ವಿಷಯಕ್ಕೆ ಹೋಗು

ಜಾರ್ಜ್ ಚಾಪ್‍ಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಾಪ್‍ಮನ್, ತಲೆಚಿತ್ರ ಕೆತ್ತನೆ

ಜಾರ್ಜ್ ಚಾಪ್‍ಮನ್ (1559-1634) ಎಲಿಜಬೆತ್ ರಾಣಿಯ ಕಾಲದ ಒಬ್ಬ ಪ್ರಸಿದ್ಧ ಕವಿ, ನಾಟಕಕಾರ ಮತ್ತು ಭಾಷಾಂತರಕಾರ. ಬೈಬಲ್ ಮತ್ತು ಹಲವಾರು ಪುರಾತನ ಮಹಾಕೃತಿಗಳನ್ನು ಇಂಗ್ಲಿಷ್ ಸಾಹಿತ್ಯಕ್ಕೆ ತಂದುಕೊಟ್ಟ ಮಹತ್ತರವಾದ ಆ ಭಾಷಾಂತರ ಯುಗದಲ್ಲಿ ಈತ ಒಬ್ಬ ಶ್ರೇಷ್ಠ ಭಾಷಾಂತರಕಾರನೆನೆಸಿದ್ದ. ಇಂದಿಗೂ ಈತನ ಹೆಸರು ಉಳಿದಿರುವುದು ಹೋಮರನ ಮಹಾಕಾವ್ಯಗಳ ಭಾಷಾಂತರದಿಂದ.

ಜೀವನ, ಕೃತಿಗಳು

[ಬದಲಾಯಿಸಿ]

ಹರ್ಟ್‌ಫರ್ಡ್‌ಷೈರಿನ ಹಿಚಿನ್ ಸಮೀಪದಲ್ಲಿ, ಥಾಮಸ್ ಚಾಪ್‌ಮನ್‍ನ ಎರಡನೆಯ ಮಗನಾಗಿ ಈತ ಜನಿಸಿದ. ತಾಯಿ ಜೋನ್ ದೊಡ್ಡ ಮನೆತನದವಳು. ಇವರೆಲ್ಲ ಉತ್ಕಟ ಪ್ರಾಟೆಸ್ಟಂಟ್ ಕ್ರೈಸ್ತರು. ಈತ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದನೆಂಬ ವಿಚಾರ ವಿವಾದಾಸ್ಪದವಾಗಿದೆಯಾದರೂ ಪದವೀಧರನಂತೂ ಆಗಲಿಲ್ಲವೆಂಬುದು ಖಚಿತ.

ಈತನ ಮೊದಲ ಕೃತಿ, ದ ಷ್ಯಾಡೊ ಆಫ್ ನೈಟ್ 1594ರಲ್ಲಿ ಪ್ರಕಟವಾಯಿತು. ಇದರಲ್ಲಿ ಪ್ರಾರ್ಥನಾರೂಪವಾದ ಹಲವಾರು ಹಾಡುಗಳಿವೆ. ದ ಬ್ಲೈಂಡ್ ಬೆಗರ್ ಆಫ್ ಅಲೆಕ್ಸಾಂಡ್ರಿಯ 1596ರಲ್ಲಿ ರಂಗದ ಮೇಲೆ ಪ್ರದರ್ಶಿತವಾದ ಮೊದಲ ನಾಟಕ. ಕ್ರಿಸ್ಟೋಫರ್ ಮಾರ್ಲೋ, ಬೆನ್ ಜಾನ್ಸನ್ ಮುಂತಾದ ಪ್ರತಿಭಾಶಾಲಿಗಳ ಸ್ನೇಹವೂ, ಪ್ರಿನ್ಸ್ ಆಫ್ ವೇಲ್ಸ್ (ಹೆನ್ರಿ), ಅರ್ಲ್ ಆಫ್ ಸಾಮರ್ಸೆಟ್ ಇವರ ಕೃಪಾಶ್ರಯವೂ ಈತನ ಸಾಹಿತ್ಯ ಪ್ರಗತಿಗೆ ಪ್ರೋತ್ಸಾಹ ಕೊಟ್ಟವು. ಮಾರ್ಲೋನ ಹೀರೊ ಅಂಡ್ ಲಿಯಾಂಡರ್ ಎಂಬ ಅಪೂರ್ಣವಾಗಿದ್ದ ಕಾವ್ಯವನ್ನು ಈತ ಪೂರ್ಣ ಮಾಡಿದನೆಂದು ಹೇಳುತ್ತಾರೆ. ಷೇಕ್ಸ್‌ಪಿಯರನಿಗೂ, ಈತನಿಗೂ ತುಂಬ ವೈಮನಸ್ಯವಿತ್ತು. ಷೇಕ್ಸ್‌ಪಿಯರ್ ತನ್ನ ಸಾನೆಟ್ಟೊಂದರಲ್ಲಿ ವರ್ಣಿಸಿರುವ ಪ್ರತಿಸ್ಪರ್ಧಿ ಕವಿ ಈತನೇ ಇರಬೇಕೆಂದು ಕೆಲವರ ಅಭಿಮತ.[][]

