ವಿಷಯಕ್ಕೆ ಹೋಗು

ಜಾರ್ಜ್ ಗ್ಯಾಸ್ಕೋಇನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾರ್ಜ್ ಗ್ಯಾಸ್ಕೋಇನ್‍ನ ಭಾವಚಿತ್ರ

ಜಾರ್ಜ್ ಗ್ಯಾಸ್ಕೋಇನ್ (1535-1577) ಇಂಗ್ಲಿಷ್ ಕವಿ, ಕಾದಂಬರಿಕಾರ, ನಾಟಕಕಾರ, ರಾಜಕಾರಣಿ, ಯೋಧ. ಇಂಗ್ಲಿಷ್ ಸಾಹಿತ್ಯದ ಪುನರುಜ್ಜೀವನ ಕಾಲದಲ್ಲಿ ನವ್ಯಮಾರ್ಗವನ್ನು ತುಳಿದ ಕವಿಗಳಲ್ಲಿ ಮೊದಲಿಗ. ನಿಜ ಜೀವನದಿಂದ ಘಟನೆಗಳನ್ನು ಎತ್ತಿಕೊಂಡು ಗದ್ಯದಲ್ಲಿ ಕಥೆ ಬರೆದವರಲ್ಲಿ ಮೊದಲಿಗನೆಂದೂ, ಗದ್ಯದಲ್ಲಿ ಗಂಭೀರ ನಾಟಕ ಬರೆದ ಮೊದಲಿಗನೆಂದೂ, ಇಟಾಲಿಯನ್ನಿನಿಂದ ಮೊದಲ ಬಾರಿ ಗಂಭೀರ ನಾಟಕವನ್ನು ಭಾಷಾಂತರಿಸಿದವನೆಂದೂ,[] ಮೊದಲನೆಯ ವಿಡಂಬನಕಾರನೆಂದೂ, ಇಂಗ್ಲಿಷ್‌ನಲ್ಲಿ ಕೆಲವು ಹೊಸ ಛಂದೋಮಾದರಿಗಳನ್ನು ಬಳಕೆಗೆ ತಂದವನೆಂದೂ ಪ್ರಸಿದ್ಧಿ ಪಡೆದಿದ್ದಾನೆ.

ಗ್ಯಾಸ್ಕೋಇನ್ ಕಾರ್ಡಿಂಗ್‍ಟನ್‍ನ ಬೆಡ್‍ಫರ್ಡ್‌ಷೈರ್‌ನಲ್ಲಿ ಜನಿಸಿದ. ಕೇಂಬ್ರಿಜ್‌ನ ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗಮಾಡಿದ.[] ಲಾ ಶಿಕ್ಷಣವನ್ನು ಪಡೆಯಲು ಪ್ರಾರಂಭಿಸಿ ಮಧ್ಯೆ ಅದನ್ನು ಬಿಟ್ಟು ರಾಜಕೀಯವನ್ನು ಪ್ರವೇಶಿಸಿದ. ಬೆಡ್‍ಫರ್ಡ್‌ನ ಪಾರ್ಲಿಮೆಂಟ್ ಸದಸ್ಯನಾದ (1557-59). ಒಳ್ಳೆಯ ಮನೆತನಕ್ಕೆ ಸೇರಿದವನಾದರೂ ಅನೇಕ ಸಂಪ್ರದಾಯಗಳನ್ನು ಮುರಿದ. ಎಲಿಜ಼ಬೆತ್ ಬ್ರೆಟನ್ ಎಂಬ ವಿಧವೆಯನ್ನು 1561ರಲ್ಲಿ ಮದುವೆಯಾಗಿ ಆ ವಾವೆಯಿಂದ ಕವಿ ನಿಕೊಲಾಸ್ ಬ್ರೆಟನ್‌ಗೆ ಬಲತಂದೆಯಾದ. 1572-74ರ ವರೆಗೆ ಇಂಗ್ಲಿಷ್ ಸೈನ್ಯದಲ್ಲಿ ಸೇವೆಸಲ್ಲಿಸಿ ಕ್ಯಾಪ್ಟನ್ ದರ್ಜೆಗೇರಿದ. ಹಾಲೆಂಡಿನಲ್ಲಿ ರಾಜಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಿದ(1576).

ಸಾಹಿತ್ಯದಲ್ಲಿ ಈತ ಹೇಗೆ ಪರಂಪರೆ ಮುರಿದನೋ ಅಂತೆಯೇ ಜೀವನದಲ್ಲೂ ಮುರಿದ. ಯಾವ ಕಟ್ಟುನಿಟ್ಟನ್ನೂ ಪಾಲಿಸದ ದುಂದುವೆಚ್ಚ, ಸಾಲಗಳ ಕಾರಣದಿಂದಾಗಿ ಜೈಲುವಾಸವನ್ನನುಭವಿಸಿದ.

ಈತ ತೀರಿಕೊಂಡಿದ್ದು 1577ರ ಅಕ್ಟೋಬರ್ 7 ರಂದು. ಸ್ಟ್ಯಾಮ್‌ಫರ್ಡ್‌ನಲ್ಲಿ ಈತನನ್ನು ಸಮಾಧಿ ಮಾಡಲಾಯಿತು.[]

ಕೃತಿಗಳು

[ಬದಲಾಯಿಸಿ]

ಮುಂದೆ ಬಂದ ಅಷ್ಟಷಟ್ಪದಿಯ ಅನುಕ್ರಮವನ್ನು ಮೊದಲೇ ಆರಂಭಿಸಿದ ಶ್ರೇಯಸ್ಸು ಈತನದು. ಈತನ ಅನುವಾದ ಕೃತಿಗಳಾದ ದ ಸಪೋಸಸ್ (ಅರಿಯೋಸ್ಟೊ), ಜೊಕಾಸ್ಟ (ಯುರಿಪಿಡೀಸ್) ಎಂಬುವು 1566ರಲ್ಲಿ ಪ್ರದರ್ಶನಗೊಂಡವು.  ಈತನ ಎ ಹಂಡ್ರಡ್ತ್ ಸಂಡ್ರಿ ಫ್ಲವರ್ಸ್ (1573) ಎಂಬುದು ಒಂದು ಗದ್ಯಪದ್ಯ ಸಂಕಲನವಾಗಿದೆ. 1573ರ ಅನಂತರ ಇವನ ಒಲವು ನೀತಿ ಹಾಗೂ ಶುಚಿತ್ವದ ಕಡೆ ಬಾಗಿತು. ಆಗಲೇ ದ ಗ್ಲ್ಯಾಸ್ ಆಫ್ ಗವರ್ನಮೆಂಟ್ (1575) ಎಂಬ ವಿಡಂಬನಾತ್ಮಕ ನಾಟಕ ಬರೆದ. ಆಮೇಲೆ ದ ಸ್ಟೀಲ್ ಗ್ಲಾಸ್ (1576) ಎಂಬ ವಿಡಂಬನೆ ಪ್ರಕಟವಾಯಿತು. ಸರ್ಟನ್ ನೋಟ್ಸ್ ಆಫ್ ಇನ್‌ಸ್ಟ್ರಕ್ಷನ್ (1575) ಎಂಬ ಇತನ ಕೃತಿ ಕಾವ್ಯ ಬರೆಯುವ ವಿಧಾನವನ್ನು ಕುರಿತದ್ದಾಗಿದೆ.[] ಒಂದು ಕಾಲದಲ್ಲಿ ಇಟಾಲಿಯನ್ ರೀತಿಯನ್ನು ಪ್ರೀತಿಸಿದ ಈತ ಕೊನೆಕೊನೆಗೆ ಅದನ್ನು ವಿರೋಧಿಸಿದ. ಈತನ ಕಾವ್ಯಗಳಲ್ಲಿ ಸ್ವದೇಶಭಾಷಾಪ್ರೇಮ ಎದ್ದು ಕಾಣುತ್ತದೆ. ಪ್ರತಿಭೆಯ ಹರವಿದ್ದರೂ, ಕಲಾತ್ಮಕ ಸೊಗಸಿಲ್ಲದ ಈತನ ಸರಳರಗಳೆಗಳು (ಬ್ಲಾಂಕ್ ವರ್ಸ್) ಆಕರ್ಷಕವಾಗಿಲ್ಲ.

ಈತನ ಎಲ್ಲ ಕೃತಿಗಳನ್ನೂ ಎರಡು ಸಂಪುಟಗಳಲ್ಲಿ ಜೆ. ಡಬ್ಲ್ಯು. ಕನ್‌ಲಿಫ಼್ ಎಂಬಾತ ಸಂಪಾದಿಸಿ ಪ್ರಕಟಿಸಿದ್ದಾನೆ. (1907-1910).

ಉಲ್ಲೇಖಗಳು

[ಬದಲಾಯಿಸಿ]
  1. Cunliffe, Supposes; The Oxford Companion to English Literature, ed. by Margaret Drabble, 5th edn (Oxford: Oxford University Press, 1984), s.v. "Gascoige, George".
  2. "Gascoigne, George (GSCN555G)". A Cambridge Alumni Database. University of Cambridge.
  3. Ronald Binns, Gascoigne: The Life of a Tudor Poet (York: Zoilus Press, 2021), p. 470.
  4. Austen, Gillian. "Self-portraits and Self-presentation in the Work of George Gascoigne". Early Modern Literary Studies 14.1/Special Issue 18 (May 2008).


ಹೊರಗಿನ ಕೊಂಡಿಗಳು

[ಬದಲಾಯಿಸಿ]




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: