ವಿಷಯಕ್ಕೆ ಹೋಗು

ತಾರಾಬಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾರಾಬಾಯಿ
ಮರಾಠಾ ಸಾಮ್ರಾಜ್ಯ
ಮಹಾರಾಣಿ ಕೊಲ್ಹಾಪುರ ರಾಜಪ್ರತಿನಿಧಿ

ಮಹಾರಾಣಿ ತಾರಾಬಾಯಿ
ತಾರಾಬಾಯಿ, ಬಾಬುರಾವ್ ಪೇಂಟರ್ ಚಿತ್ರಿಸಿದ್ದಾರೆ c. 1928
ಮರಾಠಾ ಸಾಮ್ರಾಜ್ಯ
ಆಳ್ವಿಕೆ ಮಾರ್ಚ್ 1700 - 12 ಜನವರಿ 1708, 1710 - 2 ಆಗಸ್ಟ್ 1714
ರಾಜ ಶಿವಾಜಿ II
'ರಾಣಿ ಪತ್ನಿ' ಮರಾಠಾ ಸಾಮ್ರಾಜ್ಯ
ಆಳ್ವಿಕೆ 11 ಮಾರ್ಚ್ 1689 - 3 ಮಾರ್ಚ್ 1700
ಪೂರ್ವಾಧಿಕಾರಿ ಜಾನಕಿಬಾಯಿ
ಉತ್ತರಾಧಿಕಾರಿ ರಾಜಸಬಾಯಿ
ಗಂಡ/ಹೆಂಡತಿ ರಾಜಾರಾಂ (ಮದುವೆ c. 1683, ಮರಣ 1700)
ಸಂತಾನ
ಶಿವಾಜಿ II
ಮನೆತನ ಮೋಹಿತೆ (ಹುಟ್ಟಿನಿಂದ)
ಭೋಸಲೆ (ಮದುವೆಯ ಮೂಲಕ)
ತಂದೆ ಹಂಬಿರಾವ್ ಮೋಹಿತೆ
ಜನನ c. 1675
ಸತಾರಾ, ಮರಾಠಾ ಸಾಮ್ರಾಜ್ಯ (ಇಂದಿನ ಮಹಾರಾಷ್ಟ್ರ, ಭಾರತ)
ಮರಣ ೦೯ ಡಿಸೆಂಬರ್ ೧೭೬೧ (ವಯಸ್ಸು ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"{".)
ಸತಾರಾ, ಮರಾಠಾ ಸಾಮ್ರಾಜ್ಯ (ಇಂದಿನ ಮಹಾರಾಷ್ಟ್ರ, ಭಾರತ)
ಧರ್ಮ ಹಿಂದೂ ಧರ್ಮ

ತಾರಾಬಾಯಿ - ಶಿವಾಜಿಯ ಎರಡನೆಯ ಮಗನಾದ ರಾಜಾರಾಮನ ಹಿರಿಯ ಹೆಂಡತಿ.[] ಶಿವಾಜಿಯ ಹಿರಿಯ ಮಗ ಶಂಭೂಜಿಯನ್ನು ಮೊಗಲ್ ಚಕ್ರವರ್ತಿ ಔರಂಗ್ ಜೇಬ್ ಸೆರೆಹಿಡಿದು ಕೊಲ್ಲಿಸಿದನು. ಅವನ ಮಗ ಸಾಹುವನ್ನೂ ಸೆರೆ ಹಿಡಿದಾಗ (1689) ರಾಜಾರಾಮ ಮರಾಠರ ದೊರೆಯಾಗಿ ಮೊಗಲರ ಆಕ್ರಮಣವನ್ನು ಎದುರಿಸುತ್ತಿದ್ದನು. 1700ರಲ್ಲಿ ತಾರಾಬಾಯಿ ತೀರಿಕೊಂಡಳು. ಆಕೆಯ ಮಗ 3 ನೆಯ ಶಿವಾಜಿ ಉತ್ತರಾಧಿಕಾರಿಯಾಗಬೇಕೆ, ಅಥವಾ ರಾಜಾರಾಮನ ಇನ್ನೊಬ್ಬ ಪತ್ನಿ ರಾಜಸ್ ಬಾಯಿಯ ಮಗ 2 ನೆಯ ಶಂಭೂಜಿ ಆಗಬೇಕೆ ಎಂಬ ವಿಚಾರವಾಗಿ ವಿವಾದ ಉಂಟಾಯಿತು. ತಾರಾಬಾಯಿ ತನ್ನ ಮಗನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದಳು. ಅವನು ಪ್ರಾಪ್ತ ವಯಸ್ಕನಾಗಿಲ್ಲದುದರಿಂದ ತಾನೇ ರಾಜಪ್ರತಿನಿಧಿಯಾಗಿ ರಾಜ್ಯವನ್ನಾಳತೊಡಗಿದಳು.[] ತಾರಾಬಾಯಿ ಅಸಾಮಾನ್ಯ ಸ್ತ್ರೀ. ಲೋಕ ವ್ಯವಹಾರದಲ್ಲೂ ಸೈನ್ಯ ಕಾರ್ಯಾಚರಣೆಯಲ್ಲೂ ಸಮರ್ಥೆ. ಅವಳು ಮೊಗಲ್ ಸಾಮ್ರಾಜ್ಯದ ಪ್ರದೇಶಗಳನ್ನು ಕೊಳ್ಳೆಹೊಡೆದಳು. ದಕ್ಷಿಣದ ಆರು ಸುಭಾಗಗಳನ್ನು ಲೂಟಿ ಮಾಡಲು ಸೈನ್ಯ ಕಳುಹಿಸಿದಳು. ಅವಳನ್ನು ಅಡಗಿಸಲು ಚಕ್ರವರ್ತಿ ಔರಂಗ್‍ಜೇಬ್ ಮಾಡಿದ ಪ್ರಯತ್ನಗಳು ಫಲಿಸಲಿಲ್ಲ. ತಾರಾಬಾಯಿಯ ಆಳ್ವಿಕೆಯಲ್ಲಿ ಮರಾಠರು 1703ರಲ್ಲಿ ಬೀರಾರನ್ನೂ 1706ರಲ್ಲಿ ಗುಜರಾತ್ ಮತ್ತು ಬರೋಡವನ್ನೂ ವಶಪಡಿಸಿಕೊಂಡರು. ತಾರಾಬಾಯಿಯ ಕೀರ್ತಿಪ್ರತಿಷ್ಠೆಗಳು ಹೆಚ್ಚಿದವು.

ಕುಟುಂಬ ರಾಜಕೀಯ

[ಬದಲಾಯಿಸಿ]