ಚಾಪ್‌ಮನ್‌ಗೆ ಸ್ನೇಹಿತರಿಗಿಂತ ವಿರೋಧಿಗಳೇ ಹೆಚ್ಚು. ಹೋಮರನಿಗೆ ಆಶ್ರಯ ಕೊಟ್ಟವರಿಲ್ಲ, ಚಾಪ್‌ಮನ್‌ಗೆ ಸ್ನೇಹಿತರಾದವರಿಲ್ಲ ಎಂದು ಜನ ಒಂದು ಗಾದೆಯನ್ನೇ ಕಟ್ಟಿದ್ದರು.

ಟೈಮನ್ ಆಫ್ ಅಥೆನ್ಸ್, ಎ ಲವರ್ಸ್ ಕಂಪ್ಲೇಂಟ್ ಕೃತಿಗಳನ್ನು ಬರೆದವನು ಚಾಪ್‌ಮನ್, ಷೇಕ್ಸ್‌ಪಿಯರ್ ಅಲ್ಲ ಎಂದು ವಿಮರ್ಶಕ ರಾಬರ್ಟ್‌ಸನ್ನನ ಅಭಿಮತ.[]

ಈತನ ನಿಜವಾದ ಮಾಧ್ಯಮ ನಾಟಕವಾಗಿರಲಿಲ್ಲ. ಸಾಹಿತಿ ಎನಿಸಿಕೊಳ್ಳಬೇಕಾದರೆ ನಾಟಕ ಬರೆದಿರಬೇಕು ಎಂದು ತಿಳಿದಿದ್ದ ಕಾಲವದು. ಅದರಂತೆ ಈತನೂ ನಾಟಕಗಳನ್ನು ಬರೆದ. ಪ್ರತಿಭಾವಂತನಾದುದರಿಂದ ಕೆಲವು ಒಳ್ಳೆಯ ನಾಟಕಗಳೂ ರಚಿತವಾದುವು. ವಿಷಾದಾಂತ ನಾಟಕಗಳಲ್ಲಿ ಬುಸ್ಸಿ ಡ ಅಂಬೋಯ್, ದ ರಿವೆಂಜ್ ಆಫ್ ಬುಸ್ಸಿ ಡ ಅಂಬೋಯ್, ದ ಕಾನ್‍‍ಸ್ಪಿರೆಸಿ, ಟ್ರ್ಯಾಜಡೀಸ್ ಆಫ್ ಚಾರ್ಲ್ಸ್, ಡ್ಯೂಕ್ ಆಫ್ ಬೈರನ್, ದ ವಿಡೋಸ್ ಟಿಯರ್ಸ್-ಇವು ಶ್ರೇಷ್ಠವೆನಿಸಿವೆ.

ಹರ್ಷನಾಟಕಗಳಲ್ಲಿ ದ ಜಂಟ್ಲ್‌ಮನ್ ಅಷರ್, ದ ಬಾಲ್, ಮೇ ಡೇ ಹೆಸರಾಗಿವೆ. ಶಬ್ದಾಡಂಬರದ ವಿಷಾದಾಂತ ನಾಟಕಗಳೇ ಚೆನ್ನಾಗಿವೆ. ಈತನ ಎಲ್ಲ ನಾಟಕಗಳಲ್ಲೂ ಅಲ್ಲಲ್ಲಿ ಸೊಗಸಾದ ಕಾವ್ಯವಾಹಿನಿ ಹರಿಯುತ್ತದೆ. ಈತ ಷೇಕ್ಸ್‌ಪಿಯರನಿಗಿಂತ ಶ್ರೇಷ್ಠ ನಾಟಕಕಾರನೆಂದು ಇವನ ಸಮಕಾಲೀನ ಜನತೆ ಭಾವಿಸಿತ್ತು.

ಕವಿಯಾಗಿ ಈತ ಸ್ವತಂತ್ರ ಕೃತಿಗಳಿಂದ ಅಷ್ಟೇನೂ ವಿಖ್ಯಾತನಾಗಲಿಲ್ಲ. ಕೆಲವು ಸ್ತೋತ್ರಗೀತೆಗಳನ್ನೂ, ಧಾರ್ಮಿಕ ಕವನಗಳನ್ನೂ ರಚಿಸಿದ್ದಾನೆ. ಆಧ್ಯಾತ್ಮಿಕ (ಮೆಟಾಫಿ಼ಸಿಕಲ್) ಕಾವ್ಯಪಂಥಕ್ಕೆ ಈತನನ್ನೂ ಸೇರಿಸಬಹುದು. ಈತನ ತತ್ತ್ವಬೋಧಕವಾದ ಸೂತ್ರಶೈಲಿಯ ಕವಿತೆಗಳಲ್ಲಿ ಭಾವತೀವ್ರತೆಯಾಗಲೀ, ಗೇಯಮಾಧುರ್ಯವಾಗಲೀ ಇಲ್ಲ. ಕೆಲವು ಬಾರಿ ಎತ್ತರಕ್ಕೆ ಏರಿದರೂ ಅದು ಬುದ್ಧಿಜನ್ಯವಾದ ಔನ್ನತ್ಯಕ್ಕೆ ಮಾತ್ರ.

ಲ್ಯಾಟಿನ್ ಕವಿಗಳಾದ ಪೆಟ್ರಾರ್ಕ್, ಜೂವನಲ್, ಹೆಸಿಯಡರ ಕೆಲವು ಕೃತಿಗಳನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದ್ದರೂ ಹೋಮರನ ಇಲಿಯಡ್ ಮತ್ತು ಆಡಿಸಿ ಎಂಬೆರಡು ಮಹಾಕಾವ್ಯಗಳನ್ನು ಭಾಷಾಂತರಿಸಿದುದೇ (1616) ಈತನ ಕಾವ್ಯ ಜೀವನದ ಮಹತ್ತರವಾದ ಸಾಧನೆ. ಈ ಅನುವಾದ ಕಾರ್ಯ ಮುಗಿದಮೇಲೆ ತನ್ನ ಜನ್ಮೋದ್ದೇಶ ಸಫಲವಾಯಿತು, ಬದುಕು ಸಾರ್ಥಕವಾಯಿತು ಎಂಬ ತೃಪ್ತಿ ಕವಿಗೆ ಬಂತು. ಮೂಲದ ಸರಳತೆ, ಗಾಂಭೀರ್ಯ, ಖಚಿತತೆ, ಚುರುಕಾದ ಓಟ ಭಾಷಾಂತರದಲ್ಲಿ ಬಾರದೆ ಹೋದರೂ ಹೋಮರನ ನಯಗಾರಿಕೆಯ ಮುಂದೆ ಅನುವಾದ ಬಹಳ ರೂಕ್ಷ ಎಂದೆನಿಸಿದರೂ ಎಲ್ಲ ದೋಷಗಳನ್ನೂ ಮರೆಸುವಂಥ ಸತ್ತ್ವ, ತೇಜಗಳನ್ನು ಉಳಿಸಿಕೊಂಡಿರುವುದೇ ಈ ಭಾಷಾಂತರಗಳ ಶ್ರೇಷ್ಠತೆಯನ್ನು ಎತ್ತಿಹಿಡಿದಿದೆ. ಅಲೆಕ್ಸಾಂಡರ್ ಪೋಪ್, ಮ್ಯಾಥ್ಯೂ ಆರ್ನಲ್ಡ್ ಮುಂತಾದ ಹಿರಿಯ ವಿಮರ್ಶಕರು ಇದೇ ಅಭಿಪ್ರಾಯವನ್ನು ವ್ಯಕ್ತಮಾಡಿದ್ದಾರೆ.[] ಕೀಟ್ಸ್ ಕವಿಯಂತೂ ಚಾಪ್‌ಮನ್ನನ ಈ ಭಾಷಾಂತರಗಳನ್ನು ತನ್ನೊಂದು ಸಾನೆಟ್ಟಿನಲ್ಲಿ ಮೆಚ್ಚಿ ಕೊಂಡಾಡಿದ್ದಾನೆ. ಇಂದಿಗೂ ಈತನ ಭಾಷಾಂತರ ಇಂಗ್ಲಿಷಿನಲ್ಲಿ ಬಂದಿಲ್ಲವೆಂದು ಅನೇಕರ ಅಭಿಪ್ರಾಯ.

