ವಿಷಯಕ್ಕೆ ಹೋಗು

ಟೋಟಲ್ ರೀಕಾಲ್ (೧೯೯೦ರ ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೋಟಲ್ ರೀಕಾಲ್ (೧೯೯೦ರ ಚಲನಚಿತ್ರ)
ನಿರ್ದೇಶನಪಾಲ್ ವರ್ಹೋವನ್
ನಿರ್ಮಾಪಕ
  • ಬೂಝ್ ಫೇಟ್‌ಶಾನ್ಸ್
  • ರೊನಾಲ್ಡ್ ಶೂಸೆಟ್
ಚಿತ್ರಕಥೆ
  • ರೊನಾಲ್ಡ್ ಶೂಸೆಟ್
  • ಡಾನ್ ಒ'ಬ್ಯಾನನ್
  • ಗ್ಯಾರಿ ಗೋಲ್ಡ್‌ಮನ್
ಕಥೆ
  • ರೊನಾಲ್ಡ್ ಶೂಸೆಟ್
  • ಡಾನ್ ಒ'ಬ್ಯಾನನ್
  • ಜಾನ್ ಪಾವಿಲ್
ಪಾತ್ರವರ್ಗ

ಸಂಗೀತಜೆರಿ ಗೋಲ್ಡ್‌ಸ್ಮಿತ್
ಛಾಯಾಗ್ರಹಣಜಾಸ್ಟ್ ವಾಕಾನೊ
ಸಂಕಲನಫ್ರಾಂಕ್ ಜೆ ಯುರಿಯೊಸ್ಟೆ
ಸ್ಟುಡಿಯೋಕೆರೊಲ್ಕೊ ಪಿಕ್ಚರ್ಸ್
ವಿತರಕರುಟ್ರೈಸ್ಟಾರ್ ಪಿಕ್ಚರ್ಸ್
ಬಿಡುಗಡೆಯಾಗಿದ್ದು
  • June 1, 1990 (1990-06-01)
ಅವಧಿ೧೧೩ ನಿಮಿಷಗಳು
ದೇಶಅಮೇರಿಕಾ
ಭಾಷೆಇಂಗ್ಲಿಷ್
ಬಂಡವಾಳ$48–80 ಮಿಲಿಯನ್ (ಅಂದಾಜು ೧೪೦ ಕೋಟಿ ರೂ)
ಬಾಕ್ಸ್ ಆಫೀಸ್$261.4 ಮಿಲಿಯನ್ (ಅಂದಾಜು ೪೫೦ ಕೋಟಿ ರೂ)
A photograph of Arnold Schwarzenegger in 1991
ಆರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರ ೧೯೯೧ರ ಛಾಯಾಚಿತ್ರ

ಟೋಟಲ್ ರಿಕಾಲ್ ಎಂಬುದು 1990ರಲ್ಲಿ ಬಿಡುಗಡೆಯಾದ, ಇಂಗ್ಲಿಷ್ ಭಾಷೆಯ ವೈಜ್ಞಾನಿಕ ಕಾಲ್ಪನಿಕ ಕಥೆ ಇರುವ ಚಲನಚಿತ್ರ. ಈ ಚಿತ್ರವನ್ನು ಪಾಲ್ ವರ್ಹೋವನ್ ನಿರ್ದೇಶಿಸಿದ್ದು, ರೊನಾಲ್ಡ್ ಶುಸೆಟ್, ಡಾನ್ ಒ'ಬ್ಯಾನನ್ ಮತ್ತು ಗ್ಯಾರಿ ಗೋಲ್ಡ್‌ಮನ್ ಅವರು ಚಿತ್ರಕಥೆ ಬರೆದಿದ್ದಾರೆ. ಚಿತ್ರದ ಮುಖ್ಯ ಪಾತ್ರಧಾರಿಗಳಾಗಿ ಆರ್ನಾಲ್ಡ್ ಶ್ವಾರ್ಜಿನೆಗ್ಗರ್, ರಾಚೆಲ್ ಟಿಕೋಟಿನ್, ಶರೋನ್ ಸ್ಟೋನ್, ರೊನ್ನಿ ಕಾಕ್ಸ್ ಮತ್ತು ಮೈಕೆಲ್ ಐರನ್‌ಸೈಡ್ ನಟಿಸಿದ್ದಾರೆ. ಫಿಲಿಪ್ ಕೆ. ಡಿಕ್ ಅವರು ೧೯೬೬ರಲ್ಲಿ ಬರೆದ "ವಿ ಕ್ಯಾನ್ ರಿಮೆಂಬರ್ ಇಟ್ ಫಾರ್ ಯು ಹೋಲ್‌ಸೇಲ್" ಎಂಬ ಸಣ್ಣ ಕಥೆಯನ್ನು ಆಧರಿಸಿ ಈ ಚಲನಚಿತ್ರವನ್ನು ಚಿತ್ರೀಕರಿಸಲಾಗಿದೆ. ಚಿತ್ರದ ನಾಯಕ ಡಗ್ಲಾಸ್ ಕ್ವಾಡ್ (ಆರ್ನಾಲ್ಡ್ ಶ್ವಾರ್ಝ್‌ನೆಗರ್) ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ನೌಕರಿ ಮಾಡುತ್ತಾನೆ. ನಾಯಕ ನಿದ್ರೆಯಲ್ಲಿ ಇರುವಾಗ, ತಾನು ಮಂಗಳ (ಗ್ರಹ)ದಲ್ಲಿ ಇರುವಂತೆ ಮತ್ತು ಅಲ್ಲಿ ನಡೆಯುವ ವಿವಿಧ ಘಟನಾವಳಿಗಳ ಸುತ್ತ ಕನಸುಗಳು ಬೀಳುತ್ತಿರುತವೆ. ನಾಯಕನಿಗೆ ಒಮ್ಮೆ ಮಂಗಳ ಗ್ರಹದಲ್ಲಿ ವಾಸಿಸುವ ಹಾಗೆ ಒಂದು ಕಾಲ್ಪನಿಕ ಕನಸನ್ನು ತನ್ನ ಮೆದುಳಿನಲ್ಲಿ ಕೃತಕವಾಗಿ ಅಳವಡಿಸಿಕೊಳ್ಳುವ ಬಯಕೆಯಾಗುತ್ತದೆ. ಇದಕ್ಕಾಗಿ ಅವನು ರಿಕಾಲ್ ಹೆಸರಿನ ಸಂಸ್ಥೆಗೆ ಭೇಟಿಕೊಡುತ್ತಾನೆ. ಕನಸನ್ನು ಮನಸಿನಲ್ಲಿ ಬಿತ್ತುವ ಸಂದರ್ಭದಲ್ಲಿ ಆ ಕಾರ್ಯ ಅರ್ಧದಲ್ಲೇ ನಿಂತುಹೋಗುತ್ತದೆ. ಹೀಗೆ ಮುಂದುವರೆಯುವ ಚಿತ್ರ ಅಂತಿಮವಾಗಿ, ನಾಯಕನ ಮನೋಭೂಮಿಕೆಯಲ್ಲಿ ನಡೆದ ಕನಸು ನಿಜವಾಗಿಯೂ ನಡೆದ ಘಟನೆಯೆ ಅಥವಾ ತಾಂತ್ರಿಕ ಸಾಧನಗಳ ಮೂಲಕ ಬಿತ್ತಿದ ಕಾಲ್ಪನಿಕ ದೃಶ್ಯಾವಳಿಗಳೆ ಎಂಬ ಪ್ರಶ್ನೆಯನ್ನು ವೀಕ್ಷಕರ ಮುಂದೆ ಇರಿಸುತ್ತದೆ.

ಚಿತ್ರದ ನಿರ್ದೇಶಕ ಶುಸೆಟ್ ಅವರು ಡಿಕ್ ಅವರ ಸಣ್ಣ ಕಥೆಯ ಹಕ್ಕುಗಳನ್ನು 1974 ರಲ್ಲಿಯೇ ಅಂದರೆ ೧೬ ವರ್ಷಗಳ ಹಿಂದೆಯೇ ಖರೀದಿಸಿ ಓ'ಬ್ಯಾನನ್ ಅವರೊಂದಿಗೆ ಚಿತ್ರಕಥೆಯನ್ನು ಸಿದ್ಧಪಡಿಸಿದ್ದರು. ಕಥೆ ಏನೋ ಆಕರ್ಷಕವಾಗಿತ್ತು. ಆದರೆ ಅದರ ವ್ಯಾಪ್ತಿಯ ಕಾರಣದಿಂದಾಗಿ ಈ ಯೋಜನೆಯು ಹದಿನಾರು ವರ್ಷಗಳ ಕಾಲ ಅಭಿವೃದ್ಧಿ ಹಂತದಲ್ಲಿಯೇ ಉಳಿದುಹೋಯಿತು. ಈ ಅವಧಿಯಲ್ಲಿ ಸುಮಾರು ನಲವತ್ತು ಚಿತ್ರಕಥೆಯ ಕರಡು ಪ್ರತಿಗಳು ಸಿದ್ಧವಾದವು, ಏಳು ನಿರ್ದೇಶಕರು ಬದಲಾದರು. ಕ್ವೈಡ್ ಪಾತ್ರಕ್ಕೆ ಹಲವಾರು ನಟರನ್ನು ಪರೀಕ್ಷಿಸಲಾಯಿತು. 1987 ರಲ್ಲಿ 'ಡಿ ಲಾರೆಂಟಿಸ್ ಎಂಟರ್ಟೈನ್‌ಮೆಂಟ್ ಗ್ರೂಪ್' ಅಡಿಯಲ್ಲಿ ಚಿತ್ರೀಕರಣ ಆರಂಭವಾಯಿತು ಆದರೆ, ಶೀಘ್ರದಲ್ಲೇ ಆ ಸಂಸ್ಥೆಯು ದಿವಾಳಿಯಾಗಿ ಚಿತ್ರೀಕರಣ ನಿಂತು ಹೋಯಿತು. ಈ ಯೋಜನೆಯಲ್ಲಿ ನಟ ಆರ್ನಾಲ್ಡ್ ಅವರಿಗೆ ತುಂಬಾ ಆಸಕ್ತಿ ಇತ್ತು. ಆದರೆ ನಾಯಕ ಪಾತ್ರಕ್ಕೆ ಸೂಕ್ತರಲ್ಲ ಎಂಬ ಕಾರಣಕ್ಕೆ ಅವರನ್ನು ಕೈಬಿಡಲಾಗಿತ್ತು. ಅಂತಿಮವಾಗಿ ಆರ್ನಾಲ್ಡ್, ಕೆರೊಲ್ಕೊ ಪಿಕ್ಚರ್ಸ್ ಸಂಸ್ಥೆಯನ್ನು ಚಿತ್ರದ ಕಥೆಯನ್ನು ಖರೀದಿಸಲು ಮತ್ತು ತನ್ನನ್ನು ನಾಯಕನನ್ನಾಗಿಸಿ ಚಿತ್ರ ನಿರ್ಮಿಸಲು ಒಪ್ಪಿಸಿದರು. ಅಂದಾಜು $48–80 ಮಿಲಿಯನ್ (ಅಂದಿನ ಅಂದಾಜು ರೂ. ೧೪೦ ಕೋಟಿ) ಬಜೆಟ್‌ನಲ್ಲಿ ಟೋಟಲ್ ರಿಕಾಲ್ ಚಿತ್ರ ಚಿತ್ರೀಕರಣಗೊಂಡಿತು. ಮೆಕ್ಸಿಕೋ ದೇಶದ 'ಎಸ್ಟುಡಿಯೋಸ್ ಚುರುಬುಸ್ಕೊ ಸ್ಟೂಡಿಯೋದಲ್ಲಿ ಹಾಕಲಾದ ಬೃಹತ್ ಸೆಟ್‌ಗಳಲ್ಲಿ ಆರು ತಿಂಗಳ ಕಾಲ ಚಿತ್ರೀಕರಣ ನಡೆಯಿತು.

ಬಿಡುಗಡೆಯಾದ ನಂತರ ಈ ಚಿತ್ರವು ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯಿತು. ಚಿತ್ರವು ವಿಶ್ವದಾದ್ಯಂತ ಅಂದಾಜು $261.4 ಮಿಲಿಯನ್ ಡಾಲರ್‌ನಷ್ಟು (ಅಂದಿಗೆ ಸುಮಾರು ೪೫೦ ಕೋಟಿ ರೂ.) ಗಳಿಕೆಯನ್ನು ಕಂಡಿತು. ಮತ್ತು ಆ ವರ್ಷದ ಐದನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಚಿತ್ರ ವಿಮರ್ಶಕರು ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರು. ಚಿತ್ರದ ಕಥೆಯ ನೈಜತೆ ಮತ್ತು ಕಾಲ್ಪನಿಕ ಭೂಮಿಕೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು, ಆದರೆ ಅದರಲ್ಲಿನ ಹಿಂಸೆ ಮತ್ತು ಅಶ್ಲೀಲತೆಯನ್ನು ಟೀಕಿಸಿದರು. ಚಿತ್ರದಲ್ಲಿ ಅಳವಡಿಸಲಾದ ಸ್ಪೆಷಲ್ ಎಫೆಕ್ಟ್ಸ್‌ಗಳು ಚಿತ್ರಕ್ಕೆ ಅಕಾಡೆಮಿ ಪ್ರಶಸ್ತಿ (ಆಸ್ಕರ್) ತಂದುಕೊಟ್ಟವು.

ಕಥೆಯು ೨೦೮೪ರಲ್ಲಿ ಅಂದರೆ ಭವಿಷ್ಯದ ಕಾಲಘಟ್ಟದಲ್ಲಿ ನಡೆಯುತ್ತದೆ. ಚಿತ್ರದ ನಾಯಕ ಡಗ್ಲಾಸ್ ಕ್ವಾಯ್ಡ್ ಭೂಮಿಯ ಮೇಲಿರುವ ಒಬ್ಬ ಸಾಮಾನ್ಯ ನಿರ್ಮಾಣ ಕಾರ್ಮಿಕ. ಅವನಿಗೆ ಲೋರಿ ಹೆಸರಿನ ಸುಂದರವಾದ ಹೆಂಡತಿ. ನಾಯಕನಿಗೆ ರಾತ್ರಿ ನಿದ್ರೆಯಲ್ಲಿ ಮಂಗಳ ಗ್ರಹದ ಬಗ್ಗೆ ಮತ್ತು ಅಲ್ಲಿನ ಒಬ್ಬ ಅಪರಿಚಿತ ಹುಡುಗಿಯ ಬಗ್ಗೆ ಪದೇ ಪದೇ ವಿಚಿತ್ರ ಕನಸುಗಳು ಬೀಳುತ್ತಿರುತ್ತವೆ. ತಾನು ಎಂದೂ ಹೋಗಲಾಗದ ಮಂಗಳ ಗ್ರಹದ ಕನಸುಗಳು ಯಾಕೆ ಬೀಳುತ್ತಿವೆ ಎಂಬುದು ಆತನಿಗೆ ಪ್ರಶ್ನೆ ಕಾಡುತ್ತಿರುತ್ತದೆ. ಪದೇ ಪದೇ ಬೀಳುವ ಕನಸಿನಿಂದ ನಾಯಕನಿಗೆ ತಾನೂ ಸಹ ಮಂಗಳ ಗ್ರಹಕ್ಕೆ ಹೋಗುವ ಬಯಕೆ ಮೂಡುತ್ತದೆ. ಮಂಗಳ ಗ್ರಹಕ್ಕೆ ಹೋಗುವ ತನ್ನ ಆಸೆಯನ್ನು ತೀರಿಸಿಕೊಳ್ಳಲು ಕ್ವಾಯ್ಡ್ ರಿಕಾಲ್ ಎಂಬ ಕಂಪನಿಗೆ ಭೇಟಿ ಕೊಡುತ್ತಾನೆ. ಈ ಕಂಪನಿಯು ಜನರ ಮೆದುಳಿನೊಳಗೆ ವಿವಿಧ ರೀತಿಯ ಕೃತಕ ನೆನಪುಗಳನ್ನು ತುಂಬಿಸುವ, ಮತ್ತು ಆ ಮೂಲಕ ಅವರು ನಿಜವಾಗಿಯೂ ಪ್ರವಾಸ ಹೋಗಿ ಬಂದಂತಹ ಅನುಭವವನ್ನು ನೀಡುವ ಕೆಲಸ ಮಾಡುತ್ತದೆ. ಕ್ವಾಯ್ಡ್ ತಾನು ಮಂಗಳ ಗ್ರಹಕ್ಕೆ ಒಬ್ಬ ರಹಸ್ಯ ಏಜೆಂಟ್ ಆಗಿ ಹೋಗಿ ಬಂದಂತೆ ನೆನಪುಗಳನ್ನು ಸೇರಿಸಲು ಕೇಳಿಕೊಳ್ಳುತ್ತಾನೆ.

ನೆನಪುಗಳನ್ನು ಸೇರಿಸುವ ಪ್ರಕ್ರಿಯೆ ನಡೆಯುತ್ತಿರುವಾಗಲೇ, ನೆನಪು ಸೇರಿಸುವ ಯಂತ್ರವು ಎಚ್ಚರಿಕೆ ನೀಡುತ್ತದೆ. ಕ್ವಾಯ್ಡ್‌ಗೆ ಈಗಾಗಲೇ ರಹಸ್ಯ ಏಜೆಂಟ್‌ನ ನೆನಪುಗಳು ಇವೆ ಮತ್ತು ಬೇರೆ ಯಾರೋ ಆತನ ಹಳೆಯ ನೆನಪುಗಳನ್ನು ಅಳಿಸಿಹಾಕಿದ್ದಾರೆ ಎಂಬುದು ಕಂಪನಿಯವರಿಗೆ ತಿಳಿಯುತ್ತದೆ. ಎಚ್ಚರಗೊಂಡ ಕ್ವಾಯ್ಡ್‌ಗೆ ತನ್ನ ಹಳೆಯ ನೆನಪುಗಳು ಮರಳಿ ಬರಲು ಶುರುವಾಗುತ್ತವೆ. ರಿಕಾಲ್ ಕಂಪನಿಯಿಂದ ಹೊರಬಂದ ತಕ್ಷಣ ನಾಯಕನನ್ನು ಅವನ ಸ್ನೇಹಿತರು ಮತ್ತು ಅವನ ಹೆಂಡತಿಯೇ ಅವನನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಅವನ ಹೆಂಡತಿ ಲೋರಿ ನಾನು ನಿನ್ನ ನಿಜವಾದ ಹೆಂಡತಿಯಲ್ಲ, ನಿನ್ನನ್ನು ಕಣ್ಗಾವಲು ಇಡಲು ನೇಮಕಗೊಂಡ ಏಜೆಂಟ್ ಎಂಬ ಸತ್ಯವನ್ನು ಬಾಯ್ಬಿಡುತ್ತಾಳೆ. ತನ್ನ ನಿಜವಾದ ಗುರುತೇನು ಮತ್ತು ಮಂಗಳ ಗ್ರಹಕ್ಕೂ ತನಗೂ ಏನು ಸಂಬಂಧ ಎಂದು ತಿಳಿದುಕೊಳ್ಳಲು ಕ್ವಾಯ್ಡ್ ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸುತ್ತಾನೆ.

ಮಂಗಳ ಗ್ರಹವನ್ನು ವಿಲೋಸ್ ಕೊಹೇಗನ್ ಎಂಬ ಸರ್ವಾಧಿಕಾರಿ ಆಳುತ್ತಿರುತ್ತಾನೆ. ಅವನು ಅಲ್ಲಿ ಜನರು ಉಸಿರಾಡುವ ಗಾಳಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಜನರನ್ನು ಸುಲಿಗೆ ಮಾಡುತ್ತಿರುತ್ತಾನೆ. ಮಂಗಳ ಗ್ರಹಕ್ಕೆ ತಲುಪಿದ ಕ್ವಾಯ್ಡ್‌, ತನ್ನ ಕನಸಿನಲ್ಲಿ ಬರುತ್ತಿದ್ದ ಹುಡುಗಿ ಮೆಲಿನಾ ಎಂಬುದನ್ನು ಕಂಡುಕೊಳ್ಳುತ್ತಾನೆ. ನಂತರ ತಾನು ಹಿಂದೆ ಹೌಸರ್ ಹೆಸರಿನ ಕೊಹೇಗನ್‌ನ ಬಲಗೈ ಬಂಟನಾಗಿದ್ದೆ, ಕೊನೆಗೆ ಮನಃಪರಿವರ್ತನೆಯಾಗಿ ಅಲ್ಲಿನ ಬಂಡುಕೋರರ ಜೊತೆ ಸೇರಿಕೊಂಡು ಕೊಹೇಗನ್ ವಿರುದ್ಧ ಹೋರಾಡಿದ್ದೆ ಎಂಬ ಸತ್ಯ ಕ್ವಾಯ್ಡ್‌ಗೆ ತಿಳಿಯುತ್ತದೆ.

ಮಂಗಳ ಗ್ರಹದ ಗಣಿಯೊಳಗೆ ಪ್ರಾಚೀನ ಏಲಿಯನ್‌ಗಳು ನಿರ್ಮಿಸಿದ ಒಂದು ಬೃಹತ್ ಯಂತ್ರವಿರುತ್ತದೆ. ಆ ಯಂತ್ರವನ್ನು ಆನ್ ಮಾಡಿದರೆ ಮಂಗಳ ಗ್ರಹದ ಮಂಜುಗಡ್ಡೆಗಳು ಕರಗಿ, ಇಡೀ ಗ್ರಹಕ್ಕೆ ಉಸಿರಾಡಲು ಆಮ್ಲಜನಕ ಸೃಷ್ಟಿಯಾಗುತ್ತದೆ. ಕೊಹೇಗನ್‌ ತನ್ನ ಸರ್ವಾಧಿಕಾರವನ್ನು ನಿಯಂತ್ರಿಸುವ ಸಲುವಾಗಿ ಆ ಯಂತ್ರವನ್ನು ಮುಚ್ಚಿಟ್ಟಿರುತ್ತಾನೆ.

ಕೊನೆಯಲ್ಲಿ, ಕ್ವಾಯ್ಡ್ ಕೊಹೇಗನ್‌ನ ಸೈನ್ಯದ ವಿರುದ್ಧ ಹೋರಾಡಿ ಆ ಏಲಿಯನ್ ಯಂತ್ರವನ್ನು ಆನ್ ಮಾಡುತ್ತಾನೆ. ಕೋಹೇಗನ್ ಆ ಯಂತ್ರದ ನಿಯಂತ್ರಣ ಘಟಕವನ್ನು ನಾಶಮಾಡಲು ಸ್ಪೋಟಕವನ್ನು ಸ್ಪೋಟಿಸುತ್ತಾನೆ. ಇದನ್ನು ತಡೆಯುವ ನಾಯಕ ಆ ಸ್ಪೋಟಕವನ್ನು ಇನ್ನೊಂದು ಬದಿಗೆ ಎಸೆಯುತ್ತಾನೆ. ಸ್ಪೋಟಕವು ಸಿಡಿದಾಗ ಉಂಟಾಗುವ ನಿರ್ವಾತದಿಂದ ಕೋಹೇಗನ್ ಮಂಗಳನ ಬಾಹ್ಯಾಕಾಶದ ಆಚೆಗೆ ಎಸೆಯಲ್ಪಡುತ್ತಾನೆ. ಅಲ್ಲಿ ಆಮ್ಲಜನಕದ ಅಭಾವದಿಂದ ಕೋಹೇಗನ್ ಸಾವನ್ನಪ್ಪುತ್ತಾನೆ ಯಂತ್ರ ಚಾಲನೆಗೊಂಡು ಇಡೀ ಮಂಗಳ ಗ್ರಹದಲ್ಲಿ ವಾತಾವರಣವು ಬದಲಾಗಿ, ನೀಲಿ ಆಕಾಶ ಮತ್ತು ಉಸಿರಾಡಲು ಮುಕ್ತವಾದ ಗಾಳಿ ಸೃಷ್ಟಿಯಾಗುತ್ತದೆ. ಮಂಗಳ ಗ್ರಹದ ಜನರಿಗೆ ಸ್ವಾತಂತ್ರ್ಯ ಸಿಗುತ್ತದೆ.

ಪಾತ್ರವರ್ಗ

[ಬದಲಾಯಿಸಿ]
A photograph of Arnold Schwarzenegger
A photograph of Sharon Stone
A photograph of Ronny Cox
(ಎಡದಿಂದ ಬಲಕ್ಕೆ) ಅರ್ನಾಲ್ಡ್ ಶ್ವಾರ್ಜಿನೆಗರ್, ಶರೋನ್ ಸ್ಟೋನ್, ಮತ್ತು ರೋನಿ ಕಾಕ್ಸ್
  • ಅರ್ನಾಲ್ಡ್ ಶ್ವಾರ್ಜಿನೆಗರ್- ಡಗ್ಲಾಸ್ ಕ್ವಾಯ್ಡ್ ಮತ್ತು ಹೌಸರ್
  • ರಾಚೆಲ್ ಟಿಕೋಟಿನ್- ಮೆಲಿನಾ
  • ಶರೋನ್ ಸ್ಟೋನ್- ಲೋರಿ, ಭೂಮಿಯಲ್ಲಿ ಕ್ವಾಯ್ಡ್‌ನ ಹೆಂಡತಿ.
  • ರಾನಿ ಕಾಕ್ಸ್-ವಿಲೋಸ್ ಕೊಹೇಗನ್, ಮಂಗಳ ಗ್ರಹದ ಸರ್ವಾಧಿಕಾರಿ.
  • ಮೈಕೆಲ್ ಐರನ್‌ಸೈಡ್-ರಿಕ್ಟರ್, ಕೊಹೇಗನ್‌ನ ಬಂಟ
  • ಮಾರ್ಷಲ್ ಬೆಲ್ (ಜಾರ್ಜ್ / ಕ್ವಾಟೋ ಧ್ವನಿ): ಕ್ವಾಟೋ ಮಂಗಳ ಗ್ರಹದ ಬಂಡುಕೋರರ ನಾಯಕ. ತನ್ನ ಅವಳಿ ಸಹೋದರ ಜಾರ್ಜ್‌ನ ಹೊಟ್ಟೆಯ ಭಾಗಕ್ಕೆ ಅಂಟಿಕೊಂಡಿರುತ್ತಾನೆ.
  • ಮೈಕೆಲ್ ಚಾಂಪಿಯನ್-ಹೆಲ್ಮ್, ರಿಕ್ಟರ್‌ನ ಬಲಗೈ ಬಂಟ.
  • ಮೆಲ್ ಜಾನ್ಸನ್ ಜೂನಿಯರ್-ಬೆನ್ನಿ, ಮಂಗಳ ಗ್ರಹದಲ್ಲಿನ ಒಬ್ಬ ಟ್ಯಾಕ್ಸಿ ಡ್ರೈವರ್.
  • ರಾಯ್ ಬ್ರಾಕ್ಸ್‌ಮಿತ್- ಡಾ. ಎಡ್ಜ್‌ಮಾರ್, ರಿಕಾಲ್ ಕಂಪನಿಯ ಉದ್ಯೋಗಿ.
  • ರೋಸ್‌ಮರಿ ಡನ್ಸ್‌ಮೋರ್-ಡಾ. ರೆನಾಟಾ ಲಲ್, ರಿಕಾಲ್ ಕಂಪನಿಯ ಪ್ರೋಗ್ರಾಮರ್.

ನಿರ್ಮಾಣ

[ಬದಲಾಯಿಸಿ]

ಬಿಡುಗಡೆ

[ಬದಲಾಯಿಸಿ]

ಪ್ರತಿಕ್ರಿಯೆ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]