ಜಾನ್ ಕಾಕ್ರಾಫ್ಟ್
| John Cockcroft | |
|---|---|
| Cockcroft in 1951 | |
| ಅಧಿಕಾರ ಅವಧಿ 1959 – 1967 | |
| ಪೂರ್ವಾಧಿಕಾರಿ | Office established |
| ಉತ್ತರಾಧಿಕಾರಿ | Sir William Hawthorne |
| ವೈಯಕ್ತಿಕ ಮಾಹಿತಿ | |
| ಜನನ | John Douglas Cockcroft ೨೭ ಮೇ ೧೮೯೭ Todmorden, England, UKGBI |
| ಮರಣ | 18 September 1967 (aged 70) Cambridge, England, UK |
| ಸಮಾಧಿ ಸ್ಥಳ | Ascension Parish Burial Ground, Cambridge |
ಜಾನ್ ಕಾಕ್ರಾಫ್ಟ್ 1897-1967. ಬ್ರಿಟನ್ನಿನ ನ್ಯೂಕ್ಲಿಯರ್ ವಿಜ್ಞಾನಿ. ನ್ಯೂಕ್ಲಿಯರ್ ಭೌತವಿಜ್ಞಾನ ಬಾಲ್ಯಾವಸ್ಥೆಯಲ್ಲಿದ್ದಾಗ ಪರಮಾಣುವಿನ ನ್ಯೂಕ್ಲಿಯಸನ್ನು ಪ್ರಯೋಗಕ್ಕೊಳಪಡಿಸಿ, ನ್ಯೂಕ್ಲಿಯಸ್ ಪರಿವರ್ತನೆಯನ್ನು ಸಂಪೂರ್ಣ ಕೃತ್ರಿಮವಾಗಿ ಸಾಧಿಸಬಹುದೇ ಎಂದು ರುದರ್‍ಫೋರ್ಡ್ ಮತ್ತು ಅವರ ಶಿಷ್ಯರು ಆಲೋಚಿಸುತ್ತಿದ್ದರು. ಆ ಮೊದಲೇ ರುದರ್‍ಫೋರ್ಡ್ ನೈಸರ್ಗಿಕ ಆಲ್ಫಾಕಣಗಳಿಂದ ನ್ಯೂಕ್ಲಿಯಸ್ ಪರಿವರ್ತನೆ ಸಾಧಿಸಿದ್ದ. ವೇಗವೃದ್ಧಿಗೊಳಿಸಲ್ಪಟ್ಟ ವಿದ್ಯುತ್ ಕಣಗಳ ಆವಶ್ಯಕತೆ ಆಗ ತಿಳಿಯಿತು. ಕಾಕ್ರಾಫ್ಟ್ (ವಾಲ್ಟನ್ ಮತ್ತು ಗಲ್ಬರ್ಟರೊಂದಿಗೆ) 1930ರಲ್ಲಿ ಕಣವೇಗೋತ್ಕರ್ಷಕವನ್ನು ಸಂಶೋಧಿಸಿ ಈ ಕೊರತೆಯನ್ನು ಭರ್ತಿ ಮಾಡಿದ; ಮತ್ತು ಮುಂದಿನ ಎರಡೇ ವರ್ಷಗಳೊಳಗೆ (1932ರಲ್ಲಿ ವಾಲ್ಟನ್ನಮೊಡನೆ) ಕಣವೇಗೋತ್ಕರ್ಷಕದಲ್ಲಿ ವೇಗವೃದ್ಧಿಗೊಳಿಸಲ್ಪಟ್ಟ ವಿದ್ಯುತ್‍ಕಣಗಳಿಂದ ಪರಮಾಣು ನ್ಯೂಕ್ಲಿಯಸ್ ಪರಿವರ್ತನೆಯನ್ನು ಸಹ ಸಾಧಿಸಿದ. ಈ ಪ್ರಯೋಗದಲ್ಲಿ ಕಾಕ್ರಾಫ್ಟ್ ಲೀಥಿಯಮನ್ನು ಪ್ರೋಟಾನುಗಳ ತಾಡನೆಗೆ ಈಡು ಮಾಡಿ ಹೀಲಿಯಮ್ ನ್ಯೂಕ್ಲಿಯಸುಗಳನ್ನು (ಆಲ್ಫ ಕಣಗಳನ್ನು) ದೊರಕಿಸಿದ. ಈ ಕ್ರಿಯೆ ಆನುಷಂಗಿಕವಾಗಿ ಐನ್‍ಸ್ಟೈನನ ರಾಶಿ-ಶಕ್ತಿ ಸಮೀಕರಣವನ್ನು ಪ್ರಾಯೋಗಿಕವಾಗಿ ದೃಢಪಡಿಸಿತು. ಕಾಕ್ರಾಫ್ಟನ ಇವೆರಡೂ ಸಾಧನೆಗಳು ಪ್ರಪ್ರಥಮಗಳು. ಪರಮಾಣು ನ್ಯೂಕ್ಲಿಯಸ್ ಪರಿವರ್ತನೆಯ ಮಹತ್ತ್ವದ ಸಾಧನೆಗಾಗಿ 1951ರಲ್ಲಿ ಭೌತವಿಜ್ಞಾನ ವಿಭಾಗದ ನೊಬೆಲ್ ಬಹುಮಾನ ಈತನಿಗೆ (ವಾಲ್ಟನ್ನನೊಂದಿಗೆ) ಲಭಿಸಿತು.
ಬಾಲ್ಯ,ವಿದ್ಯಾಭ್ಯಾಸ
[ಬದಲಾಯಿಸಿ]ಕಾಕ್ರಾಫ್ಟ್ ಹುಟ್ಟಿದ್ದು ಇಂಗ್ಲೆಂಡಿನ ಟಾಡ್ ಮಾರ್ಡೆನ್ನಿನಲ್ಲಿ, ಮೇ 27,1897ರಂದು. ವಿದ್ಯಾರ್ಜನೆ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಮತ್ತು ಕೇಂಬ್ರಿಜ್‍ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ. 1928ರಿಂದ 1946ರವರೆಗೆ ಸೇಂಟ್ ಜಾನ್ಸ್ ಕಾಲೇಜಿನ ಫೆಲೋ ಆಗಿಯೂ 1947ರಿಂದ ಅದೇ ಕಾಲೇಜಿನ ಗೌರವ ಫೆಲೋ ಆಗಿಯೂ ಕೆಲಸ ಮಾಡಿದ. ಕಾಕ್ರಾಫ್ಟ್‍ನ ಎರಡು ಅತ್ಯಂತ ಪ್ರಮುಖ ಉಪಜ್ಞೆಗಳು ಹೀಗಿವೆ. ಮೊದಲನೆಯದು ಮೂಲಕಣವಾದ ಪ್ರೋಟಾನ್ ಅನ್ನು ವೇಗೋತ್ಕರ್ಷಗೊಳಿಸಬಲ್ಲ ವಿದ್ಯುತ್ ವಿಭವವನ್ನು ಸೃಷ್ಟಿಸುವ `ವೇಗೋತ್ಕರ್ಷಕ'. ಎರಡನೇ ಮಹಾಯುದ್ಧದ ಮೊದಲು ಮತ್ತು ಆನಂತರ ಪರಮಾಣು ಬಾಂಬ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ, ಎರಡನೆಯದು ಮುಂದೆ ಹೈಡ್ರೊಜನ್ ಬಾಂಬ್ ತಯಾರಿಕೆಗೂ ಈತನ ಉಪಜ್ಞೆ ನೆರವು ನೀಡಿತು
ಪದವಿ
[ಬದಲಾಯಿಸಿ]ಕಾಕ್ರಾಫ್ಟ್‍ನಿಗೆ ದೊರೆತ ಪದವಿ ಪ್ರಶಸ್ತಿಗಳೂ ಅವನು ಪಡೆದ ಸ್ಥಾನಗಳೂ ಅತ್ಯುಚ್ಚ ಮಟ್ಟದವು. ಪದವಿ ಪ್ರಶಸ್ತಿಗಳಲ್ಲಿ ಮುಖ್ಯವಾದವು: ರಾಯಲ್ ಸೊಸೈಟಿಯ ಫೆಲೋ (1936), ಹಾಯ್ಘಸ್ ಪದಕ (1938), ನೈಟ್ ಪದವಿ (1948), ನೊಬೆಲ್ ಪಾರಿತೋಷಕ (1951), ನೈಟ್ ಕಮಾಂಡರ್ ಆಫ್ ದಿ ಬಾಥ್ (1953) ಬ್ರಿಟಿಷ್ ಅಸೋಸಿಯೇಷನ್ನಿನ ಅಧ್ಯಕ್ಷ ಪದವಿ (1962). ಅವನು ಪಡೆದ ಸ್ಥಾನಗಳಲ್ಲಿ ಮುಖ್ಯವಾದವು: ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜಾಕ್ಸೊನಿಯನ್ ಪ್ರೊಫೆಸರ್ ಆಫ್ ನ್ಯಾಚುರಲ್ ಫಿಲಾಸಫಿ (1939-1946), ಬ್ರಿಟಿಷ್ ಸರ್ಕಾರದ ಆಕಾಶ ಸಂರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಚೀಫ್ ಸೂಪರಿಂಟೆಂಡೆಂಟ್ (1914-1944), ಕೆನಡಾದ ನ್ಯಾಷನಲ್ ರಿಸರ್ಚ್ ಕೌನ್ಸಿಲ್ಲಿನ ಪರಮಾಣುಶಕ್ತಿ ವಿಭಾಗದ ಡೈರೆಕ್ಟರ್ (1944-1946), ಇಂಗ್ಲೆಂಡಿನ ಹಾರ್ವೆಯಲ್ಲಿರುವ ಪರಮಾಣುಶಕ್ತಿ ಸಂಶೋಧನೆ ಇಲಾಖೆಯ ಡೈರೆಕ್ಟರ್ (1946), ಸಂರಕ್ಷಣಾ ಇಲಾಖೆಯ ಸಂರಕ್ಷಣಾ ಸಂಶೋಧನ ನೀತಿ ಸಮಿತಿಯ ಅಧ್ಯಕ್ಷ ಮತ್ತು ವೈಜ್ಞಾನಿಕ ಸಲಹೆಗಾರ (1952-1954), ಬ್ರಿಟಿಷ್ ಬ್ರಾಡ್‍ಕ್ಯಾಸ್ಟಿಂಗ್ ಕಾರ್ಪೊರೇಷನ್ನಿನ ವೈಜ್ಞಾನಿಕ ಸಲಹಾಮಂಡಳಿಯ ಸದಸ್ಯ (1948-1952).
ನಿಧನ
[ಬದಲಾಯಿಸಿ]ಸೆಪ್ಟೆಂಬರ್ 18, 1967 ರಂದು ಕಾಕ್ರಾಫ್ಟ್ ಕೇಂಬ್ರಿಜ್‍ನಲ್ಲಿ ಕಾಲವಾದ.
ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |