ಜರಾವಿಕೃತಿ
ಜರಾವಿಕೃತಿ - ಮುಪ್ಪಿನಲ್ಲಿ ಕೆಲವು ದೈಹಿಕ ಮತ್ತು ಮಾನಸಿಕ ಶಕ್ತಿಗಳ ಅವನತಿ ಹಾಗೂ ಮಾರ್ಪಾಡುಗಳಿಂದಾಗಿ ಉದ್ಭವಿಸುವ ಕೆಲವು ವರ್ತನ ವೈಪರೀತ್ಯಗಳಿಗೆ ಈ ಹೆಸರಿದೆ (ಸಿನಿಲಿಟಿ/ ಡಿಮೆನ್ಶಿಯಾ).
ಹಾಗಾದಾಗ ಶಕ್ತಿಸಾಮರ್ಥ್ಯಗಳು ಕುಗ್ಗುತ್ತವ ವಿಸ್ಮೃತಿ ಪ್ರಬಲವಾಗುತ್ತದೆ. ಸಂಶಯ, ಅಭದ್ರತೆ ಮತ್ತು ಸಿಡಿಮಿಡಿ ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ. ಇವು ಮಿತಿಯಲ್ಲಿದ್ದರೆ ಆ ವ್ಯಕ್ತಿಗಾಗಲೀ ಆತನಿಗೆ ಸಂಬಂಧಿಸಿದವರಿಗಾಗಲೀ ಹೆಚ್ಚು ತ್ರಾಸವಾಗುವುದಿಲ್ಲ. ಹೇಗೋ ಆತನನ್ನು ಸುಧಾರಿಸಬಹುದು. ಕೆಲವೊಮ್ಮೆ ದೈಹಿಕ ಮತ್ತು ಮಾನಸಿಕ ಮಾರ್ಪಾಡುಗಳು ವಿಪರೀತವಾಗಿ, ಅವನತಿ ಅತಿಯಾಗಿ ವರ್ತನ ವೈಪರೀತ್ಯಗಳು ಉಗ್ರರೂಪ ತಾಳುತ್ತವೆ. ಅವುಗಳಲ್ಲಿ ಮುಖ್ಯವಾದವು ಎರಡು : ಒಂದು ಮುಪ್ಪಿನ ಚಿತ್ತಭ್ರಂಶ ಅಥವಾ ಮುಪ್ಪಿನ ಮನೋ ವಿಕೃತಿ ಮತ್ತು ಎರಡನೆಯದು ಮಿದುಳಿನ ರಕ್ತನಾಳಗಳ ಪೆಡಸಣೆಯಿಂದಾಗುವ ಮನೋವಿಕೃತಿ ಅಥವಾ ಪೆಡಸು ರಕ್ತನಾಳ ಮನೋವಿಕೃತಿ. ಈ ಎರಡಕ್ಕೂ ದೈಹಿಕ ಹಿನ್ನಲೆ ಇರುವುದರಿಂದ ಇವನ್ನು ಆಂಗಿಕ ಮನೋವಿಕೃತಿಗಳೆಂದು ವರ್ಗೀಕರಣ ಮಾಡಲಾಗಿದೆ.
ಮುಪ್ಪಿನ ಚಿತ್ತಭ್ರಂಶ
[ಬದಲಾಯಿಸಿ]ವೃದ್ಧಾಪ್ಯದಲ್ಲಿ ಮಿದುಳಿನ ಜೀವಕಣಗಳು ನಾಶವಾಗಿ, ಮೂಲವ್ಯಕ್ತಿತ್ವ ಮಾರ್ಪಟ್ಟು, ಶಕ್ತಿಸಾಮರ್ಥ್ಯಗಳು ಕುಗ್ಗಿ, ವರ್ತನ ವೈಪರೀತ್ಯಗಳು ಉಗ್ರರೂಪ ತಾಳಿದಾಗ, ಅ ರೋಗಿಯನ್ನು ಮನೆಯಲ್ಲಿ ಸುಧಾರಿಸುವುದು ದುಸ್ಸಾಧ್ಯವಾಗಿ ಮನೋರೋಗಿಗಳ ಆಸ್ಪತ್ರೆಗೆ ಸೇರಿಸುತ್ತಾರೆ. ಆಸ್ಪತ್ರೆ ಸೇರುವ ರೋಗಿಗಳಲ್ಲಿ 8% ಮಂದಿ ಈ ಮನೋವಿಕೃತರು ಎಂದು ತಿಳಿದುಬಂದಿದೆ. ಇಂಥ ವಿಕೃತಿ 60ರಿಂದ 90ನೆಯ ವಯಸ್ಸಿನಲ್ಲಿ ಎಂದಾದರೂ ಕಾಣಿಸಿಕೊಳ್ಳಬಹುದು. ರೋಗಿಯ ಸರಾಸರಿ ವಯಸ್ಸು ಸುಮಾರು 75 ವರ್ಷ. ಸ್ತ್ರೀಯರ ಆಯುರ್ ಅವಧಿ ಪುರುಷರಿಗಿಂತ ದೀರ್ಘವಾದುದರಿಂದ ರೋಗ ಪುರುಷರಿಗಿಂತ ಸ್ತ್ರೀಯರಲ್ಲಿ ಹೆಚ್ಚು. ಈ ರೋಗಕ್ಕೆ ವಿದ್ಯಾಭೇದವಾಗಲೀ ಸಾಮಾಜಿಕ ಮತ್ತು ಅರ್ಥಿಕ ಭೇದವಾಗಲೀ ಕಂಡುಬರುವುದಿಲ್ಲ. ಆದರೆ ಅಲ್ಪಬುದ್ಧಿ ಮತ್ತು ಅಲ್ಪಸಾಧನೆಯವರಲ್ಲಿ ಇದು ಹೆಚ್ಚೆಂದು ವರದಿಗಳಿಂದ ವ್ಯಕ್ತವಾಗುತ್ತದೆ. ರೋಗಿಗಳಲ್ಲಿ ಹಳ್ಳಿಗರಿಗಿಂತ ಪಟ್ಟಣಿಗರೇ ಹೆಚ್ಚು.
ಮುಪ್ಪಿನ ಚಿತ್ತಭ್ರಂಶದಲ್ಲಿ ಐದು ಒಳವರ್ಗಗಳನ್ನು ಕಾಣಬಹುದು. ಎಂದರೆ (ಅ) ಸರಳ ಅವಣತಿ, (ಆ) ಸಂಭ್ರಾಂತಿ ಪ್ರತಿಕ್ರಿಯೆ, (ಇ) ಜರಾಮನೋವಿಕ್ಷೇಪ, (ಈ) ಉನ್ಮತ್ತ ಪ್ರಲಾಪ ಮತ್ತು ಗೊಂದಲ, (ಉ) ವಿಷಣ್ಣತೆ ಮತ್ತು ಕ್ಷೋಭೆ, ಈ ವರ್ಗೀಕರಣ ಕೃತಕವಾದುದು ಮತ್ತು ಕೇವಲ ನಮ್ಮ ಅನುಕೂಲಕ್ಕಾಗಿ ಎನ್ನಬಹುದು.
ಈ ರೋಗದ ಪ್ರಧಾನ ಲಕ್ಷಣಗಳಿವು: ಸ್ಮೃತಿಭ್ರಂಶತೆ, ಅಸ್ಥಿರತೆ, ಅಭದ್ರತೆ, ವಿಷಣ್ಣತೆ, ಅಶಾಂತಿ, ಚಪಲಚಿತ್ತತೆ, ಕಳವಳ, ಸಂಭ್ರಾಂತಿ, ಸನ್ನಿ, ಕಾಲ-ಸ್ಥಳಗಳ ಗೊಂದಲ ಮತ್ತು ಕಾಮವಿಕಾರ. ಈ ರೋಗ ಚಿಹ್ನೆಗಳು ಎಲ್ಲರಲ್ಲೂ ಒಂದೇ ವಿಧವಾಗಿರುವುದಿಲ್ಲ. ರೋಗಿಯ ರೊಗಪೂರ್ವದ ವ್ಯಕ್ತಿತ್ವ, ಅವನತಿಯ ಪ್ರಮಾಣ, ಅದರ ಸ್ವರೂಪ ಮತ್ತು ಆತನ ಮೇಲಣ ಸಾಮಾಜಿಕ ಒತ್ತಡ-ಇವುಗಳಿಗೆ ಅನುಸಾರವಾಗಿ ಅವು ಭಿನ್ನವಾಗಿರುತ್ತವೆ.
ವೃದ್ಧನಿಗೆ ಸ್ಮೃತಿಭ್ರಂಶವುಂಟಾಗುವುದರಿಂದ, ತಾನಾರು, ತನ್ನ ಹೆಸರೇನು, ತಾನೆಲ್ಲಿದ್ದೇನೆ ಎಂಬೆಲ್ಲವೂ ಮರೆತು ಹೋಗಿರುತ್ತವೆ. ಇತ್ತೀಚಿನ ಘಟನೆಗಳಂತೂ ಪೂರ್ಣವಾಗಿ ಮರೆತು ಹೋಗಿರುತ್ತವೆ. ಆಡುವ ಮಾತು ಮಾಡುವ ಕೆಲಸ ಎಲ್ಲವೂ ಅಸಂಬದ್ಧ. ಕಲಿಕೆ, ಗ್ರಹಿಕೆ, ವಿವೇಚನೆ ಮತ್ತು ಆಲೋಚನೆ ಅಸ್ತವ್ಯಸ್ತ. ಬಹಳ ಸ್ವಾರ್ಥಿಯಾದುದರಿಂದ ತನ್ನ ಊಟ ನಿದ್ರೆ ಮತ್ತು ಆರೋಗ್ಯಗಳ ಬಗ್ಗೆ ಚಿಂತಿಸುತ್ತಾನೆಯೇ ಹೊರತು ಇತರರು ಆತನ ಮನಸ್ಸಿಗೆ ಬರುವುದೇ ಇಲ್ಲ. ರಾತ್ರಿ ಎಲ್ಲ ನಿದ್ರೆಯಿಲ್ಲದೆ ಚಡಪಡಿಸುತ್ತಾನೆ. ಹಗಲೆಲ್ಲ ಮಲಗಿ ನಿದ್ರಿಸುತ್ತಾನೆ. ರಾತ್ರಿ ಮನೆ ಬಿಟ್ಟು ಹೋಗುವ ಸಂಭವವೂ ಉಂಟು. ಅಪರಿಚಿತರೊಡನೆ ಬಹಳ ಪರಿಚಿತರೇನೋ ಎನ್ನುವಂತೆ ಸಂಸಾರದ ಗುಟ್ಟನ್ನೆಲ್ಲ ಹೇಳಿಕೊಳ್ಳುತ್ತಾನೆ. ಅಸೂಯೆ ಮತ್ತು ಮಾತ್ಸರ್ಯಗಳಿಂದ ತುಂಬಿ ಹೋಗಿ ಇತರರ ಮುಖಸ್ತುತಿಗೆ ಮರುಳಾಗುತ್ತಾನೆ. ಸಂಭ್ರಾಂತಿ ಈತನನ್ನು ಕಾಡುತ್ತದೆ. ತನ್ನ ಅಸೆಗಳು ಪೂರೈಸದೇ ಹೋದಾಗ ಜಗಳವಾಡುತ್ತಾನೆ, ಆರೋಪಿಸುತ್ತಾನೆ.
ಕಾಮವಿಕಾರವಾಗಿ ತೋರ್ಪಡಿಕೆ, ಅತ್ಯಾಚಾರ, ವಿವೇಕ ಶೂನ್ಯ ವಿವಾಹ-ಇವು ಕಂಡುಬರುತ್ತವೆ. ಬರುಬರುತ್ತ ಸ್ಥಿತಿ ಚಿಂತಾಜನಕವಾಗಿ, ಜೀವಂತ ಶವದಂತೆ ಕಾಣುತ್ತಾನೆ. ರೋಗನಿರೋಧಕ ಶಕ್ತಿ ಕುಗ್ಗಿ, ಯಾವುದೋ ಒಂದು ಕಾಯಿಲೆಯಿಂದ ಅಸು ನೀಗುತ್ತಾನೆ. ಇಂಥ ಅವನತಿಗೆ ಕಾರಣಗಳು ಅನೇಕ. ಮಿದುಳಿನ ಜೀವಕಣಗಳ ನಾಶ, ಉಪಾಪಚಯಗಳ ವೈಪರೀತ್ಯ, ಅಂತಃಸ್ರಾವಗಳ ಕೊರತೆ, ಅರ್ಥಿಕ, ಸಾಮಾಜಿಕ ಸ್ಥಿತಿಯ ಕುಸಿತ, ಅಗಲಿಕೆ, ನಿವೃತ್ತಿ ಮತ್ತು ಸಮಾಜದ ಒತ್ತಡ ಇತ್ಯಾದಿಗಳ ಜೊತೆಗೆ ಹಿಂದಿನಿಂದಲೂ ಇದ್ದ ಮನೋಬೇನೆಯ ಚಿಹ್ನೆಗಳೂ ಕೂಡಿ ಈ ವಿಕೃತಿ ಕಾಣಿಸಿಕೊಳ್ಳುತ್ತದೆ. ಚಿಕಿತ್ಸೆ: ಈ ಮನೋವಿಕೃತಿ ಬಹಳ ಇಳಿವಯಸ್ಸಿನಲ್ಲಿ ಕಾಣಿಸಿಕೊಳ್ಳುವುದರಿಂದ ರೋಗ ಪ್ರಬಲವಾಗುತ್ತದೆಯೇ ವಿನಾ ಗುಣವಾಗುವ ಸಾಧ್ಯತೆ ಬಹಳ ಕಡಿಮೆ. ಒಳ್ಳೆಯ ಆರೈಕೆ. ಮೇಲ್ವಿಚಾರಣೆಗಳಿಂದ ಸ್ವಲ್ಪ ಸುಧಾರಿಸಬಹುದು. ಆದರೆ ಗುಣ ಹೊಂದುವವರ ಸಂಖ್ಯೆ 10% ಹೆಚ್ಚಿರಲಾರದು.
ಮಿದುಳಿನ ರಕ್ತನಾಳಗಳ ಪೆಡಸಣೆಯಿಂದಾಗುವ ಮನೋವಿಕೃತಿ
[ಬದಲಾಯಿಸಿ]ಮುಪ್ಪಡರಿದಂತೆ ಮಿದುಳಿನ ರಕ್ತನಾಳಗಳು ಪೆಡಸಾಗಿ ರಕ್ತಸಂಚಾರಕ್ಕೆ ಅಡ್ಡಿಯುಂಟಾಗಿ ಪೋಷಣೆಯಿಲ್ಲದೆ ಅಲ್ಲಿನ ಜೀವಕಣಗಳು ನಾಶವಾಗುತ್ತವೆ. ಜೊತೆಗೆ ಕೆಲವು ಮಾನಸಿಕ ತಾರುಮಾರುಗಳು ಕೂಡಿ ಈ ಮನೋವಿಕೃತಿ ಕಾಣಿಸಿಕೊಳ್ಳುತ್ತದೆ. ಆನುವಂಶಿಕತೆ, ಮಿತಿಮಿರಿದ ಆಹಾರಸೇವನೆ, ಅತಿಯಾದ ಕುಡಿತ, ವಿಶ್ರಾಂತಿಯ ಕೊರತೆ, ಬಿಡುವಿಲ್ಲದ ಚಿಂತೆ-ಇವೂ ಈ ರೋಗ ಉಲ್ಬಣಗೊಳ್ಳುವಂತೆ ಮಾಡುತ್ತವೆ. ಸುಮಾರು 65ರಿಂದ 75ನೆಯ ವಯಸ್ಸಿನಲ್ಲಿ ಹಳ್ಳಿಗರಿಗಿಂತ ಕಾಣಿಸಿಕೊಳ್ಳುತ್ತದೆ. ಹಿಂದೆಯೇ ತಿಳಿಸಿರುವಂತೆ ರೋಗಿಗಳಲ್ಲಿ ಹಳ್ಳಿಗರಿಗಿಂತ ಪಟ್ಟಣಿಗರೇ ಹೆಚ್ಚು. ಆಸ್ಪತ್ರೆಯ ರೋಗಿಗಳಲ್ಲಿ 12% ಮತ್ತು ಮಹಾಜನತೆಯಲ್ಲಿ 2% ಈ ರೋಗಿಗಳಿರುತ್ತಾರೆ.
ತಲೆ ಸುತ್ತುವಿಕೆ, ತಲೆನೋವು, ಅನಾವಶ್ಯಕ ಆಯಾಸ, ಅವಧಾನ ಚಾಂಚಲ್ಯ, ಅಸಾಮರ್ಥ್ಯತೆ, ಖಿನ್ನತೆ, ನಿದ್ರಾಹೀನತೆ, ಸೆಳವು, ಸಿಡಿಮಿಡಿ, ಮಾನಸಿಕ ಗೊಂದಲ ಮತ್ತು ಸ್ಮೃತಿ ತಾರುಮಾರುಗಳು-ಇವು ರೋಗದ ಚಿಹ್ನೆಗಳು. ರೋಗ ಪ್ರಬಲವಾದಂತೆ, ಸ್ಥಳ-ಕಾಲದ ಗೊಂದಲ, ಭ್ರಾಂತಿ, ಅಸ್ಥಿರತೆ, ಉದ್ವಿಗ್ನತೆ, ರೋಷಾವೇಶ ಮತ್ತು ಆತ್ಮಹತ್ಯೆತಯ ಪ್ರಯತ್ನ-ಈ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ.
ರಕ್ತನಾಳಗಳ ಪೆಡಸಣೆಗೆ ಕಾರಣಗಳೇನು, ಅದನ್ನು ತಡೆಗಟ್ಟುವುದು ಹೇಗೆ. ಅದರ ಚಿಕಿತ್ಸೆ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವರು ತಾವಾಗಿಯೇ ಗುಣ ಹೊಂದುತ್ತಾರೆ. ಗುಣವಾಗಿ ಬದುಕಿಕೊಳ್ಳುವವರ ಸಂಖ್ಯೆ 10%. ಆರೈಕೆ ಮತ್ತು ಮೇಲ್ವಿಚಾರಣೆಯೇ ಇದಕ್ಕೆ ಚಿಕಿತ್ಸೆ.