ವಿಷಯಕ್ಕೆ ಹೋಗು

ತೊಗಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚರ್ಮದ ವಿವಿಧ ಉತ್ಪನ್ನಗಳು ಮತ್ತು ಚರ್ಮದೊಂದಿಗೆ ಕೆಲಸಮಾಡಲು ಬಳಸುವ ಉಪಕರಣಗಳು

ತೊಗಲು ಅಥವಾ ಚಕ್ಕಳ ಅಥವಾ ಚರ್ಮ ಎಂದರೆ ಮಾನವನ ಬಳಕೆಗಾಗಿ ಸಂಸ್ಕರಿಸಲಾದ ಪ್ರಾಣಿಯ ಚರ್ಮ.

ಚರ್ಮ ಎಂಬ ಶಬ್ದಕ್ಕೆ ಪರ್ಯಾಯವಾಗಿ ಇಂಗ್ಲಿಷಿನಲ್ಲಿ ಸ್ಕಿನ್ ಮತ್ತು ಹೈಡ್ ಎಂಬ ಎರಡು ಪದಗಳು ಬಳಕೆಯಲ್ಲಿವೆ. ಸ್ಕಿನ್ ಪದ ಸಾಮಾನ್ಯವಾಗಿ ಚಿಕ್ಕ ಚಿಕ್ಕ ಪ್ರಾಣಿಗಳ (ಉದಾಹರಣೆಗೆ ಆಡು, ಕುರಿ, ಹಂದಿ, ಕರು) ಚರ್ಮಕ್ಕೆ ಅನ್ವಯಿಸುತ್ತದೆ. ಹೈಡ್ ಪದ ವಿಶೇಷವಾಗಿ ದೊಡ್ಡ ದೊಡ್ಡ ಪ್ರಾಣಿಗಳ (ಉದಾಹರಣೆಗೆ ಹಸು, ಕುದುರೆ, ಒಂಟೆ) ಚರ್ಮಕ್ಕೆ ಬಳಸಲಾಗುತ್ತಿದೆ. ತುಪ್ಪಳದಿಂದ ಕೂಡಿದ ಚರ್ಮಕ್ಕೆ ಫರ್ ಎಂದು ಹೆಸರು. ಕಚ್ಚಾ ಚರ್ಮಕ್ಕೆ ಹಲವೆಡೆ ಪೆಲ್ಟ್ ಎಂದೂ, ಅಂತಿಮವಾಗಿ ಸಂಸ್ಕರಿಸಿ ಸಿದ್ಧಪಡಿಸಿದ ಚರ್ಮಕ್ಕೆ ಲೆದರ್ ಎಂದೂ ಹೆಸರುಂಟು.

ಇತಿಹಾಸ

[ಬದಲಾಯಿಸಿ]

ಮಾನವ ಜಾತಿಯ ಉಗಮದಿಂದಲೂ, ನಾಗರಿಕತೆಯ ಆದಿಯಿಂದಲೂ ಚರ್ಮದ ವಿವಿಧ ರೀತಿಯ ಉಪಯೋಗಗಳನ್ನು ಕಾಣಬಹುದು. ಆದಿಮಾನವ ತನ್ನ ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುತ್ತಿದ್ದ. ಮಾಂಸವನ್ನು ತಿಂದ ಬಳಿಕ ಉಳಿದ ಚರ್ಮವನ್ನು ಉಡುಪಾಗಿ ಬಳಸಲಾರಂಭಿಸಿದ. ಕ್ರಮೇಣ ಚರ್ಮ ಆದಿವಾಸಿಗಳ ಪಾದರಕ್ಷೆಗಳಾಗಿಯೂ, ಅಲಂಕರಣ ಸಾಮಗ್ರಿಗಳಾಗಿಯೂ ಉಪಯೋಗಕ್ಕೆ ಬರತೊಡಗಿತು. ಬಾಯಾರಿದ ಆದಿಮಾನವ ನೀರನ್ನು ಸಂಗ್ರಹಿಸಿಡಲೂ ಚರ್ಮದ ಚೀಲಗಳನ್ನು ಬಳಸಲಾರಂಭಿಸಿದ. ಅವನ ವಾಸಸ್ಥಾನಗಳಿಗೆ ಚರ್ಮ ಹೊದಿಕೆಯಾಯಿತು. ಪ್ರಪಂಚದ ಪ್ರತಿಯೊಂದು ಜನಾಂಗದ ಸಂಸ್ಕೃತಿಯ ಪ್ರಾರಂಭದಲ್ಲೂ ಚರ್ಮದ ವಿವಿಧ ರೀತಿಯ ಬಳಕೆಯನ್ನು ಕಾಣಬಹುದು. ಸುಮಾರು 3,000 ವರ್ಷಗಳಷ್ಟು ಹಿಂದೆಯೇ ಈಜಿಪ್ಟಿನಲ್ಲಿ ಚರ್ಮದ ಕೆಲಸಗಾರರು ಕೆಲಸದಲ್ಲಿ ನಿರತರಾಗಿದ್ದ ದೃಶ್ಯವನ್ನು ಕೆತ್ತನೆಗಳಲ್ಲಿ ಇಂದೂ ಕಾಣಬಹುದಾಗಿದೆ. ಬ್ರಿಟಿಷ್ ಮ್ಯೂಸಿಯಮಿನಂಥ ವಸ್ತುಸಂಗ್ರಹಾಲಯಗಳಲ್ಲಂತೂ ಅತ್ಯಂತ ಪುರಾತನ ನಮೂನೆಯ ಪಾದರಕ್ಷೆಗಳೇ ಮೊದಲಾದ ಅಪೂರ್ವ ಚರ್ಮದ ವಸ್ತುಗಳು ಉಂಟು. ಚರ್ಮದ ಕೆಲಸ ಪ್ರಚಲಿತವಾಗಿದ್ದ ಒಂದು ಕಲೆ ಹಾಗೂ ವ್ಯಾಪಾರವಾಗಿತ್ತೆಂಬ ಅಂಶವನ್ನು ಯವನದೇಶದ ಅಭಿಜಾತ ಸಾಹಿತ್ಯ ಹಾಗೂ ಇತಿಹಾಸಗಳಲ್ಲಿ ಕಾಣಬಹುದು. ಕೆಲವು ಜಾತಿಯ ಮರಗಳ ತೊಗಟೆಗಳನ್ನು ಬಳಸಿ ಚರ್ಮ ಹದಮಾಡುವುದರ ತಿಳಿವಳಿಕೆ ಚರಿತ್ರಪೂರ್ವ ಮಾನವನಿಗೂ ಇತ್ತೆಂಬುದಕ್ಕೆ ಆಧಾರಗಳಿವೆ. ರೋಮನರ ಕಾಲದಲ್ಲಿ ಮರದ ತೊಗಟೆಯನ್ನು ಉಪಯೋಗಿಸಿ ಚರ್ಮವನ್ನು ಹದಮಾಡುತ್ತಿದ್ದರೆಂಬುದು ಪ್ಲೈನಿಯಿಂದ ತಿಳಿದುಬರುತ್ತದೆ. ಮಧ್ಯ ಶತಮಾನಗಳಲ್ಲಂತೂ ಚರ್ಮ ಹದಮಾಡುವ ಕಲೆ ಮಧ್ಯಪ್ರಾಚ್ಯ ದೇಶಗಳಲ್ಲಿ ಚೆನ್ನಾಗಿ ಅಭಿವೃದ್ಧಿಗೊಂಡು ಅನೇಕ ನಮೂನೆಯ ಚರ್ಮದ ಪದಾರ್ಥಗಳು ಮೂರ್ ಜನರ ಮೂಲಕ ಯೂರೋಪಿಗೆ ಬಂತು. ಒಂದು ದಾಖಲೆಯ ಪ್ರಕಾರ ಮೊದಲು ಈಜಿಪ್ಟಿಯನರು ಹೀಬ್ರೂಗಳಿಗೆ ಚರ್ಮದ ವಸ್ತುಗಳನ್ನು ತಯಾರಿಸಿ ಅವನ್ನು ಬಳಸುವುದರ ಬಗ್ಗೆ ಹೇಳಿಕೊಟ್ಟರೆಂದೂ ತಿಳಿಸಲಾಗಿದೆ. ಚರ್ಮವನ್ನು ಉಡುಪು ತಯಾರಿಸಲು, ನೆಲಕ್ಕೆ ಹಾಸಲು ಹಾಗೂ ರಕ್ಷಣೆಗಾಗಿ ಆಯುಧಗಳನ್ನು ತಯಾರಿಸಲು ಬಳಸುತ್ತಿದ್ದರೆಂದು ಪ್ರವಾದಿಗಳ ಹೇಳಿಕೆಯಿಂದ ತಿಳಿದಿದೆ. ಈಜಿಪ್ಟಿನ ಪಿರಮಿಡ್ಡುಗಳಲ್ಲಿ ದೊರೆತಿರುವ ದಾಖಲೆಗಳಂತೂ ಚರ್ಮದ ಇತಿಹಾಸ ಹಾಗೂ ಬಳಕೆಯನ್ನು ಕುರಿತ ಅತ್ಯಂತ ಪುರಾತನ ಹಾಗೂ ಪ್ರಮಾಣಿಕ ಇತಿವೃತ್ತಿಗಳೇ ಆಗಿವೆ.[] ಈ ದಾಖಲೆಗಳು ಸುಮಾರು 5,000 ವರ್ಷಗಳಷ್ಟು ಹಿಂದಿನವೆಂಬುದು ಗಮನಾರ್ಹ. ಮಧ್ಯ ಶತಮಾನಗಳಲ್ಲಿ ಮೊರಾಕೊ ಚರ್ಮ ಎಂಬುದು ಇಡೀ ಯೂರೋಪ್ ಖಂಡದಲ್ಲೆಲ್ಲ ಖ್ಯಾತಿವೆತ್ತದ್ದಾಗಿತ್ತು.[] ಸುಮಾರು 15ನೆಯ ಶತಮಾನದ ಹೊತ್ತಿಗಾಗಲೇ ಚರ್ಮದ ಕೈಗಾರಿಕೆ ಇನ್ನೂ ಚೆನ್ನಾಗಿ ಅಭಿವೃದ್ಧಿಗೊಂಡಿದ್ದು, ಪ್ರಮುಖ ನಗರಗಳಲ್ಲಿ ಇದಕ್ಕಾಗಿಯೇ ಹಲವಾರು ಸಂಘಸಂಸ್ಥೆಗಳು ಜನಿಸಿದ್ದುವು. ಸಸ್ಯಸಂಜಾತ ಟ್ಯಾನಿನನ್ನು ಉಪಯೋಗಿಸಿ ಚರ್ಮ ಹದಮಾಡುವ ವಿಶಿಷ್ಟ ಉಪಕರಣಗಳು 18ನೆಯ ಶತಮಾನದ ಹೊತ್ತಿಗಾಗಲೆ ಬಳಕೆಗೆ ಬಂದಿದ್ದವು. ರಾಸಾಯನಿಕ ದೃಷ್ಟಿಯಿಂದ ಟ್ಯಾನಿಕ್ ಆಮ್ಲದ ಪೂರ್ಣ ಪರಿಚಯ ಅಂದಿನ ವಿಜ್ಞಾನಿಗಳಿಗೆ ಇತ್ತಿಲ್ಲವಾದರೂ ಓಕ್ ಮರದ ತೊಗಟೆ,[] ಸೂಮಾಕ್,[] ವೆಲೊನಿಯಾ, ಹೆಮ್ಲೊಕ್ ಮೊದಲಾದ ಸಸ್ಯಸಂಬಂಧವಾದ ಪದಾರ್ಥಗಳನ್ನು ಚರ್ಮ ಹದಮಾಡಲು ಬಳಸಲಾಗುತ್ತಿತ್ತು.[] 19ನೆಯ ಶತಮಾನದಿಂದೀಚೆಗೆ ವಿದ್ಯುಚ್ಚಾಲಿತ ಯಂತ್ರೋಪಕರಣಗಳು ಬಳಕೆಗೆ ಬಂದುವು. ಚರ್ಮದ ತಂತ್ರವಿಜ್ಞಾನದ ಬಗ್ಗೆ ರಸಾಯನ, ಜೀವ ಹಾಗೂ ಚರ್ಮ ಸಂಬಂಧವಾದ ಇತರ ಶಾಸ್ತ್ರಗಳು ದೀರ್ಘ ಮತ್ತು ವ್ಯವಸ್ಥಿತವಾದ ಅಧ್ಯಯನಮಾಡಿ ಸಾಕಷ್ಟು ಜ್ಞಾನ ಹಾಗೂ ಮಾಹಿತಿಗಳನ್ನು ಒದಗಿಸಿವೆ. ಚರ್ಮದ ಕೈಗಾರಿಕೆಯಲ್ಲಿ ಕಳೆದ ಶತಮಾನದಲ್ಲೆಲ್ಲ ಆದ ಅತಿ ಮುಖ್ಯ ಬದಲಾವಣೆಯೆಂದರೆ ಕ್ರೋಮ್ ಲವಣಗಳ (chrome salts) ಉಪಯೋಗ. ವಾರಗಟ್ಟಲೆ ಕಾಲ ಬೇಡುತ್ತಿದ್ದ ಪ್ರಕ್ರಿಯೆಗಳನ್ನು ಇದರಿಂದಾಗಿ ದಿನಗಳಿಗೆ ಇಳಿಸಲಾಯಿತು. ಕೇವಲ ಕೆಲವೇ ಸಿದ್ಧಹಸ್ತರ ಕಲೆಯಾಗಿದ್ದ ಚರ್ಮದ ತಯಾರಿಕೆ ಭಾರಿ ಕೈಗಾರಿಕೆಯಾಗಿ ಅಭಿವೃದ್ಧಿಗೊಂಡಿತು.[] ಕಚ್ಚಾವಸ್ತುಗಳು ದೊರಕುವೆಡೆಗಳಲ್ಲೆಲ್ಲ ಚರ್ಮದ ಕೈಗಾರಿಕೆಯನ್ನು ಸ್ಥಾಪಿಸುವಂತಾಯಿತು.

ಚರ್ಮದ ಮುಖ್ಯ ವಿಧಗಳು

[ಬದಲಾಯಿಸಿ]

ಚರ್ಮದ ಕೈಗಾರಿಕೆ ಕೇವಲ ಒಂದು ಕೈಗಾರಿಕೆ ಮಾತ್ರವಲ್ಲ, ಕಡೇಪಕ್ಷ ಹತ್ತಾರು ಕೈಗಾರಿಕೆಗಳ ಸಮನ್ವಯ. ಸಾಮಾನ್ಯವಾಗಿ ದಪ್ಪ ಚರ್ಮ ಅಥವಾ ತೆಳು ಚರ್ಮಕ್ಕೇ ಸಂಬಂಧಿಸಿದ ಭಿನ್ನ ಭಿನ್ನ ಕೈಗಾರಿಕೆಗಳು, ಒಂದೊಂದು ಪ್ರಾಣಿಯ ಚರ್ಮಕ್ಕೇ ಸಂಬಂಧಿಸಿದ ಕೈಗಾರಿಕೆಗಳು ಬೇರೆ ಬೇರೆಯಾಗಿಯೇ ಇವೆ. ಅಮೆರಿಕದ ಚರ್ಮ ಹದಮಾಡುವವರ ಸಮಿತಿ ಪ್ರಚುರಪಡಿಸಿರುವ ಪದಕೋಶವೊಂದರ ಪ್ರಕಾರ ಕಚ್ಚಾಚರ್ಮವನ್ನು ಸಾಮಾನ್ಯವಾಗಿ ಮುಂದೆ ಕಾಣಿಸಿರುವಂತೆ ವಿಭಾಗ ಮಾಡಬಹುದು:

  1. ದನಕರು ವಿಭಾಗ,
  2. ಕುರಿ ಮೇಕೆ ವಿಭಾಗ,
  3. ಆಡು ವಿಭಾಗ,
  4. ಕುದುರೆ ವಿಭಾಗ,
  5. ಹಂದಿ ವಿಭಾಗ,
  6. ಜಿಂಕೆ ವಿಭಾಗ,
  7. ಎಮ್ಮೆ ವಿಭಾಗ,
  8. ಕಾಂಗರೂ-ವಲಾಬಿ ಕಾಂಗರೂ ವಿಭಾಗ,
  9. ಜಲಚರ ವಿಭಾಗ ಮತ್ತು
  10. ಗೌಣ ವಿಭಾಗ.

ಉಪಯೋಗಗಳು

[ಬದಲಾಯಿಸಿ]

ಹಸು, ಹೋರಿಗಳ ಚರ್ಮವನ್ನು ಪಾದರಕ್ಷೆಗಳ ಅಟ್ಟೆ ಹಾಗೂ ಮೇಲ್ಭಾಗ, ಕುದುರೆಗಳ ಜೀನು, ಲಗಾಮು, ಪ್ರಯಾಣಿಕರ ಚೀಲಗಳು, ಸೂಟ್‌ಕೇಸುಗಳು, ಬ್ರೀಫ್‌ಕೇಸುಗಳು, ಕೈವಸ್ತುಗಳು, ಯಂತ್ರಗಳ ಬೆಲ್ಟುಗಳು ಮುಂತಾದವನ್ನು ಮಾಡಲು ಬಳಸುವುದಲ್ಲದೆ ವಾಹನ ಪೀಠೋಪಕರಣ ಮುಂತಾದ ಸಜ್ಜುಗಾರಿಕೆ ಸಾಮಗ್ರಿಗಳನ್ನು ತಯಾರಿಸಲು ಕೂಡ ಉಪಯೋಗಿಸುತ್ತಾರೆ. ಇವೇ ಅಲ್ಲದೆ ಅಲಂಕರಣ ಚರ್ಮ ಸಾಮಗ್ರಿ, ಪುಸ್ತಕದ ರಕ್ಷಾಕವಚ, ಕ್ರೀಡಾಸಾಮಗ್ರಿ ಇತ್ಯಾದಿಗಳಿಗೂ ಚರ್ಮವನ್ನು ಬಳಸುವುದುಂಟು. ಮುದ್ರಣಕಲೆಯಲ್ಲೂ ಕೆಲಮಟ್ಟಿಗೆ ಚರ್ಮದ ಪಾತ್ರ ಉಂಟು. ಚಿಕ್ಕ ತಳಿಯ ದನಕರುಗಳ ಚರ್ಮವನ್ನು (ಇದಕ್ಕೆ ಕಿಪ್‌ಸ್ಕಿನ್ ಎಂಬ ಹೆಸರುಂಟು) ಬೂಟುಗಳ ಮೇಲ್ಭಾಗ, ಪ್ರಸಾದನ ವಸ್ತುಗಳು ಹಾಗೂ ಕೈಗವಸುಗಳನ್ನು ತಯಾರಿಸಲು ಬಳಸುತ್ತಾರೆ. ಕರುಗಳ ಚರ್ಮವನ್ನು ವಿಶೇಷವಾಗಿ ಮಿಲಿಟರಿ ಶಿರಸ್ತ್ರಾಣಗಳಿಗೆ ಹಾಗೂ ಕೈಕೆಲಸಗಳಿಗೆ ಉಪಯೋಗಿಸುವರು. ಉಳಿದ ಪ್ರಾಣಿಗಳ ಚರ್ಮವನ್ನು ಸಾಮಾನ್ಯವಾಗಿ ಪಾದರಕ್ಷೆಗಳಿಗೂ, ಸಾರಿಗೆ ಚೀಲಗಳಿಗೂ ಬಳಸುತ್ತಾರೆ. ಅಲಂಕರಣ ಸಾಮಗ್ರಿಗಳಲ್ಲಿ ಎಲ್ಲ ರೀತಿಯ ತೆಳುಚರ್ಮಗಳನ್ನು ಬಳಕೆಗೆ ತರಲಾಗುತ್ತದೆ. ಕುರಿ-ಮೇಕೆಗಳ ಚರ್ಮ, ಉಣ್ಣೆಚರ್ಮ, ತುಪ್ಪಳ ಚರ್ಮಗಳನ್ನು ವಿಶೇಷವಾಗಿ ಉಡುಪುಗಳನ್ನು ತಯಾರಿಸಲು ಹಾಗೂ ಖೇಚರರ ಉಡುಪುಗಳು, ಹ್ಯಾಟುಗಳು, ಪಾರ್ಚಮೆಂಟುಗಳು ಹಾಗೂ ಕೆಲವು ವಾದ್ಯಗಳನ್ನು ತಯಾರಿಸಲು ಬಳಸುತ್ತಾರೆ. ಆಸ್ಟ್ರಿಚ್, ಒಂಟೆ, ಲಾಮ, ಅಲ್ಪಾಕ ಮತ್ತು ಯಾಕ್ ಪ್ರಾಣಿಯ ಚರ್ಮಗಳನ್ನು ಪ್ರಸಾದನ ವಸ್ತುಗಳಿಗಾಗಿ ಉಪಯೋಗಿಸುತ್ತಾರೆ. ಹಲ್ಲಿ, ಉಡ, ಹಾವು, ಕತ್ತೆ ಮೊದಲಾದವುಗಳ ಚರ್ಮ ಸೂಕ್ಷ್ಮ ಪದಾರ್ಥಗಳನ್ನು ತಯಾರಿಸಲು ಉಪಯೋಗಕ್ಕೆ ಬರುತ್ತದೆ.

ಚರ್ಮದ ಸಂಸ್ಕರಣದಲ್ಲಿನ ಹಂತಗಳು

[ಬದಲಾಯಿಸಿ]

ಒದ್ದೆಯಾದ ಚರ್ಮ ಕ್ರಮೇಣ ದುಂಡಾಣುಜೀವಿಗಳ ಇಲ್ಲವೆ ಸೂಕ್ಷ್ಮಾಣುಜೀವಿಗಳ ದೆಸೆಯಿಂದ ಕೊಳೆಯತೊಡಗುತ್ತದೆ. ಇದನ್ನು ತಡೆಯಲು ಚರ್ಮವನ್ನು ಟ್ಯಾನಿಂಗ್ ಎಂಬ ರಾಸಾಯನಿಕ ಸಂಸ್ಕರಣಕ್ಕೆ ಒಳಪಡಿಸಿ ಸ್ಥಿರವಾದ ಹಾಗೂ ಕೊಳೆಯದಂಥ ಸ್ಥಿತಿಗೆ ತರಲಾಗುತ್ತದೆ. ಟ್ಯಾನಿಂಗ್ ಪ್ರಕ್ರಿಯೆಗೆ ಚರ್ಮ ಹದಮಾಡುವುದು ಎಂದು ಹೆಸರು. ಹದಮಾಡುವುದರಿಂದ ಚರ್ಮದಲ್ಲಿ ತನ್ನ ಸಾಮರ್ಥ್ಯ, ನಮ್ಯತೆ, ಪುಟಿತತೆ, ಘರ್ಷಣನಿರೋಧ ಮೊದಲಾದ ವಿಶೇಷ ಗುಣಗಳು ಉಂಟಾಗುತ್ತವೆ. ಅಲ್ಲದೇ ಅಧಿಕೋಷ್ಣತೆಗಳಲ್ಲೂ ಕರಗಿ ಹೋಗದಂಥ ರಾಸಾಯನಿಕ ಗುಣ ಒದಗಿಬರುತ್ತದೆ. ಹದಮಾಡದ ಚರ್ಮ ಸಾಮಾನ್ಯವಾಗಿ 1400 C ಉಷ್ಣತೆಯ ನೀರಿನಲ್ಲಿ ಕರಗಿ ಹೋಗುತ್ತದೆ. ಹದಮಾಡಿದ ಅನೇಕ ರೀತಿಯ ಚರ್ಮಗಳು ಮರಳುವ ನೀರಿನಲ್ಲಿ ಕೂಡ ಕರಗುವುದಿಲ್ಲ. ಚರ್ಮದ ಮತ್ತೊಂದು ಮುಖ್ಯ ಗುಣವೆಂದರೆ ಅದಕ್ಕಿರುವ ನೀರಾವಿ ಪಾರಗಮ್ಯತಾಗುಣ. ಅದರ ಎಳೆಗಳ ನಡುವಣ ಅಂತರ ಲೋಮನಾಳ ಕ್ರಿಯೆಯಿಂದ ಈ ಗುಣ ಚರ್ಮಕ್ಕೆ ಹೆಚ್ಚಿನ ಲಭ್ಯವಾಗುತ್ತದೆ. ಹಾಗಾಗಿ ಒಂದು ರೀತಿಯಲ್ಲಿ ರಂಧ್ರಮಯವಾಗಿರುವ ಚರ್ಮಕ್ಕೆ ಹೆಚ್ಚಿನ ಉಷ್ಣವಹನ ಸಾಮರ್ಥ್ಯ ಇರುವುದಿಲ್ಲ.

ಚರ್ಮವನ್ನು ಕಾಪಾಡುವಿಕೆ

[ಬದಲಾಯಿಸಿ]

ಪ್ರಾಣಿಯ ಹತ್ಯೆ ನಡೆದ ಬಳಿಕ ಉತ್ತಮ ದರ್ಜೆಯ ಚರ್ಮವನ್ನು ಹೊರ ತೆಗೆದು ಪರಿಶುದ್ಧವಾದ ಉಪ್ಪನ್ನು ಅದಕ್ಕೆ ಸೇರಿಸಿ ಸಂಸ್ಕರಿಸಬೇಕು. ಈ ಪ್ರಕ್ರಿಯೆಗೆ ಕ್ಯೂರಿಂಗ್ ಎಂದು ಹೆಸರು. ತರುವಾಯ ಇಂಥ ಸಂಸ್ಕರಿತ ಚರ್ಮವನ್ನು ಹದಮಾಡಲು ಕಾರ್ಖಾನೆಗಳಿಗೆ ಭಾರಿ ಮೊತ್ತದಲ್ಲಿ ಪೂರೈಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ದನಗಳ ಚರ್ಮ ಸಂಸ್ಕರಿಸುವ ಒಂದು ಹೊಸ ವಿಧಾನವನ್ನು ಅಭಿವೃದ್ಧಿಪಡಿಸುತ್ತ ಬಂದಿದ್ದಾರೆ. ಇದರಲ್ಲಿನ ಮುಖ್ಯ ಪ್ರಕ್ರಮಗಳೆಂದರೆ (i) ಚರ್ಮದಲ್ಲಿರುವ ರಕ್ತ ಹಾಗೂ ಕಶ್ಮಲಗಳನ್ನು ದೂರಮಾಡುವುದು; (ii) ಚರ್ಮಕ್ಕೆ ಅಂಟಿಕೊಂಡಿರುವ ಮಾಂಸ, ಕೊಬ್ಬು, ಬಂಧಕ ಊತಕಗಳೇ ಮೊದಲಾದವನ್ನು ಹೆರೆದುಹಾಕುವುದು; (iii) ಸಂತೃಪ್ತ ದ್ರಾವಣದಲ್ಲಿ 24-48 ಗಂಟೆಗಳವರೆಗೆ ಚರ್ಮದ ಪಟ್ಟಿಗಳನ್ನು ಮುಳುಗಿಸಿರುವುದು; (iv) ಸ್ವಲ್ಪ ಪ್ರಮಾಣದ ಉತ್ತಮ ದರ್ಜೆಯ ಉಪ್ಪನ್ನು ಅದಕ್ಕೆ ಸವರುವುದು. ಈ ರೀತಿ ಸಂಸ್ಕರಿಸಿದ ಚರ್ಮ ಮೂರು ದಿವಸಗಳಷ್ಟು ಅಥವಾ ಇನ್ನೂ ಕಡಿಮೆ ಕಾಲದಲ್ಲಿ ಪ್ರಕ್ರಿಯೆಗೆ ಒಳಗಾಗಿ ಪೂರ್ಣವಾಗಿ ಸಂಸ್ಕರಣಗೊಂಡು ಸಾಗಣೆಗೆ ತಕ್ಕುದಾಗುತ್ತದೆ.

ಚರ್ಮದ ಊತಕ ಜ್ಞಾನ

[ಬದಲಾಯಿಸಿ]

ಚರ್ಮವನ್ನು ವಿಭಿನ್ನ ಪ್ರಕ್ರಿಯೆಗಳಿಗೆ ಗುರಿಪಡಿಸಿದಾಗ ಯಾವ ಯಾವ ರೀತಿಯ ಬದಲಾವಣೆಗಳುಂಟಾಗುತ್ತವೆ ಎಂಬುದನ್ನು ಅರಿಯಲು ಚರ್ಮದ ಊತಕಜ್ಞಾನವನ್ನು (ಹಿಸ್ಟಾಲಜಿ) ತಿಳಿಯುವುದು ಅವಶ್ಯಕ. ಪ್ರಾಣಿಗಳ ಚರ್ಮದಲ್ಲಿ ಅನೇಕಾನೇಕ ರಾಸಾಯನಿಕ ಘಟಕಗಳಿವೆ: ಜೀವಂತ ಕೋಶಗಳು, ತಂತುಗಳು ಹಾಗೂ ಮೃತಕೋಶಗಳು. ಚರ್ಮದಲ್ಲಿ ಮುಖ್ಯವಾಗಿ ಮೂರು ಪದರಗಳಿವೆ: ಹೊರತ್ವಚ, ನಿಜತ್ವಚ ಮತ್ತು ಒಳತ್ವಚ. ರಚನೆಯ ದೃಷ್ಟಿಯಿಂದ ಇವು ಮೂರು ಬೇರೆ ಬೇರೆಯಾದವು. ಮೊದಲನೆಯದು ತೆಳ್ಳನೆಯ ಪೊರೆಯಾಗಿದ್ದು ಇದರ ಕೆಳಗೆ ಸ್ವಲ್ಪ ದಪ್ಪವಾದ ನಿಜತ್ವಚ ಉಂಟು. ಚರ್ಮದ ಕೆಳಭಾಗದಲ್ಲಿ ಮೂರನೆಯ ಪದರವಾಗಿ ಕೊಬ್ಬಿನ ಊತಕಗಳಿವೆ (ಇದನ್ನೇ ಮಾಂಸ ಎನ್ನುತ್ತೇವೆ). ಚರ್ಮವನ್ನು ಹದ ಮಾಡುವ ಮುನ್ನ ಹೊರತ್ವಚವನ್ನು ಪೂರ್ತಿಯಾಗಿ ತೆಗೆದುಹಾಕಬೇಕು. ವಾಸ್ತವವಾಗಿ ನಿಜತ್ವಚವನ್ನೇ ಹದಮಾಡಿದ ಚರ್ಮವಾಗಿ ಪರಿವರ್ತಿಸುವುದು. ಚರ್ಮದಲ್ಲಿನ ಎಳೆಗಳ ರಚನೆಯನ್ನು ಆಧರಿಸಿ ಚರ್ಮದ ತನನ ಸಾಮರ್ಥ್ಯ ಹಾಗೂ ಅನಮ್ಯತೆಗಳನ್ನು ನಿರ್ಧರಿಸಬಹುದು. ಈ ಬಿಳಿಯ ಎಳೆಗಳು ಕುಂದಿಲ್ಲದಂತೆ ಒಂದಕ್ಕೊಂದು ಎಷ್ಟು ಚೆನ್ನಾಗಿ ಬೇರ್ಪಟ್ಟಿರುವವೊ ಅಷ್ಟು ಚೆನ್ನಾಗಿ ಸಿದ್ಧಪಡಿಸಿದ ಚರ್ಮ ಸುಂದರವಾಗಿರುತ್ತದೆ. ನಿಜತ್ವಚದ ಭಾಗದಲ್ಲಿ ಬಂಧಕ ಊತಕಗಳಿದ್ದು ವಿಭಿನ್ನವಾಗಿ ಹರಡಿರುವ ಕೊಬ್ಬಿನ ಜೀವಕೋಶಗಳಿರುತ್ತವೆ. ಕೊಲ್ಲಾಜಿನ್ ಎಳೆಗಳ ನಡುವೆ ಹೆಚ್ಚಿನ ಸಂಖ್ಯೆಯ ಕೊಬ್ಬಿನ ಜೀವಕೋಶಗಳು ಹಂಚಿ ಹೋಗಿದ್ದರೆ ಚರ್ಮ ಮೃದುವಾಗಿ ಸ್ಪಂಜಿನಂತಾಗುವುದು. ಕೊಲ್ಲಾಜಿನಿನ ಬಿಳಿಯ ಎಳೆಗಳೇ ಅಲ್ಲದೇ ಇದಕ್ಕೂ ವಿಭಿನ್ನವಾದ ರಾಸಾಯನಿಕ ಸಂಘಟನೆಯುಳ್ಳ ಹಳದಿ ಎಳೆಗಳೂ ಇರುವುದುಂಟು. ಇವು ಪ್ರೋಟೀನ್ ಎಲಾಸ್ಟಿನುಗಳಿಂದ ಕೂಡಿವೆ. ಅಂತಿಮವಾಗಿ ಇವು ಚರ್ಮದ ಗುಣಗಳ ಮೇಲೆ ಪ್ರಭಾವ ಬೀರುವವು.

ಚರ್ಮದಲ್ಲಿ ಸಾಮಾನ್ಯವಾಗಿ ಇರುವ ಅಂಶಗಳೆಂದರೆ - ನೀರು, ಪ್ರೋಟೀನುಗಳು, ಕೊಬ್ಬಿನ ಅಂಶ, ಕಾರ್ಬೊಹೈಡ್ರೇಟುಗಳು ಹಾಗೂ ಖನಿಜಾಂಶಗಳು. ಬೇರೆ ಬೇರೆ ಜೀವಿಗಳ ವಯಸ್ಸು, ಲಿಂಗ, ಆಹಾರಪದ್ಧತಿ, ಪರಿಸರದ ವಾಯುಗುಣ ಇವನ್ನು ಆಧರಿಸಿ ಈ ಪ್ರಮಾಣಗಳು ಬೇರೆ ಬೇರೆಯಾಗಿರುವುದು ಸಹಜವೆ. ಇವೇ ಅಲ್ಲದೆ ಚರ್ಮದಲ್ಲಿ ಎಂಜೈ಼ಮುಗಳೂ, ದಂಡಾಣುಜೀವಿಗಳೂ ಇರುವುದುಂಟು. ದನಕರುಗಳ ಒಳತ್ವಚದಲ್ಲಂತೂ ಪ್ರೋಟೀನ್ ಅಂಶದ 35% ಭಾಗ ಕೊಲ್ಲಾಜಿನ್ ಇರುತ್ತದೆ. ಕೊಬ್ಬಿನ ಅಂಶದಲ್ಲಿ ಗ್ಲಿಸರೈಡುಗಳೇ ಅಲ್ಲದೆ ಇನ್ನೂ ಅನೇಕ ಪದಾರ್ಥಗಳಿವೆ. ಚರ್ಮದಲ್ಲಿರುವ ಗ್ರೀಸಿನ ಭಾಗ ಸಾಮಾನ್ಯವಾಗಿ ಕಡಿಮೆಯಾಗಿದ್ದು ಅದನ್ನು ಸುಣ್ಣ ಸಾಬೂನುಗಳಾಗಿ ಪರಿವರ್ತಿಸಿ ಅವು ತೇಲಿಕೊಂಡು ಹೊರಟುಹೋಗುವಂತೆ ಮಾಡಲಾಗುತ್ತದೆ. ಗ್ರೀಸ್ ಭಾಗ ಹೆಚ್ಚಿದ್ದಲ್ಲಿ ಅಂತಿಮವಾಗಿ ಸಿದ್ಧಪಡಿಸಿದ ಚರ್ಮದಲ್ಲೂ ಅದು ಕಂಡುಬರುತ್ತದೆ. ಖನಿಜಾಂಶದಲ್ಲಿ ಮುಖ್ಯವಾಗಿ ಸೋಡಿಯಮ್ ಕ್ಲೋರೈಡ್ (NaCl) ಇದ್ದು ಅದರ ಜೊತೆಗೆ ಕಡಿಮೆ ಪ್ರಮಾಣದಲ್ಲಿ ಕ್ಯಾಲ್ಸಿಯಮ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮುಗಳ ಸಲ್ಫೇಟ್, ಕ್ಲೋರೈಡ್ ಮತ್ತು ಫಾಸ್ಪೇಟುಗಳಿರುತ್ತವೆ. ಕಾರ್ಬೊಹೈಡ್ರೇಟುಗಳ ಪೈಕಿ ಪ್ರಧಾನವಾಗಿ ಗ್ಲೈಕೊಜೆನ್ ಇರುವುದು ಕಂಡುಬರುತ್ತದೆ. ಚರ್ಮಕ್ಕೆ ತುರ್ತು ಬೇಡಿಕೆ ಇಲ್ಲದಿದ್ದಾಗ ಇಲ್ಲವೆ ವ್ಯಾಪಾರದಲ್ಲಿ ವಿನಿಮಯ ಮಾಡಿಕೊಳ್ಳಬೇಕಾದ ಸಂದರ್ಭವೊದಗಿದಾಗ ಅದನ್ನು ಶೈತ್ಯಾಗಾರದಲ್ಲಿ 300 ಸೆ. ಉಷ್ಣತೆಯಲ್ಲಿಟ್ಟು ಸಂರಕ್ಷಣೆ ಮಾಡಬಹುದು. ಈ ರೀತಿಯಾಗಿ ಕಚ್ಚಾಚರ್ಮವನ್ನು ಕಡೆಯ ಪಕ್ಷ ಐದು ವರ್ಷಗಳವರೆಗಾದರೂ ಸಂರಕ್ಷಿಸಿ ಇಡಬಹುದು. ಹೆಚ್ಚೆಂದರೆ ಅವುಗಳ ಮೇಲೆ ಕೆಲವು ಕಲೆಗಳಾಗಬಹುದಷ್ಟೆ.

ಹದಮಾಡುವಿಕೆ (ಟ್ಯಾನಿಂಗ್)

[ಬದಲಾಯಿಸಿ]

ಹದಮಾಡುವ ಪೂರ್ವಭಾವಿ ಕ್ರಮಗಳಲ್ಲಿ ಮೊದಲನೆಯದು ನೆನೆಹಾಕುವುದು. ಚರ್ಮವನ್ನು ಸೀಳುಗುಂಡಿಯಿರುವ ತೆರೆದ ಕೊಳಗಗಳಲ್ಲಿ ಹಾಕುತ್ತಾರೆ. ಟೊಳ್ಳು ಇರಚಿಯಿಂದ ನೀರು ಹರಿಯುತ್ತಿರುವಂತೆಯೇ ಇದನ್ನು ತಿರುಗಿಸಲಾಗುತ್ತದೆ. ಕೊಳಗದ ತೆರೆದ ಜಾಗಗಳಿಂದ ಕೊಳೆ ನೀರೆಲ್ಲ ಹೊರಗೆ ಹೋಗುತ್ತಿರುವುದು. ತಿರುಗಣೆ ಕೆಲಸವನ್ನು ಬಹಳ ನಿಧಾನವಾಗಿ ಎಚ್ಚರಿಕೆಯಿಂದ ನಡೆಸಬೇಕು. ಇಲ್ಲದಿದ್ದರೆ ತೇವವಾಗಿಲ್ಲದ ಚರ್ಮದ ಭಾಗಗಳಲ್ಲಿ ಶೀಘ್ರ ಚಲನೆಯಿಂದ ಒಡಕುಗಳುಂಟಾಗಿ ಚರ್ಮ ಬಿರಿದು ತನ್ನ ಗುಣಗಳನ್ನೆಲ್ಲ ಕಳೆದುಕೊಂಡು ಅಳ್ಳಕವಾಗುತ್ತದೆ. ಮೊದಲ ತೊಳೆತದ ಅನಂತರ ಚರ್ಮವನ್ನು ಬೇರೊಂದು ಹುಟ್ಟು ಇರುವಂಥ ಕೊಳಗಕ್ಕೆ ರವಾನಿಸುತ್ತಾರೆ. ಇಲ್ಲಿ ಅದನ್ನು ಚೆನ್ನಾಗಿ ತಣಿವು ಮಾಡುತ್ತಾರೆ. ಚರ್ಮ ಅಗತ್ಯಕ್ಕಿಂತ ಹೆಚ್ಚು ಒಣಗಿಹೋಗಿದ್ದಲ್ಲಿ ಮೆದುಮಾಡಲು ಸೋಡಿಯಮ್ ಸಲ್ಫೈಡ್, ಸೋಡಿಯಮ್ ಪಾಲಿಸಲ್ಫೈಡ್ ಅಥವಾ ಸೋಡಾ ಬೂದಿಯಂಥ ಕ್ಷಾರಗಳನ್ನು ಬಳಸುವರು.[] ತೂಕರೀತ್ಯ ಒಂದು ಭಾಗ ಚರ್ಮಕ್ಕೆ ನಾಲ್ಕು ಭಾಗ ತೇವವಿದ್ದರೆ ಚರ್ಮ ಅತ್ಯುತ್ತಮವೆಂದೂ, ಕುರಿ, ಆಡಿನಂಥ ಒಣಗಿದ ಚರ್ಮಗಳಿಗೆ 1:8 ಪ್ರಮಾಣ ಅತ್ಯುತ್ತಮವೆಂದೂ ಪ್ರಯೋಗದಿಂದ ತಿಳಿದುಬಂದಿದೆ. ಇಲ್ಲಿಯೂ ಚರ್ಮ ಅನೇಕ ವಿಧದ ದಂಡಾಣುಜೀವಿಗಳಿಂದ ಕಲುಷಿತಗೊಂಡಿರಬಹುದಾದ್ದರಿಂದ ಈ ಹಂತದಲ್ಲಿ ಇನ್ನೊಂದು ಸ್ವಲ್ಪ ಪೂತಿನಾಶಕವನ್ನು ನೆನೆಹಾಕುವ ನೀರಿಗೆ ಸೇರಿಸಲಾಗುತ್ತದೆ. ಮೊದಲ ತೊಳೆತದಲ್ಲಿ ಸಂಸ್ಕರಣ ಲವಣದ ಒಂದು ಭಾಗವನ್ನು ತೆಗೆದು ಹಾಕಲಾಗುವುದು; ಆದರೆ ಇದು ಸ್ವಲ್ಪ ಪ್ರಮಾಣದಲ್ಲಿ ಇರುವುದು ಅವಶ್ಯಕ. ಏಕೆಂದರೆ ಕೆಲವು ಎಳೆಗಳ ನಡುವೆ ಇರಬಹುದಾದ ಗೋಳೀಯ ಪ್ರೋಟೀನುಗಳು ಉಪ್ಪಿನ ದ್ರಾವಣದಲ್ಲಿ ಕರಗಿಹೋಗಿ ಚರ್ಮದ ಹೊರಲಕ್ಷಣಗಳು ಚೆನ್ನಾಗಾಗುವಂತೆ ಮಾಡುವುದು. ನೇರವಾಗಿ ಉಪ್ಪಿನ ದ್ರಾವಣದಿಂದ ಸಂಸ್ಕರಿಸಿದ ಚರ್ಮಗಳನ್ನು ಇನ್ನೂ ಕಡಿಮೆ ಕಾಲ ನೆನೆಹಾಕುವುದು ಒಳ್ಳೆಯದು. ಅನಂತರ ನಡೆಸುವ ಕೂದಲು ತೆಗೆಯುವ ಕ್ರಿಯೆಗೆ ಬಾಧಕವಾಗದ ಪ್ರಮಾಣದಲ್ಲಿ ಮಾತ್ರ ನೆನೆಹಾಕುವ ಕ್ರಿಯೆಯನ್ನು ನಡೆಸಬೇಕು. ಹೊಸದಾದ ಕಚ್ಚಾ ಚರ್ಮವನ್ನು ಮೂರು ನಾಲ್ಕು ಗಂಟೆಗಳ ಕಾಲ ಉಪ್ಪು ನೀರಿನ ತೊಟ್ಟಿಯಲ್ಲಿ ನೆನೆಹಾಕಿ ಸಂಸ್ಕರಣವಾದ ಬಳಿಕ ಸುಣ್ಣದ ದ್ರಾವಣದ ಕ್ರಿಯೆಗೆ ಅದನ್ನು ಯೋಗ್ಯವನ್ನಾಗಿ ಮಾಡುವರು.

ಫರ್ ಅಥವಾ ಕೆಲವು ಯಾಂತ್ರಿಕ ಚರ್ಮಗಳನ್ನು ಬಿಟ್ಟರೆ, ಮಿಕ್ಕೆಲ್ಲ ನಮೂನೆಯ ಚರ್ಮಗಳನ್ನೂ ಕೂದಲು ತೆಗೆದು ಹದಮಾಡಲಾಗುವುದು. ನೆನೆಹಾಕಿದ ಚರ್ಮದ ಪಟ್ಟಿಗಳನ್ನು ಸುಣ್ಣದ ತೊಟ್ಟಿಯಲ್ಲಿ ಹಾಕಿ ಕೂದಲನ್ನು ತೆಗೆಯಲಾಗುವುದು. ಚರ್ಮದ ತೂಕವನ್ನು ಆಧರಿಸಿ ಇದರ 10%-12%ರಷ್ಟು ಜಲೀಯ ಸುಣ್ಣದೊಡನೆ ಅದನ್ನು ಕೂಡಿಸಿಟ್ಟಲ್ಲಿ 5-8 ದಿವಸಗಳಲ್ಲಿ ಚರ್ಮದ ಮೇಲಿನ ಎಲ್ಲ ಕೂದಲುಗಳು ಸಡಿಲವಾಗುವುವು. ಈ ಅವಧಿಯನ್ನು ಕಡಿಮೆಮಾಡಿ ಕ್ರಿಯೆ ಕ್ಷಿಪ್ರವಾಗಿ ನಡೆಯುವಂತೆ ಮಾಡಲು ಸಲ್ಫೈಡ್, ಅಮೈನ್ ಅಥವಾ ಸಯನೈಡುಗಳನ್ನು ಬಳಸುವರು. ಈ ಸುಣ್ಣ ಸಂಸ್ಕರಣದಲ್ಲಿ ಉಷ್ಣತೆ 70 –750 C ಇರುವುದು ಅಗತ್ಯ. ಸುಣ್ಣದ ಪ್ರಕ್ರಿಯೆಯಿಂದ ಕೂದಲನ್ನು ಸರಿಯಾಗಿ ಸಡಿಲಮಾಡಿದ ಮೇಲೆ ಚರ್ಮದ ಪಟ್ಟೆಗಳನ್ನು ಸುಣ್ಣದ ತೊಟ್ಟಿಗಳಿಂದ ಹೊರತೆಗೆದು ಯಂತ್ರಗಳ ಸಹಾಯದಿಂದ ಕೂದಲುಗಳನ್ನು ಹೆರೆದು ತೆಗೆಯಲಾಗುವುದು. ಯಂತ್ರದಿಂದಲೇ ಬಹಳಷ್ಟು ಕೂದಲೆಲ್ಲ ಉದುರಿಹೋಗುವುದು, ಉಳಿದವನ್ನು ದಂಡದಿಂದ ಹೊಡೆದು ಕೈಗಳಿಂದಲೇ ತೆಗೆಯಲಾಗುತ್ತದೆ. ಕೂದಲನ್ನು ತೊಳೆದು ಒಣಗಿಸಿ ತೂಕಮಾಡಿ ಒಂದು ಉಪೋತ್ಪನ್ನವಾಗಿ ಮಾರುತ್ತಾರೆ. ಕೆಲವೆಡೆಗಳಲ್ಲಿ ಚರ್ಮದ ಪಟ್ಟೆಗಳನ್ನು ಹುಟ್ಟು ಇರುವ ಪೀಪಾಯಿಗಳಲ್ಲಿ ಹಾಕಿ ಪ್ರಬಲವಾದ ಸೋಡಿಯಮ್ ಸಲ್ಫೈಡ್ ದ್ರಾವಣದ ಜೊತೆ ಕ್ರಿಯೆ ನಡೆಸುವರು. ಆದರೆ ಇಲ್ಲಿ ಕೂದಲು ನಾಶಗೊಂಡು ಒಳ್ಳೆಯ ಉಪೋತ್ಪನ್ನ ಹೊರಬರಲಾರದು. ಕೂದಲಿನ ಜೊತೆಯಲ್ಲಿ ಚರ್ಮದ ಮೇಲ್ಭಾಗ ಹಾಳಾಗದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಹದಮಾಡುವ ಮೊದಲು ಚರ್ಮವನ್ನು ಇನ್ನೂ ಕೆಲವು ಹಂತಗಳಲ್ಲಿ ಸಜ್ಜುಗೊಳಿಸುವುದು ಅಗತ್ಯ. 60-700 C ಉಷ್ಣತೆಯ ಹರಿವ ನೀರಿನ ಮೂಲಕ ಹಾಯಿಸುವುದರಿಂದ ಮೇಲಣ ತಲದ ಸುಣ್ಣವನ್ನೂ, ಕೆಲವು ಪ್ರೋಟೀನ್ ವಿಭಜನ ಉತ್ಪನ್ನಗಳನ್ನೂ ತೊಡೆದು ಹಾಕಲಾಗುವುದು. ಸಂಪೂರ್ಣ ನಿಯಂತ್ರಣದಲ್ಲಿ ಆಮ್ಲೀಯ ದ್ರಾವಣಗಳನ್ನೊಳಗೊಂಡ ಪೀಪಾಯಿಗಳಲ್ಲಿ ನೆನೆಸಿ ಹುಟ್ಟು ಹಾಕುವುದರಿಂದ ಸುಣ್ಣದ ಭಾಗವನ್ನು ಸಾಕಷ್ಟು ಪೂರ್ತಿಯಾಗಿ ತೆಗೆದುಹಾಕಲಾಗುವುದು. ಹದಮಾಡಬೇಕಾದ ಮೊದಲಿಗೆ ಚರ್ಮದಲ್ಲಿ ಅವಶ್ಯಕವಾಗಿ ಇರಬೇಕಾದ ಲಘು ಆಮ್ಲ ಸಮತೋಲನೆ ಇದರಿಂದ ಉಂಟಾಗುತ್ತದೆ. ಹೊರಬರಬೇಕಾದ ಚರ್ಮದ ಗುಣಮಟ್ಟಗಳು ಯಾವ ರೀತಿ ಇರಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಸುಣ್ಣ ತೆಗೆಯುವ ಪ್ರಕ್ರಿಯೆಯಲ್ಲಿ pH ಮೌಲ್ಯವನ್ನು ಆರಿಸಿಕೊಳ್ಳಬಹುದು. ಅಟ್ಟೆಗಳು, ಬೆಲ್ಟುಗಳು ಹಾಗೂ ಕೈಗಾರಿಕೆ ಬಳಕೆಯ ಚರ್ಮದ ವಸ್ತುಗಳನ್ನು ತಯಾರಿಸಬೇಕಾದಾಗ ಮೇಲ್ಭಾಗದ ಕ್ಷಾರದ ಅಂಶವನ್ನು ತೊಡೆದುಹಾಕಿದರಷ್ಟೆ ಸಾಕು. ಹಗುರವಾದ ಚರ್ಮಗಳಲ್ಲಿ ಚರ್ಮದ ಅಡ್ಡಛೇಧಗಳಲ್ಲಿ ಏಕರೀತಿಯ pH ಇರುವಂತೆ ಆಮ್ಲೀಕರಣ ಪ್ರಕ್ರಿಯೆಯನ್ನು ನಡೆಸಲಾಗುವುದು. ಸುಣ್ಣಹಾಕುವ ಪ್ರಕ್ರಿಯೆಯಲ್ಲಿ ಅನೇಕ ಭೌತ ಹಾಗೂ ರಾಸಾಯನಿಕ ಬದಲಾವಣೆಗಳು ತಮಗೆ ತಾವೆ ಉಂಟಾಗುವುವು. ಕ್ಷಾರೋದಕದಲ್ಲಿ ನೆನೆಹಾಕುವ (ಬೇಟಿಂಗ್) ಮುಂದಿನ ಪ್ರಕ್ರಿಯೆಯಲ್ಲಿ ಚರ್ಮದ ಪಟ್ಟಿಗಳನ್ನು ಅಮೋನಿಯಮ್ ಸಲ್ಫೇಟ್ ಅಥವಾ ಕ್ಲೋರೈಡ್ ಹಾಗೂ ಆರಿಸಿ ಪ್ರೋಟೀನುಗಳನ್ನು ತೆಗೆದುಹಾಕುವ ಕೆಲವು ಎಂಜೈಮುಗಳಿರುವ ಪೀಪಾಯಿಗಳಲ್ಲಿ ಇರಿಸಲಾಗುವುದು. ಕ್ಷಾರೋದಕದಲ್ಲಿ ನೆನೆಹಾಕುವುದರಿಂದಾಗಿ ಚರ್ಮದ ಮೇಲಣ ಭಾಗದ ನ್ಯೂನತೆಗಳೆಲ್ಲ ನಾಶಹೊಂದಿ ಎಲಾಸ್ಟಿನ್ ಎಳೆಗಳು ಜಲಸಂಯೋಜನಗೊಳ್ಳುವುವು. pH ಬೆಲೆಗಳು ನಿಯಂತ್ರಣಗೊಂಡು ಚರ್ಮದಿಂದ ಸುಣ್ಣ ತೆಗೆಯುವ ಪ್ರಕ್ರಿಯೆಗೆ ಅನುವಾಗುವುದು. ಸಾಮಾನ್ಯವಾಗಿ ಅನೇಕ ನಮೂನೆಯ ಚರ್ಮಗಳನ್ನು ಕ್ಷಾರೋದಕದಲ್ಲಿ ಹದಮಾಡುವೆಡೆಗಳಿಗೆ ಕಳುಹಿಸಿಬಿಡುವರು. ಆದರೆ ಕೆಲವು ರೀತಿಯ ಚರ್ಮಗಳನ್ನು, ವಿಶೇಷವಾಗಿ ಕ್ರೋಮ್ ವಿಧಾನದಲ್ಲಿ ಹದಮಾಡಬೇಕಾದ ಚರ್ಮಗಳನ್ನು, ಆಮ್ಲದ್ರಾವಣ ಸಂಸ್ಕರಣಕ್ಕೆ (ಪಿಕ್ಲಿಂಗ್) ಗುರಿಮಾಡಬೇಕಾಗುತ್ತದೆ. ಈ ಪ್ರಕ್ರಿಯೆ ಸಲ್ಫ್ಯೂರಿಕ್ ಆಮ್ಲ ಹಾಗೂ ನಿರ್ದಿಷ್ಟ ಸಾರತೆಯ ಲವಣದ ತೊಟ್ಟಿಯಲ್ಲಿ ಚರ್ಮದ ಪಟ್ಟೆಗಳನ್ನು ಸಮತೋಲನ ಸ್ಥಿತಿಗೆ ತರುವಲ್ಲಿ ಅನುವಾಗುತ್ತದೆ. ಇಂಥ ದ್ರಾವಣದಲ್ಲಿ ಚರ್ಮವನ್ನು ಕ್ರಿಯೆಗೆ ಒಳಪಡಿಸುವುದರಿಂದ ಅದರಲ್ಲಿ ಏಕರೀತಿಯ ಆಮ್ಲೀಯ ಗುಣ ಉಂಟಾಗಿ ಚರ್ಮ ಇನ್ನೂ ಶುದ್ಧಿಗೊಂಡು ಮೃದುವಾಗುತ್ತದೆ.

ಹೀಗೆ ಚರ್ಮವನ್ನು ಸಿದ್ಧಪಡಿಸಿಕೊಂಡ ಬಳಿಕ ಅದನ್ನು ಹದಮಾಡುವರು (ಟ್ಯಾನಿಂಗ್). ಮೊದಲಿಗೆ ಚರ್ಮ ಹದಮಾಡಲು ಟ್ಯಾನಿನ್ ಅಥವಾ ಟ್ಯಾನಿಕ್ ಆಮ್ಲ ಎಂಬ ಪದಾರ್ಥವನ್ನು ಒಳಗೊಂಡ ಸಸ್ಯಗಳನ್ನು ಬಳಸುತ್ತಿದ್ದರು. ಆದರೆ ಈಚೆಗೆ ಚರ್ಮದ ತಯಾರಿಕೆಯ ತಾಂತ್ರಿಕ ಜ್ಞಾನ ಹೆಚ್ಚಿದಂತೆ ಅನೇಕ ರಾಸಾಯನಿಕಗಳನ್ನೂ, ವೈಜ್ಞಾನಿಕ ಪ್ರಕ್ರಿಯೆಗಳನ್ನೂ ಉಪಯೋಗಿಸಿ ಚರ್ಮ ಹದ ಮಾಡಬಹುದಾಗಿದೆ. ಆದರೂ ಕೆಲವು ದರ್ಜೆಯ ಚರ್ಮಗಳನ್ನು ತಯಾರಿಸಲು ಸಸ್ಯಸಂಬಂಧವಾದ ಈ ವಿಧವೇ ಸೂಕ್ತವಾಗಿದೆ. ಕ್ರೋಮ್ ಸಂಯುಕ್ತಗಳನ್ನು ಉಪಯೋಗಿಸಿ ಹದಮಾಡುವ ಪ್ರಕ್ರಿಯೆ ಉತ್ಪಾದನೆಯ ಪರಿಮಾಣದ ದೃಷ್ಟಿಯಿಂದ ಅತ್ಯಂತ ಮಹತ್ತ್ವಪೂರ್ಣವಾದುದು. ಆಧುನಿಕ ಹದಮಾಡುವ ವಿಧಾನಗಳಲ್ಲಿ ಫೀನಾಲ್ ಹಾಗೂ ಹೈಡ್ರೊಕಾರ್ಬನ್ನುಗಳನ್ನು ಒಳಗೊಂಡ ಅನೇಕ ಸಂಶ್ಲೇಷಿತ ಪದಾರ್ಥಗಳನ್ನು ಬಳಕೆಗೆ ತರಲಾಗುತ್ತಿದೆ. ಈ ಪದಾರ್ಥಗಳಲ್ಲಿ ಚರ್ಮ ಹದಮಾಡುವ ವಿಶೇಷ ಗುಣಗಳಿವೆ. ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಫೀನೊ-ಸಲ್ಫಾನಿಕ್ ಆಮ್ಲಗಳೊಡನೆ ಫಾರ್ಮಾಲ್ಡಿಹೈಡನ್ನು ಬೆರೆಸುವುದರ ಮೂಲಕ ಸಾಮಾನ್ಯವಾಗಿ ಈ ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಾರೆ. ಈ ಉತ್ಪನ್ನಗಳನ್ನು ಸಿಂಟಾನುಗಳೆಂದು (syntans) ಕರೆಯುವುದುಂಟು. ಇವನ್ನು ಸ್ವಾಭಾವಿಕವಾದ ಸಸ್ಯಸಂಜಾತ ಹದಮಾಡುವ ಪ್ರಕ್ರಿಯೆಗಳಲ್ಲಿ ಮತ್ತೆ ಮತ್ತೆ ಹದಮಾಡಲು ಬಳಸುತ್ತಾರೆ. ಹದಮಾಡಲು ಸಿಂಟಾನುಗಳನ್ನು ಸಹಾಯಕ ವಸ್ತುಗಳಾಗಿ ಬಳಸಿದಲ್ಲಿ ಉತ್ತಮವಾಗಿ ಬೇರೂರಿದ ಬಣ್ಣ, ಗ್ರೀಸಿನ ಇಳಿತ ಮೊದಲಾದ ಗುಣಗಳು ಉಂಟಾಗುವುವು. ಸಿಂಟಾನುಗಳೇ ಅಲ್ಲದೆ ರೆಸಿನ್ ಅಥವಾ ರಾಳ ವರ್ಗಕ್ಕೆ ಸೇರಿದ ಕೆಲವು ಪದಾರ್ಥಗಳನ್ನು ಬಳಸಿ ಹದಮಾಡುವ ಪದ್ಧತಿ ಅಷ್ಟು ಭಾರಿ ಗಾತ್ರದಲ್ಲಿ ಅಲ್ಲದಿದ್ದರೂ ಸುಮಾರಾಗಿ ಬಳಕೆಗೆ ಬರುತ್ತಿದೆ.

ಸಾಮಾನ್ಯವಾಗಿ ನಾಲ್ಕು ಭಿನ್ನಭಿನ್ನ ವಿಧಾನಗಳಿಂದ ಚರ್ಮವನ್ನು ಹದ ಮಾಡಬಹುದು:

ಸಸ್ಯಸಂಜಾತ ಪದಾರ್ಥಗಳಿಂದ ಹದ ಮಾಡುವಿಕೆ

ಮೊದಲ ಪ್ರಕ್ರಿಯೆಯಲ್ಲಿ ಟ್ಯಾನಿನ್ ಹೊಂದಿರುವ ಮರದ ಕಾಂಡ ಅಥವಾ ತೊಗಟೆಗಳನ್ನು ಕಚ್ಚಾ ಚರ್ಮದ ಮೇಲೆ ಪ್ರಕ್ರಿಯೆ ಉಂಟು ಮಾಡಲು ಬಿಡುವರು. ಟ್ಯಾನಿಂಗ್ ವಸ್ತುಗಳಲ್ಲಿರುವ ಫೀನಾಲ್ ಮತ್ತು ಹೈಡ್ರಾಕ್ಸಿಲ್ ಗುಚ್ಛಗಳು ಚರ್ಮದ ವಸ್ತುವಿನಲ್ಲಿರುವ ಪ್ರೋಟೀನುಗಳೊಡನೆ ಪ್ರತಿಕ್ರಿಯೆಗೊಳಗಾಗುವುವು. ಸಸ್ಯ ಸಮುದಾಯದಲ್ಲಿ ಟ್ಯಾನಿನನ್ನು ಒಳಗೊಂಡಿರುವ ಅನೇಕ ಸಸ್ಯಗಳಿದ್ದರೂ ಮೊದಲಿಗೆ ಓಕ್ ಮರದ ತೊಗಟೆಯನ್ನು ಟ್ಯಾನಿನಿಗಾಗಿ ಬಳಸುತ್ತಿದ್ದುದುಂಟು.

ದಪ್ಪ ಚರ್ಮಗಳನ್ನು ಈ ವಿಧಾನದ ಮೂಲಕ ಹದಮಾಡುವ ಪ್ರಕ್ರಿಯೆ ಸಾಮಾನ್ಯವಾಗಿ ಮೂರು ಹಂತಗಳಲ್ಲಿ ನಡೆಯುತ್ತದೆ.

  • ಮೊದಲಿಗೆ ಚರ್ಮದ ಪಟ್ಟೆಗಳನ್ನು ಕ್ರಮವಾಗಿ ಸಾರತೆ ಹೆಚ್ಚುತ್ತಿರುವ ಸಾರರಿಕ್ತ ದ್ರಾವಣಗಳ ಒಂದು ಶ್ರೇಣಿಯಲ್ಲಿ ತೂಗುಹಾಕಿ ಬಣ್ಣ ಕೊಡುವರು. ಈ ಹಂತದಲ್ಲಿ ಚಲಿಸುವ ಇಲ್ಲವೆ ಆಂದೋಲಿಸುವ ಪೀಪಾಯಿಗಳನ್ನು ಉಪಯೋಗಿಸುವರು.
  • ಎರಡನೆಯದಾಗಿ ಹದಮಾಡುವ ಪ್ರಕ್ರಿಯೆ ಮುಂದುವರಿಯುತ್ತಿದ್ದಂತೆ ಸಾರತೆ ಕ್ರಮವಾಗಿ ಹೆಚ್ಚುತ್ತಿರುವ ಸಾರ ದ್ರಾವಣಗಳ ಶ್ರೇಣಿಯಲ್ಲಿ ಪ್ರಕ್ರಿಯೆ ನಡೆಸಲಾಗುವುದು.
  • ಮೂರನೆಯದಾಗಿ ಸಾಪೇಕ್ಷವಾಗಿ ಅವನ್ನು ಹೆಚ್ಚು ಕಾಲ ಸಾರ ದ್ರಾವಣದಿಂದ ಪೀಪಾಯಿಯಲ್ಲಿ ಹಾಕಿ ಸ್ವಲ್ಪ ಘನ ಟ್ಯಾನಿಂಗ್ ವಸ್ತುವನ್ನು ಅದರಲ್ಲಿ ಸಿಂಪಡಿಸಿ ಬಿಡುವರು. ಈ ಅವಧಿಯಲ್ಲಿ ಪೀಪಾಯಿಗಳಲ್ಲಿನ ಅವುಗಳ ಸ್ಥಾನವನ್ನು ದಿನಕ್ಕೆ ಒಂದೆರಡಾವರ್ತಿ ಬದಲಾಯಿಸುತ್ತ ಕೆಲವು ದಿವಸಗಳವರೆಗೆ ನಡೆಸುವರು.

ಹೀಗೆಯೇ ಕೆಲವು ಉಪಪ್ರಕ್ರಿಯೆಗಳಿಂದ ಅವು ಟ್ಯಾನಿನ್ ದ್ರಾವಣದಿಂದ ಸಂಸ್ಕರಣಗೊಂಡ ಅನಂತರ ಅವುಗಳ ಮೇಲೆ ಸ್ವಲ್ಪ ಮಿಮೊಸಾ ತೊಗಟೆಯ ಪುಡಿಯನ್ನೊ ವೆಲೊನಿಯಾ ಪುಡಿಯನ್ನೊ ಸಿಂಪಡಿಸುವರು. ಈ ಹೊತ್ತಿಗಾಗಲೆ ಚರ್ಮ ಬಹುಮಟ್ಟಿಗೆ ಹದಕ್ಕೆ ಬಂದಿರುತ್ತದೆ. ಇದನ್ನು ಮತ್ತೆ ಉಪಯೋಗವಾಗದ ಟ್ಯಾನಿನ್ ದ್ರಾವಣದ ಉಳಿಕೆಯಿಂದಾದ ಸಾರ ದ್ರಾವಣದಲ್ಲಿ ಅದಕ್ಕೆ ಚೆಸ್‌ನಟ್[] ಇಲ್ಲವೆ ಓಕ್ ತೊಗಟೆಯ ಸಾರವನ್ನು ಸೇರಿಸಿ ಅದರೊಳಗೆ ಇಡಲಾಗುವುದು. ಈ ಸ್ಥಿತಿಯಲ್ಲಿ ಒಂದೆರಡು ವಾರಗಳಿಗೆ ಒಂದಾವರ್ತಿ ಇನ್ನೂ ಹೆಚ್ಚು ಸಾರತೆಯ ದ್ರಾವಣ ಸೇರಿಸಬಹುದು. ಅನಂತರ ಚರ್ಮದ ಪಟ್ಟೆಗಳನ್ನು ಹೊರತೆಗೆದು, ಸ್ವಲ್ಪ ವಾಯುವಿಗೆ ಒಡ್ಡಿ, ಮೇಲ್ಭಾಗದ ಬೇಡವಾದ ನಿಕ್ಷೇಪವನ್ನು ಕೆರೆದು ತೆಗೆದು ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಈ ವಿಧಾನದಿಂದುಂಟಾದ ಹದಮಾಡಿದ ಚರ್ಮದ ಗುಣಗಳನ್ನು ಕ್ರೋಮ್ ವಿಧಾನದಿಂದ ಹದ ಮಾಡಿದ ಚರ್ಮಕ್ಕೆ ಸೇರಿಸುವುದುಂಟು. ಕ್ರೋಮ್ ವಿಧಾನದಿಂದ ಹದಮಾಡಿದ ಚರ್ಮವನ್ನು ಸಸ್ಯಸಂಜಾತ ಸಾರಗಳಿಂದ ಪುನಃ ಹದ ಮಾಡುವುದರಿಂದ ಈ ಎರಡು ವಿಧಾನಗಳ ಗುಣಗಳೂ ಚರ್ಮಕ್ಕೆ ದೊರೆಯುತ್ತವೆ. ಇವುಗಳಲ್ಲಿ ಪ್ರತಿಯೊಂದಕ್ಕೂ ತಮ್ಮದೆ ಆದ ವಿಶಿಷ್ಟ ಗುಣಗಳುಂಟು. ಸಂಯುಕ್ತ ಹದಮಾಡುವಿಕೆ ವಿಧಾನದಿಂದ ಚರ್ಮಕ್ಕೆ ಕ್ರೋಮ್ ವಿಧಾನದ ಉಜ್ಜುವಿಕೆ ನಿರೋಧ ಗುಣ ಮತ್ತು ಸಸ್ಯಸಾರ ವಿಧಾನದ ಹೆಚ್ಚಿನ ದಪ್ಪ ಎರಡೂ ದೊರೆಯುತ್ತವೆ.

ಖನಿಜ ಸಂಜಾತ ಪದಾರ್ಥಗಳಿಂದ ಹದ ಮಾಡುವಿಕೆ (ಕ್ರೋಮ್ ಹದಮಾಡುವಿಕೆ)

ಖನಿಜ ಸಂಜಾತ ಪದಾರ್ಥಗಳಿಂದ ಹದಮಾಡುವ ವಿಧಾನದಲ್ಲಿ ಸೋಡಿಯಮ್ ಅಥವಾ ಪೊಟ್ಯಾಸಿಯಮ್ ಬೈಕ್ರೋಮೇಟುಗಳಂಥ ಖನಿಜ ಲವಣಗಳನ್ನು ಉಪಯೋಗಿಸಿ ತೆಳು ಚರ್ಮಗಳನ್ನು ಉತ್ತಮವಾಗಿ ಹದ ಮಾಡಬಹುದು.[][೧೦] ಬಹುಮಟ್ಟಿಗೆ ಪಾದರಕ್ಷೆಗಳ ಮೇಲಣ ಭಾಗಗಳನ್ನು ಕ್ರೋಮ್ ಹದಮಾಡುವಿಕೆ ವಿಧಾನದಿಂದ ತಯಾರಿಸುತ್ತಾರೆ. ಖನಜ ಲವಣವನ್ನು ಉಪಯೋಗಿಸಿ ಹದಮಾಡುವ ಅತ್ಯಂತ ಹಳೆಯ ವಿಧಾನವೆಂದರೆ ಆಲಮ್ ವಿಧಾನ. ಈಗಲೂ ಕೆಲವು ರೀತಿಯ ಕೈಗವಸುಗಳನ್ನು ತಯಾರಿಸಲು ಈ ವಿಧಾನ ಬಳಕೆಯಲ್ಲಿದೆ. ಆಲಮ್, ಲವಣ, ಹಿಟ್ಟು, ಕೋಳಿಮೊಟ್ಟೆಯ ಲೋಳೆ ಇವನ್ನು ಇಲ್ಲಿ ಬಳಸುತ್ತಾರೆ. ಕ್ರೋಮ್ ಹದ ಮಾಡುವಿಕೆಯನ್ನು ಎರಡು ವಿಧಾನಗಳಲ್ಲಿ ಮಾಡುತ್ತಾರೆ.

  • ಮೊದಲ ವಿಧಾನದಲ್ಲಿ ಚರ್ಮವನ್ನು ಹೈಡ್ರೊಕ್ಲೋರಿಕ್ ಅಥವಾ ಸಲ್ಫ್ಯೂರಿಕ್ ಆಮ್ಲದಿಂದ ಆಮ್ಲೀಕರಿಸಿದ ಸಾರರಿಕ್ತ ಪೊಟ್ಯಾಸಿಯಮ್ ಅಥವಾ ಸೋಡಿಯಮ್ ಬೈಕ್ರೊಮೇಟ್ ದ್ರಾವಣದಿಂದ ಸಂಸ್ಕರಿಸುವರು. ದ್ರಾವಣವನ್ನು ಚರ್ಮ ಹೀರಿಕೊಂಡ ಬಳಿಕ ಅದನ್ನು ಸೋಡಿಯಮ್ ಥಯೊಸಲ್ಫೇಟ್ (ಹೈಪೊ) ಇರುವ ಬಾನೆಗೆ ರವಾನಿಸುವರು. ಅಪಕರ್ಷಣ ಕ್ರಿಯೆ ಮುಂದುವರಿಯುತ್ತಿದ್ದಂತೆ ಇದಕ್ಕೆ ಹೈಡ್ರೋಕ್ಲೋರಿಕ್ ಆಮ್ಲ ಅಥವಾ ಸಲ್ಫ್ಯೂರಿಕ್ ಆಮ್ಲ ಸೇರಿಸುತ್ತ ಹೋಗುವರು. ಉತ್ಪತ್ತಿಯಾದ ಸಲ್ಫ್ಯೂರಸ್ ಆಮ್ಲ ಬೈಕ್ರೋಮೇಟ್ ದ್ರಾವಣದ ಮೇಲೆ ಆಮ್ಲದಿಂದುಂಟಾಗುವ ಕ್ರೋಮಿಕ್ ಆಮ್ಲವನ್ನು ಅಪಕರ್ಷಣಗೊಳಿಸಿ ಪ್ರತ್ಯಾಮ್ಲೀಯ ಕ್ರೋಮಿಯಮ್ ಕ್ಲೋರೈಡ್ ಅಥವಾ ಕ್ರೋಮಿಯಮ್ ಸಲ್ಫೇಟ್‍ನ್ನು ಉಂಟುಮಾಡಬಹುದು. ಅಪಕರ್ಷಣ ಕ್ರಿಯೆಯಲ್ಲಿ ಥಯೊಸಲ್ಫೇಟ್ ಉತ್ಕರ್ಷಣಗೊಂಡು ಸೋಡಿಯಮ್ ಟೆಟ್ರಾಥಯೊನೇಟ್ ಹಾಗೂ ಸೋಡಿಯಮ್ ಸಲ್ಫೇಟ್ ಉಂಟಾಗುವುವು. ಅದೇ ಅವಧಿಯಲ್ಲಿ ಚರ್ಮದ ಎಳೆಗಳ ನಡುವೆ ಹಾಗೂ ಮೇಲೆ ಸಲ್ಫರ್ ನಿಕ್ಷೇಪ ಉಂಟಾಗುತ್ತದೆ. ಈ ನಿಕ್ಷೇಪದಿಂದಾಗಿ ಅದನ್ನು ಯಾವ ರೀತಿಯಲ್ಲಿ ಕ್ರೋಮ್ ಹದಮಾಡಿದೆ ಎಂದು ತಿಳಿದುಬರುತ್ತದೆ. ಆಧುನಿಕ ವಾಣಿಜ್ಯ ವಿಧಾನಗಳಲ್ಲಿ ಮೊದಲು ಚರ್ಮವನ್ನು ಸಲ್ಫ್ಯೂರಿಕ್ ಆಮ್ಲ ಮತ್ತು ಸೋಡಿಯಮ್ ಬೈಕ್ರೋಮೇಟ್ ಮತ್ತು ಆಮ್ಲ ದ್ರಾವಣದಲ್ಲಿ ಪ್ರಕ್ರಿಯೆಗೆ ಒಳಪಡಿಸುವರು. ಈ ಕ್ರಿಯೆಯಿಂದ ಉಂಟಾಗುವ ಕ್ರೋಮಿಕ್ ಆಮ್ಲವನ್ನು ಚರ್ಮ ಎಷ್ಟು ಚೆನ್ನಾಗಿ ಹೀರುವುದೋ ಅದು ಅಷ್ಟು ಸುಂದರವಾಗಿ ಪೂರ್ತಿಗೊಂಡು ಹೊರಬರುವುದು. ಕ್ರೋಮಿಕ್ ಆಮ್ಲ ಹೀರಿದ ಚರ್ಮ ಬಣ್ಣದಲ್ಲಿ ಕಿತ್ತಲೆ ಹಳದಿಯಾಗಿರಬೇಕು. ಅದನ್ನು ದ್ರಾವಣದಿಂದ ಹೊರತೆಗೆದು ಕನಿಷ್ಠ 24 ಗಂಟೆಗಳವರೆಗಾದರೂ ಒಣಗಿಸುವರು. ಅನಂತರ ಯಂತ್ರವೊಂದರ ಸಹಾಯದಿಂದ ಸುಕ್ಕುಗಳೆಲ್ಲ ಹೋಗುವಂತೆ ನೇರ ಮಾಡುವರು.
  • ಕರುವಿನ ಚರ್ಮದಂಥ ತೆಳುಚರ್ಮಗಳನ್ನು ಹದಮಾಡಲು ಇನ್ನೊಂದು ವಿಧದ ಕ್ರೋಮ್ ವಿಧಾನವನ್ನು ಬಳಸುತ್ತಾರೆ. ಇದು ಮೇಲೆ ಹೇಳಿದ ವಿಧಾನಕ್ಕಿಂತ ಹೆಚ್ಚು ಪ್ರಚಲಿತವಾದುದು. ಅನಿಷ್ಕೃಷ್ಟ ಫಲಿತಾಂಶಗಳು ಈ ವಿಧಾನದಲ್ಲಿ ಸಾಮಾನ್ಯವಾಗಿ ಬರಲಾರವು.

ಈ ಎರಡು ವಿಧಾನಗಳಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಮೊದಲ ವಿಧಾನದಲ್ಲಿ ಕ್ರೋಮಿಯಮಿನ ಪ್ರತ್ಯಾಮ್ಲೀಯ ಲವಣದ ಪ್ರಭಾವ ಚರ್ಮದ ಎಳೆಗಳ ಮೇಲೆ ರೂಪುಗೊಳ್ಳುವಂತೆ ಮಾಡಲಾಗುತ್ತದೆ. ಆದರೆ ಎರಡನೆಯ ವಿಧಾನದಲ್ಲಿ ಸಾರತೆ ಹೆಚ್ಚುತ್ತಿರುವ ದ್ರಾವಣಗಳಲ್ಲಿ ಕ್ರೋಮಿಯಮಿನ ಪ್ರತ್ಯಾಮ್ಲೀಯ ಲವಣದ ಪ್ರಭಾವವನ್ನು ನೇರವಾಗಿಯೆ ಒಳಹೋಗಿಸಲಾಗುವುದು. ಸಸ್ಯಸಾರಗಳ ವಿಧಾನದಿಂದ ಹದ ಮಾಡುವ ವಿಧಾನಕ್ಕೆ ಹೋಲಿಸಿದರಂತೂ ಕ್ರೋಮ್ ವಿಧಾನದಿಂದ ಚರ್ಮವನ್ನು ಕೆಲವು ವಾರಗಳಿಗೆ ಬದಲಾಗಿ ಕೆಲವು ದಿನ ಅಥವಾ ಗಂಟೆಗಳಲ್ಲಿ ಹದಮಾಡಲು ಸಾಧ್ಯ. ಪ್ರಕ್ರಿಯೆಯನ್ನು ಅತ್ಯಂತ ನಿಷ್ಕೃಷ್ಟವಾಗಿ ನಡೆಸಬಹುದು. ಕ್ರೋಮ್ ವಿಧಾನದಿಂದ ಹದಮಾಡಿದ ಚರ್ಮಗಳು ಬಾಳಿಕೆ ಬರುವಂಥವು. ಅವುಗಳ ತನನ ಸಾಮರ್ಥ್ಯ ಹೆಚ್ಚಿದ್ದು, ರಾಸಾಯನಿಕ ಪ್ರತಿವರ್ತಕಗಳಿಗೆ ನಿರೋಧ ಹೊಂದಿರುತ್ತವೆ. ಯಾವುದೇ ತೊಂದರೆಯಿಲ್ಲದೆ ಶೀತ ಹಾಗೂ ಉಷ್ಣ ಪರಿಸರಗಳಲ್ಲಿ ಅಧಿಕ ಉಷ್ಣತೆಯಲ್ಲಿ ತಡೆದು ಬರುವಂಥದಾಗಿರುತ್ತವೆ.

ಎಣ್ಣೆಯಿಂದ ಹದ ಮಾಡುವಿಕೆ

ಎಣ್ಣೆ ಅಥವಾ ಕೊಬ್ಬಿನ ಪದಾರ್ಥಗಳನ್ನು ಬಳಸಿ ಕಚ್ಚಾ ಚರ್ಮವನ್ನು ಹದಮಾಡುವ ಕ್ರಮ ಬಹಳ ಹಳೆಯ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ಚರ್ಮದ ಎಳೆಗಳಲ್ಲಿರುವ ತೇವಕ್ಕೆ ಬದಲಾಗಿ ಸೂಕ್ತವಾದ ಒಂದು ಮೀನಿನ ಎಣ್ಣೆಯನ್ನು ಪ್ರತಿಸ್ಥಾಪಿಸುವುದೇ ಈ ಪ್ರಕ್ರಿಯೆಯ ಉದ್ದೇಶ. ಮೊದಲು ಚರ್ಮವನ್ನು ಒಣಗಿಸಿ ಒತ್ತಿ ಸಾಧ್ಯವಾದಷ್ಟು ತೇವವನ್ನು ಹೊರತೆಗೆಯಲಾಗುವುದು. ಸ್ವಲ್ಪಮಟ್ಟಿಗೆ ಒಣಗುವಂತೆ ಅವನ್ನು ನೇತು ಹಾಕಲಾಗುವುದು. ಅದು ತುಂಬ ಒಣಗಿ ಹೋಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಇಲ್ಲದಿದ್ದರೆ ಅದು ಎಣ್ಣೆಯನ್ನು ಹೀರಲಾರದು. ಅನಂತರ ಯಂತ್ರವೊಂದರ ಸಹಾಯದಿಂದ ಚರ್ಮವನ್ನು ಬಡಿದು ಪುನಃ ತೇವ ತೆಗೆದು ಕಾಡ್‌ಲಿವರ್ ಎಣ್ಣೆಯಂಥ ಮೀನೆಣ್ಣೆಯನ್ನು ಅದರ ಮೇಲೆ ಸಿಂಪಡಿಸಲಾಗುವುದು. ತೇವವೆಲ್ಲ ಎಣ್ಣೆಯಿಂದ ಪ್ರತಿಸ್ಥಾಪನೆಗೊಂಡ ಬಳಿಕ ಉಷ್ಣವನ್ನು ಒದಗಿಸಿ ಎಳೆಗಳ ಮೇಲೆ ಎಣ್ಣೆಯ ಅಂಶವನ್ನು ಅದು ಚರ್ಮಗತವಾಗುವಂತೆ ವಿಭಜಿಸಲಾಗುವುದು. ಈಗಿನ ದಿನಗಳಲ್ಲಿ ಮಾಂಸ ತೆಗೆದ ಕುರಿಯ ಚರ್ಮವನ್ನೂ, ಜಿಂಕೆ, ಚಿಗರೆಯಂಥ ಪ್ರಾಣಿಗಳ ಚರ್ಮವನ್ನೂ ಹದ ಮಾಡಲು ಈ ವಿಧಾನವನ್ನು ಉಪಯೋಗಿಸುವರು.

ವಿಲೇಯಕದಿಂದ ಹದ ಮಾಡುವಿಕೆ

ಹದ ಮಾಡುವ ವಸ್ತುಗಳ ಜಲೀಯ ದ್ರಾವಣಗಳಿಗೆ ಬದಲಾಗಿ ಅಸಿಟೋನಿನಂಥ ವಿಲೇಯಕಗಳನ್ನು ನೇರವಾಗಿ ಬಳಸುವ ವಿಧಾನ ರೂಢಿಗೆ ಬಂದಿದೆ.

ಚರ್ಮದ ಎಳೆಗಳ ಒಳಗೆ ವಿಲೇಯಕವು ಸರಾಗವಾಗಿಯೂ, ನೇರವಾಗಿಯೂ ಹೋಗುವುದರಿಂದ ಪ್ರಕ್ರಿಯೆಗಳನ್ನು ಬಹಳ ಬೇಗ ನಡೆಸಬಹುದಾಗಿದೆ. ಕಳೆದ ಶತಮಾನದಲ್ಲಿ ಕ್ರೋಮ್ ವಿಧಾನ ಬಳಕೆಗೆ ಬಂದಾಗ ಚರ್ಮದ ಕೈಗಾರಿಕೆಯಲ್ಲಿ ಮೂಲಭೂತವಾದ ಬದಲಾವಣೆಯಾಗುವುದೆಂದು ನಿರೀಕ್ಷಿಸಲಾಗಿತ್ತು. ಈ ಶತಮಾನದಲ್ಲಿ ಈ ವಿಲೇಯಕ ವಿಧಾನದಿಂದ ಕೂಡ ಅಂಥ ನಿರೀಕ್ಷೆಯೇ ಇದೆ. ಇದರಲ್ಲೂ ಚರ್ಮದಿಂದ ತೇವವನ್ನು ಪೂರ್ತಿಯಾಗಿ ತೆಗೆದು ಸಾಮಾನ್ಯವಾದ ಕೆಲವು ಹಂತಗಳ ಅನಂತರ ವಿಲೇಯಕದ ದ್ರಾವಣವನ್ನೂ, ಹದಮಾಡುವ ಮತ್ತೊಂದು ವಸ್ತುವನ್ನೂ ಬಳಸಿ ಸಂತೃಪ್ತಗೊಳ್ಳುವವರೆಗೆ ಹದ ಮಾಡಲಾಗುವುದು.

ಹದಗೊಳಿಸಿದ ಅನಂತರದ ಪೂರಣ ಪ್ರಕ್ರಿಯೆಗಳು

[ಬದಲಾಯಿಸಿ]

ಇಷ್ಟೆಲ್ಲ ಸಂಸ್ಕರಣಗಳು ನಡೆದ ಮೇಲೂ ಚರ್ಮ ಒಂದು ರೀತಿಯಲ್ಲಿ ಕಚ್ಚಾ ಹದಮಾಡಿದ ಚರ್ಮವಾಗಿರುತ್ತದಷ್ಟೆ. ಇದಕ್ಕೆ ಅಂತಿಮವಾಗಿ ಮೆರುಗನ್ನು ಕೊಡಲು ಇನ್ನೂ ಅನೇಕ ಹಂತಗಳನ್ನು ಅನುಸರಿಸಬೇಕಾಗುವುದು. ಈ ಪೂರಣ ಪ್ರಕ್ರಿಯೆಗಳಿಂದ ಚರ್ಮಕ್ಕೆ ಅವಶ್ಯಕವಾದ ಸಾಂದ್ರತೆ ಹಾಗೂ ನಮ್ಯತೆ ದೊರೆತು, ನಷ್ಟ ಹೊಂದಿದ ಸ್ವಾಭಾವಿಕ ತೈಲಗಳು ಒಳಸೇರುವುವು. ಚರ್ಮಕ್ಕೆ ಬೇಕಾದ ಬಣ್ಣವನ್ನೂ ಹಾಕಲಾಗುವುದು. ಈ ಹಂತಗಳನ್ನು ಮುಂದೆ ಬರೆದಿದೆ.

ಒಣಗಿಸುವುದು

ಚರ್ಮವನ್ನು ಅಂತಿಮವಾಗಿ ಸಿದ್ಧಪಡಿಸುವುದರಲ್ಲಿ ಮೊದಲಿಗೆ ಹದಮಾಡಿದ ಚರ್ಮವನ್ನು ಚೆನ್ನಾಗಿ ಒಣಗಿಸಬೇಕು. ಹೀಗೆ ಒಣಗಿಸುವಲ್ಲಿ ಆರ್ದ್ರತೆ ಹಾಗೂ ಉಷ್ಣತೆಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಚರ್ಮದ ಮೇಲುಭಾಗದ ಎಳೆಗಳು ಏಕಪ್ರಕಾರವಾಗಿ ಪ್ರಕ್ರಿಯೆಗೆ ಒಳಗಾಗುವಂಥ ಪರಿಸ್ಥಿತಿ ಒದಗುವುದು. ಹದಮಾಡಿದ ಚರ್ಮದ ಪಟ್ಟೆಗಳನ್ನು ಸಾಲಾಗಿ ಕಂಬಿಗಳಿಗೆ ನೇತುಹಾಕಿ ಗಾಳಿಯ ಪ್ರವಾಹವನ್ನು ಏಕಪ್ರಕಾರವಾಗಿ ಹರಿಯಬಿಡುವರು. ಅವು ಮಿತಿಮೀರಿ ಒಣಗದಿರಲೆಂದು ಸ್ವಲ್ಪ ಎಣ್ಣೆಯ ಲೇಪನವನ್ನೂ ಮಾಡುವುದುಂಟು. ಈ ರೀತಿಯಲ್ಲಿ ಸರಿಯಾಗಿ ಒಣಗಿಸುವುದರ ಮೇಲೆಯೇ ಬಣ್ಣ ಹಾಗೂ ಹದ ಏಕಪ್ರಕಾರವಾಗಿರುತ್ತವೆ. ದಪ್ಪ ಚರ್ಮವನ್ನು ತೆಳು ಚರ್ಮಕ್ಕಿಂತ ಇನ್ನೂ ನಿಧಾನವಾಗಿ ಒಣಗಿಸುವುದು ಉತ್ತಮ. ಸಸ್ಯಸಾರಗಳಿಂದ ಹದಗೊಳಿಸಿದ ಚರ್ಮವನ್ನು ಕ್ರೋಮ್ ವಿಧಾನದಿಂದ ಹದಗೊಳಿಸಿದ ಚರ್ಮಕ್ಕಿಂತ ಕಡಿಮೆ ದರದಲ್ಲಿ ಒಣಗಿಸಬೇಕು. ಒಣಗಿಸಲು ಇನ್ನೂ ಒಂದು ವಿಧಾನವನ್ನು ಬಳಸುವುದುಂಟು. ಆರ್ದ್ರತೆ ಹಾಗೂ ಉಷ್ಣತೆಗಳನ್ನು ನಿಯಂತ್ರಿಸಿರುವ ಕೊಳಾಯಿಗಳ ಮೂಲಕ ಚರ್ಮದ ಪಟ್ಟೆಗಳನ್ನು ಹಾಯಿಸುವುದರ ಮೂಲಕ ಅಗತ್ಯವಾದ ಮಟ್ಟಕ್ಕೆ ಈ ವಿಧಾನದಲ್ಲಿ ಚರ್ಮವನ್ನು ಒಣಗಿಸುತ್ತಾರೆ. ಇತ್ತೀಚೆಗೆ ಅತಿರಕ್ತ ದೀಪಗಳನ್ನು ಉಪಯೋಗಿಸಿ ಒಣಗಿಸುವ ಪ್ರಕ್ರಿಯೆಯನ್ನು ನಡೆಸುವುದುಂಟು.

ತೈಲ, ಗ್ರೀಸ್ ಬಳಿಯುವುದು

ಚರ್ಮವನ್ನು ಹದಮಾಡಿ ಒಣಗಿಸಿದ ಮೇಲೆ ಕೂಡ ಅದು ಒರಟಾಗಿಯೂ ಗಟ್ಟಿಯಾಗಿಯೂ ಇರುವುದು. ಅದರಲ್ಲಿ ಅನಮ್ಯತೆ, ಸ್ನಿಗ್ಧತೆ, ಪರಿಪೂರ್ಣತೆ ಮೊದಲಾದ ಗುಣಗಳಿರುವುದಿಲ್ಲ. ಮೃದುತ್ವವನ್ನು ಉಂಟುಮಾಡಲು ಕೆಲವು ಮಿಶ್ರಿತ ತೈಲಗಳನ್ನೂ, ಗ್ರೀಸನ್ನೂ ಬಳಿಯಬೇಕಾಗುತ್ತದೆ. ಇದರಿಂದಾಗಿ ಚರ್ಮ ಮೃದುವಾಗಿ ಅದರ ಬಾಳಿಕೆ, ತಡೆತ ಹೆಚ್ಚಾಗಿ ಅದು ಬೇಗ ಸೀಳು ಬಿಡುವುದಿಲ್ಲ. ಎಣ್ಣೆ ಎಮಲ್ಷನುಗಳನ್ನು ನೀರಿನಲ್ಲಿ ತಯಾರಿಸಿ ಅವು ಚರ್ಮದ ಎಳೆಗಳಲ್ಲಿ ಏಕಪ್ರಕಾರವಾಗಿ ಒಳಹೋಗುವಂತೆ ಮಾಡುತ್ತಾರೆ. ಎಣ್ಣೆಗಳು ಸಾಮಾನ್ಯವಾಗಿ ನೀರಿನಲ್ಲಿ ಕರಗದಿರುವುದರಿಂದ, ಎಮಲ್ಷನುಗಳನ್ನು ತಯಾರಿಸಲು ಸಾಬೂನುಗಳನ್ನು ಬಳಸುವುದುಂಟು. ನಮಗೆ ಯಾವ ನಮೂನೆಯ ಎಂಥ ದರ್ಜೆಯ ಚರ್ಮಬೇಕೊ ಅದಕ್ಕೆ ಅನುಗುಣವಾದ ಎಣ್ಣೆಯನ್ನು ಬಳಸಬೇಕು. ಕೆಲವು ದರ್ಜೆಯ ಚರ್ಮಗಳನ್ನು ತಯಾರಿಸುವಲ್ಲಿ ಅವಶ್ಯಕತೆಗಿಂತ ಹೆಚ್ಚು ಗ್ರೀಸ್ ಅಥವಾ ಎಣ್ಣೆಯ ಪೂರೈಕೆ ಆಗಬೇಕಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ಗ್ರೀಸ್ ಅಥವಾ ಎಣ್ಣೆಯನ್ನು ಸೇರಿಸಿ ಚರ್ಮವನ್ನು ಉಜ್ಜಿ ನಯ ಮಾಡುತ್ತಾರೆ. ದೊಡ್ಡ ದೊಡ್ಡ ಯಂತ್ರಗಳ ಬೆಲ್ಟುಗಳೇ ಮೊದಲಾದವನ್ನು ಹೀಗೆ ತಯಾರಿಸಬೇಕಾಗುತ್ತದೆ. ಇನ್ನೂ ಹಗುರವಾದ ಚರ್ಮಗಳಿಗೆ ಉತ್ತಮ ಅನಮ್ಯತೆ ಹಾಗೂ ಜಲನಿರೋಧ ಸಾಮರ್ಥ್ಯ ಉಂಟಾಗುವಂತೆ ಮಾಡಲು ಸೂಕ್ಷ್ಮ ಸ್ಫಟಿಕೀಯ ಗ್ರೀಸುಗಳನ್ನು ಒತ್ತಾಗಿ ತುಂಬಿ ಅದುಮಬೇಕು. ದಪ್ಪ ಮತ್ತು ಭಾರವಾದ ಚರ್ಮದ ಪಟ್ಟಿಗಳನ್ನು ಸಾಮಾನ್ಯವಾಗಿ ಪ್ಯಾರಾಫಿನ್ ಮೇಣದ ದ್ರವಿತ ಗ್ರೀಸಿನಲ್ಲಿ ಅದ್ದುವರು.

ಬಣ್ಣ ಸೇರಿಸುವುದು

ಚರ್ಮಗಳಿಗೆ ಬಣ್ಣ ಸೇರಿಸುವುದರಿಂದ ಇಲ್ಲವೆ ಮೇಲಣ ಭಾಗಕ್ಕೆ ವರ್ಣದ್ರವ್ಯಗಳನ್ನು ಲೇಪನ ಮಾಡುವುದರಿಂದ ವರ್ಣಸಂಯೋಜನೆ ಮಾಡುತ್ತಾರೆ. ಕೆಲವು ಬಾರಿ ಮೊದಲು ಮೂಲವರ್ಣವೊಂದರ ಸಂಯೋಜನೆ ನಡೆಸಿ ಅನಂತರ ವರ್ಣದ್ರವ್ಯಗಳನ್ನು ಸೇರಿಸುತ್ತಾರೆ. ಚರ್ಮದ ಮೆರುಗು ಹೆಚ್ಚಿ ಬಣ್ಣ ಗಾಢವಾಗಿ ಕೂಡುವಂತೆ ಮಾಡಲು ವಿಶೇಷವಾಗಿ ಅನಿಲಿನ್ ವರ್ಣಗಳನ್ನು ಬಳಸುತ್ತಾರೆ. ಇದಕ್ಕೂ ಹಲವು ವಿಧಾನಗಳುಂಟು.

  • ಒಂದು ವಿಧಾನದಲ್ಲಿ ಸೂಕ್ತವಾದ ಉಷ್ಣತೆಯಲ್ಲಿ ವರ್ಣದ್ರವ್ಯಗಳ ಸಂಯುಕ್ತಗಳನ್ನು ಒಳಗೊಂಡ ತಿರುಗುತ್ತಿರುವ ಪೀಪಾಯಿಗಳಲ್ಲಿ ಚರ್ಮದ ಪಟ್ಟಿಗಳನ್ನು ಇಳಿಯಬಿಟ್ಟು ಬಣ್ಣ ಹಾಕುವರು. ನಮಗೆ ಬೇಕಾದ ನಮೂನೆ ಹಾಗೂ ದರ್ಜೆಯ ಚರ್ಮಕ್ಕೆ ಅನುಗುಣವಾಗಿ ಆಮ್ಲೀಯ ಇಲ್ಲವೆ ಕ್ಷಾರೀಯ ಬಣ್ಣಗಳನ್ನು ಉಪಯೋಗಿಸಬಹುದು.
  • ಇನ್ನೊಂದು ವಿಧಾನದಲ್ಲಿ ನಿರ್ದಿಷ್ಟ ಒತ್ತಡದಲ್ಲಿ ವರ್ಣದ್ರವ್ಯಗಳನ್ನು ತುಂತುರು ತುಂತುರಾಗಿ ಚರ್ಮದ ಮೇಲೆ ಸಿಂಪಡಿಸಲಾಗುವುದು. ಚರ್ಮದ ಮೇಲೆ ಕರಗಿ ಹೋಗದಂತಿರುವ ಹೆಚ್ಚುವರಿ ಬಣ್ಣಗಳ ಲೇಪನ ಮಾಡಲೂ ಸಿಂಪಡಿಕೆ ವಿಧಾನವನ್ನು ಬಳಸುವುದುಂಟು.

ವರ್ಣದ್ರವ್ಯ ಸಂಯುಕ್ತಗಳಿಗೆ ಕೆನೀನ್, ಷೆಲಾಕ್, ಲಾಕ್ವೆರ್ ಮುಂತಾದ ಬಂಧಕಗಳನ್ನು ಸೇರಿಸಬಹುದು. ದಪ್ಪವಾದ ಚರ್ಮಗಳಿಗೆ ಕುಂಚದಿಂದ ಬಣ್ಣ ಹಾಕುವ ಪದ್ಧತಿಯೂ ಉಂಟು.

ಇಷ್ಟೆಲ್ಲ ಪ್ರಕ್ರಿಯೆಗಳು ನಡೆದ ಮೇಲೂ ಕಾರ್ಖಾನೆಯಿಂದ ಹೊರಬರುವ ಮೊದಲು ಚರ್ಮಕ್ಕೆ ಇನ್ನೂ ಕೆಲವು ಸಂಸ್ಕಾರಗಳನ್ನು ನಡೆಸಬೇಕಾಗುತ್ತದೆ. ಪಾದರಕ್ಷೆಗಳ ಅಟ್ಟೆಗಳನ್ನು ಹದಮಾಡುವ ಕೇಂದ್ರಗಳಿಂದ ಹೊರಗೆ ಕಳಿಸುವ ಮೊದಲು ಅವುಗಳ ಮೇಲೆ ಚೆನ್ನಾಗಿ ಒತ್ತಡ ಹೇರುವರು. ಕೆಲವೆಡೆಗಳಲ್ಲಿ ಸ್ವಲ್ಪ ತೇವವಾಗಿರುವ ಹಂತದಲ್ಲೇ ಒಂದು ಬಾರಿ ಹಾಗೂ ಒಣಗಿದ ಅನಂತರ ಮತ್ತೊಂದು ಬಾರಿ ಒತ್ತಡ ಹೇರುವುದೂ ಉಂಟು. ಮುಂದುವರಿದ ದೇಶಗಳಲ್ಲಿ ಇತ್ತೀಚೆಗೆ ಒತ್ತಡವನ್ನು ಹೇರಲು ವಾಯುರಂಧ್ರಗಳುಳ್ಳ ಯಂತ್ರೋಪಕರಣಗಳನ್ನು ಬಳಸುತ್ತಾರೆ. ದನಕರುಗಳ ದಪ್ಪ ಚರ್ಮವನ್ನು ಎರಡು ಭಾಗವಾಗಿ ಸೀಳಿ ತೆಳು ಚರ್ಮಗಳನ್ನು ತಯಾರಿಸುವುದೂ ರೂಢಿಯಲ್ಲಿದೆ. ಸಾಕಷ್ಟು ತಾಳಿಕೆ, ಬಾಳಿಕೆ, ಬಿಸಿಲಿನ ತಡೆತ, ಘರ್ಷಣೆಯ ವಿರುದ್ಧ ತಡೆತ ಇವನ್ನು ಉಂಟುಮಾಡಲು ಇದೇ ರೀತಿಯ ಅನೇಕ ಪ್ರಕ್ರಿಯೆಗಳನ್ನು ನಡೆಸುವರು. ಕೇನಿನ್, ಆಲ್ಬುಮಿನ್, ಮೇಣಗಳಿಂದ ಹಿಡಿದು ಕ್ಲಿಷ್ಟವಾದ ರೆಸಿನ್ನುಗಳವರೆಗೆ ವಿವಿಧ ಹಂತಗಳಲ್ಲಿ ಬಳಸುವರು. ಅತ್ಯಂತ ಹೊಳಪಿನ ಚರ್ಮ ಬೇಕಾದಲ್ಲಿ ಉಷ್ಣ ಹಾಗೂ ಘರ್ಷಣೆ ಉಂಟುಮಾಡುವ ಒಂದು ದೊಡ್ಡ ಗಾಜಿನ ಉರುಳೆ ಚರ್ಮದ ಮೇಲೆ ಪದೇ ಪದೇ ವೇಗವಾಗಿ ಹಾಯುವಂತೆ ಮಾಡುವರು. ಇದರಿಂದಾಗಿ ಚರ್ಮ ಪ್ಲಾಸ್ಟಿಕ್ಕಿನಂತೆ ಮಿರಮಿರನೆ ಮಿನುಗತೊಡಗುವುದು. ಚರ್ಮದ ಮೇಲೆ ಯಾವುದೇ ಚಿತ್ರ ಇಲ್ಲದೆ ಆಕೃತಿ ಬಿಡಿಸಬೇಕಾದರೆ ಅಂತಿಮವಾಗಿ ಸಿದ್ಧಪಡಿಸಬೇಕಾದ ಹಂತದಲ್ಲಿ ಅಥವಾ ಅದಕ್ಕೆ ಸ್ವಲ್ಪ ಮುಂಚೆ ಬೇಕಾದ ಆಕೃತಿಯನ್ನು ಕೆತ್ತಿದ ತಟ್ಟೆಯೊಂದರ ಮೇಲೆ ಬಹಳ ಹೆಚ್ಚಿನ ಒತ್ತಡದಲ್ಲಿ ಒತ್ತುವರು. ಅಗತ್ಯವಾದ ಉಷ್ಣ ಹಾಗೂ ಹೆಚ್ಚಿನ ಒತ್ತಡಗಳ ಸಂಯೋಗದಿಂದ ಆಕೃತಿ ಚರ್ಮದ ಮೇಲೆ ಶಾಶ್ವತವಾಗಿ ಉಳಿಯುವುದು. ಯೂರೆಥೇನ್ ಪೂರಕ ಸಂಯುಕ್ತಗಳನ್ನು ಬಳಸಿ ಉಜ್ಜುವಿಕೆಯಿಂದಾಗಬಹುದಾದ ಸವೆತವನ್ನು ತಡೆಯಲಾಗುತ್ತಿದೆ.

ಭಾರತದಲ್ಲಿ ಚರ್ಮದ ಕೈಗಾರಿಕೆ

[ಬದಲಾಯಿಸಿ]

ಭಾರತದಲ್ಲಿ ವಿದೇಶಿ ವಿನಿಮಯವನ್ನು ಗಳಿಸುವ ಪ್ರಮುಖ ಕೈಗಾರಿಕೆಗಳಲ್ಲಿ ಚರ್ಮದ ಕೈಗಾರಿಕೆ ಬಹುಶಃ ನಾಲ್ಕನೆಯದು. ಇಂದು ಜಗತ್ತಿನಲ್ಲಿ, ಮುಂಚೂಣಿಯಲ್ಲಿರುವ ಚರ್ಮದ ಉತ್ಪಾದಕರಲ್ಲಿ ಚೀನಾ ಮತ್ತು ಭಾರತಗಳು ಇವೆ.[೧೧][೧೨][೧೩] ಉತ್ತರ ಪ್ರದೇಶ ಭಾರತದಲ್ಲೆಲ್ಲ ಅತ್ಯಂತ ಹೆಚ್ಚು ಚರ್ಮ ಉತ್ಪಾದನೆ ಮಾಡುವ ರಾಜ್ಯ. ವರ್ಷಕ್ಕೆ ಸುಮಾರು 33 ಲಕ್ಷಕ್ಕಿಂತಲೂ ಹೆಚ್ಚು ಚರ್ಮದ ಪಟ್ಟಿಗಳು ಇಲ್ಲಿ ಸಿದ್ಧವಾಗುತ್ತವೆ. ಉತ್ತರ ಪ್ರದೇಶವನ್ನು ಬಿಟ್ಟರೆ ಮಹಾರಾಷ್ಟ್ರ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ರಾಜಸ್ಥಾನ ಹಾಗೂ ತಮಿಳುನಾಡು ಅನುಕ್ರಮವಾಗಿ ಮುಖ್ಯವಾದ ಚರ್ಮ ಉತ್ಪಾದಕ ರಾಜ್ಯಗಳು. ಭಾರತದಲ್ಲಿ ತಯಾರಾಗುವ ಬಹಳಷ್ಟು ಚರ್ಮವನ್ನು ಪಾದರಕ್ಷೆಗಳಿಗಾಗಿ ಬಳಸಲಾಗುತ್ತದೆ. ಇದು ಸಣ್ಣ ಗಾತ್ರದ ಕೈಗಾರಿಕೆಯೇ ಆಗಿದ್ದರೂ ಮದ್ರಾಸ್, ಕಾನ್ಪುರ, ಕಲ್ಕತ್ತ ಹಾಗೂ ಮುಂಬಯಿಗಳಲ್ಲಿ ಚರ್ಮ ಹದಮಾಡುವ ಕೆಲವು ಬೃಹತ್ ಕೇಂದ್ರಗಳಿವೆ. ಹದಮಾಡುವ ಚಿಕ್ಕಪುಟ್ಟ ಕೇಂದ್ರಗಳೆಲ್ಲವನ್ನೂ ಸೇರಿಸಿದರೆ ಭಾರತದಲ್ಲಿ ಇಂದು ಸುಮಾರು 730ಕ್ಕೂ ಹೆಚ್ಚು ಇವೆ. ಕ್ರೋಮ್ ಹದಮಾಡಿದ ಚರ್ಮ, ಆಮ್ಲ ಸಂಸ್ಕರಿತ ಆಡಿನ ಚರ್ಮ, ಹದಮಾಡಿದ ಉರಗವರ್ಗದ ಪ್ರಾಣಿಗಳ ಚರ್ಮ, ಆಡುಗಳ ಕೂದಲು ಹಾಗೂ ಹದಮಾಡಲು ಉಪಯೋಗಿಸಲಾಗುವ ಪದಾರ್ಥಗಳ ರಫ್ತಿನಿಂದ 1968-69 ರಲ್ಲಿ 5,379.56 ಲಕ್ಷ ರೂಪಾಯಿಗಳ ಗಳಿಕೆಯಾಗಿತ್ತು.

ಭಾರತದಲ್ಲಿ ಪಶುಸಂಪತ್ತು ಸುಮಾರು 20 ಕೋಟಿ (ಅಮೆರಿಕದ ಸಂಯುಕ್ತ ಸಂಸ್ಥಾನಗಳ ಮೂರರಷ್ಟು). ಇದರಿಂದ ವರ್ಷಕ್ಕೆ ಎರಡು ಕೋಟಿಗಳಷ್ಟು ಸಿದ್ಧಪಡಿಸಿದ ಚರ್ಮದ ಪಟ್ಟಿಗಳು ತಯಾರಾಗುತ್ತವೆ. ಭಾರತದಲ್ಲಿರುವ ಸುಮಾರು 7.5 ಕೋಟಿ ಆಡುಗಳು ಹಾಗೂ 4 ಕೋಟಿ ಕುರಿಗಳಿಂದ 3.5 ಕೋಟಿ ಆಡಿನ ಚರ್ಮಗಳೂ, 1.7 ಕೋಟಿ ಕುರಿಯ ಚರ್ಮಗಳೂ ಲಭಿಸುತ್ತವೆ. ಇಲ್ಲಿ ಚರ್ಮ ಹದಮಾಡುವಿಕೆ ಒಂದು ಸಣ್ಣ ಕೈಗಾರಿಕೆ ಮಾತ್ರ. ಚರ್ಮದ ಕೈಗಾರಿಕೆ ಬಗ್ಗೆ ತರಬೇತು ನೀಡಲು ಮುಂಬಯಿ, ಮದ್ರಾಸು, ಕಲ್ಕತ್ತ, ರಾಜಕೋಟ್ ಹಾಗೂ ಜಲಂಧರಗಳಲ್ಲಿ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು ಇವೆ. ಮದ್ರಾಸಿನಲ್ಲಿ ಸೆಂಟ್ರಲ್ ಲೆದರ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು ಕೂಡ ಸ್ಥಾಪಿಸಲಾಗಿದೆ (1953). ವಿವಿಧ ನಮೂನೆಗಳ ಚರ್ಮ ತಯಾರಿಸುವ ಬಗ್ಗೆ, ಚರ್ಮಕ್ಕೆ ಬೇಕಾಗುವ ಇನ್ನಿತರ ವಸ್ತುಗಳನ್ನು ತಯಾರಿಸುವ ಬಗ್ಗೆ ಹಾಗೂ ಸಂಬಂಧಪಟ್ಟ ಯಂತ್ರೋಪಕರಣಗಳ ಬಗ್ಗೆ ಈ ಸಂಸ್ಥೆ ಸಂಶೋಧನೆ ನಡೆಸುತ್ತದೆ. ಚರ್ಮದ ತಂತ್ರವಿಜ್ಞಾನಕ್ಕೆ ಸಂಬಂಧಿಸಿದಂತೆ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಡಿಪ್ಲೊಮ ಶಿಕ್ಷಣಗಳೂ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣವೂ ಉಂಟು.

ಉಲ್ಲೇಖಗಳು

[ಬದಲಾಯಿಸಿ]
  1. https://www.globalegyptianmuseum.org/glossary.aspx?id=218
  2. Habibu, Buhari; Kawu, Mohammed; Makun, Hussaina; Aluwong, Tagang; Yaqub, Lukman; Dzenda, Tavershima; Buhari, Hajarah (2017-03-31). "Influences of breed, sex and age on seasonal changes in haematological variables of tropical goat kids". Archives Animal Breeding. 60 (1): 33–42. doi:10.5194/aab-60-33-2017. ISSN 2363-9822.
  3. Pizzi, Antonio (2008), "Tannins: Major Sources, Properties and Applications", Monomers, Polymers and Composites from Renewable Resources, Elsevier, pp. 179–199, doi:10.1016/b978-0-08-045316-3.00008-9, ISBN 9780080453163, PMC 7155708
  4. Davis, Charles Thomas (1885). The Manufacture of Leather: Being a Description of All of the Processes for the Tanning, Tawing, Currying, Finishing and Dyeing of Every Kind of Leather. Philadelphia, H. C. Baird & co.; etc.
  5. Godman, R. M. "Eastern Hemlock". www.srs.fs.usda.gov. Retrieved 2021-12-13.
  6. "A history of new ideas in tanning - Leather International". www.leathermag.com. Archived from the original on 2 January 2017. Retrieved 27 April 2018.
  7. "Home Tanning Hides and Furs" (PDF). Retrieved 16 April 2024.
  8. Trees, Woods and Man. By H.L. Edlin. New Naturalist. 1970. ISBN 0-00-213230-3.
  9. Gerd Anger, Jost Halstenberg, Klaus Hochgeschwender, Christoph Scherhag, Ulrich Korallus, Herbert Knopf, Peter Schmidt, Manfred Ohlinger, "Chromium Compounds" in Ullmann's Encyclopedia of Industrial Chemistry, Wiley-VCH, Weinheim, 2005. doi:10.1002/14356007.a07_067
  10. M. Saha; C. R. Srinivas; S. D. Shenoy; C. Balachandran (May 1993). "Footwear dermatitis". Contact Dermatitis. 28 (5): 260–264. doi:10.1111/j.1600-0536.1993.tb03428.x. PMID 8365123. S2CID 23159708.
  11. Gillan, Kevin; Murray, Jason (May 2019). Comprehensive Guide to Leather Repair and Restoration: Leather Repair Training Manual. Advanced Leather Solutions, Inc. p. 16. Archived from the original on 23 May 2023. Retrieved June 10, 2021.
  12. "Leather". Encyclopedia Britannica. March 5, 2020. Archived from the original on 12 May 2021. Retrieved June 10, 2021.
  13. Kwasny, Melissa (April 17, 2019). Putting on the Dog: The Animal Origins of What We Wear. The University Press. ISBN 9781595348654. Archived from the original on 23 May 2023. Retrieved June 10, 2021.

ಹೆಚ್ಚಿನ ಓದಿಗೆ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ತೊಗಲು&oldid=1350008" ಇಂದ ಪಡೆಯಲ್ಪಟ್ಟಿದೆ