1707ರಲ್ಲಿ ಔರಂಗ್‍ಜೇಬ್ ತೀರಿಕೊಂಡ. ಮೊಗಲರು ಮರಾಠರಲ್ಲಿ ಒಡಕು ಹುಟ್ಟಿಸುವುದಕ್ಕೆ ಪ್ರಯತ್ನಪಟ್ಟರು. ರಾಜಾರಾಮನ ಅಣ್ಣನಾದ ಶಂಭೂಜಿಯ ಮಗನೂ ರಾಜ್ಯದ ಉತ್ತರಾಧಿಕಾರಿಯೂ ಆಗಿದ್ದ ಸಾಹುವನ್ನು ಬಂಧನದಿಂದ ವಿಮೋಚನೆಗೊಳಿಸಿ ಮಹಾರಾಷ್ಟ್ರಕ್ಕೆ ಕಳುಹಿಸಿದರು. ರಾಜ್ಯವನ್ನು ತನಗೆ ಬಿಟ್ಟುಕೊಡಬೇಕೆಂದು ಅವನು ಕೇಳಿದ. ತಾರಾಬಾಯಿ ಅವನನ್ನು ಮೋಸಗಾರನೆಂದು ಘೋಷಿಸಿದಳಲ್ಲದೆ ರಾಜ್ಯವನ್ನಾಳಲು ಅವನಿಗೆ ಯಾವ ಹಕ್ಕೂ ಇಲ್ಲವೆಂದು ಹೇಳಿದಳು. ತಾನು ಆಳುತ್ತಿರುವ ರಾಜ್ಯ ತನ್ನ ಪತಿಯಾದ ರಾಜಾರಾಮನದೆಂದೂ ತನ್ನ ಮಗನೇ ನಿಜವಾದ ಹಕ್ಕುದಾರನೆಂದೂ ಪ್ರತಿಪಾದಿಸಿದಳು. ಸಾಹು ಮುನ್ನುಗ್ಗುವುದನ್ನು ತಡೆಯಲು ಭಾರಿ ಸೈನ್ಯವೊಂದನ್ನು ಕಳುಹಿಸಿಕೊಟ್ಟಳು.[] 1707ರ ನವೆಂಬರಿನಲ್ಲಿ ಖೆಡ್ ಎಂಬ ಸ್ಥಳದಲ್ಲಿ ನಡೆದ ಘೋರ ಯುದ್ಧದಲ್ಲಿ ತಾರಾಬಾಯಿಯ ಸೈನ್ಯಕ್ಕೆ ಸೋಲಾಯಿತು. ಅವಳು ತನ್ನ ಮಗನೊಡಗೂಡಿ ಕೊಲ್ಹಾಪುರಕ್ಕೆ ಹೋಗಬೇಕಾಯಿತು. ಸಾಹು ಸಾತಾರದಲ್ಲಿ ಸಿಂಹಾಸನವನ್ನೇರಿದ. ತನಗೆ ನೆರವು ನೀಡಿದ ಬಾಲಾಜಿ ವಿಶ್ವನಾಥನನ್ನು ಪೇಷ್ವೆ ಅಥವಾ ಪ್ರಧಾನಿಯಾಗಿ ಸಾಹು ನೇಮಿಸಿದ (1713). ಕ್ರಮೇಣ ಇವನೇ ಬಲಿಷ್ಠಾಗಿ ಛತ್ರಪತಿಯಾದ ಸಾಹುವನ್ನು ನಾಮಮಾತ್ರದ ದೊರೆಯನ್ನಾಗಿ ಮಾಡಿ ಕೂರಿಸಿದ. 1712ರಲ್ಲಿ ಬಾಲಾಜಿ ವಿಶ್ವನಾಥ ರಾಜಸ್ ಬಾಯಿಯನ್ನೂ ಅವಳ ಬೆಂಬಲಿಗರನ್ನೂ ತಾರಾಬಾಯಿಯ ವಿರುದ್ಧವಾಗಿ ಎತ್ತಿಕಟ್ಟಿ ಕೊಲ್ಹಾಪುರ ರಾಜ್ಯವನ್ನು ಅವಳ ಕೈಯಿಂದ ಕಸಿದುಕೊಳ್ಳಲು ಪ್ರೇರೇಪಿಸಿದ. ರಾಜಸ್ ಬಾಯಿಯ ಪಿತೂರಿಯ ಪರಿಣಾಮವಾಗಿ ತಾರಾಬಾಯಿ ಸೆರೆಮನೆ ಸೇರಬೇಕಾಯಿತು. ರಾಜಾರಾಮ ಮತ್ತು ರಾಜಸ್ ಬಾಯಿಯರ ಮಗನಾದ ಎರಡನೆ ಶಂಭೂಜಿ ಕೊಲ್ಹಾಪುರದ ಸಿಂಹಾಸನಕ್ಕೆ ಬಂದ.[]

ಬಾಲಾಜಿ ವಿಶ್ವನಾಥನಿಗೆ ಕೊಲ್ಹಾಪುರದ ಎರಡನೆಯ ಶಂಭೂಜಿ ಅನೇಕ ತೊಂದರೆಗಳನ್ನು ಕೊಟ್ಟು ಸಾಹುವಿನ ಶತ್ರುವಾಗಿಯೇ ಉಳಿದ. ಈತ 1730ರಲ್ಲಿ ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು. ಆದರೆ ತಾರಾಬಾಯಿ ಸಾತಾರದಲ್ಲಿ ಇರಲು ಅವನು ಅವಕಾಶ ಕೊಟ್ಟ. ಈ ವ್ಯವಸ್ಥೆ ತಾರಾಬಾಯಿಯ ಮುಂದಿನ ಪಿತೂರಿಗೆ ಪರೋಕ್ಷವಾಗಿ ಉತ್ತೇಜಕವಾಯಿತು. ಶಂಭೂಜಿ ಸಾಹುವಿನ ಜೊತೆಯಲ್ಲಿ ಶಾಂತಿಯಿಂದ ಇರಬೇಕೆಂಬ ಔಚಿತ್ಯವನ್ನು ಕಂಡು 1731ರಲ್ಲಿ ಒಂದು ಕರಾರನ್ನು ಮಾಡಿಕೊಂಡ. ಕೆಲವು ಪ್ರದೇಶಗಳನ್ನು ಬಿಟ್ಟು ಕೊಲ್ಹಾಪುರ ರಾಜ್ಯ ಹೆಚ್ಚಿನ ಬದಲಾವಣೆ ಇಲ್ಲದೆ ಮೊದಲಿನಂತೆ ಉಳಿಯಿತು.

ಆಡಳಿತ

[ಬದಲಾಯಿಸಿ]

1749ರಲ್ಲಿ ಮಕ್ಕಳಿಲ್ಲದೆ ತೀರಿಕೊಂಡ ಮೂರನೆಯ ಶಿವಾಜಿಗೆ ರಾಮರಾಜನೆಂಬ ಒಬ್ಬ ಮಗನಿದ್ದನೆಂದೂ ಅವನನ್ನು ತಾನೇ ಗೋಪ್ಯವಾಗಿ ಸಾಕಿದಳೆಂದೂ ಅವನಿಗೆ 23ವರ್ಷವೆಂದೂ ತಾರಾಬಾಯಿ ನೀಡಿದ ಹೇಳಿಕೆಯನ್ನು ಸಾಹು ಒಪ್ಪಿಕೊಂಡಂತೆ ಕಂಡಿದ್ದುದರಿಂದ 1750ರ ಜನವರಿ 4ರಲ್ಲಿ ರಾಮರಾಜನನ್ನು ಸಾಹುವಿನ ಉತ್ತರಾಧಿಕಾರಿಯಾಗಿ ಪಟ್ಟಕ್ಕೆ ತರಲಾಯಿತು. ರಾಮರಾಜ ದುರ್ಬಲನಾಗಿದ್ದುದರಿಂದ ರಾಜ್ಯಾಡಳಿತವನ್ನು ಪೇಷ್ವೆಯೇ ನೋಡಿಕೊಳ್ಳುತ್ತಿದ್ದ. ತಾರಾಬಾಯಿಯ ಆಸೆ- ಆಕಾಂಕ್ಷೆಗಳು, ಶಕ್ತಿ- ಸಾಮಥ್ರ್ಯಗಳು ಅವಳ ವಯಸ್ಸಿನೊಂದಿಗೇ ಬೆಳೆದುವು. ರಾಮರಾಜನನ್ನು ಸಿಂಹಾಸನಕ್ಕೆ ತರುವುದರಿಂದ ತಾನು ಅವನನ್ನು ತನ್ನ ಅಧೀನಕ್ಕೆ ಒಳಪಡಿಸಿಕೊಳ್ಳಬಹುದೆಂದೂ ಅವಳು ಯೋಚಿಸಿದ್ದಳು. ಆದರೆ ಪೇಷ್ವೆ ಬಾಲಾಜಿರಾಯ ತನ್ನ ಹಿಡಿತಕ್ಕೆ ಸಿಕ್ಕುವವನಲ್ಲವೆಂಬುದು ಅವಳಿಗೆ ಮನವರಿಕೆಯಾಯಿತು. ತಾರಾಬಾಯಿಯನ್ನು ಅವಳ ಮಿತ್ರರಿಂದ, ಸಹಾಯಕರಿಂದ ಬೇರ್ಪಡಿಸಿ, ಅವಳ ಯೋಜನೆಗಳನ್ನೆಲ್ಲ ಪೇಷ್ವೆ ಹಾಳುಮಾಡಿದ. ಪೇಷ್ವೆಯ ಆಡಳಿತವನ್ನು ರಾಮರಾಜ ಒಪ್ಪಿದುದರಿಂದ ತಾರಾಬಾಯಿಯ ಯೋಜನೆಗಳೆಲ್ಲ ಕನಸಾಗಿಯೇ ಉಳಿದುವು. ತಾರಾಬಾಯಿ ಕೋಪದಿಂದ ರಾಮರಾಜ 3ನೆಯ ಶಿವಾಜಿಯ ಮಗನಲ್ಲವೆಂದೂ ಅವನೊಬ್ಬ ವೇಷಗಾರನೆಂದೂ ಸಾರಿದಳು.

ತಾರಾಬಾಯಿ ಮರಣ

[ಬದಲಾಯಿಸಿ]

