ವಿಷಯಕ್ಕೆ ಹೋಗು

ಡಗ್ಲಾಸ್ ವಿಲಿಯಮ್ ಜೆರಲ್ಡ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಗ್ಲಾಸ್ ವಿಲಿಯಮ್ ಜೆರಲ್ಡ್‌ (1803-1857). ಖ್ಯಾತ ಇಂಗ್ಲಿಷ್ ನಾಟಕಕಾರ ಮತ್ತು ಹಾಸ್ಯ ಬರೆಹಗಾರ.

ಬದುಕು,ಬರಹ

[ಬದಲಾಯಿಸಿ]

1803ರಲ್ಲಿ ಲಂಡನ್‍ನಲ್ಲಿ ಹುಟ್ಟಿದ. ತಂದೆ, ಸ್ಯಾಮ್ಯುಯಲ್ ಜೆರಲ್ಡ್, ನಾಟಕ ಕಂಪನಿಯೊಂದರ ಮ್ಯಾನೇಜರ್ ಆಗಿದ್ದ. ಸ್ವತಃ ನಟನೂ ಹೌದು. ಚಿಕ್ಕಂದಿನಲ್ಲಿ ವಿಲಿಯಮ್‍ನ ಒಲವೆಲ್ಲ ಪುಸ್ತಕಗಳನ್ನು ಓದುವುದರ ಕಡೆಗೇ ಇದ್ದರೂ ತಂದೆಯ ಒತ್ತಾಯಕ್ಕೆ ಸಿಕ್ಕು ನಾಟಕಗಳಲ್ಲಿ ಬಾಲಪಾತ್ರಗಳನ್ನು ವಹಿಸಬೇಕಾಗುತ್ತಿತ್ತು. ಶ್ರದ್ಧೆ, ಶ್ರಮಗಳಿಂದ ಲ್ಯಾಟಿನ್ ಮತ್ತು ಇಟಾಲಿಯನ್ ಭಾಷೆಗಳನ್ನು ಕಲಿತು ಅವುಗಳಲ್ಲಿ ಸಾಕಷ್ಟು ಪ್ರಭುತ್ವವನ್ನೂ ಸಂಪಾದಿಸಿದ. ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಅಧ್ಯಯನ ಮಾಡಿದ. ಈತನ ವಿಶೇಷವಾದ ಆಸಕ್ತಿ ಇದ್ದುದು ನಾಟಕದಲ್ಲಿ. ಮುಂದೆ ಈತನ ಪ್ರತಿಭೆ ಅರಳಿದುದೂ ನಾಟಕ ಮಾಧ್ಯಮದಲ್ಲಿಯೆ. ನಾಟಕ ವಿಮರ್ಶೆಯಲ್ಲಂತೂ ಈತನೊಬ್ಬ ತಜ್ಞನೆಂದೆನಿಸಿಕೊಂಡ.

ಶಿಕ್ಷಣ ಮುಗಿದ ಮೇಲೆ ನೌಕಾಸೇನೆಗೆ ಸೇರಿ 1813ರಿಂದ 1815ರವರೆಗೆ ನೆಪೋಲಿಯನನ ವಿರುದ್ಧ ನಡೆದ ಯುದ್ಧಗಳಲ್ಲಿ ಭಾಗವಹಿಸಿದ. ಆಗ ಪಡೆದ ಅನುಭವಗಳೆಲ್ಲ ಮುಂದೆ ಈತ ಬರೆದ ನಾಟಕಗಳಿಗೆ ಸಮೃದ್ಧವಾದ ಸಾಮಗ್ರಿಯಾದವು. 1816ರಲ್ಲಿ ನೌಕಾಸೇನೆಯ ಕೆಲಸವನ್ನು ತೊರೆದು, ತುಂಬ ಕಷ್ಟಸ್ಥಿತಿಯಲ್ಲಿದ್ದ ತನ್ನ ವೃದ್ಧ ತಾಯಿ ತಂದೆಯರನ್ನೂ ಸೋದರಿಯನ್ನೂ ನೋಡಿಕೊಳ್ಳುವ ಹೊಣೆ ಹೊತ್ತು ಲಂಡನ್ನಿನ ಮುದ್ರಣಾಲಯವೊಂದರಲ್ಲಿ ಉದ್ಯೋಗ ಸಂಪಾದಿಸಿದ. ಸಾಹಿತ್ಯಾಧ್ಯಯನ, ಭಾಷಾಭ್ಯಾಸ, ನಾಟಕವಿಮರ್ಶೆ ಮುಂತಾದ ಹವ್ಯಾಸಗಳ ಬೆಳೆವಣಿಗೆಗೂ ಆಗ ಅವಕಾಶ ಸಿಕ್ಕಿತು. ನಾಟಕಗಳಲ್ಲಿದ್ದ ಆಸಕ್ತಿ ನಾಟಕರಚನೆಗೆ ತಿರುಗಿತು. 1824ರಲ್ಲಿ ವೆದರ್‍ಬಿಯ ತಾಮಸ್ ಸ್ವಾನ್ ಅವರ ಮಗಳು ಮೇರಿಯೊಂದಿಗೆ ಮದುವೆಯಾಯಿತು.

ಕೋಬರ್ಗ್ ರಂಗಭೂಮಿಯ ನಾಟಕಮಂಡಳಿಯಲ್ಲಿ ನಾಟಕಕಾರನಾಗಿ ಕೆಲಸ ಮಾಡಿದನಾದರೂ ಕತ್ತೆದುಡಿತದಿಂದಾಗಿ ಬೇಸರ ಹುಟ್ಟಿತು.

ಜಾನ್ ಗೇ ರಚಿಸಿದ್ದ ಕಥನಗೀತೆಯ ಆಧಾರದ ಮೇಲೆ ಈತ ಬರೆದ ಬ್ಲ್ಯಾಕ್ ಐಯ್ಡ್ ಸೊಸಾನ್ ಅಥವಾ ಆಲ್ ಇನ್ ದಿ ಡೌನ್ಸ್ ಎಂಬ ನಾಟಕ 1829ರಲ್ಲಿ ಸರ್ರೆ ನಾಟಕಮಂದಿರದಲ್ಲಿ ಪ್ರದರ್ಶಿತವಾಗಿ ಪ್ರಥಮ ಪ್ರಯೋಗದಲ್ಲೆ ಅತ್ಯಂತ ಯಶಸ್ವಿಯಾಯಿತು. ಬೆಳಗಾಗುವುದರಲ್ಲಿ ನಾಟಕಕರ್ತೃ ಪ್ರಖ್ಯಾತನಾಗಿದ್ದ, 300 ದಿನ ಸತತವಾಗಿ ನಡೆದ ಈ ನಾಟಕ ನಿರ್ಮಾಪಕರಿಗೆ ಹಣದ ಮಳೆ ಸುರಿಸಿತಾದರೂ ನಾಟಕಕರ್ತೃವಿಗೆ ಸಂದುದು ಕೇವಲ 60 ಪೌಂಡು ಸಂಭಾವನೆ ಮಾತ್ರ.

ದಿ ರೆಂಟ್ ಡೇ, ನೆಲ್ ಗ್ವಿನ್, ದಿ ಹೌಸ್‍ಕೀಪರ್, ಪ್ರಿಜನರ್ ಆಫ್ ವಾರ್, ಬಬಲ್ಸ್ ಆಫ್ ಎ ಡೇ; ಟೈಮ್ ವರ್ಕ್ಸ್ ವಂಡರ್ಸ್-ಹೀಗೆ ನಾಟಕದ ಮೇಲೆ ನಾಟಕ ರಚಿತವಾಗಿ ರಂಗದ ಮೇಲೆ ವಿರಾಜಿಸಿದುವು. ಇವುಗಳಲ್ಲಿ ಕೊನೆಯ ವೈನೋದಿಕ ತುಂಬ ಜನಪ್ರಿಯವಾಗಿ 90 ದಿನ ಸತತವಾಗಿ ನಡೆಯಿತು. ಆಗ ಇಂಗ್ಲೆಂಡಿನಲ್ಲಿ ಪ್ರಚಲಿತವಿದ್ದ ಫ್ರೆಂಚ್ ಅಥವಾ ಜರ್ಮನ್ ಗಾತಿಕ್ ಶೈಲಿಯ ಆವೇಶಭರಿತ ಮೆಲೊಡ್ರಾಮಗಳನ್ನೇ ಅನುಸರಿಸಿ ದಿ ಮ್ಯೂಟಿನಿ ಎಟ್ ದಿ ನೋರ್, ದಿ ರೆಂಟ್ ಡೇ ಮುಂತಾದ ನಾಟಕಗಳನ್ನೂ ಬರೆದ. ಆದರೆ ಈತ ಅತ್ಯಂತ ಯಶಸ್ವಿಯಾದ ಬ್ಲ್ಯಾಕ್ ಐಯ್ಡ್ ಸೊಸಾನ್ ಎಂಬ ನಾಟಕ ಗಾತಿಕ್ ಶೈಲಿಯನ್ನು ತ್ಯಜಿಸಿ ದೇಶೀ ಶೈಲಿಯ ಸೊಗಸನ್ನು ಎತ್ತಿ ಮೆರೆಸಿತು.

