ವಿಷಯಕ್ಕೆ ಹೋಗು

ಜಾನ್ ಗಾರ್ಸ್ಟಾಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನ್ ಗಾರ್ಸ್ಟಾಂಗ್, ೮೦ನೇ ವಯಸ್ಸಿನಲ್ಲಿ

ಜಾನ್ ಗಾರ್ಸ್ಟಾಂಗ್ (1876-1956) ಒಬ್ಬ ಬ್ರಿಟಿಷ್ ಪುರಾತತ್ವಜ್ಞ. ಮಧ್ಯಪ್ರಾಚ್ಯದ ಬಗ್ಗೆ ಈತ ನಡೆಸಿದ ಸಂಶೋಧನೆಗಳಿಂದಾಗಿ ಪ್ರಖ್ಯಾತನಾಗಿದ್ದಾನೆ.

ಆರಂಭಿಕ ಜೀವನ

[ಬದಲಾಯಿಸಿ]

ಜನನ ಲ್ಯಾಂಕಷೈರಿನ ಬ್ಲಾಕ್‌ಬರ್ನ್‌ನಲ್ಲಿ, 1876ರ ಮೇ 5 ರಂದು. ಆಕ್ಸ್‌ಫರ್ಡಿನ ಜೀಸಸ್ ಕಾಲೇಜಿನಲ್ಲಿ ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ[] ಈತನಿಗೆ ರೋಮ್ ಮತ್ತು ಬ್ರಿಟಿಷ್ ಪ್ರಾಕ್ತನದಲ್ಲಿ ಆಸಕ್ತಿ ಹುಟ್ಟಿತು. ಈತ ಪ್ರಕಟಿಸಿದ ರೋಮನ್ ರಿಬ್‌ಚೆಸ್ಟರ್ (1899) ಈ ಆಸಕ್ತಿಯ ಫಲ.

ವೃತ್ತಿಜೀವನ

[ಬದಲಾಯಿಸಿ]

1902ರಲ್ಲಿ ಈತ ಲಿವರಪೂಲ್ ವಿಶ್ವವಿದ್ಯಾಲಯದಲ್ಲಿ ಈಜಿಪ್ಟ್ ಪ್ರಾಕ್ತನಶಾಸ್ತ್ರದ ಉಪಪ್ರಾಧ್ಯಾಪಕನಾಗಿದ್ದ. ಅದೇ ವಿಶ್ವವಿದ್ಯಾಲಯದಲ್ಲಿ 1907ರಿಂದ 1941ರ ವರೆಗೆ ಪ್ರಾಕ್ತನಶಾಸ್ತ್ರ ವಿಧಾನಗಳ ಮತ್ತು ಪ್ರಯೋಗದ ಪ್ರಾಧ್ಯಾಪಕನಾಗಿದ್ದ. ಲಿವರ್‌ಫೂಲ್ ಪ್ರಾಕ್ತನಶಾಸ್ತ್ರ ಸಂಸ್ಥೆಯ ಸ್ಥಾಪನೆಗೆ ಈತ ಕಾರಣ.[] 1899ರಲ್ಲಿ ಈತ ವಿಲಿಯಂ ಮ್ಯಾಥ್ಯೂ ಫ್ಲಿಂಡರ್ಸ್ ಪೆಟ್ರಿಯ ಕೆಳಗೆ ಕೆಲಸ ಮಾಡಲು ಈಜಿಪ್ಟಿಗೆ ಹೋದ. ಮುಂದಿನ 15 ವರ್ಷಗಳ ಕಾಲ ಈಜಿಪ್ಟ್, ನ್ಯೂಬಿಯ, ಏಷ್ಯ ಮೈನರ್‌ಗಳಲ್ಲಿ ಉತ್ಖನನ ಮಾಡಿದ. ಹಿಟ್ಟೈಟ್ ನಾಗರಿಕತೆಯ ವಿಚಾರದಲ್ಲಿ ಅಧಿಕಾರಯುತವಾಗಿ ಹೇಳಬಲ್ಲವನಾದ. 1910ರಲ್ಲಿ ಪ್ರಕಟವಾದ ದ ಲ್ಯಾಂಡ್ ಆಫ್ ದ ಹಿಟ್ಟೈಟೀಸ್ ಎಂಬುದು ಈ ಬಗ್ಗೆ ಒಂದು ಶಿಷ್ಟ ಗ್ರಂಥ. ಇದನ್ನು ಈತ ಪರಿಷ್ಕರಿಸಿ 1929ರಲ್ಲಿ ದ ಹಿಟ್ಟೈಟ್ ಎಂಪೈರ್ ಎಂಬ ಹೆಸರಿನಲ್ಲಿ ಪ್ರಕಟಿಸಿದ. ಪ್ರಾಚೀನ ಇಥಿಯೋಪಿಯದ ರಾಜಧಾನಿ ಮೆರೊಯೀದಲ್ಲಿ ಈತ ನಡೆಸಿದ (1910-14) ಉತ್ಖನನಗಳು ಅತ್ಯಂತ ಗಮನಾರ್ಹ ವಿಚಾರಗಳನ್ನು ಹೊರಗೆಡವಿದವು.[] ಅದು ರೋಮನ್ನರ ಆಕ್ರಮಣಕ್ಕೊಳಪಟ್ಟಿತ್ತೆಂಬುದು ವ್ಯಕ್ತಪಟ್ಟದ್ದು ಆಗಲೇ.

ಒಂದನೆಯ ಮಹಾಯುದ್ಧದ ಕಾಲದಲ್ಲಿ ಈತ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ. ಈತ ಜೆರೂಸಲೆಂನಲ್ಲಿ ಬ್ರಿಟಿಷ್ ಪುರಾತತ್ತ್ವ ಶಾಲೆಯ ಪ್ರಥಮ ನಿರ್ದೇಶಕನಾಗಿ ನೇಮಕಗೊಂಡದ್ದು 1919ರಲ್ಲಿ. ಪ್ಯಾಲೆಸ್ಟೇನಿನ ಪುರಾತತ್ತ್ವ ಇಲಾಖೆಯನ್ನು ಈತ ವಹಿಸಿಕೊಂಡದ್ದು 1920ರಲ್ಲಿ. 1926ರಲ್ಲಿ ಈ ಎರಡು ಹುದ್ದೆಗಳಿಂದ ನಿವೃತ್ತಿ ಹೊಂದಿದ ಮೇಲೆಯೂ ಪುರಾತತ್ತ್ವ ವಿಚಾರಗಳಲ್ಲಿ ಕೆಲಸ ಮುಂದುವರಿಸಿದ. 1930-36ರಲ್ಲಿ ಜೆರಿಕೋದಲ್ಲಿ ಈತ ಮಾಡಿದ ಉತ್ಖನನಗಳು ಬಲು ಅಮೂಲ್ಯವಾದಂಥವು.[] ನೂತನ ಶಿಲಾಯುಗ ಮತ್ತು ಕಂಚಿನ ಯುಗಗಳ ಜನವಸತಿಯ ಬಗ್ಗೆ ಅನೇಕ ಮುಖ್ಯ ಸಂಗತಿಗಳು ಆವಿಷ್ಕಾರಗೊಂಡುವು.

ಈತನ ಮೆರ್ಸಿನ್‌ನಲ್ಲಿನ ಸಂಶೋಧನೆಗೆ ಎರಡನೆಯ ಮಹಾಯುದ್ಧ ಅಡ್ಡಿಯಾಯಿತು. ಈ ಸಂಶೋಧನೆಯ ವರದಿ ಪ್ರಿ - ಹಿಸ್ಟಾರಿಕ್ ಮೆರ್ಸಿನ್ ಎಂಬ ಹೆಸರಿನಲ್ಲಿ ಪ್ರಕಟವಾದ್ದು 1953ರಲ್ಲಿ. ಆನಟೋಲಿಯದ ಬಗ್ಗೆ ನಡೆಸಿದ ಅಧ್ಯಯನಕ್ಕೆ ಮನ್ನಣೆಯಾಗಿ ಈತ 1947-48ರಲ್ಲಿ ಆಂಕಾರದ ಬ್ರಿಟಿಷ್ ಪುರಾತತ್ತ್ವ ಶಾಲೆಯ ಪ್ರಥಮ ನಿರ್ದೇಶಕನಾಗಿ ನೇಮಕಗೊಂಡ.[] 1949ರಲ್ಲಿ ಅದರ ಅಧ್ಯಕ್ಷನಾದ. ಈತ ಲೆಬನನಿನ ಬೀರತ್‌ನಲ್ಲಿ 1956ರ ಸಪ್ಟೆಂಬರ್ 12ರಂದು ತೀರಿಕೊಂಡ.

ಉಲ್ಲೇಖಗಳು

[ಬದಲಾಯಿಸಿ]
  1. Gurney, O R; Freeman, P W M (May 2012). "Garstang, John (1876–1956)". Oxford Dictionary of National Biography. Oxford University Press. doi:10.1093/ref:odnb/33341. Retrieved 2016-05-22.
  2. Garstang Museum of Archaeology, About the Museum, University of Liverpool, archived from the original on 2016-10-12, retrieved 2016-05-22
  3.  Margoliouth, David Samuel (1911). "Meroe" . In Chisholm, Hugh (ed.). Encyclopædia Britannica. Vol. 18 (11th ed.). Cambridge University Press. p. 172. {{cite encyclopedia}}: Cite has empty unknown parameters: |HIDE_PARAMETER= and |separator= (help)
  4. Palestine Exploration Fund, Professor John Garstang, 1876-1956, Palestine Exploration Fund, archived from the original on 2011-06-22, retrieved 2016-05-22
  5. Gill, David W. J. (2018). Winifred Lamb : Aegean prehistorian and museum curator. Oxford: Archaeopress. pp. 214–5. ISBN 978-1784918798. OCLC 1042418677.