ವಿಷಯಕ್ಕೆ ಹೋಗು

ಝಿಮ್ನೆ ಕ್ರೈಸ್ತ ಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪವಿತ್ರ ಪರ್ವತದಲ್ಲಿರುವ ಅಸಂಪ್ಷನ್ ಮಠ ಉಕ್ರೇನಿಯನ್ ಆರ್ಥೊಡಾಕ್ಸ್ ಚರ್ಚ್‌ಗೆ ಸೇರಿದ ಒಂದು ಉಕ್ರೇನಿಯನ್ ಆರ್ಥೊಡಾಕ್ಸ್ ಗುಹಾ ಮಠವಾಗಿದೆ. ಇದೊಂದು ಸ್ಟೌರೋಪೆಜಿಯಲ್(ಸ್ಥಳೀಯ ಬಿಷಪ್‌ಗಳ ಬದಲಾಗಿ ಪ್ರೈಮೇಟ್ ಅಥವಾ ಉನ್ನತ ಧರ್ಮಗುರುಗಳ ನೇರ ಅಧೀನದಲ್ಲಿರುವ ಮಠ) ಪ್ರಕಾರದ ಕ್ರೈಸ್ತ ಮಠವಾಗಿದ್ದು ಇದು ಜಿಮ್ನೆ ಗ್ರಾಮದ ಬಳಿ ಹರಿಯುವ ಲುಹಾ ನದಿಯ ದಡದಲ್ಲಿ, ಪರ್ವತದ ತುದಿಯಲ್ಲಿದೆ. ಇದು ಉಕ್ರೇನ್‌ನ ವೊಲಿನ್ ರಾಜ್ಯದ ವೊಲೊಡಿಮಿರ್‌ನಿಂದ ದಕ್ಷಿಣಕ್ಕೆ ಐದು ಕಿಲೋಮೀಟರ್ ದೂರದಲ್ಲಿದೆ.[]

ಇತಿಹಾಸ

[ಬದಲಾಯಿಸಿ]

ಮಠದ ಮೂಲ ಅಥವಾ ಇತಿಹಾಸದ ಬಗ್ಗೆ ನಿಖರವಾದ ಮಾಹಿತಿಯು ಲಭ್ಯವಿಲ್ಲ.ಆದರೆ ಒಂದು ಸನ್ಯಾಸಿಗಳ ದಂತಕಥೆಯ ಪ್ರಕಾರ ಇದರ ಸ್ಥಾಪನೆಯನ್ನು ವ್ಲಾಡಿಮಿರ್ ದಿ ಗ್ರೇಟ್ ಎಂಬ ಧರ್ಮಗುರು ಮಾಡಿದರು. ಅವರು ಅಲ್ಲಿ ಎರಡು ಚರ್ಚುಗಳು ಮತ್ತು ಚಳಿಗಾಲದ ಅರಮನೆಯನ್ನು ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ, ಇದರಿಂದಲೇ ಈ ಗ್ರಾಮಕ್ಕೆ ಆ ಹೆಸರು ಬಂದಿದೆ. 11ನೇ ಶತಮಾನದಲ್ಲಿ ತ್ಸಾರ್‌ಗ್ರಾಡ್‌ನಿಂದ ಕೀವ್‌ಗೆ ಹೋಗುವ ಮಾರ್ಗದಲ್ಲಿ ಕೀವ್ ಪೆಚೆರ್ಸ್ಕ್ ಲಾವ್ರಾದ ಮೊದಲ ಹೆಗುಮೆನ್ (ಮಠಾಧೀಶರು) ಅಲ್ಲಿಯೇ ನಿಧನರಾದರು ಎಂದೂ ಹೇಳಲಾಗುತ್ತದೆ.

ಈ ಮಠದ ಬಗ್ಗೆ 1458 ರ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.[] 1698 ರವರೆಗೆ ಗ್ರೀಕ್ ಆರ್ಥೊಡಾಕ್ಸ್ ಚರ್ಚ್‌ನ ನಿಯಂತ್ರಣದಲ್ಲಿದ್ದ ಇದು, ನಂತರ ಕ್ಯಾಥೊಲಿಕ್ ಚರ್ಚ್‌ನೊಂದಿಗೆ ಒಗ್ಗೂಡಿ ಯೂನಿಯೇಟ್ ಚರ್ಚ್‌ಗೆ ಸೇರಿಕೊಂಡಿತು. ಕೆಲವು ದಶಕಗಳಲ್ಲಿ, ಈ ಸನ್ಯಾಸಿಗಳ ಸಮುದಾಯವು ಅಸ್ತಿತ್ವವನ್ನು ಕಳೆದುಕೊಂಡಿತು.

ಪೋಲೆಂಡ್‌ ಮೂರನೇ ಬಾರಿ ವಿಭಜನೆಯಾದ ಸ್ವಲ್ಪ ಸಮಯದ ನಂತರ, 1857 ರಲ್ಲಿ ಇದರ ಕ್ಯಾಥೆಡ್ರಲ್ ಅನ್ನು ಉಕ್ರೇನಿಯನ್ ಆರ್ಥೊಡಾಕ್ಸ್ ಪ್ಯಾರಿಷ್ ಚರ್ಚ್ ಆಗಿ ಪುನರ್ ನಿರ್ಮಿಸಲಾಯಿತು. 1893ರಲ್ಲಿ, ಈ ಮಠವನ್ನು ಉಕ್ರೇನಿಯನ್ ಆರ್ಥೊಡಾಕ್ಸ್ ಸನ್ಯಾಸಿನಿಯರ ಮಠವಾಗಿ ಮರುಸ್ಥಾಪಿಸಲಾಯಿತು. 1939 ರಲ್ಲಿ ವೊಲಿನಿಯಾವನ್ನು ಆಕ್ರಮಿಸಿ ವಶಪಡಿಸಿಕೊಂಡ ನಂತರ ಸೋವಿಯತ್‌ಗಳು ಈ ಸನ್ಯಾಸಿನಿಯರ ಸಮುದಾಯವನ್ನು ವಿಸರ್ಜಿಸಿದರು. []

ಜರ್ಮನ್ ಆಕ್ರಮಣದ ಅವಧಿಯಲ್ಲಿ ಈ ಮಠವನ್ನು ಪುನರುಜ್ಜೀವನಗೊಳಿಸಲಾಯಿತು, ಆದರೆ 1945 ರಲ್ಲಿ ಈ ಪ್ರದೇಶವು ಸೋವಿಯತ್ ಉಕ್ರೇನ್‌ನ ಭಾಗವಾದ ನಂತರ ಇದನ್ನು ಪ್ಯಾರಿಷ್ ಚರ್ಚ್ ಆಗಿ ಕೆಳ ದರ್ಜೆಗೆ ಇಳಿಸಲಾಯಿತು. ಸೋವಿಯತ್ ಒಕ್ಕೂಟ ಒಡೆದು ಹೋದ ಮೇಲೆ, ಈ ಮಠ 1990 ರಲ್ಲಿ ಮತ್ತೆ ತೆರೆಯಲ್ಪಟ್ಟಿತು. 1996 ರಲ್ಲಿ ಇದಕ್ಕೆ ಸ್ಟೌರೊಪೆಜಿಕ್ ಸ್ಥಾನಮಾನವನ್ನು ನೀಡಲಾಯಿತು.

ವಿನ್ಯಾಸ ಮತ್ತು ವಾಸ್ತುಶಿಲ್ಪ

[ಬದಲಾಯಿಸಿ]

ಮಠವು ಆಯತಾಕಾರದ ವಿನ್ಯಾಸವನ್ನು ಹೊಂದಿದ್ದು, ಕಟ್ಟಡದ ಮೇಲೆ 15 ಮತ್ತು 16ನೇ ಶತಮಾನಗಳಲ್ಲಿ ನಿರ್ಮಿಸಲಾದ ಗೋಪುರಗಳಿವೆ. ಅಲ್ಲದೆ ರಕ್ಷಣಾತ್ಮಕ ಗೋಡೆಗಳಿಂದ ಆವೃತವಾಗಿದೆ. ಪ್ರತಿ ಗೋಡೆಯಲ್ಲೂ 17ನೇ ಶತಮಾನದ ಅಗಲವಾದ ಕಮಾನುಗಳಿವೆ. ದಕ್ಷಿಣದ ಗೋಡೆಯಲ್ಲಿರುವ ಒಂದು ದುಂಡಗಿನ ಗೋಪುರವನ್ನು 1898-99ರಲ್ಲಿ ಗಂಟೆಗೋಪುರವನ್ನಾಗಿ ಮೇಲಕ್ಕೆ ನಿರ್ಮಿಸಲಾಯಿತು. ಈ ಕಟ್ಟಡವನ್ನು ನಿಯೋ-ಮಸ್ಕೋವೈಟ್ ಶೈಲಿಯಲ್ಲಿ ನಿರ್ಮಿಸಲಾಗಿದೆ.

ನಾಲ್ಕು ಕಂಬಗಳ ಅಸಂಪ್ಷನ್ ಕ್ಯಾಥೋಲಿಕಾನ್ ಅನ್ನು ರಾಜಕುಮಾರ ಫ್ಯೋಡರ್ ಚಾರ್ಟೊರಿಸ್ಕಿ ಒದಗಿಸಿದ ಹಣದಿಂದ ನಿರ್ಮಿಸಲಾಯಿತು. ಅವರು ಎರಡು ಅತ್ಯುತ್ತಮ ಗಂಟೆಗಳನ್ನು ಸಹ ದಾನ ಮಾಡಿದರು, ಅವುಗಳಲ್ಲಿ ಒಂದನ್ನು ಈಗ ಮಠದ ಆವರಣದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಈ ಪ್ರದೇಶದಲ್ಲಿ ಗೋಥಿಕ್ ಪ್ರಭಾವವು ಇನ್ನೂ ಪ್ರಾಬಲ್ಯ ಹೊಂದಿದ್ದಾಗ 1495 ರಲ್ಲಿ ಕ್ಯಾಥೋಲಿಕಾನ್‌ನ ನಿರ್ಮಾಣವನ್ನು ಪೂರ್ಣಗೊಳಿಸಿ ಪ್ರತಿಷ್ಠಾಪಿಸಲಾಯಿತು. 1550 ರಲ್ಲಿ ಇದನ್ನು ಮೊದಲ ಬಾರಿಗೆ ಆಧುನೀಕರಿಸಲಾಯಿತು ಮತ್ತು ಅಂದಿನಿಂದ ಚಾಲ್ತಿಯಲ್ಲಿರುವ ಸಿದ್ಧಾಂತಗಳಿಗೆ ಅನುಗುಣವಾಗಿ ಇದನ್ನು ನವೀಕರಿಸುತ್ತಾ ಮತ್ತು ಪುನರ್ನಿರ್ಮಿಸುತ್ತಾ ಬರಲಾಗಿದೆ. 1724 ರಲ್ಲಿ ಯೂನಿಯೇಟ್‌ಗಳು ಇದರ ಪಕ್ಕದ ಗೋಪುರಗಳನ್ನು ಕೆಡವಿದರು ಮತ್ತು ಆಗಿನ ಸಮಕಾಲೀನ ಪೋಲಿಷ್ ಶೈಲಿಗೆ ತಕ್ಕಂತೆ ಇದರ ಮುಂಭಾಗವನ್ನು ಮರುರೂಪಿಸಿದರು. ರಷ್ಯನ್ನರು ರಷ್ಯನ್ ರಿವೈವಲ್ ಶೈಲಿಯಲ್ಲಿ ಕಟ್ಟಡವನ್ನು ಮರು-ಅಲಂಕರಿಸಿದರು, ಆದರೆ ಮೊದಲನೇ ಮಹಾಯುದ್ಧದ ಸಮಯದಲ್ಲಿ ಈ ಚರ್ಚ್ ಹಾನಿಗೊಳಗಾಯಿತು. 1930ರ ದಶಕದಲ್ಲಿ ಇದನ್ನು ಪೋಲಿಷರು ದುರಸ್ತಿ ಮಾಡಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಇದರ ಛಾವಣಿಯು ಮತ್ತೆ ನಾಶವಾಯಿತು. 20ನೇ ಶತಮಾನದ ನಂತರದ ಭಾಗದಲ್ಲಿ ಐದು ಚಿನ್ನದ ಗುಮ್ಮಟಗಳನ್ನು ಇದಕ್ಕೆ ಸೇರಿಸಲಾಯಿತು.

