ಧರ್ಮನಾಥ ದಿಗಂಬರ ಜಿನ ಚೈತ್ಯಾಲಯ,ನಾರಾವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ದಿಗಂಬರ ಜಿನ ಚೈತ್ಯಾಲಯ ಪ್ರಕೃತಿ ರಮಣೀಯತೆಯ ಊರಾದ ನಾರಾವಿಯಲ್ಲಿದೆ.

ಸ್ಥಳ ಸಂಪರ್ಕ ವ್ಯವಸ್ಥೆ[ಬದಲಾಯಿಸಿ]

ತಾಲೂಕು ಕೇಂದ್ರ ಬೆಳ್ತಂಗಡಿಯಿಂದ ಸುಮಾರು ೩೫ ಕಿ.ಮೀ. ದೂರದಲ್ಲಿ ಈ ಬಸದಿಗೆ ಸಾರ್ವಜನಿಕ ವಾಹನ ವ್ಯವಸ್ಥೆ ಬಹು ಸಂಖ್ಯೆಯಲ್ಲಿದೆ. ಓಡಾಡುವ ಖಾಸಗಿ ಬಸ್ ವ್ಯವಸ್ಥೆಯಿದೆ. ಬೆಳ್ತಂಗಡಿ- ಕಾರ್ಕಳ ರಸ್ತೆಯ ಪಕ್ಕದಲ್ಲಿದೆ.

ತೀರ್ಥಂಕರರು[ಬದಲಾಯಿಸಿ]

ಬಸದಿಯಲ್ಲಿ ಪೂಜೆಗೊಳ್ಳುವ ಮೂಲ ನಾಯಕ ಶ್ರೀ ಧರ್ಮನಾಥ ತೀರ್ಥಂಕರರು, ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ೧೫ನೆಯವರು.

ವಿನ್ಯಾಸ[ಬದಲಾಯಿಸಿ]

ಕಪ್ಪು ಶಿಲೆಯಿಂದ ಮಾಡಲ್ಪಡುವ ಪರ್ಯಂಕಾಸನ ಭಂಗಿಯಲ್ಲಿರುವ ಬಹು ಸುಂದರ ಬಕಾಸುರನ ಜಿನಬಿಂಬವಿದು. ಮಕರ ತೋರಣವಿಲ್ಲ. ಇಲ್ಲಿರುವ ಪ್ರಭಾವಲಯ ಅರ್ಧಚಂದ್ರಾಕೃತಿಯಲ್ಲಿದೆ. ಧರ್ಮನಾಥ ಸ್ವಾಮಿಯ ಯಕ್ಷನಾಗಿ ಕಿನ್ನರ ಮತ್ತು ಯಕ್ಷಿಯಾಗಿ ಮಾನಸಿ ನೆಲೆನಿಂತಿದ್ದಾರೆ. ಧರ್ಮನಾಥ ಸ್ವಾಮಿಯ ಮುಖ ನಗೆ ಸೂಸುವಂತಿದೆ. ಬಿಂಬದ ಕೆಳಗಿನ ಪೀಠದಲ್ಲಿ ವಜ್ರ ಲಾಂಛನವಿದೆ.ಈ ಬಿಂಬಕ್ಕೆ ವಜ್ರ ಲೇಪನ ಮಾಡಲಾಗಿದೆ. ಈ ಬಸದಿಯ ಗರ್ಭಗೃಹದಿಂದ ಹೊರಗೆ ಬರುತ್ತಿರುವಂತೆ ಸುಕನಾಸಿ, ಗಂಧಕುಟಿ, ಎಡೆನಾಳಿ, ತೀರ್ಥ ಮಂಟಪ, ಘಂಟಾ ಮಂಟಪ ಮತ್ತು ಪ್ರಾರ್ಥನಾ ಮಂಟಪಗಳೆಂಬ ಮಂಟಪಗಳಿವೆ. ಘಂಟಾ ಮಂಟಪ, ಪ್ರಾರ್ಥನಾ ಮಂಟಪದ ಕಂಬಗಳ ಮೇಲೆ ಶಿಲ್ಪಕಲಾಕೃತಿಗಳಿವೆ. ಇಲ್ಲಿ ಗೋಡೆಗಳ ಮೇಲೆ ಸಂಸಾರ ಸುಖವೆಂಬ ಬರಹದ ಜೈನತತ್ವ ನಿರೂಪಣೆಯ ಪೈಂಟಿಗ್‌ಗಳಿವೆ. ಈ ಎರಡು ಮಂಟಪಗಳ ನೆಲ ಕೆಂಪು ಕಾವಿಯಿಂದ ಮಾಡಲ್ಪಟ್ಟಿದ್ದು, ದ್ವಾರಪಾಲಕರ ಶಿಲಾಕೃತಿಗಳನ್ನೂ ನಾವು ಕಾಣಬಹುದು.ಬಸದಿಯ ಎದುರು ಗೋಪುರವಿದ್ದು, ಅವುಗಳ ಗೋಡೆಯ ಮೇಲೆ ಬಣ್ಣದ ಚಿತ್ರಗಳು ಇಲ್ಲ. ಈ ಗೋಪುರ ಪೂಜೆಗೆ ಕುಳಿತುಕೊಳ್ಳಲು ಬಳಕೆಯಾಗುತ್ತದೆ. ಇಲ್ಲಿಯ ಕಂಬಗಳು ಶಿಲೆಯಿಂದ ಮಾಡಲ್ಪಟ್ಟಿದ್ದು, ಬಹಳ ಆಕರ್ಷಕವಾಗಿದೆ. ಬಸದಿಯ ಕಾರ್ಯಾಲಯವು ಇಲ್ಲಿದೆ. ಬಸದಿಯ ಗರ್ಭಗೃಹದ ಮೇಲೆ ಮೇಗಿನ ನೆಲೆ ಇದ್ದು, ಅಲ್ಲಿ ೧೨ನೇ ತೀರ್ಥಂಕರರಾದ ಶ್ರೀ ಚಂದ್ರನಾಥ ಸ್ವಾಮಿಯ ಮೂರ್ತಿ ಪೂಜಿಸಲ್ಪಡುತ್ತದೆ. ಅಲ್ಲಿ ಕೂಡಾ ಗಂಧಕುಟಿ ಮತ್ತು ಜಿನ ಮೂರ್ತಿಗಳಿವೆ. ಗರ್ಭಗೃಹದ ಸುತ್ತಲೂ ಅಂಗಳ ಇದ್ದು, ಪರಿಸರದಲ್ಲಿ ಪಾರಿಜಾತ ಹೂವಿನ ಗಿಡ ಇದೆ. ಇಲ್ಲಿ ಕ್ಷೇತ್ರಪಾಲ ಸನ್ನಿಧಿ ಇದ್ದು, ಕ್ಷೇತ್ರಪಾಲ ಮತ್ತು ನಾಗಶಿಲೆಯು ಇದೆ. ಬಲಿಕಲ್ಲುಗಳು, ದಶಕ್ಪಾಲಕರ ಕಲ್ಲುಗಳನ್ನೂ ಕಾಣಬಹುದು. ಕ್ಷೇತ್ರಪಾಲನ ಜೊತೆಯಲ್ಲಿ ಗುಟ್ರುಮಲ್ಲ ಮತ್ತು ಭೂತನಾಥರ ವಿಗ್ರಹಗಳನ್ನು, ಗುಂಡುಕಲ್ಲುಗಳನ್ನೂ ಇಡಲಾಗಿದೆ. ಇಲ್ಲಿ ನಾವು ಶಿಲಾಫಲಕವನ್ನೂ, ಕಂಬದ ಮೇಲೆ ಬರವಣಿಗೆಯನ್ನೂ ಕಾಣಬಹುದು. ಈ ಬಸದಿಯ ಮೂಲ ಸಮೀಪದಲ್ಲೇ ಇದ್ದು, ಇಲ್ಲಿ ೨೪ ತೀರ್ಥಂಕರರ ಪಾದುಕೆಗಳು, ಅವರಿಗೆ ಸಂಬAಧಿಸಿದ ವೃಕ್ಷಗಳು ಇವೆ. ಇದು ಇಲ್ಲಿಯ ಪ್ರಮುಖ ಆಕರ್ಷಣೆ.[೧]

ಇತಿಹಾಸ[ಬದಲಾಯಿಸಿ]

ಮೂರ್ತಿಗೆ ಪಂಚಾಮೃತದಿಂದ ಅಭಿಷೇಕ ಮಾಡುತ್ತಾರೆ. ಬಸದಿಯಲ್ಲಿ ಒಬ್ಬ ಪುರೋಹಿತರಿದ್ದು ಪೂಜಾ ಕಾರ್ಯಗಳನ್ನು ನೆರವೇರಿಸುತ್ತಾರೆ. ಶ್ರೀ ಹೆಚ್.ವಿ.ಮಹಾವೀರ ಇಂದ್ರ ಇಲ್ಲಿನ ಇಂದ್ರರು. ಈ ಬಸದಿಯು ಸುಮಾರು ೭೫೦-೮೦೦ ವರ್ಷಗಳಷ್ಟು ಪ್ರಾಚೀನ ಎಂದು ಹೇಳಲಾಗುತ್ತದೆ. ಅಂದರೆ ಸುಮಾರು ೧೨ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ.

ಪೂಜಾ ವಿಧಾನ[ಬದಲಾಯಿಸಿ]

ಬಸದಿಯಲ್ಲಿ ತ್ರಿಕಾಲವೂ ಅಂದರೆ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಪೂಜೆಗಳು ನಡೆಯುತ್ತವೆ. ನೋಂಪಿ ಉದ್ಯಾಪನೆ ಮಾಡಿದ ಮೂರ್ತಿ ಇಲ್ಲ. ಎಲ್ಲಾ ಬಸದಿಗಳಲ್ಲಿರುವಂತೆ ಇಲ್ಲಿಯೂ ಶ್ರೀ ಅಮ್ಮನವರ ಮೂರ್ತಿ ಇದೆ. ಅದು ಶಿಲೆಯಿಂದ ಮಾಡಿದ್ದಾಗಿದೆ. ದೇವಕೋಷ್ಠದಲ್ಲಿದೆ. ಈ ಮೂರ್ತಿ ಪೂರ್ವ ದಿಕ್ಕಿಗೆ ಮುಖ ಮಾಡಿದೆ. ಪದ್ಮಾವತಿ ಅಮ್ಮನವರ ಮೂರ್ತಿಗೆ ಸೀರೆ ಉಡಿಸಿ ಬಳೆಗಳೊಂದಿಗೆ ಅಲಂಕಾರಗೊಳಿಸಿ ಪೂಜೆ ಮಾಡಲಾಗುತ್ತದೆ. ಶುಕ್ರವಾರ ವಿಶೇಷ ಪೂಜೆ ಇದೆ. ಇಲ್ಲಿ ಹೂ ಹಾಕಿ ನೋಡುವ ಕ್ರಮ ಇದ್ದು, ಪೂಜೆಯಲ್ಲಿ ಪದ್ಮಾವತಿ ದೇವಿಗೆ ನೈವೇದ್ಯ, ಚರು, ಫಲವಸ್ತುಗಳನ್ನು ಸಮರ್ಪಿಸಲಾಗುತ್ತದೆ. ಪದ್ಮಾವತಿ ದೇವಿಗೆ ವಿಶೇಷ ಹರಕೆಗಳನ್ನು ಹೇಳಲಾಗುತ್ತದೆ. ಎಷ್ಟೋ ಮಂದಿ ಮದುವೆ ಆಗದವರಿಗೆ ಹರಕೆ ಹೇಳಿದ ಫಲವಾಗಿ ಮದುವೆ ಆದ ಘಟನೆಗಳಿವೆ. ಈ ಬಸದಿಯಲ್ಲಿ ಕುದುರೆಯ ಮೇಲೆ ಕುಳಿತಿರುವ ಬ್ರಹ್ಮದೇವರ ಶಿಲೆಯ ಮೂರ್ತಿ ಇದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೨೦೪-೨೦೫.