ಜೈನ ಧರ್ಮದ ನೀತಿತತ್ವಗಳು

ವಿಕಿಪೀಡಿಯ ಇಂದ
Jump to navigation Jump to search

ಜೈನ ನೈತಿಕ ನಿಯಮಾವಳಿಯು ಎರಡು ಧರ್ಮಗಳನ್ನು ಅಥವಾ ನಡತೆಯ ನಿಯಮಗಳನ್ನು ವಿಧಿಸುತ್ತದೆ. ಒಂದು ಸಂನ್ಯಾಸಿಗಳಾಗಲು ಬಯಸುವವರಿಗೆ ಮತ್ತು ಇನ್ನೊಂದು ಶ್ರಾವಕರಿಗೆ (ಸಂಸಾರಿಗಳು). ಐದು ಮೂಲಭೂತ ವ್ರತಗಳನ್ನು ಎರಡೂ ಉಪಾಸಕರಿಗೆ ವಿಧಿಸಲಾಗಿದೆ. ಈ ವ್ರತಗಳನ್ನು ಶ್ರಾವಕರು ಭಾಗಶಃ ಪಾಲಿಸುತ್ತಾರೆ ಮತ್ತು ಇವನ್ನು ಅಣುವ್ರತಗಳು (ಸಣ್ಣ ವ್ರತಗಳು) ಎಂದು ಕರೆಯಲಾಗುತ್ತದೆ. ಸಂನ್ಯಾಸಿಗಳು ಈ ಐದು ವ್ರತಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಮತ್ತು ಹಾಗಾಗಿ ಸಂಪೂರ್ಣ ಇಂದ್ರಿಯನಿಗ್ರಹವನ್ನು ಪಾಲಿಸುತ್ತಾರೆ. ಈ ಐದು ವ್ರತಗಳು ಯಾವುವೆಂದರೆ:-[೧]

1. ಅಹಿಂಸೆ: ಸುಖವನ್ನು ಅಪೇಕ್ಷಿಸುವಾಗ ಪ್ರಮಾದದಿಂದಾಗಲಿ ಇತರ ಕಾರಣಗಳಿಂದಾಗಲಿ ಶರೀರದಿಂದ ಆತ್ಮವನ್ನು ಪ್ರತ್ಯೇಕಿಸುವುದಕ್ಕೆ ಹಿಂಸೆ ಎಂದು ಹೆಸರು. ಅಂಥ ಹಿಂಸೆಯನ್ನು ಮಾಡದಿರುವುದಕ್ಕೆ ಅಹಿಂಸೆ ಎಂದು ಹೆಸರು. ಆರಂಭಹಿಂಸೆ. ಉದ್ಯೋಗಹಿಂಸೆ, ವಿರೋಧಿಹಿಂಸೆ, ಸಂಕಲ್ಪಹಿಂಸೆ ಎಂದು ಹಿಂಸೆ ನಾಲ್ಕು ಪ್ರಕಾರವಾಗಿದೆ. ಅವುಗಳಲ್ಲಿ ಆರಂಭಹಿಂಸೆ, ಉದ್ಯೋಗಹಿಂಸೆಗಳನ್ನು ಗೃಹಸ್ಥನಾದವನು ಮಾಡದೆ ಜೀವಿಸುವುದು ಕಷ್ಟಸಾಧತ್ಯೆ. ನಮ್ಮನ್ನು ಕೊಲ್ಲಲು ಬಂದವರೊಡನೆ ಹೋರಾಡಿ ಆತ್ಮರಕ್ಷಣೆ ಮಾಡಿಕೊಳ್ಳುವುದು ವಿರೋಧಿಹಿಂಸೆ; ಸಂಕಲ್ಪಮಾಡಿ ಪ್ರಾಣಿಗಳನ್ನು ಕೊಲ್ಲುವುದು ಸಂಕಲ್ಪಹಿಂಸೆ. ಹಿಂಸೆಯಿಂದ ಪ್ರಾಣಿಗಳಿಗೆ ಬಹಳ ದುಃಖವಾಗುವುದರಿಂದ ಅಹಿಂಸೆಯನ್ನು ವ್ರತವೆಂಬಂತೆ ಆಚರಿಸಬೇಕು.

2. ಸತ್ಯ: ಸುಳ್ಳನ್ನು ಎಂದೂ ಹೇಳಬಾರದು; ಅದರಿಂದ ಅನೇಕ ಅನರ್ಥಗಳು ಸಂಭವಿಸುತ್ತವೆ. ಸತ್ಯವನ್ನು ಹೇಳುವುದರಿಂದ ಇಹದಲ್ಲಿ ಕೀರ್ತಿಯೂ ಪರದಲ್ಲಿ ಸುಖವೂ ಪ್ರಾಪ್ತವಾಗುತ್ತದೆ.

3. ಅಸ್ತೇಯ: ತನಗೆ ಸೇರದುದನ್ನು ಮೋಸದಿಂದಾಗಲಿ ಬಲತ್ಕಾರವಾಗಿಯಾಗಲಿ ತೆಗೆದುಕೊಳ್ಳುವುದಕ್ಕೆ ಕಳ್ಳತನವೆಂದು ಹೆಸರು. ಪರರ ವಸ್ತುಗಳನ್ನು ಮಣ್ಣಿನ ಹೆಂಟೆಗೆ ಸಮಾನವಾಗಿ ತಿಳಿದು ಅವುಗಳನ್ನು ತೆಗೆದುಕೊಳ್ಳದಿರುವುದಕ್ಕೆ ಅಸ್ತೇಯವೆಂದು ಹೆಸರು.

4. ಬ್ರಹ್ಮಚರ್ಯ: ಪರಸ್ತ್ರೀಯರನ್ನು ಮನಸ್ಸು ವಚನ ಕಾಯಗಳಿಂದ ಅಪೇಕ್ಷಿಸದೆ ಇರುವುದಕ್ಕೆ ಬ್ರಹ್ಮಚರ್ಯವೆಂದು ಹೆಸರು.

5. ಅಪರಿಗ್ರಹ: ಲೋಕದಲ್ಲಿರುವ ಸಮಸ್ತ ಭೋಗೋಪಭೋಗಗಳನ್ನು ನೋಡಿ ಜೀವನು ಮೋಹಿಸುತ್ತಾನೆ. ಮೋಹ ಆಸೆಗೆ ಮೂಲವಾಗುತ್ತದೆ. ಆಗ ದಾನವಾಗಿಯೋ ಬೇರೆ ಇನ್ನಾವ ವಿಧದಲ್ಲೋ ಮನುಷ್ಯ ಅನೇಕಾನೇಕ ವಸ್ತುಗಳನ್ನು ಸ್ವೀಕರಿಸುತ್ತಾನೆ. ಹಾಗೆ ಮಾಡದೆ ತನಗೆ ಅಗತ್ಯವಿದ್ದಷ್ಟು ಮಾತ್ರ ಪರಿಗ್ರಹಿಸಿ ನಿಯಮಕ್ಕನುಸಾರವಾಗಿ ಜೀವಿಸುವುದು ಈ ವ್ರತದ ಕಟ್ಟಳೆ. ಸಂಪೂರ್ಣವಾಗಿ ಸಂಸಾರ, ಶಾರೀರಕ ಭೋಗೋಪಭೋಗಗಳನ್ನು ತ್ಯಜಿಸಿದ ಮುನಿಗಳೂ ಪಂಚಮಹಾವತ್ರಗಳನ್ನು ಆಚರಿಸುವರು

ಜೈನ ಪಠ್ಯ ಪುರುಷಾರ್ಥಸಿದ್ಧ್ಯುಪಾಯದ ಪ್ರಕಾರ[ಬದಲಾಯಿಸಿ]

ಈ ಎಲ್ಲ ಉಪವಿಭಾಗಗಳು (ಗಾಯಮಾಡುವಿಕೆ, ಅಸತ್ಯ, ಕದಿಯುವುದು, ಶೀಲವಿಲ್ಲದಿರುವುದು ಮತ್ತು ಬಾಂಧವ್ಯ) ಹಿಂಸೆಗಳು ಏಕೆಂದರೆ ಇವುಗಳಲ್ಲಿ ಪಾಲ್ಗೊಳ್ಳುವಿಕೆ ಆತ್ಮದ ಪವಿತ್ರ ಸಹಜಗುಣವನ್ನು ಕೆಡಿಸುತ್ತದೆ. ಕೇವಲ ಶಿಷ್ಯನಿಗೆ ದೃಷ್ಟಾಂತಗಳ ಮೂಲಕ ತಿಳಿಸಿಕೊಡಲು ಅಸತ್ಯ ಇತ್ಯಾದಿಗಳನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸಲಾಗಿದೆ.

—ಪುರುಷಾರ್ಥಸಿದ್ಧ್ಯುಪಾಯ (೪೨)

ಈ ಐದು ಮುಖ್ಯ ವ್ರತಗಳಲ್ಲದೆ, ಸಂಸಾರಿಯು ಏಳು ಪೂರಕ ವ್ರತಗಳು (ಶೀಲಗಳು) ಮತ್ತು ಕೊನೆಯ ಸಲ್ಲೇಖನ ವ್ರತವನ್ನು ಪಾಲಿಸುವುದನ್ನು ನಿರೀಕ್ಷಿಸಲಾಗುತ್ತದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. ,ವಿಶ್ವಶಾಂತಿಯ ಮೂಲಪುರುಷ ಮಹಾವೀರ ,udayavani.com
  2. Jainism, bbc.co.uk/religion
Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: