ಜೈವಿಕ ಅನಿಲ

ಜೈವಿಕ ಅನಿಲವು ಕೃಷಿ ತ್ಯಾಜ್ಯ, ಗೊಬ್ಬರ, ಮುನಿಸಿಪಾಲಿಟಿ ತ್ಯಾಜ್ಯ, ಸಸ್ಯ ವಸ್ತು, ರೊಚ್ಚು, ಹಸಿರು ತ್ಯಾಜ್ಯ, ತ್ಯಾಜ್ಯ ಜಲ, ಮತ್ತು ಆಹಾರ ತ್ಯಾಜ್ಯದಂತಹ ಕಚ್ಚಾವಸ್ತುಗಳಿಂದ ಉತ್ಪಾದಿಸಲಾದ ಅನಿಲರೂಪದ ನವೀಕರಿಸಬಲ್ಲ ಇಂಧನ ಮೂಲ.[೧]
ಗೊಬ್ಬರದ ಅನಿಲಸ್ಥಾವರ
[ಬದಲಾಯಿಸಿ]ಗೊಬ್ಬರದ ಅನಿಲಸ್ಥಾವರ ಎಂದರೆ ಸಗಣಿ, ಮಲ, ಮೂತ್ರ, ಮೃತ ಪ್ರಾಣಿಗಳ ಮಾಂಸ, ಕೃಷಿಯಿಂದ ದೊರೆಯುವ ಅನುಪಯುಕ್ತ ವಸ್ತುಗಳು ಇವೇ ಮುಂತಾದವನ್ನು ಉಪಯೋಗಿಸಿಕೊಂಡು ಅನಿಲೇಂಧನವನ್ನು ಉತ್ಪನ್ನ ಮಾಡುವ ಸಾಧನ (ಮೆನ್ಯೂರ್ ಗ್ಯಾಸ್ ಪ್ಲಾಂಟ್; ಕೌಡಂಗ್ ಗ್ಯಾಸ್ ಪ್ಲಾಂಟ್). ಇದರಲ್ಲಿ ಉಪೋತ್ಪನ್ನವಾಗಿ ಉತ್ತಮ ದರ್ಜೆಯ ಗೊಬ್ಬರ ಲಭಿಸುತ್ತದೆ.
ತತ್ತ್ವ
[ಬದಲಾಯಿಸಿ]ಈ ಸ್ಥಾವರದ (ಪ್ಲಾಂಟ್) ಹಿನ್ನಲೆಯ ತತ್ತ್ವವಿಷ್ಟು: ಸೆಗಣಿ, ಗಂಜಲ, ಕೊಳೆಯಬಲ್ಲ ಇತರ ಪದಾರ್ಥಗಳ ಚಿಕ್ಕ ತುಣುಕುಗಳು ಇವೆಲ್ಲವನ್ನೂ ಮಡ್ಡಿಯಂಥ (ಸ್ಲರ್ರಿ), ತೀರ ಮಂದವೂ ಅಲ್ಲದೆ ತೀರ ತೆಳುವೂ ಅಲ್ಲದ (ಸಾಧಾರಣವಾಗಿ 1 ಟಿನ್ ಸೆಗಣಿಗೆ 1 ಟಿನ್ ನೀರು ಸೇರಿಸಿ), ಮಿಶ್ರಣ ಮಾಡಿ ದೊಡ್ಡದಾದ ಬಾವಿಯಲ್ಲಿ ಸಂಗ್ರಹಿಸಿದಾಗ ಅದು ಕೊಳೆಯತೊಡಗುತ್ತದೆ; ಈ ಪ್ರಕ್ರಿಯೆಯಲ್ಲಿ ಅದರಿಂದ ಮೀಥೇನ್ ಅನಿಲ ಹೊರಹೊಮ್ಮುತ್ತದೆ. ಇದೇ ಗೊಬ್ಬರದ ಅನಿಲ. ಇದನ್ನು ಸಮರ್ಪಕವಾಗಿ ಸಂಗ್ರಹಿಸಿ, ದಾಸ್ತಾನಿಸಿ, ಬೇಕಾದಾಗ ಅಡುಗೆಗೆ ಉರುವಲಾಗಿ ಉಪಯೋಗಿಸಿಕೊಳ್ಳಬಹುದು.
ರಚನೆ
[ಬದಲಾಯಿಸಿ]
ಚಿತ್ರದಲ್ಲಿ ಈ ಸ್ಥಾವರದ ರೇಖಾಚಿತ್ರವನ್ನು ಕೊಡಬಹುದು. ಇದರ ಭಾಗಗಳ ವಿವರಗಳು ಹೀಗಿವೆ: A ಮಡ್ಡಿ ಮಿಶ್ರಣ ಮಾಡುವ ತೊಟ್ಟಿ. B ಇದರ ತಳದಲ್ಲಿರುವ ತೆರೆಕವಾಟ. ಇದರ ಮೂಲಕ ಸಾಗಿದ BCD ಕೊಳವೆ D ಎಂಬಲ್ಲಿ ತೆರೆದಿರುವುದು. E ಯು 8' ವ್ಯಾಸ 16' ಆಳ ಇರುವ ಒಂದು ಸಿಮೆಂಟ್ ಕಾಂಕ್ರೀಟ್ ಬಾವಿ. ಇದರ ಹೆಸರು ಪಾಚಕ (ಡೈಜೆಸ್ಟರ್).[೨][೩] FG ಮಟ್ಟದಲ್ಲಿ, ಪಾಚಕದೊಳಗೆ, ಸುತ್ತಲೂ 10' ಅಗಲದ ಒಂದು ಚಡಿ (ಮಾರ್ಗ) ಉಂಟು. H ಎನ್ನುವ ಭಾಗದ ಹೆಸರು ಅನಿಲಧಾರಕ (ಗ್ಯಾಸ್ ಟ್ಯಾಂಕ್). 7½ ವ್ಯಾಸ 4' ಎತ್ತರವಿರುವ ಲೋಹನಿರ್ಮಿತ (ಸಾಧಾರಣವಾಗಿ ಕಬ್ಬಿಣದ ಹಾಳೆ) ಪೀಪಾಯಿಯಿದು. ಇದರ ಮೇಲು ಭಾಗ ಪೂರ್ಣ ಮುಚ್ಚಿದೆ; ಕೆಳಭಾಗ ತೆರೆದಿದೆ. ಕವುಚಿ ಹಾಕಿದ ತಪ್ಪಲೆಯಂತಿರುವ ಈ ಪೀಪಾಯಿಯ ಶಿಖರದಲ್ಲಿ IJ ಎನ್ನುವ ಕೊಳವೆಯನ್ನು ಬೆಸುಗೆ ಹಾಕಿದೆ. ಅನಿಲಧಾರಕ (H) IJ ಕೊಳವೆಯ ನೇರ ಮೇಲೆ ಕೆಳಗೆ ಚಲಿಸಬಲ್ಲುದು; ಆದರೆ FG ಚಡಿಗಿಂತ ಕೆಳಗೆ ಸರಿಯಲಾರದು. KLM ಎಂಬುದು ಅನಿಲಧಾರಕ ಮೇಲುಮೈಗೆ ಜೋಡಿಸಿದ ಅನಿಲ ಸಾಗಣೆ ಕೊಳವೆ. L ಎಂಬಲ್ಲಿರುವ ತಿರುಗಣಿಯನ್ನು ಸೂಕ್ತವಾಗಿ ತಿರುಗಿಸಿ ಧಾರಕದಲ್ಲಿ (H) ಸಂಗೃಹೀತವಾದ ಅನಿಲವನ್ನು ಉಪಯೋಗಕ್ಕೆ ಹಾಳತವಾಗಿ ಪಡೆಯಬಹುದು. M ನಿಂದ ಮುಂದಕ್ಕೆ ಒಳಕು ನಳಿಗೆಯ (ಹೋಸ್ ಪೈಪ್) ಮೂಲಕ ಅನಿಲ ಸಾಗುತ್ತದೆ. ಪಾಚಕದ ನೆಲಮಟ್ಟದಲ್ಲಿ N ಎಂಬಲ್ಲಿರುವ ತೆರೆಕಾಲುವೆಯ ಮೂಲಕ ಪಾಚಕದೊಳಗಿನ ಮಡ್ಡಿ ಹೊರ ಹರಿಯಬಲ್ಲುದು. ಇದನ್ನು ಗೊಬ್ಬರ ಸಂಗ್ರಹಣ ತೊಟ್ಟಿ O ನಲ್ಲಿ ಸಂಗ್ರಹಿಸಿ ಅಲ್ಲಿಂದ ಬೇಕಾದಂತೆ ಒಯ್ಯುತ್ತಾರೆ.
ಕ್ರಿಯಾ ವಿಧಾನ
[ಬದಲಾಯಿಸಿ]ಮಡ್ಡಿ ಮಿಶ್ರಣ ತೊಟ್ಟಿ A ಯಲ್ಲಿ ಸೆಗಣಿ ಮತ್ತು ಗಂಜಲದ ಮಡ್ಡಿಯನ್ನು (ಘನವಸ್ತು ಮತ್ತು ದ್ರವವಸ್ತು ಪ್ರಮಾಣ 1:1 ಇರುವಂತೆ) ತಯಾರಿಸಿ BCD ಕೊಳವೆಯ ಮೂಲಕ ಪಾಚಕದ ತಳಕ್ಕೆ ಹೊಯ್ಯಬೇಕು. ಪಾಚಕದಲ್ಲಿ ಮಡ್ಡಿಯ ಮಟ್ಟ ನೆಲಮಟ್ಟದವರೆಗೆ (N) ಬರುವವರೆಗೂ ಇದನ್ನು ಮುಂದುವರಿಸಬೇಕು. ಆಗ, FG ಚಡಿಯ ಮೇಲೆ ವಿರಮಿಸುತ್ತಿದ್ದ ಅನಿಲಧಾರಕ ನಿಧಾನವಾಗಿ ಮಡ್ಡಿಯಲ್ಲಿ ತೇಲಲು ತೊಡಗುತ್ತದೆ. ಪಾಚಕ ಭರ್ತಿ ಆದಾಗ ಮಡ್ಡಿಯಲ್ಲಿ ಮೀಥೇನ್ ಏಕಾಣು ಜೀವಿಗಳು ರಾಸಾಯನಿಕ ಕ್ರಿಯೆಯನ್ನು ಆರಂಭಿಸುತ್ತವೆ. ಆಗ ಮಡ್ಡಿ ಮಜ್ಜಿಗೆ ಇಲ್ಲವೇ ದೋಸೆ ಹಿಟ್ಟು ಹುಳಿ ಬರುವ ರೀತಿಯಲ್ಲಿ ಹುದುಗುತ್ತದೆ. ಇದರ ಪರಿಣಾಮವಾಗಿ ಮೀಥೇನ್ ಅನಿಲ ಉದ್ಭವಿಸಿ ಮಡ್ಡಿಯ ಮೇಲು ಮಟ್ಟದಿಂದ ಗುಳ್ಳೆಗುಳ್ಳೆಯಾಗಿ ಬಿಡುಗಡೆಗೊಂಡು ಧಾರಕದ ಒಳಗೆ ಸಂಗ್ರಹಗೊಳ್ಳುವುದು. ಧಾರಕದ ಒಳಗಿನ ಒತ್ತಡ ಕ್ರಮೇಣ ಹೆಚ್ಚಿ ಅದು ಮಡ್ಡಿಯ ಮೇಲುಮಟ್ಟವನ್ನು ಕೆಳಮುಖವಾಗಿ ಅಮುಕುವುದರಿಂದ ಧಾರಕ ಏರಲಾರಂಭಿಸುತ್ತದೆ. ಧಾರಕದೊಳಗಿನ ಒತ್ತಡ ಅವಧಿಕ ಸ್ಥಿತಿಗೆ ಬಂದಾಗ ಧಾರಕವು ಮಡ್ಡಿಯ ಮೇಲುಮಟ್ಟದ ಮೇಲೆ ತೇಲುತ್ತಿರುವುದು. ಇದೇ ಧಾರಕ ತುಂಬಿಕೊಂಡಿದೆ ಎನ್ನುವುದರ ಸೂಚನೆ. ಮಡ್ಡಿಯಿಂದ ಮತ್ತೆಯೂ ಬಿಡುಗಡೆ ಆಗುವ ಅನಿಲಕ್ಕೆ ಧಾರಕದೊಳಗೆ ಪ್ರವೇಶಿಸಲು ಆಗುವುದಿಲ್ಲ; ಅದು ಧಾರಕಕ್ಕೂ, ಪಾಚಕದ ಅಂಚಿಗೂ ನಡುವೆ ಸುತ್ತಲೂ ಇರುವ ಸುಮಾರು 3" ಅಗಲದ ತೆರಪಿನಲ್ಲಿ ಬಿಡುಗಡೆಗೊಂಡು ವಾಯುಮಂಡಲವನ್ನು ಸೇರುತ್ತದೆ. ಆದ್ದರಿಂದ ಅನಿಲದ ಅತಿ ಇಲ್ಲವೇ ತೀವ್ರ ಉತ್ಪಾದನೆಯಿಂದ ಧಾರಕ ಆಸ್ಪೋಟಿಸುವ ಭಯ ಕಿಂಚಿತ್ತೂ ಇಲ್ಲ. ಧಾರಕ ತುಂಬಿರುವಾಗ L ನಲ್ಲಿರುವ ತಿರುಗಣಿಯನ್ನು ಸೂಕ್ತವಾಗಿ ತಿರುಗಿಸಿದಾಗ ಅನಿಲ LM ದಿಶೆಯಲ್ಲಿ ಹರಿಯುತ್ತದೆ. ಮುಂದೆ ಅದನ್ನು ವಿಶಿಷ್ಟವಾದ ಅನಿಲ ಒಲೆಗಳ ನೆರವಿನಿಂದ ಉರುವಲಾಗಿ ಉರಿಸಿ ಅಡುಗೆ ಮುಂತಾದ ಕೆಲಸಗಳಿಗೆ ಉಪಯೋಗಿಸಬಹುದು; ಇಲ್ಲವೇ ಈ ಅನಿಲವನ್ನು ಉರುಳೆಗಳಲ್ಲಿ ಸಂಗ್ರಹಿಸಿ ಇಡಬಹುದು. ಧಾರಕದೊಳಗಿನ ಅನಿಲ ಕಡಿಮೆ ಆದಂತೆ ಒತ್ತಡ ತಗ್ಗಿ ಧಾರಕ ಇಳಿಯ ತೊಡಗುತ್ತದೆ. ಪಾಚಕದೊಳಗಿನ ಮಡ್ಡಿಯಿಂದ ಅನಿಲ ಬಿಡುಗಡೆಯಾಗುವಾಗ ಮಡ್ಡಿ ಹದ ಪಾಕವಾಗಿ ಉತ್ತಮ ಗೊಬ್ಬರವಾಗುವುದು. ಅಲ್ಲಿಂದ ಮುಂದಕ್ಕೆ ಅದು ಅನಿಲವನ್ನು ಉತ್ಪಾದಿಸಲಾರದು. ಪ್ರತಿ ದಿವಸವೂ ತೂಕವಾದ ಹೊಸ ಮಡ್ಡಿ ಪಾಚಕದ ತಳವನ್ನು (D) ಪ್ರವೇಶಿಸುವಂತೆ ಉಪಯೋಗಿಸಲ್ಪಟ್ಟ ಹಗುರಾದ ಹಳೆ ಮಡ್ಡಿ ಮೇಲುಮಟ್ಟದಿಂದ (N) ಹೊರಕ್ಕೆ ತಳ್ಳಲ್ಪಡುತ್ತದೆ. ಇದು ಗೊಬ್ಬರ ಸಂಗ್ರಹಣ ತೊಟ್ಟಿಯಲ್ಲಿ (O) ಶೇಖರವಾಗುವುದು. ಇದನ್ನು ನೇರವಾಗಿ ಹೊತ್ತೋ ಕಾಲುವೆಗಳ ಮೂಲಕವೋ ವ್ಯವಸಾಯಕ್ಕೆ ಉಪಯೋಗಿಸಬಹುದು; ಒಣಗಿಸಿ ಒಣಗೊಬ್ಬರವಾಗಿ ಸಹ ಪರಿವರ್ತಿಸಬಹುದು.
ಉಪಯೋಗಗಳು
[ಬದಲಾಯಿಸಿ]ಗೊಬ್ಬರದ ಅನಿಲಸ್ಥಾವರ ತೀರ ಮಿತವ್ಯಯದಿಂದ ದ್ವಿವಿಧ ಸೌಕರ್ಯಗಳನ್ನು ಒದಗಿಸುವ ಒಂದು ಯಂತ್ರ ವಿನ್ಯಾಸ. ಇದರ ರಚನೆ ಮತ್ತು ಉಪಯೋಗ ತೀರ ಸರಳ. ಇಂದಿಗೂ ಹಳ್ಳಿ ಪಟ್ಟಣಗಳಲ್ಲಿ ಸಾಮಾನ್ಯ ಜನತೆಗೆ ಉರುವಲಿನ ಮುಖ್ಯಾಕರಗಳಲ್ಲಿ ಸೆಗಣಿ ಒಂದು. ಇದನ್ನು ಉಮಿಯೊಡನೆ ಕಲಸಿ ತಟ್ಟಿ ತಯಾರಿಸಿದ ಬೆರಣಿ ಬಹುಜನರ ಉರುವಲು. ಈ ಕ್ರಮದಿಂದ ಗೊಬ್ಬರ ಅಷ್ಟು ಪರಿಣಾಮದಲ್ಲಿ ನಿರ್ನಾಮವಾದಂತೆಯೇ. ಅನಿಲಸ್ಥಾವರವಾದರೋ ಶಾಖೋತ್ಪನ್ನಕ್ಕೆ ಬೇಕಾಗುವ ಉರುವಲನ್ನು (ಅನಿಲ) ಪೂರೈಸುವುದರ ಜೊತೆಗೆ ಸಾಂಪ್ರದಾಯಿಕ ವಿಧಾನದ ಗುಂಡಿಗೊಬ್ಬರಕ್ಕಿಂತಲೂ ಉತ್ತಮ ದರ್ಜೆಯ ಹದ ಬಂದ ಗೊಬ್ಬರವನ್ನು ಸಹ ಒದಗಿಸುತ್ತದೆ. ಈ ಗೊಬ್ಬರದಲ್ಲಿನ ಸಾರಜನಕ ಒಳಪಿಡಿ 2%. ಇದು ಸಾಂಪ್ರದಾಯಿಕ ಗೊಬ್ಬರದಲ್ಲಿರುವುದಕ್ಕಿಂತ ಎರಡು ಪಟ್ಟು ಜಾಸ್ತಿ ಎಂದು ಪರೀಕ್ಷೆಯಿಂದ ಗೊತ್ತಾಗಿದೆ. ಇದರ ಜೊತೆಗೆ ಫಾಸ್ಫೇಟ್ ಮತ್ತು ಪೊಟಾಷ್ ಸಹ ಇರುವುವು. ಸ್ಥಾವರದಲ್ಲಿ ಸೆಗಣಿ ಮುಂತಾದವನ್ನು ಬಳಸಿದಾಗ ಯಾವ ವಿಧವಾದ ದುರ್ವಾಸನೆಯೂ ಪಸರಿಸುವುದಿಲ್ಲ. ಅಲ್ಲದೇ ಇದರಲ್ಲಿ ಉತ್ಪಾದನೆಗೊಳ್ಳುವ ಅನಿಲ ಮಸಿ ಅಥವಾ ಸೌದೆ ಹೊಗೆಯಂತೆ ವಿಷಕಾರಿ ಅಲ್ಲ. ಇದು ಕ್ಷಿಪ್ರಾಸ್ಫೋಟಕ ಅನಿಲವಲ್ಲದಿರುವುದರಿಂದ ಇದನ್ನು ನಿರ್ಭಯವಾಗಿ ಬಳಸಬಹುದು.
ಒಂದು ಸಿಂಧೀ ಹಸು ಅಥವಾ ಎತ್ತು ದಿವಸವೊಂದಕ್ಕೆ ಸುಮಾರು 20 ಪೌಂಡುಗಳಷ್ಟು ಸೆಗಣಿ ಹಾಕುವುದೆಂದೂ, ಇದರಿಂದ 10 ಘ.ಅ. ಗಳಷ್ಟು ಅನಿಲವನ್ನು ಪಡೆಯಬಹುದೆಂದೂ ಗಣನೆಗಳಿಂದ ತಿಳಿದುಬಂದಿದೆ. ಐವರು ಸದಸ್ಯರಿರುವ ಒಂದು ಮಿತಕುಟುಂಬದ ದೈನಂದಿನ ಉಪಯೋಗಕ್ಕೆ ಮೂರು ಬಲವಾದ ಜಾನುವಾರುಗಳು ಇಲ್ಲವೇ ಐದು ಸಾಧಾರಣ ಗಾತ್ರದ ಜಾನುವಾರುಗಳು ಹಾಕುವ ಸೆಗಣಿಯಿಂದ ದೊರೆಯುವ ಅನಿಲ ಸಾಕೆಂದು ಪ್ರತ್ಯಕ್ಷ ಪ್ರಯೋಗಗಳಿಂದ ಸಿದ್ಧವಾಗಿದೆ. ಒಂದು ಹಸು ೩ ಕಿಲೊವಾಟ್ ಹವರ್ನಷ್ಟು ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವಷ್ಟು ಗೊಬ್ಬರವನ್ನು ಒಂದು ದಿನದಲ್ಲಿ ಉತ್ಪಾದಿಸುತ್ತದೆ.[೪] ಇಂಥ ಒಂದು ಸ್ಥಾವರದ ನಿರ್ಮಾಣ 1973ರ ದರಗಳಲ್ಲಿ ಸುಮಾರು ರೂ. 2,000 ಆಗಿತ್ತು. ಒಮ್ಮೆಗೆ ಇದನ್ನು ರಚಿಸಿತೋ ಮತ್ತೆ ದಿನವಹಿ ಮಡ್ಡಿಯನ್ನು ಪೂರೈಸುವುದು ಮಾತ್ರ ಉಳಿದ ಕೆಲಸ.
ಉಲ್ಲೇಖಗಳು
[ಬದಲಾಯಿಸಿ]- ↑ National Non-Food Crops Centre. "NNFCC Renewable Fuels and Energy Factsheet: Anaerobic Digestion" Archived 2018-07-10 ವೇಬ್ಯಾಕ್ ಮೆಷಿನ್ ನಲ್ಲಿ., Retrieved on 2011-02-16
- ↑ "Do You Know ... What Is a Digester?". Dairy Management Inc. September 30, 2019. Archived from the original on February 1, 2024.
- ↑ He, Xiaoqin; Nasiruddin, Sayed Mohammad; Zhou, Xiaoqin; Li, Zifu; Mang, Heinz-Peter; Ryndin, Roman; Kabir, Humayun; Uddin, Sayed Mohammad Nazim (2023-12-21). "Peering into a Simplified Digestor for Households: Performance, Cost and Carbon-Neutral Niche". Water (in ಇಂಗ್ಲಿಷ್). 16 (1): 36. doi:10.3390/w16010036. ISSN 2073-4441. Archived from the original on 2024-02-01. Retrieved 2024-02-01.
- ↑ State Energy Conservation Office (Texas). "Biomass Energy: Manure for Fuel." State Energy Conservation Office (Texas). State of Texas, 23 April 2009. Web. 3 October 2009.
ಹೊರಗಿನ ಕೊಂಡಿಗಳು
[ಬದಲಾಯಿಸಿ]- European Biogas Association
- Biogas Portal on Energypedia
- American Biogas Council
- An Introduction to Biogas, University of Adelaide
