ದುರ್ಗಾ ವಾಹಿನಿ

ದುರ್ಗಾ ವಾಹಿನಿಯು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನ ಮಹಿಳಾ ವಿಭಾಗವಾಗಿದೆ.[೧] ಇದನ್ನು ೧೯೯೧ ರಲ್ಲಿ, ಸ್ಥಾಪಿಸಲಾಯಿತು ಮತ್ತು ಅದರ ಸ್ಥಾಪಕಿ ಹಾಗೂ ಅಧ್ಯಕ್ಷೆ ಸಾಧ್ವಿ ರಿತಂಬರಾರವರು. ಮಹಿಳೆಯರನ್ನು ಸಬಲೀಕರಣಗೊಳಿಸುವುದು, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಹೆಚ್ಚಿನ ಮಹಿಳೆಯರನ್ನು ಪ್ರೋತ್ಸಾಹಿಸುವುದು ದುರ್ಗಾ ವಾಹಿನಿಯ ಉದ್ದೇಶವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳುತ್ತದೆ. ಸಂಘಟನೆಯ ಹಿರಿಯ ನಾಯಕಿ ಕಲ್ಪನಾ ವ್ಯಾಶ್‌ರವರು ಮಾತನಾಡಿ, ದುರ್ಗಾವಾಹಿನಿ ಸದಸ್ಯರು ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ.[೨] ಕಷ್ಟದ ಸಮಯದಲ್ಲಿ ಹಿಂದೂ ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಮತ್ತು ಸಾಮಾಜಿಕ ಸೇವೆಗಳನ್ನು ಒದಗಿಸುವ ಮೂಲಕ ಹಿಂದೂ ಒಗ್ಗಟ್ಟನ್ನು ಸ್ಥಾಪಿಸುವುದು ಸಂಘಟನೆಯ ಉದ್ದೇಶವಾಗಿದೆ.[೩] ವ್ಯಾಶ್‌ರವರ ಪ್ರಕಾರ, ೨೦೦೨ ರ ಹೊತ್ತಿಗೆ ಗುಂಪಿನ ಒಟ್ಟು ಸದಸ್ಯತ್ವವು ೮,೦೦೦ ಆಗಿದೆ ಮತ್ತು ೧,೦೦೦ ಸದಸ್ಯರು ಅಹಮದಾಬಾದ್ ಮೂಲದವರಾಗಿದ್ದಾರೆ.
ಚಟುವಟಿಕೆಗಳು ಮತ್ತು ಸಿದ್ಧಾಂತ
[ಬದಲಾಯಿಸಿ]ದುರ್ಗಾ ವಾಹಿನಿಯನ್ನು ಹೆಚ್ಚಾಗಿ ಬಜರಂಗದಳದ ಸ್ತ್ರೀ ಮುಖವೆಂದು ಪರಿಗಣಿಸಲಾಗುತ್ತದೆ. ಈ ಸಂಘಟನೆಯನ್ನು ಬಲಪಂಥೀಯ ಧಾರ್ಮಿಕ ಮೂಲಭೂತವಾದಿ ಗುಂಪು ಎಂದು ವಿವರಿಸಲಾಗಿದೆ.[೪][೫]
ದುರ್ಗಾ ವಾಹಿನಿಯು ಉಗ್ರಗಾಮಿ ಸ್ವರೂಪದ ಕ್ರಿಯಾಶೀಲತೆಗಾಗಿ ಯುವತಿಯರನ್ನು ನೇಮಿಸಿಕೊಳ್ಳುತ್ತದೆ. ಇದು ದೀನದಲಿತ ಜಾತಿ ಹಿನ್ನೆಲೆ ಮತ್ತು ಬಡ ಕುಟುಂಬಗಳ ಮಹಿಳೆಯರನ್ನು ಗುರಿಯಾಗಿಸುತ್ತದೆ. ಆದರೆ, ಗುಂಪಿನೊಂದಿಗೆ ಭಾಗಿಯಾಗಿರುವ ದೀರ್ಘ ಇತಿಹಾಸವನ್ನು ಹೊಂದಿರುವ ಸದಸ್ಯರ ಗುಂಪನ್ನು ಉಳಿಸಿಕೊಳ್ಳುತ್ತದೆ.[೬] ಸದಸ್ಯರು ಕರಾಟೆ ಮತ್ತು ಲಾಠಿ ಖೇಲಾವನ್ನು ಕಲಿಯುತ್ತಾರೆ ಮತ್ತು ಸೈದ್ಧಾಂತಿಕ ಶಿಕ್ಷಣವನ್ನು ಪಡೆಯುತ್ತಾರೆ. ಹಿಂದೂ ರಾಷ್ಟ್ರೀಯತಾವಾದಿ ಚಳುವಳಿಯಲ್ಲಿ ಮಹಿಳೆಯರ ಪಾತ್ರವನ್ನು ವಿಶ್ಲೇಷಿಸುತ್ತಾ, ವಿದ್ವಾಂಸ ಥಾಮಸ್ ಬ್ಲೋಮ್ ಹ್ಯಾನ್ಸೆನ್‌ರವರು, ಕೆಳಜಾತಿಯ ಹಿನ್ನೆಲೆಯ ಮಹಿಳೆಯರನ್ನು ದೈಹಿಕ ಅಪಾಯಕ್ಕೆ ಒಡ್ಡಲು ಆರ್‌ಎಸ್ಎಸ್ ಹೆಚ್ಚು ಸಿದ್ಧವಾಗಿದೆ ಎಂದು ಬರೆಯುತ್ತಾರೆ ಮತ್ತು ಮೇಲ್ಜಾತಿಯ ಮೌಲ್ಯಗಳನ್ನು ಅನುಕರಿಸಲು ಬಯಸುವುದರಿಂದ ದುರ್ಗಾ ವಾಹಿನಿ ಕೆಳಜಾತಿಯ ಮಹಿಳೆಯರಲ್ಲಿ ಜನಪ್ರಿಯವಾಗುವ ಸಾಧ್ಯತೆಯಿದೆ ಎಂದು ನಂಬುತ್ತಾರೆ.
೧೯೯೦ ರಲ್ಲಿ, ನಡೆದ ಬಿಜ್ನೋರ್ ಗಲಭೆಯಲ್ಲಿ, ದುರ್ಗಾ ವಾಹಿನಿಗೆ ಸೇರಿದ ಕಾರ್ಯಕರ್ತರು ಬಿಜೋರ್‌ನ ಮುಸ್ಲಿಂ ವಸತಿಗೃಹಗಳ ಮೂಲಕ ಹಿಂದೂ ಪುರುಷರ ಮೆರವಣಿಗೆಯನ್ನು ಆಯೋಜಿಸಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು.[೭]
ಮಾರ್ಚ್ ೧೬, ೨೦೦೨ ರಂದು, ದುರ್ಗಾ ವಾಹಿನಿ ಕಾರ್ಯಕರ್ತರು ತ್ರಿಶೂಲಗಳನ್ನು ಹಿಡಿದು ಕೇಸರಿ ಹೆಡ್ ಬ್ಯಾಂಡ್‌ಗಳನ್ನು ಧರಿಸಿ ವಿಎಚ್‌ಪಿ ಮತ್ತು ಬಜರಂಗದಳದ ಸದಸ್ಯರೊಂದಿಗೆ ಒರಿಸ್ಸಾ ವಿಧಾನಸಭೆಗೆ ಆಗಮಿಸಿದರು.[೮]
೨೦೦೨ ರ ಗುಜರಾತ್ ಹಿಂಸಾಚಾರದಲ್ಲಿ ದುರ್ಗಾ ವಾಹಿನಿ ಭಾಗಿಯಾಗಿತ್ತು ಎಂದು ಆರೋಪಿಸಲಾಗಿದೆ. ದುರ್ಗಾ ವಾಹಿನಿ ಇಂತಹ ಆರೋಪಗಳನ್ನು ನಿರಾಕರಿಸಿದೆ.[೯] ಗಲಭೆಯಲ್ಲಿ ದುರ್ಗಾ ವಾಹಿನಿಯ ಪಾತ್ರದ ಬಗ್ಗೆ ಮಾತನಾಡಿದ ವಿಎಚ್‌ಪಿ ವಕ್ತಾರ ಕೌಶಿಕ್ಬಾಹಿ ಮೆಹ್ತಾರವರು, "ಗೋಧ್ರಾ ಗಲಭೆಯ ವಿಧವೆಯರು ಮತ್ತು ಸಂತ್ರಸ್ತರನ್ನು ನೋಡಿಕೊಳ್ಳುವುದನ್ನು ಹೊರತುಪಡಿಸಿ ವಿಎಚ್‌ಪಿಯಲ್ಲಿರುವ ನಮಗೆ ಹಿಂಸಾಚಾರದೊಂದಿಗೆ ಯಾವುದೇ ಸಂಬಂಧವಿಲ್ಲ. ದುರ್ಗಾವಾಹಿನಿಯ ವಿಷಯದಲ್ಲೂ ಇದೇ ಆಗಿತ್ತು" ಎಂದರು. ಆದರೆ, ಬಿಳಿ ಚೂಡಿದಾರ್ ಧರಿಸಿದ ಹುಡುಗಿಯರು ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಅನೇಕ ಜನರು ಹೇಳಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, "ಅವರು ಪುರುಷ ಕಾರ್ಯಕರ್ತರಿಗೆ ಗುಣಪಡಿಸುವ ಸ್ಪರ್ಶ, ಮಾಹಿತಿ ಬ್ಯಾಕ್-ಅಪ್ ಒದಗಿಸುತ್ತಿರುವುದು ಕಂಡುಬಂದಿದೆ ಮತ್ತು ಜನಾಂಗೀಯ ಶುದ್ಧೀಕರಣ ಸಿದ್ಧಾಂತವು ನಿಜವಾಗಿದ್ದರೆ, ಗುಪ್ತಚರ ಜಾಲದಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ನನಗೆ ಅನಿಸುತ್ತದೆ. ತಮ್ಮ ನೇರ ಪಾಲ್ಗೊಳ್ಳುವಿಕೆಯನ್ನು ಸಾಬೀತುಪಡಿಸುವುದು ತುಂಬಾ ಕಷ್ಟವಾದರೂ, ಮಹಿಳಾ ಸಂಘಗಳು ಖಂಡಿತವಾಗಿಯೂ ಮತದಾರರ ಪಟ್ಟಿ ಅಥವಾ ವ್ಯಾಪಾರಿಗಳ ಪರವಾನಗಿ ಪತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದವು" ಎಂಬುದಾಗಿ ಹೇಳಿದ್ದಾರೆ.
ಕಲ್ ಆಜ್ ಔರ್ ಕಲ್ ನಾಟಕದ ನಿರ್ದೇಶಕಿ ನೀತು ಸಪ್ರಾ ಅವರ ಮುಖಕ್ಕೆ ಕಪ್ಪು ಬಣ್ಣ ಬಳಿದಿದ್ದಕ್ಕಾಗಿ ದುರ್ಗಾ ವಾಹಿನಿಯ ಆರು ಸದಸ್ಯರನ್ನು ಮಾರ್ಚ್ ೨೦೦೪ ರಲ್ಲಿ, ಗ್ವಾಲಿಯರ್‌ನಲ್ಲಿ ಬಂಧಿಸಲಾಯಿತು.[೧೦] ಈ ನಾಟಕದಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಾನ್ ಅವರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆರೋಪಿಸಿವೆ. ಕಾರ್ಯಕರ್ತರು ಸಪ್ರಾ ಅವರ ಮನೆಯಲ್ಲಿನ ಪೀಠೋಪಕರಣಗಳನ್ನು ಸಹ ಹಾನಿಗೊಳಿಸಿದರು.
ಜುಲೈ ೨೦೧೭ ರಲ್ಲಿ, ದುರ್ಗಾ ವಾಹಿನಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆತ್ಮರಕ್ಷಣೆಗಾಗಿ ತರಬೇತಿ ಶಿಬಿರವನ್ನು ಆಯೋಜಿಸಿತು. ರಾಜ್ಯದ ೧೭ ಗಡಿ ಪಟ್ಟಣಗಳ ಹುಡುಗಿಯರು ಶಿಬಿರದಲ್ಲಿ ಭಾಗವಹಿಸಿದ್ದರು.[೧೧]
ಇದನ್ನೂ ನೋಡಿ
[ಬದಲಾಯಿಸಿ]- ದಿ ವರ್ಲ್ಡ್ ಬಿಫೋರ್ ಹರ್, ೨೦೧೨ ರ ಸಾಕ್ಷ್ಯಚಿತ್ರವು ದುರ್ಗಾ ವಾಹಿನಿ ಶಿಬಿರದಲ್ಲಿ ತರಬೇತಿಯನ್ನು ಭಾಗಶಃ ನಿರೂಪಿಸುತ್ತದೆ.
- ರಾಷ್ಟ್ರ ಸೇವಿಕಾ ಸಮಿತಿ
ಉಲ್ಲೇಖಗಳು
[ಬದಲಾಯಿಸಿ]- ↑ Results for battalion earnsanskrit.cc
- ↑ "Women 'Ram Bhakt' hog limelight". The Tribune. 2002-04-11. Retrieved 2008-06-29.
- ↑ Patricia Jeffery, Amrita Basu (1997). Appropriating Gender: Women's Activism and Politicized Religion in South Asia. Routledge. p. 168. ISBN 0-415-91866-9.
- ↑ Fiona Wilson, Bodil Folke Frederiksen (1995). Ethnicity, Gender, and the Subversion of Nationalism. Routledge. p. 91. ISBN 0-7146-4155-3.
- ↑ Joanna Kerr, Alison Symington (2005). The Future of Women's Rights. Zed Books. p. 81. ISBN 1-84277-459-X.
- ↑ Feminist Review: Issue 49. Routledge. 1995. p. 13. ISBN 0-415-12375-5.
- ↑ David E. Ludden (1996). Contesting the Nation: Religion, Community, and the Politics of Democracy in India. University of Pennsylvania Press. p. 77. ISBN 0-8122-1585-0.
- ↑ S. Anand (2008-01-19). "Next Stop Orissa". Tehelka. Archived from the original on 18 May 2012. Retrieved 2008-06-29.
- ↑ Anjum Niaz (2002-09-01). "'Stop funding fascist Hindus!'". Dawn. Archived from the original on 13 July 2007. Retrieved 2008-06-29.
- ↑ "'Durga Vahini' activists held". The Hindu. 2004-05-15. Archived from the original on 2 August 2010. Retrieved 2008-06-29.
- ↑ "J&K Girls Turn up in Huge Numbers at 'Durga Vahini' Training Camp for Self-Defence Exercise". 7 July 2017.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Durga Vahini Archived 25 June 2014 ವೇಬ್ಯಾಕ್ ಮೆಷಿನ್ ನಲ್ಲಿ., Vishva Hindu Parishad website