ವಿಷಯಕ್ಕೆ ಹೋಗು

ಜಿ. ಜನಾರ್ದನ ರೆಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಳಿ ಜನಾರ್ದನ ರೆಡ್ಡಿ
ಕರ್ನಾಟಕ ವಿಧಾನಸಭೆಯ ಸದಸ್ಯರು
ಅಧಿಕಾರದಲ್ಲಿ
13 ಮೇ 2023
Preceded byಪರಣ್ಣ ಮುನವಳ್ಳಿ
Succeeded byನಿರ್ಧರಿಸಬೇಕಿದೆ
Constituencyಗಂಗಾವತಿ
ಕರ್ನಾಟಕ ಪ್ರವಾಸೋದ್ಯಮ, ಮೂಲಸೌಕರ್ಯ ಅಭಿವೃದ್ಧಿ ಸಚಿವರು
ಅಧಿಕಾರದಲ್ಲಿ
30 ಮೇ 2008 – 3 ಆಗಸ್ಟ್ 2011
Preceded byಬಿ. ಶ್ರೀರಾಮುಲು
Succeeded byಆನಂದ್ ಸಿಂಗ್
Constituencyಬಳ್ಳಾರಿ
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು
ಅಧಿಕಾರದಲ್ಲಿ
18 ಜೂನ್ 2006 – ಮೇ 2011
Constituencyಕರ್ನಾಟಕ ವಿಧಾನ ಪರಿಷತ್ತು
ವೈಯಕ್ತಿಕ ವಿವರಗಳು
ಜನನ (1967-01-11) 11 January 1967 (age 59)
ಪಕ್ಷಭಾರತೀಯ ಜನತಾ ಪಾರ್ಟಿ
ಜೀವನಸಂಗಾತಿಗಾಳಿ ಅರುಣಾ ಲಕ್ಷ್ಮಿ[೧][೨]
ಮಕ್ಕಳುಬ್ರಹ್ಮಿಣಿ,[೩] ಕಿರೀಟಿ[೪]
ಬಂಧುಗಳು
ಉದ್ಯೋಗಉದ್ಯಮಿ (ಜಿಜೆಆರ್ ಗ್ರೂಪ್ ಸಿಎಂಡಿ)
ಜಾಲತಾಣವೆಬ್‌ಸೈಟ್

ಗಾಳಿ ಜನಾರ್ದನ ರೆಡ್ಡಿ (ಜನನ 11 ಜನವರಿ 1967) ಭಾರತೀಯ ರಾಜಕಾರಣಿ, ಉದ್ಯಮಿಯಾಗಿದ್ದಾರೆ[೫][೬]. ಇವರು 13 ಮೇ 2023 ರಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದೊಂದಿಗೆ ಗುರುತಿಸಿಕೊಂಡು ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 25 ಮಾರ್ಚ್ 2024 ರಂದು ಭಾರತೀಯ ಜನತಾ ಪಾರ್ಟಿಗೆ ಮರುಸೇರ್ಪಡೆಯಾದರು.

ಆರಂಭಿಕ ಜೀವನ, ಶಿಕ್ಷಣ

[ಬದಲಾಯಿಸಿ]

ರೆಡ್ಡಿಯವರು 11 ಜನವರಿ 1967 ರಂದು ಜನಿಸಿದರು. ಇವರಿಗೆ ಜಿ. ಕರುಣಾಕರ ರೆಡ್ಡಿ, ಜಿ. ಸೋಮಶೇಖರ ರೆಡ್ಡಿ ಎಂಬ ಇಬ್ಬರು ಸಹೋದರರು, ರಾಜೇಶ್ವರಿ ಎಂಬ ಓರ್ವ ಅಕ್ಕ ಇದ್ದಾರೆ. ಇವರು, ಇವರ ಒಡಹುಟ್ಟಿದವರು ಕರ್ನಾಟಕದ ಬಳ್ಳಾರಿಯಲ್ಲಿ ರುಕ್ಮಿಣಮ್ಮ, ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಚೆಂಗಾ ರೆಡ್ಡಿಯವರಿಗೆ ಜನಿಸಿದರು.[೭] ಇವರ ಕುಟುಂಬವು ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ಸೇರಿದೆ.[೮]

ಜನಾರ್ದನ ರೆಡ್ಡಿಯವರು ಪದವಿಪೂರ್ವ ಕಾಲೇಜು ಶಿಕ್ಷಣವನ್ನು ಹೊಂದಿದ್ದಾರೆ.

ವೃತ್ತಿಜೀವನ

[ಬದಲಾಯಿಸಿ]

ರೆಡ್ಡಿಯವರು ಉದ್ಯಮಿ, ರಾಜಕಾರಣಿ ಎರಡೂ ಆಗಿದ್ದಾರೆ, ಇವರು ಚಿನ್ನದ ಕಂಪನಿಯನ್ನು ಹೊಂದಿದ್ದಾರೆ.

ಉದ್ಯಮಿಯಾಗಿ

[ಬದಲಾಯಿಸಿ]

21 ನೇ ವಯಸ್ಸಿನಲ್ಲಿ, ರೆಡ್ಡಿಯವರು 1989 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅಡಿಯಲ್ಲಿ ಎನ್ನೋಬಲ್ ಇಂಡಿಯಾ ಸೇವಿಂಗ್ಸ್ ಅಂಡ್ ಇನ್ವೆಸ್ಟ್‌ಮೆಂಟ್ ಕಂಪನಿ ಲಿಮಿಟೆಡ್ ಎಂಬ ಶೇಷ ಬ್ಯಾಂಕೇತರ ಹಣಕಾಸು ಕಂಪನಿಯನ್ನು ಸ್ಥಾಪಿಸಿದರು. ದಕ್ಷಿಣ ಭಾರತದಾದ್ಯಂತ ಈ ಕಂಪನಿಯು 350 ಕೋಟಿ ವಹಿವಾಟಿನೊಂದಿಗೆ ಒಟ್ಟು 125 ಶಾಖೆಗಳನ್ನು ಹೊಂದಿತ್ತು. ಕಂಪನಿಯು ಕಾರ್ಯನಿರ್ವಹಿಸುತ್ತಿದ್ದರೂ, 2003 ರಿಂದ ಠೇವಣಿ ಸಂಗ್ರಹಿಸುವುದನ್ನು ನಿಲ್ಲಿಸಿತ್ತು. 'ದಿ ಹಿಂದೂ' ರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನಲ್ಲಿ ಆರ್‌ಬಿಐ ತಿಳಿಸಿದಂತೆ ಇವರು ನೋಂದಣಿ ಪ್ರಮಾಣಪತ್ರವನ್ನು ಆರ್‌ಬಿಐಗೆ ಒಪ್ಪಿಸಿದರು[೯][೧೦] ಜಾಹೀರಾತಿನ ಸಾರಾಂಶ ಹೀಗಿತ್ತು, "ಬಳ್ಳಾರಿ -583 101 ರ ರಾಧಿಕಾ ಥಿಯೇಟರ್ ಎದುರು, ರಾಘವಾಚಾರಿ ರಸ್ತೆಯ 6(4) ರಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರುವ ಮೆಸರ್ಸ್ ಎನ್ನೋಬಲ್ ಇಂಡಿಯಾ ಸೇವಿಂಗ್ಸ್ ಅಂಡ್ ಇನ್ವೆಸ್ಟ್‌ಮೆಂಟ್ ಕಂ. ಲಿಮಿಟೆಡ್, ಠೇವಣಿಗಳ ಸ್ವೀಕಾರ, ಅನುಮೋದಿತ ಭದ್ರತೆಗಳಲ್ಲಿನ ಹೂಡಿಕೆ, ಬ್ಯಾಂಕ್‌ಗೆ ನಿಗದಿತ ರಿಟರ್ನ್ಸ್ ಸಲ್ಲಿಕೆಗೆ ಸಂಬಂಧಿಸಿದ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನಗಳ ವಿವಿಧ ನಿಬಂಧನೆಗಳನ್ನು ಉಲ್ಲಂಘಿಸಿದೆ. ಕಂಪನಿಯ ಆರ್ಥಿಕ ಸ್ಥಿತಿಯು ತೃಪ್ತಿಕರವಾಗಿಲ್ಲ, ಅದರ ನಿವ್ವಳ ಒಡೆತನದ ನಿಧಿ ಋಣಾತ್ಮಕವಾಗಿದೆ. ಆದ್ದರಿಂದ ಬ್ಯಾಂಕ್ ಅಕ್ಟೋಬರ್ 05, 1998 ರಿಂದ ಅನ್ವಯವಾಗುವಂತೆ ಹಾಲಿ ಠೇವಣಿದಾರರು/ಪ್ರಮಾಣಪತ್ರ ಹೊಂದಿರುವವರು ಸೇರಿದಂತೆ ಯಾವುದೇ ವ್ಯಕ್ತಿಯಿಂದ ಕಂಪನಿಯು ನಡೆಸುವ ಯಾವುದೇ ಯೋಜನೆಗೆ ಚಂದಾದಾರಿಕೆಗಳು/ಕಂತುಗಳ ಮೂಲಕ, ಠೇವಣಿ ನವೀಕರಣದ ಮೂಲಕ, ಇನ್ನಾವುದೇ ರೂಪದಲ್ಲಿ ಠೇವಣಿಗಳನ್ನು ಸ್ವೀಕರಿಸುವುದನ್ನು ನಿಷೇಧಿಸಿದೆ." 2001 ರಲ್ಲಿ ಇವರು ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆಯನ್ನು ಹೊಂದಿದ್ದ ಓಬಳಾಪುರಂ ಮೈನಿಂಗ್ ಕಂಪನಿಯನ್ನು (OMCPL) ವಹಿಸಿಕೊಂಡರು. ಆಪಾದಿತವಾಗಿ ಇವರ ರಾಜಕೀಯ ಪ್ರಭಾವವು 2004 ರಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಪರವಾನಗಿಯನ್ನು ಪಡೆಯಲು ಸಹಾಯ ಮಾಡಿತು. ಆಂಧ್ರಪ್ರದೇಶ ಸರ್ಕಾರವು ಈ ಯೋಜನೆಗಾಗಿ 10760 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಆದರೆ ಯೋಜನೆಯು ಪ್ರಾರಂಭವಾಗಲಿಲ್ಲ, ಮಂಜೂರು ಮಾಡಿದ ಭೂಮಿಯನ್ನು 2013 ರಲ್ಲಿ ರದ್ದುಗೊಳಿಸಲಾಯಿತು.[೧೧]

ರಾಜಕಾರಣಿಯಾಗಿ

[ಬದಲಾಯಿಸಿ]

1999 ರ ಲೋಕಸಭೆ ಚುನಾವಣೆಗಳಲ್ಲಿ ರೆಡ್ಡಿ ಸಹೋದರರು ಸುಷ್ಮಾ ಸ್ವರಾಜ್ ಅವರ ಪ್ರಚಾರದ ಭಾಗವಾಗಿ ಕೆಲಸ ಮಾಡುತ್ತಿದ್ದಾಗ ರೆಡ್ಡಿಯವರು ರಾಜಕೀಯವಾಗಿ ಮುನ್ನೆಲೆಗೆ ಬಂದರು. ಆ ಸಮಯದಲ್ಲಿ ಸ್ವರಾಜ್ ಅವರು ಸಂಸದರಾಗಲು ಬಳ್ಳಾರಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಸೇರಿದ ಸೋನಿಯಾ ಗಾಂಧಿ ವಿರುದ್ಧ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸ್ವರಾಜ್ ವಿಫಲರಾದರೂ ಅವರು ರೆಡ್ಡಿಗಳ ಪೋಷಕರಾಗಿಯೇ ಉಳಿದರು, ಆಗಾಗ್ಗೆ ಬಳ್ಳಾರಿಗೆ ಭೇಟಿ ನೀಡುತ್ತಿದ್ದರು. ಗಣಿಗಾರಿಕೆ ಹಗರಣದ ಸಂದರ್ಭದಲ್ಲಿ ರೆಡ್ಡಿ ಸಹೋದರರ ಮೇಲೆ ಆರೋಪ ಹೊರಿಸಲಾದ ನಂತರ ಸ್ವರಾಜ್ ಅವರಿಂದ ದೂರ ಸರಿದರು. ರೆಡ್ಡಿ ಮೇಲಿನ ಆರೋಪಗಳು ಕರ್ನಾಟಕದಲ್ಲಿ ಬಿಜೆಪಿಗೆ ಕೆಟ್ಟ ಹೆಸರನ್ನು ತಂದವು, ರಾಜ್ಯದಲ್ಲಿನ ಅವಕಾಶವಾದಿ ರಾಜಕಾರಣವನ್ನು ಬಯಲು ಮಾಡಿದವು.[೧೨]

2006 ರಲ್ಲಿ ಬಿಜೆಪಿ - ಜಾತ್ಯತೀತ ಜನತಾ ದಳ (ಜೆಡಿಎಸ್) ಸಮ್ಮಿಶ್ರ ಸರ್ಕಾರ, ರೆಡ್ಡಿಯವರ ಪ್ರಯತ್ನಗಳ ಕಾರಣದಿಂದಾಗಿ ಬಿ. ಶ್ರೀರಾಮುಲು ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಮಾಡಲಾಯಿತು. ಬಳ್ಳಾರಿಯಲ್ಲಿ ಬಿಜೆಪಿ ಉಪಸ್ಥಿತಿಯನ್ನು ಹೆಚ್ಚಿಸುವಲ್ಲಿನ ಇವರ ಸಕ್ರಿಯ ಪಾತ್ರವನ್ನು ಗುರುತಿಸಿ 2006 ರಲ್ಲಿ ರೆಡ್ಡಿಯವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು.[೧೩] ಆದಾಗ್ಯೂ ನಂತರದ ವರ್ಷಗಳಲ್ಲಿ ರೆಡ್ಡಿಯವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೊಂದಿಗೆ ಜಗಳವಾಡಿದರು, ಭ್ರಷ್ಟಾಚಾರದ ಆರೋಪಗಳನ್ನು ಮಾಡಿ ಸಾಕ್ಷ್ಯಾಧಾರಗಳನ್ನು ಒದಗಿಸಿದರು, ಇದು ಇವರ ಅಮಾನತಿಗೆ ಕಾರಣವಾಯಿತು.

ಆದರೆ ಎಚ್.ಡಿ. ಕುಮಾರಸ್ವಾಮಿಯವರು ಅಗತ್ಯವಿದ್ದ ಸಮಯದಲ್ಲಿ ಸರ್ಕಾರವನ್ನು ಬಿ. ಎಸ್. ಯಡಿಯೂರಪ್ಪನವರಿಗೆ ಹಸ್ತಾಂತರಿಸಲಿಲ್ಲ. ಆ ಸಮಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಡಿ. ವಿ. ಸದಾನಂದ ಗೌಡ, ಬಿ. ಎಸ್. ಯಡಿಯೂರಪ್ಪನವರು ರೆಡ್ಡಿಯವರ ಅಮಾನತನ್ನು ಹಿಂಪಡೆದರು, ನಂತರ ಇವರು 2008 ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪರವಾಗಿ ಯಡಿಯೂರಪ್ಪನವರ ಜೊತೆ ಪ್ರಚಾರ ಮಾಡಿದರು. ರೆಡ್ಡಿಯವರ ಪ್ರಯತ್ನಗಳ ಸಹಾಯದಿಂದ ಬಿಜೆಪಿ 110 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು, 5 ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚಿಸಿತು.

ನಂತರ ರೆಡ್ಡಿಯವರನ್ನು ಪ್ರವಾಸೋದ್ಯಮ, ಮೂಲಸೌಕರ್ಯ ಸಚಿವರನ್ನಾಗಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಸೇರ್ಪಡೆಗೊಳಿಸಲಾಯಿತು,[೧೪] ಈ ಅವಧಿಯಲ್ಲಿ ರಾಜ್ಯಕ್ಕೆ, ಬಳ್ಳಾರಿಗೆ ಅನೇಕ ಅಭಿವೃದ್ಧಿ ಮೈಲಿಗಲ್ಲುಗಳನ್ನು ಸ್ಥಾಪಿಸಿದರು.[೧೫][೧೬] ರೆಡ್ಡಿಯವರ ಮೇಲಿನ ಆರೋಪಗಳು, ಇವರ ನ್ಯಾಯಾಂಗ ಬಂಧನದ ಅವಧಿಯ ಹೊರತಾಗಿಯೂ ರೆಡ್ಡಿಯವರು ಜನಪ್ರಿಯ ರಾಜಕಾರಣಿಯಾಗಿ ಉಳಿದಿದ್ದಾರೆ, ಇದನ್ನು 29 ಜನವರಿ 2017 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಹೇಮವೇಮ ಕಾರ್ಯಕ್ರಮದಲ್ಲಿ ದೊಡ್ಡ ಜನಸ್ತೋಮದಿಂದ ರೆಡ್ಡಿಯವರು ಎದ್ದುನಿಂತು ಗೌರವ ಸ್ವೀಕರಿಸಿದಾಗ ರಾಜ್ಯವು ಕಂಡಿತು.[೧೭][೧೮] ರೆಡ್ಡಿಯವರು 2018 ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ; ಆದಾಗ್ಯೂ ಇವರ ಸಹೋದರರು, ಶ್ರೀರಾಮುಲು, ರೆಡ್ಡಿಯವರ ಆಪ್ತರಾದ ಇತರ ನಾಲ್ವರು ಅಭ್ಯರ್ಥಿಗಳು ಬಿಜೆಪಿ ಟಿಕೆಟ್ ಪಡೆದರು.

