ಜಾಪಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಪಾಳವು ಯುಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಪ್ರಸಿದ್ಧ ಔಷಧಿ ಸಸ್ಯ. ಜಾಪಾಳ ಪರ್ಯಾಯ ನಾಮ. ಇಂಗ್ಲಿಷಿನಲ್ಲಿ ಪರ್ಜಿಂಗ್ ಕ್ರೋಟನ್ ಎಂಬ ಹೆಸರುಂಟು. ಕ್ರೋಟನ್ ಟಿಗ್ಲಿಯಮ್ ಇದರ ಶಾಸ್ತ್ರೀಯ ಹೆಸರು. ಭಾರತಾದ್ಯಂತ ವ್ಯಾಪಿಸಿರುವ ಇದು ಅಸ್ಸಾಮ್, ಬಂಗಾಳ ಮತ್ತು ಪಶ್ಚಿಮಘಟ್ಟಗಳಲ್ಲಿ ಬೆಳೆಯುತ್ತದೆ. ಶ್ರೀಲಂಕಾ ಮತ್ತು ಬರ್ಮಗಳಲ್ಲೂ ಇದು ಕಾಣದೊರೆಯುತ್ತದೆ. 5-7 ಮೀ. ಎತ್ತರಕ್ಕೆ ಬೆಳೆಯುವ ನಿತ್ಯಹಸಿರಾಗಿರುವ ಮರ ಇದು. ಎಲೆಗಳು ಸರಳ ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಅವುಗಳ ಆಕಾರ ಅಂಡದಂತೆ ಇಲ್ಲವೆ ದೀರ್ಘ ಅಂಡದಂತೆ; ಅಂಚು ದಂತಿತ. ಕೆಲವು ಸಲ ಎಲೆಯ ಕೆಳ ಮೈಮೇಲೆ ಸಣ್ಣ ಗ್ರಂಥಿಗಳಿರುವುದುಂಟು. ಹೂಗಳು ಏಕಲಿಂಗಿಗಳು. ಹರಳು (ಔಡಲ) ಗಿಡದಲ್ಲಿರುವಂತೆ ಹೆಣ್ಣುಗಂಡು ಹೂಗಳೆರಡೂ ಒಂದೇ ಹೂಗೊಂಚಲಿನಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲು ರೆಸೀóಮ್ ಬಗೆಯದು. ಗೊಂಚಲಿನ ಬುಡಭಾಗದಲ್ಲಿ ಹೆಣ್ಣುಹೂಗಳೂ ಮೇಲ್ಭಾಗದಲ್ಲಿ ಗಂಡುಹೂಗಳೂ ಇವೆ. ಗಂಡುಹೂವಿನಲ್ಲಿ 5 ಪುಷ್ಪಪತ್ರಗಳು, 5 ದಳಗಳು, 15-20 ಕೇಸರಗಳು ಉಂಟು. ಹೆಣ್ಣುಹೂವಿನಲ್ಲಿ 5 ಪುಷ್ಪಪತ್ರಗಳು, 1 ಅಂಡಾಶಯ ಇವೆ. ದಳಗಳಿಲ್ಲ. ಫಲ ಸಂಪುಟ ಮಾದರಿಯದು; 3 ಬೀಜಗಳನ್ನು ಒಳಗೊಂಡಿದೆ. ಬೀಜಗಳು ಅಂಡಾಕಾರದವು ಹಾಗೂ ಕಂದು ಬಣ್ಣದವು. ಇವುಗಳ ಉದ್ದ 1-2 ಸೆ.ಮೀ. ಬೀಜದ ಸಿಪ್ಪೆ ಸುಲಭವಾಗಿ ಮುರಿದು ಪುಡಿಯಾಗುತ್ತದೆ.

ಜಾಪಾಳ ಬೀಜದಲ್ಲಿ 43%-63% ರಷ್ಟು ಎಣ್ಣೆಯುಂಟು. ಬೀಜಗಳನ್ನು ಒತ್ತಡಕ್ಕೊಳಪಡಿಸಿ ಇಲ್ಲವೇ ವಿವಿಧ ಲೀನಕಾರಿಗಳಲ್ಲಿ ಸೇರಿಸಿ ಎಣ್ಣೆಯನ್ನು ಹೊರತೆಗೆಯಬಹುದು. ಎಣ್ಣೆ ಅತ್ಯಂತ ತೀಕ್ಷ್ಣವಾದ ರೇಚಕವೆಂದು ಪ್ರಸಿದ್ಧವಾಗಿದೆ. ರೇಚಕಗಳಲೆಲ್ಲ ಅತ್ಯಂತ ತೀವ್ರವಾದದ್ದೆಂದರೆ ಇದೇ. ಬೀಜಗಳಿಗೂ ಈ ಗುಣ ಉಂಟು. ರೇಚಕ ಗುಣ ಎಷ್ಟು ತೀಕ್ಷ್ಣವೆಂದರೆ ಎಣ್ಣೆಯನ್ನು ಚರ್ಮಕ್ಕೆ ಸವರಿದರೆ ಕೂಡ ಭೇದಿಯಾಗತೊಡಗುತ್ತದೆ. ಬೀಜಗಳನ್ನು ಚರ್ಮದ ಮೇಲೆ ಗೀಚಿದರೆ ಊತ, ಮೈಕಡಿತಗಳೂ ಉಂಟಾಗುತ್ತವೆ. ಆದ್ದರಿಂದ ಇವನ್ನು ಬಳಸುವಾಗ ಬಲು ಎಚ್ಚರಿಕೆ ವಹಿಸಬೇಕು. ಅಲ್ಲದೆ ಬೀಜಗಳಿಗೂ ಎಣ್ಣೆಗೂ ಗುಳ್ಳೆಗಳನ್ನು ಉಂಟುಮಾಡುವ ಗುಣ ಇದೆ. ದನದ ಸಗಣಿ ಮತ್ತು ನೀರುಗಳ ಮಿಶ್ರಣದಲ್ಲಿ ಒಂದು ಸಲಕ್ಕೆ 24 ಗಂಟೆಗಳ ಕಾಲದಂತೆ 2-3 ಸಲ ಬೇಯಿಸಿ, ತೊಳೆದು, ಒಣಗಿಸಿ, ಸಿಪ್ಪೆ ಹಾಗೂ ಭ್ರೂಣಗಳನ್ನು ತೆಗೆದುಹಾಕಿ ಸಂಸ್ಕರಿಸಿದರೆ ಬೀಜಗಳ ತೀವ್ರ ದುಷ್ಪರಿಣಾಮಗಳನ್ನು ಹೋಗಲಾಡಿಸಬಹುದು. ಹೀಗೆ ಸಂಸ್ಕರಿಸಿದ ಬೀಜಗಳನ್ನು ಪುಡಿಮಾಡಿ ಮಲಬದ್ಧತೆ, ಗೂರಲು, ಸಂಧಿವಾತ, ಉಳುಕು ಮುಂತಾದವುಗಳ ಚಿಕಿತ್ಸೆಯಲ್ಲಿ ಬಳಸಬಹುದು. ಬಳಸುವ ಪ್ರಮಾಣ 15-30 ಮಿ.ಗ್ರಾ.ನಷ್ಟಿರಬೇಕು. ಆದರೆ ಪ್ರಮಾಣ ಹೆಚ್ಚಾದರೆ ವಾಂತಿ, ಹೊಟ್ಟೆಕಿವಿಚುವಿಕೆ, ನೋವು, ದೌರ್ಬಲ್ಯ, ಎದೆ ಒತ್ತುವಿಕೆ, ತಲೆನೋವು, ರಕ್ತದ ಒತ್ತಡದ ಇಳಿತ, ಜ್ವರ ಮುಂತಾದ ದುಷ್ಪರಿಣಾಮಗಳು ತಲೆದೋರುತ್ತವೆ. ಗರ್ಭಿಣಿಯರು ಇದನ್ನು ಬಳಸಿದರೆ ಗರ್ಭಪಾತವಾಗುವ ಸಂಭವ ಉಂಟು, ಬೀಜಗಳನ್ನು ಅರ್ಧಂಬರ್ಧ ಹುರಿದು ಮೀನು ಮುಂತಾದ ಜಲಚರಗಳನ್ನು ಕೊಲ್ಲಲು ಉಪಯೋಗಿಸುತ್ತಾರೆ.

ಜಾಪಾಳದ ಎಣ್ಣೆ ಹರಳೆಣ್ಣೆಯಂತೆಯೇ ಒಂದು ಬಾಷ್ಪಶೀಲವಲ್ಲದ ಎಣ್ಣೆ. ಇದಕ್ಕೆ ಕಂದು ಬಣ್ಣವೂ ಒಂದು ತೆರನ ಅಸಹ್ಯ ವಾಸನೆಯೂ ಇದೆ. ಇದರಲ್ಲಿ ಕ್ರೋಟನೋಲಿಯಿಕ್, ಟಿಗ್ಲಿಕ್, ಓಲಿಯಿಕ್, ಲಿನೋಲಿಯಿಕ್, ಮಿರಿಸ್ಟಿಕ್ ಆಮ್ಲಗಳು ಇವೆ. ಎಣ್ಣೆಗಿರುವ ಗುಳ್ಳೆಕಾರಕ ಗುಣಕ್ಕೆ ಕಾರಣವಾಗಿರುವ ಒಂದು ಬಗೆಯ ರೆಸಿನ್ ವಸ್ತುವೂ ಇದರಲ್ಲುಂಟು. ಎಣ್ಣೆಗೆ ತೀವ್ರ ರೇಚಕ ಗುಣ ಇದೆ ಎಂದು ಮೇಲೆ ಹೇಳಿದೆ. ಇದನ್ನು ಸೇವಿಸಿದಾಗ ಇದು ಜಠರದಲ್ಲಿ ಕೊಂಚ ಬದಲಾವಣೆ ಹೊಂದಿ ಅಲ್ಲಿಂದ ಕರುಳಿಗೆ ಸಾಗಿ ಅಲ್ಲಿ ತೀವ್ರವಾದ ಅವರ್ಚಲನೆಯನ್ನು ಉಂಟುಮಾಡುತ್ತದೆ. ಇದರಿಂದ ಶರೀರದಲ್ಲಿ ನೀರು ಮತ್ತು ಲವಣಗಳು ಕಡಿಮೆಯಾಗುತ್ತವೆ. ತತ್ಫಲವಾಗಿ ದೌರ್ಬಲ್ಯ, ಕಾಲುಗಳ ನೋವು ಉಂಟಾಗುತ್ತವೆ. ಜ್ಞಾನವೂ ತಪ್ಪಬಹುದು. ರಕ್ತದ ಒತ್ತಡ ಕಡಿಮೆಯಾಗುತ್ತದೆ. ಸರಿಯಾದ ರೀತಿಯಲ್ಲಿ ಚಿಕಿತ್ಸೆ ಮಾಡದಿದ್ದರೆ ಪ್ರಾಣವೇ ಹೋಗಬಹುದು. ಜಾಪಾಳದ ಎಣ್ಣೆ ಇಷ್ಟು ಅಪಾಯಕಾರಿಯಾದ್ದರಿಂದ ಇದರ ಬಳಕೆಯನ್ನು ಬ್ರಿಟಿಷ್ ಔಷಧಮಂಜರಿಯಲ್ಲಿ (ಫಾರ್ಮಕೋಪಿಯ) ನಿಷೇಧಿಸಲಾಗಿದೆ.

ಜಾಪಾಳದ ಎಣ್ಣೆ ಕಟುಪಾಕವಾದ್ದರಿಂದ ಕಫ, ವಾತ ರೋಗಗಳಿಗೆ, ಸೊಂಟ ನೋವು, ಆಮವಾತ, ಕುಷ್ಠ, ಜಲೋದರ ಮುಂತಾದ ವ್ಯಾಧಿಗಳ ಚಿಕಿತ್ಸೆಗೆ ಇದನ್ನು ಉಪಯೋಗಿಸುತ್ತಾರೆ. ಬೀಜಗಳನ್ನು ಸಂಸ್ಕರಿಸಿ ಅನಂತರ ತಯಾರಿಸುವ ಉಜ್ಜೆಣ್ಣೆಯನ್ನು ಸಾಸುವೆ ಎಣ್ಣೆಯೊಡನೆ ಸೇರಿಸಿ, ಕೀಲುವಾತ, ಗೂರಲು, ನರವೇದನೆ, ಕೀಲುರಿತ, ಕೀಲೋಳುರಿತ ಮುಂತಾದ ವ್ಯಾಧಿಗಳಲ್ಲಿ ಚರ್ಮದ ಮೇಲೆ ಉಜ್ಜಲು ಬಳಸುವುದುಂಟು. ಶುಂಠಿಮಿಶ್ರಿತ ಜಾಪಾಳದ ಎಣ್ಣೆಯಿಂದ ನಾಯಿಕೆಮ್ಮು ಗುಣವಾಗುತ್ತದೆಂದು ನಂಬಿಕೆಯಿದೆ. ಇದು ಕ್ರಿಮಿಹರವೂ ಹೌದು. ಜಾಪಾಳದ ಎಣ್ಣೆಯ ಅನೇಕ ದುರ್ಗುಣಗಳನ್ನು ನಿಂಬೇ ಹಣ್ಣಿನ ರಸ ಸೇವನೆಯಿಂದ ನಿವಾರಣೆ ಮಾಡಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಾಪಾಳ&oldid=1167177" ಇಂದ ಪಡೆಯಲ್ಪಟ್ಟಿದೆ