ಉನ್ನತವಾದ ಧ್ಯೇಯ ಆದರ್ಶಗಳ ತೀವ್ರಗಾಮಿಯಾಗಿದ್ದ ಈತ ತನ್ನ ನಾಟಕಗಳಲ್ಲಿ ವರ್ಗಭೇದ, ಅಸಮತೆ, ಬೂಟಾಟಿಕೆ ಮುಂತಾದ ಸಾಮಾಜಿಕ ದೋಷಗಳ ಬಗ್ಗೆ ಸಾತ್ತ್ವಿಕ ರೋಷವನ್ನು ಕಾರಿದ್ದಾನೆ. ಕೆಲವು ವೇಳೆ ಈತನ ದೃಷ್ಟಿ ವಿಮೋಚನಾರಹಿತವಾಗಿ, ಅನುಷ್ಠಾನಸಾಧ್ಯವಲ್ಲದ ಆದರ್ಶವಾಗಿ ಉಳಿದುಬಿಡುತ್ತದೆ.

ಈತ ಪತ್ರಿಕೆಗಳಿಗೆ ಬರೆಯುತ್ತಿದ್ದ ಹಾಸ್ಯ ಲೇಖನಗಳು ವಿಪುಲವಾಗಿವೆ. ಅನೇಕ ಮಾಸಿಕಗಳಿಗೆ ಲೇಖನಗಳನ್ನು ಕಳಿಸುತ್ತಿದ್ದುದಲ್ಲದೆ, ಕೆಲವು ಸಣ್ಣಪುಟ್ಟ ಪತ್ರಿಕೆಗಳನ್ನು ತಾನೇ ಆರಂಭಿಸಿ ಕೆಲವು ತಿಂಗಳುಗಳಲ್ಲಿ ಕೈಬಿಟ್ಟುದ್ದೂ ಉಂಟು. ಲಾಯ್‍ಡ್ಸ್ ವಾರಪತ್ರಿಕೆ ಮಾತ್ರ ಈತನ ಸಂಪಾದಕತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಪಂಚ್ ಎಂಬ ಹಾಸ್ಯಕ್ಕೇ ಮೀಸಲಾದ ಪತ್ರಿಕೆಗೆ ಈತ ಬರೆದ ಲೇಖನಗಳು ತುಂಬ ಶ್ರೇಷ್ಠವಾಗಿವೆ. 1845ರಿಂದ ತಾನು ಬದುಕಿರುವವರೆಗೊ ಈತ ಆ ಪತ್ರಿಕೆಯ ಲೇಖಕನಾಗಿದ್ದ. ಇವನ ಹಾಸ್ಯಬರೆಹಗಳಿಂದ ಪತ್ರಿಕೆಯ ಜನಪ್ರಿಯತೆಯೂ ಹೆಚ್ಚಿತು. ಆ ಲೇಖನಗಳನ್ನೆಲ್ಲ ಸಂಕಲಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ. ಮಿಸೆಸ್ ಕಾಡಲ್ಸ್ ಕರ್ಟನ್ ಲೆಕ್ಚರ್ಸ್ ಎಂಬ ಶಿರೋನಾಮೆಯ ಹಾಸ್ಯಲೇಖನಮಾಲೆ ಬಹು ಜನಪ್ರಿಯವಾಯಿತು. ವಿಕ್ಟೋರಿಯ ಕಾಲದ ಹಾಸ್ಯದ ವಿಶಿಷ್ಟ ಮಾದರಿಯೊಂದನ್ನು ಈ ಬರಹಗಳು ಬಹಳ ಚೆನ್ನಾಗಿ ಅಭಿವ್ಯಕ್ತಗೊಳಿಸುತ್ತವೆ. ಹಾಗೆಯೆ ಸ್ಟೋರಿ ಆಫ್ ಎ ಫೆದರ್ ಇನ್ನೊಂದು ಅಂಥ ಧಾರವಾಹಿ. ಈತನದು ಯಾವುದೇ ಬಗೆಯ ವೈಯಕ್ತಿಕ ಟೀಕೆ, ಚುಚ್ಚು, ಕಹಿ ಇಲ್ಲದ ಪರಿಶುದ್ಧವಾದ ಹಾಸ್ಯ.

ದಿ ಮ್ಯಾಡ್ ಮೋಡ್ ಆಫ್ ಮನಿ, ಕ್ರಾನಿಕಲ್ಸ್ ಆಫ್ ಕ್ಲೋವರ್‍ನುಕ್ ಎಂಬ ಕಾದಂಬರಿಗಳನ್ನೂ ಅನೇಕ ಲಘುಪ್ರಬಂಧಗಳನ್ನೂ ಈತ ಬರೆದಿದ್ದಾನೆ. ಆರಿಸಿದ ಕೆಲವು ಪ್ರಬಂಧಗಳ ಸಂಕಲನ ಎ ಸೆಲೆಕ್ಷನ್ ಆಫ್ ಎಸ್ಸೇಸ್ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.

ವಿಲಿಯಂ ತುಂಬ ಧಾರಾಳಿ. ಲೋಕವ್ಯವಹಾರದಲ್ಲಿ ಅಷ್ಟು ಜಾಣನಲ್ಲ. ಸೂಕ್ಷ್ಮ ಸಂವೇದನಾಶೀಲನಾದ ಉತ್ಸಾಹಿ. ಸಿಡುಕನಾಗಿದ್ದರೂ ಸರಳ ಹಾಗೂ ಹುಡುಗಾಟದ ಸ್ವಭಾವದವನಾದುದರಿಂದ ಸದಾ ಹರ್ಷಚಿತ್ತನಾಗಿರುತ್ತಿದ್ದ. ಕಟಿನರಸೆಳೆತ, ಸಂಧಿವಾತಗಳಿಂದ ನರಳುವುದರಲ್ಲೇ ಜೀವನದ ಬಹು ಭಾಗ ಕಳೆಯಿತು. ಹೀಗೆ ನರಳುವ ಅವಧಿಗಳಲ್ಲೇ ಈತನ ಪ್ರತಿಭೆ ಪ್ರಖರವಾಗಿರುತ್ತಿತ್ತು. ಈತನ ಹಲವಾರು ಶ್ರೇಷ್ಠ ಕೃತಿಗಳು ರಚಿತವಾದುದೂ ಆಗಲೇ.

ಈತ 1857ರಲ್ಲಿ ಲಂಡನ್ನಿನ ತನ್ನ ಮನೆಯಲ್ಲಿ ಕೊನೆಯುಸಿರೆಳೆದಾಗ ಈತನ ಕುಟುಂಬ ಆರ್ಥಿಕವಾಗಿ ತುಂಬ ದುಃಸ್ಥಿತಿಯಲ್ಲಿತ್ತು. ಸುಪ್ರಸಿದ್ಧ ಕಾದಂಬರಿಕಾರ ಚಾಲ್ರ್ಸ್ ಡಿಕನ್ಸ್ ಸ್ವತಃ ಮುತುವರ್ಜಿ ವಹಿಸಿ ಅನೇಕ ಕಡೆ ಈತನ ನಾಟಕಗಳ ಪ್ರದರ್ಶನವನ್ನು ವ್ಯವಸ್ಥೆಗೊಳಿಸಿ ಬಂದ ನಿವ್ವಳ ಆದಾಯದ ಸುಮಾರು ಎರಡು ಸಾವಿರ ಪೌಂಡ್ ಮೊತ್ತವನ್ನು ಈತನ ಕುಟುಂಬದವರಿಗೆ ಸಲ್ಲಿಸಿದ.