ಈ ಸಂಕೀರ್ಣದಲ್ಲಿನ ಅತ್ಯಂತ ಹಳೆಯ ಕಟ್ಟಡವೆಂದರೆ ಚಿಕಣಿ ಟ್ರಿನಿಟಿ ಚರ್ಚ್ (1465–75), ಇದು ವೊಲಿನಿಯಾದ ಮರದ ಚರ್ಚುಗಳ ಕಲ್ಲಿನ ಪ್ರತಿಕೃತಿಯಾಗಿದೆ. ಇದು ಕ್ಯಾಥೆಡ್ರಲ್‌ನ ದಕ್ಷಿಣಕ್ಕೆ ಪರ್ವತದ ಇಳಿಜಾರಿನಲ್ಲಿ, ಮಠದ ಗೋಡೆಗಳ ಹೊರಗೆ ನೆಲೆಗೊಂಡಿದೆ. 16ನೇ ಶತಮಾನದ ಭೋಜನಶಾಲೆಯೊಂದು (refectory) ಸೇಂಟ್ ಜೂಲಿಯಾನಾಗೆ ಸಮರ್ಪಿತವಾದ ಚರ್ಚ್ ಅನ್ನು ಹೊಂದಿದೆ; ಇದು ದೇಶದ ಅತ್ಯಂತ ಹಳೆಯ ರಿಫೆಕ್ಟರಿ ಚರ್ಚ್ ಆಗಿದೆ.

ಟ್ರಿನಿಟಿ ಚರ್ಚ್ ಮತ್ತು ಕ್ಯಾಥೆಡ್ರಲ್ ನಡುವೆ ಆರಂಭದಲ್ಲಿ ಸನ್ಯಾಸಿಗಳು ವಾಸಿಸುತ್ತಿದ್ದ ಗುಹೆಗಳಿಗೆ ಪ್ರವೇಶದ್ವಾರವಿದೆ. ಗುಹೆಗಳು ಮಧ್ಯದಲ್ಲಿ ಸೇರುವ ಎರಡು ಸಮಾನಾಂತರ ಮಾರ್ಗಗಳನ್ನು ಒಳಗೊಂಡಿವೆ.

ಸ್ಟೌರೋಪೇಜಿಯನ್ ಸ್ಥಾನಮಾನದ ಬಗ್ಗೆ

[ಬದಲಾಯಿಸಿ]

