ವಿಷಯಕ್ಕೆ ಹೋಗು

ದೀಪಾ ಬಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೀಪಾ ಬಸ್ತಿ
ಜನನ1983 (ವಯಸ್ಸು 41–42)
ಮಡಿಕೇರಿ , ಕರ್ನಾಟಕ, ಭಾರತ
ವೃತ್ತಿಬರಹಗಾರ್ತಿ, ಪತ್ರಕರ್ತೆ, ಅನುವಾದಕಿ
ಭಾಷೆಇಂಗ್ಲೀಷ್‌,ಕನ್ನಡ
ರಾಷ್ಟ್ರೀಯತೆಭಾರತೀಯ
ಪ್ರಮುಖ ಪ್ರಶಸ್ತಿ(ಗಳು)ಮ್ಯಾನ್‌ ಬುಕರ್‌ ಪ್ರಶಸ್ತಿ (೨೦೨೩), ಪೆನ್‌ ಪ್ರಶಸ್ತಿ (೨೦೨೪)

ದೀಪಾ ಬಸ್ತಿ (ಜನನ:೧೯೮೩) ಒಬ್ಬ ಭಾರತೀಯ ಬರಹಗಾರ್ತಿ, ಪತ್ರಕರ್ತೆ ಮತ್ತು ಸಾಹಿತ್ಯ ಅನುವಾದಕಿ. ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರ ಸಣ್ಣ ಕಥಾ ಸಂಕಲನ "ಹಾರ್ಟ್ ಲ್ಯಾಂಪ್" (ಮೂಲ ಕನ್ನಡದಲ್ಲಿ "ಎದೆಯ ಹಣತೆ") ಅನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದಕ್ಕಾಗಿ ಇವರು ೨೦೨೫ರ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು (ಲೇಖಕಿಯೊಂದಿಗೆ ಜಂಟಿಯಾಗಿ) ಗಳಿಸಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಅನುವಾದಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.[]

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ದೀಪಾ ಬಸ್ತಿ ಅವರು ೧೯೮೩ರಲ್ಲಿ ಕರ್ನಾಟಕಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಜನಿಸಿದರು. ಇವರ ತಂದೆ ಪ್ರಕಾಶ್ ಮತ್ತು ತಾಯಿ ಸುಧಾ. ದೀಪಾ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಕೊಡಗು ವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ನಂತರ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ (ಬಿ.ಕಾಂ) ಪಡೆದರು. ಮಂಗಳೂರು ವಿಶ್ವವಿದ್ಯಾನಿಲಯಕೊಣಾಜೆಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ತಮ್ಮ ತಾತನಿಂದ ಬಳುವಳಿಯಾಗಿ ಬಂದ ಪುಸ್ತಕ ಸಂಗ್ರಹವು ಸಾಹಿತ್ಯದ ಬಗ್ಗೆ ಒಲವು ಮೂಡಲು ಪ್ರೇರಣೆಯಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ವೃತ್ತಿಜೀವನ

[ಬದಲಾಯಿಸಿ]

ಶಿಕ್ಷಣದ ನಂತರ ದೀಪಾ ಬಸ್ತಿ ಅವರು ಪತ್ರಕರ್ತೆಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. "ಇಂಡಿಯನ್ ಎಕ್ಸ್‌ಪ್ರೆಸ್" ಮತ್ತು "ದಿ ಹಿಂದೂ" ಸೇರಿದಂತೆ ಹಲವು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಕಲಾ ವಿಮರ್ಶೆ ಮತ್ತು ಸಂಬಂಧಿತ ಅಂಕಣಗಳನ್ನು ಬರೆದಿದ್ದಾರೆ. "ದಿ ಫೋರೇಜರ್" ಎಂಬ ಆಹಾರ ರಾಜಕೀಯಕ್ಕೆ ಸಂಬಂಧಿಸಿದ ಪತ್ರಿಕೆಯ ಸ್ಥಾಪಕ ಸಂಪಾದಕರಲ್ಲಿ ಒಬ್ಬರಾಗಿದ್ದರು. ಕೆಲವು ಕಾಲ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದ ನಂತರ, ಅವರು ತಮ್ಮ ಪತಿ, ಕಲಾವಿದ ಮತ್ತು ಕೃಷಿಕರಾದ ಚೆಟ್ಟಿರ ಸುಜನ್ ನಾಣಯ್ಯ ಅವರೊಂದಿಗೆ ಮಡಿಕೇರಿಗೆ ಹಿಂದಿರುಗಿ, ಪೂರ್ಣಾವಧಿಯಾಗಿ ಬರವಣಿಗೆ ಮತ್ತು ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡರು.[][]

ಸಾಹಿತ್ಯ ಅನುವಾದ ಮತ್ತು ಕೃತಿಗಳು

[ಬದಲಾಯಿಸಿ]

ದೀಪಾ ಬಸ್ತಿ ಅವರು ಕನ್ನಡದ ಹಲವಾರು ಪ್ರಮುಖ ಲೇಖಕರ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಇವುಗಳಲ್ಲಿ ಕೋಟ ಶಿವರಾಮ ಕಾರಂತ ಮತ್ತು ಕೊಡಗಿನ ಗೌರಮ್ಮ ಅವರ ಕೃತಿಗಳು ಸೇರಿವೆ.

ಬಾನು ಮುಷ್ತಾಕ್ ಅವರ "ಹಸೀನಾ ಮತ್ತು ಇತರ ಕತೆಗಳು" ಕಥಾ ಸಂಕಲನವನ್ನು "ಹಾರ್ಟ್ ಲ್ಯಾಂಪ್: ಸೆಲೆಕ್ಟೆಡ್ ಸ್ಟೋರೀಸ್" ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೆ ಅನುವಾದಿಸಿದರು. ಈ ಅನುವಾದಿತ ಕೃತಿಗೆ ೨೦೨೫ರ ಮೇ ತಿಂಗಳಿನಲ್ಲಿ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿತು. ಈ ಪ್ರಶಸ್ತಿಯು ಮೂಲ ಲೇಖಕಿ ಮತ್ತು ಅನುವಾದಕರಿಗೆ ಜಂಟಿಯಾಗಿ ನೀಡಲಾಯ್ತು. ಈ ಸಾಧನೆಯು ಕನ್ನಡ ಸಾಹಿತ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಅನುವಾದಕ್ಕಾಗಿ ದೀಪಾ ಬಸ್ತಿ ಅವರಿಗೆ "ಇಂಗ್ಲಿಷ್ ಪೆನ್ ಪ್ರಶಸ್ತಿ"ಯೂ ದೊರೆತಿದೆ.

ಅನುವಾದದ ಜೊತೆಗೆ, ದೀಪಾ ಅವರು ಮಕ್ಕಳ ಸಾಹಿತ್ಯದಲ್ಲೂ ತೊಡಗಿಸಿಕೊಂಡಿದ್ದು, "ಚಂಪಿ ಆ್ಯಂಡ್ ದಿ ಫಿಗ್ ಟ್ರೀ" (೨೦೨೫) ಎಂಬ ಮಕ್ಕಳ ಪುಸ್ತಕವನ್ನು ರಚಿಸಿದ್ದಾರೆ.[][]

ವೈಯಕ್ತಿಕ ಜೀವನ

[ಬದಲಾಯಿಸಿ]

ದೀಪಾ ಬಸ್ತಿ ಅವರು ತಮ್ಮ ಪತಿ ಚೆಟ್ಟಿರ ಸುಜನ್ ನಾಣಯ್ಯ ಅವರೊಂದಿಗೆ ಮಡಿಕೇರಿಯ ಡೇರಿ ಫಾರ್ಮ್‌ನಲ್ಲಿ ವಾಸಿಸುತ್ತಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. "'Radical translation' of Heart Lamp by Banu Mushtaq wins International Booker priz". The Guardian. 20 ಮೇ 2025. Retrieved 22 ಮೇ 2025.
  2. "From Hridaya Deepa to Heart Lamp: Kodagu's Deepa Bhasthi behind Booker Prize winning English translation". Udayavani Kannada. 21 ಮೇ 2025. Retrieved 22 ಮೇ 2025.
  3. "Just the beginning, says Bhasthi after winning International Booker Prize". The Times of India. 22 ಮೇ 2025. Retrieved 22 ಮೇ 2025.
  4. "Deepa Bhasthi, translator of Booker winner Heart Lamp, quit journalism for literature". Deccan Herald. 21 ಮೇ 2025. Retrieved 22 ಮೇ 2025.
  5. Rajagopalan, Sudha (2024). "Soviet books, geopolitical imagination and eclectic solidarities in India" (PDF). p. 208. Retrieved 23 ಮೇ 2025.
  6. "ಕೊಡಗಲ್ಲಿ ದೀಪಾ ಬಸ್ತಿ ಕುಟುಂಬಸ್ಥರಲ್ಲಿ ಸಂಭ್ರಮ". https://www.kannadaprabha.in/. ೨೪/೦೫/೨೦೨೫. Retrieved ೨೪/೦೫/೨೦೨೫. {{cite web}}: Check date values in: |access-date= and |date= (help); External link in |website= (help)