ವಿಷಯಕ್ಕೆ ಹೋಗು

ನಗಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಗಾರಿ ಒಂದು ಚರ್ಮವಾದ್ಯ. ನಗಾರಿಗೆ ಪ್ರಾಚೀನ ಕಾಲದಲ್ಲಿ ಭೇರಿ, ದುಂದುಭಿ ಎಂದು ಕರೆಯುತ್ತಿದ್ದರು.[][] 'ಭೂಮಿದುಂದುಭಿ' ಎಂಬುದು ನಗಾರಿ ಪ್ರಕಾರಗಳಲ್ಲಿ ಪ್ರಾಚೀನದ್ದಾಗಿರಬಹುದು ಎಂದು ಊಹಿಸಲಾಗಿದೆ.[]

ಭೂಮಿದುಂದುಭಿಯ ರಚನೆ

[ಬದಲಾಯಿಸಿ]

ಭೂಮಿದುಂದುಭಿಯನ್ನು ನೆಲದಲ್ಲಿ ತಗ್ಗು ಮಾಡಿ ಅದರ ಮೇಲೆ ಚರ್ಮವನ್ನು ಹೊದಿಸಿ ಬಾರಿಸುತ್ತಿದ್ದ ಒಂದು ವಾದ್ಯ ಎಂದು ಹೇಳಲಾಗುತ್ತದೆ. ಬಹಳ ಪ್ರಾಚೀನ ಕಾಲದಿಂದಲೂ ನಗಾರಿಯ ಬಳಕೆ ಇದೆ. ಬೇರೆ ಬೇರೆ ಉದ್ದೇಶಕ್ಕಾಗಿ ನಗಾರಿಯನ್ನು ಬಳಸುತ್ತಿದ್ದರು.

ನಗಾರಿಯ ಬಳಕೆ

[ಬದಲಾಯಿಸಿ]

ರಾಜರು ನಗಾರಿಗಳನ್ನು ಕೋಟೆಯ ಬಾಗಿಲಿನಲ್ಲಿ ಇಡುತ್ತಿದ್ದರು. ಏಕೆಂದರೆ ಪ್ರಜೆಗಳಿಗೆ ಅನ್ಯಾಯವಾಗಿದ್ದರೆ, ರಾಜನಿಗೆ ಸಲಹೆ ಸೂಚನೆಗಳನ್ನು ತಿಳಿಸಬೇಕಾಗಿದ್ದರೆ, ಪುರಜನರು ನಗಾರಿಯನ್ನು ಬಡಿಯುತ್ತಿದ್ದರು. ಆಗ ರಾಜನು ಬಂದು ಪ್ರಜೆಗಳನ್ನು ವಿಚಾರಿಸುತ್ತಿದ್ದನು. ಏನಾದರೂ ಶತ್ರುಗಳು ಬರುತ್ತಿದ್ದರೆ, ವೈರಿಗಳು ಬರುತ್ತಿದ್ದರೆ, ಸೈ‍ನಿಕರು ಅವರನ್ನು ದೂರದಿಂದ ಕಂಡು ಕೋಟೆಯ ಮೇಲಿರುವ ಅಥವಾ ಊರ ಹೊರಗೆ ಎತ್ತರ ಪ್ರದೇಶದಲ್ಲಿಟ್ಟಿರುವ ನಗಾರಿಯನ್ನು ಬಾರಿಸುತ್ತಿದ್ದರು. ಸೇನಾಧಿಪತಿಗಳು ಬಾರಿಸಿದ ನಗಾರಿ ಶಬ್ದ ಕೇಳಿ ರಾಜರು ವೈ‍ರಿಗಳನ್ನು ಸದೆಬಡಿಯಲು ಸೈ‍ನ್ಯವನ್ನು ಸಜ್ಜುಗೊಳಿಸುತ್ತಿದ್ದರು. ಯುದ್ಧ ಗೆದ್ದು ಬಂದ ಸಂತೋಷಕ್ಕೂ ಹಾಗೂ ಸೈ‍ನಿಕರಿಗೆ ಸ್ಪೂರ್ತಿ ಶಕ್ತಿ ತುಂಬುವುದಕ್ಕೋಸ್ಕರವೂ ನಗಾರಿಯನ್ನು ಬಡಿಯುತ್ತಿದ್ದರು. ಎಲ್ಲಿ ಹೆಣ್ಣು ದೇವತೆ ಇರುತ್ತದೆಯೋ ಅಲ್ಲಿ ನಗಾರಿ ಇದ್ದೇ ಇರುತ್ತದೆ ಎಂದು ಪ್ರತೀತಿ. ದೇವಿಯ ಪೂಜೆ ನಡೆದಾಗ ನಗಾರಿಯನ್ನು ಬಾರಿಸುತ್ತಾರೆ. ಮುಂಜಾನೆ ಸಾಯಂಕಾಲ ದುರ್ಗವ್ವ, ದ್ಯಾಮವ್ವ ಗುಡಿಯಲ್ಲಿ ನಗಾರಿಯನ್ನು ಬಾರಿಸುತ್ತಾರೆ. ನಗಾರಿಯನ್ನು ವಿಶೇಷ ಸಂದರ್ಭಗಳಲ್ಲಿ, ಜಾತ್ರೆ, ಉತ್ಸವಗಳಲ್ಲಿ ಕೆಲ ಕಡೆ ಎತ್ತಿನ ಮೇಲಿಟ್ಟಿಕೊಂಡು ಬಾರಿಸುತ್ತಾರೆ. ಮೊದಲು ನಗಾರಿಗಳನ್ನು ಗೌಡರು, ಶಾನುಭೋಗರು, ಕುಲಕರ್ಣಿ ಮನೆಗಳಲ್ಲಿ ಬಳಸುತ್ತಿದ್ದರು. ನಗಾರಿ ಮನೆಯಲ್ಲಿದ್ದರೆ ಅದೊಂದು ಗೌರವ ಮತ್ತು ಪ್ರತಿಷ್ಥೆಯ ಸಂಕೇತವಾಗಿತ್ತು. ಜೋಡಿ ನಗಾರಿಗಳನ್ನು ಹೊಂದಿದ ಗುಡಿಗಳಲ್ಲಿ ಏಕಕಾಲಕ್ಕೆ ಎರಡು ನಗಾರಿಗಳನ್ನು ಬಾರಿಸುತ್ತಾರೆ.

ನಗಾರಿಯ ಶಬ್ದನಾದ

[ಬದಲಾಯಿಸಿ]

ನಗಾರಿ ಬಡಿಯುವುದು ಒಂದು ಕಲೆ. ಇದರಿಂದ ಮಂದ್ರವಾದ ಸ್ವರನಾದ ಬರುತ್ತದೆ. ಲಯ ಮತ್ತು ತಾಳಬದ್ದವಾಗಿ ಬಡಿಯುವುದು ಇದರಲ್ಲಿರುವ ಸ್ವಾರಸ್ಯ. ನಗಾರಿಯಿಂದ ಸೂಕ್ಷ್ಮವಾದ ಶಬ್ದ ತರಂಗಗಳನ್ನು ಹೊರಡಿಸುವುದಕ್ಕೆ ಆಗುವುದಿಲ್ಲ. ಧನ ಧನ ಧಂ ಧನ ಎಂದು ಒಂದೇ ಪ್ರಕಾರದ ಹೊಡೆತದಿಂದ ಸುತ್ತಲೂ ಗಂಭೀರವಾದ ವಾತಾವರಣ ಮೂಡುತ್ತದೆ. ಆ ಶಬ್ದ ಬಹು ದೂರದವರೆಗೆ ಕೇಳಿಸುತ್ತದೆ. ಪಟಾ ಕುಣಿತ, ಪೂಜಾ ಕುಣಿತ, ಸುಗ್ಗಿ ಮೇಳಗಳು ನಗಾರಿ ಇಲ್ಲದೆ ನಡೆಯಲಾರವು.

ಬಾಹ್ಯ ಕೊಂಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಗೊ.ರು ಚನ್ನಬಸಪ್ಪ,ಕರ್ನಾಟಕ ಜನಪದ ಕಲೆಗಳು,ಕನ್ನಡ ಸಾಹಿತ್ಯ ಪರಿಷತ್ತು ೧೯೭೭.
  2. ಹಿ.ಚ.ಬೊರಲಿಂಗಯ್ಯ ಕರ್ನಾಟಕದ ಜನಪದ ಕಲೆಗಳ ಕೋಶ.ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ,೧೯೯೬.
  3. https://janapada.karnataka.gov.in/48/%E0%B2%A8%E0%B2%97%E0%B2%BE%E0%B2%B0%E0%B2%BF/kn


"https://kn.wikipedia.org/w/index.php?title=ನಗಾರಿ&oldid=1319022" ಇಂದ ಪಡೆಯಲ್ಪಟ್ಟಿದೆ