ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದೆ.[೧]ದೇವಾಲಯದ ಸುತ್ತುಮುತ್ತಲಿನ ಪರಿಸರ ಎಲ್ಲರ ಗಮನ ಸೆಳೆಯುವಂತಹದ್ದು. ನೇತ್ರಾವತಿಯ ದಕ್ಷಿಣ ದಂಡೆಯಲ್ಲಿರುವ ಈ ದೇವಾಲಯದ ಸುತ್ತಲ ಪರಿಸರ ಅತ್ಯಂತ ರಮಣೀಯವಾದುದು. ಉತ್ತರ ದಿಕ್ಕಿನಲ್ಲಿ ಪಾಪನಾಶಿನಿ ನೇತ್ರಾವತಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತಾ ದೇವಳದ ಪಾವಿತ್ರ್ಯತೆಗೆ ಮೆರುಗನ್ನು ನೀಡುತ್ತಿದ್ದಾಳೆ. ಪಶ್ಚಿಮ ದಿಕ್ಕಿಗೆ, ಪುರಾತನ ಹಾಗೂ ಆಧುನಿಕ ಯುಗಕ್ಕೆ ಸಮನ್ವಯತೆಯ ಸಂಕೇತವೆಂಬಂತೆ ರೈಲು ಹಳಿಗಳ ಮೇಲೆ ಓಡುತ್ತಿರುವ ಉಗಿಬಂಡಿಗಳ ಭರಾಟೆ, ದಕ್ಷಿಣ ಭಾಗಕ್ಕೆ ಪುರಾತನದಲ್ಲಿ ಆಳಿಹೋದ ಬಂಗರಸರು ಕಟ್ಟಿದ ಮಣ್ಣಿನ ಕೋಟೆ ಕೊತ್ತಲಗಳು ಇದ್ದುವು ಅನ್ನುವುದನ್ನು ಸಾರಿಹೇಳುವ ಸವೆದು ಹೋದ ಅವಶೇಷಗಳು, ಸಮೀಪದಲ್ಲೆ ಕಡತದಲ್ಲಷ್ಟೆ ಸುಮಾರು ಐದು ಸೆಂಟ್ಸ್ ಜಾಗವನ್ನು ತನ್ನ ಹೆಸರಿನಲ್ಲಿನ್ನೂ ಉಳಿಸಿಕೊಂಡಿರುವ, ಬಂಗರಸರಿಂದಲೇ ಕಟ್ಟಿಸಲ್ಪಟ್ಟ ವೀರಭದ್ರ ದೇವಾಲಯ ಇತ್ತೆನ್ನುವುದರ ಕುರುಹಾಗಿ, ಮೂರ್ತಿಯ ಹೊರತಾಗಿ ಗಟ್ಟಿಮುಟ್ಟಾದ ದಪ್ಪ ಗೋಡೆಯ ಕಪ್ಪು ಶಿಲೆಯ ಕಲಾತ್ಮಕವಾದ ಕಟ್ಟಡವೊಂದಿದೆ. ಹತ್ತಿರದಲ್ಲೇ ಧ್ವಜ ಸ್ಥಂಭವಿದ್ದು ಬಾವಟೆ ಹಿತ್ಲು ಎಂಬಲ್ಲಿ ಅದರ ಕುರುಹು ಇಂದಿಗೂ ಇದೆ. ಅದೇ ರೀತಿ ಇಂದೂ ಪೂಜೆಗೊಳ್ಳುತ್ತಿರುವ ಶ್ರೀ ವೀರಮಾರುತಿ ದೇಗುಲ (ಕೋಟೆ ಮುಖ್ಯಪ್ರಾಣ); ಸುತ್ತಲಿನ ಜನ ಹೇಳುವಂತೆ ಇತ್ತುಗಳ ಧ್ವಜಗಳನ್ನಷ್ಟೇ ಹೊತ್ತಿರುವ ಆದೀಶ್ವರ ಸ್ವಾಮಿಯ ಬಸದಿ, ಮುಸಲ್ಮಾನರಿಗಾಗಿ ಮಸೀದಿ ಹಾಗೆಯೇ ಪಿಲಿಚಾಮುಂಡಿ ದೈವಸ್ಥಾನ. ವಿಶೇಷವೆಂದರೆ, ಜಾಲಕೆರೆ ಎಂಬ ಹೆಸರಿನಿಂದ ಕರೆಯಲ್ಪಡುವ ಕೆರೆ, ಕೆರೆಯಿಂದ ನೀರು ಹರಿದು ಹೋಗಲು ಕಲ್ಲಿನ ತೂಬು ಇವನ್ನು ಇಂದಿಗೂ ಕಾಣಬಹುದು. ಈ ಮೂಲಕ ನೀರಾವರಿಗೆ ಅಂದಿನ ರಾಜರ ಕೊಡುಗೆ ವೇದ್ಯವಾಗುತ್ತದೆ. ಇದರ ಪಶ್ಚಿಮಕ್ಕೆ ಅರಸರು ವಿಹಾರಕ್ಕಾಗಿ ಬಳಸುತ್ತಿದ್ದ ವಿಶಾಲವಾದ ಎತ್ತರದ ಪ್ರದೇಶವಿದ್ದು ‘ಅರಮನೆ ಗುಡ್ಡ’ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಪ್ರಕೃತ ಹಚ್ಚಹಸುರಿನಿಂದ ಕಂಗೊಳಿಸುತ್ತಿರುವ ದೇವಾಲಯದ ಪೂರ್ವಭಾಗ ಈ ಹಿಂದೆ ಅರಮನೆ ಇದ್ದ ಜಾಗವಾಗಿತ್ತು. ಅದಕ್ಕಾಗಿಯೊ ಏನೊ ಇಂದೂ ಕೂಡ ಆ ಪ್ರದೇಶವನ್ನು ಅರಮನೆ ಹಿತ್ತಿಲು ಎಂದೇ ಕರೆಯಲಾಗುತ್ತಿದೆ. ಸೋಮನಾಥ ಚಾವಡಿ ಎಂದು ಹೆಸರಿಸಲ್ಪಡುವ ರಾಜ ಒಡ್ಡೋಲಗ ಕೊಡುತ್ತಿದ್ದ ಜಾಗವನ್ನು ಅಲ್ಲಿನ ಜನ ಈಗಲೂ ತೋರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ, ಇದೇ ಅರಮನೆಗೆ ಸಂಬಂಧಪಟ್ಟ ಬಾವಿ ಹಾಗೂ ಅದನ್ನು ಸಮೀಪಿಸಲು ಇರುವ ಕಲ್ಲಿನ ಮೆಟ್ಟಿಲುಗಳು ಗೋಚರವಾಗುತ್ತಿವೆ. ಅರಮನೆಯ ಮುಂಭಾಗದಲ್ಲಿ ಅಂಗಣಮಾರು ಹೆಸರಿನ ಸುಮಾರು ಹನ್ನೆರಡು ಎಕ್ರೆ ಜಾಗವಿತ್ತಂತೆ, ಇದನ್ನು ಕುದುರೆಗಳನ್ನು ಕಟ್ಟಿಹಾಕಲು ಉಪಯೋಗಿಸುತ್ತಿದ್ದರು ಅನ್ನುವುದು ಸುತ್ತಮುತ್ತಲಿನವರ ಮಾತು. ಈಗ ಹರಿದು ಹಂಚಾಗಿ ಹೋಗಿದ್ದರೂ ಕಣ್ಣಳತೆಗೆ ಸಿಗದಷ್ಟು ದೂರಕ್ಕೆ ಸಮತಟ್ಟಾದ ಜಾಗ ಹಾಸಿಕೊಂಡಿರುವುದನ್ನು ಕಾಣಬಹುದು. ಮಳೆಗಾಲದಲ್ಲೊಂದು ದಿನ ಎಲ್ಲಿಂದಲೋ ಕೊಪ್ಪರಿಗೆಯೊಂದು ಉರುಳಿಕೊಂಡು ಬಂದು ಅರಮನೆಯ ಸಮೀಪ ತಂಗಿತ್ತಂತೆ; ಅರಸನ ಊಳಿಗದವರು ಬಂದು ಅದನ್ನು ಸ್ವೀಕರಿಸುವಂತೆ ರಾಜನಲ್ಲಿ ಕೇಳಿಕೊಂಡರಂತೆ, ಆದರೆ ರಾಜ ತನಗೀಗಾಗಲೇ ಬೇಕಾದಷ್ಟು ಸಂಪತ್ತಿದೆಯೆಂದೂ ಕೊಪ್ಪರಿಗೆಯ ಅವಶ್ಯಕತೆಯಿಲ್ಲವೆಂದು ಹೇಳಲಾಗಿ ಆ ಕೊಪ್ಪರಿಗೆಯು ನೀರಿಗೆ ಜಾರಿ ಹೋಯಿತಂತೆ; ಆ ಜಾಗವಿಂದು ಪಂಬದ ಗುಂಡಿ ಅನ್ನುವ ಹೆಸರನ್ನು ಪಡೆದಿದೆ. ಸೋಮನಾಥ ದೇವಾಲಯದ ಪೂಜೆ ಭಟ್ಟರ ‘ಕಂಕಣ’ ಅನ್ನುವ ಹೆಸರಿನ ಮಗಳು ಬಂಗರಸರ ಕೀಟಲೆಗೆ ಒಳಗಾದಾಗ ಆಕೆ ಅಪಮಾನವನ್ನು ಸಹಿಸಿಕೊಳ್ಳಲಾಗದೆ ಮರ್ಯಾದೆಗಾಗಿ ನದಿಗೆ ಹಾರಿ ಪ್ರಾಣ ತ್ಯಾಗ ಮಾಡಿಕೊಂಡ ಸ್ಥಳ ಕಂಕಣ ಗುಂಡಿ ಎನ್ನುವ ಹೆಸರು ಪಡೆಯಿತು.(ಬಂಗರಸರು ಇಂತಹ ಕೀಳು ಕೆಲಸಕ್ಕೆ ಇಳಿದ ಘಟನೆಗಳು ನಮಗೆ ಇತಿಹಾಸದಲ್ಲಿ ಕಂಡುಬರುತ್ತಿಲ್ಲ; ಆದರೆ, ಈ ಕಳಂಕ ನಂದರಸರಿಗೆ ಅಂಟಿದ್ದಿದೆ) ಇದರ ಸ್ವಲ್ಪವೇ ಅಂತರದಲ್ಲಿ ಸಿಕ್ಖರು ವಾಸಮಾಡುತ್ತಿದ್ದ ಪ್ರದೇಶ ಸಿಂಗರ ಗುಂಡಿ ಎಂಬ ಹೆಸರನ್ನು ಪಡೆಯಿತು. ನೇತ್ರಾವತಿಯ ಇನ್ನೊಂದು ದಡದಲ್ಲಿ, ಅಂದರೆ ನದಿಯ ಉತ್ತರ ಭಾಗದಲ್ಲಿ ಹಿಂದೂ ರುದ್ರ ಭೂಮಿಯಿದೆ; ಇದಕ್ಕೆ ಅಭಿಮುಖವಾಗಿ, ನದಿಯ ದಕ್ಷಿಣ ದಂಡೆಯಲ್ಲಿ ಉತ್ತರಕ್ರಿಯಾದಿಗಳು ನಡೆಯುತ್ತವೆ.

ಸುತ್ತಮುತ್ತಲಿನ ಪರಿಸರ[ಬದಲಾಯಿಸಿ]

ನಂದಾವರದಲ್ಲಿ ರಾಜಗಂಭೀರ ವಾತಾವರಣವಿದೆ. ನಾಲ್ಕು ಎಕರೆ ಭೂ ಪ್ರದೇಶವನ್ನು ಕೋಟೆಯು ಆವರಿಸಿತ್ತಂತೆ. ಆದರೆ ಇಂದು ನಂದಾವರದಲ್ಲಿ ಅರಮನೆಯಿಲ್ಲ, ಕೋಟೆ ಕೊತ್ತಲಗಳಿಲ್ಲ. ಆದರೆ ಈ ಪ್ರದೇಶಗಳ ಸುತ್ತೆಲ್ಲ ಅಡ್ಡಾಡಿದರೆ ಮೊದಲು ಇಲ್ಲೆಲ್ಲವೂ ಇತ್ತೆಂಬುದನ್ನು ಸಾರಿ ಹೇಳುವ ಅವಶೇಷಗಳು, ಕುರುಹುಗಳು ನಿರ್ಜೀವ ಸ್ಮಾರಕಗಳಾದರೂ ಅವುಗಳ ಒಳಗಣ ವೈಭವದ ದಿನಗಳು ಗೋಚರವಾಗುತ್ತವೆ. ಬಹಳ ಪ್ರಾಚೀನ ಹಾಗೂ ಚಾರಿತ್ರಿಕವಾಗಿ ಪ್ರಸಿದ್ಧವಾದ ನಂದಾವರವು ಶತಶತಮಾನಗಳ ಕಾಲ ಒಂದು ಐತಿಹಾಸಿಕ ಕೇಂದ್ರವಾಗಿ ಮೆರೆದಾಡಿದ ಸ್ಥಳವೆಂಬುವುದು ತಿಳಿಯುತ್ತದೆ. ಈ ಪ್ರದೇಶವನ್ನು ಅದೆಷ್ಟು ಮಂದಿ ರಾಜರುಗಳು ಆಳಿ ಹೋಗಿದ್ದಾರೆಯೋ, ಅದೆಷ್ಟು ಮಂದಿ ಈ ನಂದಾವರದ ಏಳಿಗೆಯನ್ನು ಬಯಸಿ ಗತಪ್ರಾಣರಾಗಿದ್ದಾರೆಯೋ ಅದೆಲ್ಲವೂ ಇಂದಿಗೆ ಕಾಲ ಗರ್ಭಕ್ಕೆ ಸೇರಿ ಹೋಗಿದೆ. ಒಂದರ್ಥದಲ್ಲಿ, ಪರಂಪರಾಗತವಾಗಿ ರಾಜ ವೈಭವದಿಂದ ಒಂದು ಸರಕಾರದ ಕಾರ್ಯಕ್ರಮದಂತೆ ಎಲ್ಲವೂ ಇಲ್ಲಿ ಸುಸೂತ್ರವಾಗಿ ನಡೆದು ಬಂದಿತ್ತು; ಚರಿತ್ರೆಯ ಎಳೆಎಳೆಯನ್ನು ಬಿಡಿಸುವಾಗ, ಇಲ್ಲಿನ ಗತ ವೈಭವದ ಸಾಹಿತ್ಯ ತಿಳಿಯುವಾಗ ‘ನಂದಾವರ’ ವೈಭವದಿಂದ ಮೆರೆದ ಸಂಸ್ಥಾನವಾಗಿತ್ತು ಅನ್ನುವುದನ್ನು ಖಂಡಿತವಾಗಿ ಹೇಳಬಹುದಾಗಿದೆ ಮಾತ್ರವಲ್ಲ ಶ್ರದ್ಧಾ ಭಕ್ತಿಗಳ ಕೇಂದ್ರವೂ ಆಗಿತ್ತು ಎಂದು ತಿಳಿದು ಬರುತ್ತದೆ.

ನಂದಾವರಕ್ಕೊಂದು ಐತಿಹಾಸಿಕ ಹಿನ್ನೆಲೆ[ಬದಲಾಯಿಸಿ]

ಇಲ್ಲಿನ ಊರಿನವರ ಪ್ರಕಾರ ನಂದಾವರವನ್ನು ಆಳಿದ್ದ ಬಂಗರಸು ಎಂಬವನು ಆಶ್ರಿತ ರಾಜ. ಬಲ್ಲಾಳನೂ ಆಗಿದ್ದಿರಬಹುದು. ಈತನು ಪ್ರಜಾ ಪರಿವಾರವನ್ನು ತನ್ನವರೆಂದು ಅರಿತು ಧರ್ಮ ಸತ್ಯ ನಿಷ್ಠೆಗಳಿಂದ ಆಡಳಿತ ನಡೆಸಿ ಜನಾನುರಾಗಿಯಾಗಿದ್ದನು. ಅರಮನೆಯಲ್ಲಿ ತನ್ನ ಅಧೀನದಲ್ಲಿದ್ದ ಅಧಿಕಾರಿಗಳನ್ನು, ಚಾಕರಿಯವರನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದನು. ಹೀಗೆ ನಿಷ್ಠೆಯಿಂದ ರಾಜ್ಯಾಡಳಿತ ನಡೆಸುತ್ತಿದ್ದ ಕಾಲದಲ್ಲಿ ಒಮ್ಮೆ ತೀರ ಬಡವನಾಗಿದ್ದ, ಜಾತಿಯಲ್ಲಿ ಚಮಗಾರನಾಗಿದ್ದ ನಂದನೆಂಬವನು ಅರಸನ ಮುಂದೆ ತನ್ನ ಕಷ್ಟವನ್ನು ತೋಡಿಕೊಂಡು ಒಂದು ಕೋಣ ಮಲಗುವಷ್ಟು ಅಂದರೆ ಕಡಿಮೆ ವಿಸ್ತಾರದ ಜಾಗವನ್ನು, ವಾಮನನು ಬಲಿಯಲ್ಲಿ ಮೂರಡಿ ಭೂಮಿಯನ್ನು ಬೇಡಿದಂತೆ ಬೇಡಿದನಂತೆ. ಅರಸನು ಸಂತೋಷಗೊಂಡು ಅವನ ಬೇಡಿಕೆಯನ್ನು ಈಡೇರಿಸುವ ಅಭಯವನ್ನು ನೀಡಿದನಂತೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲನಾದರೆ ಬೊಕ್ಕಸವನ್ನೇ ನಿನಗೆ ಬಿಟ್ಟುಕೊಡುತ್ತೇನೆ ಎಂದು ಭಾಷೆ ಇತ್ತನಂತೆ. ಇತ್ತ ನಂದನು ಕೋಣದ ಚರ್ಮದಿಂದ ನೂಲಿನಂತಹ ಎಳೆಗಳನ್ನು ಮಾಡಿ ಒಂದಕ್ಕೊಂದು ಜೋಡಿಸಿ, ಅರಮನೆಯನ್ನು ಸುತ್ತುವರಿಯುವಂತೆ ಮಾಡಿದನಂತೆ. ಕೊಟ್ಟ ಮಾತಿಗೆ ತಪ್ಪದೆ ದೊರೆಯು ಬೊಕ್ಕಸವನ್ನು ನೀಡಿ ನಂದನಿಗೇ ಅಡಿಯಾಳಾಗಬೇಕಾಗಿ ಬಂತಂತೆ! ಹೀಗೆ ತನ್ನ ವಶವಾದ ಈ ಪ್ರದೇಶಕ್ಕೆ ತನ್ನ ಹೆಸರನ್ನು ಸೇರಿಸಿ ರಾಜ್ಯವಾಳತೊಡಗಿದನಂತೆ ನಂದ. ನೀಚನಾಗಿದ್ದ ಈತನ ಆಳ್ವಿಕೆಯಲ್ಲಿ ಪ್ರಜೆಗಳಿಗೆ ನೆಮ್ಮದಿ ದೂರವಾಗಿ ಜನ ಶಪಿಸತೊಡಗಿದರಂತೆ. ಕಾಮಪಿಪಾಸುವಾದ ಈತನು ಊರಿನ ಹೆಂಗಳೆಯರನ್ನು ಪೀಡಿಸತೊಡಗಿದನಂತೆ. ಅರಮನೆಯ ಬೊಕ್ಕಸವನ್ನು ಭೋಗ ಜೀವನಕ್ಕೆ ಬರಿದು ಮಾಡಿದ ಈತನು ಮುಂದೆ ಚರ್ಮದ ನಾಣ್ಯಗಳನ್ನು ಮುದ್ರಿಸಿ ಚಲಾವಣೆಗೂ ತಂದನಂತೆ. ಒಂದು ಐತಿಹ್ಯದಂತೆ, ಮಯೂರ ವರ್ಮ(ಶರ್ಮ)ಎಂಬ ದೊರೆಯು ತನ್ನ ರಾಣಿ ಹಾಗೂ ಪರಿವಾರದೊಂದಿಗೆ ವಿಹಾರಕ್ಕಾಗಿ ನಂದಾವರದತ್ತ ಬಂದನಂತೆ. ನಂದಾವರವನ್ನು ಸಂದರ್ಶಿಸುವ ಉತ್ಸಾಹ ತೋರಿದ ಇವನ ರಾಣಿಗೆ ನದಿ ದಾಟಿ ಬರಬೇಕಾದ ಪ್ರಮೇಯ ಬಂದೊದಗಿದಂತೆ. ಅಂಬಿಗನ ಸಹಾಯದಿಂದ ರಾಣಿಯೊಬ್ಬಳೇ ನದಿ ದಾಟಿ ನಂದ ರಾಜನ ಊರನ್ನು ಪ್ರವೇಶಿಸಿದ ಸಂಗತಿ ಕಾಮುಕ ದೊರೆ ನಂದ ರಾಜನ ಕಿವಿಗೂ ಮುಟ್ಟಿತಂತೆ. ರಾಣಿಯ ಸೌಂದರ್ಯಕ್ಕೆ ಮನಸೋತ ನಂದ ರಾಜನು ರಾಣಿಯು ತನ್ನ ಅರಮನೆಯಲ್ಲಿಯೇ ರಾತ್ರಿ ಕಳೆಯುವಂತೆ ಮಾಡಲು ಅಂಬಿಗನನ್ನು ತಡೆದನಂತೆ. ತನಗೆ ಬಂದೊದಗಿದ ಅಪಾಯವನ್ನು ಮನಗಂಡ ರಾಣಿಯು ನಂದರಾಜನ ರಾಣಿಯ ಮೊರೆಹೊಕ್ಕು ಆಕೆಯ ನೆರವಿನಿಂದ ದೊರೆಗೆ ತಿಳಿಯದಂತೆ ನದಿ ದಾಟಿ ಪಾರಾದಳಂತೆ. ನಂದರಾಜನ ರಾಣಿ ಆಕೆಯ ಮಾನ ಉಳಿಸಿ, ಮಾನವೀಯತೆ ಮೆರೆದಳಂತೆ. ಮಯೂರ ವರ್ಮನು ನಂದರಾಜನಿಂದ ತನ್ನ ರಾಣಿಗೆ ಬಂದೊದಗಿದ್ದ ಗಂಡಾಂತರವನ್ನು ತಿಳಿದು, ಇಂತಹ ದುಷ್ಟನಿದ್ದರೆ ದೇಶಕ್ಕೇ ಕೇಡು ಎಂದು ಬಗೆದು ಆತನ ಮೇಲೆ ಆಕ್ರಮಣ ಮಾಡಿ ನಂದ ರಾಜನನ್ನು ಕೊಂದನಂತೆ. ರಾಣಿಯ ಮಾನ ಉಳಿಸುವಲ್ಲಿ ನೆರವಾದ ಅಂಬಿಗನನ್ನು ಪುರಸ್ಕರಿಸಿ, ಕಡವಿನ ಅಧಿಕಾರವನ್ನು ವಂಶ ಪಾರಂಪರ್ಯವಾಗಿ ನಡೆಸಿಕೊಂಡು ಬರುವಂತೆ ತಾಮ್ರ ಶಾಸನವನ್ನು ಬರೆದು ನೀಡಿದನಂತೆ. ಮುಂದೆ ಸುರಿದ ಭಾರೀ ಮಳೆಗೆ ನಂದ ರಾಜನು ಚಲಾವಣೆಗೆ ತಂದಿದ್ದ ಚರ್ಮದ ನಾಣ್ಯಗಳು ಒದ್ದೆಯಾಗಿ ವಾಸನೆ ಹುಟ್ಟಿ ನರಿ ನಾಯಿಗಳಿಗೆ ಆಹಾರವಾದುವಂತೆ. ಇದರಿಂದಲೇ “ನಂದರಾಯನ ಬದುಕು ನರಿ ನಾಯಿ ತಿಂದು ಹೋಯಿತು” ಎಂಬ ಉಕ್ತಿ ಇಂದಿಗೂ ಉಳಿದು ಬಂದಿದೆಯಂತೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಲಿಖಿತ ಆಧಾರಗಳು ಸಿಗುವುದಿಲ್ಲ.

ಸ್ಥಳನಾಮದ ಕುರಿತು[ಬದಲಾಯಿಸಿ]

'ನಂದಾವರ' ಎಂಬ ಊರಿನ ಹೆಸರು ಮೂಲತಃ ನಂದ ವಂಶದ ರಾಜರ ಹೆಸರಿನಿಂದ ಬಂದಿದೆ ಎಂಬುದಕ್ಕೆ ಎರಡು ಐತಿಹಾಸಿಕ ದಾಖಲೆಗಳಿವೆ. ನಂದ ಅರಸು ಮನೆತನದ ರಾಜಧಾನಿಯಾಗಿದ್ದ ಈ ಊರನ್ನು ‘ನಂದಪುರ’ ಎಂದು ಕರೆಯುತ್ತಿದ್ದರು. ಕಾಲ ಕ್ರಮೇಣ ಇಲ್ಲಿರುವ ‘ಪ’ಕಾರ ಶಿಥಿಲಗೊಂಡು, ಕೊನೆಯಲ್ಲಿ ‘ವ’ಕಾರವಾಗಿ ‘ನಂದವುರ’ ಆಗಿ, ಶ್ರಮ ಪರಿಹಾರಾರ್ಥವಾಗಿ ಎನ್ನುವಂತೆ ‘ನಂದವ್ರ’ ಆಗಿ ಮುಂದಕ್ಕೆ ‘ನಂದಾವರ’ ಆಗಿರುವ ಸಾಧ್ಯತೆಗಳಿವೆ. ಎರಡನೆಯದಾಗಿ ನಂದ ವಂಶದ ಈ ಅರಸರು ಈ ಪಟ್ಟಣದ ಸುತ್ತಲೂ ಆವರಣ ಅಥವಾ ಸುತ್ತು ಗೋಡೆಯನ್ನು ಕಟ್ಟಿಸಿದ್ದರಿಂದ ಇದನ್ನು ನಂದಾವರವೆಂದು ಕರೆಯಾಲಾಯಿತು. ನಂದ ವಂಶದ ಅರಸರು ಇಲ್ಲಿ ಆಡಳಿತ ನಡೆಸುತ್ತಿದ್ದರೆಂಬುದು ಸ್ಪಷ್ಟ. ಇಲ್ಲಿನ ಸ್ಥಳೀಯರು ಹೇಳುವಂತೆ ನಂದರಸರು, ಹರಿಜನ ಜಾತಿಯವರಾಗಿದ್ದರೆಂದೂ ಹೆಚ್ಚಿನಂಶ ಇಲ್ಲಿನ ಸ್ಥಳೀಯ ಜನರೇ ಆಗಿರುವ ಸಾಧ್ಯತೆಗಳಿವೆಯೆಂದೂ ಅವರ ಅಭಿಪ್ರಾಯ. ಆದ್ದರಿಂದ ಬಹಳಷ್ಟು ಪುರಾತನದಿಂದಲೇ ಇಲ್ಲಿ ಇವರೇ ಆಡಳಿತ ನಡೆಸುತ್ತಿದ್ದರೆಂದೂ ಅವರದ್ದೇ ಹೆಸರು ಈ ಊರಿಗೆ ಶಾಶ್ವತವಾಗಿ ನಿಂತಿತೆಂದೂ ಹೇಳಬಹುದು; ಆದರೆ ಲಭ್ಯ ಮಾಹಿತಿಗಳನ್ನು ಆಧರಿಸಿ ಇವರು ಯಾವ ಕಾಲದಲ್ಲಿ ಮತ್ತು ಎಷ್ಟು ಕಾಲ ಆಡಳಿತ ನಡೆಸಿದರೆಂಬುದನ್ನು ಮಾತ್ರ ಹೇಳಲು ಸಾಧ್ಯವಿಲ್ಲ. ನಂದ ರಾಜ ವಂಶದ ಹೆಸರು ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಕಂಡುಬರುತ್ತದೆ. ಪ್ರಸಿದ್ಧನಾದ ಅಶೋಕ ಚಕ್ರವರ್ತಿಯ ಪಿತಾಮಹನಾದ ಸಮುದ್ರಗುಪ್ತ ಮೌರ್ಯನು ಚಾಣಕ್ಯನ ಸಹಾಯದಿಂದ ನಂದ ಅರಸರನ್ನು ಸೋಲಿಸಿ, ನಾಶಪಡಿಸಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಆ ನಂದ ವಂಶದ ಒಂದು ಶಾಖೆಯೇ ಇಲ್ಲಿಗಾಗಮಿಸಿ, ಇಲ್ಲಿಂದಲೂ ರಾಜ್ಯವಾಳುತ್ತಿದ್ದರೋ ಏನೋ ಎಂಬುದಾಗಿ ಹೇಳುತ್ತಾರೆ. ಮುಂದುವರಿಯುತ್ತಾ ಈ ಎರಡೂ ಮನೆತನಗಳ ಹೆಸರುಗಳಲ್ಲಿ ಪೂರ್ಣ ಸಾಮ್ಯವಿದೆ. ನಂದಾವರವನ್ನು ಆಳುತ್ತಿದ್ದ ನಂದರು ಹರಿಜನರಾಗಿದ್ದಂತೆ ಉತ್ತರ ಭಾರತದ ಆ ಮೌರ್ಯ ಪೂರ್ವ ಕಾಲದ ನಂದರೂ ಚತುರ್ವವರ್ಣ ಪದ್ಧತಿಯಲ್ಲಿ ಮೊದಲ ಮೂರು ವರ್ಗಕ್ಕೆ ಸೇರಿದವರಲ್ಲ; ಅವರ ಆಚಾರ ವಿಚಾರ, ಆಹಾರ ಅಭ್ಯಾಸಗಳ ಅಧ್ಯಯನದಿಂದ ಅವರು ಅಂದಿನ ನಾಲ್ಕನೇ ವರ್ಗಕ್ಕೆ ಸೇರಿದವರೆಂದು ಹೇಳಬೇಕಾಗುತ್ತದೆ. ಆದುದರಿಂದ ಹೆಸರು ಮಾತ್ರವಲ್ಲದೆ ಈ ಎರಡೂ ಮನೆತನಗಳಲ್ಲಿ ಸಾಮ್ಯವೂ ಕಂಡುಬರುತ್ತದೆ. ಆದರೆ ಇವಾವುದಕ್ಕೂ ಲಿಖಿತ ದಾಖಲೆಗಳಿಲ್ಲ. ನಂದ ಅರಸರು ಈ ನೇತ್ರಾವತೀ ತಟವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಇಲ್ಲಿ ಕೋಟೆ, ಅರಮನೆ, ಮಂತ್ರಿ, ಅಧಿಕಾರಿಗಳ ನಿವಾಸಗಳು; ಪರಿಚಾರಕ, ಸೈನಿಕ, ವ್ಯಾಪಾರಿ ಮುಂತಾದವರ ಮನೆಗಳನ್ನು ಕಟ್ಟಿಸಿದ್ದರಿಂದ ಈ ಪ್ರದೇಶವು ನಂದವುರ ಹಾಗೂ ಮುಂದೆ ನಂದಾವರ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಇವರು ಕ್ರಿ.ಶ 15ನೇ ಶತಮಾನದವರೆಗೆ ಇಲ್ಲಿ ಆಡಳಿತೆ ನಡೆಸುತ್ತಿದ್ದರೆಂದು ತಿಳಿದುಬರುತ್ತದೆ.

ಬಂಗರು ನಂದಾವರವನ್ನು ಪ್ರವೇಶ ಮಾಡಿದ ಸಂದರ್ಭದ ಹಿನ್ನೆಲೆ[ಬದಲಾಯಿಸಿ]

ಒಂದನೇ ಲಕ್ಷ್ಮಪ್ಪರಸ ಬಂಗರಾಜ(ಕ್ರಿ.ಶ.1400-1455) ಉಪ್ಪಿನಂಗಡಿಯಿಂದ ದೋಣಿ ಹತ್ತಿಕೊಂಡು ಮಂಗಳೂರಿಗೆ ಹೋಗುವಾಗ ನಂದಾವರದ ಮಹಾಗಣಪತಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ಒಂದು ಜೋಡು ಕವಡೆಗಳು ರಾತ್ರೆ 5 ಘಳಿಗೆ ಸಮಯ ಸಮನೆಲದಲ್ಲಿ ಕೂತು ಕೂಗುತ್ತಿದ್ದವು. ಆಗ ಹತ್ತಿರವಿದ್ದ ಜೋಯಿಸನು ಈ ಸಮಯ ಹಕ್ಕಿಗಳು ಕೂಗಿದ್ದರಿಂದ ಆ ಸ್ಥಳದಲ್ಲಿ ಐಶ್ವರ್ಯ ತುಂಬಿದೆ ಮತ್ತು ಅರಮನೆ ಕಟ್ಟಲಿಕ್ಕೂ ಯೋಗ್ಯವಾದ ಸ್ಥಳವೂ ಆಗಿದೆ ಎಂದು ಹೇಳಿದನು, ಆಗ ಎಲ್ಲರು ದೋಣಿಯಿಂದ ಕೆಳಗಿಳಿದು ಆ ಸ್ಥಳದಲ್ಲಿ ಒಂದು ಕೋಲು ಊರಿ ಗುರುತನ್ನು ಮಾಡಿ ಪುನಹ ದೋಣಿ ಹತ್ತಿ ಮಂಗಳೂರಿಗೆ ಹೋದರು. ಅನಂತರ ತಿರುಗಿ ನಂದಾವರಕ್ಕೆ ಬಂದು ಸಜೀಪ ಸೀಮೆಯ ನಂದಿರಾಯ ಬಲ್ಲಾಳನ ಸಹಾಯದಿಂದ ಅರಮನೆ ಕಟ್ಟಲು ಬುನಾದಿ ಕಲ್ಲು ಹಾಕಲಿಕ್ಕೆ ಅಗೆದಾಗ ದ್ರವ್ಯವು ಸಿಕ್ಕಿತು. ಶಾ.ಶ. 1336ನೇ ಜಯ ನಾಮ ಸಂವತ್ಸರದ ಮಾಘ ಶುದ್ಧ 7 ಯು ದಿವಸ ಬಹಳ ವಿಜೃಂಭಣೆಯಿಂದ ಅರಮನೆಯ ಪ್ರವೇಶವಾಯಿತು. ಅರಮನೆಯನ್ನು ಕಟ್ಟಿದ ಮೇಲೆ ಅದರ ದಕ್ಷಿಣದಲ್ಲಿ ಒಂದು ಕೋಟೆಯನ್ನು ಕಟ್ಟಿಸಿ ಅದರಲ್ಲಿ ವೀರಭದ್ರ ದೇವರ ಪ್ರತಿಷ್ಠೆ ಮಾಡಿಸಿದನು. ಪಿಲಿ ಚಾಮುಂಡಿ ದೈವಕ್ಕೆ ಒಂದು ಗುಡಿಯನ್ನು ಸಹ ಕಟ್ಟಿಸಿದನು. ಅರಮನೆಂiÀi ಪೂರ್ವ ದಕ್ಷಿಣ ಭಾಗದಲ್ಲಿ ಪಗಡೆ ಸಾಲಿನಲ್ಲಿ ಪೇಟೆಯನ್ನು ಕಟ್ಟಿಸಿ ಸಾಮಾಜಿಕರು ಮುಂತಾದವರಿಗೆ ಅವರವರ ತರವರಿತು ಮನೆಗಳನ್ನು ಕಟ್ಟಿಸಿಕೊಟ್ಟು ಅರಮನೆಯ ಪೂರ್ವ ದಿಕ್ಕಿನಲ್ಲಿ ಒಂದು ವೀರ ಮಾರುತಿ ದೇವಸ್ಥಾನವನ್ನೂ ದಕ್ಷಿಣ ಭಾಗದಲಿ ಆದೀಶ್ವರ ಬಸದಿಯನ್ನೂ ಮುಸಲ್ಮಾನರಿಗೆ ಮತ್ತು ಮಾಪಿಳ್ಳೆಯರಿಗೆ ಒಂದು ಮಸೀದಿಯನ್ನೂ ಕಟ್ಟಿಸಿದನು. ಇವುಗಳಲ್ಲಿ ಮಸೀದಿ ದೇವಸ್ಥಾನ ಬಸದಿಗಳಿಗೆ ಉಂಬಳಿ ಬಿಟ್ಟು, ಸಜೀಪ ನಡುಬೈಲು ದೈವಗಳಿಗೂ ಬೇಕಾದಷ್ಟು ಆಭರಣ ಮುಂತಾದ್ದನ್ನು ಮಾಡಿಸಿಕೊಟ್ಟನು. ಈ ಅರಸನ ಕಾಲದಲ್ಲಿ ಬಂಗಾಡಿ, ಬೆಳ್ತಂಗಡಿ, ಮಂಗಳೂರು, ನಂದಾವರ ಎಂಬ ನಾಲ್ಕು ಅರಮನೆಗಳಾದುವು. ಬಂಗ ಅರಸನು ಇಲ್ಲಿ ತನ್ನ ಅರಮನೆಯನ್ನು ಕಟ್ಟಿಸುವ ಸಂದರ್ಭದಲ್ಲಿ ಇಲ್ಲಿಂದ ಆಳುತ್ತಿದ್ದ ನಂದರಾಯನೊಡನೆ ಯುದ್ಧ ಹೂಡಿದನು. ಜನ ಬೆಂಬಲವೂ ಇಲ್ಲದ, ಅಂದಿನ ಮಟ್ಟಿಗೆ ಕೀಳು ಜಾತಿಯವನೂ ಆಗಿದ್ದ ನಂದರಾಯನ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಇದರಿಂದಾಗಿ, ಜೀವವನ್ನು ಕಳೆದುಕೊಂಡ ನಂದರಾಯನ ಸಂಪತ್ತನ್ನು ಯಾರ್ಯಾರೋ ದೋಚಿಕೊಂಡು ಹೋದರು, ತಿಂದು ಹಾಕಿದರು. ಹೀಗೆ ನಂದರಾಯನ ಬದುಕು ನರಿನಾಯಿ ತಿಂದು ಹೋಯಿತು ಎಂಬ ನಾಣ್ಣುಡಿ ರೂಢಿಗೆ ಬಂತು; ಹೀಗೆ ದಾರುಣವಾಗಿ ನಂದ ವಂಶವು ಅಸ್ತಂಗತವಾಗಿ ಈ ನಂದಪುರದಲ್ಲಿ ದುಃಖದ ಕತ್ತಲು ಕವಿಯಿತು. ದುರದೃಷ್ಟವೆಂದರೆ, ಎಷ್ಟು ಮಂದಿ ನಂದ ವಂಶದ ಅರಸರು ಈ ನಂದಾವರವನ್ನು ಆಳಿದ್ದಾರೆ ಅನ್ನುವುದು ತಿಳಿದು ಬರುತ್ತಿಲ್ಲ, ಅಲ್ಲೊಬ್ಬ ನಂದರಾಯ ಮಯೂರ ಶರ್ಮನಿಂದ ಸತ್ತರೆ ಇಲ್ಲೊಬ್ಬ ನಂದರಾಯ ಬಂಗರಸನಿಂದ ಹತನಾದ. ಒಂದಂತೂ ಸತ್ಯ, ನಂದರು ನಂದಾವರದಲ್ಲಿ ಆಡಳಿತ ನಡೆಸಿದ್ದಾರೆ, ಆದರೆ ಯಾವ ಹೆಸರಿನ ಎಷ್ಟು ಮಂದಿ ಅರಸರು ಅನ್ನುವುದನ್ನು ನಿರ್ಣಯಿಸಲು ಸಾಧ್ಯವಿಲ್ಲವಾಗಿದೆ.

ಬಂಗರ ಆಡಳಿತಕ್ಕೆ ನಾಂದಿ[ಬದಲಾಯಿಸಿ]

ನಂದರಸರನ್ನು ನಿರ್ನಾಮ ಮಾಡಿ ನಂದಾವರದಲ್ಲಿ ಕ್ರಿ.ಶ. 1417ರಲ್ಲಿ ಆಡಳಿತಕ್ಕೆ ಬಂದ ಬಂಗ ಅರಸನು ಮೊದಲು ಮಾಡಿದ ಕೆಲಸವೆಂದರೆ ತನ್ನ ಅರಮನೆಯ ಸುತ್ತ ದೊಡ್ಡದಾದ ಮಣ್ಣಿನ ಕೋಟೆಯನ್ನು ಕಟ್ಟಿದ್ದು ಮಾತ್ರವಲ್ಲ ಅದರೊಳಗೊಂದು ವೀರಭದ್ರನ ಗುಡಿಯನ್ನೂ ನಿರ್ಮಿಸಿದ. ಸುತ್ತಲೂ ಕೋಟೆ ಇರುವ ಪಟ್ಟಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಂದಾವರವು ಒಂದೇ ಆಗಿದೆ. ದುರದೃಷ್ಟವೆನ್ನುವಂತೆ ಬಂಗ ಅರಸನಿಗಾಗಲಿ ಆತನ ನಂತರ ಬಂದ ಆತನ ಉತ್ತರಾಧಿಕಾರಿಗಳಿಗಾಗಲಿ ಸುಸೂತ್ರವಾಗಿ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ, ಒಂದು ಕಡೆಯಿಂದ ಸನಿಹದ ಚೌಟರಿಗೂ ವಿಟ್ಲದ ಡೊಂಬರಸರಿಗೂ ಆಗಾಗ ಕಲಹ ಹತ್ತಿಕೊಳ್ಳುತ್ತಿತ್ತು. ಇನ್ನೊಂದು ಕಡೆಯಿಂದ ವೀದೇಶೀಯರಿಂದಲೂ ನಂದಾವರದಲ್ಲಿ ಕೊಲೆ ಸುಲಿಗೆ ದರೋಡೆಗಳು ನಡೆದು ಅಶಾಂತಿ ಹಾಗೂ ಅರಾಜಕತೆ ನೆಲೆಗೊಳ್ಳತೊಡಗಿತು. 1763ರಲ್ಲಿ ಹೈದರಾಲಿಯು ಬಿದನೂರನ್ನು ವಶಪಡಿಸಿಕೊಂಡು ನಂದಾವರಕ್ಕೆ ಕಣ್ಣು ಹಾಕಿದ್ದಿದೆ; ಆದರೆ, ಆಗ ನಂದಾವರದಲ್ಲಿ ಆಡಳಿತೆ ನಡೆಸುತ್ತಿದ್ದ ನಾಲ್ಕನೇ ಲಕ್ಷ್ಮಪ್ಪರಸ ಉಪಾಯದಿಂದ ಆತನನ್ನು ಬರಮಾಡಿಕೊಂಡು ಕಪ್ಪವನ್ನು ಸಲ್ಲಿಸಿ ಆತನ ಆಕ್ರಮಣದಿಂದ ನಂದಾವರವನ್ನು ತಪ್ಪಿಸಿದ; ಆದರೂ ಕಾಲಕ್ರಮೇಣ, ಹೈದರಾಲಿಯ ಅಧಿಕಾರಿಯಾಗಿದ್ದ ಶೇಖಾಲಿಯ ಸುಲಿಗೆಗೆ ಒಳಗಾಗಿ ನಂದಾವರ ಬಹಳಷ್ಟು ದುಃಸ್ಥಿತಿಗೆ ಈಡಾಯಿತು. ಇದೇ ವ್ಯಸನದಿಂದ 1767ರಲ್ಲಿ ಬಂಗರಸ ತೀರಿಕೊಂಡ. ಒಬ್ಬ ರಾಜನಿಗೆ ತನ್ನ ರಾಜ್ಯದ ಕುರಿತಾಗಿ ಎಷ್ಟರ ಮಟ್ಟಿನ ಭಾವನಾತ್ಮಕ ಸಂಬಂಧವಿರುತ್ತಿತ್ತು ಅನ್ನುವುದಕ್ಕೆ ಇದೊಂದು ಜೀವಂತ ಉದಾಹರಣೆ! 1799ರಲ್ಲಿ ಕೊಡಗಿನ ಅರಸನ ಕಡೆಯವನಾದ ಗೋಪ ಗೌಡ ನಂದಾವರದ ಮೇಲೆ ಆಕ್ರಮಣ ಮಾಡಿ ನಾಲ್ಕನೇ ಕಾಮಪ್ಪರಸನನ್ನು ಬಂಧಿಸಿ ನಂದಾವರನ್ನು ಸಂಪೂರ್ಣವಾಗಿ ದೋಚಿದ್ದಲ್ಲದೆ ಅರಮನೆಗೂ ಬೆಂಕಿಯಿಟ್ಟು ಅರಸನ ಸಮೇತ ಸುಟ್ಟು ಬೂದಿ ಮಾಡಿದನು.

ಅದು 1837ರ ಎಪ್ರಿಲ್ ತಿಂಗಳ ಅವಧಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸ್ವಾತಂತ್ರ್ಯದ ಕಿಚ್ಚು ಪ್ರಜ್ವಲಿಸುತ್ತಿದ್ದ ಸಂದರ್ಭ. ಇದೇ ಸಮಯದಲ್ಲಿ ಕೊಡಗು ದೇಶದ ಕಲ್ಯಾಣಪ್ಪನೆಂಬವನು ಕಾಟುಕಾಯಿ ಹೆಸರಿನ ದಂಗೆಯೆದ್ದು ಸುಳ್ಯ, ಪುತ್ತೂರನ್ನು ದಾಟಿ ನಂದಾವರವನ್ನು ಪ್ರವೇಶಿಸಲು, ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ಆತನನ್ನು ಆದರ ಪೂರ್ವಕ ಬರಮಾಡಿಕೊಂಡರು. ಆಗ ನಂದಾವರವನ್ನು ಆಳುತ್ತಿದ್ದ ಲಕ್ಷ್ಮಪ್ಪ ಅರಸನನ್ನು ಎರಡೂ ಕಡೆಯವರು, ಕೋಟೆ ವೀರಮಾರುತಿ ದೇವಾಲಯದ ವಠಾರದಲ್ಲಿ ಭೇಟಿ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಪೂರ್ಣ ಪ್ರಮಾಣದ ನೆರವನ್ನು ನೀಡಿ ಆರ್ಥಿಕ ಸಹಾಯವನ್ನೂ ನೀಡುವಂತೆ ಕೇಳಿಕೊಂಡರು. ಮರುದಿವಸ ನಂದಾವರದ ರಾಜಾಂಗಣದಲ್ಲಿ ಸಾರ್ವಜನಿಕ ಭೊಜನ ಕೂಟವನ್ನು ಏರ್ಪಡಿಸಿ, ಮುಂದಕ್ಕೆ ಬಂಟವಾಳ ಹಾಗೂ ಮಂಗಳೂರಿನ ಬ್ರಿಟಿಷ್ ಖಜಾನೆಗಳಿಗೆ ದಾಳಿಯಿಟ್ಟು ಅದನ್ನೆಲ್ಲಾ ದೋಚುವುದಾಗಿ ನಿರ್ಣಯ ಕೈಗೊಳ್ಳಲಾಗಿತ್ತು.

ಈ ಕುರಿತಾಗಿ ಅಂದಿನ ಕಾಲದ ಸ್ಥಳೀಯ ಕವಿಯೊಬ್ಬ ಹಾಡಿರುವಂತೆ, ಸ್ವಾತಂತ್ರ್ಯಾವೇಶದಿಂದ ರೊಚ್ಚಿಗೆದ್ದ ಇಲ್ಲಿನ ಜನ ತೆಂಗಿನ ಮರದ ಗರಿಯ ಕೊನೆಯ ಭಾಗ (ಕೊತ್ತಳಿಂಗೆ) ವನ್ನು ಕೈಯಲ್ಲಿ ಹಿಡಿದು, ಕಲ್ಲು ಗುಂಡುಗಳೊಂದಿಗೆ ಬಂಟ್ವಾಳಕ್ಕೆ ಹೋಗಿ, ಅಲ್ಲಿನ ಬ್ರಿಟಿಷ್ ಸುಬೇದಾರನನ್ನು ಕೊಂದು ಖಜಾನೆಯನ್ನು ದೋಚಿ, ಅಲ್ಲಿಂದ ಮಂಗಳೂರಿಗೆ ಹೋಗಿ, ಅಲ್ಲಿನ ಖಜಾನೆಯನ್ನೂ ಕೊಳ್ಳೆಹೊಡೆದದ್ದಲ್ಲದೆ ಬ್ರಿಟಿಷ್ ಅಧಿಕಾರಿಗಳ ಮನೆಗಳಿಗೆ ಕೊಳ್ಳಿಯಿಟ್ಟು ನಾಶ ಗೈದರು. ಈ ಎಲ್ಲಾ ಅನಾಹುತಗಳಿಗೆ ನಂದಾವರದ ಲಕ್ಷ್ಮಪ್ಪರಸ ಬಂಗ ಹಾಗೂ ಗೋಪ ಗೌಡರೇ ಕಾರಣರೆಂದು ತೀರ್ಮಾನಿಸಿದ ಬ್ರಿಟಿಷರು, ಅವರ ಮೇಲೆ ದೇಶದ್ರೋಹದ ಪ್ರಕರಣವನ್ನು ಹೇರಿ, 1837 ಮೇ ತಿಂಗಳಲ್ಲಿ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಈರ್ವರನ್ನೂ ಗಲ್ಲಿಗೇರಿಸಿ ತಮ್ಮ ಸೇಡು ತೀರಿಸಿಕೊಂಡರು. ಒಟ್ಟಿನಲ್ಲಿ ನಂದಾವರದ ಆನಂದ ಅನ್ನುವುದು ನಂದಿಹೋಗಿ ಅಶಾಂತಿಗೆ ನೆಲೆಯಾಯಿತು. [೨]

ಎಲ್ಲವನ್ನೂ ಎಲ್ಲರನ್ನೂ ಕಳಕೊಂಡ ನಂದಾವರದ ಅಂದಿನ ಆ ವಿಷಮ ಸ್ಥಿತಿಯಲ್ಲಿ ಇದೇ ವಂಶದ ಐದನೇ ಕಾಮರಾಯ ಹಾಗೂ ಲಕ್ಷ್ಮಪ್ಪರಸ ಬಂಗರಾಜ ಅನ್ನುವವರು ಆಡಳಿತವನ್ನು ಕೈಗೆತ್ತಿಕೊಂಡರೂ ದುರ್ಬಲ ಅರಸರಾಗಿದ್ದದ್ದರಿಂದಲೋ ಏನೊ 1893ರಿಂದ ಇವರೀರ್ವರನ್ನೂ ನಂದಾವರದಿಂದ ಹೊರ ದಬ್ಬುವ ಪ್ರಯತ್ನಗಳು ನಡೆಯುತ್ತಿದ್ದವು. ಬಂಗರಸರಲ್ಲಿ ಕೊನೆಯವನಾದ ಲಕ್ಷ್ಮಪ್ಪರಸ ಪದ್ಮರಾಜ ಬಂಗನು 1898ರಲ್ಲಿ ನಂದಾವರವನ್ನು ಬಿಟ್ಟು ತನ್ನ ಪೂರ್ವಜರ ರಾಜಧಾನಿಯಾಗಿದ್ದ ಬಂಗಾಡಿಗೆ ಹೋಗಿ ಅಲ್ಲಿ ನೆಲೆಯಾದನು. ಇತ್ತ ರಾಜನಿಲ್ಲದೆ ಬಿಕೊ ಅನ್ನುತ್ತಿದ್ದ ನಂದಾವರ ಯಾರ್ಯಾರದೋ ಹೆಸರಿಗೆ ಹರಾಜಾಗಿ ನುಚ್ಚು ನೂರಾಯಿತು. ಹೇಳುವವರು ಕೇಳುವವರಿಲ್ಲದ ಅರಮನೆಯಂತೂ ನೆಲಸಮವಾಗಿ ಹೋಯಿತು. ರಾಜಾಂಗಣ ಅನ್ನುವುದು ನಿರ್ಜನಾಂಗಣವಾಗಿ ಪ್ರಕೃತ ಭತ್ತ ಬೆಳೆಯುವ ಗದ್ದೆ ತೋಟಗಳಾಗಿ ಮಾರ್ಪಾಟಾಯಿತು; ಶಾಂತಿನಾಥ, ವೃಷಭನಾಥ, ಪದ್ಮಾವತಿ ಬಸದಿಗಳು ಭೂಗರ್ಭವನ್ನು ಸೇರಿದವು. ಕಟ್ಟಿದ ಕೋಟೆಗಳು ಜರಿದುಬಿದ್ದು ಮನುಷ್ಯ ಯೋಗ್ಯವಾಗದೆ ಆಡು, ಹಸುಗಳು ಮೇಯುವ ತಾಣವಾದವು. ವೀರಭದ್ರನಂತೂ ಗುಡಿಯನ್ನು ಬಿಟ್ಟು ಸ್ಥಳೀಯ ಶ್ರೀ ವೆಂಕಟರಮಣ ಸ್ವಾಮೀ ಮಹಾವಿದ್ಯಾಲಯವನ್ನು ಸೇರಿ, ಅಲ್ಲಿಂದ ಮುಂದಕ್ಕೆ ಮಂಗಳೂರಿನ ಬಿಜೈಯಲ್ಲಿರುವ ಸರಕಾರಿ ಪ್ರಾಚ್ಯ ವಸ್ತು ಸಂಗ್ರಹಾಲಯದ ಸುಪರ್ದಿಗೆ ಸೇರಬೇಕಾದಂತಹ ಸ್ಥಿತಿ ಒದಗಿತು. ಒಂದು ಸಂದರ್ಭದಲ್ಲಿ ಚಿನ್ನದ ನಾಣ್ಯದ ಚಲಾವಣೆಯಿದ್ದ ನಂದಾವರದ ಆ ಶ್ರೀಮಂತಿಕೆಯೆಲ್ಲ ನಂದಿಹೋಗಿ ನಿರ್ಜೀವವಾಯಿತು; ಎಷ್ಟೋ ಜನ ಆಳರಸರು, ರಾಜರುಗಳು ವೈವಿಧ್ಯಮಯವಾಗಿ ಆಳಿಹೋದ ನಂದಾವರದ ವೈಭವ ಕನಸಾಗಿಯಷ್ಟೇ ಕಾಡುವ ಸ್ಥಿಗೆ ಬಂತು. ರಾಜಕೀಯ ಮೇಲಾಟಗಳಿಂದಾಗಿ ಕಣ್ಣುಮುಚ್ಚಾಲೆಯಾಟ ಯಾವಕಾಲಕ್ಕೂ ಇದ್ದದ್ದೇ ಅನ್ನುವಂತೆ ನಂದಾವರವೂ ಆ ಅಪವಾದದಿಂದ ಮುಕ್ತವಾಗಲಿಲ್ಲ. 1894ರಲ್ಲಿ ಬಂಗ ಅರಸರ ಆಸ್ತಿ ಕೋರ್ಟ್ ಮೂಲಕ ಹರಾಜಿಗೆ ಬಂದಾಗ, ನರಿಕೊಂಬು ನರಸಪ್ಪಯ್ಯನವರು ಅದನ್ನು ಪಡೆದುಕೊಂಡರು. ಮುಂದಕ್ಕೆ ನರಸಪ್ಪಯ್ಯನವರಿಂದ ಮೂಲ ಗೇಣಿ ಆಧಾರದಲ್ಲಿ ಪೆರ್ಮಂಕಿ ಶಿವಯ್ಯನವರು ನಂದಾವರದ ಭೂಮಿಯನ್ನು ಪಡೆದು ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿದ್ದರು. ಶಿವಯ್ಯ ಅವರ ಮೊಮ್ಮಗ ನೂಯಿ ವೆಂಕಟ್ರಾಂiÀi ಅವರು 1923ರಲ್ಲಿ ಆಡಳಿತ ವಹಿಸಿಕೊಂಡು 1980ರವರೆಗೆ ದೇವಾಲಯದ ಅಭಿವೃದ್ಧಿಗೆ ಗಣನೀಯವಾದ ಕೊಡುಗೆ ನೀಡಿ, ‘ಆಧುನಿಕ ನಂದಾವರದ ಶಿಲ್ಪಿ’ ಎನಿಸಿದರು. ಆದರೆ, ಕಾಲ ಬದಲಾಗುತ್ತಾ ಬಂದಹಾಗೆ ಸಾಮಾಜಿಕ ಸ್ಥಿತಿಗತಿಯೂ ಬದಲಾಗುತ್ತಾ ಹೋಗುವುದು ಸ್ವಾಭಾವಿಕ ತಾನೆ, ಅಂತೆಯೇ ಇಂದಿನ ಆಧುನಿಕ ಕಾಲಕ್ಕೆ ಸರಿ ಹೊಂದುವಂತೆ ತನ್ನನ್ನು ತಾನು ಸರಿದೂಗಿಸಿಕೊಳ್ಳುವುದಕ್ಕಾಗಿಯೋ ಏನೊ, ವೆಂಕಟ್ರಾಯರು 1980ರಲ್ಲಿ ತನ್ನ 82ರ ಇಳಿ ವಯಸ್ಸಿನಲ್ಲಿ ನಂದಾವರದ ಆಡಳಿತ ವ್ಯವಸ್ಥೆಯನ್ನು ಎಂಡೊಮೆಂಟ್ ಆಡಳಿತ ವ್ಯವಸ್ಥೆಗೆ ಒಪ್ಪಿಸಿದರು. ಪ್ರಕೃತ, ಇಂದಿನ ಕಾಲದ ಅವಶ್ಯಕತೆಗಳಿಗೆ ಅನುಗುಣವಾಗಿ ನಂದಾವರ ಸ್ಪಂದಿಸುತ್ತಾ ಬದಲಾಗುತ್ತಾ ಬರುತ್ತಿದೆ.

ನಂದಾವರದ ನಂಟಸ್ತಿಕೆಯನ್ನು ಇಂದಿಗೂ ಗಟ್ಟಿಗೊಳಿಸುತ್ತಿರುವ ಶಕ್ತಿಚತುಷ್ಟಯರು[ಬದಲಾಯಿಸಿ]

ಅಂದಿನಿಂದ ಇಂದಿನವರೆಗೆ ನಂದಾವರದ ನೆಂಟಸ್ತಿಕೆಯನ್ನು ಉಳಿಸಿಕೊಂಡು ಬಂದ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಇಲ್ಲಿನ ಭಕುತರ ಹೃದಯದಲ್ಲಿ ಸದಾ ಹಸಿರು; ಅದರಲ್ಲೂ ವಿನಾಯಕನೆಂದರೆ ಹೆಚ್ಚು ಸಲುಗೆಯ ಹಾಗೂ ಕೊಂಡಾಟದ ದೇವರು. ಈ ಕ್ಷೇತ್ರವು ಪರಂಪರೆಯಿಂದಲೇ ಒಂದು ಸಾಂಸ್ಕೃತಿಕ ಕೇಂದ್ರವಾಗಿದ್ದಿರಬೇಕು. ಒಂದು ಕಾಲದಲ್ಲಿ ನಮ್ಮ ಜಿಲ್ಲೆಯ ಮುಖ್ಯ ಪಟ್ಟಣವಾಗಿದ್ದು ವ್ಯಾಪಾರ ಕೇಂದ್ರವಾಗಿದ್ದು ಪಾಣೆಮಂಗಳೂರಿನ ಒತ್ತಿನಲ್ಲಿರುವ ಈ ಕ್ಷೇತ್ರಕ್ಕೆ ತುಂಬಾ ಮಹತ್ವವಿತ್ತು. ಇಲ್ಲಿನ ವಿನಾಯಕ, ಶಂಕರ-ನಾರಾಯಣ, ದುರ್ಗೆ ಶಕ್ತಿ ಚತುಷ್ಟಯರಿಂದಾಗಿ ಗಾಣಪತ್ಯ, ಶೈವ, ವೈಷ್ಣವ ಹಾಗೂ ಶಾಕ್ತ ಪಂಥದ ಸಮ್ಮಿಲನವಾಗಿದೆ ಎನ್ನಬೇಕು ಮಾತ್ರವಲ್ಲ ಜೈನ ಧರ್ಮದ ಸುಳುಹೂ ದೊರೆಯುತ್ತದೆ; ಈ ನೆಲೆಯಿಂದ ಯೋಚಿಸಿದಾಗ ಈ ದೇವಸ್ಥಾನದಲ್ಲಿ ಎಲ್ಲಾ ಪಂಥದವರಿಗೂ ಮುಕ್ತದ್ವಾರವಿದ್ದಿರಬೇಕು ಅನ್ನುವುದು ಮನವರಿಕೆಯಾಗುತ್ತದೆ. ಹೆಚ್ಚಿನಂಶ ಇದರಿಂದಾಗಿಯೇ ಈ ದೇವಾಲಯ ಸಮಾಜದ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿ ಕಂಡಿರಬೇಕು. ಇಲ್ಲಿನ ವಿನಾಯಕ-ಶಂಕರನಾರಾಯಣ-ದುರ್ಗಾಂಬ ದೇವಾಲಯಗಳು ಒಂದೇ ಆವರಣದಲ್ಲಿದ್ದು ಅವುಗಳ ನಿರ್ಮಾಣ ಕಾರ್ಯ ಬೇರೆ ಬೇರೆ ಕಾಲಘಟ್ಟಗಳಲ್ಲಾಗಿದೆ.

ಶ್ರೀ ಸಿದ್ಧಿವಿನಾಯಕ ಸನ್ನಿಧಿ[ಬದಲಾಯಿಸಿ]

ಪುರಾಣದ ನಂಬಿಕೆಯಂತೆ ಶೃಂಗ ಮುನಿಗಳಿಂದ ಸ್ಥಾಪಿಸಲ್ಪಟ್ಟ, ವಿಘ್ನ ನಿವಾರಕನೆಂದೇ ಪ್ರಸಿದ್ಧನಾದ ಇಲ್ಲಿನ ಬಲಮುರಿ ವಿನಾಯಕನು ಭಕ್ತಾಭಿಮಾನಿಗಳ ನಂಬುಗೆಯ ನಂಟ. ಯಾವುದೇ ಸಮಸ್ಯೆಗಳು ಎದುರಾಗಲಿ ನಂದಾವರ ಗಣಪತಿಯನ್ನು ಶರಣು ಹೊಕ್ಕರೆ ಕಷ್ಟ ಪರಂಪರೆಗಳೆಲ್ಲಾ ನಿವಾರಣೆ ಎಂದೇ ಅರ್ಥ. ಕರೆದಾಗಲೆಲ್ಲಾ ಭಕ್ತರ ಮೊರೆಗೆ ಓಗೊಡುವ ದೇವರೆಂದೇ ಈತನ ಖ್ಯಾತಿ. ಆತನಿಗೊಂದು ಅಪ್ಪದ ಸೇವೆ ಕೊಟ್ಟರೆ ನಾವು ನಿರಾಳವಾಗಿರಬಹುದು ಎನ್ನುವಷ್ಟರ ಮಟ್ಟಿಗೆ ಭಕ್ತರ ಸಲುಗೆಯ ದೇವರು. ನಿಷ್ಕಲ್ಮಶ ಮನಸ್ಸಿನಿಂದ ಪ್ರಾರ್ಥಿಸಿದವರಿಗೆ ಕ್ಷಿಪ್ರ ಪ್ರಸಾದವನ್ನು ನೀಡುವ ಈ ವಿನಾಯಕನಿಗೆ ಅಪ್ಪ ಭಕ್ಷ್ಯವೆಂದರೆ ಎಲ್ಲಿಲ್ಲದ ಪ್ರೀತಿ, ಇದರಿಂದಲೇ ಆತನಿಗೆ ಸಂತೃಪ್ತಿ. ಪ್ರತಿದಿನವೂ ಆತನಿಗೆ ಅರ್ಪಿತವಾಗುವ ಅಪ್ಪಕ್ಕೆ ಲೆಕ್ಕವೇ ಇಲ್ಲ. ನಂದಾವರವೆಂದರೆ ಗಣಪತಿ, ಗಣಪತಿಯೆಂದರೆ ಅಪ್ಪದ ಪೂಜೆ. ಹಾಗಾಗಿ ನಂದಾವರ-ಗಣಪತಿ-ಅಪ್ಪ ಎಲ್ಲರ ಮನೆ ಮಾತಾಗಿ ಎಲ್ಲರ ಮನದೊಳಗೆ ಎಲ್ಲಾ ಶುಭ ಸಮಾರಂಭಕ್ಕೆ ಬೇಕೇ ಬೇಕೆಂಬಷ್ಟು ಪ್ರಖ್ಯಾತಿ. ಹಿಂದಿನ ಕಾಲದಲ್ಲೊಮ್ಮೆ ಸುಂದರ ಶಿಲ್ಪ ಕಲಾಕೃತಿಗಳನ್ನೂ ಕೆತ್ತನೆಯನ್ನೂ ಹೊಂದಿದ್ದ ಈ ದೇವಾಲಯದ ಛಾವಣಿಯ ಮುಂಭಾಗವು ಈ ದೇವಾಲಯದ ಪ್ರಾಚೀನತೆಗೆ ಪ್ರಮುಖ ಸಾಕ್ಷಿ ನುಡಿಯುತ್ತಿತ್ತು. ಸುಮಾರು 8-9ನೇ ಶತಮಾನಗಳಷ್ಟು ಹಿಂದಿನ ಹಳಮೆಯನ್ನು ಈ ದೇವಾಲಯಕ್ಕೆ ಹೇಳಬಹುದೆನ್ನುವುದು ವಿಮರ್ಶಕರ ಅಭಿಮತ. ಇಲ್ಲಿನ ಗಣೇಶನ ಬಳಿಯಲ್ಲಿ ಇಲಿಯು ಕಂಡುಬರುವುದಿಲ್ಲ. ಕರ್ನಾಟಕದಲ್ಲಿ ಗಣೇಶ ಬಿಂಬಗಳೊಡನೆ ಇಲಿಯನ್ನು ಜೋಡಿಸುವ ಪದ್ಧತಿಯು ಹೊಯ್ಸಳರ ಆಳ್ವಿಕೆಗಿಂತ ಮೊದಲು ರೂಢಿಯಲ್ಲಿ ಇಲ್ಲದ್ದರಿಂದ ಈ ಗಣೇಶ ಬಿಂಬ ಹಾಗೂ ಈ ದೇವಾಲಯ ಕ್ರಿ.ಶ. 10ನೇ ಶತಮಾನಕ್ಕಿಂತ ಮೊದಲು ನಿರ್ಮಾಣಗೊಂಡಿತು ಎನ್ನಬೇಕಾಗುತ್ತದೆ. ಆನಂದಗಿರಿ ವಿರಚಿತ ಶಂಕರ ವಿಜಯದಲ್ಲಿ ಶ್ರೀ ಶಂಕರಾಚಾರ್ಯರು ಈ ಪ್ರದೇಶದಲ್ಲಿ ಗಣೇಶ ದೇವಾಲಯಗಳನ್ನು ಕಂಡಂತೆಯೂ ಗಾಣಪತ್ಯರನ್ನು ವಾದದಲ್ಲಿ ಸೋಲಿಸಿದಂತೆಯೂ ಹೇಳಿರುವುದರಿಂದ ಶ್ರೀ ಶಂಕರಾಚಾರ್ಯರ ಕಾಲ (ಕ್ರಿ.ಶ.8-9ನೇ ಶತಮಾನ) ದಲ್ಲೇ ಈ ದೇವಾಲಯ ಇದ್ದಿರಬೇಕೆಂದು ಅಭಿಪ್ರಾಯಿಸಲಾಗಿದೆ. ಈ ದೇವಾಲಯದ ಮುಂಭಾಗದ ಮೇಲಿರುವ ಕೀರ್ತಿ ಮುಖ (ಸಿಂಹ ಲಲಾಟ)ವು ಪ್ರಾಚೀನ ಹಾಗೂ ಆಕರ್ಷಣೀಯವಾಗಿದೆ. ನವರಂಗ ಮತ್ತು ಗರ್ಭಗೃಹ ಇದರ ಮುಖ್ಯ ಅಂಗಗಳು. ಈ ಬಲಮುರಿ ಗಣೇಶನ ವಿಗ್ರಹಕ್ಕೆ ಕರಂಡಕ ಮಾದರಿಯ ಕಿರೀಟವಿದೆ. ಉತ್ಕಟಾಸನದಲ್ಲಿ ಕುಳಿತಿರುವ ಭಂಗಿಯಲ್ಲಿರುವ ಈ ಪ್ರಸನ್ನರೂಪಿ ವಿಗ್ರಹವು ಚತುರ್ಬಾಹುಯುಕ್ತವಾಗಿದ್ದು ಎಡ ಬಲ ಹಸ್ತಗಳಲ್ಲಿ ಕ್ರಮವಾಗಿ ದಂತ ಮತ್ತು ಅಂಕುಶಗಳಿವೆ. ನವರಂಗದ ಭುವನೇಶ್ವರಿಯಲ್ಲಿ ಅಷ್ಟ ದಿಕ್ಪಾಲಕರ ಸುಂದರ ವಿಗ್ರಹಗಳ ಕೆತ್ತನೆ ಇದೆ, ಆದರೆ, ಇದು ಯಾರ ದರ್ಶನಕ್ಕೂ ನಿಲುಕದಂತಿದೆ. ಈ ಗುಡಿ ಇತ್ತೀಚೆಗೆ ನವೀಕರಣಗೊಂಡ ಮೇಲೂ ಕೂಡ ಗಣಪತಿಯ ವಿಗ್ರಹವನ್ನು ಬದಲಿಸದೇ ಮೂಲ ವಿಗ್ರಹವನ್ನೇ ಪೂಜಿಸಲಾಗುತ್ತಿದೆ. ಇದೇ ಮೂರ್ತಿಯ ಕೆಳಗಿನ ಬಲಗೈ ಬಲ ಮಂಡಿಗಿಂತ ಸ್ವಲ್ಪ ಕೆಳಕ್ಕೆ ಇದ್ದು ತೊಡೆಯ ಆಧಾರ ಪಡೆದಿದ್ದರೆ ಎಡಗೈ ಎಡ ತೊಡೆಯ ಮೇಲೆ ಭದ್ರವಾಗಿದೆ. ಎರಡೂ ಹಸ್ತಗಳಲ್ಲಿ ಮೋದಕದ ನಿರ್ದೇಶನವಿದೆ. ಈ ವಿಗ್ರಹದಲ್ಲಿ ಉತ್ತರೀಯವು ಎಡ ಭುಜದ ಮೇಲಿಂದ ಹಿಂದಕ್ಕೆ ಇಳಿದು ಬಲಗೈಯ ಮೇಲೆ ಹಾದು ಹೋದಂತಿದೆ. ಎದುರುಗಡೆ ತೀರ್ಥ ಮಂಟಪವಿದ್ದು, ಹಿಂದಿನ ದಿನಗಳಲ್ಲಿ ಮುರಕಲ್ಲಿನಿಂದ ಆವೃತವಾಗಿದ್ದ ಈ ಗುಡಿಯ ಗೋಡೆ ಪ್ರಕೃತ ಶಿಲಾಮಯವಾಗಿದೆ.

ಶ್ರೀ ಶಂಕರನಾರಾಯಣ ಸನ್ನಿಧಿ[ಬದಲಾಯಿಸಿ]

ದೇವಸ್ಥಾನದ ಮಹಾದ್ವಾರಕ್ಕೆ ಎದುರಾಗಿ, ನಂದಾವರದಲ್ಲಿ ಮೂಲ ದೇವರೆಂದು ಪೂಜಿಸಲಾಗುತ್ತಿರುವ ಮತ್ತು ಭಾವುಕ ಜನರಿಂದ ಉದ್ಭವ ಲಿಂಗವೆಂದೇ ನಂಬಲಾಗಿರುವ ಶ್ರೀ ಶಂಕರನಾರಾಯಣ ದೇವರ ಸಾನಿಧ್ಯವಿದೆ. ಲಿಂಗದ ಮಧ್ಯ ಭಾಗದಲ್ಲಿ ವಿಭಾಜಕ ರೇಖೆಯಿದ್ದು ಲಿಂಗದ ಬಲಭಾಗವನ್ನು ಶಂಕರನೆಂದೂ ಎಡ ಭಾಗವನ್ನು ನಾರಾಯಣನೆಂದೂ ಗುರುತಿಸಿಕೊಳ್ಳಲಾಗಿದೆ. ಹರಿಹರರಲ್ಲಿ ಭೇದವಿಲ್ಲ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. 10ನೆಯ ಶತಮಾನದಲ್ಲಿ ‘ಶಂಕರನಾರಾಯಣ’ ಕಲ್ಪನೆ ಮತ್ತು ಪೂಜೆ ಸಾಮಾನ್ಯವಾಗಿ ಆರಂಭವಾದ ಕಾಲ. ಹೆಚ್ಚಿನಂಶ ಇಲ್ಲಿನ ಮೂಲನಿವಾಸಿಗಳೆಂದು ಪರಿಗಣಿತರಾದ ನಂದರಿಂದಲೇ ಈ ದೇವರ ಆರಾಧನೆ ಪ್ರಾರಂಭವಾಗಿರಬೇಕು. ಬಂಗರಸ ರಾಮರಾಯನ ತರುವಾಯ ಅವನ ತಮ್ಮ 3ನೇ ಹಾವಳಿ ಬಂಗರಾಜ (ಕ್ರಿ.ಶ.1533-1545) ಒಡೆಯನಿಗೆ ಶಾ.ಶ 1455ನೇ ವಿಜಯ ಸಂ|ರದ ಕಾರ್ತಿಕ ಬ.10ರಲ್ಲು ನಂದಾವರದಲ್ಲಿ ಪಟ್ಟವಾಯಿತು. ಇದೇ ಅರಸನು ಶಂಕರನಾರಾಯಣ ದೇವಸ್ಥಾನವನ್ನು ಕಟ್ಟಿಸಿ ಪ್ರತಿಷ್ಠೆ ಮಾಡಿಸಿದನು. ಈ ದೇವಾಲಯದ ಮುಂಭಾಗದಲ್ಲಿ ಎಲ್ಲಾ ಶಿವಾಲಯಗಳಲ್ಲಿರುವಂತೆ ನಂದಿ ಮಂಟಪದಲ್ಲಿ ನಂದಿಯಾಗಲಿ ಗರುಡನ ವಿಗ್ರಹವಾಗಲಿ ಇಲ್ಲ. ಈ ದೇವಾಲಯದ ಗೋಪುರವನ್ನು ‘ಸೋಮನಾಥ ಚಾವಡಿ’ ಎಂದು ಕರೆಯುತ್ತಾರೆ. ಈ ಗೋಪುರದ ಕಂಭಗಳು ಅರಮನೆಯ ಕಂಭಗಳಂತೆ ಬಲಿಷ್ಠವಾಗಿದ್ದು ಕೆತ್ತನೆಗಳನೊಳಗೊಂಡಿದೆ. ಸರ್ವ ಧರ್ಮ ಸಮನ್ವಯದ ಸಂಕೇತವಾಗಿ ಈ ದೇವಾಲಯದ ಪ್ರವೇಶ ದ್ವಾರದ ಮೇಲ್ಗಡೆ ದ್ವಾರ ಬಂಧದಲ್ಲಿ ಪರ್ಯಂಕಾಸನದಲ್ಲಿ ಕುಳಿತಿರುವ ಜೈನ ತೀರ್ಥಂಕರನ ಬಿಂಬವೊಂದು ಶೋಭಿಸುತ್ತಿದೆ. ಈ ದೇವಾಲಯದ ಗರ್ಭಗುಡಿಯು ಪುಟ್ಟ ನವರಂಗ ಮತ್ತು ಕಿರಿದಾದ ಒಳ ಪ್ರದಕ್ಷಿಣಾ ಪಥಗಳನ್ನು ಹೊಂದಿದೆ.

ಶ್ರೀ ದುರ್ಗಾಂಬಾ ಸನ್ನಿಧಿ[ಬದಲಾಯಿಸಿ]

ಶ್ರೀ ವಿನಾಯಕ ಹಾಗೂ ಶಂಕರನಾರಾಯಣ ದೇವಾಲಯದ ಎಡಭಾಗದಲ್ಲಿ ಶ್ರೀ ದುರ್ಗಾಂಬೆಯ ಗುಡಿಯಿದೆ. ಈ ಗುಡಿಯೂ ಕೂಡ ಮೂಲ ದೇವಾಲಯದ ಕಾಲಕ್ಕೇ ಸೇರುವಂತಹದ್ದೆಂದು ಅಭಿಪ್ರಾಯಪಡಲಾಗಿದೆ. ಮೂರ್ತಿಯ ಹಿನ್ನೆಲೆಯಲ್ಲಿ ಚಕ್ರಾಕಾರದ ಆಕರ್ಷಕ ಮಕರ ತೋರಣವಿದ್ದು, ಮೂರ್ತಿಯ ಕೈಯಲ್ಲಿ ಆಯುಧವಿದ್ದು ಪ್ರಸನ್ನರೂಪಿಯಾಗಿ ಚಿತ್ತಾಕರ್ಷಕವಾಗಿದೆ. ಮೂಲ ಶಂಕರನಾರಾಯಣ ಗುಡಿಯಂತೆ ಇದು ಸಹ ಮುರಕಲ್ಲಿನ ರಚನೆಯಾಗಿದ್ದಿದ್ದರೂ ಈಗ ಇವೆರಡೂ ಶಿಲಾಮಯವಾಗಿವೆ. ಈ ಮೂರೂ ದೇವಾಲಯಗಳನ್ನು ಒಳಗೊಂಡಂತೆ ಒಂದು ಬೃಹತ್ತಾದ ಹೊರಪ್ರಾಕಾರವಿದೆ. ಪ್ರಸ್ತುತ ಒಳ ಪ್ರಾಕಾರದ ದ್ವಾರವೇ ದೇವಾಲಯದ ಮಹಾದ್ವಾರವಾಗಿದೆ. ಇದರ ಎದುರು ಹೊರ ಭಾಗದಲ್ಲಿ ಪ್ರಧಾನ ಬಲಿ ಪೀಠ ಮತ್ತು ಧ್ವಜ ಸ್ತಂಭದ ಕಟ್ಟೆಯಿದೆ. ಇಲ್ಲಿ ರಥೋತ್ಸವದ ಸಂದರ್ಭದಲ್ಲಿ ಮಾತ್ರ ಸ್ತಂಭ ನಿಲ್ಲಿಸಿ ಧ್ವಜ ಏರಿಸುವ ಕ್ರಮವಿದೆ. ಪ್ರಾಕಾರದ ಒಳಗೆ ಅಂಗಣ ಬಹಳ ವಿಶಾಲವೂ ಭವ್ಯವೂ ಆಗಿದೆ. ಈ ಹಿಂದೆ ಮರೆಯಲ್ಲಿದ್ದ ನಾಗ ಸಾನ್ನಿಧ್ಯವನ್ನು 2017ರಲ್ಲಿ, ದೇವಾಲಯದ ಪ್ರಧಾನ ಪ್ರವೇಶ ದ್ವಾರದ ಎಡ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ.

ನಂದಾವರದ ಅಪ್ಪ[ಬದಲಾಯಿಸಿ]

ಶಂಕರನಾರಾಯಣನೇ ಇಲ್ಲಿನ ಪ್ರಧಾನ ಆರಾಧ್ಯ ದೇವರಾದರೂ ನಂದಾವರ ಅನ್ನುವಾಗ ಅಯಾಚಿತವಾಗಿಯೇ ಅದರ ಜತೆಯಲ್ಲೇ ಬರುವಂತಹ ಹೆಸರು ಗಣಪತಿ; ಅದರ ಜತೆಯಲ್ಲೇ ತಕ್ಷಣ ಬರುವ ಹೆಸರು ನಂದಾವರದ ಅಪ್ಪ, ಹಾಗೆಂತಲೇ ಈ ಮಾಗಣೆಯ, ಅಷ್ಟೇ ಯಾಕೆ ಇಡೀ ತಾಲೂಕಿನ ಭಕ್ತ ಜನರ ಅನಿಸಿಕೆ. ಮನೆಯಲ್ಲಿ ಯಾವುದೇ ಸಮಾರಂಭ ಅಥವಾ ನಿಮ್ಮ ವೈಯಕ್ತಿಕ ವಿಚಾರಗಳ ಗೆಲುವಿಗೆ ಸಂಬಂಧಪಟ್ಟಂತೆಯೇ ಇರಬಹುದು, ನಂದಾವರ ಮಹಾಗಣಪತಿಗೆ ಅಪ್ಪದ ಪೂಜೆ ಹೇಳಿದರೆ ಸಾಕು, ಕೆಲಸ ಆಯಿತೆಂದೇ ಭಾವಿಸಿ ಆರಾಮವಾಗಿರಬಹುದು, ಅಲ್ಲಿ ಎರಡು ಮಾತೇ ಇಲ್ಲ; ಮಾನಸಿಕ ದೃಢತೆ ಇದ್ದಲ್ಲಿ ಎಲ್ಲವೂ ಸುಸೂತ್ರ. ಒಂದು ಸೇರು ಬೆಳ್ತಿಗೆ ಅಕ್ಕಿ, ಒಂದು ಪಾವು ಗೋಧಿ, ಒಂದು ಕೆ.ಜಿ. ಬೆಲ್ಲ, ಒಂದು ತೆಂಗಿನ ಕಾಯಿ, ಒಂದು ಕುಡ್ತೆ ತುಪ್ಪ, ಐದು ಗ್ರಾಂ ಏಲಕ್ಕಿ ಇವೆಲ್ಲವನ್ನೂ ಸೇರಿಸಿ ಮಂದಾಗ್ನಿಯಲ್ಲಿ ಕುಳಿಯಿರುವ ಕಂಚಿನ ಕಾವಲಿಯನ್ನಿಟ್ಟು, ಕುಳಿಗೆ ದನದ ತುಪ್ಪವನ್ನು ಹೊಯಿದು, ತತ್ಸಂಬಂಧಿ ಹಿಟ್ಟನ್ನು ಕುಳಿಯಲ್ಲಿರುವ ತುಪ್ಪದ ಮೇಲೆ ಹೊಯಿದು ಅಡಿ ಭಾಗ ಕಾಯುತ್ತಾ ಬಂತು ಅನ್ನುವಾಗ ಮಗದೊಂದು ಸಲ ತುಪ್ಪ ಹೊಯಿದು ಅದನ್ನು ಮತ್ತೆ ಮಗುಚಿ ಹಾಕಿ ಕಾಯಿಸಬೇಕು; ಎದುರು ಭಾಗವೂ ಕಾಯುತ್ತಾ ಬಂತು ಅನ್ನುವಾಗ ಒಂದೊಂದನ್ನೇ ಒಂದು ಪಾತ್ರೆಯೊಳಿಗಿಟ್ಟು ಶೇಖರಿಸಿ, ಗಣಪತಿಗೆ ಅಷ್ಟನ್ನೂ ಸಮರ್ಪಿಸಿ, ಬಾಡಿಸಿದ ಬಾಳೆಯೆಲೆಯಲ್ಲಿ ಮೂರು ಅಪ್ಪವನ್ನು ಇಟ್ಟು ಬಾಳೆಯ ನಾರಿನಲ್ಲಿ ಅದನ್ನು ಕಟ್ಟಿ, ಹರಕೆ ಹೊತ್ತ ಉದ್ದೇಶವನ್ನು ಭಕ್ತರು ನಿವೇದನೆ ಮಾಡಿಕೊಂಡಾಗ, ಅಂತೆಯೇ ಗಣಪತಿಯಲ್ಲಿ ಅದನ್ನು ಅರಿಕೆ ಮಾಡಿಕೊಂಡು ಪೂಜೆಯವರು ಭಕ್ತರಿಗೆ ಅಪ್ಪ ಪ್ರಸಾದವನ್ನು ನೀಡುವುದು ವಾಡಿಕೆ; ಆಗ ಭಕ್ತನಲ್ಲುಂಟಾಗುವ ಧನ್ಯತಾ ಭಾವದ ಕಂಪನ ಯಾರಿಂದಲೂ ವರ್ಣಿಸಲು ಅಸದಳ. ಬೆಳಗಿನ ಹೊತ್ತು ದೇವಾಲಯದ ಆವರಣಕ್ಕೆ ಬಂದದ್ದೇ ಆದಲ್ಲಿ ಘಮಘಮಿಸುವ ಅಪ್ಪದ ಪರಿಮಳ ಯಾರನ್ನಾದರೂ ಒಂದು ಅರೆ ಘಳಿಗೆಯಾದರೂ ಅದನ್ನು ಅನುಭವಿಸದೇ ಬಿಡಲಾರದು. ಹರಕೆ ಅಲ್ಲದಿದ್ದರೂ ಕೆಲವರು ತಿನ್ನುವುದಕ್ಕಾಗಿಯೇ ಗಣಪತಿಗೆ ಅರ್ಪಿತವಾದ ಅಪ್ಪವನ್ನು ತರುವ ಕ್ರಮವಿದೆ. ಕೆಲವು ಸಲ ವೃತದಂದು ಅನ್ನದ ಬದಲು ಅಪ್ಪವನ್ನೇ ತಿಂದು ವ್ರತಾಚರಣೆ ಮಾಡುವವರು ಇಂದಿಗೂ ಇದ್ದಾರೆ. ಆಶ್ಚರ್ಯವೆಂದರೆ ಮದುವೆ, ಬ್ರಹ್ಮೋದೇಶ ಇತ್ಯಾದಿ ಸಂದರ್ಭಗಳಲ್ಲೂ ಕೂಡ ಊಟದ ಎಲೆಗೆ ಪ್ರಸಾದ ರೂಪದಲ್ಲಿ ಬಡಿಸುವುದಕ್ಕಾಗಿ ಅಪ್ಪವನ್ನು ತರುವ ಸಂಪ್ರದಾಯವೂ ಇದೆ. ಒಂದೇ ಅಪ್ಪದಲ್ಲಿ ಹೊಟ್ಟೆ ತುಂಬಿಸಿಕೊಳ್ಳಬಹುದಾದಷ್ಟು ಇದರ ಗಾತ್ರವಿದೆ. ‘ಅಪ್ಪ ಅಂದರೆ ಅದು ನಂದಾವರದ ಗಣಪತಿ ಬೊಪ್ಪನದ್ದೆ’ ಅನ್ನುವ ಮಾತು ಈ ವಲಯದಲ್ಲಂತೂ ನಿತ್ಯ ಸತ್ಯ. ಕೆಲವು ಸಲ ಅಪ್ಪವನ್ನು ಪೂರೈಕೆ ಮಾಡಲು ಸಾಧ್ಯವಿಲ್ಲದಷ್ಟು ಅಪ್ಪದ ಬೇಡಿಕೆಯಿರುತ್ತದೆ; ಹಾಗಂತ ಒಲೆಗಳನ್ನು ಹೆಚ್ಚಿಸಿ ಅದಕ್ಕನುಗುಣವಾದ ಕಾವಲಿಗಳನ್ನು ನಿರ್ಮಿಸಿ ಅಪ್ಪವನ್ನು ತಯಾರಿಸಿ ಭಕ್ತರ ಬೇಡಿಕೆಯನ್ನು ಪೂರೈಸುವಹಾಗಿಲ್ಲ; ಇತ್ತೀಚೆಗಷ್ಟೆ, ವಿನಾಯಕನ ಅನುಗ್ರಹವನ್ನು ಪಡೆದು ಮೊದಲಿದ್ದ ಹನ್ನೆರಡು ಕುಳಿಯ ಕಂಚಿನ ಕಾವಲಿಯಂತೆಯೇ ಇನ್ನೊಂದು ಕಾವಲಿಯನ್ನು ನಿರ್ಮಿಸಿ ಸ್ವಲ್ಪ ಮಟ್ಟಿನ ಒತ್ತಡವನ್ನು ನಿವಾರಿಸಿಕೊಳ್ಳಲಾಗಿದೆ, ಪ್ರಕೃತ ಇಂತಹ ಮೂರು ಕಾವಲಿಗಳಿವೆ. ಸುಖ ದುಃಖಗಳೆರಡರ ಸಂದರ್ಭಕ್ಕೂ ನಂದಾವರವೇ ಆಶ್ರಯ ಅನ್ನುವುದು ಭಕ್ತ ಜನರ ಬಲವಾದ ನಂಬಿಕೆ, ಅದಕ್ಕಾಗೆ ಪ್ರತೀ ವರ್ಷವೂ ಸುಗ್ಗಿ ಬೆಳೆ ಬೆಳೆಯುವ ಕಾಲ ಊರಿಗೆಲ್ಲ ಮಳೆ ಬಂದು ಬೆಳೆ ಚೆನ್ನಾಗಿ ಬೆಳೆಯಿತೆಂದು ಮಾಗಣೆಯ ಜನರೆಲ್ಲಾ ಒಟ್ಟು ಸೇರಿ ದೇವಸ್ಥಾನಕ್ಕೆ ಸೀಯಾಳ (ಎಳನೀರು) ವನ್ನು ಹೊರೆಯಾಗಿ ತಂದು ದೇವರಿಗೆ ಅಭಿಷೇಕ ಮಾಡಿ ಗಣಪತಿಯ ಪ್ರಸಾದ ‘ಅಪ್ಪ’ವನ್ನು ತೆಗೆದುಕೊಂಡು ಹೋಗುವ ರೂಢಿ ಇಂದಿಗೂ ಅವಿಸ್ಮರಣೀಯ.

ದೇವಾಲಯದ ಉತ್ಸವಗಳು[ಬದಲಾಯಿಸಿ]

ನಿತ್ಯ ಪೂಜಾದಿಗಳು, ಪರ್ವ ದಿನಗಳಲ್ಲಿ ವಿಶೇಷ ಪೂಜೆ ಉತ್ಸವಗಳು ಜರಗುತ್ತವೆ. ಶಿವರಾತ್ರಿ, ಚೌತಿ, ನವರಾತ್ರಿ ಉತ್ಸವಗಳು ವಿಶೇಷವಾಗಿ ಅನ್ನ ದಾನದೊಂದಿಗೆ ಅನೂಚಾನವಾಗಿ ನಡೆದುಬರುತ್ತಿದೆ. ನಾಲ್ಕೈತ್ತಾಯಿ ಇಲ್ಲಿನ ಮಾಗಣೆ ದೈವ. ದೇಸ್ಥಾನದಲ್ಲಿ ರಥೋತ್ಸವಕ್ಕಿಂತ ಮೊದಲು ದೈವದ ಭಂಡಾರ ಬಂದು ಉತ್ಸವಕ್ಕೆ ರಕ್ಷಣೆಯ ಅಭಯ ದೊರೆಯಬೇಕು; ಅನಂತರ ಧ್ವಜಾರೋಹಣ. ನಂದಾವರಕ್ಕೂ ಭೂತಾರಾಧನೆಗೂ ವಿಶೇಷವಾದ ಸಂಬಂಧವಿದೆ. ಹಿಂದೆ ನಂದಾವರದಲ್ಲಿ ಸೋಮನಾಥ ಚಾವಡಿ ಇತ್ತು. ನಡಿಯೇಳು ದೈವಂಗಳು ರಾಜನ ಮನೆತನದ ಆಸರೆಯಾಗಿದ್ದರು. ಆದ್ದರಿಂದ ಅವರಿಗೂ ನಂದಾವರಕ್ಕೂ ಅವಿನಾಭಾವ ನಂಟು. ಹೀಗೆ ಭೂತಾರಾಧನೆಯು ದೇವಸ್ಥಾನದಲ್ಲೂ ತನ್ನ ಹಿಡಿತವನ್ನಿಟ್ಟುಕೊಂಡಿದೆ. ನಂದಾವರದ ಜಾತ್ರೋತ್ಸವದ ಕೊನೆಯ ದಿನ, ಅಂದರೆ ಧ್ವಜಾವರೋಹಣದ ನಂತರ ದೈವಕ್ಕೆ ನೇಮ, ಉತ್ಸವಗಳು ನಡೆಯಬೇಕು; ಆ ನಂತರ ಭಂಡಾರ ಮೂಲ ಸ್ಥಾನಕ್ಕೆ ಹೋಗುವುದು. ಆ ಸಂದರ್ಭದಲ್ಲಿ ನಾಲ್ಕೈತ್ತಾಯಿಯ ಆಯಬೀರದಲ್ಲಿ ಬರುವಂತಹ ನುಡಿಗಳು ‘ಕೋಟಿಮರ್ತೆರೇ, ಗಟ್ಟಡ್ ಸಿರಿಮುಡಿ ಸಮುದ್ರೊಡ್ ಸಿರಿಪಾದ ನೀಲೇಶ್ವರ ಗಡಿಡ್ದ್ ರಾಮೇಶ್ವರ ಗಡಿಮುಟ್ಟ, ಆಣನ್ನೇರಿ ಕುಲ್ಲಾಯೆ ಬಂಗಾಡಿಡ್ದ್ ಬಂರ್ಬುಸಾನ ನಡ್ಯೇಲ್ಡ್ ನಡೆಯೇಳ್ ದೈಯ್ಯಂಗುಳ್ ನಾಲ್ಕೈತ್ತಾಯ ಪನ್ಪಿಂಚಿ ಬಲ್ಮನ ಬಂಗಾಡಿಡ್ ಬಂಗಾಡಿ ಕಡ್ತುಲೆ ಅಪ್ಪೆನ್ ಸುತ್ಯೆ. ಮಣಿಪ್ಪಾಡಿ ವೀರಭದ್ರೆ ಕೊಳ್ಳಮ್ಮ ದೇವೆರ್, ನಂದಾರ್ ದೇವೆರ್’ ಹೀಗೆ ತುಳು ನಾಡಿನಲ್ಲಿ ಅನೇಕ ನುಡಿಗಳು, ಪಾಡ್ದನಗಳು ಆಯಾ ಪ್ರದೇಶಗಳಿಗನುಗುಣವಾಗಿ ಚಾಲ್ತಿಯಲ್ಲಿರುವಂತೆ ನಂದಾವರಕ್ಕೂ ನಾಲ್ಕೈತ್ತಾಯಿ ಸಂಬಂಧದ ವಿಚಾರ ಮೇಲಿನ ಪಾಡ್ದನದಲ್ಲಿ ಗೋಚರವಾಗುತ್ತದೆ. ಪ್ರತಿ ತಿಂಗಳ ಸಂಕ್ರಮಣದಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯುತ್ತಿದ್ದು, ಪ್ರತಿ ನವೆಂಬರ್ ತಿಂಗಳಲ್ಲಿ ಬರುವ ಸಂಕ್ರಮಣದಂದು ವಿಶೇಷ ವಾರ್ಷಿಕ ಪೂಜೆ ನಡೆಯುತ್ತದೆ. ನಲುವತ್ತೆಂಟು ಪೂಜೆಯ ಬಳಿಕ, ಅಂದರೆ ನಾಲ್ಕು ವರ್ಷಗಳಿಗೊಮ್ಮೆ ವೃತ ಉದ್ಯಾಪನೆ, ಅನ್ನ ಸಂತರ್ಪಣೆ ಇತ್ಯಾದಿಗಳು ನಡೆಯುತ್ತದೆ. ಮಾಘ ಮಾಸದ ಶುದ್ಧ ಬಿದಿಗೆಯಂದು ರಂಗಪೂಜೆ ನಡೆಯುತ್ತಿದೆ.[೩] ಮದುವೆ, ಉದ್ಯೋಗ ಪ್ರಾಪ್ತಿ, ಸಂತಾನ ಪ್ರಾಪ್ತಿ, ವ್ಯಾಪಾರ ವೃದ್ಧಿ, ಗೃಹ ಶಾಂತಿ, ವಿದ್ಯಾಭ್ಯಾಸ, ವಸ್ತುಗಳು ಕಳವಾದ ಸಂದರ್ಭದಲ್ಲಿ, ಅಪವಾದಗಳ ನಿವಾರಣೆ ಇತ್ಯಾದಿಯಾಗಿ ಯಾವುದೇ ಸಂಕಟಗಳು ಎದುರಾಗಲಿ ಶ್ರೀ ಕ್ಷೇತ್ರದಲ್ಲಿ ಬಂದು ಭಿನ್ನವಿಸಿಕೊಂಡರೆ ಅದು ನಿವಾರಣೆಯಾದಂತೆಯೇ ಅನ್ನುವುದು ಭಕ್ತ ಜನರ ಬಲವಾದ ನಂಬಿಕೆ. ನಂದಾವರದ ಮಟ್ಟಿಗೆ ಹೇಳುವುದಾದರೆ, ಇಲ್ಲಿನ ಸುತ್ತಮುತ್ತೆಲ್ಲವೂ ಅನ್ಯ ಮತೀಯರಿಂದಲೇ ತುಂಬಿದ್ದರೂ ಯಾವುದೇ ರೀತಿಯ ಎಡರು ತೊಡರುಗಳಿಲ್ಲದೆ ಸಾಮರಸ್ಯದ ತಾಣವಾಗಿ ಗೋಚರಿಸುತ್ತಿದೆ ಮಾತ್ರವಲ್ಲ, ಶ್ರೀ ಕ್ಷೇತ್ರವು ಹಿಂದಿನಿಂದಲೂ ಮಡಿವಂತಿಕೆಯನ್ನು ಮೀರಿ ಎಲ್ಲಾ ಜಾತಿ, ಮತ, ಪಂಥಗಳನ್ನು ಮೀರಿ ಪರಸ್ಪರ ಅನ್ಯೋನ್ಯತೆಯಿಂದ ಒಡಗೂಡಿದ್ದು ಯಾವುದೇ ಭೇದಗಳಿಲ್ಲದಿರುವುದು ಸ್ತುತ್ಯರ್ಹವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://nandavaratemple.com/
  2. Shri Kshethra Nandavara Ithihasa
  3. 'ಬಂಟ್ವಾಳ ತಾಲೂಕಿನ ದೇವಾಲಯಗಳು'- ರಾಜಮಣಿ ರಾಮಕುಂಜ (೨೦೧೧)