ಸ್ಟೌರೊಪೆಜಿಯನ್ ಎಂದರೆ ಕ್ರೈಸ್ತ ಧರ್ಮದಲ್ಲಿರುವ ಒಂದು ವಿಶೇಷ ಸ್ಥಾನಮಾನವುಳ್ಳ ಮಠ ಅಥವಾ ಚರ್ಚ್. ಸಾಮಾನ್ಯವಾಗಿ ಯಾವುದೇ ಚರ್ಚ್ ಅಥವಾ ಮಠವು ಆಯಾ ಪ್ರದೇಶದ 'ಸ್ಥಳೀಯ ಬಿಷಪ್' ಅವರ ಆಡಳಿತಕ್ಕೆ ಒಳಪಟ್ಟಿರುತ್ತದೆ. ಆದರೆ 'ಸ್ಟೌರೊಪೆಜಿಯನ್' ಮಠಗಳು ಸ್ಥಳೀಯ ಬಿಷಪ್‌ಗೆ ಒಳಪಡುವುದಿಲ್ಲ. ಬದಲಾಗಿ, ಇವು ನೇರವಾಗಿ ಚರ್ಚ್‌ನ ಅತ್ಯುನ್ನತ ಧರ್ಮಗುರು (ಪ್ರೈಮೇಟ್) ಅಥವಾ ಪವಿತ್ರ ಮಂಡಳಿಯ ನೇರ ನಿಯಂತ್ರಣದಲ್ಲಿರುತ್ತವೆ. ಅತ್ಯಂತ ಹಳೆಯ, ಐತಿಹಾಸಿಕ ಅಥವಾ ಸಾಂಸ್ಕೃತಿಕ ಪ್ರಾಮುಖ್ಯತೆ ಇರುವ ಹಾಗೂ ಅಪಾರ ಭಕ್ತರನ್ನು ಹೊಂದಿರುವ ವಿಶೇಷ ಮಠಗಳಿಗೆ ಮಾತ್ರ ಈ ಉನ್ನತ ಸ್ಥಾನವನ್ನು ನೀಡಲಾಗುತ್ತದೆ. ಸ್ಥಳೀಯ ಚರ್ಚ್ ರಾಜಕೀಯ ಅಥವಾ ಆಡಳಿತಾತ್ಮಕ ಒತ್ತಡಗಳಿಂದ ಈ ಪವಿತ್ರ ಸ್ಥಳಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಇದು ಗ್ರೀಕ್ ಭಾಷೆಯ 'ಸ್ಟಾವ್ರೋಸ್' ಅಂದರೆ ಶಿಲುಬೆ ಮತ್ತು 'ಪೆಗ್ನುಮಿ' ಅಂದರೆ ನೆಡುವುದು ಅಥವಾ ದೃಢಪಡಿಸುವುದು ಎಂಬ ಪದಗಳಿಂದ ಬಂದಿದೆ. ಹಳೆಯ ಬೈಜಾಂಟೈನ್ ಸಂಪ್ರದಾಯದ ಪ್ರಕಾರ, ಇಂತಹ ವಿಶೇಷ ಮಠ ಅಥವಾ ಚರ್ಚ್‌ಗಳನ್ನು ಕಟ್ಟುವಾಗ, ಅದರ ಅಡಿಪಾಯದಲ್ಲಿ ಶಿಲುಬೆಯನ್ನು ನೆಡಲು ಚರ್ಚ್‌ನ ಮಹಾ ಗುರುಗಳಾದ 'ಪೇಟ್ರಿಯಾರ್ಕ್' ಅವರನ್ನೇ ಖುದ್ದಾಗಿ ಕರೆಯಲಾಗುತ್ತಿತ್ತು. ಹೀಗೆ ಮಹಾಗುರುಗಳೇ ನೇರವಾಗಿ ಶಿಲುಬೆ ನೆಟ್ಟು ಸ್ಥಾಪಿಸುತ್ತಿದ್ದ ಕಾರಣ ಇದಕ್ಕೆ ಆ ಹೆಸರು ಬಂದಿದೆ.

ಉಲ್ಲೇಖ

[ಬದಲಾಯಿಸಿ]
  1. Nikolsky A.V. Монастыри. Энциклопедический словарь. Moscow Patriarchate Publishers, 2000.
  2. Lutsk Art Gallery Archived March 10, 2007, ವೇಬ್ಯಾಕ್ ಮೆಷಿನ್ ನಲ್ಲಿ.
  3. Zymne: the monastery dug out with shovels Archived March 10, 2007[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.