ಜರತಾರಿ ಜಗದ್ಗುರು

ವಿಕಿಪೀಡಿಯ ಇಂದ
Jump to navigation Jump to search

ಹಿರಿಯ ಕನ್ನಡ ಪತ್ರಕರ್ತರು ಆದ ಹೆಚ್.ಆರ್.ನಾಗೇಶರಾವ್ ಅವರು ೧೯೫೦-೧೯೬೦ರ ದಶಕಗಳಲ್ಲಿ ತಾಯಿನಾಡು ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದಾಗ ಪುಸ್ತಕ ಪ್ರಿಯ ಹೆಸರಿನಲ್ಲಿ ಪುಸ್ತಕ ವಿಮರ್ಶೆ ಮಾಡುತ್ತಿದ್ದರು. ತಾಯಿನಾಡು ಪತ್ರಿಕೆಯ ದಿನಾಂಕ ೦೧-೧೧-೧೯೫೪ರ ಸಂಚಿಕೆಗೆ ಬಸವರಾಜ ಕಟ್ಟೀಮನಿ ಅವರ ಜರತಾರಿ ಜಗದ್ಗುರು ಕಾದಂಬರಿಯ ಬಗ್ಗೆ ಬರೆದ ಲೇಖನವಿದು.

ಧರ್ಮದ ಮುಸುಕಿನ ಹಿಂದೆ ನಡೆಯುವ ಅನ್ಯಾಯಗಳ ಯಥಾರ್ಥ ಚಿತ್ರಣ: 'ಜರತಾರಿ ಜಗದ್ಗುರು'

(ಲೇಖಕರು: ಶ್ರೀ ಬಸವರಾಜ ಕಟ್ಟೀಮನಿ, ಪ್ರಕಾಶಕರು: ಶಾರದಾ ಪ್ರಕಟಣಾಲಯ, ಅರಳೇ ಪೇಟೆ, ಬೆಂಗಳೂರು. ಬೆಲೆ. ರೂ.೩-೧೨-೦.)

ಸಮಾಜದಲ್ಲಿನ ಅನ್ಯಾಯ ದುರಾಚಾರಗಳನ್ನು ಇದ್ದಕ್ಕಿದ್ದಂತೆಯೇ ನಿರ್ದಾಕ್ಷಿಣ್ಯವಾಗಿ ಚಮತ್ಕಾರಿಕವಾಗಿ ಬಹಿರಂಗಪಡಿಸುವ ಕಾದಂಬರಿಗಳ ರಚನೆಯಲ್ಲಿ ಹೆಸರಾದ ಶ್ರೀ ಬಸವರಾಜ ಕಟ್ಟೀಮನಿಯವರು, ಇದೀಗ ಮಠಗಳ ಗದ್ದುಗೆಗಳ ಮರೆಯಲ್ಲಿ ಧರ್ಮದ ಮುಸುಕಿನ ಹಿಂದೆ ನಡೆಯುವ ಅತ್ಯಾಚಾರವನ್ನು "ಜರತಾರಿ ಜಗದ್ಗುರು" ಕಾದಂಬರಿಯಲ್ಲಿ ಬಣ್ಣಿಸಿದ್ದಾರೆ. ಈಗಾಗಲೇ ಹೆಸರುವಾಸಿಯಾಗಿರುವ ಅವರ "ಮೋಹದ ಬಲೆಯಲ್ಲಿ" ಕಾದಂಬರಿಯ ಮುಂದಿನ ಭಾಗದಂತೆ ಇದನ್ನು ಬೆಳೆಸಿಕೊಂಡಿದೆಯಾದರೂ, ಇದನ್ನೇ ಪ್ರತ್ಯೇಕ ಸ್ವತಂತ್ರ ಕಾದಂಬರಿಯಾಗಿ ಓದಬಹುದಾಗಿದೆ.

ಈ ಕಾದಂಬರಿಯನ್ನು ರಚಿಸುವಾಗ ಶ್ರೀ ಕಟ್ಟೀಮನಿಯವರು ಸಂಕುಚಿತ ಭಾವನಾ ದೂರವಾದ, ಮತೀಯ ಅಂಧಶ್ರದ್ಧೆಯಿಂದ ನಿರ್ಲಿಪ್ತವಾದ, ನಿಷ್ಪಕ್ಷಪಾತ ನಿರ್ಭೀತ ದೃಷ್ಟಿಕೋನವನ್ನು ಬೀರಿರುವುದನ್ನು ಸಮಾಜ ಸುಧಾರಣಾ ಪ್ರೇಮಿಗಳೆಲ್ಲರೂ ನ್ಯಾಯನಿಷ್ಠುರರೆಲ್ಲರೂ ಅಭಿನಂದಿಸುವುದಷ್ಟೇ ಅಲ್ಲ, ಸ್ವಾಗತಿಸಿ ಅನುಕರಿಸಬೇಕಾಗಿದೆ. ಹೊಸ ಸಮಾಜವನ್ನು ಕಟ್ಟಲು ಬದ್ಧಕಂಕಣರಾಗಿರುವ ಶ್ರೀ ಕಟ್ಟೀಮನಿಯವರಂತಹವರ ಆದರ್ಶವು ನಾಡಿನ ಬರೆಹಗಾರರೂ ಇಡೀ ಯುವಜನ ಸ್ತೋಮವೂ ಹಿಂಬಾಲಿಸಬೇಕಾದ ಭವ್ಯ ಮಾದರಿಯಾಗಿದೆ. ಎಲ್ಲಾ ಜಾತಿ ಮತಗಳಲ್ಲೂ ಅಡಗಿರುವ ವಿಷಯಲಂಪಟರೂ ಸ್ವಾರ್ಥಸಾರ್ಥರೂ ಕಾಮ-ಮೋಹ-ಲೋಭಗಳ ದಾಸರುಗಳೂ ಆದ ಸಿದ್ಧವೀರಸ್ವಾಮಿಯಂತಹವರು ತಮ್ಮ ನಿಜಬಣ್ಣಗಳಲ್ಲಿ ಚಿತ್ರಿಸಲ್ಪಡಬೇಕಾದ ಮತ್ತು ಈ ಕತೆಯಲ್ಲಿ ಅನುಸರಿಸುವ ಮಾದರಿಯಂತೆ, ತಪ್ಪೊಪ್ಪಿಗೆ ಹೇಳಿಕೆಗಳನ್ನು ಸಲ್ಲಿಸಬೇಕಾದ ಕಾಲವೀಗ ಬಂದಿದೆ. ಸಿದ್ಧವೀರಸ್ವಾಮಿ ಅವನಿಂದ ಕಾಲುಜಾರಿದ ಮಹಾದೇವಿ, ಮಠ ಕಾಯುವ ಮರಿಸ್ವಾಮಿ, ಈ ಸ್ವಾಮಿಗಳ ನೇಮಕ ಮತ್ತು ಪದಚ್ಯುತಿಗಳನ್ನೇ ತಮ್ಮ ಸ್ವಾರ್ಥ ರಾಜಕೀಯದ ಚದುರಂಗದಾಟವನ್ನಾಗಿ ಮಾಡಿಕೊಂಡಿರುವ ಶ್ರೀಮಂತರು ಮತ್ತು ಪ್ರತಿಷ್ಠಿತರುಗಳು, ಇವರುಗಳ ಬಾಲ ಬಡುಕರಾಗಿ ಉರರಂಭರಣ ಮಾಡುತ್ತಿರುವ ವಿವಿಧ ವರ್ಗದವರು .. ಇವರೆಲ್ಲರ ಆತ್ಮಕತೆಗಳೂ ಸಮಾಜದ, ರಕ್ತೋಪಜೀವಿಗಳಾದ ಇಂತಹವರೆಲ್ಲರ ಹಿಂಡುಗಳೂ ಬಯಲಿಗೆ ಬರಬೇಕಾಗಿದೆ. ಶ್ರೀ ಕಟ್ಟೀಮನಿ ಮತ್ತು ಅವರಂತಹ ಕೆಚ್ಚೆದೆಯ ಪ್ರತಿಭಾವಂತ ನಿಷ್ಕಪಟ ಲೇಖಕರುಗಳು ಇಂತಹ ಕಾದಂಬರಿಗಳ ವ್ಯೂಹವನ್ನೇ ರಚಿಸಿ ಅಧರ್ಮದ ಪಾಳೆಯಪಟ್ಟುಗಳ ಮೇಲೆ ಯಶಸ್ವಿಯಾಗಿ ಹೋರಾಡುವವರಾಗುವರೆಂದು ನಂಬುತ್ತೇವೆ.