ಕೃಷ್ಣ ಕೊಲ್ಹಾರ ಕುಲಕರ್ಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಇಂದ ಪುನರ್ನಿರ್ದೇಶಿತ)

ಕೃಷ್ಣ ಕೊಲ್ಹಾರ ಕುಲಕರ್ಣಿರವರು ಸಂಶೋಧಕ, ಇತಿಹಾಸಜ್ಞ, ಸೃಜನಾತ್ಮಕ ಬರಹಗಾರ ಹಾಗೂ ಸಾಮಾಜಿಕ ಕಾರ್ಯಕರ್ತರು.

ಜನನ[ಬದಲಾಯಿಸಿ]

ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಕೊಲ್ಹಾರದಲ್ಲಿ ಅಕ್ಟೋಬರ್ ೧೬ರ ೧೯೪೦ರಲ್ಲಿ. ತಂದೆ ಹನುಮಂತರಾಯರು, ತಾಯಿ ಗಂಗಾಬಾಯಿ.

ಶಿಕ್ಷಣ[ಬದಲಾಯಿಸಿ]

  • ಕೊಲ್ಹಾರ, ವಿಜಾಪುರಗಳಲ್ಲಿ ಎಸ್‌.ಎಸ್‌.ಎಲ್‌.ಸಿ ಯ ನಂತರ, ತಂದೆಯ ಸಾವಿನಿಂದ ವಿದ್ಯೆಗೆ ವಿದಾಯ ಹೇಳಿ ಸೇರಿದ್ದು, ಅಂಚೆ ಮತ್ತು ತಂತಿ ಇಲಾಖೆ. ಮುಂಬಯಿ, ರಾಯಚೂರು, ಬೆಳಗಾವಿ, ಮೈಸೂರು, ವಿಜಾಪುರ, ಹಾಸನ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿ ೧೯೯೨ ರಲ್ಲಿ ಸ್ವ-ಇಚ್ಛೆಯಿಂದ ನಿವೃತ್ತಿ .ಪಡೆದರು
  • ಮೈಸೂರಿನಲ್ಲಿದ್ದಾಗ ಮುಕ್ತವಿಶ್ವವಿದ್ಯಾಲಯದಿಂದ ಆಕರ್ಷಿತರಾಗಿ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಸ್ಕೃತಿಯ ಚರಿತ್ರೆಯಲ್ಲಿ ಪಡೆದ ಎಂ.ಎ. ಪದವಿ. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾ.ಕೃಷ್ಣಮೂರ್ತಿ ಕಿತ್ತೂರರ ಮಾರ್ಗದರ್ಶನದಲ್ಲಿ ‘ಕಾಖಂಡಕಿ ಶ್ರೀಮಹಿಪತಿದಾಸರು’ ಪ್ರೌಢ ಪ್ರಬಂಧ ಮಂಡಿಸಿ ಪಡೆದ ಪಿಎಚ್‌.ಡಿ. ಪದವಿ.
  • ಹೊಸದಿಲ್ಲಿಯ ಭಾರತೀಯ ಇತಿಹಾಸ ಅನುಸಂಧಾನದ ಹಿರಿಯ ಶಿಷ್ಯವೇತನದಲ್ಲಿ ಅದಿಲ್‌ಶಾಹಿ ಕಾಲದ ಹಿಂದು-ಮುಸ್ಲಿಂ ಸಂಬಂಧ ಕುರಿತು ಮಾಡಿದ ಸಂಶೋಧನೆ, ಪ್ರಬಂಧ ರಚನೆ.
  • ೧೯೯೫-೯೭ ರ ನಡುವೆ ಬಿಜಾಪುರದ ವಿದ್ಯಾವರ್ಧಕ ಸಂಘದ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಕಾಲ ಸೇವೆ.

ಸಾಹಿತ್ಯ[ಬದಲಾಯಿಸಿ]

  • ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಳವಾದ ಅಭ್ಯಾಸ, ದಾಸಸಾಹಿತ್ಯದಲ್ಲಿ ಶ್ರೀ ಪುರಂದರದಾಸರ ನಂತರ ವಿಜಯದಾಸರ ಕಾಲ ಪ್ರಾರಂಭವಾಗುವ ತನಕ (ಸುಮಾರು ೧೫೦ ವರ್ಷಗಳು) ಅಜ್ಞಾತ ಕಾಲವೆಂದು ಪರಿಗಣಿತವಾಗಿದ್ದ ಕಾಲದಲ್ಲೂ ದಾಸಪಂಥದ ಚಟುವಟಿಕೆಗಳು ನಡೆಯುತ್ತಿದ್ದುದೆಂದು ಪ್ರತಿಪಾದಿಸಿದ್ದು-
  • ಇತಿಹಾಸಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಅದಿಲ್‌ಶಾಹಿಗಳ ಇತಿಹಾಸದ ಆಳವಾದ ಅಭ್ಯಾಸ- ಅದಿಲ್ ಶಾಹಿ ಇತಿಹಾಸಕ್ಕೆ ಸಂಬಂಧಿಸಿದಂತೆ ‘ಕಿತಾಬ್‌ನೌರಸ್‌’, ‘ವಿಸ್ಮಯ ಇದು ಬಿಜಾಪುರ’ ‘ಅದಿಲ್‌ಶಾಹಿ ಆಸ್ಥಾನ ಸಾಹಿತ್ಯ’, ‘ಬುಸಾತಿನೆ-ಸಲಾತಿನ’, ಬಿಜಾಪುರದ ಅದಿಲ್‌ಶಾಹಿ ಮುಂತಾದ ಪುಸ್ತಕಗಳ ಪ್ರಕಟಣೆ.
  • ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳ, ಕಾರ್ಯಾಗಾರಗಳ ಸಂಘಟಣೆ, ಕರ್ನಾಟಕ ಸರಕಾರದ ಗೆಜೆಟಿಯರ್ ಇಲಾಖೆಗಾಗಿ ಬಿಜಾಪುರ ಜಿಲ್ಲಾ ಗೆಜೆಟಿಯರ್ ಸಂಪಾದನೆಗೆ ವಿಶೇಷ ಸಲಹಾ ಸಮಿತಿ ಸದಸ್ಯರಾಗಿ-
  • ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಯೋಜನೆಯ ಸಂಪಾದಕ ಸಮಿತಿ ಸದಸ್ಯರಾಗಿದ್ದು, ೪ ಸಂಪುಟಗಳ ಸಂಪಾದಕರಾಗಿ-
  • ವಚನ ಪಿತಾಮಹ ಡಾ .ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಅಧ್ಯಯನ ಸಮಿತಿ ಸದಸ್ಯರಾಗಿ ಮತ್ತು ಪಿಎಚ್‌.ಡಿ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ-
  • ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ, ಕನ್ನಡ ಅನುಷ್ಠಾನ ಸಮಿತಿ ಸದಸ್ಯರಾಗಿ ಚಾರಿತ್ರಿಕ ಅವಶೇಷಗಳ ರಕ್ಷಣೆಗಾಗಿ ಭಾರತೀಯ ಕಲೆ ಮತ್ತು ಪರಂಪರೆಯ ರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯರಾಗಿ-ಹೀಗೆ ಹಲವು ಹತ್ತು ಸಾಹಿತ್ಯಕ ಮತ್ತು ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗಿ.
  • ಕನ್ನಡ, ಹಿಂದಿ, ಮರಾಠಿ, ದಖನಿ , ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಪಡೆದ ಪರಿಣತಿ. ಈ ಭಾಷೆಗಳಿಂದ ಕನ್ನಡಕ್ಕೆ ಹಲವಾರು ಗ್ರಂಥಗಳ ಅನುವಾದ. ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಮರಾಠಿಯಿಂದ ‘ತುಕರಾಮ’, ಹಂಪಿ ವಿಶ್ವವಿದ್ಯಾಲಯಕ್ಕಾಗಿ ‘ಬುಸಾತಿನೆ-ಸಲಾತಿನ’ ಅನುವಾದಗಳ ಜೊತೆಗೆ ಭಾರತೀಯ ವಿದ್ಯಾಭವನಕ್ಕಾಗಿ ‘ ಮಹಾತ್ಮಗಾಂಧಿ’ ಕೆಲವು ಸಂಪುಟಗಳ ಅನುವಾದಗಳು.
  • ಸೃಜನಾತ್ಮಕ ಬರಹಗಾರರಾಗಿ ಸಂಯುಕ್ತ ಕರ್ನಾಟಕ ಮತ್ತು ಉಷಾಕಿರಣ ಪತ್ರಿಕೆಗಳಿಗೆ ಅಂಕಣಕಾರರಾಗಿದಷ್ಟೇ ಅಲ್ಲದೆ ನಾಡಿನ ಪ್ರಮುಖ ಪತ್ರಿಕೆಗಳಿಗೆ ಬರೆದ ನೂರಾರು ಲೇಖನಗಳು. ಹಲವಾರು ಜನ ಹಿತ ಕಾರ್ಯಕ್ರಮಕಗಳಲ್ಲೂ ಭಾಗಿ.
  • ಕೃಷ್ಣ ಮೇಲ್ದಂಡೆ ಯೋಜನೆ, ಆಲಮಟ್ಟಿ ಅಣೆಕಟ್ಟೆ-ಪುನರ್ವಸತಿ ಯೋಜನೆಗಳ ಕುರಿತು ಸರಕಾರದ, ಸರಕಾರೇತರ ಸಂಸ್ಥೆಗಳ ಸಭೆ ಸಮಾರಂಭಗಳಲ್ಲಿ ವಹಿಸಿದ ಪ್ರಮುಖ ಪಾತ್ರ. ಮಹಾರಾಷ್ಟ್ರದಲ್ಲಿ ಭೀಮಾನದಿಗೆ ಕಟ್ಟಿದ ಅಣೆಕಟ್ಟೆಯಿಂದ ಕರ್ನಾಟಕಕ್ಕೆ ನೀರಿಗಾಗಿ ಆದ ತೊಂದರೆ ನೀಗಲು ಸುಪ್ರೀಂಕೋರ್ಟಿನಿಂದ ಆದೇಶ ಹೊರಡಿಸುವುದರಲ್ಲಿ ವಹಿಸಿದ ಸಕ್ರಿಯ ಪಾತ್ರ. ಇವುಗಳ ಜೊತೆಗೆ ಕರ್ನಾಟಕ ನೀರು-ನೀರಾವರಿ-ಪುನರ್ವಸತಿಗಳ ಬಗ್ಗೆ ಬೆಳಕು ಚೆಲ್ಲಲು ಪತ್ರಿಕೆಗಳಿಗೆ ಬರೆದ ನೂರಾರು ಲೇಖನಗಳು, ಪ್ರಕಟಿಸಿದ ಹಲವಾರು ಪುಸ್ತಕಗಳು.
  • ಕನ್ನಡದ ಉಳಿವಿಗಾಗಿ ಮುಂಬಯಿಯಲ್ಲಿ ಕನ್ನಡ ಗೆಳೆಯರ ಬಳಗ ಮತ್ತು ವಾಚನಾಲಯ, ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ , ರಾಯಚೂರಿನಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಆಯೋಜಿಸಿದ ಹಲವಾರು ಕಾರ್ಯಕ್ರಮಗಳು. ಕರ್ನಾಟಕ ರಾಜ್ಯ ಅಂಚೆ ಮತ್ತು ತಂತಿ ಇಲಾಖೆಯ ಬರಹಗಾರರ , ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ, ‘ಪ್ರತಿಭಾ’ ಮಾಸ ಪತ್ರಿಕೆಯ ಸಂಪಾದಕರಾಗಿ , ರಾಜ್ಯಮಟ್ಟದ ಸಮ್ಮೇಳನ, ಸಂಘಟನೆಗಳ ಕಾರ್ಯಕ್ರಮಗಳು. [೧]

ಸಂಶೋಧನೆ[ಬದಲಾಯಿಸಿ]

  • ಜಾನಪದ ಕಲಾವಿದರನ್ನು ಗುರುತಿಸಲು ಸಂಘಟಿಸಿದ ಹಲವಾರು ಕಾರ್ಯಕ್ರಮಗಳು, ಧ್ವನಿಸುರುಳಿ ಬಿಡುಗಡೆ, ಆಕಾಶವಾಣಿ ದೂರದರ್ಶನಗಳಿಗಾಗಿ ರೂಪಕಗಳ ರಚನೆ-ಪ್ರಸಾರ ರಚಿಸಿರುವ ಗ್ರಂಥಗಳು ಹಲವಾರು.
  • ಸೋನಾರ್ ಬಾಂಗ್ಲಾ, ದ್ವಿತೀಯ ಮಹಾಯುದ್ಧ, ಕಿತಾಬೆ ನೌರಸ, ಆದಿಲ್‌ಶಾಹಿ ಆಸ್ಥಾನ ಸಾಹಿತ್ಯ , ಬಿಜಾಪುರದ ಅದಿಲ್‌ಶಾಹಿ ಮುಂತಾದ ಇತಿಹಾಸ ಸಂಬಂಧಿ ಗ್ರಂಥಗಳು;
  • ವಿಜಯದಾಸರು, ಮಹಿಪತಿದಾಸ, ಮಹಿಪತಿದಾಸರ ಸಾಹಿತ್ಯದಲ್ಲಿ ಯೋಗದರ್ಶನ, ಮಾಧ್ವಮಠಗಳು, ಮಹಿಪತಿದಾಸರ ಕೀರ್ತನೆಗಳು, ಹರಿದಾಸರು ಕಂಡ ಉತ್ತರಾಧಿಮಠ, ಹರಿದಾಸರು ಕಂಡ ಜಯತೀರ್ಥರು ಮುಂತಾದ ಹರಿದಾಸ ಸಾಹಿತ್ಯ ಕೃತಿಗಳು;
  • ಮನೆಮುಳುಗಿತು, ರತ್ನಾಕರ ಮೊದಲಾದ ಕಾದಂಬರಿಗಳು;
  • ಶ್ರೀ ಸತ್ಯಧ್ಯಾನ ದರ್ಶನ, ತಿಂಮಾಯಣ, ವಿಜಯ ಪ್ರಮೋದ, ನಾ.ಶ್ರೀ. ರಾಜಪುರೋಹಿತರ ಸಂಶೋಧನ ಲೇಖನಗಳು ಮೊದಲಾದ ಸಂಪಾದಿತ ಕೃತಿಗಳಲ್ಲದೆ ನಾಟಕ, ಕಥಾಸಂಕಲನಗಳು ಸೇರಿ ಒಟ್ಟು ೫೦ ಕ್ಕೂ ಹೆಚ್ಚು ಕೃತಿ ಪ್ರಕಟಿತ.[೨]

ಪ್ರಶಸ್ತಿ[ಬದಲಾಯಿಸಿ]

  • ಸಂಶೋಧನ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಗಳಗನಾಥ-ರಾಜ ಪುರೋಹಿತ ಪ್ರತಿಷ್ಠಾನದಿಂದ ರಾಜಪುರೋಹಿತ ಪ್ರಶಸ್ತಿ.
  • ಅನುವಾದ ಸಾಹಿತ್ಯ ಅಕಾಡಮಿಯಿಂದ ಜೀವಮಾನದ ಸಾಧನೆಗಾಗಿ ಅನುವಾದ ಸಾಹಿತ್ಯ ಅಕಾಡಮಿ ಪ್ರಶಸ್ತಿ.
  • ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆಯ ಗೌರವ , ಸನ್ಮಾನಗಳು ದೊರೆತಿವೆ.
  • ಡಾ.ಸುಮಿತ್ರಾ ದಶರಥ ಸಾವಂತರ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರ ಬದುಕು-ಬರೆಹ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್‌.ಡಿ. ಪದವಿ ಪ್ರದಾನ ಮಾಡಿದೆ.
  • ದಾಸ ಸಾಹಿತ್ಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಹಾಗೂ ಅನನ್ಯ ಕೊಡುಗೆ ಸಲ್ಲಿಸಿದ ಕೃಷ್ಣ ಕೊಲ್ಹಾರ ಕುಲಕರ್ಣಿರವರಿಗೆ ರಾಜ್ಯ ಸರ್ಕಾರವು ಕನಕಶ್ರೀ ಪ್ರಶಸ್ತಿಯನ್ನು ನೀಡಿದೆ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2020-11-25. Retrieved 2018-07-27.
  2. http://kanaja.in/?tribe_events=%E0%B2%A1%E0%B2%BE-%E0%B2%95%E0%B3%83%E0%B2%B7%E0%B3%8D%E0%B2%A3-%E0%B2%95%E0%B3%8A%E0%B2%B2%E0%B3%8D%E0%B2%B9%E0%B2%BE%E0%B2%B0-%E0%B2%95%E0%B3%81%E0%B2%B2%E0%B2%95%E0%B2%B0%E0%B3%8D%E0%B2%A3[ಶಾಶ್ವತವಾಗಿ ಮಡಿದ ಕೊಂಡಿ]