ಣತೆ -7 ಡಿಗ್ರಿ ಫ್ಯಾರನ್‍ಹೀಟ್‍ಗಿಂತ ಕೆಳಕ್ಕೆ ಇಳಿಯಬಹುದು. ನಮೀಬಿಯದಲ್ಲಿ ಮಳೆ ಹೆಚ್ಚಿಲ್ಲ; ದಕ್ಷಿಣಕ್ಕಿಂತ ಉತ್ತರದಲ್ಲಿ ಉತ್ತಮ. ನಮೀಬ್ ಮರಳುಗಾಡು ಮತ್ತು ಆರೆಂಜ್ ನದಿ ಕಣಿವೆಯಲ್ಲಿ ವಾರ್ಷಿಕ ಮಾಧ್ಯ ಮಳೆ 101.6 ಮಿಮೀ.ಗಿಂತ ಕಡಿಮೆ. ಉತ್ತರದಲ್ಲಿ ಕ್ಯಾಪ್ರಿವಿ ಬಳಿ 410 ಮಿಮೀ.-460 ಮಿಮೀ. ನಮೀಬಿಯದ ಮಾಧ್ಯವಾರ್ಷಿಕ ಮಳೆ 254 ಮಿಮೀ. ಈ ಮಳೆಯಲ್ಲಿ ಹೆಚ್ಚು ಭಾಗ ಬೀಳುವುದು ಬೇಸಗೆಯಲ್ಲಿ (ಡಿಸೆಂಬರ್-ಫೆಬ್ರವರಿ). ನೈಋತ್ಯದ ಕೊನೆಯಲ್ಲಿ ಚಳಿಗಾಲದಲ್ಲಿ 12.7 ಮಿಮೀ. ಮಳೆಯಾಗುತ್ತದೆ. ಕೆಲವು ವರ್ಷಗಳಲ್ಲಿ ಪ್ರಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿ ನದಿಗಳಲ್ಲಿ ಅತಿಪ್ರವಾಹ ಬರುವುದುಂಟು. ಕೆಲವು ವರ್ಷಗಳಲ್ಲಿ ಬರ ಸಂಭವಿಸುತ್ತದೆ. ಈಶಾನ್ಯದಲ್ಲಿ ಮಳೆಯಾಗುವ ಭರವಸೆಯುಂಟು. ಆದರೆ ದಕ್ಷಿಣದಲ್ಲಿ ಮಳೆ ಅನಿಶ್ಚಿತ.

ಸಸ್ಯಪ್ರಾಣಿವರ್ಗ[ಬದಲಾಯಿಸಿ]

ನಮೀಬಿಯದಲ್ಲಿ ಎರಡು ಬಗೆಯ ಸಸ್ಯಗಳಿವೆ. ಪಶ್ಚಿಮದಲ್ಲಿ ಮರುಭೂಮಿ ಮತ್ತು ಅರೆಮರುಭೂಮಿ ಸಸ್ಯಗಳಿವೆ. ಅಲ್ಲಿ ಮರಳುಗಾಡಿನ ಹುಲ್ಲು ಮತ್ತು ಕುರುಚಲು ಬೆಳೆಯುತ್ತವೆ. ಪೂರ್ವಭಾಗದಲ್ಲಿ ಮರಗಳಿಂದ ಕೂಡಿದ ಹುಲ್ಲುಗಾಡು ಮತ್ತು ಪೊದೆಗಳಿವೆ. ನಮೀಬ್ ಮರುಭೂಮಿಯಲ್ಲಿ ಸಸ್ಯಗಳು ಕಡಿಮೆ; ಅಲ್ಲಿ ಕತ್ತಾಳೆ ಮಾದರಿಯ ದಪ್ಪ ಕಾಂಡದ ಗಿಡಗಳಿವೆ. ಒಳನಾಡಿನಲ್ಲಿ ಹಾಗೂ ದಕ್ಷಿಣದಲ್ಲಿ ವಿವಿಧ ಬಗೆಯ ಗುಲ್ಲು ಮತ್ತು ಗಿಡಮರಗಳೂ ಉತ್ತರದಲ್ಲಿ ಹುಲ್ಲುಗಾಡು ಹಾಗೂ ಜಾಲಿ ಜಾತಿಯ ಮುಳ್ಳುಮರಗಳೂ ಇವೆ. ತೀರ ಉತ್ತರದಲ್ಲಿ ತಕ್ಕಮಟ್ಟಿಗೆ ದಟ್ಟವಾದ ಅರಣ್ಯಗಳಿವೆ. ಚೌಬೀನೆ ಮರಗಳುಂಟು. ನಮೀಬಿಯದ ಹಲವು ಕಡೆಗಳಲ್ಲಿ ಸಿಂಹ, ಆನೆ, ಖಡ್ಗಮೃಗ, ಜಿರಾಫೆ, ಚಿರತೆ, ಕಾಡುಕೋಣ, ಹೇಸರಗತ್ತೆ ಮೊದಲಾದ ಮೃಗಗಳಿವೆ. 38,860 ಚ.ಕಿಮೀ. ವಿಸ್ತೀರ್ಣದ ಎಟೋಷ ರಾಷ್ಟ್ರೀಯ ವನ ಪ್ರಸಿದ್ಧವಾದ್ದು. ಇದು ಪ್ರಪಂಚದ ಅತ್ಯಂತ ದೊಡ್ಡ ಅಭಯಾರಣ್ಯಗಳಲ್ಲಿ ಒಂದು.

ಜನ[ಬದಲಾಯಿಸಿ]

ನಮೀಬಿಯದ 7,46,000 ಜನರಲ್ಲಿ ಯೂರೋಪಿಯನ್ನರು ಕೇವಲ 91,000 ಮಂದಿ. ಉಳಿದವರು ಕಪ್ಪು ಜನ ಮತ್ತು ವರ್ಣೀಯರು. ಪ್ರಮುಖ ಬಣಗಳು ಒವಾಂಬೋ, ದಮಾರ, ಕಾವಾಂಗೋ, ಹೆರೆರೊ, ನಾಮಾ, ಪೂರ್ವಕ್ಯಾಪ್ರಿವಿಯನ್ ಇತ್ಯಾದಿ. ಉತ್ತರದ ಒವಾಂಬೋ ಬಣದ ಜನರು ವೃತ್ತಿ ಬೇಸಾಯ ಹಾಗೂ ಕೂಲಿ ಕೆಲಸ. ಅನಾಗರಿಕ ಸ್ಥಿತಿಯಲ್ಲಿರುವ ಆದಿವಾಸಿ ಜನರು ಈಗಲೂ ಹಳೆಯ ಕಾಲದ ಆಯುಧಗಳನ್ನು ಬಳಸಿ ಬೇಟೆಯಾಡುತ್ತಾರೆ. ಉಳಿದ ಬಣಗಳ ಜನರು ಪಟ್ಟಣಗಳಲ್ಲಿ ಹಾಗೂ ದಕ್ಷಿಣದ ಗ್ರಾಮಗಳಲ್ಲಿ ಜೀವಿಸುತ್ತಾರೆ. ಕೃಷಿ ಮತ್ತು ಕಾರ್ಖಾನೆ ಕೆಲಸ ಅವರ ಮುಖ್ಯ ವೃತ್ತಿಗಳು. ವಿಂಟ್‍ಹುಕ್ (61,260) (ಆಡಳಿತ ಕೇಂದ್ರ), ಟ್ಯೂಮೆಬ್ (12,338), ಕೇಟ್ ಮಾನ್‍ಷೋಪ್ (10,297), ವಾಲ್ವಿಸ್ ಬೇ-ಇವು ಪ್ರಮುಖ ಪಟ್ಟಣಗಳು.

ಇತಿಹಾಸ[ಬದಲಾಯಿಸಿ]

1486ರಲ್ಲಿ ಬಾರ್ತೊಲೊಮ್ಯು ಡೀಯಷ್ ಈಗ ಲೊಡೆರಿಟ್ಜ್ ರೇವುಪಟ್ಟಣ ಇರುವ ಸ್ಥಳವನ್ನು ತಲುಪಿದ. ಈಗಿನ ನಮೀಬಿಯ ಭೌಗೋಳಿಕ ಪ್ರದೇಶ ಒಂದು ರಾಜಕೀಯ ಘಟಕವಾಗಿ ರೂಪುತಳೆದದ್ದು 19ನೆಯ ಶತಮಾನದ ಕೊನೆಯ ಪಾದದಲ್ಲಿ. ನೈಋತ್ಯ ಆಫ್ರಿಕದಲ್ಲಿ ವಸಾಹತೊಂದನ್ನು ಸ್ಥಾಪಿಸಬೇಕೆಂದು 1884ರಲ್ಲಿ ಜರ್ಮನಿ ತೀರ್ಮಾನಿಸಿ, ಬ್ರಿಟನ್ ಮತ್ತು ಪೋರ್ಚುಗಲ್‍ಗಳೊಡನೆ ಒಡಂಬಡಿಕೆ ಮಾಡಿಕೊಂಡು ಈಗಿನ ಎಲ್ಲೆಗಳನ್ನು ನಿರ್ಧರಿಸಿತು. ವಾಲೀಸ್ ಬೇ ರೇವುಪ್ರದೇಶವನ್ನು ಬಿಟ್ಟು ಈಗಿನ ನಮೀಬಿಯದ ಉಳಿದ ಭಾಗ ಜರ್ಮನಿಗೆ ಸೇರಿತ್ತು. ವಾಲ್ವಿಸ್ ಬೇ ಪ್ರದೇಶ ಬ್ರಿಟನ್ನಿಗೆ ಸೇರಿತ್ತು (1878). ಇದು 1884ರಲ್ಲಿ ಕೇಪ್ ಕಾಲೊನಿಯ ಭಾಗವಾಯಿತು; 1910ರಲ್ಲಿ ದಕ್ಷಿಣ ಆಫ್ರಿಕ ಒಕ್ಕೂಟವಾದಾಗ ಅದರಲ್ಲಿ ಸೇರಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ದಕ್ಷಿಣ ಆಫ್ರಿಕದ ಸೈನ್ಯ ಈ ಪ್ರದೇಶವನ್ನು ಆಕ್ರಮಿಸಿಕೊಂಡಿತು. 1921ರವರೆಗೂ ದಕ್ಷಿಣ ಆಫ್ರಿಕದ ಸೈನಿಕ ಆಡಳಿತಕ್ಕೆ ಒಳಪಡಿಸಲಾಗಿದ್ದ ಈ ಪ್ರದೇಶವನ್ನು ಸಿ ದರ್ಜೆಯ ಪ್ರಾದೇಶಾಧೀನ ಕ್ಷೇತ್ರವೆಂದು (ಮ್ಯಾಂಡೇಟೆಡ್ ಟೆರಿಟೊರಿ) ಆಗಿನ ರಾಷ್ಟ್ರಗಳ ಕೂಟ (ಲೀಗ್ ಆಫ್ ನೇಷನ್ಸ್) ಘೋಷಿಸಿ, ಇದರ ಆಡಳಿತವನ್ನು ಕೂಟದ ಪರವಾಗಿ ದಕ್ಷಿಣ ಆಫ್ರಿಕ ನಡೆಸತಕ್ಕದ್ದೆಂದು ಆದೇಶ ನೀಡಿತು. 1946ರಲ್ಲಿ ರಾಷ್ಟ್ರಗಳ ಕೂಟ ಅಂತ್ಯಗೊಂಡಿತು; ಆದರೆ ಈ ಪ್ರದೇಶವನ್ನು ವಿಶ್ವಸಂಸ್ಥೆಯ ನ್ಯಾಸಧಾರಣಕ್ಕೆ (ಟ್ರಸ್ಟೀಷಿಪ್) ಒಪ್ಪಿಸಲು ದಕ್ಷಿಣ ಆಫ್ರಿಕ ನಿರಾಕರಿಸಿ, ಇದರ ಮೇಲೆ ತನ್ನ ಒಡೆತನವನ್ನು ಮುಂದುವರಿಸಿಕೊಂಡು ಬಂದಿದೆ; ಇದು ತನ್ನ ಅವಿಭಾಜ್ಯ ಅಂಗವೆಂದೇ ಭಾವಿಸಿ ವರ್ಣಭೇದ ನೀತಿಯನ್ನು ಇಲ್ಲಿಗೂ ವಿಸ್ತರಿಸಿದೆ. ದಕ್ಷಿಣ ಆಫ್ರಿಕದ ರಕ್ಷಣೆಯ ದೃಷ್ಟಿಯಿಂದ ಈ ಪ್ರದೇಶ ತನಗೆ ಅಗತ್ಯವೆಂಬುದು ದಕ್ಷಿಣ ಆಫ್ರಿಕದ ವಾದ. ವಿಶ್ವಸಂಸ್ಥೆಗೂ ದಕ್ಷಿಣ ಆಫ್ರಿಕಕ್ಕೂ ನಡುವೆ ಉದ್ಭವಿಸಿದ ವ್ಯಾಜ್ಯ ಬಗೆಹರಿದಿಲ್ಲ. ವಿಶ್ವಸಂಸ್ಥೆಯ ನಿರ್ಣಯಗಳನ್ನೆಲ್ಲ ಅದು ಉಲ್ಲಂಘಿಸುತ್ತ ಬಂದಿದೆ. ವಿಶ್ವಾಭಿಪ್ರಾಯಕ್ಕೆ ವಿರುದ್ಧವಾದ ರೀತಿಯಲ್ಲಿ ವರ್ತಿಸುತ್ತ ಬಂದಿದೆಯಲ್ಲದೆ ಮಾನವೀಯ ಹಕ್ಕುಗಳನ್ನು ತುಚ್ಛೀಕರಿಸಿ ಇಲ್ಲಿಯ ಜನಗಳ ಮೇಲೆ ದೌರ್ಜನ್ಯ ಎಸಗುತ್ತಿದೆ.

1966ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ ಈ ಪ್ರಶ್ನೆಯನ್ನು ಪರಿಶೀಲಿಸಿತು. ಅದೇ ವರ್ಷ ವಿಶ್ವಸಂಸ್ಥೆಯ ಮಹಾಸಭೆ ನಿರ್ಣಯವೊಂದನ್ನು ಸ್ವೀಕರಿಸಿ, ಪ್ರಾದೇಶಾಧಿಕಾರ ಕೊನೆಗೊಂಡಿದೆಯೆಂದೂ ಈ ಪ್ರದೇಶ ಸ್ವಾತಂತ್ರ್ಯ ಪಡೆಯುವವರೆಗೂ ಅದರ ಮೇಲಣ ಹೊಣೆ ತನ್ನದೇ ಆಗಿರುತ್ತದೆಂದೂ ಹೇಳಿತು. ಈ ನಿರ್ಣಯವನ್ನು ಜಾರಿಗೆ ಕೊಡಲು ಅದು 1967ರಲ್ಲಿ 11 ಮಂದಿಯ ಪರಿಷತ್ತನ್ನು ನೇಮಿಸಿತು. 1968ರಲ್ಲಿ ಈ ಪ್ರದೇಶವನ್ನು ನಮೀಬಿಯ ಎಂಬುದಾಗಿ ಕರೆಯಲಾಯಿತು. ಆದರೆ ದಕ್ಷಿಣ ಆಫ್ರಿಕ ಇದನ್ನು ತಿರಸ್ಕರಿಸಿತು. ವಿಶ್ವಸಂಸ್ಥೆಯ ಪ್ರಯತ್ನಗಳೆಲ್ಲ ಇದುವರೆಗೆ ವಿಫಲಗೊಂಡಿದೆ. 1964ರಲ್ಲಿ ದಕ್ಷಿಣ ಆಫ್ರಿಕ ಸರ್ಕಾರ ನೇಮಿಸಿದ ಆಯೋಗ ನಮೀಬಿಯದ ಬಣಗಳಿಗೆ ಸಂಬಂಧಿಸಿದಂತೆ ಇಲ್ಲಿ 10 ಬಣ ರಾಜ್ಯಗಳನ್ನು ಸ್ಥಾಪಿಸಬಹುದೆಂದು ಶಿಫಾರಸು ಮಾಡಿತು. 1968ರಲ್ಲಿ ಒವಾಂಬೊ ಬಣರಾಜ್ಯಕ್ಕೂ ಆ ತರುವಾಯ ಇತರ ಬಣರಾಜ್ಯಗಳಿಗೂ ವಿಧಾನ ಪರಿಷತ್ತುಗಳು ರಚಿತವಾದುವು. ಆದರೆ ಕೆಲವು ಬಣ ರಾಜ್ಯಗಳಲ್ಲಿ ನಾಯಕನನ್ನು ಬಣಗಳೇ ನೇಮಿಸುವ ಪದ್ಧತಿ ಮುಂದುವರಿಯುತ್ತಿದೆ. 1975ರ ಜನವರಿಯ ಚುನಾವಣೆಯಲ್ಲಿ ಬಣನಾಯಕ ಫಿಲೆಮಾನ್ ಎಲೆಫಾಸ್ ಎಂಬುವನು ಒವಾಂಬೊಲ್ಯಾಂಡ್‍ನ ಮುಖ್ಯನಾಗಿ ಚುನಾಯಿತನಾದ; ಆದರೆ ಆ ವರ್ಷದ ಆಗಸ್ಟ್ ತಿಂಗಳಲ್ಲಿ ಅವನು ಕೊಲೆಯಾದ. ನಮೀಬಿಯ ಬಿಕ್ಕಟ್ಟನ್ನು ಪರಿಹರಿಸಲು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಪ್ರಯತ್ನ ಮುಂದುವರಿದಿದೆ. ಅದು ಈ ಬಗ್ಗೆ 1972ರಲ್ಲಿ ದಕ್ಷಿಣ ಆಫ್ರಿಕ ಗಣರಾಜ್ಯದೊಂದಿಗೆ ವ್ಯವಹರಿಸಿತು. ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಕುರ್ಟ್‍ವಾಲ್ಡ್‍ಹೈಮ್ ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡಿದರು. ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಆದ್ದರಿಂದ ವಿಶ್ವಸಂಸ್ಥೆ ದಕ್ಷಿಣ ಆಫ್ರಿಕದೊಡನೆ ವ್ಯವಹಾರವನ್ನು ನಿಲ್ಲಿಸಿತು. ಹಾಗೂ ವಿಶ್ವಸಂಸ್ಥೆಯ ಭದ್ರತಾ ಸಮಿತಿ ನೈಋತ್ಯ ಆಫ್ರಿಕದ ಪ್ರಜಾಪಕ್ಷ (ಸೌತ್‍ವೆಸ್ಟ್ ಆಫ್ರಿಕನ್ ಪೀಪಲ್ಸ್ ಆರ್ಗನೈಸೇಷನ್) ನಮೀಬಿಯದ ಜನರನ್ನು ಪ್ರತಿನಿಧಿಸುವ ರಾಜಕೀಯ ಪಕ್ಷವೆಂದು ಅಂಗೀಕರಿಸಿತು. ಆದರೆ ಆ ಪಕ್ಷದ ನಾಯಕರನ್ನು ದಕ್ಷಿಣ ಆಫ್ರಿಕ ಸರ್ಕಾರ ಬಂಧಿಸಿತು. ಪಕ್ಷ ತನ್ನ ಹೋರಾಟ ಮುಂದುವರಿಸಿದೆ. ಗೆರಿಲಾ ಯುದ್ಧದಲ್ಲಿ ತೊಡಗಿದೆ.

ಆಡಳಿತ[ಬದಲಾಯಿಸಿ]

ಈ ಪ್ರದೇಶ ದಕ್ಷಿಣ ಆಫ್ರಿಕ ಗಣರಾಜ್ಯದಲ್ಲಿ ಸಮಾವೇಶಗೊಂಡಿಲ್ಲ. ಆದರೂ ವಾಸ್ತವವಾಗಿ ಇದು ಆ ಗಣರಾಜ್ಯದ ಐದನೆಯ ಪ್ರಾಂತ್ಯವೆಂಬಂತೆ ಅದರ ಆಡಳಿತಕ್ಕೆ ಒಳಪಟ್ಟಿದೆ. ಇದರ ಆಡಳಿತಾಧಿಕಾರಿಯನ್ನು ದಕ್ಷಿಣ ಆಫ್ರಿಕ ಸರ್ಕಾರ ನೇಮಿಸುತ್ತದೆ. ಇವನ ನೆರವಿಗೆ ಬಿಳಿಯ ಸದಸ್ಯರಿಂದ ಕೂಡಿದ ವಿಧಾನಸಭೆ ಇರುತ್ತದೆ. ದಕ್ಷಿಣ ಆಫ್ರಿಕ ಸರ್ಕಾರ ಇಟ್ಟುಕೊಂಡಿರುವ ವಿಷಯಗಳನ್ನು ಬಿಟ್ಟು ಉಳಿದ ವಿಷಯಗಳಲ್ಲೆಲ್ಲ ಈ ಸಭೆಗೆ ಅಧಿಕಾರವುಂಟು. ಬ್ಯಾಂಟೂ ಜನಗಳ ವ್ಯವಹಾರಕ್ಕಾಗಿ ದಕ್ಷಿಣ ಆಫ್ರಿಕ ಸರ್ಕಾರದಲ್ಲಿ ಒಬ್ಬ ಮಂತ್ರಿ ಇರುತ್ತಾನೆ. ದಕ್ಷಿಣ ಆಫ್ರಿಕ ಸಂಸತ್ತಿಗೆ ಈ ಪ್ರದೇಶದ ಬಿಳಿಯರೂ ಪ್ರತಿನಿಧಿಗಳನ್ನು ಆರಿಸುತ್ತಾರೆ. ನಮೀಬಿಯದ ರಕ್ಷಣೆಯ ಹೊಣೆ ದಕ್ಷಿಣ ಆಫ್ರಿಕ ಸರ್ಕಾರದ್ದೇ. ನ್ಯಾಯಾಡಳಿತ : ನಮೀಬಿಯವನ್ನು 21 ದಂಡಾಧಿಕಾರ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಒವಾಂಬೊಲ್ಯಾಂಡ್, ಓಕವಾಂಗೊ, ಕವೊಕೊಲ್ಯಾಂಡ್ ಇವು ಬುಡಕಟ್ಟು ದಂಡಾಧಿಕಾರಿ ಜಿಲ್ಲೆಗಳು. ದಂಡಾಧಿಕಾರಿ ನ್ಯಾಯಾಲಯದ ತೀರ್ಮಾನಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನೈಋತ್ಯ ಆಫ್ರಿಕ ಭಾಗವಾದ ಉಚ್ಚ ನ್ಯಾಯಾಲಯಕ್ಕೆ ಅಪೀಲುಗಳನ್ನು ಸಲ್ಲಿಸಬಹುದು. ಸರ್ವೋಚ್ಚ ನ್ಯಾಯಾಲಯಕ್ಕೆ ಇಡೀ ನಮೀಬಿಯದ ಮೇಲೆ ಪೂರ್ಣ ನ್ಯಾಯಾಧಿಕಾರವಿದೆ. ಉಚ್ಚನ್ಯಾಯಾಲಯ ವಿಂಟ್‍ಹುಕ್‍ನಲ್ಲಿದೆ.

ಶಿಕ್ಷಣ[ಬದಲಾಯಿಸಿ]

1921ರಿಂದ ಇಲ್ಲಿಯ ಶಿಕ್ಷಣ ದಕ್ಷಿಣ ಆಫ್ರಿಕ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿದೆ. 1953ರ ಬ್ಯಾಂಟೂ ಶಿಕ್ಷಣ ಅಧಿನಿಯಮದ ಪ್ರಕಾರ 1964ರಲ್ಲಿ ಶಿಕ್ಷಣ ಅಭಿವೃದ್ಧಿ ಯೋಜನೆ ಆರಂಭವಾಯಿತು. ವರ್ಣಭೇದ ನೀತಿಗೆ ಅನುಸಾರವಾಗಿಯೇ ಇಲ್ಲಿಯ ಶಿಕ್ಷಣವ್ಯವಸ್ಥೆಯಿದೆ. 1973ರ ಸರ್ವೇಕ್ಷಣೆಯ ಪ್ರಕಾರ ಕರಿಯ ಜನರ ಪೈಕಿ ಶೇಕಡ 69 ಮಂದಿ ಅನಕ್ಷರಸ್ಥರು. ಪ್ರಾಥಮಿಕ ಮತ್ತು ಸೆಕಂಡರಿ ಶಿಕ್ಷಣ ಉಚಿತ. ಬಿಳಿಯರಿಗೆ 67 ಸರ್ಕಾರಿ ಮತ್ತು 19 ಖಾಸಗಿ ಶಾಲೆಗಳೂ ಬ್ಯಾಂಟೂ ಮತ್ತು ಇತರ ಕರಿಯ ಜನರಿಗಾಗಿ 543 ಶಾಲೆಗಳೂ ಇವೆ.

ಆರ್ಥಿಕತೆ[ಬದಲಾಯಿಸಿ]

ನಮೀಬಿಯದಲ್ಲಿ ಗಣಿಗಾರಿಕೆ ಪ್ರಧಾನವೃತ್ತಿ. ಎರಡನೆಯದು ಮೀನುಗಾರಿಕೆ. ಮೀನುಗಳನ್ನು ಡಬ್ಬೀಕರಿಸುವ ಕೈಗಾರಿಕೆಯಿದೆ. ಮಾಂಸ, ಹಾಲು, ಬೆಣ್ಣೆ ಇವನ್ನು ಸಹ ಡಬ್ಬಿಗಳಲ್ಲಿ ತುಂಬಿ ಇತರ ಕಡೆಗಳಿಗೆ ರಫ್ತು ಮಾಡಲಾಗುತ್ತದೆ. ಕುರಿ ಸಾಕುವುದೂ ಒಂದು ಉದ್ಯೋಗ.

ವಜ್ರ, ತಾಮ್ರ, ಸೀಸ ಹಾಗೂ ತವರ ಇಲ್ಲಿಯ ಮುಖ್ಯ ಖನಿಜೋತ್ಪನ್ನಗಳು. ಪ್ರಪಂಚದ ವಜ್ರದ ಗಣಿಗಳಲ್ಲೆಲ್ಲ ದೊಡ್ಡದು ಇಲ್ಲಿದೆ. ರೋಸಿಂಗ್‍ನಲ್ಲಿ ಯುರೇನಿಯಂ ಗಣಿಯಿದೆ. ನಮೀಬಿಯದ ಆರ್ಥಿಕತೆಯನ್ನು ಸಂಪೂರ್ಣವಾಗಿ ದಕ್ಷಿಣ ಆಫ್ರಿಕದ ಹಿಡಿತಕ್ಕೆ ಒಳಪಡಿಸಲಾಗಿದೆ.

ಸಾರಿಗೆ ಸಂಪರ್ಕ[ಬದಲಾಯಿಸಿ]

ನಮೀಬಿಯದ ರೈಲ್ವೆಗಳು ದಕ್ಷಿಣ ಆಫ್ರಿಕ ರೈಲ್ವೆ ಕಂಪನಿಗೆ ಸೇರಿದವು. ದಕ್ಷಿಣ ಆಫ್ರಿಕದಿಂದ ವಿಂಟ್‍ಹುಕ್‍ಗೆ ಮತ್ತು ಅಲ್ಲಿಂದ ಟ್ಯುಮೆಬ್‍ಗೆ ದಕ್ಷಿಣೋತ್ತರವಾಗಿ ಹರಿದಿರುವ ಪ್ರಮುಖ ರೈಲುಮಾರ್ಗದಿಂದ ಪೂರ್ವ-ಪಶ್ಚಿಮವಾಗಿ ವಾಲ್ವಿಸ್ ಬೇ ಮತ್ತು ಲೂಡೆರಿಟ್ಜ್ ರೇವುಗಳಿಗೂ ಗೋಬಾಬಿಸ್‍ಗೂ ಕವಲುಮಾರ್ಗಗಳಿವೆ. ನಮೀಬಿಯದಲ್ಲಿ 54,400 ಕಿಮೀ. ರಸ್ತೆಗಳಿವೆ. 33,600 ಕಿಮೀ. ರಸ್ತೆಗಳು ನಮೀಬಿಯದ ನಿಯಂತ್ರಣ ಹಾಗೂ ರಕ್ಷಣೆಯಲ್ಲಿದೆ. ಉಳಿದ ರಸ್ತೆಗಳು ದಕ್ಷಿಣ ಆಫ್ರಿಕ ಗಣರಾಜ್ಯದ ನೇರ ಆಡಳಿತಕ್ಕೊಳಪಟ್ಟಿವೆ. ವಾಲ್ವಿಸ್ ಬೇ ಮತ್ತು ಲೂಡೆರಿಟ್ಜ್ ಇವು ಮುಖ್ಯ ರೇವುಗಳು. ವಾಲ್ವಿಸ್ ಬೇ ಆಳ ಬಂದರು. ಅಲ್ಲಿ ಭಾರಿ ಹಡಗುಗಳು ನಿಲ್ಲಬಹುದು.

ಕೇಪ್‍ಟೌನ್, ವಾಲ್ವಿಸ್ ಬೇ, ಅಲೆಗ್ಜಾಂಡ್ರಾ ಬೇ, ಲೂಡೆರಿಟ್ಜ್ ಮತ್ತು ವಿಂಟ್‍ಹುಕ್ ಪಟ್ಟಣಗಳ ನಡುವೆ ವಿಮಾನ ಸಂಚಾರವುಂಟು. ಇಟೋ ನ್ಯಾಷನಲ್ ಪಾರ್ಕ್ ಎಂಬುದು ಅರಣ್ಯ ಮೃಗಗಳನ್ನು ರಕ್ಷಿಸಿರುವ ಭಾರಿ ಅರಣ್ಯ. ಇಲ್ಲಿಗೆ ಪ್ರವಾಸಿಗಳು ಹೋಗಿಬರಲು ವಿಮಾನ ವ್ಯವಸ್ಥೆ ಇದೆ. ವಾರ್ಷಿಕವಾಗಿ 2,50,000 ಮಂದಿ ಪ್ರವಾಸಿಗಳು ಇಲ್ಲಿಗೆ ಭೇಟಿ ಕೊಡುತ್ತಾರೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ನಮೀಬಿಯ&oldid=1079702" ಇಂದ ಪಡೆಯಲ್ಪಟ್ಟಿದೆ