ವಿಷಯಕ್ಕೆ ಹೋಗು

ಜಸ್ನೇರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಸ್ನೇರಿಯ - ಜಸ್ನೇರಿಯೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರಿಕ ಸಸ್ಯ. ಸ್ವಿಟ್ಜರ್ಲೆಂಡಿನ ಪ್ರಸಿದ್ಧ ಪ್ರಕೃತಿ ಶಾಸ್ತ್ರಜ್ಞ ಕಾನ್ರಾರ್ಡ ಜೆಸ್ನರ್ (1516-1565) ಎಂಬವನ ಗೌರವಾರ್ಥವಾಗಿ ಇದಕ್ಕೆ ಈ ಹೆಸರನ್ನು ಕೊಡಲಾಗಿದೆ. ಬ್ರಜಿಲಿನ ಮೂಲವಾಸಿ ಇದು. ಕೊಳವೆಯಾಕಾರದ ಹೂಗಳನ್ನು ಬಿಡುವುದರಿಂದ ಇದನ್ನು ಗಾಜಿನ ಮನೆಯಲ್ಲಿ ಅಂದಕ್ಕಾಗಿ ಬೆಳೆಸುತ್ತಾರೆ. ಜಸ್ನೇರಿಯ ಬಹುವಾರ್ಷಿಕ ಮೂಲಿಕೆಯಾದರೂ ಪೊದೆಯಂತೆ ಬೆಳೆಯುವುದೂ ಉಂಟು. ಎಲೆಗಳು ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ಕಾಂಡದ ತುದಿಯಲ್ಲಿ ಮೂಡುವ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ದಳ ಸಮೂಹದ ಬುಡಭಾಗ ಉಬ್ಬಿದೆ. ಕೇಸರಗಳು 4. ಇವುಗಳಲ್ಲಿ 2 ಉಳಿದವಕ್ಕಿಂತ ಹೆಚ್ಚು ಉದ್ದ. ಅಂಡಾಶಯ ಉಚ್ಚಸ್ಥಾನದ್ದು; 2 ಕೋಶ (ಕಾರ್ಪೆಲು)ಗಳಿಂದ ಕೂಡಿದೆ. ಫಲ ಸಂಪುಟ ಮಾದರಿಯದು.

ಜಸ್ನೆರಿಯದಲ್ಲಿ ಸುಮಾರು 40 ಪ್ರಭೇದಗಳಿವೆ. ಮುಖ್ಯವಾದವು ಕಾರ್ಡಿನ್ಯಾಲಿಸ್, ಹೆಂಡರ್‍ಸೋನಿಯೈ, ಲಾಂಗಿಫ್ಲೋರ, ಕ್ರೇನಿಯೊಲೇರಿಯ, ಲಿಯೋಪೋಲ್ಡಿಯೈ, ರಿಫಲ್ಗೆನ್ಸ್, ಎಕ್ಸೋನಿಯೆನ್ಸಿಸ್ ಮತ್ತು ಡಾಂಕ್ಲೆರಿಯಾನಗಳು. ಇವನ್ನು ಬೀಜಗಳಿಂದ ಕಾಂಡತುಂಡುಗಳಿಂದ, ಗೆಡ್ಡೆಗಳಿಂದ ಇಲ್ಲವೆ ಎಲೆಗಳಿಂದ ವೃದ್ಧಿಸಲಾಗುತ್ತದೆ. ಬೀಜಗಳಿಂದ ಬೆಳೆಸುವಾಗ ಬೀಜಗಳನ್ನು ಮರಳು ಹೆಚ್ಚಾಗಿರುವ ಮಣ್ಣಿನಲ್ಲಿ ಮಾರ್ಚಿ-ಏಪ್ರಿಲ್ ತಿಂಗಳುಗಳಲ್ಲಿ ಬಿತ್ತಬೇಕು. ಗೆಡ್ಡೆಗಳಿಂದ ಬೆಳೆಸುವಾಗ ಗೆಡ್ಡೆಗಳನ್ನು ಗೋಡು, ಎಲೆಗೊಬ್ಬರ, ದನದ ಗೊಬ್ಬರ, ಮರಳುಗಳ ಮಿಶ್ರಣ ತುಂಬಿದ ಕುಂಡಗಳಲ್ಲಿ 2.50 ಸೆಂ.ಮೀ. ಆಳದಲ್ಲಿ ನೆಡಬೇಕು. ಬೇಸಿಗೆಯಲ್ಲಿ ಹೂಗಳನ್ನು ಪಡೆಯಬೇಕಾದರೆ ಮಾರ್ಚಿ ತಿಂಗಳಿನಲ್ಲೂ ಮಳೆಗಾಲದಲ್ಲಿ ಹೂಗಳನ್ನು ಪಡೆಯಲು ಮೇ ತಿಂಗಳಿನಲ್ಲೂ ಚಳಿಗಾಲದಲ್ಲಿ ಹೂಗಳನ್ನು ಪಡೆಯಲು ಜೂನ್ ತಿಂಗಳಿನಲ್ಲೂ ಗೆಡ್ಡೆಗಳನ್ನು ನೆಡಬೇಕು. ಸಸ್ಯ ಹೂಗಳನ್ನು ಬಿಡುವವರೆಗೆ ಚೆನ್ನಾಗಿ ನೀರು ಹಾಕಬೇಕು. ಗಿಡದ ಬೆಳವಣಿಗೆಗೆ 50º-75ºಈ ಉಷ್ಣತೆ ಅವಶ್ಯ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: