ವಿಷಯಕ್ಕೆ ಹೋಗು

ತುರುವೇಕೆರೆ ಪ್ರಸಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುರುವೇಕೆರೆ ಪ್ರಸಾದ ಇವರು ಕನ್ನಡದ ಜನಪ್ರಿಯ ಹಾಸ್ಯಸಾಹಿತಿಗಳು. ಇವರ ಹಾಸ್ಯಲೇಖನಗಳು ಕನ್ನಡದ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಕೇಂದ್ರದಲ್ಲಿ ಇರುವ ಪ್ರಸಾದ್ ತಮ್ಮ ಹಾಸ್ಯ, ಚುಟುಕಗಳಿಂದ ತಾಲೂಕಿನಲ್ಲೇ ಮನೆ ಮಾತಾಗಿದ್ದಾರೆ. ಹಲವು ಟಿ.ವಿ. ಧಾರಾವಾಹಿಗಳಿಗೆ ಸಂಭಾಷಣೆ, ಸಾಹಿತ್ಯ ಒದಗಿಸಿರುವ ಅವರು, ತುರುವೇಕೆರೆ ತಾಲೂಕು ಕೇಂದ್ರದಲ್ಲಿ ವಿವಿಧ ಜನಪ್ರಿಯ ಪತ್ರಿಕೆಗಳ ವರದಿಗಾರರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ಪುಸ್ತಕಗಳನ್ನೂ ಬರೆದಿರುವ ಪ್ರಸಾದ್ ಅತ್ಯುತ್ತಮ ವಾಗ್ಮಿ. ಹಾಸ್ಯಮಯವಾಗಿ ಮಾತನಾಡುತ್ತಾರೆ. ಉತ್ತಮ ಬರಹಗಾರರು.

ಕಿರು ಪರಿಚಯ:ತಂದೆ ಟಿ.ಎಲ್.ನಾಗರಾಜ್ ನಿವೃತ್ತ ಪ್ರಾಂಶುಪಾಲರು.ತಾಯಿ ದಿ. ಶಾಂತಮ್ಮ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತುಮಕೂರುವಾರ್ತೆ, ಉದಯವಾಣಿ, ಮುಂತಾದ ಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಕಟಿತ ಪುಸ್ತಕಗಳು: ನಮಸ್ಕಾರ, ವೈಫು ಮತ್ತು ವೆಹಿಕಲ್ಲು, ಅಶ್ವಮೇಧ, ಮಿನಿ ಭಾಮಿನಿಯರ ನಡುವೆ,ಬಿಚ್ಚು ಮಾತು, ಜೋಕು ಜೋಕೆ, ಹಾಲಜ್ಜಿ ಮತ್ತು ಜಾಪಾಳ ಲೇಹ, ಲಘು ಸಿದ್ಧಾಂತ ಕಾ-ಮಿಡಿ, ಟೈಂಪಾಸ್, ಕನಕಲಕ್ಷ್ನಿಯ ಕಂಟ್ರಿ ರೈಡ್(ನಗೆ ಬರಹಗಳ ಸಂಕಲನಗಳು) ಭ್ರಮರ(ಹಾಸ್ಯ ಕಾದಂಬರಿ) ಮುಚ್ಚಿಡದ ಮಾತು(ಅಂಕಣ ಬರಹಗಳು) ಬಾಕ್ಸ್ ಐಟಂ(ಸುದ್ದಿ ತುಣುಕುಗಳು), ಸುತ್ತ ಮುತ್ತ, ಹೆಗಲಿನಿಂದ ಹೆಗಲಿಗೆ ಗಾಂಧಿಗಿರಿ (ಪತ್ರಿಕಾ ಬರಹಗಳು). ಮುಸುಕಿನೊಳಗಿನ ಏಕಾಂತ ಮತ್ತು ಇತರೆ ಪ್ರಬಂಧಗಳು.(ಪ್ರಬಂಧ ಸಂಗ್ರಹ). ಕರ್ಮವೀರ ಪತ್ರಿಕೆಯಲ್ಲಿನ ಸವಾಲ್-ಜವಾಬ್ ಅಂಕಣ ಜನಪ್ರಿಯವೆನಿಸಿದೆ. ‘ಪ್ರಸಾದ್ ಯಶಸ್ಸು ಗಳಿಸುವುದು ಹೇಗೆ?’ ‘ಪಾಸಿಟೀವ್ ಥಿಂಕಿಂಗ್ ಎಂದರೇನು?’ ಮೊದಲಾದ ವಿಷಯಗಳ ಬಗ್ಗೆ ವ್ಯಕ್ತಿತ್ವ ವಿಕಸನ ತರಬೇತಿಯನ್ನೂ ನೀಡುತ್ತಿದ್ದಾರೆ.

ಕಿರುತೆರೆ ಸಾಧನೆ:. ಖ್ಯಾತ ನಿರ್ದೇಶಕ ಶ್ರೀ ಟಿ.ಎಸ್.ನಾಗಾಭರಣ ಅವರ ಗೆಳತಿ, ಜೀವನ್ಮುಖಿ, ದೂರ ತೀರ ಯಾನ, ಅಪ್ಪ, ಮಹಾಮಾಯಿ, ನೆಲಮುಗಿಲು, ಕೆಳದಿ ಚೆನ್ನಮ್ಮ, ವೈಶಾಲಿ ಕಾಸರವಳ್ಳಿ ಅವರ “ಮುತ್ತಿನ ತೋರಣ”. ಜೀ ವಾಹಿನಿಯ ಅರಸಿ,ಕನಕ ಧಾರಾವಾಹಿಗಳಿಗೆ ಸಂಭಾಷಣೆ ರಚಿಸಿದ್ದಾರೆ. ಹನುಮಕ್ಕ, ಕ್ಷೀರಸಾಗರ ಮುಂತಾದ ಸಾಕ್ಷ್ಯ ಚಿತ್ರಗಳಿಗೆ ಚಿತ್ರಕತೆ ಸಂಭಾಷಣೆ ರಚಿಸಿದ್ದಾರೆ. ಸದ್ಯ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ 'ಅಮೃತ ವರ್ಷಿಣಿಯ ಸಂಭಾಷಣೆ ರಚನೆಯ ಜವಾಬ್ಧಾರಿ ಹೊತ್ತಿದ್ದಾರೆ.

ಪ್ರಶಸ್ತಿ-ಪುರಸ್ಕಾರ: ಸೇಡಂನ ಅಮ್ಮ ಪ್ರಶಸ್ತಿ,ಬೆಂಗಳೂರಿನ ಅತ್ತಿಮಬ್ಬೆ ಸಾಹಿತ್ಯ ಪುರಸ್ಕಾರ, ಗೊರೂರು ಸಾಹಿತ್ಯ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ( ಎರಡು ಬಾರಿ), ಸ್ನೇಹ ಸೇತು ಪ್ರಶಸ್ತಿ, ಕೇಫ ಸ್ಮಾರಕ ಪ್ರಶಸ್ತಿ . ‘ಬುರುಡೇ ಸ್ವಾಮಿಯ ಇಣುಕು ಚಟ’ ವಿಡಂಬನಾತ್ಮಕ ಲೇಖನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2008ನೇ ಸಾಲಿನ ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯ ಪ್ರಶಸ್ತಿ ಮತ್ತು ‘ಕನಕಲಕ್ಷ್ಮಿಯ ಕಂಟ್ರಿ ರೈಡ್’ ಕೃತಿಗೆ ರಾಜ್ಯ ಕಸಾಪದ 2009ನೇ ಸಾಲಿನ ಕುಂಬಾಸ ಪ್ರಶಸ್ತಿ ದೊರಕಿದೆ. 2011ನೇ ಸಾಲಿನ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

ಪ್ರಸಾದ್ ಪತ್ನಿ ಶ್ರೀಮತಿ ರೇಖಾ ಕುಂದಾರು ತರಂಗದಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಕಾವ್ಯ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅವರ ‘ಹಕ್ಕಿ ಹೆಜ್ಜೆ’ ಕವನ ಸಂಕಲನ ಪ್ರಕಟಗೊಂಡಿದೆ. ಶರಧಿ, ನಿಶಿತಾ ಈ ದಂಪತಿಯ ಮಕ್ಕಳು.


ವರ್ಗ : ಕನ್ನಡ ಚುಟುಕು