ವೆಂಕಟೇಶ್ವರ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ತಿರುಮಲ ವೆಂಕಟೇಶ್ವರ ದೇವಸ್ಠಾನ ಇಂದ ಪುನರ್ನಿರ್ದೇಶಿತ)

ವೆಂಕಟೇಶ್ವರ ದೇವಸ್ಥಾನವು ಭಾರತದ ಆಂಧ್ರಪ್ರದೇಶ ರಾಜ್ಯದ ತಿರುಪತಿ ಜಿಲ್ಲೆಯ ತಿರುಮಲ ಪಟ್ಟಣದಲ್ಲಿರುವ ಒಂದು ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ವಿಷ್ಣುವಿನ ರೂಪನಾದ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ. ಅವನು ಕಲಿಯುಗದ ಪರೀಕ್ಷೆಗಳು ಮತ್ತು ತೊಂದರೆಗಳಿಂದ ಮಾನವಕುಲವನ್ನು ರಕ್ಷಿಸಲು ಭೂಮಿಯ ಮೇಲೆ ಕಾಣಿಸಿಕೊಂಡನು ಎಂದು ನಂಬಲಾಗಿದೆ. ಆದ್ದರಿಂದ ಈ ಸ್ಥಳವು ಕಲಿಯುಗ ವೈಕುಂಠ ಎಂಬ ಹೆಸರನ್ನೂ ಪಡೆದುಕೊಂಡಿದೆ ಮತ್ತು ಇಲ್ಲಿನ ಭಗವಂತನನ್ನು ಕಲಿಯುಗ ಪ್ರತ್ಯಕ್ಷ ದೈವಂ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನವನ್ನು ತಿರುಮಲ ದೇವಸ್ಥಾನ, ತಿರುಪತಿ ದೇವಸ್ಥಾನ ಮತ್ತು ತಿರುಪತಿ ಬಾಲಾಜಿ ದೇವಸ್ಥಾನದಂತಹ ಇತರ ಹೆಸರುಗಳಿಂದ ಕರೆಯಲಾಗುತ್ತದೆ. ವೆಂಕಟೇಶ್ವರನನ್ನು ಇತರ ಹಲವು ಹೆಸರುಗಳಿಂದ ಕರೆಯಲಾಗುತ್ತದೆ: ಬಾಲಾಜಿ, ಗೋವಿಂದ ಮತ್ತು ಶ್ರೀನಿವಾಸ.[೧] ಆಂಧ್ರಪ್ರದೇಶ ಸರ್ಕಾರದ ನಿಯಂತ್ರಣದಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಈ ದೇವಾಲಯವನ್ನು ನಡೆಸುತ್ತಿದೆ. ಟಿಟಿಡಿಯ ಮುಖ್ಯಸ್ಥರನ್ನು ಆಂಧ್ರ ಪ್ರದೇಶ ಸರ್ಕಾರ ನೇಮಿಸುತ್ತದೆ. ಈ ದೇಗುಲದಿಂದ ಬರುವ ಆದಾಯವನ್ನು ಆಂಧ್ರಪ್ರದೇಶ ಸರ್ಕಾರ ಬಳಸುತ್ತದೆ.[೨][೩]

ತಿರುಮಲ ಬೆಟ್ಟಗಳು ಶೇಷಾಚಲಂ ಬೆಟ್ಟಗಳ ಶ್ರೇಣಿಯ ಭಾಗವಾಗಿವೆ. ಬೆಟ್ಟಗಳು ಏಳು ಶಿಖರಗಳನ್ನು ಒಳಗೊಂಡಿದ್ದು, ಆದಿಶೇಷನ ಏಳು ತಲೆಗಳನ್ನು ಪ್ರತಿನಿಧಿಸುತ್ತದೆ. ಈ ದೇವಾಲಯವು ವೆಂಕಟಾದ್ರಿ ಏಳನೇ ಶಿಖರದಲ್ಲಿದೆ. ಇದು ಶ್ರೀ ಸ್ವಾಮಿ ಪುಷ್ಕರಿಣಿ ಎಂಬ ಪವಿತ್ರ ನೀರಿನ ಕಲ್ಯಾಣಿಯ ದಕ್ಷಿಣ ದಂಡೆಯಲ್ಲಿದೆ. ಆದ್ದರಿಂದ ದೇವಾಲಯವನ್ನು "ಏಳು ಬೆಟ್ಟಗಳ ದೇವಾಲಯ" ಎಂದೂ ಕರೆಯಲಾಗುತ್ತದೆ.[೪]

ಈ ದೇವಾಲಯವನ್ನು ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಕ್ರಿ.ಶ. 300 ದಿಂದ ಪ್ರಾರಂಭವಾಗುವ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.[೫] ಗರ್ಭಗೃಹವನ್ನು ಆನಂದ ನಿಲಯ ಎಂದು ಕರೆಯಲಾಗುತ್ತದೆ. ಪ್ರಧಾನ ದೇವತೆಯಾದ ವೆಂಕಟೇಶ್ವರನು ನಿಂತಿರುವ ಭಂಗಿಯಲ್ಲಿದ್ದಾನೆ ಮತ್ತು ಗರ್ಭಗೃಹದಲ್ಲಿ ಪೂರ್ವಕ್ಕೆ ಮುಖಮಾಡಿದ್ದಾನೆ. ದೇವಾಲಯವು ಪೂಜೆಯ ವೈಖಾನಸ ಆಗಮ ಸಂಪ್ರದಾಯವನ್ನು ಅನುಸರಿಸುತ್ತದೆ. ಈ ದೇವಾಲಯವು ಎಂಟು ವಿಷ್ಣು ಸ್ವಯಂಭೂ ಕ್ಷೇತ್ರಗಳಲ್ಲಿ ಒಂದಾಗಿದೆ ಮತ್ತು ಇದನ್ನು 75 ನೇ ದಿವ್ಯ ದೇಶವೆಂದು ಪಟ್ಟಿ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಯಾತ್ರಿಕರ ದಟ್ಟಣೆಯನ್ನು ನಿರ್ವಹಿಸಲು ಎರಡು ಆಧುನಿಕ ಸರತಿ ಸಂಕೀರ್ಣ ಕಟ್ಟಡಗಳು, ಯಾತ್ರಾರ್ಥಿಗಳಿಗೆ ಉಚಿತ ಊಟಕ್ಕಾಗಿ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದಂ ಸಂಕೀರ್ಣ, ಕೇಶಮುಂಡನ ಕಟ್ಟಡಗಳು ಮತ್ತು ಹಲವಾರು ಯಾತ್ರಿ ವಸತಿ ನಿಲಯಗಳಿವೆ.

ಸ್ವೀಕರಿಸಿದ ದೇಣಿಗೆ ಮತ್ತು ಸಂಪತ್ತಿನ ದೃಷ್ಟಿಯಿಂದ ಇದು ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.[೬][೭][೮]

ತಿರುಮಲದಲ್ಲಿ ಭಗವಂತ ಕಾಣಿಸಿಕೊಂಡಿದ್ದಕ್ಕೆ ಸಂಬಂಧಿಸಿದ ಹಲವಾರು ದಂತಕಥೆಗಳಿವೆ . ಒಂದು ದಂತಕಥೆಯ ಪ್ರಕಾರ, ದೇವಾಲಯವು ವೆಂಕಟೇಶ್ವರನ ಮೂರ್ತಿಯನ್ನು ಹೊಂದಿದೆ. ಇದು ಪ್ರಸ್ತುತ ಕಲಿಯುಗದ ಸಂಪೂರ್ಣ ಅವಧಿಯವರೆಗೆ ಇಲ್ಲಿಯೇ ಇರುತ್ತದೆ ಎಂದು ನಂಬಲಾಗಿದೆ.[೯][೧೦][೧೧]

ದೇವಾಲಯದ ದಂತಕಥೆ[ಬದಲಾಯಿಸಿ]

ದ್ವಾಪರ ಯುಗದಲ್ಲಿ, ಆದಿಶೇಷನು ವಾಯುವಿನೊಂದಿಗೆ ಸ್ಪರ್ಧಿಸಿ ಸೋತ ನಂತರ ಶೇಷಾಚಲಂ ಬೆಟ್ಟವಾಗಿ ಭೂಮಿಯ ಮೇಲೆ ನೆಲೆಸಿದನು . ಪುರಾಣಗಳ ಪ್ರಕಾರ ತಿರುಮಲವನ್ನು ಆದಿವರಾಹ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಹಿರಣ್ಯಾಕ್ಷನನ್ನು ಕೊಂದ ನಂತರ, ಆದಿವರಾಹನು ಬೆಟ್ಟದಲ್ಲಿ ನೆಲೆಸಿದನು. ವೆಂಕಟಾಚಲ ಮಹಾತ್ಯಂ ತಿರುಮಲ ದೇವಸ್ಥಾನದ ಬಗ್ಗೆ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ದಂತಕಥೆಯಾಗಿದೆ.[೧೨]

ಕಲಿಯುಗದಲ್ಲಿ, ನಾರದನು ಯಜ್ಞವನ್ನು ಮಾಡುತ್ತಿದ್ದ ಕೆಲವು ಋಷಿಗಳಿಗೆ ತ್ರಿಮೂರ್ತಿಗಳ (ಬ್ರಹ್ಮ, ವಿಷ್ಣು ಮತ್ತು ಶಿವ) ಪೈಕೆ ಯಾರಿಗೆ ಯಜ್ಞದ ಫಲವನ್ನು ನೀಡಬಹುದು ಎಂದು ನಿರ್ಧರಿಸಲು ಸಲಹೆ ನೀಡಿದನು. ತ್ರಿಮೂರ್ತಿಗಳನ್ನು ಪರೀಕ್ಷಿಸಲು ಭೃಗುವನ್ನು ಕಳುಹಿಸಲಾಯಿತು. ತನ್ನ ಪಾದದ ಅಡಿಭಾಗದಲ್ಲಿ ಹೆಚ್ಚುವರಿ ಕಣ್ಣು ಹೊಂದಿದ್ದ ಋಷಿಯು ಬ್ರಹ್ಮ ಮತ್ತು ಶಿವನನ್ನು ಭೇಟಿ ಮಾಡಿದನು ಮತ್ತು ಈ ಎರಡೂ ಸ್ಥಳಗಳಲ್ಲಿ ಇವನನ್ನು ಗಮನಿಸಲಾಗಲಿಲ್ಲ. ಬ್ರಹ್ಮನನ್ನು ಪೂಜಿಸದಂತೆ ಮತ್ತು ಶಿವನನ್ನು ಲಿಂಗವಾಗಿ ಪೂಜಿಸುವಂತೆ ಅವನು ಶಾಪ ನೀಡಿದನು. ಕೊನೆಗೆ ಅವನು ವಿಷ್ಣುವನ್ನು ಭೇಟಿ ಮಾಡಿದನು ಮತ್ತು ಭಗವಂತನು ಭೃಗುವನ್ನು ಗಮನಿಸಲಿಲ್ಲವೆಂಬಂತೆ ವರ್ತಿಸಿದನು. ಈ ಕೃತ್ಯದಿಂದ ಕೋಪಗೊಂಡ ಭೃಗು ಋಷಿಯು ವಿಷ್ಣುವಿನ ಎದೆಗೆ ಒದೆಯುತ್ತಾನೆ. ಇದಕ್ಕೆ ವಿಷ್ಣುವು ಪ್ರತಿಕ್ರಿಯಿಸಲಿಲ್ಲ ಬದಲಾಗಿ ಋಷಿಯ ಪಾದಗಳನ್ನು ಮಾಲೀಶು ಮಾಡುವ ಮೂಲಕ ಕ್ಷಮೆಯಾಚಿಸಿದನು. ಈ ಕೃತ್ಯದ ಸಮಯದಲ್ಲಿ, ಅವನು ಭೃಗುವಿನ ಪಾದದ ಅಡಿಭಾಗದಲ್ಲಿದ್ದ ಹೆಚ್ಚುವರಿ ಕಣ್ಣನ್ನು ಹಿಂಡಿದನು. ಆದರೆ ವಿಷ್ಣುವಿನ ಎದೆಯನ್ನು ಲಕ್ಷ್ಮಿಯ ನಿವಾಸ (ವಕ್ಷಸ್ಥಳ) ಎಂದು ಪರಿಗಣಿಸಿದ್ದರಿಂದ ಲಕ್ಷ್ಮಿಗೆ ಅದು ಅವಮಾನವೆಂದು ತೋರುತ್ತದೆ ಮತ್ತು ಭೃಗು ಅದನ್ನು ಒದ್ದಿದ್ದರಿಂದ ಅದು ಪರೋಕ್ಷವಾಗಿ ಲಕ್ಷ್ಮಿಯನ್ನು ಅವಮಾನಿಸಿದಂತಾಯಿತು. ನಂತರ ಅವಳು ವೈಕುಂಠವನ್ನು ತೊರೆದು ಕೊಲ್ಹಾಪುರಕ್ಕೆ ಭೂಮಿಗೆ ಬಂದು ಧ್ಯಾನ ಮಾಡಲು ಪ್ರಾರಂಭಿಸಿದಳು.[೧೨]

ವಿಷ್ಣುವು ಶ್ರೀನಿವಾಸನಾಗಿ ಮಾನವ ರೂಪವನ್ನು ಧರಿಸಿ, ವೈಕುಂಠವನ್ನು ತೊರೆದು, ಲಕ್ಷ್ಮಿಯನ್ನು ಹುಡುಕುತ್ತಾ, ತಿರುಮಲದಲ್ಲಿರುವ ಶೇಷಾಚಲಂ ಬೆಟ್ಟಗಳನ್ನು ತಲುಪಿ ಧ್ಯಾನ ಮಾಡಲು ಪ್ರಾರಂಭಿಸಿದನು. ಲಕ್ಷ್ಮಿಯು ಶ್ರೀನಿವಾಸನ ಸ್ಥಿತಿಯನ್ನು ತಿಳಿದು ಶಿವ ಮತ್ತು ಬ್ರಹ್ಮನನ್ನು ಕರೆದಳು. ನಂತರ ಶಿವ ಮತ್ತು ಬ್ರಹ್ಮರು ತಮ್ಮನ್ನು ತಾವು ಹಸು ಮತ್ತು ಕರುವಾಗಿ ಪರಿವರ್ತಿಸಿಕೊಂಡರು ಮತ್ತು ಲಕ್ಷ್ಮಿ ಆ ಸಮಯದಲ್ಲಿ ತಿರುಮಲ ಬೆಟ್ಟಗಳನ್ನು ಆಳುತ್ತಿದ್ದ ಚೋಳ ರಾಜನಿಗೆ ಹಸು ಹಾಗೂ ಕರುವನ್ನು ಹಸ್ತಾಂತರಿಸಿದಳು. ಶ್ರೀನಿವಾಸನು ಹಸುವನ್ನು ಪ್ರತಿನಿತ್ಯ ಮೇಯಿಸಲು ಕೊಂಡೊಯ್ದಾಗ ಅದು ಅವನಿಗೆ ಹಾಲನ್ನು ಕೊಡುತ್ತಿತ್ತು. ಒಂದು ದಿನ, ಇದನ್ನು ನೋಡಿದ ಒಬ್ಬ ಗೋಪಾಲಕನು ತನ್ನ ಕೋಲಿನಿಂದ ಹಸುವನ್ನು ಹೊಡೆಯಲು ಪ್ರಯತ್ನಿಸಿದನು ಆದರೆ ಆ ಗಾಯವನ್ನು ಶ್ರೀನಿವಾಸನು ಸಹಿಸಿಕೊಂಡನು. ಇದರಿಂದ ಕೋಪಗೊಂಡ ಶ್ರೀನಿವಾಸನು ಚೋಳ ರಾಜನು ರಾಕ್ಷಸನಾಗುವಂತೆ ಶಪಿಸಿದನು ಏಕೆಂದರೆ ಸೇವಕರು (ಶೂದ್ರರು) ಮಾಡಿದ ಪಾಪಗಳನ್ನು ರಾಜರು ಹೊರಬೇಕೆಂದು ಧರ್ಮ ಹೇಳುತ್ತದೆ. ರಾಜನು ಕರುಣೆಗಾಗಿ ಪ್ರಾರ್ಥಿಸಿದನು. ಆ ರಾಜನು ಆಕಾಶರಾಜನಾಗಿ ಮುಂದಿನ ಜನ್ಮವನ್ನು ತೆಗೆದುಕೊಳ್ಳಬೇಕು ಮತ್ತು ಶ್ರೀನಿವಾಸನೊಂದಿಗೆ ತನ್ನ ಮಗಳು ಪದ್ಮಾವತಿಯ ವಿವಾಹವನ್ನು ಮಾಡಬೇಕೆಂದು ನಂತರ ಶ್ರೀನಿವಾಸನು ರಾಜನಿಗೆ ಹೇಳಿದನು.[೧೨]

ಶ್ರೀನಿವಾಸನು ತಿರುಮಲ ಬೆಟ್ಟದ ಮೇಲಿರುವ ತನ್ನ ಸಾಕುತಾಯಿ ವಕುಲಾ ದೇವಿಯ ಬಳಿಗೆ ಹೋಗಿ ಸ್ವಲ್ಪ ಕಾಲ ಇದ್ದನು. ಶಾಪದ ನಂತರ, ಚೋಳ ರಾಜನು ಆಕಾಶರಾಜನಾಗಿ ಪುನರ್ಜನ್ಮವನ್ನು ಪಡೆದನು ಮತ್ತು ಅವನಿಗೆ ಪದ್ಮಾವತಿ ಎಂಬ ಮಗಳು ಇದ್ದಳು. ಅವಳು ಆಂಧ್ರಪ್ರದೇಶದ ಇಂದಿನ ತಿರುಚನೂರಿನಲ್ಲಿರುವ ಪದ್ಮಪುಷ್ಕರಿಣಿಯಲ್ಲಿ ಜನಿಸಿದಳು. ಆಂಧ್ರಪ್ರದೇಶದ ಇಂದಿನ ನಾರಾಯಣವನಮ್‍ನಲ್ಲಿ ಶ್ರೀನಿವಾಸ ಪದ್ಮಾವತಿಯನ್ನು ವಿವಾಹವಾದನು ಮತ್ತು ತಿರುಮಲ ಬೆಟ್ಟಗಳಿಗೆ ಮರಳಿದನು. ಕೆಲವು ತಿಂಗಳುಗಳ ನಂತರ, ಲಕ್ಷ್ಮಿದೇವಿಗೆ ಪದ್ಮಾವತಿಯೊಂದಿಗೆ ಶ್ರೀನಿವಾಸನ ವಿವಾಹವಾದದ್ದು ತಿಳಿಯಿತು ಮತ್ತು ಶ್ರೀನಿವಾಸನನ್ನು ಪ್ರಶ್ನಿಸಲು ತಿರುಮಲ ಬೆಟ್ಟಗಳಿಗೆ ಹೋದಳು. ಲಕ್ಷ್ಮಿ ಮತ್ತು ಪದ್ಮಾವತಿಯ ನಡುವಿನ ಜಗಳವನ್ನು ಸಹಿಸಲಾಗದ ಶ್ರೀನಿವಾಸನು ಲಕ್ಷ್ಮಿ ಮತ್ತು ಪದ್ಮಾವತಿಯರು ತನ್ನ ಎದುರಿಗೆ ಬಂದಾಗ ಕಲ್ಲಾಗಿ ಮಾರ್ಪಟ್ಟನು. ಗೊಂದಲಕ್ಕೊಳಗಾದ ರಾಣಿಯರ ಮುಂದೆ ಬ್ರಹ್ಮ ಮತ್ತು ಶಿವರು ಕಾಣಿಸಿಕೊಂಡು ಈ ಎಲ್ಲದರ ಹಿಂದಿನ ಮುಖ್ಯ ಉದ್ದೇಶವನ್ನು ವಿವರಿಸಿದರು - ಕಲಿಯುಗದ ಶಾಶ್ವತ ತೊಂದರೆಗಳಿಂದ ಮನುಕುಲದ ವಿಮೋಚನೆಗಾಗಿ ಏಳು ಬೆಟ್ಟಗಳ ಮೇಲೆ ಇರಬೇಕೆಂಬ ಭಗವಂತನ ಬಯಕೆ. ತಾವೂ ಯಾವಾಗಲೂ ಅಲ್ಲಿ ಇರಬೇಕೆಂದು ಬಯಸಿ ಲಕ್ಷ್ಮಿ ಮತ್ತು ಪದ್ಮಾವತಿ ದೇವತೆಯರು ಕಲ್ಲಿನ ದೇವತೆಗಳಾಗಿ ಮಾರ್ಪಡುತ್ತಾರೆ. ಲಕ್ಷ್ಮಿ ಅವನ ಎದೆಯ ಮೇಲೆ ಎಡಭಾಗದಲ್ಲಿ ಇರುತ್ತಾಳೆ ಮತ್ತು ಪದ್ಮಾವತಿ ಅವನ ಎದೆಯ ಬಲಭಾಗದ ಮೇಲೆ ಇರುತ್ತಾಳೆ.[೧೨]

ದೇವಾಲಯದ ಇತಿಹಾಸ[ಬದಲಾಯಿಸಿ]

ಮಧ್ಯಕಾಲೀನ ಇತಿಹಾಸ[ಬದಲಾಯಿಸಿ]

ಮೊದಲ ದಾಖಲಿತ ದತ್ತಿಯನ್ನು ಪಲ್ಲವ ರಾಣಿ ಸಮವಾಯಿ ಕ್ರಿ.ಶ. 966 ರಲ್ಲಿ ಮಾಡಿದಳು. ಅವಳು ಅನೇಕ ಆಭರಣಗಳು ಮತ್ತು ಎರಡು ಭಾಗ ಭೂಮಿಯನ್ನು (ಒಂದು 10 ಎಕರೆ ಮತ್ತು ಇತರ 13 ಎಕರೆ) ದಾನ ಮಾಡಿದಳು ಮತ್ತು ಆ ಭೂಮಿಯಿಂದ ಬರುವ ಆದಾಯವನ್ನು ದೇವಾಲಯದ ಪ್ರಮುಖ ಉತ್ಸವಗಳ ಆಚರಣೆಗೆ ಬಳಸುವಂತೆ ಆದೇಶಿಸಿದಳು.[೧೩] ಪಲ್ಲವ ರಾಜವಂಶ (9 ನೇ ಶತಮಾನ), ಚೋಳ ರಾಜವಂಶ (10 ನೇ ಶತಮಾನ), ಮತ್ತು ವಿಜಯನಗರದ ಪ್ರಧಾನರು (14 ಮತ್ತು 15 ನೇ ಶತಮಾನಗಳು) ವೆಂಕಟೇಶ್ವರನ ಬದ್ಧರಾದ ಭಕ್ತರಾಗಿದ್ದರು. ಈ ದೇವಾಲಯವು ತನ್ನ ಪ್ರಸ್ತುತ ಸಂಪತ್ತು ಮತ್ತು ಗಾತ್ರದ ಬಹುತೇಕ ಭಾಗವನ್ನು ವಜ್ರಗಳು ಮತ್ತು ಚಿನ್ನದ ದೇಣಿಗೆಯೊಂದಿಗೆ ಇಂದಿನ ಕರ್ನಾಟಕ ರಾಜ್ಯವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಪಡೆದುಕೊಂಡಿತು.[೧೪] 1517 ರಲ್ಲಿ, ವಿಜಯನಗರ ಚಕ್ರವರ್ತಿ ಕೃಷ್ಣದೇವರಾಯನು ದೇವಸ್ಥಾನಕ್ಕೆ ಆಗಾಗ್ಗೆ ದಾನಿಯಾಗಿದ್ದನು ಮತ್ತು ಭೇಟಿ ನೀಡುತ್ತಿದ್ದನು. ಚಿನ್ನ ಮತ್ತು ಆಭರಣಗಳ ಅವನ ದೇಣಿಗೆಯು ಆನಂದ ನಿಲಯಮ್‍ನ (ಒಳಗಿನ ದೇಗುಲ) ಛಾವಣಿಗೆ ಸ್ವರ್ಣಲೇಪನವನ್ನು ಸಾಧ್ಯವಾಗಿಸಿತು. 2 ಜನವರಿ 1517 ರಂದು, ಕೃಷ್ಣದೇವರಾಯ ದೇವಾಲಯದಲ್ಲಿ ತನ್ನದೇ ಆದ ಪ್ರತಿಮೆಯನ್ನು ಸ್ಥಾಪಿಸಿದನು.[೧೫] ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ, ಮೈಸೂರು ಸಾಮ್ರಾಜ್ಯ ಮತ್ತು ಗದ್ವಾಲ್ ಸಂಸ್ಥಾನದಂತಹ ರಾಜ್ಯಗಳ ಆಡಳಿತಗಾರರು ಯಾತ್ರಿಕರಾಗಿ ಪೂಜಿಸಿದರು ಮತ್ತು ದೇವಾಲಯಕ್ಕೆ ಆಭರಣಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ನೀಡಿದರು. ಮರಾಠಾ ಸೈನ್ಯಾಧಿಪತಿ ರಾಘೋಜಿ I ಭೋಂಸ್ಲೆ (ಮರಣ 1755) ದೇವಾಲಯಕ್ಕೆ ಭೇಟಿ ನೀಡಿ ದೇವಾಲಯದಲ್ಲಿ ಪೂಜೆಯನ್ನು ನಡೆಸಲು ಶಾಶ್ವತ ಆಡಳಿತವನ್ನು ಸ್ಥಾಪಿಸಿದನು.[೧೬] ಕ್ರಿ.ಶ. 1320 ಮತ್ತು 1369ರ ನಡುವೆ, ಶ್ರೀರಂಗಪಟ್ಟಣದ ರಂಗನಾಥ ದೇವಾಲಯದ ವಿಗ್ರಹಗಳನ್ನು ಸುರಕ್ಷಿತವಾಗಿ ಇಡಲು ಈ ದೇವಾಲಯದಲ್ಲಿ ಇರಿಸಲಾಗಿತ್ತು.[೧೫] ಹೈದರಾಬಾದಿನ ನಿಜಾಮನು ತಿರುಪತಿ ದೇವಸ್ಥಾನವನ್ನು ವಶಪಡಿಸಿಕೊಂಡಾಗ, ಅರ್ಚಕರು ರಾಜಾ ತೋಡರ್‌ಮಲ್‍ನನ್ನು ಸಂಪರ್ಕಿಸಿದರು. ಅವನು ಅವರಿಗೆ ಭದ್ರತೆಯನ್ನು ಒದಗಿಸಿದನು. ದೇವಸ್ಥಾನದಲ್ಲಿ ರಾಜಾ ತೋಡರ್‌ಮಲ್, ಅವನ ತಾಯಿ ಮತ್ತು ಪತ್ನಿಯ ಹಿತ್ತಾಳೆಯ ಪ್ರತಿಮೆಗಳಿವೆ.[೧]

ರಾಮಾನುಜಾಚಾರ್ಯರ ಭೇಟಿಗಳು[ಬದಲಾಯಿಸಿ]

11 ಮತ್ತು 12ನೇ ಶತಮಾನದಲ್ಲಿ ರಾಮಾನುಜಾಚಾರ್ಯರು ಮೂರು ಬಾರಿ ತಿರುಪತಿಗೆ ಭೇಟಿ ನೀಡಿದ್ದರು. ಮೊದಲ ಸಂದರ್ಭದಲ್ಲಿ, ಅವರುರಾಮಾಯಣದ ನಿಗೂಢ ಅರ್ಥವನ್ನು ಕಲಿಯಲು ಒಂದು ವರ್ಷ ಕಳೆದರು. ಅವರ ಎರಡನೇ ಭೇಟಿಯು ತಿರುಮಲ ದೇವಸ್ಥಾನದಲ್ಲಿ ಸ್ಥಾಪಿಸಲಾದ ಪ್ರತಿಮೆಯ ಸ್ವರೂಪದ ಬಗ್ಗೆ ಶೈವರು ಮತ್ತು ವೈಷ್ಣವರ ನಡುವೆ ಉಂಟಾದ ವಿವಾದವನ್ನು ಬಗೆಹರಿಸಲು ಆಗಿತ್ತು.[೧೭] 102 ವರ್ಷಗಳ ವೃದ್ಧಾಪ್ಯದಲ್ಲಿ ಕೊನೆಯ ಭೇಟಿಯ ಸಮಯದಲ್ಲಿ, ಆಚಾರ್ಯರು ಗೋವಿಂದರಾಜನ ಪ್ರತಿಮೆಯನ್ನು ಸ್ಥಾಪಿಸಿದರು ಮತ್ತು ಪ್ರಸ್ತುತ ತಿರುಪತಿ ಪಟ್ಟಣದ ಅಡಿಪಾಯವನ್ನು ಹಾಕಿದರು.[೧೪] ರಾಮಾನುಜರು ವೈಖಾನನಾಸ ಆಗಮ ಸಂಪ್ರದಾಯದ ಪ್ರಕಾರ ತಿರುಮಲ ದೇವಸ್ಥಾನದಲ್ಲಿ ಆಚರಣೆಗಳನ್ನು ಸರಳೀಕರಿಸಿದರು ಮತ್ತು ನಾಲಾಯಿರ ದಿವ್ಯ ಪ್ರಬಂಧದ ಪಠಣವನ್ನು ಪರಿಚಯಿಸಿದರು. ಭಗವಂತನ ಸೇವೆಯನ್ನು ಸಂಸ್ಥೀಕರಿಸಲು ಮತ್ತು ದೇವಾಲಯದ ಆಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಅವರು ಕ್ರಿ.ಶ. 1119 ರಲ್ಲಿ ತಿರುಪತಿ ಜೀಯರ್ ಮಠವನ್ನು ಸ್ಥಾಪಿಸಿದರು. ಜೀಯರರು ಇಂದಿಗೂ ರಾಮಾನುಜರು ನಿಯಮಿಸಿದ ಆಚರಣೆಗಳನ್ನು ಪಾಲಿಸಲಾಗುತ್ತಿದೆ ಎಂದು ಖಚಿತಪಡಿಸುತ್ತಾರೆ.[೧೮][೧೯][೨೦]

ಆಧುನಿಕ ಇತಿಹಾಸ[ಬದಲಾಯಿಸಿ]

ತಿರುಮಲದ ಸ್ವಾಮಿ ಪುಷ್ಕರಿಣಿ

ವಿಜಯನಗರ ಸಾಮ್ರಾಜ್ಯದ ಅಂತ್ಯದ ನಂತರ, ದೇವಾಲಯವು ಜುಲೈ 1656 ರಲ್ಲಿ ಗೋಲ್ಕೊಂಡದ ಕೈಗೆ ಹೋಯಿತು. ೧೯ನೇ ಶತಮಾನದ ಪೂರ್ವಾರ್ಧದಲ್ಲಿ ಬ್ರಿಟೀಷರು ದೇವಾಲಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದರು ಮತ್ತು ದೇವಾಲಯದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಲಿಲ್ಲ.[೨೧]

1933 ರಲ್ಲಿ[೨೨] ಟಿಟಿಡಿ ಕಾಯಿದೆಯ ಪರಿಣಾಮವಾಗಿ ತಿರುಮಲ ತಿರುಪತಿ ದೇವಸ್ಥಾನಗಳ ರಚನೆಯಾಯಿತು. ಟಿಟಿಡಿಯ ಮುಖ್ಯಸ್ಥರನ್ನು ಆಂಧ್ರ ಪ್ರದೇಶ ಸರ್ಕಾರ ನೇಮಿಸುತ್ತದೆ. ಈ ದೇಗುಲದಿಂದ ಬರುವ ಆದಾಯವನ್ನು ಆಂಧ್ರಪ್ರದೇಶ ಸರ್ಕಾರ ಬಳಸುತ್ತದೆ.[೨][೩]

ದೇವಾಲಯವು ಕನ್ನಡ, ಸಂಸ್ಕೃತ, ತಮಿಳು, ತೆಲುಗು ಭಾಷೆಗಳಲ್ಲಿ 640 ಶಾಸನಗಳನ್ನು ಹೊಂದಿದೆ.[೨೩] ಸುಮಾರು 3000 ತಾಮ್ರದ ಫಲಕಗಳ ವಿಶಿಷ್ಟ ಸಂಗ್ರಹವಿದೆ. ಅವುಗಳ ಮೇಲೆ ತಲ್ಲಪಾಕ ಅಣ್ಣಮಾಚಾರ್ಯರು ಮತ್ತು ಅವರ ವಂಶಸ್ಥರ ತೆಲುಗು ಸಂಕೀರ್ತನೆಗಳು ಕೆತ್ತಲಾಗಿದೆ.[೨೪][೨೫] ಈ ಸಂಗ್ರಹವು ಸಂಗೀತಶಾಸ್ತ್ರಜ್ಞರಿಗೆ ಪ್ರಮುಖವಾಗಿರುವುದರ ಜೊತೆಗೆ ತೆಲುಗಿನಲ್ಲಿನ ಐತಿಹಾಸಿಕ ಭಾಷಾಶಾಸ್ತ್ರಜ್ಞರಿಗೆ ಮಾಹಿತಿಯ ಅಮೂಲ್ಯವಾದ ಮೂಲವಾಗಿದೆ.[೨೫]

ದೇವಾಲಯವು ಪ್ರತಿದಿನ ಸುಮಾರು 75,000 ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ.[೨೬]

ವಾಸ್ತುಕಲೆ[ಬದಲಾಯಿಸಿ]

ದೇವಾಲಯದ ಮುಂಭಾಗದ ನೋಟ
ತಿರುಮಲ ದೇವಸ್ಥಾನ ಮತ್ತು ವೈಕುಂಠಂ ಸರದಿಸಾಲಿನ ಸಂಕೀರ್ಣ (ಮುಂಭಾಗದಲ್ಲಿರುವ ಅರ್ಧವೃತ್ತಾಕಾರದ ಕಟ್ಟಡ) ನಾರಾಯಣಗಿರಿ ಬೆಟ್ಟದ ಮೇಲಿನ ಶ್ರೀವಾರಿ ಪಡಲುವಿನಿಂದ ನೋಡಿದಂತೆ
ದ್ವಾರಗಳು ಮತ್ತು ಪ್ರಾಕಾರಗಳು

ಹೊರಗಿನಿಂದ ಗರ್ಭಗೃಹಕ್ಕೆ ಹೋಗಲು ಮೂರು ದ್ವಾರಗಳು ಇವೆ. ಮಹಾದ್ವಾರವನ್ನು ಪದಿಕಾವಲಿ ಎಂದೂ ಕರೆಯುತ್ತಾರೆ, ಇದು ಮಹಾಪ್ರಕಾರಂ (ಹೊರಗಿನ ಕಾಂಪೌಂಡ್ ಗೋಡೆ) ಮೂಲಕ ಒದಗಿಸಲಾದ ಮೊದಲ ಪ್ರವೇಶದ್ವಾರವಾಗಿದೆ. ಈ ಮಹಾದ್ವಾರದ ಮೇಲೆ 50 ಅಡಿ, ಐದು ಅಂತಸ್ತಿನ ಗೋಪುರವನ್ನು ನಿರ್ಮಿಸಲಾಗಿದ್ದು ಅದರ ಶೃಂಗದಲ್ಲಿ ಏಳು ಕಲಶಗಳಿವೆ . ವೆಂಡಿವಾಕಿಲಿ (ಬೆಳ್ಳಿಯ ಪ್ರವೇಶದ್ವಾರ) ಯನ್ನು ನಡಿಮಿಪದಿಕಾವಲಿ ಎಂದೂ ಕರೆಯಲಾಗುತ್ತದೆ. ಇದು ಎರಡನೇ ಪ್ರವೇಶದ್ವಾರವಾಗಿದೆ ಮತ್ತು ಸಂಪಂಗಿಪ್ರಕಾರದ ಮೂಲಕ ಇದನ್ನು ಒದಗಿಸಲಾಗಿದೆ (ಒಳಗಿನ ಕಾಂಪೌಂಡ್ ಗೋಡೆ). ವೆಂಡಿವಾಕಿಲಿಯ ಮೇಲೆ ಮೂರು ಅಂತಸ್ತಿನ ಗೋಪುರವನ್ನು ನಿರ್ಮಿಸಲಾಗಿದ್ದು ಅದರ ಶೃಂಗದಲ್ಲಿ ಏಳು ಕಲಶಗಳಿವೆ. ಬಂಗಾರುವಾಕಿಲಿ (ಚಿನ್ನದ ಪ್ರವೇಶದ್ವಾರ) ಗರ್ಭಗೃಹಕ್ಕೆ ಹೋಗುವ ಮೂರನೇ ಪ್ರವೇಶದ್ವಾರವಾಗಿದೆ. ಈ ಬಾಗಿಲಿನ ಎರಡೂ ಬದಿಯಲ್ಲಿ ದ್ವಾರಪಾಲಕರಾದ ಜಯ-ವಿಜಯರ ಎರಡು ಎತ್ತರದ ತಾಮ್ರದ ಪ್ರತಿಮೆಗಳಿವೆ. ಮರದ ದಪ್ಪನೆಯ ಬಾಗಿಲಿಗೆ ವಿಷ್ಣುವಿನ ದಶಾವತಾರವನ್ನು ಚಿತ್ರಿಸುವ ಚಿನ್ನದ ಲೇಪನ ಫಲಕಗಳನ್ನು ಹೊದಿಸಲಾಗಿದೆ.

ಪ್ರದಕ್ಷಿಣೆಗಳು

ದೇವಾಲಯದಲ್ಲಿ ಎರಡು ಪ್ರದಕ್ಷಿಣೆ ಮಾರ್ಗಗಳಿವೆ. ಮೊದಲನೆಯದು ಮಹಾಪ್ರಾಕಾರ ಮತ್ತು ಸಂಪಂಗಿಪ್ರಾಕಾರದ ನಡುವಿನ ಪ್ರದೇಶ. ಸಂಪಂಗಿಪ್ರದಕ್ಷಿಣಂ ಎಂದು ಕರೆಯಲ್ಪಡುವ ಈ ಮಾರ್ಗವು ಅನೇಕ ಮಂಟಪಗಳು, ಧ್ವಜಸ್ತಂಭ, ಬಲಿಪೀಠ, ಕ್ಷೇತ್ರಪಾಲಿಕಾ ಶಿಲಾ, ಪ್ರಸಾದ ವಿತರಣಾ ಪ್ರದೇಶ ಇತ್ಯಾದಿಗಳನ್ನು ಹೊಂದಿದೆ. ಆನಂದ ನಿಲಯ ವಿಮಾನವನ್ನು ಪ್ರದಕ್ಷಿಣೆ ಮಾಡುವ ಎರಡನೇ ಪ್ರದಕ್ಷಿಣೆಯೆ ವಿಮಾನಪ್ರದಕ್ಷಿಣಂ. ಈ ಮಾರ್ಗದಲ್ಲಿ ವರದರಾಜ ಮತ್ತು ಯೋಗ ನರಸಿಂಹರಿಗೆ ಸಮರ್ಪಿತವಾದ ಉಪ-ದೇಗುಲಗಳು, ಪೋಟು (ಮುಖ್ಯ ಅಡಿಗೆಮನೆ), ಬಂಗಾರು ಬಾವಿ (ಚಿನ್ನದ ಬಾವಿ), ಅಂಕುರಾರ್ಪಣ ಮಂಟಪ, ಯಾಗಶಾಲೆ, ನಾನಲ (ನಾಣ್ಯಗಳು ಮತ್ತು ನೋಟುಗಳು) ಪರ್ಕಮಣಿ, ಚಂದನದ ಪೇಸ್ಟ್‌ನ ಅಲ್ಮೈರಾ, ದಾಖಲೆಗಳ ಕೋಶ, ಸನ್ನಿಧಿ ಭಾಷ್ಯಕಾರುಲು, ದೇವರ ಹುಂಡಿ ಮತ್ತು ವಿಶ್ವಕ್ಸೇನರ ಪೀಠ ಇವೆ.

ಆನಂದನಿಲಯಂ ವಿಮಾನ ಮತ್ತು ಗರ್ಭಗೃಹ

ಗರ್ಭಗೃಹದಲ್ಲಿ ಪ್ರಧಾನ ದೇವತೆ ವೆಂಕಟೇಶ್ವರನು ಇತರ ಸಣ್ಣ ದೇವತೆಗಳೊಂದಿಗೆ ನೆಲೆಸಿದ್ದಾನೆ. ಬಂಗಾರದ ಪ್ರವೇಶದ್ವಾರ ಗರ್ಭಗೃಹಕ್ಕೆ ಕರೆದೊಯ್ಯುತ್ತದೆ. ಬಂಗಾರುವಕಿಲಿ ಮತ್ತು ಗರ್ಭಗೃಹದ ನಡುವೆ ಇನ್ನೂ ಎರಡು ಬಾಗಿಲುಗಳಿವೆ. ದೇವರು ನಿಂತಿರುವ ಭಂಗಿಯಲ್ಲಿ ನಾಲ್ಕು ಕೈಗಳನ್ನು ವಿವಿಧ ಭಂಗಿಗಳಲ್ಲಿ - ಒಂದು ವರದ ಭಂಗಿಯಲ್ಲಿ, ಒಂದು ತೊಡೆಯ ಮೇಲೆ ಮತ್ತು ಇನ್ನೆರಡರಲ್ಲಿ ಶಂಖ ಹಾಗೂ ಸುದರ್ಶನ ಚಕ್ರವನ್ನು ಹಿಡಿದಿದ್ದಾನೆ. ದೇವರನ್ನು ಅಮೂಲ್ಯವಾದ ಆಭರಣಗಳಿಂದ ಅಲಂಕರಿಸಲಾಗುತ್ತದೆ. ದೇವರು ಬಲ ಎದೆಭಾಗದಲ್ಲಿ ಲಕ್ಷ್ಮಿ ದೇವಿಯನ್ನು ಮತ್ತು ಎಡಭಾಗದಲ್ಲಿ ಪದ್ಮಾವತಿ ದೇವಿಯನ್ನು ಹೊಂದಿದ್ದಾನೆ. ಯಾತ್ರಾರ್ಥಿಗಳಿಗೆ ಗರ್ಭಗೃಹಕ್ಕೆ (ಕುಲಶೇಖರಪದಿಯ ಮುಂದಕ್ಕೆ) ಪ್ರವೇಶಿಸಲು ಬಿಡಲಾಗುವುದಿಲ್ಲ.

ಆನಂದ ನಿಲಯಂ ವಿಮಾನವು ಗರ್ಭಗೃಹದ ಮೇಲೆ ನಿರ್ಮಿಸಲ್ಪಟ್ಟ ಮುಖ್ಯ ಗೋಪುರವಾಗಿದೆ. ಇದು ಮೂರು ಅಂತಸ್ತಿನ ಗೋಪುರವಾಗಿದ್ದು ಅದರ ಶೃಂಗದಲ್ಲಿ ಒಂದೇ ಕಲಶವಿದೆ. ಇದನ್ನು ತಾಮ್ರದ ಫಲಕಗಳಿಂದ ಮತ್ತು ಒಂದು ಚಿನ್ನದ ಹೂದಾನಿಯಿಂದ ಹೊದಿಸಲಾಗಿದೆ. ಈ ಗೋಪುರದ ಮೇಲೆ ಅನೇಕ ದೇವಾನುದೇವತೆಗಳನ್ನು ಕೆತ್ತಲಾಗಿದೆ. ಈ ಗೋಪುರದ ಮೇಲೆ, "ವಿಮಾನ ವೆಂಕಟೇಶ್ವರ" ಎಂದು ಕರೆಯಲ್ಪಡುವ ವೆಂಕಟೇಶ್ವರನ ಮೂರ್ತಿಯಿದೆ. ಇದು ಗರ್ಭಗೃಹದಲ್ಲಿರುವ ದೇವರ ನಿಖರವಾದ ಪ್ರತಿರೂಪ ಎಂದು ನಂಬಲಾಗಿದೆ.[೨೭]

ದೇವಾಲಯದಲ್ಲಿನ ದೇವತೆಗಳು[ಬದಲಾಯಿಸಿ]

ವಿಷ್ಣುವಿನ ಅವತಾರನಾದ ವೆಂಕಟೇಶ್ವರನು ದೇವಾಲಯದ ಪ್ರಧಾನ ದೇವತೆಯಾಗಿದ್ದಾನೆ. ಪ್ರಧಾನ ವಿಗ್ರಹವು ಸ್ವಯಂಭೂ (ಸ್ವಯಂ ಪ್ರಕಟಿತ) ಎಂದು ನಂಬಲಾಗಿದೆ.[೨೮]

ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನದ ಗರ್ಭಗೃಹದ ಪ್ರತಿಕೃತಿ ಎಡ - ಶ್ರೀದೇವಿ ಮತ್ತು ಭೂದೇವಿ ಮತ್ತು ಮಲಯಪ್ಪ ಸ್ವಾಮಿ, ಮಧ್ಯದಲ್ಲಿ - ವೆಂಕಟೇಶ್ವರ ಮುಖ್ಯ ದೇವರು (ಧ್ರುವ ಬೇರಂ), ಮಧ್ಯದ ಕೆಳಭಾಗ - ಭೋಗ ಶ್ರೀನಿವಾಸ, ಬಲ - ಉಗ್ರ ಶ್ರೀನಿವಾಸ, ಕೊಲುವು ಶ್ರೀನಿವಾಸ, ಸೀತೆ ಮತ್ತು ಲಕ್ಷ್ಮಣ ಮತ್ತು ಶ್ರೀರಾಮ, ಶ್ರೀಕೃಷ್ಣ, ರುಕ್ಮಿಣಿ

ಪಂಚ ಬೇರಮಗಳು[ಬದಲಾಯಿಸಿ]

ವೈಖಾನಸ ಆಗಮಗಳ ಪ್ರಕಾರ, ವೆಂಕಟೇಶ್ವರನನ್ನು ಪ್ರಧಾನ ಮೂರ್ತಿ ಸೇರಿದಂತೆ ಐದು ದೇವತೆಗಳಿಂದ (ಬೇರಮ್‍ಗಳು) ಪ್ರತಿನಿಧಿಸಲಾಗುತ್ತದೆ, ಇವುಗಳನ್ನು ಒಟ್ಟಾಗಿ ಪಂಚ ಬೇರಮುಲು ಎಂದು ಕರೆಯಲಾಗುತ್ತದೆ (ಪಂಚ ಎಂದರೆ ಐದು; ಬೇರಂ ಎಂದರೆ ದೇವರು).[೨೯] ಐದು ದೇವತೆಗಳೆಂದರೆ ಧ್ರುವ ಬೇರಂ (ಮೂಲ ಮೂರ್ತಿ), ಕೌತುಕ ಬೇರಂ, ಸ್ನಪನ ಬೇರಂ, ಉತ್ಸವ ಬೇರಂ, ಬಲಿ ಬೇರಂ. ಎಲ್ಲ ಪಂಚ ಬೇರಮ್‍ಗಳನ್ನು ಆನಂದ ನಿಲಯ ವಿಮಾನದ ಅಡಿಯಲ್ಲಿನ ಗರ್ಭ ಗೃಹದಲ್ಲಿ ಇರಿಸಲಾಗಿದೆ.[೨೯]

  1. ಮೂಲವಿರಾಟ್ ಅಥವಾ ಧ್ರುವ ಬೇರಂ - ಗರ್ಭ ಗೃಹದ ಮಧ್ಯದಲ್ಲಿ, ಆನಂದ ನಿಲಯದ ವಿಮಾನದ ಅಡಿಯಲ್ಲಿ, ವೆಂಕಟೇಶ್ವರನ ಪ್ರಧಾನ ಮೂರ್ತಿಯನ್ನು ಕಮಲದ ತಳದ ಮೇಲೆ ನಿಂತಿರುವ ಭಂಗಿಯಲ್ಲಿ, ನಾಲ್ಕು ತೋಳುಗಳು, ಎರಡು ಶಂಕ ಮತ್ತು ಚಕ್ರಗಳನ್ನು ಹಿಡಿದಿರುವಂತೆ ಮತ್ತು ಒಂದು ವರದ ಭಂಗಿಯಲ್ಲಿ ಮತ್ತು ಇನ್ನೊಂದು ಕಟಿ ಭಂಗಿಯಲ್ಲಿ ಇರುವಂತೆ ಕಾಣಬಹುದು. ಈ ದೇವತೆಯನ್ನು ದೇವಾಲಯಕ್ಕೆ ಶಕ್ತಿಯ ಮುಖ್ಯ ಮೂಲವೆಂದು ಪರಿಗಣಿಸಲಾಗಿದೆ ಮತ್ತು ವಜ್ರ ಕಿರೀಟ (ವಜ್ರದ ಕಿರೀಟ), ಮಕರಕುಂಡಲಗಳು, ನಾಗಾಭರಣ, ಮಕರ ಕಾಂತಿ, ಸಾಲಿಗ್ರಾಮ ಹಾರಂ, ಲಕ್ಷ್ಮಿ ಹಾರಂ ಸೇರಿದಂತೆ ವೈಷ್ಣವ ನಾಮ ಮತ್ತು ಆಭರಣಗಳಿಂದ ಅಲಂಕರಿಸಲ್ಪಟ್ಟಿದೆ.[೨೯] ವೆಂಕಟೇಶ್ವರನ ಪತ್ನಿಯಾದ ಲಕ್ಷ್ಮಿ ಮೂಲವಿರಾಟ್‌ನ ಎದೆಯ ಮೇಲೆ ವ್ಯೂಹ ಲಕ್ಷ್ಮಿಯಾಗಿ ನೆಲೆಸಿದ್ದಾಳೆ.
  2. ಭೋಗ ಶ್ರೀನಿವಾಸ ಅಥವಾ ಕೌತುಕ ಬೇರಮ್ -- ಇದು ಸಣ್ಣದಾದ ಒಂದು ಅಡಿಯಷ್ಟಿರುವ (0.3 ಮೀ) ಬೆಳ್ಳಿಯ ದೇವತೆಯಾಗಿದ್ದು, ಇದನ್ನು ಕ್ರಿ.ಶ. 614 ರಲ್ಲಿ ಪಲ್ಲವ ರಾಣಿ ಸಮವಾಯಿಯು ಉತ್ಸವಗಳನ್ನು ನಡೆಸಲು ದೇವಾಲಯಕ್ಕೆ ನೀಡಿದಳು. ಭೋಗ ಶ್ರೀನಿವಾಸನನ್ನು ಯಾವಾಗಲೂ ಮೂಲವಿರಾಟ್‌ನ ಎಡ ಪಾದದ ಬಳಿ ಇರಿಸಲಾಗುತ್ತದೆ ಮತ್ತು ಇದನ್ನು ಯಾವಾಗಲೂ ಪವಿತ್ರ ಸಂಬಂಧ ಕ್ರೂಚದಿಂದ ಮುಖ್ಯ ದೇವತೆಯೊಂದಿಗೆ ಜೋಡಿಸಲಾಗಿರುತ್ತದೆ. ಈ ದೇವತೆಯು ಮೂಲವರ್ ಪರವಾಗಿ ಅನೇಕ ದೈನಂದಿನ ಸೇವೆಗಳನ್ನು ಪಡೆಯುತ್ತಾನೆ ಮತ್ತು ಆದ್ದರಿಂದ ಭೋಗ ಶ್ರೀನಿವಾಸ ಎಂದು ಕರೆಯಲ್ಪಡುತ್ತದೆ (ತೆಲುಗು: ಭೋಗ ಎಂದರೆ ಆನಂದ). ಈ ದೇವರಿಗೆ ಪ್ರತಿದಿನ ಏಕಾಂತಸೇವೆ [೩೦] ಮತ್ತು ಬುಧವಾರದಂದು ಸಹಸ್ರಕಳಶಾಭಿಷೇಕ ನಡೆಯುತ್ತದೆ.
  3. ಉಗ್ರ ಶ್ರೀನಿವಾಸ ಅಥವಾ ಸ್ನಪನ ಬೇರಂ - ಈ ದೇವತೆಯು ವೆಂಕಟೇಶ್ವರನ ಭಯಂಕರ ಅಂಶವನ್ನು ಪ್ರತಿನಿಧಿಸುತ್ತದೆ.[೩೧][೩೨] ಈ ದೇವತೆಯು ಕ್ರಿ.ಶ. 1330 ವರೆಗೆ ಮಲಯಪ್ಪ ಸ್ವಾಮಿ ದೇವರಿಂದ ಬದಲಾಯಿಸಲ್ಪಡುವವರೆಗೆ ಮುಖ್ಯ ಮೆರವಣಿಗೆಯ ದೇವತೆಯಾಗಿತ್ತು.[೨೯] ಉಗ್ರ ಶ್ರೀನಿವಾಸನು ಗರ್ಭಗುಡಿಯೊಳಗೆ ಉಳಿದಿರುತ್ತಾನೆ ಮತ್ತು ವರ್ಷದಲ್ಲಿ ಒಂದು ದಿನ ಮಾತ್ರ ಮೆರವಣಿಗೆಯಲ್ಲಿ ಹೊರಬರುತ್ತಾನೆ: ಕೈಶಿಕ ದ್ವಾದಶಿಯಂದು, ಸೂರ್ಯೋದಯಕ್ಕೆ ಮೊದಲು.[೩೨][೩೧] ಈ ದೇವತೆಯು ಮೂಲವಿರಾಟ್ ಪರವಾಗಿ ಪ್ರತಿದಿನ ಅಭಿಷೇಕವನ್ನು ಪಡೆಯುತ್ತಾನೆ, ಹೀಗಾಗಿ ಸ್ನಪನ ಬೇರಂ ಎಂಬ ಹೆಸರನ್ನು ಪಡೆದಿದ್ದಾನೆ (ಸಂಸ್ಕೃತ: ಸ್ನಪನ ಎಂದರೆ ಶುದ್ಧೀಕರಣ)
  4. ಮಲಯಪ್ಪ ಸ್ವಾಮಿ ಅಥವಾ ಉತ್ಸವ ಬೇರಂ - ಮಲಯಪ್ಪನು ದೇವಾಲಯದ ಮೆರವಣಿಗೆಯ ದೇವತೆಯಾಗಿದ್ದಾನೆ (ಉತ್ಸವ ಬೇರಂ) ಮತ್ತು ಯಾವಾಗಲೂ ಅವನ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯರಿಂದ ಸುತ್ತುವರಿಯಲ್ಪಟ್ಟಿರುತ್ತಾನೆ. ಈ ದೇವತೆಯು ಬ್ರಹ್ಮೋತ್ಸವಗಳು, ಕಲ್ಯಾಣೋತ್ಸವ, ಡೋಲೋತ್ಸವ, ವಸಂತೋತ್ಸವ, ಸಹಸ್ರ ದೀಪಾಲಂಕರಣ ಸೇವೆ, ಪದ್ಮಾವತಿ ಪರಿಣಯೋತ್ಸವಗಳು, ಪುಷ್ಪಪಲ್ಲಕಿ, ಅನಿವಾರ ಆಸ್ಥಾನಂ, ಯುಗಾದಿ ಆಸ್ಥಾನಂ ಮುಂತಾದ ಎಲ್ಲಾ ಹಬ್ಬಗಳನ್ನು ಪಡೆಯುತ್ತಾನೆ.
  5. ಕೊಲುವು ಶ್ರೀನಿವಾಸ ಅಥವಾ ಬಲಿ ಬೇರಮ್. ಕೊಲುವು ಶ್ರೀನಿವಾಸನನ್ನು ದೇವಸ್ಥಾನದ ಹಣಕಾಸು ಮತ್ತು ಆರ್ಥಿಕ ವ್ಯವಹಾರಗಳ ಅಧ್ಯಕ್ಷತೆ ವಹಿಸುವ ರಕ್ಷಕ ದೇವತೆ ಎಂದು ಪರಿಗಣಿಸಲಾಗಿದೆ. ದೈನಂದಿನ ಕೊಲುವು ಸೇವೆ (ತೆಲುಗು: ಕೊಲುವು ಎಂದರೆ ತೊಡಗಿಸಿಕೊಂಡಿರುವುದು) ಬೆಳಿಗ್ಗೆ ನಡೆಯುತ್ತದೆ. ಈ ಸಮಯದಲ್ಲಿ, ಹಿಂದಿನ ದಿನದ ಕಾಣಿಕೆಗಳು, ಆದಾಯ, ಖರ್ಚುಗಳನ್ನು ಈ ದೇವರಿಗೆ ಲೆಕ್ಕಪತ್ರಗಳ ಪ್ರಸ್ತುತಿಯೊಂದಿಗೆ ತಿಳಿಸಲಾಗುತ್ತದೆ. ಇದೇ ಸಮಯದಲ್ಲಿ ಪಂಚಾಂಗ ಶ್ರವಣವನ್ನು ನಡೆಸಿ ವೆಂಕಟೇಶ್ವರನಿಗೆ ಆ ದಿನದ ತಿಥಿ, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯ, ನಕ್ಷತ್ರವನ್ನು ತಿಳಿಸಲಾಗುತ್ತದೆ.

ಇತರ ಮೂರ್ತಿಗಳು[ಬದಲಾಯಿಸಿ]

ಪಂಚ ಬೇರಗಳ ಜೊತೆಗೆ, ಗರ್ಭ ಗೃಹವು ಸೀತೆ, ರಾಮ, ಲಕ್ಷ್ಮಣ, ರುಕ್ಮಿಣಿ, ಕೃಷ್ಣ,[೩೦] ಚಕ್ರತಾಳ್ವಾರರಪಂಚಲೋಹ ಮೂರ್ತಿಗಳನ್ನು ಸಹ ಹೊಂದಿದೆ. ಈ ದೇವಾಲಯವು ಗರುಡ (ವಿಷ್ಣುವಿನ ವಾಹನ), ನರಸಿಂಹ, ವರದರಾಜ, ಕುಬೇರ, ಹನುಮಂತರ ಮೂರ್ತಿಗಳನ್ನು ಆಯಾ ಉಪ-ದೇಗುಲಗಳಲ್ಲಿ ಹೊಂದಿದೆ. ಈ ದೇವಾಲಯವು ಶೇಷ (ವಿಷ್ಣುವಿನ ಸರ್ಪ), ವಿಶ್ವಕ್ಸೇನ, ಸುಗ್ರೀವ, ರಾಮಾನುಜರ ಮೂರ್ತಿಗಳನ್ನೂ ಹೊಂದಿದೆ. ಆನಂದ ನಿಲಯದ ಎರಡನೇ ಅಂತಸ್ತಿನ ವಾಯುವ್ಯ ಮೂಲೆಯಲ್ಲಿ ಕೆತ್ತಲ್ಪಟ್ಟಿರುವ ವಿಮಾನ ವೆಂಕಟೇಶ್ವರವು ವೆಂಕಟೇಶ್ವರನ ನಿಖರವಾದ ಪ್ರತಿರೂಪವಾಗಿದೆ.[೨೯]

ಆರಾಧನೆ[ಬದಲಾಯಿಸಿ]

ಪೂಜೆ[ಬದಲಾಯಿಸಿ]

ಈ ದೇವಾಲಯವು "ವೈಖಾನಸ ಆಗಮ" ಸಂಪ್ರದಾಯವನ್ನು ಅನುಸರಿಸುತ್ತದೆ.[೩೩] ಇದನ್ನು ವಿಖಾನಸ ಋಷಿಯು ಬಹಿರಂಗಪಡಿಸಿದನೆಂದು[೩೪] [೩೫] ಮತ್ತು ಅವನ ಶಿಷ್ಯರಾದ ಅತ್ರಿ, ಭೃಗು, ಮರೀಚಿ, ಕಶ್ಯಪರಿಂದ ಪ್ರಸಾರಮಾಡಿದರೆಂದು ನಂಬಲಾಗಿದೆ.[೩೪][೩೬] ವೈಖಾನಸವು ಹಿಂದೂ ಧರ್ಮದ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾಗಿದೆ ಮತ್ತು ಪ್ರಾಥಮಿಕವಾಗಿ ವಿಷ್ಣುವನ್ನು (ಮತ್ತು ಅವನ ಸಂಬಂಧಿತ ಅವತಾರಗಳನ್ನು) ಸರ್ವೋಚ್ಚ ದೇವರಾಗಿ ಪೂಜಿಸುತ್ತದೆ. ಈ ಪುರಾತನ ಗ್ರಂಥಗಳು ವಿಷ್ಣುವಿಗೆ ದಿನಕ್ಕೆ ಆರು ಬಾರಿ ಪೂಜೆಯನ್ನು ಸೂಚಿಸುತ್ತವೆ, ಅದರಲ್ಲಿ ಕನಿಷ್ಠ ಒಂದು ಪೂಜೆ ಕಡ್ಡಾಯವಾಗಿದೆ.[೩೭] ಆಚರಣೆಗಳನ್ನು ದೈನಂದಿನ, ಸಾಪ್ತಾಹಿಕ ಮತ್ತು ನಿಯತಕಾಲಿಕ ಎಂದು ವರ್ಗೀಕರಿಸಲಾಗಿದೆ. ದೇವಾಲಯದಲ್ಲಿನ ದೈನಂದಿನ ಸೇವೆಗಳಲ್ಲಿ (ಸಂಭವಿಸುವ ಕ್ರಮದಲ್ಲಿ) ಸುಪ್ರಭಾತ ಸೇವೆ, ತೋಮಲ ಸೇವೆ, ಅರ್ಚನೆ, ಕಲ್ಯಾಣೋತ್ಸವ, ಡೋಲೋತ್ಸವ (ಉಂಜಲ್ ಸೇವೆ), ಅರ್ಜಿತ ಬ್ರಹ್ಮೋತ್ಸವ, ಅರ್ಜಿತ ವಸಂತೋತ್ಸವ, ಸಹಸ್ರ ದೀಪಾಲಂಕಾರಣ ಸೇವೆ, ಏಕಾಂತ ಸೇವೆ ಸೇರಿವೆ. ದೇವಾಲಯದ ಸಾಪ್ತಾಹಿಕ ಸೇವೆಗಳಲ್ಲಿ ಸೋಮವಾರದ ವಿಶೇಷ ಪೂಜೆ, ಮಂಗಳವಾರದ ಅಷ್ಟದಳ ಪಾದ ಪದ್ಮಾರಾಧನೆ, ಬುಧವಾರದ ಸಹಸ್ರ ಕಳಶಾಭಿಷೇಕ, ಗುರುವಾರದ ತಿರುಪ್ಪವಾದ ಸೇವೆ, ಶುಕ್ರವಾರದ ಅಭಿಷೇಕ ಮತ್ತು ನಿಜಪದ ದರ್ಶನಂ ಸೇರಿವೆ. ಶನಿವಾರ ಮತ್ತು ಭಾನುವಾರ ಯಾವುದೇ ವಾರದ ಸೇವೆಗಳಿರುವುದಿಲ್ಲ. ನಿಯತಕಾಲಿಕ ಆಚರಣೆಗಳಲ್ಲಿ ಜ್ಯೇಷ್ಠಾಭಿಷೇಕ, ಆನಿವಾರ ಆಸ್ಥಾನಂ, ಪವಿತ್ರೋತ್ಸವಂ, ಕೋಯಿಲ್ ಆಳ್ವಾರ್ ತಿರುಮಂಜನಂ ಸೇರಿವೆ.

ನೈವೇದ್ಯಮ್[ಬದಲಾಯಿಸಿ]

ತಿರುಮಲದ ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಅರ್ಪಿಸಲಾಗುವ ಲಡ್ಡು

ವಿಶ್ವವಿಖ್ಯಾತ "ತಿರುಪತಿ ಲಡ್ಡು" ವನ್ನು ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುತ್ತದೆ.[೩೮] ತಿರುಪತಿ ಲಡ್ಡು ಭೌಗೋಳಿಕ ಸೂಚನೆಯ ಟ್ಯಾಗ್ ಅನ್ನು ಪಡೆದಿದೆ. ಅದನ್ನು ತಯಾರಿಸಲು ಅಥವಾ ಮಾರಾಟ ಮಾಡಲು ತಿರುಮಲ ತಿರುಪತಿ ದೇವಸ್ಥಾನಗಳಿಗೆ ಮಾತ್ರ ಹಕ್ಕಿದೆ.[೩೯][೪೦] ವೆಂಕಟೇಶ್ವರನಿಗೆ ಅನೇಕ ಇತರ ಪ್ರಸಾದಗಳನ್ನು ಅರ್ಪಿಸಲಾಗುತ್ತದೆ ಮತ್ತು ಅವುಗಳನ್ನು ಅನ್ನ-ಪ್ರಸಾದಗಳು ಹಾಗೂ ಪಣ್ಯಾರಮ್‍ಗಳು ಎಂದು ವರ್ಗೀಕರಿಸಲಾಗುತ್ತದೆ.[೪೧] ಅನ್ನಪ್ರಸಾದಗಳಲ್ಲಿ ಚಕೆರಪೊಂಗಲ್ (ಸಿಹಿ), ಪುಳಿಹೊರ (ಹುಣಿಸೇಹಣ್ಣು), ಮಿರ್ಯಾಲ ಪೊಂಗಲ್, ಕದಂಬಂ, ದದ್ದೋಜನಂ (ಮೊಸರು ಅನ್ನ) ಸೇರಿವೆ.[೪೨] ಪಣ್ಯಾರಮ್‍ಗಳಲ್ಲಿ ಲಡ್ಡು, ವಡೆ, ದೋಸೆ, ಅಪ್ಪಂ, ಜಿಲೇಬಿ, ಮುರುಕ್ಕು, ಪೋಲಿ, ಪಾಯಸಂ ಸೇರಿವೆ.[೪೨] ಯಾತ್ರಾರ್ಥಿಗಳಿಗೆ ಪ್ರತಿದಿನ ಉಚಿತ ಊಟ ನೀಡಲಾಗುತ್ತದೆ. ಗುರುವಾರದಂದು, ತಿರುಪ್ಪವಾಡ ಸೇವೆಯನ್ನು ನಡೆಸಲಾಗುತ್ತದೆ, ಅಲ್ಲಿ ತಿರುಮ್ಮಣಿ ಮಂಟಪದಲ್ಲಿ (ಘಂಟಾ ಮಂಟಪಂ) ಪಿರಮಿಡ್ ಆಕಾರದಲ್ಲಿ ವೆಂಕಟೇಶ್ವರನಿಗೆ ದೊಡ್ಡ ಪ್ರಮಾಣದಲ್ಲಿ ಪುಳಿಹೋರವನ್ನು ಅರ್ಪಿಸಲಾಗುತ್ತದೆ.[೪೨]

ದರ್ಶನ[ಬದಲಾಯಿಸಿ]

ದೇವಾಲಯಕ್ಕೆ ಭೇಟಿ ನೀಡುವ ಅಪಾರ ಸಂಖ್ಯೆಯ ಭಕ್ತರನ್ನು ನಿರ್ವಹಿಸಲು, ತಿರುಮಲ ತಿರುಪತಿ ದೇವಸ್ಥಾನವು ಎರಡು ವೈಕುಂಟಂ ಸರದಿಸಾಲಿನ ಸಂಕೀರ್ಣಗಳನ್ನು ನಿರ್ಮಿಸಿತು: ಒಂದು ವರ್ಷ 1983ರಲ್ಲಿ ಮತ್ತು ಇನ್ನೊಂದು 2000 ರಲ್ಲಿ. ವೈಕುಂಠಂ ಸರದಿಸಾಲಿನ ಸಂಕೀರ್ಣಗಳಲ್ಲಿ ಭಕ್ತರು ಕುಳಿತು ದರ್ಶನಕ್ಕಾಗಿ ಕಾಯುವ ಕೊಠಡಿಗಳಿವೆ. ಸಂಪ್ರದಾಯದ ಪ್ರಕಾರ, ಭಕ್ತನು ಮುಖ್ಯ ದೇವಾಲಯದಲ್ಲಿ ವೆಂಕಟೇಶ್ವರನ ದರ್ಶನವನ್ನು ಹೊಂದುವ ಮೊದಲು ಸ್ವಾಮಿ ಪುಷ್ಕರಿಣಿಯ ಉತ್ತರ ದಂಡೆಯಲ್ಲಿರುವ ಭೂವರಾಹ ಸ್ವಾಮಿ ದೇವಾಲಯದ ದರ್ಶನವನ್ನು ಪಡೆಯುವುದು ಮುಖ್ಯವಾಗಿದೆ.[೪೩]

ಕೇಶಮುಂಡನ[ಬದಲಾಯಿಸಿ]

ಅನೇಕ ಭಕ್ತರು ದೇವರಿಗೆ ಒಂದು ಕಾಣಿಕೆಯಾದ "ಮೊಕ್ಕು" ಎಂಬುದರ ಭಾಗವಾಗಿ ತಮ್ಮ ಕೇಶಮುಂಡನ ಮಾಡಿಸಿಕೊಳ್ಳುತ್ತಾರೆ. ಸಂಗ್ರಹಿಸಲಾದ ಕೂದಲಿನ ದೈನಂದಿನ ಪ್ರಮಾಣವು ಒಂದು ಟನ್‌ಗಿಂತ ಹೆಚ್ಚಾಗಿರುತ್ತದೆ. ಕೂದಲನ್ನು ಸಂಗ್ರಹಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲಾಗುವುದರಿಂದ ದೇವಸ್ಥಾನಕ್ಕೆ ಗಣನೀಯ ಲಾಭ ಬರುತ್ತದೆ.[೪೪][೪೫] ದಂತಕಥೆಯ ಪ್ರಕಾರ, ವೆಂಕಟೇಶ್ವರನ ತಲೆಗೆ ಗೋಪಾಲಕನು ಹೊಡೆದಾಗ, ಅವನ ನೆತ್ತಿಯ ಸ್ವಲ್ಪ ಭಾಗವು ಬೋಳಾಯಿತು. ಇದನ್ನು ಗಂಧರ್ವ ರಾಜಕುಮಾರಿ ನೀಲಾದೇವಿ ಗಮನಿಸಿದಳು. ತಕ್ಷಣ, ಅವಳು ತನ್ನ ಕೂದಲಿನ ಒಂದು ಭಾಗವನ್ನು ಕತ್ತರಿಸಿ, ತನ್ನ ಮಾಯೆಯಿಂದ, ಅವನ ನೆತ್ತಿಯ ಮೇಲೆ ನೆಟ್ಟಳು.[೪೬] ವೆಂಕಟೇಶ್ವರನು ಅವಳ ತ್ಯಾಗವನ್ನು ಗಮನಿಸಿದನು. ಕೂದಲು ಸ್ತ್ರೀ ರೂಪದ ಸುಂದರ ಆಸ್ತಿಯಾದ್ದರಿಂದ, ತನ್ನ ನಿವಾಸಕ್ಕೆ ಬರುವ ಎಲ್ಲಾ ಭಕ್ತರು ತಮ್ಮ ಕೂದಲನ್ನು ತನಗೆ ಅರ್ಪಿಸುವರು ಮತ್ತು ಸ್ವೀಕರಿಸಿದ ಎಲ್ಲ ಕೂದಲನ್ನು ಅವಳು ಸ್ವೀಕರಿಸುವಳು ಎಂದು ಅವನು ಭರವಸೆ ನೀಡಿದನು. ಹಾಗಾಗಿ ಭಕ್ತರು ಅರ್ಪಿಸುವ ಮುಡಿಯನ್ನು ನೀಲಾದೇವಿ ಸ್ವೀಕರಿಸುತ್ತಾಳೆ ಎಂಬ ನಂಬಿಕೆ ಇದೆ. ಏಳು ಬೆಟ್ಟಗಳಲ್ಲಿ ಒಂದಾದ ನೀಲಾದ್ರಿ ಎಂಬ ಬೆಟ್ಟಕ್ಕೆ ಅವಳ ಹೆಸರನ್ನು ಇಡಲಾಗಿದೆ.  ಸಾಂಪ್ರದಾಯಿಕವಾಗಿ ಕ್ಷೌರಿಕರು ಪುರುಷ ಮತ್ತು ನಾಯೀ ಜಾತಿಗೆ ಸೇರಿದವರಾಗಿದ್ದರು. ಇದು ಸ್ವಲ್ಪ ತಾರತಮ್ಯವನ್ನು ಉಂಟುಮಾಡಿತು ಮತ್ತು ತಾವು ಸ್ತ್ರೀ ಕ್ಷೌರಿಕರನ್ನು ಇಷ್ಟಪಡುತ್ತೇವೆ ಎಂಬ ಮಹಿಳೆಯರ ವಿನಂತಿಗಳನ್ನು ಪರಿಹರಿಸಲು ವೈಫಲ್ಯತೆ ಉಂಟಾಯಿತು.[೪೭] ಮಹಿಳಾ ಕ್ಷೌರಿಕರನ್ನು ನೇಮಿಸಲು ದೇವಸ್ಥಾನವು ಒಪ್ಪಿಕೊಂಡಿತು.

ಹುಂಡಿ[ಬದಲಾಯಿಸಿ]

ದಂತಕಥೆಯ ಪ್ರಕಾರ, ಶ್ರೀನಿವಾಸನು ತನ್ನ ಮದುವೆಗೆ ಏರ್ಪಾಟುಗಳನ್ನು ಮಾಡಬೇಕಾಯಿತು. ಕುಬೇರನು ಪದ್ಮಾವತಿಯೊಂದಿಗೆ ವೆಂಕಟೇಶ್ವರನ ಮದುವೆಗೆ ಸಾಲ ಕೊಟ್ಟನು. ಶ್ರೀನಿವಾಸನು ಕುಬೇರನಿಂದ ಒಂದು ಕೋಟಿ ೧೧.೪ ದಶಲಕ್ಷ ಚಿನ್ನದ ನಾಣ್ಯಗಳ ಸಾಲ ಕೇಳಿದನು. ದೇವರ ವಾಸ್ತುಶಿಲ್ಪಿಯಾದ ವಿಶ್ವಕರ್ಮನು ಶೇಷಾದ್ರಿ ಗುಡ್ಡಗಳಲ್ಲಿ ಸ್ವರ್ಗದಂತಹ ಪರಿಸರವನ್ನು ಸೃಷ್ಟಿಸಿದನು. ಶ್ರೀನಿವಾಸ ಮತ್ತು ಪದ್ಮಾವತಿಯರು ಜೊತೆಯಾಗಿ ಚಿರಕಾಲ ಬಾಳಿದರು. ದೇವಿ ಲಕ್ಷ್ಮಿಯು ವಿಷ್ಣುವಿನ ಬಾಧ್ಯತೆಗಳನ್ನು ಅರ್ಥಮಾಡಿಕೊಂಡು ಅವನ ಹೃದಯದಲ್ಲಿ ಚಿರಕಾಲು ಬಾಳಲು ಆಯ್ದುಕೊಂಡಳು. ಇದರ ಸ್ಮರಣಾರ್ಥವಾಗಿ ಭಕ್ತರು ಅವನು ಕುಬೇರನಿಗೆ ಪಾವತಿಸಲು ಸಾಧ್ಯವಾಗುವಂತೆ ತಿರುಪತಿಗೆ ಹೋಗಿ ವೆಂಕಟೇಶ್ವರನ ಹುಂಡಿಯಲ್ಲಿ ದುಡ್ಡು ದಾನಮಾಡುತ್ತಾರೆ. ಹುಂಡಿ ಸಂಗ್ರಹ ಒಂದು ದಿನಕ್ಕೆ ರೂ. 22.5 ದಶಲಕ್ಷ ಮುಟ್ಟಬಹುದು.[೬][೪೮]

ತುಲಾಭಾರ[ಬದಲಾಯಿಸಿ]

ತುಲಾಭಾರ ಆಚರಣೆಯಲ್ಲಿ, ಒಬ್ಬ ಭಕ್ತನು ತೂಕದ ತಕ್ಕಡಿಯ ಹರಿವಾಣದ ಮೇಲೆ ಕುಳಿತುಕೊಳ್ಳುತ್ತಾನೆ ಮತ್ತು ಇನ್ನೊಂದು ಹರಿವಾಣದ ಮೇಲೆ ಭಕ್ತನ ತೂಕಕ್ಕಿಂತ ಹೆಚ್ಚಿನ ವಸ್ತುಗಳನ್ನು ತುಂಬಲಾಗುತ್ತದೆ. ಭಕ್ತರು ಸಾಮಾನ್ಯವಾಗಿ ಸಕ್ಕರೆ, ಬೆಲ್ಲ, ತುಳಸಿ ಎಲೆ, ಬಾಳೆಹಣ್ಣು, ಚಿನ್ನ, ನಾಣ್ಯಗಳನ್ನು ಅರ್ಪಿಸುತ್ತಾರೆ. ಇದನ್ನು ಹೆಚ್ಚಾಗಿ ನವಜಾತ ಶಿಶುಗಳು ಅಥವಾ ಮಕ್ಕಳೊಂದಿಗೆ ನಡೆಸಲಾಗುತ್ತದೆ.[೪೯]

ಹಬ್ಬಗಳು[ಬದಲಾಯಿಸಿ]

ತಿರುಮಲದಲ್ಲಿ ಉತ್ಸವದ ಸಂದರ್ಭದಲ್ಲಿ ಆನೆಗಳು ಮೆರವಣಿಗೆಯಲ್ಲಿ ನಡೆಯುತ್ತವೆ

ವೆಂಕಟೇಶ್ವರ ದೇವಸ್ಥಾನದಲ್ಲಿ "ನಿತ್ಯ ಕಲ್ಯಾಣಂ ಪಚ್ಚ ತೋರಣಂ" ಎಂಬ ಶೀರ್ಷಿಕೆಗೆ ಅನುಗುಣವಾಗಿ ವರ್ಷದ 365 ದಿನಗಳಲ್ಲಿ 433 ಕ್ಕಿಂತ ಹೆಚ್ಚು ಉತ್ಸವಗಳನ್ನು ಆಚರಿಸಲಾಗುತ್ತದೆ. ಪ್ರತಿ ದಿನವೂ ಉತ್ಸವವಾಗಿರುತ್ತದೆ.[೫೦]

ಒಂಬತ್ತು ದಿನಗಳ ಕಾರ್ಯಕ್ರಮವಾದ ಶ್ರೀ ವೆಂಕಟೇಶ್ವರ ಬ್ರಹ್ಮೋತ್ಸವಗಳನ್ನು ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಇದು ವೆಂಕಟೇಶ್ವರ ದೇವಸ್ಥಾನದ ಪ್ರಮುಖ ಕಾರ್ಯಕ್ರಮವಾಗಿದೆ. ಬ್ರಹ್ಮೋತ್ಸವದ ಸಮಯದಲ್ಲಿ ಮೆರವಣಿಗೆಯ ಮೂರ್ತಿಯಾದ ಮಲಯಪ್ಪನನ್ನು ಅವನ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯರೊಂದಿಗೆ ವಿವಿಧ ವಾಹನಗಳ ಮೇಲೆ ದೇವಾಲಯದ ಸುತ್ತ ನಾಲ್ಕು ಮದ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ವಾಹನಗಳಲ್ಲಿ ಧ್ವಜಾರೋಹಣಂ, ಪೆದ್ದ ಶೇಷ ವಾಹನಂ, ಚಿನ್ನ ಶೇಷ ವಾಹನಂ, ಹಂಸ ವಾಹನಂ, ಸಿಂಹವಾಹನಂ, ಮುತ್ತೈಪು ಪಂಡಿರಿ ವಾಹನಂ, ಕಲ್ಪವೃಕ್ಷ ವಾಹನಂ, ಸರ್ವ ಭೂಪಾಲ ವಾಹನಂ, ಮೋಹಿನಿ ಅವತಾರಂ, ಗರುಡ ವಾಹನಂ, ಹನುಮಂತ ವಾಹನಂ, ಸ್ವರ್ಣ ರಥೋತ್ಸವಂ, ಗಜವಾಹನಂ, ರಥೋತ್ಸವಂ, ಅಶ್ವ ವಾಹನಂ ಮತ್ತು ಚಕ್ರ ಸ್ನಾನ ಸೇರಿವೆ. ಬ್ರಹ್ಮೋತ್ಸವದ ಸಮಯದಲ್ಲಿ, ದೇವಾಲಯವು ವಿಶೇಷವಾಗಿ ಗರುಡ ವಾಹನದಲ್ಲಿ ಲಕ್ಷಾಂತರ ಭಕ್ತರಿಗೆ ಸಾಕ್ಷಿಯಾಗುತ್ತದೆ. ವೈಕುಂಠ ದ್ವಾರಗಳನ್ನು ತೆರೆಯಲಾಗುತ್ತದೆ ಎಂದು ನಂಬಲಾದ ದಿನ ಮತ್ತು ಅತ್ಯಂತ ಪ್ರಮುಖವಾದ ವೈಷ್ಣವ ಹಬ್ಬವಾದ ವೈಕುಂಠ ಏಕಾದಶಿಯನ್ನು ತಿರುಮಲದಲ್ಲಿ ವೈಭವದಿಂದ ಆಚರಿಸಲಾಗುತ್ತದೆ. ತಿರುಮಲ ವೆಂಕಟೇಶ್ವರ ದೇವಸ್ಥಾನವು "ವೈಕುಂಠ ದ್ವಾರಂ" ಎಂದು ಕರೆಯಲ್ಪಡುವ ಒಳಗಿನ ಗರ್ಭಗುಡಿಯನ್ನು ಸುತ್ತುವರಿಯುವ, ವಿಶೇಷ ಪ್ರವೇಶದ್ವಾರದ ಮೂಲಕ ವೆಂಕಟೇಶ್ವರನ ದರ್ಶನವನ್ನು ಪಡೆಯಲು ಒಂದೇ ದಿನದಲ್ಲಿ 150,000ರಷ್ಟು ಸಂಖ್ಯೆಯ ಭಕ್ತರಿಂದ ತುಂಬಿರುತ್ತದೆ.[೫೧][೫೨] ರಥಸಪ್ತಮಿ ಮತ್ತೊಂದು ಹಬ್ಬವಾಗಿದ್ದು, ಫೆಬ್ರವರಿಯಲ್ಲಿ ಆಚರಿಸಲ್ಪಡುತ್ತದೆ. ವೆಂಕಟೇಶ್ವರನ ಮೆರವಣಿಗೆಯ ಮೂರ್ತಿಯನ್ನು (ಮಲಯಪ್ಪ) ದೇವಸ್ಥಾನದ ಸುತ್ತಲೂ ಏಳು ವಿಭಿನ್ನ ವಾಹನಗಳ ಮೇಲೆ ಬೆಳಿಗ್ಗೆಯಿಂದ ಆರಂಭಗೊಂಡು ತಡರಾತ್ರಿಯವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ.[೫೩] ಇತರ ವಾರ್ಷಿಕ ಹಬ್ಬಗಳಾದ ರಾಮ ನವಮಿ, ಜನ್ಮಾಷ್ಟಮಿ, ಯುಗಾದಿ, ತೆಪ್ಪೋತ್ಸವ (ತೇಲುವ ಉತ್ಸವ), ಶ್ರೀ ಪದ್ಮಾವತಿ ಪರಿಣಯೋತ್ಸವಗಳು, ಪುಷ್ಪ ಯಾಗ, ಪುಷ್ಪ ಪಲ್ಲಕ್ಕಿ, ಮಾರ್ಚ್-ಏಪ್ರಿಲ್‌ನಲ್ಲಿ ನಡೆಸಲಾಗುವ ವಸಂತೋತ್ಸವಗಳನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.

ಹಾಡುಗಳು ಮತ್ತು ಸ್ತೋತ್ರಗಳು[ಬದಲಾಯಿಸಿ]

ವೆಂಕಟೇಶ್ವರ ಸುಪ್ರಭಾತಂ ಎಂಬುದು ತಿರುಮಲ ದೇವಸ್ಥಾನದ ಗರ್ಭಗುಡಿಯೊಳಗಿನ ಸಾಯನ ಮಂಟಪದಲ್ಲಿ ವೆಂಕಟೇಶ್ವರನಿಗೆ ಮಾಡಲಾಗುವ ಮೊದಲ ಮತ್ತು ಮುಂಜಾನೆ ಮುನ್ನದ ಸೇವೆಯಾಗಿದೆ. ಭಗವಂತನನ್ನು ಅವನ ಸ್ವರ್ಗೀಯ ನಿದ್ರೆಯಿಂದ ಎಬ್ಬಿಸುವುದು ಇದರ ಉದ್ದೇಶವಾಗಿದೆ.[೫೪][೫೫] ವೆಂಕಟೇಶ್ವರ ಸುಪ್ರಭಾತ ಸ್ತೋತ್ರಗಳನ್ನು 13 ನೇ ಶತಮಾನದಲ್ಲಿ ಪ್ರತಿವಾದಿ ಭಯಂಕರಂ ಅಣ್ಣಂಗರಾಚಾರ್ಯರು ರಚಿಸಿದ್ದಾರೆ ಮತ್ತು ಇದು ಸುಪ್ರಭಾತಂ (29), ಸ್ತೋತ್ರಂ (11), ಪ್ರಪತ್ತಿ (14) ಮತ್ತು ಮಂಗಳಾಶಾಸನಂ (16) ಸೇರಿದಂತೆ ನಾಲ್ಕು ಭಾಗಗಳಲ್ಲಿ 70 ಶ್ಲೋಕಗಳನ್ನು ಒಳಗೊಂಡಿದೆ.[೫೫][೫೪]

14 ನೇ ಶತಮಾನದ ಕವಿ ಸಂತ[೫೬], ತೆಲುಗಿನ ಮಹಾನ್ ಕವಿಗಳಲ್ಲಿ ಒಬ್ಬರು ಮತ್ತು ವೆಂಕಟೇಶ್ವರನ ಮಹಾನ್ ಭಕ್ತರಾಗಿದ್ದ ತಲ್ಲಪಾಕ ಅನ್ನಮಾಚಾರ್ಯರು (ಅನ್ನಮಯ್ಯ), ವೆಂಕಟೇಶ್ವರನ ಸ್ತುತಿಗಾಗಿ 32000 ಹಾಡುಗಳನ್ನು ಹಾಡಿದ್ದಾರೆ.[೫೭][೫೬] ತೆಲುಗು ಮತ್ತು ಸಂಸ್ಕೃತದಲ್ಲಿರುವ ಅವರ ಎಲ್ಲಾ ಹಾಡುಗಳನ್ನು ಸಂಕೀರ್ತನೆಗಳೆಂದು ಕರೆಯಲಾಗುತ್ತದೆ ಮತ್ತು ಅವನ್ನು ಶೃಂಗಾರ ಸಂಕೀರ್ತನಲು ಮತ್ತು ಅಧ್ಯಾತ್ಮ ಸಂಕೀರ್ತನಲು ಎಂದು ವರ್ಗೀಕರಿಸಲಾಗಿದೆ.[೫೬]

ಉಪದೇಗುಲಗಳು[ಬದಲಾಯಿಸಿ]

ವರದರಾಜ ದೇವಸ್ಥಾನ

ದೇವಸ್ಥಾನವನ್ನು ಪ್ರವೇಶಿಸುವಾಗ ವೆಂಡಿವಾಕಿಲಿಯ ಎಡಭಾಗದಲ್ಲಿ (ಬೆಳ್ಳಿ ಪ್ರವೇಶದ್ವಾರ) ವಿಮಾನ-ಪ್ರದಕ್ಷಿಣಮ್‍ನಲ್ಲಿ ವರದರಾಜನಿಗೆ ಸಮರ್ಪಿತವಾದ ಒಂದು ಸಣ್ಣ ದೇವಾಲಯವಿದೆ.[೫೮] ಈ ಮೂರ್ತಿಯನ್ನು ಯಾವಾಗ ಸ್ಥಾಪಿಸಲಾಯಿತು ಎಂಬುದು ತಿಳಿದಿಲ್ಲ. ಕಲ್ಲಿನ ಮೂರ್ತಿಯು[೫೮] ಕುಳಿತಿರುವ ಭಂಗಿಯಲ್ಲಿದ್ದು ಪಶ್ಚಿಮಾಭಿಮುಖವಾಗಿದೆ.

ಯೋಗ ನರಸಿಂಹ ದೇವಾಲಯ

ವಿಮಾನ-ಪ್ರದಕ್ಷಿಣೆಯ ಈಶಾನ್ಯ ಮೂಲೆಯಲ್ಲಿ ನರಸಿಂಹನಿಗೆ ಸಮರ್ಪಿತವಾದ ಒಂದು ದೇವಾಲಯವಿದೆ.[೫೯] ಇದನ್ನು ಕ್ರಿ.ಶ. 1330 – 1360 ರ ನಡುವೆ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಯೋಗ-ನರಸಿಂಹನು ಯೋಗ ಪಟ್ಟದಿಂದ ಬಂಧಿತವಾದ ಚಕ್ಕಳ ಮುಕ್ಕಳ ಭಂಗಿಯಲ್ಲಿ ಕುಳಿತುಕೊಂಡು ಮೇಲಿನ ಎರಡು ಕೈಗಳಲ್ಲಿ ಶಂಖ ಮತ್ತು ಚಕ್ರವನ್ನು ಮತ್ತು ಯೋಗ ಮುದ್ರೆಯಲ್ಲಿ ಎರಡು ಕೆಳಗಿನ ಕೈಗಳನ್ನು ಹಿಡಿದಿರುವುದನ್ನು ಕಾಣಬಹುದು.[೫೯]

ಗರುತ್ಮಂತ ದೇವಸ್ಥಾನ

ವೆಂಕಟೇಶ್ವರನ ವಾಹನನಾದ ಗರುಡನಿಗೆ ಸಮರ್ಪಿತವಾದ ಒಂದು ಸಣ್ಣ ದೇವಾಲಯವು ಜಯ- ವಿಜಯರ ಬಂಗಾರುವಕಿಲಿ (ಬಂಗಾರದ ಪ್ರವೇಶದ್ವಾರ) ಎದುರುಗಡೆ ಇದೆ. ಈ ಉಪ ದೇಗುಲವು ಗರುಡಮಂಟಪದ ಭಾಗವಾಗಿದೆ. ಗರುತ್ಮಂತ ಮೂರ್ತಿಯು ಆರು ಅಡಿ ಎತ್ತರವಿದ್ದು ಗರ್ಭಗೃಹದ ಒಳಗಿನ ವೆಂಕಟೇಶ್ವರನ ಕಡೆಗೆ ನೋಡುತ್ತಿದ್ದು ಪಶ್ಚಿಮಕ್ಕೆ ಮುಖ ಮಾಡಿದೆ.

ಭೂವರಾಹ ಸ್ವಾಮಿ ದೇವಸ್ಥಾನ

ಭೂವರಾಹ ಸ್ವಾಮಿ ದೇವಾಲಯವು ವಿಷ್ಣುವಿನ ಅವತಾರವಾದ ವರಾಹನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಈ ದೇವಾಲಯವು ವೆಂಕಟೇಶ್ವರ ದೇವಾಲಯಕ್ಕಿಂತ ಹಳೆಯದು ಎಂದು ನಂಬಲಾಗಿದೆ. ಈ ದೇವಾಲಯವು ಸ್ವಾಮಿ ಪುಷ್ಕರಿಣಿಯ ಉತ್ತರ ದಂಡೆಯ ಮೇಲಿದೆ. ಸಂಪ್ರದಾಯದ ಪ್ರಕಾರ, ನೈವೇದ್ಯವನ್ನು ಮುಖ್ಯ ದೇವಾಲಯದಲ್ಲಿ ವೆಂಕಟೇಶ್ವರನಿಗೆ ಅರ್ಪಿಸುವ ಮೊದಲು ಭೂವರಾಹ ಸ್ವಾಮಿಗೆ ಅರ್ಪಿಸಲಾಗುತ್ತದೆ. ಸಂಪ್ರದಾಯದಂತೆ ಭಕ್ತರು ವೆಂಕಟೇಶ್ವರನ ಮೊದಲು ಭೂವರಾಹ ಸ್ವಾಮಿಯ ದರ್ಶನ ಪಡೆಯಬೇಕು.

ಬೇಡಿ-ಆಂಜನೇಯ ದೇವಸ್ಥಾನ

ಬೇಡಿ-ಆಂಜನೇಯ ದೇವಸ್ಥಾನವು ಹನುಮಂತನಿಗೆ ಸಮರ್ಪಿತವಾದ ಉಪ-ದೇಗುಲವಾಗಿದೆ. ಈ ದೇವಾಲಯವು ಅಖಿಲಾಂಡಮ್ (ತೆಂಗಿನಕಾಯಿಯನ್ನು ಅರ್ಪಿಸುವ ಸ್ಥಳ) ಬಳಿಯ ಮಹಾದ್ವಾರದ ಎದುರು ಇದೆ. ಈ ದೇವಾಲಯದಲ್ಲಿರುವ ದೇವರು ತನ್ನ ಎರಡೂ ಕೈಗಳಲ್ಲಿ ಕೈಕೋಳ ಹಾಕಿಕೊಂಡಿದ್ದಾನೆ.

ವಕುಳಮಾತಾ ಸನ್ನಿಧಿ

ವಕುಳಮಾತೆಯು ವೆಂಕಟೇಶ್ವರನ ತಾಯಿ. ವರದರಾಜ ದೇವಾಲಯದ ಸ್ವಲ್ಪ ಮುಂದೆ ಮುಖ್ಯ ದೇವಾಲಯದಲ್ಲಿ ಅವಳಿಗೆ ಸಮರ್ಪಿತವಾದ ಪ್ರತಿಮೆ ಇದೆ. ದೇವತೆ ಕುಳಿತ ಭಂಗಿಯಲ್ಲಿದ್ದಾಳೆ. ದಂತಕಥೆಯ ಪ್ರಕಾರ, ಅವಳು ತನ್ನ ಮಗನಿಗೆ ನೀಡಬೇಕಾದ ಆಹಾರದ ತಯಾರಿಕೆಯ ಮೇಲ್ವಿಚಾರಣೆ ಮಾಡುತ್ತಾಳೆ. ಈ ಕಾರಣಕ್ಕಾಗಿ ವಕುಳಮಾತೆಯ ಸನ್ನಿಧಿ ಮತ್ತು ಶ್ರೀವಾರಿ ಪೋಟು(ಅಡುಗೆಮನೆ)ಯನ್ನು ಬೇರ್ಪಡಿಸುವ ಗೋಡೆಗೆ ರಂಧ್ರವನ್ನು ಮಾಡಲಾಗಿದೆ.

ಕುಬೇರ ಸನ್ನಿಧಿ

ವಿಮಾನಪ್ರದಕ್ಷಿಣೆಯೊಳಗೆ ಕುಬೇರನಿಗೆ ಸಮರ್ಪಿತವಾದ ಒಂದು ಉಪ ದೇಗುಲವಿದೆ. ಮೂರ್ತಿಯು ಗರ್ಭಗೃಹದ ಬಲಭಾಗದಲ್ಲಿದೆ ಮತ್ತು ಪ್ರಧಾನ ದೇವತೆಯ ಕಡೆಗೆ ದಕ್ಷಿಣಕ್ಕೆ ಮುಖಮಾಡಿದೆ.

ರಾಮಾನುಜ ದೇಗುಲ

ಶ್ರೀ ರಾಮಾನುಜರ ದೇಗುಲವು ವಿಮಾನ ಪ್ರದಕ್ಷಿಣಮ್‍ನ ಉತ್ತರ ಓಣಿಯ ಪಕ್ಕದಲ್ಲಿದೆ. ಇದನ್ನು ಭಾಷ್ಯಕಾರ ಸನ್ನಿಧಿ ಎಂದೂ ಕರೆಯುತ್ತಾರೆ. ಈ ದೇವಾಲಯವನ್ನು ಸುಮಾರು ಕ್ರಿ.ಶ. 13 ನೇ ಶತಮಾನದಲ್ಲಿ ನಿರ್ಮಿಸಲಾಯಿತು.

ಗಮನಾರ್ಹ ಭಕ್ತರು[ಬದಲಾಯಿಸಿ]

ರಾಮಾನುಜರು (1017-1137)[೬೦] ಶ್ರೀ ವೈಷ್ಣವ ಸಂಪ್ರದಾಯದ ಅತ್ಯಂತ ಪ್ರಮುಖ ಆಚಾರ್ಯರು.[೬೦] ವೆಂಕಟೇಶ್ವರ ದೇವಸ್ಥಾನದ ಪೂಜಾ ವಿಧಾನಗಳು ಮತ್ತು ಇತರ ವ್ಯವಹಾರಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಅವರ ಭೇಟಿಯ ಸಮಯದಲ್ಲಿ ವಿಷ್ಣುವಿನ ಪವಿತ್ರ ಶಂಖ ಮತ್ತು ಚಕ್ರ, ಆಯುಧಗಳನ್ನು ಉಡುಗೊರೆಯಾಗಿ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದ್ದರಿಂದ ಅವರನ್ನು ಸ್ವತಃ 'ಆಚಾರ್ಯ' (ಗುರು ಅಥವಾ ಶಿಕ್ಷಕ) ಎಂದು ಪರಿಗಣಿಸಲಾಗಿದೆ.[೬೧][೬೨] ಅವರು ಪೆದ್ದ ಜೀಯರ್ ಮಾತಮ್‍ನ್ನು ಸ್ಥಾಪಿಸಿದರು. ಶ್ರೀ ಅನಂತಾಳ್ವಾನ್ ನಿರ್ಮಿಸಿದ ದೇವಾಲಯದ ಒಳಗೆ ಅವರು ಸನ್ನಿಧಿಯನ್ನು ಹೊಂದಿದ್ದಾರೆ.

ಪದ-ಕವಿತಾ ಪಿತಾಮಹ ಶ್ರೀ ತಲ್ಲಪಾಕ ಅನ್ನಮಾಚಾರ್ಯ (ಅಥವಾ ಅನ್ನಮಯ್ಯ) ರ ಪ್ರತಿಮೆ - ತಿರುಮಲ ವೆಂಕಟೇಶ್ವರ ದೇವಸ್ಥಾನದ ಅಧಿಕೃತ ಹಾಡುಗಾರ

ಶ್ರೀ ತಲ್ಲಪಾಕ ಅನ್ನಮಾಚಾರ್ಯ (ಅಥವಾ ಅನ್ನಮಯ್ಯ) (22 ಮೇ 1408 - 4 ಏಪ್ರಿಲ್ 1503) ಅವರು ತಿರುಮಲ ವೆಂಕಟೇಶ್ವರ ದೇವಸ್ಥಾನದ ಅಧಿಕೃತ ಗೀತರಚನೆಕಾರರಾಗಿದ್ದರು ಮತ್ತು ಸುಮಾರು 36000 ಕೀರ್ತನೆಗಳನ್ನು ರಚಿಸಿದ ತೆಲುಗು ಸಂಯೋಜಕರಾಗಿದ್ದರು.[೬೩] ಅವುಗಳಲ್ಲಿ ಹಲವು ದೇವಾಲಯದ ಪ್ರಧಾನ ದೇವತೆಯಾದ ವೆಂಕಟೇಶ್ವರನನ್ನು ಸ್ತುತಿಸುತ್ತವೆ.