25 ಡಿಸೆಂಬರ್ 2022 ರಂದು ರೆಡ್ಡಿಯವರು ಬಿಜೆಪಿಯನ್ನು ತೊರೆದರು, ಶೀಘ್ರದಲ್ಲೇ "ಕಲ್ಯಾಣ ರಾಜ್ಯ ಪ್ರಗತಿ ಪಕ್ಷ" ಎಂಬ ಹೊಸ ರಾಜಕೀಯ ಸಂಘಟನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.[೧೯][೨೦]

ಕರ್ನಾಟಕದ 2023 ರ ಮೇ ತಿಂಗಳ ವಿಧಾನಸಭಾ ಚುನಾವಣೆಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗಂಗಾವತಿ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವ ಮೂಲಕ ರೆಡ್ಡಿಯವರು ಸಕ್ರಿಯ ರಾಜಕೀಯಕ್ಕೆ ಗಮನಾರ್ಹ ಪುನರಾಗಮನ ಮಾಡಿದರು.

25 ಮಾರ್ಚ್ 2024 ರಂದು ಇವರು ತಮ್ಮ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು 2024 ರ ಭಾರತದ ಸಾರ್ವತ್ರಿಕ ಚುನಾವಣೆಯ ಮೊದಲು ಬಿಜೆಪಿಯಲ್ಲಿ ವಿಲೀನಗೊಳಿಸಿದರು.[೨೧][೨೨]

ಸಮಾಜ ಸೇವೆ

[ಬದಲಾಯಿಸಿ]

ರೆಡ್ಡಿಯವರು 1997 ರಿಂದ ಬುದ್ಧಿಮಾಂದ್ಯ ಮಕ್ಕಳಿಗಾಗಿ ಶಾಲೆಯನ್ನು, 2004 ರಿಂದ ಸ್ವಂತ ಹಣದಿಂದ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ.[೨೩]

ವಿವಾದಗಳು

[ಬದಲಾಯಿಸಿ]

ವರ್ಷಗಳಲ್ಲಿ ರೆಡ್ಡಿಯವರು ಅನೇಕ ವಿವಾದಗಳಲ್ಲಿ ಸಿಲುಕಿದ್ದಾರೆ.

ಆಪರೇಷನ್ ಕಮಲ

[ಬದಲಾಯಿಸಿ]

ಆಪರೇಷನ್ ಕಮಲ ಎಂಬುದು ೨೦೦೮ ರಲ್ಲಿ ಭಾರತದ ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬಳಸಿದ ರಾಜಕೀಯ ತಂತ್ರವನ್ನು ವಿವರಿಸಲು ರಚಿಸಲಾದ ಪದವಾಗಿದೆ. ಈ ಕಾರ್ಯಾಚರಣೆಯ ನೇತೃತ್ವವನ್ನು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ವಹಿಸಿದ್ದರು ಮತ್ತು ವಿರೋಧ ಪಕ್ಷಗಳ ಶಾಸಕರಿಂದ ಬೆಂಬಲ ಪಡೆಯುವ ಪ್ರಯತ್ನಗಳನ್ನು ಇದು ಒಳಗೊಂಡಿತ್ತು. ಈ ವಿಧಾನವು ಬಿಜೆಪಿಗೆ ಪಕ್ಷಾಂತರ ನಿಷೇಧ ಕಾನೂನಿನ ನಿಬಂಧನೆಗಳನ್ನು ಬೈಪಾಸ್ ಮಾಡಲು ಮತ್ತು ರಾಜ್ಯ ವಿಧಾನಸಭೆಯಲ್ಲಿ ಬಹುಮತವನ್ನು ಸಾಧಿಸಲು ಅನುವು ಮಾಡಿಕೊಟ್ಟಿತು. [೨೪] [೨೫]

"ಕಮಲ" ಎಂಬ ಪದವು ಬಿಜೆಪಿಯ ಚುನಾವಣಾ ಚಿಹ್ನೆಯಾಗಿರುವ ಕಮಲವನ್ನು ಸೂಚಿಸುತ್ತದೆ. ಭಾರತೀಯ ರಾಜಕೀಯ ಚರ್ಚೆಗಳಲ್ಲಿ, ಬಿಜೆಪಿಗೆ ಸಂಪೂರ್ಣ ಬಹುಮತವಿಲ್ಲದ ರಾಜ್ಯ ಶಾಸಕಾಂಗಗಳಲ್ಲಿ ಅಧಿಕಾರವನ್ನು ರಚಿಸುವಲ್ಲಿ ಅಥವಾ ನಿರ್ವಹಿಸುವಲ್ಲಿ ಬೆಂಬಲ ನೀಡಲು ಇತರ ಪಕ್ಷಗಳ, ವಿಶೇಷವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶಾಸಕರು ಮತ್ತು ಸಂಸದರನ್ನು ಪ್ರೇರೇಪಿಸುವುದು ಅಥವಾ ಮನವೊಲಿಸುವುದು ಸೇರಿದಂತೆ ತಂತ್ರಗಳನ್ನು ವಿವರಿಸಲು ಆಪರೇಷನ್ ಕಮಲವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. [೨೬]

ಅಕ್ರಮ ಗಣಿಗಾರಿಕೆ

[ಬದಲಾಯಿಸಿ]

ಜುಲೈ 2011 ರಲ್ಲಿ ಕರ್ನಾಟಕದ ಲೋಕಾಯುಕ್ತ, ಸಂತೋಷ್ ಹೆಗ್ಡೆ ಬಳ್ಳಾರಿ ಪ್ರದೇಶದಲ್ಲಿನ ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಬಗ್ಗೆ ವರದಿಯನ್ನು ಪ್ರಕಟಿಸಿದರು. ಈ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಸಂಪೂರ್ಣವಾಗಿ ಅಕ್ರಮವಾಗಿ ನಡೆಸಿ ಸರ್ಕಾರಕ್ಕೆ ವಂಚನೆ ಮಾಡಿದ ಆರೋಪ ರೆಡ್ಡಿ ಮೇಲಿತ್ತು. ತೆರಿಗೆ ವಂಚನೆಗೆ ಸಂಬಂಧಿಸಿದ ಸುಳಿವುಗಳನ್ನು ಆದಾಯ ತೆರಿಗೆ ತನಿಖಾ ಮಹಾನಿರ್ದೇಶನಾಲಯದ ಅಧಿಕಾರಿಗಳು ಹೊಂದಿದ್ದರು, ಕಂಪನಿಯ ಆದಾಯ ಮುಚ್ಚಿಹಾಕುವಿಕೆಯನ್ನು ಮರೆಮಾಚಲು ರೆಡ್ಡಿಯವರು ಸಿಂಗಾಪುರದ ಒಂದು-ಡಾಲರ್ ಕಂಪನಿಯೊಂದಿಗೆ ತಿಳುವಳಿಕಾ ಒಪ್ಪಂದವನ್ನು ಮಾಡಿಕೊಂಡಿರುವುದನ್ನು ಕಂಡುಕೊಂಡರು. ಅವರು ಇತರ ತನಿಖಾ ಸಂಸ್ಥೆಗಳೊಂದಿಗೆ ಈ ಸ್ಥಳದ ಮೇಲೆ ದಾಳಿ ನಡೆಸಿ ವರದಿಯನ್ನು ಸಿದ್ಧಪಡಿಸಿದರು, ಇದು ಅಕ್ರಮ ಗಣಿಗಾರಿಕೆ ವರದಿಗೆ ಆಧಾರವಾಯಿತು. ರೆಡ್ಡಿಯವರು ಕಬ್ಬಿಣದ ಅದಿರು ಗಣಿಗಾರಿಕೆಯ "ಶೂನ್ಯ-ಅಪಾಯ ವ್ಯವಸ್ಥೆ"ಯನ್ನು ವಿನ್ಯಾಸಗೊಳಿಸಿದ್ದಾರೆ ಎನ್ನಲಾಗಿದೆ, ಅಲ್ಲಿ ಇವರು ಎಲ್ಲಾ ಹಂತಗಳ ಸರ್ಕಾರಿ ಅಧಿಕಾರಿಗಳ ಸಕ್ರಿಯ ಶಾಮೀಲಿನೊಂದಿಗೆ ಅನಧಿಕೃತ, ಲೆಕ್ಕಕ್ಕೆ ಸಿಗದ ಗಣಿಗಾರಿಕೆಗೆ ತಡೆರಹಿತವಾಗಿ ರಕ್ಷಣೆ ಒದಗಿಸಿದರು. ಇವರ ಕಮಾಂಡ್ ಅಡಿಯಲ್ಲಿನ ಕಬ್ಬಿಣದ ಅದಿರು ಮಾಫಿಯಾದ ಆಡಳಿತವನ್ನು "ಬಳ್ಳಾರಿ ಗಣರಾಜ್ಯ" ಎಂದು ಕರೆಯಲಾಗುತ್ತಿತ್ತು, ಇದರಲ್ಲಿ ಯಾವುದೇ ಬಾಹ್ಯ ನಿಯಂತ್ರಣ ಅಥವಾ ಆಡಳಿತ ವ್ಯವಸ್ಥೆಯು ಯಾವುದೇ ಪರಿಣಾಮ ಬೀರಲಿಲ್ಲ.[೨೭][೨೮]

ಲಂಚಕೋರತನ

[ಬದಲಾಯಿಸಿ]

ಓಬಳಾಪುರಂ ಮೈನಿಂಗ್ ಕಂಪನಿ ಪ್ರಕರಣದಲ್ಲಿ ರೆಡ್ಡಿಯವರ ಜಾಮೀನು ಪಡೆಯಲು ರೆಡ್ಡಿಯವರ ಕುಟುಂಬ ಸದಸ್ಯರು (ಜಿ. ಸೋಮಶೇಖರ್ ರೆಡ್ಡಿ, ಎಚ್. ಸುರೇಶ್ ಬಾಬು) ಹೈದರಾಬಾದ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಟಿ. ಪಟ್ಟಾಭಿರಾಮ ರಾವ್ ಅವರಿಗೆ ಲಂಚ ನೀಡಿದ್ದಾರೆಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಸಿಬಿಐನ ಹೆಚ್ಚಿನ ತನಿಖೆಗಳು ನಿವೃತ್ತ ನ್ಯಾಯಾಧೀಶ ಟಿ.ವಿ. ಚಲಪತಿ ರಾವ್ ಸೇರಿದಂತೆ ಇತರರನ್ನು "ನಗದುಗಾಗಿ ಜಾಮೀನು" ಹಗರಣದಲ್ಲಿ ಸಿಲುಕಿಸಿದವು.[೨೯] ಐಟಿ ಇಲಾಖೆಯು ನೋಟಿಸ್‌ಗಳನ್ನು ಜಾರಿಗೊಳಿಸಿತು, ರೆಡ್ಡಿ ಇಲಾಖೆಗೆ ವಿವರಣೆಯನ್ನು ನೀಡಿದರು, ಆದರೆ ಈ ವಿವರಣೆಗಳನ್ನು ಸಿಐಟಿ ಮೇಲ್ಮನವಿಗಳು ತಿರಸ್ಕರಿಸಿದವು. ಅವರು ಎಲ್ಲಾ ವಿಷಯಗಳಲ್ಲಿ ಮಾನ್ಯ ಐಟಿಎಟಿ ಮುಂದೆ ಮೇಲ್ಮನವಿ ಸಲ್ಲಿಸಲು ಆದ್ಯತೆ ನೀಡಿದರು, ಮಾನ್ಯ ನ್ಯಾಯಮಂಡಳಿಯು ಐಟಿ ಇಲಾಖೆ ತೆಗೆದುಕೊಂಡ ನಿಲುವನ್ನು ವಜಾಗೊಳಿಸುವ ಮೂಲಕ ಇವರ ಪರವಾಗಿ ಎಲ್ಲಾ ಮೇಲ್ಮನವಿಗಳನ್ನು ಪುರಸ್ಕರಿಸಿತು.[೩೦][೩೧] 132456821541

ಮಗಳ ವಿವಾಹ

[ಬದಲಾಯಿಸಿ]

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಮಗಳು ಬ್ರಹ್ಮಿಣಿಯ ಅದ್ದೂರಿ ವಿವಾಹದ ವಿಚಾರವಾಗಿ ರೆಡ್ಡಿಯವರು ಟೀಕೆಗೆ ಗುರಿಯಾಗಿದ್ದರು. ಇವರು ಮಗಳ ಮದುವೆಗೆ 500 ಕೋಟಿ ($71 ಮಿಲಿಯನ್) ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಬ್ರಹ್ಮಿಣಿಯು ದಕ್ಷಿಣ ಆಫ್ರಿಕಾ, ಟಾಂಜಾನಿಯಾದಲ್ಲಿ ಚಿನ್ನದ ಗಣಿಗಳನ್ನು, ಟರ್ಕಿಯಲ್ಲಿ ಗ್ರಾನೈಟ್ ಮಾರ್ಬಲ್ ವ್ಯವಹಾರಗಳನ್ನು ನಿರ್ವಹಿಸುವ ಕುಟುಂಬದಿಂದ ಬಂದ 23 ವರ್ಷದ ಎಂಬಿಎ ಪದವೀಧರನನ್ನು ವಿವಾಹವಾದರು.[೩೨][೩೩][೩೪][೩೫]

ಬಂಧನ, ಶಿಕ್ಷೆ

[ಬದಲಾಯಿಸಿ]

ರೆಡ್ಡಿಯವರನ್ನು 5 ಸೆಪ್ಟೆಂಬರ್ 2011 ರಂದು ಸಿಬಿಐ ಬಂಧಿಸಿ ಆಂಧ್ರಪ್ರದೇಶದ ಹೈದರಾಬಾದ್‌ಗೆ ಕರೆದೊಯ್ಯಲಾಯಿತು.[೩೬] ಕರ್ನಾಟಕದ ಬಳ್ಳಾರಿ, ಆಂಧ್ರಪ್ರದೇಶದ ಅನಂತಪುರದಲ್ಲಿ ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಇವರ ಮೇಲಿದೆ. ಈ ತನಿಖೆಯು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಶಯ್ಯ ಅವರು ಆದಾಯ ತೆರಿಗೆ ಇಲಾಖೆ, ಸಿಬಿಐಗೆ ಮಾಡಿದ ಶಿಫಾರಸಿನ ಪರಾಕಾಷ್ಠೆಯಾಗಿದೆ, ಇದು ಕರ್ನಾಟಕದ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಸಂಶೋಧನೆಗಳಿಗೆ ನೇರವಾಗಿ ಸಂಬಂಧಿಸಿಲ್ಲ.[೩೭] ಒಮ್ಮೆ ಸಿಬಿಐ ನ್ಯಾಯಾಲಯವು ವಕೀಲರ ಪ್ರಾತಿನಿಧ್ಯವನ್ನು ಆಲಿಸಿದ ನಂತರ, ಇವರನ್ನು ಇವರ ಭಾವ ಬಿ. ವಿ. ಶ್ರೀನಿವಾಸ್ ರೆಡ್ಡಿಯವರ ಜೊತೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಚಂಚಲಗೂಡ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.[೩೮] ನಡೆಯುತ್ತಿರುವ ತನಿಖೆಯ ಸಮಯದಲ್ಲಿ ಸಿಬಿಐ ಹಿರಿಯ ಐಎಎಸ್, ಐಆರ್‌ಎಸ್ ಅಧಿಕಾರಿಗಳನ್ನು ಸಹ ಬಂಧಿಸಿದೆ.[೩೯][೪೦][೪೧] 4 ಆಗಸ್ಟ್ 2012 ರಂದು, ಸಿಬಿಐ ನ್ಯಾಯಾಲಯವು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧಿತರಾದ ಜನಾರ್ದನ ರೆಡ್ಡಿ, ಇತರ ನಾಲ್ವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 7 ರವರೆಗೆ ವಿಸ್ತರಿಸಿತು.[೪೨] 21 ಜನವರಿ 2015 ರಂದು ಸುಪ್ರೀಂ ಕೋರ್ಟ್ ಇವರಿಗೆ ಜಾಮೀನು ನೀಡಿತು. 24 ಮೇ 2021 ರಂದು ಬಳ್ಳಾರಿಗೆ ಭೇಟಿ ನೀಡುವ ಜನಾರ್ದನ ರೆಡ್ಡಿಯವರ ಮೇಲ್ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.[೪೩]

ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 6 ಮೇ 2025 ರಂದು ಹೈದರಾಬಾದ್‌ನ ಸಿಬಿಐ ನ್ಯಾಯಾಲಯವು ಗಾಳಿ ಜನಾರ್ದನ ರೆಡ್ಡಿ, ಇತರ ಮೂವರನ್ನು ದೋಷಿಗಳೆಂದು ತೀರ್ಪು ನೀಡಿತು. ಸುದೀರ್ಘ 13 ವರ್ಷಗಳ ವಿಚಾರಣೆಯ ನಂತರ, ನ್ಯಾಯಾಲಯವು ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು, ಪ್ರತಿಯೊಬ್ಬರಿಗೂ 10,000 ರೂಪಾಯಿ ದಂಡವನ್ನು ವಿಧಿಸಿತು.[೪೪][೪೫][೪೬][೪೭]

ಉಲ್ಲೇಖಗಳು

[ಬದಲಾಯಿಸಿ]
  1. ↑ "Ballari: Janardhana Reddy's wife stirs the pot in close battle of mining moneybags". The Times of India. 1 ಮೇ 2023. Archived from the original on 6 ಮೇ 2025. Retrieved 6 ಮೇ 2025.
  2. ↑ "Janardhan Reddy fields wife in Ballari seat | Janardhan Reddy fields wife in Ballari seat" (in ಇಂಗ್ಲಿಷ್). Deccan Chronicle. 1 ಫೆಬ್ರವರಿ 2023. Archived from the original on 6 ಮೇ 2025. Retrieved 6 ಮೇ 2025.
  3. ↑ "Janardhana Reddy's daughter's wedding: Shocking details about bride Brahmani's wedding trousseau! | India.com" (in ಇಂಗ್ಲಿಷ್). India.com. 24 ನವೆಂಬರ್ 2016. Archived from the original on 6 ಮೇ 2025. Retrieved 6 ಮೇ 2025.
  4. ↑ "'RRR' director SS. Rajamouli launches Gali Janardhan Reddy's son's film". The Times of India. 4 ಮಾರ್ಚ್ 2022. Archived from the original on 6 ಮೇ 2025. Retrieved 6 ಮೇ 2025.
  5. ↑ "Spectacular rise & steep fall of mining baron Janardhana Reddy - Times of India". The Times of India. 12 ನವೆಂಬರ್ 2018. Retrieved 23 ಏಪ್ರಿಲ್ 2019.
  6. ↑ Singh, Dhrishti (13 ಮೇ 2023). "पूर्व मंत्री की नई पार्टी ने पहले ही चुनाव में दर्ज की जीत". BiharBandhu.in (in ಅಮೆರಿಕನ್ ಇಂಗ್ಲಿಷ್). Archived from the original on 13 ಮೇ 2023. Retrieved 13 ಮೇ 2023.
  7. ↑ Yardley, Jim (18 ಆಗಸ್ಟ್ 2010). "Despite Swirl of Scandals, Indian Mining Bosses Thrive". The New York Times. Retrieved 19 ಆಗಸ್ಟ್ 2010.
  8. ↑ https://thesouthfirst.com/karnataka/mining-baron-gali-janardhana-reddy-and-his-tryst-with-bjp-rise-fall-exile-and-return/
  9. ↑ "Bellary barons, Karnataka kings". The Telegraph, Calcutta, India. 8 ನವೆಂಬರ್ 2009.
  10. ↑ "The Reddy Flag Over Bangalore". Tehelka. Archived from the original on 22 ಸೆಪ್ಟೆಂಬರ್ 2012. Retrieved 28 ಮೇ 2011.
  11. ↑ Service, Express News (26 ಏಪ್ರಿಲ್ 2013). "Government cancels 10,760 acre land allotment to Brahmani". The New Indian Express (in ಇಂಗ್ಲಿಷ್). Retrieved 10 ಜುಲೈ 2024.
  12. ↑ "Once 'her sons', Sushma now distances herself from Reddys". India Today.
  13. ↑ "Who is Janardhana Reddy?". NDTV.com. Retrieved 23 ಏಪ್ರಿಲ್ 2019.
  14. ↑ "karnataka: Reddys vs BSY: BSY looks cornered, Reddy's muscle in". Outlook Magazine. Archived from the original on 30 ಜುಲೈ 2011. Retrieved 17 ಮೇ 2026.
  15. ↑ "Politics: BJP: Shobha Karandlaje, BSY's points-woman, is central to the crisis". Outlook Magazine. Archived from the original on 26 ಜುಲೈ 2011. Retrieved 17 ಮೇ 2026.
  16. ↑ "A Rich Vein of Avarice: Older hands shaped the cunning bluster of Jaganmohan, the Reddys". Outlook Magazine.
  17. ↑ "Rosaiah gets Janardhana Reddy to handle to beat Jagan". The Pioneer. Archived from the original on 26 ಅಕ್ಟೋಬರ್ 2010. Retrieved 17 ಮೇ 2026.
  18. ↑ "The Man From Kadappa". The Outlook. Archived from the original on 6 ಸೆಪ್ಟೆಂಬರ್ 2011. Retrieved 17 ಮೇ 2026.
  19. ↑ "Mining baron Janardhana Reddy launches new party 'Kalyana Rajya Pragati Paksha'". Deccan Herald (in ಇಂಗ್ಲಿಷ್). 25 ಡಿಸೆಂಬರ್ 2022. Retrieved 25 ಡಿಸೆಂಬರ್ 2022.
  20. ↑ "Karnataka mining baron Gali Janardhan Reddy floats his own party: 'New episode'". Hindustan Times (in ಇಂಗ್ಲಿಷ್). 25 ಡಿಸೆಂಬರ್ 2022. Retrieved 25 ಡಿಸೆಂಬರ್ 2022.
  21. ↑ The Hindu (25 ಮಾರ್ಚ್ 2024). "Karnataka MLA Janardhana Reddy merges his party with BJP" (in Indian English). Archived from the original on 25 ಮಾರ್ಚ್ 2024. Retrieved 25 ಮಾರ್ಚ್ 2024.
  22. ↑ "Karnataka MLA Janardhana Reddy joins BJP, says 'don't need any positions'". 25 ಮಾರ್ಚ್ 2024.
  23. ↑ Ram, Theja (16 ನವೆಂಬರ್ 2017). "A quiet burial for some of the mining cases against Janardhana Reddy?". The News Minute (in ಇಂಗ್ಲಿಷ್). Retrieved 10 ಜುಲೈ 2024.
  24. ↑ Aji, Sowmya (16 ಮೇ 2018). "After falling short of numbers, BJP revisits 'Operation Kamala' of 2008". The Economic Times. Archived from the original on 22 ಮಾರ್ಚ್ 2020. Retrieved 11 ಅಕ್ಟೋಬರ್ 2019.
  25. ↑ "DH Deciphers | What is Operation Kamala 2.0?". Deccan Herald (in ಇಂಗ್ಲಿಷ್). 15 ಜನವರಿ 2019. Archived from the original on 31 ಜುಲೈ 2021. Retrieved 5 ಆಗಸ್ಟ್ 2021.
  26. ↑ "op-lotus-in-punjab-mlas-offered-25-crores-each-aap-minister-claims".
  27. ↑ "In the 'Republic of Bellary', a minister's 'muscle power'". The Indian Express. 1 ಆಗಸ್ಟ್ 2011.
  28. ↑ "Report details Reddys' rule over 'Republic of Bellary'". The Hindu. Chennai, India. 28 ಜುಲೈ 2011.
  29. ↑ "CBI intensifies probe into Reddy bail scandal". The Deccan Herald. 3 ಜೂನ್ 2012.
  30. ↑ "Larger design in cash-for-bail scam?". The Hindu. Chennai, India. 18 ಜೂನ್ 2012.
  31. ↑ Mondal, Sudipto (18 ಜೂನ್ 2012). "How mining mafia established a "Republic of Fear" in Bellary". The Hindu. Chennai, India. Archived from the original on 26 ಜುಲೈ 2012. Retrieved 17 ಮೇ 2026.
  32. ↑ "Images of India's huge and controversial wedding". BBC News. 16 ನವೆಂಬರ್ 2016.
  33. ↑ Molloy, Mark (16 ನವೆಂಬರ್ 2016). "Lavish wedding for Indian politician's daughter causes uproar". The Telegraph.
  34. ↑ "In Pics: The Big Fat Reddy Wedding in Bengaluru, Photo Gallery".
  35. ↑ Deepika, K. c (15 ನವೆಂಬರ್ 2016). "Lavish setting for Reddy's daughter's wedding". The Hindu.
  36. ↑ Bureaus, Our. "In pre-dawn swoop, CBI arrests Janardhan Reddy, kin in Bellary". The Hindu. Chennai, India. Archived from the original on 2 ನವೆಂಬರ್ 2012. Retrieved 17 ಮೇ 2026.
  37. ↑ "Karnataka mining baron Janardhana Reddy arrested". Mid Day.
  38. ↑ "CBI arrests Janardhana Reddy, Srinivas Reddy". The Hindu. Chennai, India. 5 ಸೆಪ್ಟೆಂಬರ್ 2011.
  39. ↑ "Rajagopal has role in 'benami' mining: CBI". The Hindu. Chennai, India. 14 ಡಿಸೆಂಬರ್ 2011. Archived from the original on 27 ಸೆಪ್ಟೆಂಬರ್ 2013. Retrieved 17 ಮೇ 2026.
  40. ↑ "Srilakshmi sent to Chanchalguda jail". The Hindu. Chennai, India. 2 ಡಿಸೆಂಬರ್ 2011. Archived from the original on 13 ಏಪ್ರಿಲ್ 2014. Retrieved 17 ಮೇ 2026.
  41. ↑ "Rajagopal, Sri Lakshmi accused of fraud". The Hindu. Chennai, India. 24 ನವೆಂಬರ್ 2011. Archived from the original on 29 ನವೆಂಬರ್ 2011. Retrieved 17 ಮೇ 2026.
  42. ↑ "Janardhana Reddy's judicial custody extended to Sept. 7". The Hindu. Chennai, India. 4 ಆಗಸ್ಟ್ 2012.
  43. ↑ "The Supreme court agreed to hear Janardhana Reddy's appeal". Hospet.online. Ballari, India. 24 ಮೇ 2012.
  44. ↑ "Ex-Karnataka minister Gali Janardhan Reddy sentenced to 7 years' imprisonment in Obulapuram mining case | Today News" (in ಇಂಗ್ಲಿಷ್). Mint. 6 ಮೇ 2025. Archived from the original on 6 ಮೇ 2025. Retrieved 6 ಮೇ 2025.
  45. ↑ "Illegal Mining Verdict: Gali Janardhan Reddy Gets 7 Years in OMC Case" (in ಇಂಗ್ಲಿಷ್). Deccan Herald. 6 ಮೇ 2025. Archived from the original on 6 ಮೇ 2025. Retrieved 6 ಮೇ 2025.
  46. ↑ "CBI special court sentences Gali Janardhan Reddy, three others to seven-year jail term in illegal mining case" (in Indian English). The Hindu. 6 ಮೇ 2025. Archived from the original on 7 ಮೇ 2025. Retrieved 7 ಮೇ 2025.
  47. ↑ "ಅಕ್ರಮ ಗಣಿಗಾರಿಕೆ". Prajavani. 6 ಮೇ 2025. {{cite web}}: Text "ಜನಾರ್ದನ ರೆಡ್ಡಿ ಅಪರಾಧಿ; 7 ವರ್ಷ ಜೈಲು: CBI ಕೋರ್ಟ್ ಆದೇಶ" ignored (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]