ಡೇವಿಡ್ ವಾರ್ಕ್ ಗ್ರಿಫಿತ್

ಡೇವಿಡ್ ವಾರ್ಕ್ ಗ್ರಿಫಿತ್ (1875-1948) ಅಮೆರಿಕದ ಒಬ್ಬ ಚಲನಚಿತ್ರ ನಿರ್ಮಾಪಕ ಮತ್ತು ದಿಗ್ದರ್ಶಕ.
ಜೀವನ, ಸಾಧನೆಗಳು
[ಬದಲಾಯಿಸಿ]ಹುಟ್ಟಿದ್ದು ಕೆಂಟಕಿಯ ಓಲ್ಡ್‌ಹ್ಯಾಮಿನಲ್ಲಿ. ರೆಸ್ಕ್ಯೂಡ್ ಫ್ರಮ್ ಎನ್ ಈಗಲ್ಸ್ ನೆಸ್ಟ್ (1908) ಎಂಬ ಚಿತ್ರದಲ್ಲಿ ಚಿಕ್ಕ ಪಾತ್ರ ವಹಿಸುವುದರ ಮೂಲಕ ಚಿತ್ರರಂಗ ಪ್ರವೇಶಿಸಿದ.[೧] ಅನಂತರ ಬಯೋಗ್ರಾಫ್ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಚಿತ್ರಕಥಾ ಲೇಖಕ ಮತ್ತು ದಿಗ್ದರ್ಶಕನಾಗಿ ಸೇರಿದ. ಅಲ್ಲಿ ಈತ ತಯಾರಿಸಿದ ಪ್ರಥಮ ಚಿತ್ರ ದಿ ಅಡ್ವೆಂಚರ್ಸ್ ಆಫ್ ಡಾಲೀ. ಬಳಿಕ ಈತ ಚಿತ್ರರಂಗದಲ್ಲಿ ಅವಿಶ್ರಾಂತವಾಗಿ ದುಡಿಯಲಾರಂಭಿಸಿದ. ಲೆಕ್ಕವಿಲ್ಲದಷ್ಟು ಚಿಕ್ಕ ಚಿತ್ರಗಳನ್ನು ತಯಾರಿಸಿದ. ಅಮೆರಿಕಾದ ಚಲನಚಿತ್ರ ಉದ್ಯಮಕ್ಕೆ ಈತನಿಂದ ಒಳ್ಳೆಯ ಚಲನೆ ಸಿಕ್ಕಿತು. ಈತ ಬಳಸಿದ ವಿಧಾನ ಮತ್ತು ತಂತ್ರಗಳು ಚಲನಚಿತ್ರದ ಮೇಲೆ ಹೆಚ್ಚಿನ ಪ್ರಭಾವ ಬೀರಿದುವು.
1913ರಲ್ಲಿ ಗ್ರಿಫಿತ್ ಬೈಬಲಿನ ಕಥೆಯೊಂದನ್ನು ಆಧರಿಸಿ ಜೂಡಿತ್ ಆಫ಼್ ಬೆತೊಲಿಯ ಎಂಬ ಚಿತ್ರ ತಯಾರಿಸಿದ. ಅದೇ ವರ್ಷ ಬಯೋಗ್ರಾಫ್ ಸಂಸ್ಥೆಯನ್ನು ತ್ಯಜಿಸಿ ಸ್ವತಂತ್ರವಾಗಿ ಚಿತ್ರ ತಯಾರಿಸಲು ನಿರ್ಧರಿಸಿದ. ಥಾಮಸ್ ಡಿಕ್ಸನ್ ಎಂಬಾತ ಅಮೇರಿಕದ ಅಂತರ್‌ಯುದ್ಧವನ್ನಾಧರಿಸಿ ಬರೆದ ಕಾದಂಬರಿ ದ ಕ್ಲ್ಯಾನ್ಸ್‌ಮನ್ ಆಧರಿಸಿ ಚಿತ್ರವೊಂದನ್ನು ತಯಾರಿಸಲು ಉದ್ಯುಕ್ತನಾದ.