ಪೇಷ್ವೆ ಕರ್ನಾಟಕದ ಮೇಲೆ ದಂಡಯಾತ್ರೆ ಹೊರಟಿದ್ದಾಗ (1751) ಇದೇ ಸಮಯಕ್ಕಾಗಿ ಕಾಯುತ್ತಿದ್ದ ತಾರಾಬಾಯಿ ತನ್ನ ಸಹಾಯಕ್ಕೆ ಗುಜರಾತಿನಿಂದ ದಾಮಾಜಿ ಗಾಯಕವಾಡನನ್ನು ಕರೆಸಿದಳು. ತಾರಾಬಾಯಿ ದಾಮಾಜಿ ಗಾಯಕವಾಡನೊಂದಿಗೆ ಸೇರಿ ಪೇಷ್ವೆಯ ವಿರುದ್ಧ ಯುದ್ಧ ಹೂಡಿದಳಲ್ಲದೆ ಛತ್ರಪತಿಯನ್ನು ಸೆರೆಯಲ್ಲಿಟ್ಟಳು. ಪೇಷ್ವೆ ಅವಳನ್ನೂ ಗಾಯಕವಾಡನನ್ನೂ ಸೋಲಿಸಿದ. ಛತ್ರಪತಿ ವಸ್ತುತಃ ಬಂದಿಯಾಗಿಯೇ ಉಳಿದ. ಪೇಷ್ವೆಯೇ ಮರಾಠಾ ರಾಜ್ಯದ ನಿಜವಾದ ಅಧಿಪತಿಯಾದ. ಉಭಯ ಪಕ್ಷಗಳೂ ತಮ್ಮ ಶತ್ರುತ್ವವನ್ನು ಕೊನೆಗಾಣಿಸುವುದಕ್ಕೆ ಒಪ್ಪಿಕೊಂಡುವು. ರಾಮರಾಜ ತನ್ನ ಮೊಮ್ಮಗನಲ್ಲವೆಂದೂ ಅವನು ಒಬ್ಬ ಬೀದಿಯ ಹಾಡುಗಾರನೆಂದೂ ತಾರಾ ಬಾಯಿ ದೇವಸ್ಥಾನ ಒಂದರಲ್ಲಿ ಪ್ರಮಾಣ ಮಾಡಿದಳು. ರಾಜಮನೆತನದ ಘನತೆ ಗಾಂಭೀರ್ಯಗಳು ಮರೆಯಾದುವು. ತಾರಾ ಬಾಯಿ ಪೇಷ್ವೆಗೆ ಮಣಿಯಲೇ ಬೇಕಾಯಿತು. ಇಷ್ಟಾದರೂ ಒಳಗೂ ಹೊರಗೂ ಇದ್ದ ಶತ್ರುಗಳ ಜೊತೆಯಲ್ಲಿ ಪಿತೂರಿ ಮಾಡುವುದನ್ನು ಮಾತ್ರ ಅವಳು ಬಿಡಲಿಲ್ಲ. 1701ರ ಡಿಸೆಂಬರ್‌ನಲ್ಲಿ ಸಾತಾರದಲ್ಲಿ ತಾರಾಬಾಯಿ ಮರಣ ಹೊಂದಿದಳು. ತಾರಾ ಬಾಯಿ ತನ್ನ ಮಹತ್ತ್ವಾಕಾಂಕ್ಷೆ. ಅಧಿಕಾರಲಾಲಸೆ. ಯುದ್ಧೋತ್ಸಾಹ, ಉಪಾಯ, ಸ್ವದೇಶಾಭಿಮಾನ ಮತ್ತು ಆಶಾವಾದಗಳಿಂದ ಮರಾಠರನ್ನು ಧಾಳಿಯಿಂದ ರಕ್ಷಿಸಿದರೂ ಅವಳ ಪ್ರತೀಕಾರ ಮನೋಭಾವ, ಸ್ವಾರ್ಥ, ಕ್ರೌರ್ಯ, ಸರ್ವಾಧಿಕಾರ ಪ್ರವೃತ್ತಿ, ಯಾವುದಕ್ಕೂ ಹೇಸದ ಪ್ರವೃತ್ತಿ ಮತ್ತು ದುಷ್ಟಸ್ವಭಾವಗಳಿಂದಾಗಿ ಎರಡು ಬಾರಿ ಮಹಾರಾಷ್ಟ್ರ ಯುದ್ಧದಲ್ಲಿ ಮುಳುಗಿತು. ಪೇಷ್ವೆಗಳ ಪ್ರಾಬಲ್ಯಕ್ಕೂ ಭೋನ್ಸ್ಲೆಗಳ (ಛತ್ರಪತಿ) ದೌರ್ಬಲ್ಯಕ್ಕೂ ಕಾರಣವಾಯಿತು.

ಉಲ್ಲೇಖ

[ಬದಲಾಯಿಸಿ]
  1. Jadhav, Bhagyashree M (1998). "Ch. 5 – Her Contribution to Maratha History". Dr. Appasaheb Pawar a study of his life and career. Shivaji University. p. 224. hdl:10603/138357. Archived from the original on 23 October 2019. Retrieved 22 February 2019.
  2. Sen, Sailendra (2021). A Textbook of Medieval Indian History. Primus Books. p. 201. ISBN 978-9-38060-734-4.
  3. Sumit Sarkar (2000). Issues in Modern Indian History: For Sumit Sarkar. Popular Prakashan. p. 30. ISBN 978-81-7154-658-9.
  4. Kadam, Pratima S. "Chhatrapatis of Satara (From 1707–1818)."[>] (1984).


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: