ತಿರುಮಂಗೈ ಆಳ್ವಾರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Thirumangai Alvar.jpg

ಇವರು ಆಳ್ವಾರುಗಳಲ್ಲಿ ಕೊನೆಯವರು, ತಮ್ಮ ಪ್ರಬಂಧಗಳ ಮಹಿಮೆಯಿಂದ ಎರಡನೆಯವರು. ಚೋಳರಾಜನ ಸೇನಾಧಿಪತಿ ನೀಲ ಎಂಬ ಚತುರ್ಥವರ್ಣದವರ ಮಗನಾಗಿ ವೃಶ್ಚಿಕಮಾಸದ ಕೃತ್ತಿಕಾ ನಕ್ಷತ್ರದ ದಿನ ವಿಷ್ಣುವಿನ ಶಾರ್ಜ್ನಧನುವಿನ ಅಂಶರೆನಿಸಿ ಈ ಆಳ್ವಾರರು ಉದಿಸಿದರೆಂದು ಸಂಪ್ರದಾಯಗ್ರಂಥ ತಿಳಿಸುತ್ತದೆ. ಇವರು ತುಂಬ ಎದೆಗಾರರು. ತಂದೆಯಂತೆ ತಾನೂ ಸೇನಾಧಿಪತಿಯಾಗಿ ರಾಜನಿಂದ ಪರಕಾಲನ್ ಎಂಬ ಬಿರುದನ್ನು ಪಡೆದರು. ಹೆಣ್ಣೆಂದರೆ ಮನಕಳೆವ ಇವರಿಗೆ ಕಾಲಕ್ರಮದಲ್ಲಿ ವೈಶ್ಯಪಾಲಿತೆಯಾದ ಕುಮುದವಲ್ಲಿ ಎಂಬ ಸುಂದರ ಕನ್ಯೆಯೊಬ್ಬಳಲ್ಲಿ ಅನುರಾಗವುಂಟಾಯಿತು. ಆಕೆ “ನೀವು ವೈಷ್ಣವರಾಗುವರಾದರೆ ಮತ್ತು ದಿನವೂ ತಪ್ಪದೆ ಭಗವದ್ಭಕ್ತರಿಗೆ ಅನ್ನಸಂತೃಪ್ತಿಯನ್ನು ನೀಡುವಿರಾದರೆ ನಿಮ್ಮನ್ನು ಮದುವೆಯಾಗುತ್ತೇನೆ” ಎಂದಳು. ಆಳ್ವಾರರು ಈ ನಿಯಮಗಳಿಗೊಪ್ಪಿ ಆಕೆಯನ್ನು ಮದುವೆಯಾದರು. ತದೀಯಾರಾಧನೆಯಿಂದ ಆಳ್ವಾರರ ಬೊಕ್ಕಸ ಬರಿದಾಯಿತು. ರಾಜನ ಮುನಿಸಿನಿಂದ ಅಧಿಕಾರ ಕೈತಪ್ಪಿತು. ಆದರೂ ಪ್ರಣಯಿನಿಗೆ ತಾನಿತ್ತ ವಚನವನ್ನು ಮರೆಯಲಾರದೆ ಆಳ್ವಾರರು ದಸ್ಯುವೃತ್ತಿಯನ್ನು ಕೈಕೊಂಡರು. ಇಂಥ ಪ್ರಣಯನಿಷ್ಠರನ್ನು ತಮ್ಮೆಡೆಗೆ ತಿರುಗಿಸಿಕೊಳ್ಳಬೇಕೆಂದೆನಿಸಿಯೋ ಏನೋ, ಶ್ರೀಮನ್ನಾರಾಯಣ ರಮಾದೇವಿಯರು ಸರ್ವಾಲಂಕಾರಭೂಷಿತರಾಗಿ ವಧೂವರರ ವೇಷದಲ್ಲಿ ಇವರ ಕೈಗೆ ಸಿಕ್ಕಿಬಿದ್ದರು. ಆದರೆ ಅವರಿಂದ ಕಳಚಿಕೊಂಡ ಒಡವೆಗಳ ಮೂಟೆಯನ್ನು ಆಳ್ವಾರರಿಗೆ ಎತ್ತಲಾಗದೆ ಹೋಯಿತು. ಯಾವುದೋ ಮಂತ್ರಹಾಕಿದ್ದಾರೆಂದೂ ಆ ಮಂತ್ರವನ್ನು ತನಗೆ ಹೇಳಿಕೊಡಬೇಕೆಂದೂ ಈತ ದೇವರ ಮೇಲೆ ಕತ್ತಿ ಹಿರಿದ. ಆಗ ಈತನ ಧೈರ್ಯಕ್ಕೆ ಮೆಚ್ಚಿ ದೇವರು ಪ್ರತ್ಯಕ್ಷನಾಗಿ ಅಷ್ಟಾಕ್ಷರೀ ಮಂತ್ರವನ್ನುಪದೇಶಿಸಿ ಕಲಿಯನ್ ಎಂಬ ಬಿರುದಿತ್ತು ಅಂತರ್ಧಾನ ಹೊಂದಿದ. ಅಂದಿನಿಂದ ಇವರಿಗೆ ದೇವರ ಹುಚ್ಚಾಯಿತು. ನಾರಾಯಣನನ್ನು ಹಾಡಿ ಹೊಗಳುವುದರಲ್ಲೂ ಶ್ರೀರಂಗನಾಥನ ಬೃಹದ್ದೇವಾಲಯವನ್ನು ಕಟ್ಟುವುದರಲ್ಲೂ ಶ್ರೀ ವೈಷ್ಣವ ಧರ್ಮವನ್ನು ಹರಡುವುದರಲ್ಲೂ ನಿರತರಾಗಿ ಆಳ್ವಾರ್ ಎನಿಸಿಕೊಂಡರು. ನಮ್ಮಾಳ್ವಾರರ ಪ್ರಬಂಧಗಳನ್ನು ಶ್ರೀರಂಗನಾಥನ ಎದುರಿನಲ್ಲಿ[ಹಾಡುವ ಏರ್ಪಾಡನ್ನು ಇವರು ಮಾಡಿದರೆಂದು ‘ಗುರುಪರಂಪರೆ’ ತಿಳಿಸುತ್ತದೆ. ಇವರಿಂದ ಆರು ಪ್ರಬಂಧಗಳು ನಮಗೆ ಲಭಿಸಿವೆ. ಪೆರಿಯ ತಿರುಮೊಳಿ (1084 ಪದ್ಯಗಳು). ತಿರುಕ್ಕುರುದ್ದಾಂಡಹಂ (20), ತಿರುನೆಡುನ್ದಾಂಡಹಂ (30), ಶಿರಿಯ ತಿರುಮಡಲ್ (77), ಪೆರಿಯ ತಿರುಮಡಲ್ (148), ತಿರುವಳುಕ್ಕೊತ್ತಿರಕ್ಕೈ (2), ಒಟ್ಟು 1361 ಪದ್ಯಗಳು, ಆಶು, ಮಧುರಂ, ಚಿತ್ರಂ, ವಿಸ್ತಾರಂ ಎಂಬ 4 ಬಗೆಯಾದ ಪದ್ಯರಚನೆಗಳಲ್ಲೂ ಇವರು ಶ್ರೇಷ್ಠರೆಂದು ಪರಿಗಣಿತರಾಗಿ ನಾಲ್ ಕವಿಪ್ಪೆರುಮಾಳ್ ಎಂಬ ಬಿರುದನ್ನು ತಮ್ಮ ಕಾಲದ ವಿದ್ವದ್ರಸಿಕರಿಂದ ಪಡೆದರು. ಇವರ ಪ್ರಬಂಧಗಳಲ್ಲಿ ಎದ್ದು ತೋರುವುದು ಸ್ವಾಮಿಗೂ ಭೃತ್ಯನಿಗೂ ಇರುವ ಸಂಬಂಧ. ಭಗವತ್ಭಕ್ತಿಯಿಂದ ಕುಲವೂ ಸಂಪತ್ತೂ ಮನುಷ್ಯನಿಗೆ ಪ್ರಾಪ್ತವಾಗುತ್ತವೆ ಎಂದಿವರು ಸಾರಿದುದಲ್ಲದೆ, ತಮ್ಮೈಯೇನಾಳುಂ ವಣಂಗಿತ್ತೊಳುವಾರ್ಕುತ್ತಮ್ಮೈಯೇಯೊಕ್ಕವರುಳ್ ಶೈವರ್ (ಪೆ.ತಿ. 1029) ಎಂಬ ಮಾತಿನಲ್ಲಿ ಭಕ್ತನಿಗೆ ಕೊನೆಯಲ್ಲಿ ಭಗವತ್ ಸಾಧರ್ಮ್ಯವೂ ದೊರೆಯುತ್ತದೆಯೆಂಬುದನ್ನು ಉದ್ಘೋಷಿಸಿದ್ದಾರೆ. ಈ ಆಳ್ವಾರರು ದೇವರ ಮೇಲೆ ಕತ್ತಿ ಹಿರಿದ ಉತ್ಸವ ಶ್ರೀ ವೈಷ್ಣವ ದೇವಸ್ಥಾನಗಳಲ್ಲಿ ಬ್ರಹ್ಮೋತ್ಸವ ಸಮಯದಲ್ಲಿ ಈಗಲೂ ಜರುಗುತ್ತದೆ.