ಧಾರ್ಮಿಕ ಪ್ರವೃತ್ತಿಯುಳ್ಳವನೂ, ನಿರ್ವ್ಯಸನಿಯೂ ಆಗಿದ್ದ ಚಾಪ್‌ಮನ್ನನ ಬದುಕು ಚೊಕ್ಕವಾಗಿತ್ತು. ಹಣಕ್ಕಿಂತ ಕೀರ್ತಿಯೇ ಈತನಿಗೆ ವಿಪುಲವಾಗಿ ದೊರೆಯಿತು. ಬದುಕಿನುದ್ದಕ್ಕೂ ಈತ ಯಾವ ಪ್ರಚಲಿತ ವಿಷಯಗಳಲ್ಲೂ ಉತ್ಸಾಹದಿಂದ ಭಾಗಿಯಾಗದೆ ದೂರದೂರದಲ್ಲೇ ಕೇವಲ ಪ್ರೇಕ್ಷಕನಾಗಿ ನಿಂತ. ಆದರೂ ಈಸ್ಟ್‌ವರ್ಡ್ ಹೋ ಎಂಬ ಕೃತಿಯಲ್ಲಿ ಸ್ಕಾಟ್ಲೆಂಡಿನವರನ್ನು ಅವಹೇಳನ ಮಾಡಿದ್ದಾನೆಂಬ ಆರೋಪ ಹೊತ್ತು ದೊರೆಯ ಆಗ್ರಹಕ್ಕೆ ಗುರಿಯಾಗಿ ಕೆಲವು ಕಾಲ ಸೆರೆಮನೆ ವಾಸವನ್ನು ಅನುಭವಿಸಬೇಕಾಯಿತು.[]

ಜೀವಮಾನವನ್ನೆಲ್ಲ ಬಡತನದ ಕಹಿಯುಂಡ ಈತ ಅದೇ ಸ್ಥಿತಿಯಲ್ಲೇ ಸಾವನ್ನಪ್ಪಿದ. ಸೇಂಟ್ ಗೈಲ್ಸ್ ಇನ್ ದಿ ಫೀಲ್ಡ್ಸ್ ಎಂಬ ಚರ್ಚ್‌ಯಾರ್ಡಿನಲ್ಲಿ ಈತನ ಸಮಾಧಿ ಇದೆ.

ಉಲ್ಲೇಖಗಳು

[ಬದಲಾಯಿಸಿ]
  1. Reid, Lindsay Ann (17 December 2014). "The Spectre of the School of Night: Former Scholarly Fictions and the Stuff of Academic Fiction". Early Modern Literary Studies (in ಇಂಗ್ಲಿಷ್) (23). Sheffield Hallam University.: 1–31. ISSN 1201-2459. Archived from the original on 24 April 2018. Retrieved 19 October 2018.
  2. Ellis, David (2013). The truth about William Shakespeare : fact, fiction and modern biographies. Edinburgh University Press. p. 72. ISBN 9780748653881.
  3. Robertson, John Mckinnon. Shakespeare And Chapman: A Thesis of Chapman's Authorship of a Lover's Complaint, And His Origination of Timon of Athens (1917). Reprint Services Corporation, 1999.
  4. Alexander Pope, "Preface" to 'The Iliad of Homer'
  5. Nicol, David (September 2002). "Eastward Ho! by Chapman, Jonson and Marston, performed by the Royal Shakespeare Company at the Swan Theatre, 2002". Early Modern Literary Studies. 8 (2).

ಹೊರಗಿನ ಕೊಂಡಿಗಳು

[ಬದಲಾಯಿಸಿ]







ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: