ದೇಲಂಪಾಡಿ

ವಿಕಿಪೀಡಿಯ ಇಂದ
Jump to navigation Jump to search

ದೇಲಂಪಾಡಿ - 'ನಿಸರ್ಗದ ಕನಸಿನ ಕನ್ಯೆ' - ಮೂರು ಭಾಗಗಳಿಂದಲೂ ಸಂಪದ್ಭರಿತ ಅರಣ್ಯದಿಂದಾವೃತವಾದ ಕೇರಳ ರಾಜ್ಯದ ಅತ್ಯುತ್ತರದ ಒಂದು ಪುಟ್ಟ ಗ್ರಾಮ.[೧]

ಭಾಷಿಕ ಹಿನ್ನೆಲೆ[ಬದಲಾಯಿಸಿ]

ತುಳು, ಕನ್ನಡ, ಮಲಯಾಳ, ಕೊಂಕಣಿ, ಮರಾಟಿ, ಶಿವಳ್ಳಿ ತುಳು, ಹವ್ಯಕ ಕನ್ನಡ, ಅರೆಭಾಷೆ ಹೀಗೆ ಅನೇಕ ಭಾಷೆಗಳನ್ನಾಡುವ ಅಪ್ಪಟ ಗ್ರಾಮೀಣ ಜನರ ಸಾಂಸ್ಕೃತಿಕ ತವರು ನೆಲ. ಇದೊಂದು ವೈವಿಧ್ಯಮಯ ಸಂಸ್ಕೃತಿಯ ನಾಡು. ಹಿಂದಿನ ಕಾಲದಲ್ಲಿ ಕೇವಲ ತುಳು ಮಾತ್ರ ಇಲ್ಲಿನ ಭಾಷೆಯಾಗಿತ್ತು. ಸಾಂಸ್ಕೃತಿಕ ವಿನಿಮಯ ಮತ್ತು ಜನರ ವಲಸೆಯ ಪರಿಣಾಮವಾಗಿ ಇಂದು ಅನೇಕ ಭಾಷೆ ಮತ್ತು ಸಂಸ್ಕೃತಿ ಇಲ್ಲಿ ಬೆಳೆದು ನಿಂತಿದೆ.[೨]

ರಾಜಕೀಯ ಹಿನ್ನೆಲೆ[ಬದಲಾಯಿಸಿ]

ಇದು ರಾಜಕೀಯವಾಗಿ ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮ ಪಂಚಾಯತಿಗೊಳಪಟ್ಟ ಗ್ರಾಮ. ದೇಲಂಪಾಡಿ ಗ್ರಾಮ ಕಛೇರಿಯು ಸಮೀಪದ ಪರಪ್ಪೆಯಲ್ಲಿ ಮತ್ತು ಪಂಚಾಯತು ಕಛೇರಿಯು ಅಡೂರಿನಲ್ಲಿ ಇದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಹಿಂದೆ ಈ ಪ್ರದೇಶವು ಬಲ್ಲಾಳ ಅರಸರ ಆಳ್ವಿಕೆಯಲ್ಲಿತ್ತು. ಬಲ್ಲಾಳರೆಂದರೆ ತುಳು ಮಾತೃಭಾಷೆಯ ಜೈನ ಮತಕ್ಕೊಳಪಟ್ಟವರು. ಆದರೆ ಈಗ ಜೈನ ಮತಕ್ಕೊಳಪಟ್ಟ ಒಬ್ಬನೇ ವ್ಯಕ್ತಿಯು ಕೂಡ ಈ ಪ್ರದೇಶದಲ್ಲಿಲ್ಲದಿರುವುದು ಮಾತ್ರ ವಿಪರ್ಯಾಸ. ಈ ಬಲ್ಲಾಳ ಅರಸರ ನಂತರ ತಮ್ಮ ಪ್ರದೇಶವನ್ನು ಬಂಟ ಮತ್ತು ಬ್ರಾಹ್ಮಣ ವಿಭಾದವರಿಗೆ ಕೊಟ್ಟರೆಂದು ಪ್ರತೀತಿ. ಈ ವಿಭಾದದ ಜನರು ಕೃಷಿ ಕೆಲಸಗಳಿಗಾಗಿ ಅನೇಕ ಜಾತಿ, ಪಂಗಡಗಳ ಜನರನ್ನು ಕರೆತಂದು ಗೇಣಿದಾರರನ್ನಾಗಿ ಮಾಡಿ ಒಂದು ರೀತಿಯ ಜಮೀನ್ದಾರಿ ವ್ಯವಸ್ಥೆಯು (Feudalism) ಇಲ್ಲಿ ಬೆಳೆಯಲು ಕಾರಣರಾದರು. ಈ ವ್ಯವಸ್ಥೆ ಸಾಮಾನ್ಯವಾಗಿ 60 ಮತ್ತು 70 ರ ದಶಕದವರೆಗೆ ಈ ಪ್ರದೇಶದಲ್ಲಿ ನೆಲೆನಿಂತಿತು. ನಂತರ ಸರಕಾರಗಳ ನೀತಿ, ಭೂ ಸುಧಾರಣಾ ಕಾನೂನುಗಳ ಪರಿಣಾಮವಾಗಿ ಉಳುವವನೇ ಹೊಲದೊಡೆಯನಾದಾಗ ಗೇಣಿದಾರರು ಕೃಷಿಕರಾಗಿ ಬದಲಾಗುವ ಒಂದು ವ್ಯವಸ್ಥೆಯು ಬೆಳೆದು ಬಂತು.

ಧಾರ್ಮಿಕ ಹಿನ್ನೆಲೆ[ಬದಲಾಯಿಸಿ]

  1. ೧೯೮೦ ರ ಮೊದಲು ಇಲ್ಲಿ ಕೇವಲ ಹಿಂದೂಗಳು ಮತ್ತು ಮುಸಲ್ಮಾನರು ಮಾತ್ರ ಇದ್ದರು. ಆದರೆ 80 ರ ದಶಕದಲ್ಲಿ ಕೇರಳದಲ್ಲುಂಟಾದ ವಲಸೆಯ ಪರಿಣಾಮವಾಗಿ ಮಧ್ಯ ಮತ್ತು ದಕ್ಷಿಣ ಕೇರಳದಿಂದ ಕೊಚ್ಚಿ ಕ್ರಿಶ್ಚಿಯನರ ಒಂದು ದೊಡ್ಡ ಸಮೂಹವು ಈ ಪ್ರದೇಶಕ್ಕೆ ಬಂತು. ಇದು ದೇಲಂಪಾಡಿಯ ಆರ್ಥಿಕತೆಯಲ್ಲಿ ಬಹಳ ಪ್ರಧಾನವಾದ ಬದಲಾವಣೆಯನ್ನುಂಟುಮಾಡಿತು. ಇವರಿಂದಲಾಗಿ ಇಲ್ಲಿಗೆ ಬಂದ ರಬ್ಬರ್ ಬೆಳೆಯು ದೇಲಂಪಾಡಿಯ ಆರ್ಥಿಕ ಸ್ಥಿತಿಯನ್ನೇ ಬದಲಾವಣೆ ಮಾಡಿತು. ಕೇವಲ ಗೇರು ಕೃಷಿಗೆ ಮಾತ್ರ ಯೋಗ್ಯವೆಂದು ಭಾವಿಸಿದ್ದ ಇಲ್ಲಿನ ನೆಲವು ರಬ್ಬರ್ ಕೃಷಿಯ ಸಮೃದ್ಧ ತಾಣವಾಗಿ ಬದಲಾಯಿತು.
  2. ಧಾರ್ಮಿಕ ಆಚರಣೆಯ ಕೇಂದ್ರಗಳಾಗಿ ಪ್ರದಾನವಾದ ದೇವಸ್ಧಾನಗಳು, ಮಸೀದಿಗಳು, ಭಜನಾ ಮಂದಿರಗಳು, ದೈವಸ್ದಾನಗಳು ಚರ್ಚುಗಳು ಇತ್ಯಾದಿ ಇಲ್ಲಿ ನೆಲೆಗೊಂಡಿವೆ.

ಕೃಷಿರಂಗ[ಬದಲಾಯಿಸಿ]

ರಬ್ಬರ್ ಹೊರತಾಗಿ ಪಾರಂಪರಿಕ ಕೃಷಿಗಳಾದ ಅಡಿಕೆ, ತೆಂಗು, ಕರಿಮೆಣಸು, ಕೊಕ್ಕೋ, ಭತ್ತ, ಇತ್ಯಾದಿ ಕೃಷಿಗಳು ದೇಲಂಪಾಡಿಯ ನೆಲವನ್ನು ಸಮೃದ್ಧಗೊಳಿಸಿವೆ ಮತ್ತು ಜನರಿಗೆ ಆಹಾರದ ಮತ್ತು ಸಾಂಪತ್ತಿಕ ಭದ್ರತೆಯನ್ನು ಒದಗಿಸಿವೆ. ಆದರೆ ಇತರ ಎಲ್ಲಾ ಕಡೆಗಳಲ್ಲೂ ಆಗುವಂತೆ ಭತ್ತದ ಕೃಷಿಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ಮಾತ್ರ ಶೋಚನೀಯ ವಿಚಾರ.

ಭೌಗೋಳಿಕ ಹಿನ್ನೆಲೆ[ಬದಲಾಯಿಸಿ]

ಬೌಗೋಳಿಕವಾಗಿ ದೇಲಂಪಾಡಿಯು ಹೆಚ್ಚಿನ ಎಲ್ಲಾ ಭಾಗಗಳಿಂದಲೂ ಕರ್ನಾಟಕದ ಭೂಪ್ರದೇಶಗಳಿಂದ ಆವೃತವಾಗಿದೆ. 7ರಿಂದ 8 ರಸ್ತೆಗಳು ದೇಲಂಪಾಡಿಯನ್ನು ಹೊರಜಗತ್ತಿನೊಂದಿಗೆ ಜೋಡಿಸುತವೆ. ಅವುಗಳಲ್ಲಿ 7 ರಸ್ತೆಗಳೂ ಕೂಡ ಕರ್ನಾಟಕದ ಭೂಪ್ರದೇಶವನ್ನು ದಾಡಿಯೇ ನಮ್ಮೂರನ್ನು ಪ್ರವೇಶಿಸುತ್ತದೆ. ಇದು ಅಭಿವೃದ್ದಿಗೆ ಸಂಬಂಧಿಸಿ ನಮ್ಮೂರನ್ನು ಕಾಡುವ ಬಹಳ ಪ್ರಧಾನವಾದ ಒಂದು ಸಮಸ್ಯೆಯಾಗಿದೆ. ಆದುದರಿಂದ ಬಹಳ ಹಿಂದಿನ ಕಾಲದಿಂದಲೇನಮ್ಮ ಜನರ ಹೆಚ್ಚಿನ ಎಲ್ಲಾ ಸಂಪರ್ಕಗಳೂ ಕೇರಳಕ್ಕಿಂತ ಹೆಚ್ಚಾಗಿ ಸಮೀಪದ ಕರ್ನಾಟಕದ ಸುಳ್ಯ, ಪುತ್ತೂರು, ಮಂಗಳೂರು ಮೊದಲಾದ ಪ್ರದೇಶಗಳೊಂದಿಗೇ ಇದೆ. ಇಲ್ಲಿನ ಜನರು ತಮ್ಮ ವಿದ್ಯಾಭ್ಯಾಸ, ವಾಣಿಜ್ಯ, ಆರೋಗ್ಯ ಮುಂತಾದ ಎಲ್ಲಾ ಅಗತ್ಯತೆಗಳಿಗೂ ಕರ್ನಾಟಕವನ್ನೇ ಆಶ್ರಯಿಸಿದ್ದಾರೆ. ಕೇವಲ ಆಫೀಸು ಕೆಲಸಗಳಿಗಾಗಿ ಮಾತ್ರ ಕಾಸರಗೋಡಿನತ್ತ ಸಾಗುತ್ತಾರೆ.

ಸಾಂಸ್ಕೃತಿಕ ಹಿನ್ನೆಲೆ[ಬದಲಾಯಿಸಿ]

ದೇಲಂಪಾಡಿಯು ಸಾಂಸ್ಕೃತಿಕವಾಗಿ ಬಹಳ ಸಮೃದ್ಧವಾಗಿದೆ. ಇಲ್ಲಿನ ಸಾಂಸ್ಕೃತಿಕ ಬೆಳವಣಿಗೆಗೆ ಎಲ್ಲಾ ಮತ, ಪಂಥ, ಜಾತಿ ಪಂಗಡಗಳ ಜನರು ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ, ನೀಡುತ್ತಿದ್ದಾರೆ. ಪಾರಂಪರಿಕ ಆಚರಣೆಗಳಿಂದ ಹೊರತಾಗಿ ಕೆಲವು ಪಂಗಡಗಳ ಜನರಲ್ಲಿ ಮಾತ್ರ ಆಚರಿಸಲ್ಪಡುತ್ತಿರುವ ಗೋಂದೋಳು ನೃತ್ಯ, ಕೊರಗ ದೋಳು, ಕನ್ಯಾಪು, ಆಟಿ ಕಳಂಜ, ಸೋಣ ಜೋಗಿ ಮುಂತಾದ ಮುಂತಾದ ಆಚರಣೆಗಳು ಈ ಪ್ರದೇಶದ ಸಾಂಸ್ಕೃತಿಕ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಆದರೆ ಆಧುನೀಕರಣದ ಭರಾಟೆಯಲ್ಲಿ ಇವೆಲ್ಲವೂ ಈಗ ನಾಶವಾಗುತ್ತಿರುವುದು ಮಾತ್ರ ವಿಷಾದದ ಸಂಗತಿ.

ಕಲಾರಂಗ[ಬದಲಾಯಿಸಿ]

ಯಕ್ಷಗಾನವು ಇಲ್ಲಿನ ಜೀವಾಳವಾಗಿದೆ. ಇಲ್ಲಿನ ಯಕ್ಷಗಾನದ ಬೆಳವಣಿಗೆಯಲ್ಲಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರಿಂದ ಸ್ಥಾಪಿಸಲ್ಪಟ್ಟ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಪಾತ್ರ ಬಹಳ ಹಿರಿದು. ಯಕ್ಷಗಾನ ಕ್ಷೇತ್ರಕ್ಕೆ 50ಕ್ಕಿಂತಲೂ ಹೆಚ್ಚು ಹಿರಿ ಕಿರಿಯ ಕಲಾವಿದರನ್ನು ನೀಡಿದ ಹೆಮ್ಮೆ ದೇಲಂಪಾಡಿಯದ್ದು. ಇವರಲ್ಲಿ ಶ್ರೀಯುತ ಕೇದಗಡಿ ಗುಡ್ಡಪ್ಪ ಗೌಡ, ಕೆ. ವಿ. ನಾರಾಯಣ ರೈ, ಪಕ್ಕೀರ ಆಳ್ವ, ಕೆ ಬಾಬು ರೈ, ಮಹಾಲಿಂಗ ಪಾಟಾಳಿ, ರಾಮಪ್ಪ ಗೌಡ ಮುದಿಯಾರು ನಾರಾಯಣ ರೈ ಮೊದಲಾದವರದ್ದು ಯಾವತ್ತೂ ನೆನಪಿನಲ್ಲಿ ಉಳಿಯುವ ಹೆಸರುಗಳು. ಇವರುಗಳು ಹಾಕಿ ಕೊಟ್ಟು ಯಕ್ಷಗಾನದ ಅಡಿಪಾಯವು ಇಂದು ಕೂಡ ಅನೇಕ ಕಲಾವಿದರುಗಳ ಮೂಲಕ ದೇಲಂಪಾಡಿಯಲ್ಲಿ ಗಟ್ಟಿಯಾಗಿ ಉಳಿದುಕೊಂಡಿದೆ ಎಂಬುದು ಬೆಮ್ಮೆಯ ಸಂಗತಿ. ದೇಲಂಪಾಡಿಯ ಯಕ್ಷಗಾನದ ಈಗಿನ ಬೆಳವಣಿಗೆಯಲ್ಲಿ ಶ್ರೀ ವಿಶ್ವ ವಿನೋದ ಬನಾರಿಯವರ ಪಾತ್ರವು ಹಿರಿದಾದುದು.

ಹಬ್ಬಗಳು[ಬದಲಾಯಿಸಿ]

ಎಲ್ಲಾ ಮತ ಧರ್ಮದವರ ವಿವಿಧ ಹಬ್ಬಗಳು ಇಲ್ಲಿ ಶಾಂತಿ ಸಾಮರಸ್ಯದಿಂದ ಆಚರಿಸಲ್ಪಡುತ್ತದೆ. ಪರ್ಬ (ದೀಪಾವಳಿ), ಬಿಸು, ಕೆಡ್ಡಸ, ಆಟಿ ಅಮಾಸೆ, ಅಷ್ಟೇಮಿ, ಷಷ್ಟಿ, ಪೆರ್ನಾಳ್, ಹಜ್ಜ್ ಪೆರ್ನಾಳ್, ಮೌಲೋದ್, ಕ್ರಿಸ್ಮಸ್ ಇತ್ಯಾದಿ ಇಲ್ಲಿನ ಆಚರಣೆಗಳಾಗಿವೆ.

ಸಾಮಾಜಿಕ ಹಿನ್ನೆಲೆ[ಬದಲಾಯಿಸಿ]

ದೇಲಂಪಾಡಿಯು ಕಾಲಾನುಕ್ರಮದಲ್ಲಿ ಅನೇಕ ಮತ, ಧರ್ಮ, ಸಮುದಾಯ, ಜಾತಿ, ಪಂಗಡಗಳ ಜನರ ಪಾಲ್ಗೊಳ್ಳುವಿಕೆಯ ಪರಿಣಾಮವಾಗಿ ವೈವಿಧ್ಯಪೂರ್ಣವಾದ ಭಾರತದ ಒಂದು ಕಿರು ರೂಪವಾಗಿ ಬದಲಾಗಿದೆ. ಈ ಎಲ್ಲಾ ವಿಭಾಗಗಳ ಜನರು ಇಲ್ಲಿನ ಧಾರ್ಮಿಕ ಸಾಮರಸ್ಯ, ಸಾಂಸ್ಕೃತಿಕ ಐಕ್ಯತೆ, ಮತ್ತೂ ಆರ್ಥಿಕ ಭದ್ರತೆಯನ್ನು ಧೃಡಗೊಳಿಸುವುದರಲ್ಲಿ ತಮ್ಮ ಅಮೂಲ್ಯವಾದ ಕೊಡುಗೆಯನ್ನಿತ್ತಿದ್ದಾರೆ.

ಉಲ್ಲೇಖ[ಬದಲಾಯಿಸಿ]

  1. http://www.onefivenine.com/india/villages/Kasaragod/Kasargod/Delampady
  2. http://pincode.net.in/KERALA/KASARGOD/D/DELAMPADY