ಹಾಥಿರಾಮ್ ಭಾವಾಜಿ ಅವರು ಕ್ರಿ.ಶ. 1500[೬೪] ರ ಸುಮಾರಿಗೆ ತೀರ್ಥಯಾತ್ರೆಯಲ್ಲಿ ತಿರುಮಲಕ್ಕೆ ಭೇಟಿ ನೀಡಿದ ಅಯೋಧ್ಯೆಯ ಸಂತರಾಗಿದ್ದರು ಮತ್ತು ವೆಂಕಟೇಶ್ವರನ ಭಕ್ತರಾದರು.[೬೫][೬೬]

ಏಳು ಬೆಟ್ಟಗಳು[ಬದಲಾಯಿಸಿ]

ಈ ಏಳು ಬೆಟ್ಟಗಳನ್ನು ಸಪ್ತಗಿರಿ ಎಂದು ಕರೆಯುತ್ತಾರೆ. ಇದು ಸಪ್ತಋಷಿಗಳನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ದೇವರನ್ನು ಸಪ್ತಗಿರಿನಿವಾಸ ಎಂದು ಕರೆಯುವರು. ಈ ಏಳು ಬೆಟ್ಟಗಳಾವುವೆಂದರೆ-

  1. ವೃಷಭಾದ್ರಿ - ನಂದಿಯ ಬೆಟ್ಟ , ಶಿವನ ವಹನ.
  2. ಅಂಜನಾದ್ರಿ - ಹನುಮಂತನ ಬೆಟ್ಟ.
  3. ನೀಲಾದ್ರಿ - ನೀಲಾ ದೇವಿಯ ಬೆಟ್ಟ , ಭಕ್ತರು ಕೊಡುವ ಕೂದಲು ನೀಲಾ ದೇವಿ ಸ್ವೀಕರಿಸುತ್ತಾರೆ ಎಂದು ನಂಬಲಾಗಿದೆ.
  4. ಗರುಡಾದ್ರಿ - ಗರುಡನ ಬೆಟ್ಟ , ವಿಷ್ಣುವಿನ ವಾಹನ.
  5. ಶೇಷಾದ್ರಿ - ಶೇಷನ ಬೆಟ್ಟ , ವಿಷ್ಣುವಿನ ದಾಸ.
  6. ನಾರಾಯಣಾದ್ರಿ - ನಾರಾಯಣನ ಬೆಟ್ಟ , ಶ್ರಿವಾರಿ ಪದಾಲು ಇಲ್ಲಿವೆ.
  7. ವೆಂಕಟಾದ್ರಿ - ವೆಂಕಟೇಶ್ವರನ ಬೆಟ್ಟ.

ಟಿಪ್ಪಣಿಗಳು[ಬದಲಾಯಿಸಿ]

  1. "Tirumala Temple". Archived from the original on 11 October 2007. Retrieved 13 September 2007.
  2. ೨.೦ ೨.೧ "Andhra government eyes Tirupati wealth". The Sunday Guardian Live. 17 October 2020. Retrieved 22 August 2021.
  3. ೩.೦ ೩.೧ Seshagiri, D M; Sinha, Saurabh (8 August 2021). "Andhra Pradesh government reappoints YV Subba Reddy as TTD Board Chairman". Zee News. Retrieved 30 July 2022.
  4. Chandra, Subhash (2021-05-19). God vs Alien: (English Version) (in ಇಂಗ್ಲಿಷ್). Subhash Chandra. p. 54.
  5. "21 Unknown Facts about Tirupati Balaji Temple (Venkateswara Swamy)" (in ಅಮೆರಿಕನ್ ಇಂಗ್ಲಿಷ್). 15 May 2022. Archived from the original on 20 ಮೇ 2022. Retrieved 15 May 2022.
  6. ೬.೦ ೬.೧ Sudhir, Uma (13 September 2007). "Tirupati ousts Vatican, reigns at top". NDTV. Archived from the original on 22 September 2007. Retrieved 13 September 2007.
  7. Sivaratnam, C (1964). An Outline of the Cultural History and Principles of Hinduism (1 ed.). Colombo: Stangard Printers. OCLC 12240260. Koneswaram temple. Tiru-Kona-malai, sacred mountain of Kona or Koneser, Iswara or Siva. The date of building the original temple is given as 1580 BCE according to a Tamil poem by Kavi Raja Virothayan translated into English in 1831 by Simon Cassie Chitty ...
  8. Ramachandran, Nirmala (2004). The Hindu legacy to Sri Lanka. Pannapitiya: Stamford Lake (Pvt.) Ltd. 2004. ISBN 9789558733974. OCLC 230674424. Portuguese writer De Queyroz compares Konesvaram to the famous Hindu temples in Rameswaram, Kanchipuram, Tirupatti-Tirumalai, Jagannath and Vaijayanthi and concludes that while these latter temples were well visited by the Hindus, the former had surpassed all the latter temples by the early 1600s
  9. Shilpa (5 December 2018). "Venkateswara Temple, Tirumala, Andhra Pradesh". Bharat Temples (in ಅಮೆರಿಕನ್ ಇಂಗ್ಲಿಷ್). Retrieved 19 April 2022.
  10. "Tirupati – Tirumala – Venkateswara the lord of the Kali Yuga". Dakshināvarta (in ಅಮೆರಿಕನ್ ಇಂಗ್ಲಿಷ್). 21 May 2020. Retrieved 19 April 2022.
  11. Punjabi, Mona (21 April 2019). "Tirupati Balaji - History of Tirupati Balaji temple". The Times of India. Retrieved 19 April 2022.
  12. ೧೨.೦ ೧೨.೧ ೧೨.೨ ೧೨.೩ "Tirumala Tirupati Devasthanams-Temple Legend". Archived from the original on 2015-12-12. Retrieved 2022-09-02.
  13. Feminism and World Religions 1999.
  14. ೧೪.೦ ೧೪.೧ Dr. N.Ramesan (1981). The Tirumala Temple. Tirumala: Tirumala Tirupati Devasthanams.
  15. ೧೫.೦ ೧೫.೧ ttd, official site. "TTD Temple History". Tirumala Tirupathi Devasthanams. Temple website. Retrieved 15 December 2019.
  16. "Tirumala Tirupati Devasthanams: Temple History". Archived from the original on 12 April 2012. Retrieved 15 July 2011.
  17. Sreenivasa Ayyangar, C. R (1908). The life and teachings of Sri Ramanujacharya (in English). Madras: R. Venkateshwar. OCLC 30865934.{{cite book}}: CS1 maint: unrecognized language (link)
  18. "Pontiffs Jeeyangars, the Ombudsman of Tirumala Temple rituals – TTD News". T. T. D. News. Archived from the original on 3 ಆಗಸ್ಟ್ 2022. Retrieved 6 June 2022.
  19. "Voice of a mighty philosophy". The Hindu. 25 March 2010. Retrieved 6 June 2022.
  20. Narasimhan, T. A (16 June 2016). "He streamlined the rituals at Tirumala temple". The Hindu. Retrieved 6 June 2022.
  21. V.K, Bhaskara Rao (1992). Organisational and Financial Management of Religious Institutions: With Special Reference to Tirumala Tirupati Devasthanams (TTD). Deep and Deep Publications. pp. 52, 53. ISBN 81-7100-441-5.
  22. Koutha, Nirmala Kumari (1 January 1998). History of the Hindu Religious Endowments in Andhra Pradesh. Northern Book Centre. p. 124. ISBN 81-7211-085-5.
  23. "Archived copy". Archived from the original on 8 December 2015. Retrieved 22 October 2015.{{cite web}}: CS1 maint: archived copy as title (link)
  24. Ramakrishna, Lalita (2003). Musical heritage of India. ISBN 9788187226611. Retrieved 23 September 2019.
  25. ೨೫.೦ ೨೫.೧ International Journal of Dravidian Linguistics: IJDL., Volume 36. 2007. Retrieved 23 September 2019.
  26. Jatania, Prachi (2 November 2006). "Tirumala, the epicentre of faith". CNN-IBN. Retrieved 15 July 2011.
  27. Sitapati, Pidatala (1968). Sri Venkateswara, the Lord of the Seven Hills, Tirupati (in ಇಂಗ್ಲಿಷ್). Bharatiya Vidya Bhavan. p. 107.
  28. York, Michael (5 August 2015). Pagan Ethics: Paganism as a World Religion. ISBN 9783319189239. Retrieved 24 September 2019.
  29. ೨೯.೦ ೨೯.೧ ೨೯.೨ ೨೯.೩ ೨೯.೪ Sri Venkateshwara. Shantha Nair. 7 January 2014. ISBN 9788184954456.
  30. ೩೦.೦ ೩೦.೧ "Tiruppavai to replace Suprabhata Seva". times of india. 8 December 2016. Retrieved 27 July 2018.
  31. ೩೧.೦ ೩೧.೧ "Much awaited Kaisika Dwadasi falls on November 11". times of india. 6 November 2016. Retrieved 27 July 2018.
  32. ೩೨.೦ ೩೨.೧ "Fervour marks 'Kaisika Dwadasi' at Tirumala". The Hindu. 2 December 2016. Retrieved 27 July 2018.
  33. Varadachary, T. (1999). Tirumala, the Panorama of Seven Hills. Retrieved 20 September 2019.
  34. ೩೪.೦ ೩೪.೧ Singh, Nagendra Kr; Mishra, A. P. (2005). Encyclopaedia of Oriental Philosophy and Religion: Hinduism. ISBN 9788182200746. Retrieved 20 September 2019.
  35. Varadachary, T. (1999). Tirumala, the Panorama of Seven Hills. Retrieved 20 September 2019.
  36. Diehl, Carl Gustav (1956). Instrument and Purpose: Studies on Rites and Rituals South India. Gleevup. Retrieved 20 September 2019. Sage Vikhanasa atri.
  37. "Tirumala Tirupati Devasthanams-Arjitha Sevas". Archived from the original on 21 ಜುಲೈ 2015. Retrieved 18 August 2015.
  38. "Record sale of Tirupati laddoos". The Times of India. 7 May 2007. Archived from the original on 2012-10-25. Retrieved 2022-09-02.
  39. Sivaraman, R. (3 March 2014). "Only TTD entitled to make or sell 'Tirupati laddu': High Court". The Hindu. Retrieved 23 June 2015.
  40. "Now, Geographical Indication rights for 'Tirupati laddu'". Business Standard India. Business Standard. 28 February 2014. Retrieved 23 June 2015.
  41. Srivari Brahmotsavam: A celestial spectacle on earth. 2013. Retrieved 23 September 2019.[ಶಾಶ್ವತವಾಗಿ ಮಡಿದ ಕೊಂಡಿ]
  42. ೪೨.೦ ೪೨.೧ ೪೨.೨ The Crown Divine: Diamond Crown Souvenir, December 20, 1985 (in ಇಂಗ್ಲಿಷ್). Tirumala Tirupati Devasthanams. 1985. pp. 42, 43. Retrieved 23 September 2019.
  43. "Tirumala Tirupati Devasthanams-Sri Bhu Varaha Swamy Temple". Archived from the original on 2016-03-04. Retrieved 2022-09-02.
  44. Saritha Rai (14 July 2004). "A Religious Tangle Over the Hair of Pious Hindus". The New York Times. Retrieved 26 April 2009.
  45. "Tirupati Tirumala Temple: তিরুপতির এই মন্দির আপনাকে এনে দেবে জীবনের সব সুখ! বদলে দিতে এই সামান্য জিনিসটা". The Bengali Chronicles. 7 July 2022. Retrieved 10 August 2022. {{cite news}}: |archive-date= requires |archive-url= (help)CS1 maint: url-status (link)
  46. Tarlo, Emma (6 October 2016). Entanglement: The Secret Lives of Hair (in ಇಂಗ್ಲಿಷ್). Simon and Schuster. p. 66. ISBN 978-1-78074-993-8.
  47. @MinistryWCD (8 March 2019). "Ms. Kagganapalli Radha Devi - #NariShakti Puraskar 2018 Awardee in Individual category" (Tweet). Retrieved 7 January 2021 – via Twitter. {{cite web}}: Cite has empty unknown parameter: |dead-url= (help)
  48. "TTD again deposits 1,175 KG gold with SBI". The Times of India. PTI. 12 February 2011. Archived from the original on 5 November 2012. Retrieved 13 September 2007.
  49. My Amazing Life: Journey through Success. Partridge Publishing Singapore. 2013. ISBN 9781482894905.
  50. "Tirumala- The Paradise of Festivals". Archived from the original on 20 ಮಾರ್ಚ್ 2015. Retrieved 7 June 2015.
  51. Shukla, G. P. (January 2015). "Pilgrims throng Tirumala". The Hindu. Retrieved 21 June 2015.
  52. "Pilgrims throng Tirumala". Deccan Herrald. January 2015. Retrieved 21 June 2015.
  53. "Rathasapthami photos". Archived from the original on 27 October 2009.
  54. ೫೪.೦ ೫೪.೧ V.K., Subramanian (1996). Sacred Songs of India, Volume 10. Abhinav publications. p. 59. ISBN 81-7017-444-9.
  55. ೫೫.೦ ೫೫.೧ "Tirumala Tirupati Devasthanams-Suprabhatam". Tirumala Tirupati Devasthanams. Archived from the original on 8 ಅಕ್ಟೋಬರ್ 2015. Retrieved 29 July 2015.
  56. ೫೬.೦ ೫೬.೧ ೫೬.೨ Poet Saints of India. Sterling Publishers Pvt. Ltd. 1996. ISBN 9788120718838.
  57. 101 Mystics of India. Abhinav Publications. 2006. ISBN 9788170174714.
  58. ೫೮.೦ ೫೮.೧ Naidu, Thalapaneni Subramanyam (1990). Growth and development of Tirumala-Tirupati as a dimension of Indian civilization. Anthropological Survey of India, Ministry of Human Resource Development, Dept. of Culture, Govt. of India. Retrieved 24 September 2019. Varadaraja.
  59. ೫೯.೦ ೫೯.೧ Naidu, Thalapaneni Subramanyam (1990). Growth and development of Tirumala-Tirupati as a dimension of Indian civilization. Retrieved 24 September 2019.
  60. ೬೦.೦ ೬೦.೧ von Dehsen, Christian D.; Harris, Scott L. (1999). Philosophers and Religious Leaders – Google Books. ISBN 9781573561525. Retrieved 17 June 2013.
  61. Siddharth Varadarajan. Srivari Brahmotsavam: A celestial spectacle on earth. Kasturi and Sons Ltd, 2013. p. 68.
  62. S. D. S. Yadava. Followers of Krishna: Yadavas of India. Lancer Publishers, 2006 - Ahirs - 185 pages. p. 99.
  63. "S. P. Sailaja keeps audience spellbound". The Hindu News. 28 February 2012. Retrieved 2 March 2013.
  64. Shantha, Nair (2013). Sri Venkateswara: Lord Balaji and his holy abode of Thirupati. Mumbai: Jaico Publishing House. p. 12. ISBN 978-81-8495-445-6. Retrieved 26 September 2016.
  65. Ramachandra Pai, N. A. "Hathiram Baba". speakingtree.in. Speeking Tree. Retrieved 26 September 2016.
  66. Team, panditbooking. "The Story of Lord Balaji's favorite devotee Hathiramji Baba and the name of Balaji to the Lord of Tirupati". spiritual.panditbooking.com. Panditbooking. Archived from the original on 27 ಸೆಪ್ಟೆಂಬರ್ 2016. Retrieved 26 September 2016.

ಉಲ್ಲೇಖಗಳು[ಬದಲಾಯಿಸಿ]

 

ಹೊರಗಿನ ಕೊಂಡಿಗಳು[ಬದಲಾಯಿಸಿ]