[೨] ಇದು 1915ರಲ್ಲಿ ದ ಬರ್ತ್ ಆಫ್ ಎ ನೇಷನ್ ಎಂಬ ಹೆಸರಿನಿಂದ ನ್ಯೂಯಾರ್ಕಿನಲ್ಲಿ ಬಿಡುಗಡೆಯಾಯಿತು. ಮನೋರಂಜನೆಯೊಡನೆ ಉತ್ತಮ ಕಲೆಯನ್ನೂ ಚಲನಚಿತ್ರ ಒದಗಿಸಬಲ್ಲದೆಂಬುದನ್ನು ಈ ಚಿತ್ರ ತೋರಿಸಿಕೊಟ್ಟಿತ್ತು. ಜೊತೆಗೆ ಈ ಚಿತ್ರದಲ್ಲಿಯ ಜನಾಂಗಕ್ಕೆ ಸಂಬಂಧಿಸಿದ ವಿಷಯ ಹೆಚ್ಚು ಚರ್ಚೆಗೆ ಆಸ್ಪದ ನೀಡಿತು. ಈ ಚಿತ್ರದಿಂದ ಬಂದ ಅಪಾರ ಲಾಭ ಮತ್ತು ಯಶಸ್ಸಿನಿಂದ ಪ್ರೋತ್ಸಾಹಿತನಾದ ಗ್ರಿಫಿತ್ ಇನ್ನೂ ಹೆಚ್ಚಿನ ಅದ್ದೂರಿಯ ಇಂಟಾಲರೆನ್ಸ್ ಎಂಬ ಚಿತ್ರವನ್ನು ನಿರ್ಮಿಸಿದ (1916). 3 1/2 ಗಂಟೆ ಉದ್ದದ ಈ ಚಿತ್ರ ಇತಿಹಾಸದಲ್ಲಿನ ನಾಲ್ಕು ಅಸಹಿಷ್ಣುತೆಯ ದೃಶ್ಯಗಳನ್ನು ನಾಲ್ಕು ಘಟನೆಗಳಾಗಿ ರೂಪಿಸುತ್ತದೆ. ಬ್ಯಾಬಿಲಾನ್ ಪತನ, ಕ್ರಿಸ್ತನ ಜೀವನ, ಬಾರ್ತಲೋಮ್ಯೂದಲ್ಲಿ ನಡೆದ ಕಗ್ಗೊಲೆ, ಸಮಕಾಲೀನವೆನ್ನಬಹುದಾದ 'ತಾಯಿ ಮತ್ತು ನ್ಯಾಯ'-ಹೀಗೆ ಈ ಚಿತ್ರ ಅನೇಕ ವಿಮರ್ಶಕ ಮತ್ತು ಪ್ರೇಕ್ಷಕರ ಪ್ರಶಂಸೆಯನ್ನು ಗಳಿಸಿತು. ಆದರೆ ಇದರಿಂದ ಸಾಕಷ್ಟು ಹಣ ಬರಲಿಲ್ಲವಾಗಿ ಗ್ರಿಫಿತ್ ಸ್ವತಂತ್ರವಾಗಿ ಚಿತ್ರಗಳನ್ನು ತಯಾರಿಸುವ ಹಂಬಲವನ್ನು ಬಿಡಬೇಕಾಯಿತು.[೩][೪]
ಚಾರ್ಲಿ ಚಾಪ್ಲಿನ್, ಡಗ್ಲಾಸ್ ಫೇರ್‌ಬ್ಯಾಂಕ್ಸ್ ಮತ್ತು ಮೇರಿ ಪಿಕ್‌ಫರ್ಡ್ ಇವರೊಂದಿಗೆ ಸೇರಿ ಗ್ರಿಫಿತ್ 1919ರಲ್ಲಿ ಯುನೈಟೆಡ್ ಆರ್ಟಿಸ್ಟ್ಸ್ ಕಾರ್ಪೊರೇಷನ್ ಸಂಸ್ಥೆಯನ್ನು ಕೂಡಿಸಿದ.[೫] ಗ್ರಿಫಿತನ ಇತರ ಪ್ರಸಿದ್ಧ ಚಿತ್ರಗಳಿವು: ಬ್ರೋಕನ್ ಬ್ಲಾಸಮ್ಸ್ (1919), ವೇ ಡೌನ್ ಈಸ್ಟ್ (1920), ಆರ್ಫನ್ಸ್ ಆಪ್ ದ ಸ್ಟಾರ್ಮ್ (1922). ಈತನ ಎರಡು ವಾಕ್‌ಚಿತ್ರಗಳೂ ಅಷ್ಟು ಪ್ರಸಿದ್ಧವಾಗಲಿಲ್ಲ. ಈತನ ಕೊನೆಯ ಚಿತ್ರ ದ ಸ್ಟ್ರಗಲ್ ಎಂಬುದಂತೂ ಬಿಡುಗಡೆಯಾಗಲೇ ಇಲ್ಲ. ಚಿತ್ರ ದಿಗ್ದರ್ಶನದಿಂದ ಈತ ನಿವೃತ್ತನಾದದ್ದು 1932ರಲ್ಲಿ.
ಗ್ರಿಫಿತ್ ಮೇಧಾವಿ ದಿಗ್ದರ್ಶಕ. ಚಿತ್ರಸಂಪಾದನೆ ಹಾಗೂ ಛಾಯಾಗ್ರಹಣ ಕ್ಷೇತ್ರಕ್ಕೆ ಈತನ ಕೊಡುಗೆ ಮಹತ್ತರವಾದದ್ದು. ಚಿತ್ರಗ್ರಹಣಕ್ಕೆ ಸಂಬಂಧಿಸಿದಂತೆ ಲಾಂಗ್ ಷಾಟ್, ಕ್ಲೋಸ್ ಅಪ್, ಪ್ಯಾನ್ ಷಾಟ್, ಹೈ ಮತ್ತು ಲೋ ಆಂಗಲ್ ಷಾಟುಗಳು, ಮೂವಿಂಗ್ ಷಾಟ್, ಡಿಸಾಲ್ವ್, ಸಾಫ್ಟ್ ಫೋಕಸ್, ಕ್ರಾಸ್ ಕಟಿಂಗ್,[೬] ಫ್ಲ್ಯಾಷ್‍ಬ್ಯಾಕ್, ಬ್ಯಾಕ್ ಲೈಟಿಂಗ್ ಮತ್ತು ನೈಟ್ ಫೊಟಾಗ್ರಫಿ-ಮೊದಲಾದ ಬಾಬುಗಳನ್ನು ಈತ ಪರಿಷ್ಕರಿಸಿದ ಇಲ್ಲವೆ ಮೊಟ್ಟಮೊದಲಿಗೆ ಬಳಕೆಗೆ ತಂದ.
ಚತುರ ಸಂಪಾದನೆಯಲ್ಲಿ ಹಾಗೂ ಚಲನಚಿತ್ರದ ಭಾವತೀವ್ರತೆ, ದೃಶ್ಯರಚನೆ, ಜನಜಂಗುಳಿಯನ್ನು ತೆರೆಯ ಮೇಲೆ ತರುವ ವರಸೆ-ಇವುಗಳ ನಿರ್ವಹಣೆಯಲ್ಲಿ ಈತ ನಿಷ್ಣಾತನೆನಿಸಿದ್ದ.
ಉಲ್ಲೇಖಗಳು
[ಬದಲಾಯಿಸಿ]- ↑ "D.W. Griffith". Spartacus-Educational.com. Archived from the original on June 5, 2011. Retrieved February 27, 2019.
- ↑ Maxwell Bloomfield, "Dixon's The Leopard's Spots: A Study in Popular Racism." American Quarterly 16.3 (1964): 387-401. online
- ↑ "Griffith's 20 Year Record". Cinemaweb.com. ಸೆಪ್ಟೆಂಬರ್ 5, 1928. Archived from the original on July 12, 2011. Retrieved June 5, 2011.
- ↑ "Intolerance Movie Review". Contactmusic.com. May 29, 2011. Archived from the original on June 6, 2011. Retrieved June 5, 2011.
- ↑ Woo, Elaine (September 29, 2011). "Mo Rothman dies at 92; found new audience for Chaplin". Los Angeles Times. Archived from the original on December 29, 2013. Retrieved October 1, 2011.
- ↑ "Lonedale Operator: Part 2". Tcf.ua.edu. Archived from the original on 29 ಆಗಸ್ಟ್ 2017. Retrieved 28 August 2017.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Bibliography of books and articles about Griffith Archived 2012-12-12 at Archive.is via University of California, Berkeley Media Resources Center
- ಡೇವಿಡ್ ವಾರ್ಕ್ ಗ್ರಿಫಿತ್ ಐ ಎಮ್ ಡಿ ಬಿನಲ್ಲಿ
- Photo of Griffith as a young man in the 1890s or early 1900s
