ತುಳುನಾಡಿನ ಕನ್ನಡಿಗ ಭೂತಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಹಕ್ಕುಸ್ವಾಮ್ಯದ ಉಲ್ಲಂಘನೆ

ತುಳುನಾಡಿನಲ್ಲಿ ಭೂತಾರಾಧನೆಯಲ್ಲಿ ಆರಾಧಿಸಲ್ಪಡುವ ಭೂತಗಳಲ್ಲಿ ಮುಖ್ಯವಾಗಿ ಮೂರು ವರ್ಗಗಳಿವೆ. ಪೌರಾಣಿಕ ದೇವರುಗಳ ರೂಪ ಎಂದು ಪರಿಗಣಿಸಲ್ಪಟ್ಟಿರುವ ಭೂತಗಳದು ಒಂದು ವರ್ಗ. ಗುಳಿಗ, ಚಾಮುಂಡಿ, ಧೂಮಾವತಿ, ವಿಷ್ಣುಮೂರ್ತಿ, ಉಳ್ಳಾಕುಲು ಮೊದಲಾದ ಭೂತಗಳು ಈ ವರ್ಗದಲ್ಲಿ ಸೇರುತ್ತವೆ. ಪ್ರಾಣಿ ಮೂಲದ ದೈವಗಳದು ಎರಡನೆಯ ವರ್ಗ. ಪಂಜುರ್ಲಿ, ಪಿಲಿಭೂತ, ಎರುಬಂಟ, ಪಿಲಿಚಾಮುಂಡಿ ಮೊದಲಾದ ಭೂತಗಳು ಈ ವರ್ಗದಲ್ಲಿ ಸೇರುತ್ತವೆ. ಮೂಲತಃ ಮನುಷ್ಯರಾಗಿ ಹುಟ್ಟಿ ಅಸಾಮಾನ್ಯ ಸಾಹಸ ಮೆರೆದು, ದುರಂತವನ್ನಪ್ಪಿದ ನಂತರ ದೈವತ್ವಕ್ಕೇರಿ ಭೂತತ್ವವನ್ನು ಪಡೆದು ಆರಾಧಿಸಲ್ಪಡುವ ಭೂತಗಳದ್ದು ಮೂರನೆಯ ವರ್ಗ. ಕೋಟಿ-ಚೆನ್ನಯ, ಕಲ್ಕುಡ-ಕಲ್ಲುರ್ಟಿ, ಬಿಲ್ಲರಾಯ-ಬಿಲ್ಲಾರ್ತಿ, ಕುಕ್ಕೆತ್ತಿ-ಬಳ್ಳು, ನಾರಳತ್ತಾಯ, ಬೀರ್ನಾಳ್ವ, ಬೀರ್ನಾಚಾರಿ, ಬಿರ್ಮಣ ಬೈದ್ಯ, ಪರವ ಭೂತ, ಪರಿವಾರ ನಾಯಕ, ಪಪಮರ್ಲುಮಾಣಿ, ಹಳ್ಳತ್ತಾಯ, ಬಚ್ಚನಾಯಕ ಮೊದಲಾದವರು ಈ ವರ್ಗದಲ್ಲಿ ಸೇರುತ್ತಾರೆ.

ತುಳುನಾಡಿನ ಹೆಚ್ಚಿನ ಭೂತಗಳು ಮಾನವ ಮೂಲವನ್ನು ಹೊಂದಿವೆ. ಇವರು ಮೂಲತಃ ತುಳುನಾಡಿನಲ್ಲಿ ಹುಟ್ಟಿ ಬೆಳೆದು ದುರಂತವನ್ನಪ್ಪಿ ದೈವತ್ವಕ್ಕೇರಿದವರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ತುಳುವರೇ ಆಗಿದ್ದಾರೆ. ಆದರೆ ಘಟ್ಟದ ಮೇಲಿನಿಂದ ಕೆಳಗಿಳಿದು ಬಂದು ಇಲ್ಲಿ ಯುದ್ಧ ಮಾಡಿ ಅಥವಾ ಬೇರಾವುದೋ ಕಾರಣದಿಂದ ದುರಂತವನ್ನಪ್ಪಿದ ಕನ್ನಡಿಗರು ಕೂಡ ಇಲ್ಲಿ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಾರೆ. ಬಚ್ಚನಾಯಕ, ಕರಿಯಣ್ಣ ನಾಯಕ, ಬೈಸು ನಾಯಕ, ಕನ್ನಡಬೀರ, ಕನ್ನಡ ಭೂತ, ಕನ್ನಡಿಗ ಭೂತಗಳು ದೈವತ್ವಕ್ಕೇರಿದ ಕನ್ನಡಿಗರೇ ಆಗಿದ್ದಾರೆ. ಕನ್ನಡ ಮೂಲದ ಈ ಭೂತಗಳ ಪಾಡ್ದನ ಹಾಗೂ ನುಡಿಗಟ್ಟುಗಳು ಕನ್ನಡದಲ್ಲಿಯೇ ಇರುತ್ತವೆ. .ಕನ್ನಡ ಯಾನೆ ಪುರುಷ ಭೂತ ,ಕನ್ನಡ ಭೂತ ,ಬಚ್ಚ ನಾಯಕ ಬೈಸು ನಾಯಕ ,ಕರಿಯಣ್ಣ ನಾಯಕ ,ಎರು ಶೆಟ್ಟಿ ,ಕನ್ನಡಿಗ ಭೂತ ಮೊದಲಾದ ಅನೇಕ ಕನ್ನಡ ಮೂಲದ ಭೂತಗಳಿಗೆ ಆರಾಧನೆ ಇದೆ. ಇದು ನನ್ನ ತುಳುನಾಡಿನ ಅಪೂರ್ವ ಭೂತಗಳು ಪುಸ್ತಕದಲ್ಲಿನ ಬರಹ ,ಇದಕ್ಕೆ ಕಾಪಿರೈಟ್ ಇಟ್ಟು ಕೊಂಡಿರುವ ಕಾರಣ ನಾನು ವಿಕಿಪೀಡಿಯ ಕ್ಕೆ ನೀಡಿಲ್ಲ ಯಾರೋ ಕದ್ದು ಇಲ್ಲಿ ಹಾಕಿದ್ದಾರೆ - ಡಾ ಲಕ್ಷ್ಮೀ ಜಿ ಪ್ರಸಾದ

ಕನ್ನಡ ಬೀರ[ಬದಲಾಯಿಸಿ]

ಕಾಸರಗೋಡಿನ ಹೊಸಂಗಡಿ ಪರಿಸರದ ತಲೇಕಳ, ಬೆಜ್ಜ, ಮದಂಗಲ್ಲು ಮೊದಲಾದೆಡೆಗಳಲ್ಲಿ ಧೂಮಾವತಿ ದೈವದೊಂದಿಗೆ ಈ ದೈವಕ್ಕೆ ಆರಾಧನೆ ಇದೆ. ಬಿಳಿ ಬಟ್ಟೆಯ ಕಚ್ಚೆಯನ್ನು ಧರಿಸುವ ಈತನಿಗೆ ತುಳುನಾಡಿನ ಇತರ ದೈವಗಳಂತೆ ತೆಂಗಿನ ತಿರಿಯ ಅಲಂಕಾರ, ಅರದಳ, ಮುಖವರ್ಣಿಕೆ, ಪುಳ್ಳೆಗಳು ಇರುವುದಿಲ್ಲ. ಮನುಷ್ಯರ ಸಹಜ ಅಲಂಕಾರವಿರುತ್ತದೆ. ಇಲ್ಲಿ ಲಭ್ಯವಿರುವ ಐತಿಹ್ಯದ ಪ್ರಕಾರ ಈತ ಕನ್ನಡ ಪ್ರದೇಶದ ಸುಬೇದಾರ. ಮೀಯಪದವು ಸಮೀಪದಲ್ಲಿ ಪೆಳ್ಳಕಜೆ ಎಂಬುದು ಮಂತ್ರವಾದಿಗಳ ಮನೆತನವಾಗಿದ್ದು, ಅಲ್ಲಿ ದುರ್ಗಾರಾಧನೆ ಮಾಡುತ್ತಾರೆ. ಈಗ ಅಲ್ಲಿನ ದೇವಸ್ಥಾನದ ಮುಖ್ಯಸ್ಥರಾದ ಗೋವಿಂದ ಭಟ್ಟರ ಅಜ್ಜನ ಕಾಲದಲ್ಲಿ ನಡೆದ ಘಟನೆ ಇದು. ಯಾವುದೋ ಕಾರಣಕ್ಕೆ ಇವರ ಮನೆಯನ್ನು ಜಪ್ತಿ ಮಾಡಲು ಬ್ರಿಟಿಷ್ ಅಧಿಕಾರಿಗಳು ಇಬ್ಬರು ಸುಬೇದಾರರನ್ನು ಕಳುಹಿಸುತ್ತಾರೆ.ಭಟ್ಟರು ಒಳಗೆ ಪೂಜೆ ಮಾಡುತ್ತಿರುತ್ತಾರೆ .ಸುಬೇದಾರರು ಬಂದಿರುವ ವಿಚಾರವನ್ನು ಅವರಿಗೆ ಭಟ್ಟರ ಹೆಂಡತಿ ತಿಳಿಸುತ್ತಾರೆ .ನಮ್ಮ ತುಳು ನಾಡಿನಲ್ಲಿ ಮಧ್ಯಾಹ್ನದ ಹೊತ್ತಿಲಿಗೆ ಮನೆಬಾಗಿಲಿಗೆ ಬಂದ ಎಲ್ಲರಿಗೂ ಊಟ ಬಡಿಸುವುದು ಸಂಪ್ರದಾಯ . ಭಟ್ಟರು "ಸರಿ ಮೊದಲು ಅವರಿಗೆ ಊಟ ಬಡಿಸು" ಎಂದು ಹೇಳಿದರು. ಅವರು ಹೇಳಿದಂತೆ ಆ ಸುಬೇದಾರರಿಗೆ ಬಾಳೆ ಎಲೆ ನೀರು ಕೊಟ್ಟು ಊಟ ಬಡಿಸಿದರು.

ದೇವಾಲಯದ ಭಟ್ಟರ ಹೆಂಡತಿ ಅವರಿಗೆ ಊಟ ಬಡಿಸಿ ಒಳಗೆ ಹೋಗಿ ಹೊರಬರುವಷ್ಟರಲ್ಲಿ ಇಬ್ಬರು ಸುಬೇದಾರರಲ್ಲಿ ಒಬ್ಬ ಮಾಯವಾಗಿರುತ್ತಾನೆ!. ಮಾಯವಾದ ಕುರುಹಾಗಿ ಆತನ ತಲೆಕೂದಲು, ಉಗುರು ಉಳಿದಿರುತ್ತದೆ. ಇದನ್ನು ನೋಡಿದ ಇನ್ನೊಬ್ಬ ಸುಬೇದಾರ ಓಡಿ ಹೋಗುತ್ತಾನೆ. ಇಲ್ಲಿ ಮಾಯವಾದ ಸುಬೇದಾರ ಕನ್ನಡಿಗನಾಗಿದ್ದು, ಆತನು ಧೂಮಾವತಿ ದೈವದ ಸೇರಿಗೆಗೆ ಸಂದು ಹೋಗಿ, ದೈವತ್ವಕ್ಕೇರಿ ‘ಕನ್ನಡ ಬೀರ' ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾನೆ.ಇದು ಇತ್ತೀಚಿಗೆ ಅಂದರೆ ಸುಮಾರು ೮೦-೯೦ ವರ್ಷಗಳ ಹಿಂದೆ ನಡೆದ ಸತ್ಯ ಘಟನೆಯಾಗಿದೆ ಈತನಿಗೊಂದು ಬನ ಕೂಡ ಬೆಣ್ಣೆಮನೆ ಗೋಪಾಲ ಭಟ್ಟರ ತೋಟದಲ್ಲಿದೆ.ಈ ಭೂತ ಉದ್ಭವವಾದ ಸ್ಥಳ ಎಂದು ಭಾವಿಸಲಾದ ನೀರಿನ ಗುಂಡಿಯೊಂದು ಸಮೀಪದಲ್ಲಿದೆ.

ಇದು ನನ್ನ ತುಳುನಾಡಿನ ಅಪೂರ್ವ ಭೂತಗಳು ಪುಸ್ತಕದಲ್ಲಿನ ಬರಹ ,ಇದಕ್ಕೆ ಕಾಪಿರೈಟ್ ಇಟ್ಟು ಕೊಂಡಿರುವ ಕಾರಣ ನಾನು ವಿಕಿಪೀಡಿಯ ಕ್ಕೆ ನೀಡಿಲ್ಲ ಯಾರೋ ಕದ್ದು ಇಲ್ಲಿ ಹಾಕಿದ್ದಾರೆ - ಡಾ ಲಕ್ಷ್ಮೀ ಜಿ ಪ್ರಸಾದ

ಬಚ್ಚನಾಯಕ[ಬದಲಾಯಿಸಿ]

ಬಚ್ಚನಾಯಕ ದೈವದ ಕುರಿತಾದ ಪಾಡ್ದನದ ಅನೇಕ ಪಾಠಾಂತರಗಳು ಪ್ರಚಲಿತವಿದೆ. ಯೇನೆಕಲ್ಲು ಮಾಗಣೆಯ ನಾಲ್ಕೂರುಗುತ್ತು ಮನೆಯ ಸುಬ್ಬ ಗೌಡ (ಸಬ್ಬಣ ಗೌಡ) ಪಂಜದ ಬಲ್ಲಾಳನಿಗೆ ಕಂದಾಯ ಸಂದಾಯ ಮಾಡುವುದಿಲ್ಲ. ಸುಬ್ಬ ಗೌಡನನ್ನು ಮಣಿಸುವುದಕ್ಕಾಗಿ ಪಂಜದ ಬಲ್ಲಾಳ ಘಟ್ಟದ ಮೇಲಿನಿಂದ ಬಚ್ಚನಾಯಕನನ್ನುಕರೆಸುತ್ತಾನೆ. ಬಚ್ಚನಾಯಕ ಬರುವುದನ್ನು ತಿಳಿದ ಸುಬ್ಬ ಗೌಡ, ಅವನನ್ನು ದಾರಿಯಲ್ಲಿಯೇ ಕೊಲ್ಲಿಸುತ್ತಾನೆ. ಸುಬ್ಬ ಗೌಡನ ಅಣತಿಯಂತೆ ಮುಗೇರನೊಬ್ಬ ವಿಷ ಸವರಿದ ಬಾಣವನ್ನು ಬಚ್ಚನಾಯಕನ ಮೇಲೆ ಬಿಡುತ್ತಾನೆ. ಬಾಣಕ್ಕೆ ಬಲಿಯಾದ ಬಚ್ಚನಾಯಕ ಹೊಂಡದಲ್ಲಿ ಬಿದ್ದು ನರಳುತ್ತಾನೆ. ಆಗ ಸುಬ್ಬ ಗೌಡನ ಹೆಂಡತಿಯರು ಅವನ ಕೊರಳಿನ ಮೇಲೆ ನಿಂತು, ನಾಲಿಗೆ ತುಂಡರಿಸಿ ಕೊಲ್ಲುತ್ತಾರೆ. ಸಾಯುವ ಸಂದರ್ಭದಲ್ಲಿ ಪಶ್ಚಾತ್ತಾಪಪಟ್ಟು ಕ್ಷಮೆ ಕೇಳುವ ಬಚ್ಚನಾಯಕ ಮುಂದೆ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಾನೆ. ಸುಳ್ಯ, ಗುತ್ತಿಗಾರು, ಯೇನೆಕಲ್ಲುಗಳಲ್ಲಿ ಈತನನ್ನು ಆರಾಧಿಸುತ್ತಾರೆ. ಇದು ನನ್ನ ತುಳುನಾಡಿನ ಅಪೂರ್ವ ಭೂತಗಳು ಪುಸ್ತಕದಲ್ಲಿನ ಬರಹ ,ಇದಕ್ಕೆ ಕಾಪಿರೈಟ್ ಇಟ್ಟು ಕೊಂಡಿರುವ ಕಾರಣ ನಾನು ವಿಕಿಪೀಡಿಯ ಕ್ಕೆ ನೀಡಿಲ್ಲ ಯಾರೋ ಕದ್ದು ಇಲ್ಲಿ ಹಾಕಿದ್ದಾರೆ - ಡಾ ಲಕ್ಷ್ಮೀ ಜಿ ಪ್ರಸಾದ

ಕರಿಯಣ್ಣ ನಾಯಕ[ಬದಲಾಯಿಸಿ]

ಈತನನ್ನು ಬಚ್ಚನಾಯಕನ ಸಹೋದರನೆಂದು ಭಾವಿಸಲಾಗಿದೆ. ಈತ ಕೂಡ ಸುಬ್ಬ ಗೌಡರೊಂದಿಗೆ ಯುದ್ಧದಲ್ಲಿ ಬಂಧಿಸಲ್ಪಟ್ಟು ಸಾಯುತ್ತಾನೆ. ನಂತರ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಾನೆ. ಮೊಗ್ರಾಲ್, ಮಡಪ್ಪಾಡಿ ಮೊದಲಾದೆಡೆಗಳಲ್ಲಿ ಈತನಿಗೆ ಆರಾಧನೆ ಇದೆ.

ಬೈಸುನಾಯಕ[ಬದಲಾಯಿಸಿ]

ಸುಳ್ಯದ ಕಾಯರ್ತೊಡಿಯ ಜಾಲಾಟ ಎಂಬ ಸಮೂಹ ಭುತಾರಾಧನೆಯಲ್ಲಿ ಬೈಸುನಾಗ /ಬೈಸು ನಾಯಕನಿಗೆ ಆರಾಧನೆ ಇದೆ .ಇಲ್ಲಿ ಈ ಭೂತಕ್ಕೆ ನೇಮ ಆಗುವ ಸಂದರ್ಭದಲ್ಲಿ ಜಯರಾಮ ಅಜಲರು ನನಗೆ ಮಾಹಿತಿ ನೀಡಿದ್ದಾರೆ . ಬಚ್ಚನಾಯಕ, ಕರಿಯಣ್ಣ ನಾಯಕರ ಸಂಧಿಯನ್ನು ಹೋಲುವ ಸಂಧಿಯನ್ನು ಬೈಸುನಾಯಕ ದೈವದ ಆರಾಧನೆಯ ಸಂದರ್ಭದಲ್ಲಿ ಹೇಳುತ್ತಾರೆ. ಬೈಸುನಾಯಕ ಉಗ್ರ ಸ್ವಭಾವದ ದೈವ. ಬೈಸುನಾಯಕನ ಸಂಧಿಯಲ್ಲಿ ಯುದ್ಧದ ಪ್ರಸ್ತಾಪವಿಲ್ಲ.

ಎಲವೋ ಬಾರಪ್ಪನೆಯ/ಯಾವ ಸೀಮೆಯಲ್ಲಿ ಹುಟ್ಟಿಕೊಂಡರು/ಕಾಂಗನೂರು ಸೀಮೆಯಲ್ಲಿ ಹುಟ್ಟಿ ಕೊಂಡ್ರುಕಾಂಗನೂರು ಸೀಮೆಯಲ್ಲಿ ಬೆಳೆದು ಕೊಂಡ್ರು/ತಾಯಿಯಾದ್ರು ಚಿಕ್ಕಂತಾಯಿ ತಂದೆಯಾದರು ದೊಡ್ಡಣ್ಣ ಗೌಡ್ರು/ಏಳು ವರ್ಷಕ್ಕೆ ನಾಲ್ಕಾರು ಬಂಟರು ಹುಟ್ಟಿ ಕೊಂಡ್ರು ./ಹುಟ್ಟಿದಂತ ಮಕ್ಕಳಿಗೆ ಹೊಕ್ಕಳು ಕತ್ತರಿಸ ಬೇಕುಚಿನ್ನದಂತ ಮಕ್ಕಳಿಗೆ ಹೆಸರನ್ನು ಕರೆಯ ಬೇಕು ಎಂದು ಬೈಸು ನಾಯಕನ ಹುಟ್ಟು ತಂದೆ ತಾಯಿ ಕುರಿತು ಪಾದ್ದನದಲ್ಲಿ ಹೇಳಿದೆ .ಈ ಪಾಡ್ದನ ಇಲ್ಲಿ ನೀಡಿರುವಂತೆಯೇ ಕನ್ನಡದಲ್ಲಿಯೇ ಇದೆ. ಬೈಸು ನಾಯಕ ದೊಡ್ಡವನಾದಾಗ/ಓ ಎಲವೋ ಬಾರಪ್ಪನೆಯಾ ಬಾರೆಪ್ಪನೆಯಾ/ನಾನಾದರು ಹೋಗುತ್ತೇನೆ ತಂದೆ/ತುಳು ಸೀಮೆಗೆ ತುಂಡು ರಾಜ್ಯಕ್ಕೆ ಹೋಗುತ್ತೇನೆ ಎಂದು ಹೇಳುತ್ತಾನೆ .ಆಗ"ನೀನಾದರೂ ಹೋಗ ಬೇಡ ಮಗನೆ/ತುಳು ಸೀಮೆ ತುಂಡು ರಾಜರು/ಕೋವಿಯನ್ನು ತೆಗೆದಾರು ಕತ್ತಿಯನ್ನು ತೆಗೆದಾರು ಕೋವಿ ತೆಗೆದು ಕತ್ತಿಯಲ್ಲಿ/ಕಡಿದಾರು ಮಗನೆ ಹೋಗ ಬೇಡ ಕಂದ

ಕನ್ನಡ ಬೀರತಂದೆ ತಾಯಿ ಬೇಡವೆಂದು ಹೇಳಿದರೂ ಕೇಳದೆ ಕತ್ತಿಯನ್ನು ತೆಗೆದು ಕೊಂಡು ತುಳು ನಾಡಿಗೆ ಹೊರಡುತ್ತಾನೆ. ಆಗ ಅವನ ಹೆಂಡತಿಯರು ಅವನನ್ನು ಅಡ್ಡ ಕಟ್ಟಿ ಉರುಳಾಡುತ್ತಾರೆ . ಆಗ ಅವರಿಗೆ ವಿಷ ಕೊಟ್ಟು ಸಾಯಿಸಿ ಘಟ್ಟ ಇಳಿದು ತುಳುನಾಡಿಗೆ ಬರುತ್ತಾನೆ .ಅವನಿಗೆ ದಾರಿಯಲ್ಲಿಯೇ ಅಪಶಕುನವಾಗುತ್ತದೆ ಆದರೂ ಬಾನಡ್ಕದ ಸಬ್ಬು ಗೌಡರ ಮನೆಗೆ ಬರುತ್ತಾನೆ ಬೈಸುನಾಯಕ ಅಲ್ಲಿಗೆ ಬಂದಾಗ ಸಬ್ಬಣ್ಣ ಗೌಡರು ಮನೆಯಿಂದ ತುಸು ದೂರದಲ್ಲಿರುವ ಮರಕ್ಕೆ ಹತ್ತಿರದ ಬಳ್ಳಿಯಿಂದ ವೀಳ್ಯದೆಲೆ ಕೀಳುತ್ತಾ ಇರುತ್ತಾರೆ. ಬೈಸುನಾಯಕ ಸಬ್ಬಣ್ಣ ಗೌಡರ ಮನೆಗೆ ಹೋಗಿ ನೀರು ಕೇಳುತ್ತಾನೆ. ಆಗ ಚಿನ್ನದ ತಂಬಿಗೆಯಲ್ಲಿ ನೀರು ತಂದು ಕೊಡುತ್ತಾಳೆ ಸಬ್ಬಣ್ಣ ಗೌಡರ ಮಡದಿ. ಆಕೆ ಆಗ ತುಂಬು ಗರ್ಭಿಣಿ. ತುಂಬು ಗರ್ಭಿಣಿಯಾದ ಅವಳು ತಂದ ನೀರನ್ನು ಬಲಗೈಯಲ್ಲಿ ತೆಗೆದುಕೊಂಡು, ಎಡಗೈಯಲ್ಲಿ ಅವಳನ್ನು ಹಿಡಿದೆಳೆದು ಅವಳ ಹೊಟ್ಟೆ ಸೀಳುತ್ತಾನೆ ಬೈಸುನಾಯಕ. ಅವಳ ಗರ್ಭದಲ್ಲಿರುವ ಮಗುವನ್ನು ಮಡಿಲಲ್ಲಿ ಇಟ್ಟುಕೊಳ್ಳುತ್ತಾನೆ. ಅಷ್ಟರಲ್ಲಿ ಮನೆಯ ಹೆಂಗಸರು ಕಳ್ಳ ಕಳ್ಳಾ ಎಂದು ಕೂಗಿಕೊಳ್ಳುತ್ತಾರೆ. ಬೈಸುನಾಯಕ ಓಡಿ ಹೋಗಲು ಪ್ರಯತ್ನಿಸುತ್ತಾನೆ. ಆತ ಓಡುವಾಗ ಸಿಕ್ಕಿ ಹಾಕಿಕೊಳ್ಳುತ್ತಾನೆ. ಆತನ ಕೈ ಕಾಲನ್ನು ತುಂಡು ಮಾಡಿದರು ಎಂದು ಪಾಡ್ದನದಲ್ಲಿ ಹೇಳಿದೆ. ಪಾಡ್ದನದ ಕೊನೆಯಲ್ಲಿ ಆತ ಜಂಗ ಭಂಟನಾಗಿ ಹುಟ್ಟುತ್ತಾನೆ ಎಂದು ಹೇಳಿದೆ. ಕಾಯರ್ತೋಡಿಯ ಜಾಲಾಟದಲ್ಲಿ ಬೈಸುನಾಯಕನಿಗೆ ನೇಮ ನೀಡಿದ ನಂತರ ಜಂಗ ಭಂಟನಿಗೆ ನೇಮವಿರುತ್ತದೆ.ಈತನ ಪಾಡ್ದನ ನಿರೂಪಣಾತ್ಮಕ ಶೈಲಿಯಲ್ಲಿದೆ . ಬಚ್ಚನಾಯಕ, ಕರಿಯಣ್ಣ ನಾಯಕರ ಸಹೋದರ ಬೈಸುನಾಯಕ. ಅಣ್ಣಂದಿರನ್ನು ಕೊಂದದ್ದಕ್ಕಾಗಿ ದ್ವೇಷ ಸಾಧಿಸಲು ಬಂದಾತನೇ ಈತನಿರುವ ಸಾಧ್ಯತೆ ಇದೆ ಆದರೆ ಈ ಬಗ್ಗೆ ಪಾದ್ದನದಲ್ಲಿ ಮಾಹಿತಿ ಇಲ್ಲ. ಆತ ತುಳುನಾಡಿಗೆ ಯಾಕೆ ಬರುತ್ತಾನೆ ಎಂದು ಪಾದ್ದನದಲ್ಲಿ ಎಲ್ಲೂ ಹೇಳಿಲ್ಲ .

ಬೈಸುನಾಯಕ ಬಚ್ಚನಾಯಕನಂತೆ ಯುದ್ಧವೀರನಲ್ಲ. ನೇರವಾಗಿ ಹೋರಾಟ ಮಾಡಿರುವ ಬಗ್ಗೆಯೂ ಪಾಡ್ದನದಲ್ಲಿ ಏನೂ ಸೂಚನೆ ಸಿಗುವುದಿಲ್ಲ. ಬದಲಿಗೆ ಆತ ನೀರು ಕೊಡಲು ಬಂದಾಕೆಯನ್ನು ಕೊಲ್ಲುವ ವಿಚಾರವಿದೆ. ಜೊತೆಗೆ ಮನೆಮಂದಿ ಕಳ್ಳ ಕಳ್ಳ ಎಂದು ಬೊಬ್ಬಿರಿದ ವಿಚಾರ ಹಾಗೂ ಆತ ಓಡಿಹೋಗುವಾಗ ಹಿಡಿದು ಕೈ ಕಾಲು ಕತ್ತರಿಸಿದ ವಿಚಾರವಿದೆ. ಕಳ್ಳನೊಬ್ಬ ಕದಿಯಲು ಬಂದು ಸಿಕ್ಕಿಹಾಕಿಕೊಂಡು, ಹೊಡೆತ ತಿಂದು, ಮರಣವನ್ನಪ್ಪಿ, ಕಾಲಾಂತರದಲ್ಲಿ ಬಚ್ಚನಾಯಕ, ಸಹೋದರನೆಂದು ಪರಿಭಾವಿಸಲ್ಪಟ್ಟು ದೈವತ್ವಕ್ಕೇರಿರುವ ಸಾಧ್ಯತೆ ಕೂಡ ಇಲ್ಲಿ ಕಾಣಿಸುತ್ತದೆ ಅಥವಾಯಾವುದೋ ದ್ವೇಷ ಸಾಧನೆಗಾಗಿ ಬಂದು ಹೆಣ್ಣುಮಗಳೊಬ್ಬಳನ್ನು ಕೊಂದು ಬಿಡುವಾಗ ಕಳ್ಳನೆಂದು ಹಿಡಿದು ಸಾಯಿಸಿರುವ ಸಾಧ್ಯತೆ ಕೂಡ ಇದೆ.

ಬೈಸು ನಾಯಕನನ್ನು ಬೈಸುನಾಗ ಎಂಬ ಹೆಸರಿನಲ್ಲಿಯೂ ಕರೆಯುತ್ತಾರೆ. ಸುಳ್ಯ ಪರಿಸರದ ಗುತ್ತಿಗಾರು ಮೊಗ್ರಾಲ್, ಕಾಯತ್ರ್ತೋಡಿ ಮೊದಲಾದ ಪ್ರದೇಶಗಳಲ್ಲಿ ಬೈಸುನಾಯಕ ದೈವಕ್ಕೆ ಆರಾಧನೆ ಇದೆ.

ಇದು ನನ್ನ ತುಳುನಾಡಿನ ಅಪೂರ್ವ ಭೂತಗಳು ಪುಸ್ತಕದಲ್ಲಿನ ಬರಹ ,ಇದಕ್ಕೆ ಕಾಪಿರೈಟ್ ಇಟ್ಟು ಕೊಂಡಿರುವ ಕಾರಣ ನಾನು ವಿಕಿಪೀಡಿಯ ಕ್ಕೆ ನೀಡಿಲ್ಲ ಯಾರೋ ಕದ್ದು ಇಲ್ಲಿ ಹಾಕಿದ್ದಾರೆ - ಡಾ ಲಕ್ಷ್ಮೀ ಜಿ ಪ್ರಸಾದ

ಕನ್ನಡ ಭೂತ[ಬದಲಾಯಿಸಿ]

ಘಟ್ಟದ ಮೇಲಿನ ರಾಜ್ಯದಲ್ಲಿ ನೀಲಮ್ಮ ಹೆಂಗಸು ಮತ್ತು ಭೈರವ ಎಂಬ ಕನ್ನಡ ಭಾಷಿಕ ದಂಪತಿಗಳಿದ್ದರು. ಮದುವೆಯಾಗಿ ಅನೇಕ ವರ್ಷಗಳು ಕಳೆದರೂ ಅವರಿಗೆ ಮಕ್ಕಳಾಗುವುದಿಲ್ಲ. ಅನಂತರ ಅವರು ‘ಭೈರವ' ದೈವಕ್ಕೆ ಹರಿಕೆ ಹೇಳುತ್ತಾರೆ. ಆಗ ಅವರಿಗೆ ಒಂದು ಮಗು ಸತ್ಯದಲ್ಲಿ ಜನಿಸುತ್ತದೆ. ಮಗು ಹುಟ್ಟಿದ ನಂತರ ಹರಿಕೆ ಸಂದಾಯ ಮಾಡುವುದನ್ನು ನೀಲಮ್ಮ, ಭೈರವ ದಂಪತಿಗಳು ಮರೆತು ಬಿಡುತ್ತಾರೆ. ಅವರಿಗೆ ಹುಟ್ಟಿದ ಸತ್ಯದ ಮಗು ದೊಡ್ಡವನಾಗಿ ಶೂರನಾಗಿ ಸಾಹಸಿಯಾಗಿ ಬೆಳೆಯುತ್ತಾನೆ. ಒಂದು ದಿನ ಅವನಿಗೆ ತುಳುನಾಡನ್ನು ನೋಡಬೇಕು, ತುಳು ವಿದ್ಯೆಯನ್ನು ಕಲಿಯಬೇಕು ಎಂದು ಆಸೆಯಾಗಿ ಘಟ್ಟ ಇಳಿದು ಬರುತ್ತಾನೆ. ತಂದ ಬುತ್ತಿಯಲ್ಲಿರುವ ಆಹಾರವನ ದಾರಿಯಲ್ಲಿ ಹಸಿದಿರುವ ಪ್ರಾಣಿ ಪಕ್ಷಿಗಳಿಗೆ ಹಾಕುತ್ತಾನೆ. ಘಟ್ಟ ಇಳಿದು ಕುಮಾರಧಾರ ನದಿಗೆ ಬಂದು ಸ್ನಾನ ಮಾಡುವಾಗ ಮಾಯಕವಾಗುತ್ತಾನೆ.

ಕುಮಾರಧಾರಾ ನದಿಯಲ್ಲಿ ಮಾಯಕವಾದ ಆತ ‘ಕನ್ನಡ ಭೂತ'ವಾಗಿ ದೈವತ್ವಕ್ಕೇರುತ್ತಾನೆ. ಮುಂದೊಂದು ದಿನ ಅಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಮೂರ್ತೆದಾರನ ಬಳಿ ಮಾನವ ರೂಪ ಧರಿಸಿ ‘ಕಳ್ಳು' ಕೇಳುತ್ತಾನೆ. ಅವನು ಕಳ್ಳು ನೀಡಿದಾಗ ‘ಕಳ್ಳು' ಮತ್ತು ಮನುಷ್ಯ ರೂಪದ ಕನ್ನಡ ಭೂತ ಮಾಯವಾಗುತ್ತದೆ. ಆ ಮೂರ್ತೆದಾರ ಆಶ್ಚರ್ಯದಿಂದ ಬಲಿಮೆಯಲ್ಲಿ ಕೇಳಿದಾಗ ‘ಕನ್ನಡ ಭೂತ' ಉದ್ಭವವಾದ ವಿಚಾರ ತಿಳಿದು ಬರುತ್ತದೆ. ಮುಂದೆ ಕನ್ನಡ ಭೂತದ ಆರಾಧನೆ ನಡೆಯುತ್ತದೆ. ಸುಳ್ಯ, ಪುತ್ತೂರು ಪರಿಸರದ ಅಂಕತಡ್ಕ ಮೊದಲಾದ ಪ್ರದೇಶಗಳಲ್ಲಿ ಕುಂಟಲ್ದಾಯ ದೈವದ ನೇಮ ಆಗುವಾಗ ಕನ್ನಡ ಭೂತಕ್ಕೆ ನೇಮ ನೀಡಿ ಆರಾಧಿಸುತ್ತಾರೆ. ಕನ್ನಡ ಭೂತಕ್ಕೆ ಒಂದು ವಿಶಿಷ್ಟ ಟೊಪ್ಪಿಗೆ, ಕಚ್ಚೆ ಹಾಗೂ ತೆಂಗಿನ ತಿರಿಯ ಅಲಂಕಾರವಿರುತ್ತದೆ.

ಎರು - ಶೆಟ್ಟಿ (ಮಲೆ ಮುದ್ದ)[ಬದಲಾಯಿಸಿ]

ಘಟ್ಟದಿಂದ ಉಳ್ಳಾಕುಲುಗಳೊಂದಿಗೆ ಬಂದ ದೈವ ಎರು ಶೆಟ್ಟಿ (ಮಲೆ ಮುದ್ದ). ವ್ಯಾಪಾರಿಯೊಬ್ಬ ಕೋಣವನ್ನು ಹಿಡಿದುಕೊಂಡು ಬರುವಾಗ ಸುಂಕದವನು ಅಡ್ಡ ಕಟ್ಟಿ ಸುಂಕ ಕೊಡಲು ಹೇಳುತ್ತಾನೆ. ಕೊನೆಗೆ ತನ್ನಲ್ಲಿರುವ ಅಂಗಿ, ಶಾಲು ಎಲ್ಲವನ್ನೂ ಶೆಟ್ಟಿ ಸುಂಕವಾಗಿ ನೀಡಬೇಕಾಗುತ್ತದೆ. ಮುಂದೆ ಈತ ಮತ್ತು ಈತನ ಕೋಣ ಎರು ಮತ್ತು ಶೆಟ್ಟಿ ದೈವಗಳಾಗಿ ಆರಾಧಿಸಲ್ಪಡುತ್ತಾರೆ. ಶೆಟ್ಟಿಯ ಪಾತ್ರವನ್ನು ಉಳ್ಳಾಕುಲುವನ್ನು ಕಟ್ಟಿದಾತ ತುಸು ವೇಷ ಬದಲಾವಣೆ ಮಾಡಿ ಕಟ್ಟುತ್ತಾನೆ. ಕೋಣದ ಪಾತ್ರವನ್ನು ಚಿಕ್ಕ ಹುಡುಗ ಮಾಡುತ್ತಾನೆ. ಆತನ ತಲೆಗೆ ತೆಂಗಿನ ಹಾಳೆಯಿಂದ ಮಾಡಿದ ಎರು ಶೆಟ್ಟಿಎರಡು ಕೊಂಬುಗಳಿರುವ ಮುಖವಾಡವನ್ನು ಕಟ್ಟುತ್ತಾರೆ. ಶೆಟ್ಟಿ ಕೋಣವನ್ನು ಹಿಡಿದುಕೊಂಡು, ಹಾಡು ಹೇಳಿಕೊಂಡು ಭಿಕ್ಷೆ ಬೇಡುವ ಅಭಿನಯವನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿ ನೆರೆದ ಮಂದಿ ಆತನ ತಟ್ಟೆಗೆ ದುಡ್ಡು ಹಾಕುತ್ತಾರೆ. ಎರು ಶೆಟ್ಟಿ ಕೂಡಾ ವಿದೂಷಕನಂತೆ ಹಾಸ್ಯದ ಅಭಿವ್ಯಕ್ತಿಯನ್ನು ಮಾಡುತ್ತಾನೆ

ಇದು ನನ್ನ ತುಳುನಾಡಿನ ಅಪೂರ್ವ ಭೂತಗಳು ಪುಸ್ತಕದಲ್ಲಿನ ಬರಹ ,ಇದಕ್ಕೆ ಕಾಪಿರೈಟ್ ಇಟ್ಟು ಕೊಂಡಿರುವ ಕಾರಣ ನಾನು ವಿಕಿಪೀಡಿಯ ಕ್ಕೆ ನೀಡಿಲ್ಲ ಯಾರೋ ಕದ್ದು ಇಲ್ಲಿ ಹಾಕಿದ್ದಾರೆ - ಡಾ ಲಕ್ಷ್ಮೀ ಜಿ ಪ್ರಸಾದ

ಉಲ್ಲೇಖ[ಬದಲಾಯಿಸಿ]

ಡಾ.ಲಕ್ಷ್ಮೀ ಜಿ ಪ್ರಸಾದ ,ತುಳುನಾಡಿನ ಅಪೂರ್ವ ಭೂತಗಳು .ಮಾತೃ ಶ್ರೀ ಪ್ರಕಾಶನ ಬೆಂಗಳೂರು